Tuesday, December 14, 2010

ನವನೀತ

(ಚಿತ್ರ ಅಂತರ್ಜಾಲ ಕೃಪೆ - ದೊಡ್ದಮಾಳುರಿನ ಅಂಬೆಗಾಲು ಕೃಷ್ಣ)


ಮೊನ್ನೆ ೧೨ನೆ ತಾರೀಕಿಗೆ ನನ್ನ ಮಗನ ನಾಮಕರಣ ಶಾಸ್ತ್ರ ಮುಗಿಸಿದೆವು.
ಅವನಿಗೆ ಇಟ್ಟ ಹೆಸರು "ನವನೀತ"
ಈ ಸಂಧರ್ಭದಲ್ಲಿ ಮಿತ್ರ ವಾಮನ ಬರೆದ "ನವನೀತ" ಭಾವಗೀತೆಯನ್ನು ಸಂಧರ್ಭಕ್ಕೆ ಒಪ್ಪುವಂತಿರುವದರಿಂದ ಅವರ ಒಪ್ಪಿಗೆಯೊಂದಿಗೆ ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ.


"
ನವನೀತ"-ಭಾವಗೀತೆ
ಬರೆದವರು : ವಾಮನ ಕುಲಕರ್ಣಿ
(ಅವರ "ತೆರೆಗಳು" ಕವನ ಸಂಕಲನದಿಂದ ಆಯ್ದದ್ದು)

ಎದೆಯಲ್ಲಿ ಭಾವ ಕಡೆದಾಗ ಬಂತು
ನವನೀತ ನನ್ನ ಕವನ.
ಹೂತಿಟ್ಟ ಸುಮಕೆ ಹೂಗಂಧ ಸವರಿ
ದಾಳಿಂಬ ಬಿರಿದ ವದನ.

ಮುಗಿಲಲ್ಲಿ ಮೋಡ ಗುಡುಗುಡುವ ರಾಗ
ಶ್ರುತಿ ಆಲೆಯ ಧಾರೆ ಮಳೆಯು.
ತೊರೆಯಾಗಿ ಝರಿಯು ಗಿರಿಯಿಂದ ಧುಮುಕಿ
ಕಾಲುವೆಗಳಾಗಿ ಕೆರೆಯು.

ಈ ಜಗದ ದುಂಬಿ ಮಧುವನ್ನು ಈ೦ಟೀ
ಸಂಚಯಿಸಿ ಜೇನಗೊನೆಯು
ಮಧುಮಧುರ ಸಿಹಿಯ ಈ ಜಗಕೆ ಹಂಚಿ
ಹಂಚುವನು ದಾನಿ ಕವಿಯು.

ಹಾಲ್ಗಾಳ ಹೊತ್ತ ತೆನೆತೆನೆಗೂ ಅಲ್ಲಿ
ಮುಗಿಬಿದ್ದ ಹಕ್ಕಿ ಹಿಂಡು
ಹೊಂಬಣ್ಣ ಸಂಜೆ ಸೆರಗನ್ನು ಹಿಡಿದು
ಗುಟುಕಾಗಿ ತಂದ ಬಂಡು.

ಸಲಗಗಳ ದಂಡು ಭೋರಾಡಿ ಮದದಿ
ಕಿಚ್ಚತ್ತಿ ಕಾಡು ಉರಿದು.
ಖೆಡ್ಡಗಳ ಕಟ್ಟಿ ಸಲಗಗಳ ಒಟ್ಟಿ
ನಿಟ್ಟುಸಿರ ಬಿಟ್ಟ ಕವಿಯು.

ಭಾವಗಳ ಬೆನ್ನ ಹತ್ತುತ್ತ ನಡೆದು
ಏನೇನೋ ಕಂಡ ಮಗುವು.
ಎದ್ದೆದ್ದು ಬಿದ್ದು ಭಯದಲ್ಲಿ ಅತ್ತು
ಹಾಲ್ಗೆನ್ನೇ ತೊದಲು ನುಡಿಯು.

ಕುರುಡನಿಗೆ ನಯನ ಮುಕನಿಗೆ ಮಾತು
ನೀಡಿಲ್ಲ ನನ್ನ ಕವನ.
ಮೊಲೆಯುಣಿಸಿ ತಾಯಿ ನೋವುಗಳ ಒರೆಸಿ
ಸಾಂತ್ವನ ಕವಿಯ ನಯನ.

ಭುವಿಯಲ್ಲಿ ಬೀಜ ಛಲದಿಂದ ಸಹಜ
ಮುಟ್ಟುವದು ದೂರ ಗಗನ.
ಗಿಡದಲ್ಲಿ ಕುಸುಮ ಹೋಲಿಕೆಯು ಅಸಮ
ಸೌರಭವು ನನ್ನ ಕವನ.

ಆ ರವಿಯ ತಂದು ಕಣ್ಣಲ್ಲಿ ಇಟ್ಟು
ನೀ ದಿನವು ಹುಟ್ಟು ಇಲ್ಲಿ.
ಉರಿಯಾಗಿ ನನ್ನ ದಿನದಿನವು
ಸುಟ್ಟು ಬೆಳಕಾಗು ಜನರಿಗಿಲ್ಲಿ.






Thursday, October 21, 2010

ಮಗುವಿನ ಚುಟುಕುಗಳು

ಒಂಟಿಗಣ್ಣಲಿ, ತುಂಟುಭಾವದೀ, ತಂಟೆ ಹೊಂಚಲಿ, ಸಂಚ ಹೆಣೆಯುತಿರುವ ಪೋರ.

-೧-
ಮುಗ್ಧ ಮೊಗವು
ಸ್ನಿಗ್ಧ ನಗುವು
ನಿನ್ನಳುವಿನಲ್ಲೂ
ಅರಳುವದು ಮನವು


-೨-

ಹಸಿದ ಹೊಟ್ಟೆಗೆ,
ಒದ್ದೆ ಬಟ್ಟೆಗೆ,
ಕರೆಗಂಟೆ ನಿನ್ನಳುವು.
ಮಿಕ್ಕೆಲ್ಲಾ ಹೊತ್ತು
ನಿನ್ನಯಾ ಗತ್ತು
ಬೀರುತ್ತಾ ಚೆಲುವು
ಅರಳುವದು
ಸುತ್ತೆಲ್ಲಾ ಮನವು

(ಬ್ಲಾಗ ಮಿತ್ರರಲ್ಲಿ ಅರಿಕೆ : ವೃತ್ತಿ ಜೀವನದಲ್ಲಿ ಮಹತ್ತರ ಬದಲಾವಣೆಯ ಮತ್ತು ಸಂಸಾರಿಕ ಜೀವನದಲ್ಲಿನ ಹೊಸ ಸದಸ್ಯನ ಆಗಮನದಿಂದ ಸ್ವಲ್ಪ ದಿನ ಬ್ಲಾಗ್ ಪ್ರಪಂಚದಲ್ಲಿ ಬರಲಾಗದೆ ತಮ್ಮ ಕಳೆದ ಕೆಲವು ವಾರಗಳಿಂದ ಬರೆದ ಬರಹಗಳನ್ನೂ ಓದಲಾಗಲಿಲ್ಲ. ಆದರೆ ಎಲ್ಲವನ್ನೂ ಶೀಘ್ರದಲ್ಲಿ ಒಂದು ಬಿಡದಂತೆ ಓಡುವ ಸಂಕಲ್ಪದಲ್ಲಿದ್ದೇನೆ. ಅಲ್ಲಿಯವರೆಗೆ ಕ್ಷಮೆಯಿರಲಿ.)

Thursday, September 30, 2010

ಮಗುವಿನ ಅಳಲು


ಗತಿಸಿದ ನೆಚ್ಚಿನ ಅಜ್ಜ ಪಿಜ್ಜರ
ಹೆಸರ ಹಿಡಿದು
ನನ್ನ ಕೂಗಿ
ಲಲ್ಲೆಗರೆವ ಜನರೇ.....

ಮುದ್ದು, ಮೊದ್ದು,
ಪುಟ್ಟ, ಕಿಟ್ಟ,
ಕಳ್ಳ, ಮಳ್ಳ,
ತುಂಟ, ಎಂಬ ವಿಶೇಷಣದೀ
ಮುದ್ದುಗರೆವ ಜನರೇ.....

ಬಂಗಾರು, ಚಿನ್ನ,
ರನ್ನ, ರತುನ,
ಮುತ್ತು, ಹವಳ
ಎಂಬ ಅಮೂಲ್ಯಗಳ
ಹೆಸರಲ್ಲಿ ಮುದ್ದಿಸುವ ಜನರೇ....

ಎಲ್ಲ- ಏನೋ,
ಹೇಳಿ ಕರೆದರೇ
ಕತ್ತು ಎತ್ತಿ ನೋಡೋ
ಹವ್ಯಾಸಕ್ಕೆ
ನಾನು ಒಗ್ಗೋ ಮುನ್ನ
ನನಗೆ ನನ್ನದಾದ
ಒಂದು ಹೆಸರು ಇಟ್ಟು ಬಿಡಿ!

Wednesday, August 25, 2010

ಬ್ಲಾಗಿಗರ ಮಿಲನಕ್ಕೆ ನಾಂದಿಯಾದ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಈ ಸಮಯಾ ಆನಂದಮಯಾ...
ಬ್ಲೊಗರಗಳೆಲ್ಲರ ಮಿಲನದ ಸುಸಮಯಾ...



ಈ ಸಮಯಾ.. ಮೀನ ವಿಜ್ಞಾನಿ.. ಕುವೈಟ್ ನಲ್ಲಿನ ಕನ್ನಡಿಗ ಅಜಾದನ.. ಕವನ ಸಂಕಲನ....ಜಲನಯನ ....
ದುಂಡಿಮದ ದು೦ಡಿರಾಜರಿಂದ ಅನಾವರಣಗೊಂಡು ಲೋಕಾರ್ಪಣವಾದ ದಿನ....
ಬ್ಲಾಗಿಗ.. ಇದು ಕೇವಲ ಜಲನಯನದ ಅನಾವರಣವಲ್ಲ......
ಈ ಸಮಯ ಛಾಯಾಕನ್ನಡಿ ಬ್ಲಾಗಿಗ ಮಿತ್ರ, ದಿನಪತ್ರಿಕೆ ವಿತರಕ, ಹವ್ಯಾಸಿ ಚಾಯಚಿತ್ರಗಾರ ಕೆ.ಶಿವುನ ....
ಎರಡನೇ ಲಲಿತ ಪ್ರಭಂಧ ಸಂಕಲನ "ಗುಬ್ಬಿ ಎಂಜಲು" ಸುಧೀಂದ್ರ ಹಾಲ್ದೋಡ್ಡೇರಿಯವರಿಂದ....
ಲೋಕಾರ್ಪಣವಾದ ದಿನ....


ಮನದಾಳದ ಪ್ರವೀಣನ.... ಮೃದುಮನಸ್ಸಿನ ಸುಗುಣೆಯ..
ಸುಂದರ ನಿರೂಪಣೆಯ ಕಾರ್ಯಕ್ರಮ....


ಈ ಸಮಯಾ... ಬಾಲೆಯಾ ಪ್ರಾರ್ಥನೆಯಲ್ಲಿ ಪ್ರಾರಂಭವಾದ
ಮಧುರ ಬ್ಲಾಗಿಗರ ಮಿಲನದಾ..ದಿನಾ...

ಈ ಸಮಯಾ ದೀಪ ಬೆಳಗಿ ಕಾರ್ಯಕ್ರಮ ಪ್ರಾರಂಭವಾದ ದಿನಾ....


ಈ ಸಮಯಾ.... ಪ್ರೊಫೆಸ್ಸರ್ ಶೇಷಾಶಾಸ್ತ್ರೀ ಯವರ
ಆತ್ಮೀಯ ಉಪಸ್ಥಿತಿಯಲ್ಲಿ....ಬ್ಲಾಗಿಗರು ನಲಿದ ದಿನ....

ಈ ಸಮಯಾ...ಡುಂಡಿಮರ ಚಟಾಕಿ ಸಿಡಿದು
ನಗೆಹೊನಲು ಹರಿದ ದಿನ ......


ಈ ಸಮಯಾ ... ಸುಧೀಂದ್ರರ ಮನದ ಮಾತ ದಿನ .....



ಈ ಸಮಯಾ... ತೆರೆಮರೆ ಹಿಂದೆ ಗಣಕಯಂತ್ರದ ಸೂತ್ರಧಾರಿ
ಸವಿಗನಸಿನ ಮಹೇಶನ ಕೈಚಳಕದ ದಿನ.....

ಈ ಸಮಯಾ...ತೆರೆಮರೆಯಲ್ಲಿ ಪೆನ್ನು ಪೇಪರನ
ಅನಿಲ -ನಾಗರಾಜರ, ಹಳ್ಳಿಹುಡುಗ- ನವೀನನ, ಛಾಯಾಗ್ರಾಹಕ ಉದಯನ, ಮಲ್ಲಿಕಾರ್ಜುನನ
ಶ್ರಮದ ವೈಭವದ ದಿನ.....
ಹತ್ತು ಹಲವು ಛಾಯಾಚಿತ್ರಕಾರ ಮೋಹಕ ಚಿತ್ರಗಳು ಹುಟ್ಟಿದಾ ದಿನ ...
ರಸಮಯ ಕ್ಷಣ ಹಿಡಿದಾದ ದಿನಾ....



ಬರೀ ಇಷ್ಟೇ ಅಲ್ಲಾ ಮಿತ್ರಾ....ಈ ಸಮಯಾ... ಎಲ್ಲರನೂ ಸೇರಿಸಿದ
ದೊಡ್ದತಲೇ -ಗೊಮ್ಮಟೇಶ-ಧೈತ್ಯಕಾಯ-ದೊಡ್ಡ ಹೃದಯ-ಮಗುವ ಮನಸ
ನಿಷ್ಕಲ್ಮಶ ಪ್ರೇಮದ ಸ್ನೇಹಜೀವಿ-ಇಟ್ಟಿಗೆ ಸಿಮೆಂಟಿನ
-ಕಂತ್ರಾಟುದಾರ-ಚಿತ್ರಗ್ರಾಹಕ-ಕವಿಹೃದಯದ ಸಜ್ಜನನ-
ಎಲ್ಲರಳೋ೦ದಾಗುವ ಪ್ರಕಾಶಣ್ಣನ ತೆರೆಮರೆಯ ಪರಿಶ್ರಮ ಸಾರ್ಥವಾದ ದಿನಾ...

ಈ ಸಮಯಾ... 'ಕೊಳಲಿ'ನ ಸಜ್ಜನ ಸರ್ಜನ್ನ ಕೃಷ್ಣಮೂರ್ತಿಯವರ ಮತ್ತು ಶಿವಕುಮಾರರ ಗಾನಸುಧೆಯಲಿ
ಬ್ಲಾಗಿಗರು ಮಿಂದು ನಲಿದ ದಿನಾ....

ಜೊತೆಗೆ ಎಲ್ಲಾ ಬ್ಲಾಗಿಗರು -ಸಕಲಕಲಾಸಂಪನ್ನ ದಿನಕ್ಕೊಂದರ 'ನಮ್ಮೊಡೆನೆಯ ವಿಆರ್ ಬಿ'ಯವರು , ಸದಾ ಮೌನ ಹಸನ್ಮುಖಿ 'ಜೀವನ್ಮುಖಿ'ಯ ಪರಾಂಜಪೆಯವರು, ಗುರುಪ್ರಪಂಚದ ಗುರುರವರು, 'ನಮ್ಮೊಳಗೊಬ್ಬ ಬಾಲು'ರವರು , 'ನಾಭಿ'ಯ ನಾರಾಯಣ ಭಟ್ಟರು, 'ನೀವೇದನೆ'ಯ ಉಮಾಭಟ್ಟರು, 'ಸುಮ್ನೆ ಹೀಗಂದೆ'ಯ ಸುಮನಾ ವೆಂಕಟರು, 'ಓ ಮನಸೇ ನೀನೇಕೆ ಹೀಗೆ'ಯ ಚೇತನಾ ಭಟ್ಟ ದಂಪತಿಯರು, 'ಹನಿಹನಿ'ಯ ದೀಲೀಪ ಹೆಗಡೆಯವರು, 'ನಿಶಾಂತರಂಗ'ದ ನಿಶಾ ದಂಪತಿಯರು, ’ಅಂತರಂಗದ ಮಾತುಗಳ' ಶ್ಯಾಮಲಾರವರು, 'ಅನುರಾಗ'ದ ಮತ್ತು ಗಾದೆಗಳ ರಾಣಿ ಶಶಿ ಜೋಯಿಷರು, 'ಓ ಮನಸೇ ನೀನೇಕೆ ಹೀಗೆ'ಯ ಚೆತನಾರವರು, 'ಚಿತ್ತಾರ'ದ ಪ್ರಗತಿ ಹೆಗಡೆ ದಂಪತಿಗಳು, ’ದೇಸಾಯಿಯವರ ಅಂಬೋಣ'ದ ದೇಸಾಯಿಯವರು, 'ನೆನಪಿನ ಪುಟಗಳ' ಶಿವಪ್ರಕಾಶರು,”ಮೂಕಮನದ ಮಾತಿ’ನ ದಿನಕರ ಮೊಗೇರ ದಂಪತಿಗಳು, ಶಿವಶಂಕರ ವಿಷ್ಣು ಯೆಳವತ್ತಿಯವರು, 'ಶ್ರಾವಣದ ಮಳೆ ಸುರಿಸಿದೆಯಾದರು'ವಿನ ಗೌತಮ ಹೆಗಡೆ ಭಾವಿ ದಂಪತಿಗಳು, ಎಸ್.ಎಸ್.ಕೆ ಕಾವ್ಯನಾಮಧೇಯದ ಶೋಭಾರವರು, 'ಕ್ಷಣ ಚಿಂತನೆ'ಯ ಚಂದ್ರು ರವರು, ನಂಜುಂಡರು, ಮನಸಿನ ಮಾತುಗಳ ದಿವ್ಯಾ, 'ಅನುಭವ ಮಂಟಪ'ದ ಫಾಲಚಂದ್ರರು, 'ನಾನಿಸಾಹ'ದ ಲಕ್ಷ್ಮಣ ಬಿರಾದಾರರು, ಹಿರಿಯ ಬ್ಲಾಗಿಗ ಹೆಬ್ಬಾರರು, 'ನನ್ನದೊ೦ದ್ಮಾತಿ' ಸತ್ಯನಾರಾಯಣರು, 'ಹೇಳಬೇಕೆನಿಸುತಿದೆ'ಯ ಜಯಲಕ್ಷ್ಮಿಯವರು,'ಖುಷಿ- ನಮ್ಮ ಮನೆಯ ದೀಪ’ ದ ಅಶೋಕ ಕೊಡ್ಲಾಡಿಯವರು, ’ಮೌನದ ಪದಗಳ’ ರಾಘುರವರು, ಹಲವಾರು ಬ್ಲಾಗಿಗ ಬಂಧುಗಳು (ಹೆಸರು ನೆನಪಿಡದುದ್ದಕ್ಕೆ ಉಳಿದವರು ಕ್ಷಮಿಸಬೇಕು) ಸೇರಿ ನಕ್ಕು ನಲಿದ ಕ್ಷಣಗಳು ಮರೆಯಲಾರದ ಅನುಭವ.
ಈ ನಡುವೆ ನನಗೆ ನಾರಾಯಣ ಭಟ್ಟ ದಂಪತಿಗಳ ಮತ್ತು ವಿಆರ್.ಭಟ್ಟ ದಂಪತಿಗಳ ಆದರಾತಿತ್ಯದ ಸವಿಯುಣ್ಣುವ ಅವಕಾಶ ದೊರಕಿತು. ದಣಿವಿನ ಅಸ್ವಸ್ಥತೆಯಲ್ಲೂ ಉಮಾ ಭಟ್ಟರ ಆದರಾತಿತ್ಯ ಮರೆಯಲಾಗದ್ದು. ಮನೆಯ ತುಂಬಾ ನೆ೦ಟರಿದ್ದರೂ ನಮ್ಮನ್ನು ಸ್ವಾಗತಿಸಿ, ಆದರಿಸಿ, ಆತಿಥ್ಯ ನೀಡಿ, ಜೊತೆಗೆ ತಮ್ಮ ಸುಮಧುರ ಕಂಠಸಿರಿಯಿಂದ ಮನತಣಿಸಿದ ವಿ.ಆರ್.ಭಟ್ಟ ರ ಶ್ರೀಮತಿಯವರು ಬಹುಮುಖ ಪ್ರತಿಭೆಯವರು.
ಈ ದಂಪತಿ ಜೋಡಿಗಳಿಗೆ ನನ್ನ ಮನಪೂರ್ವಕ ನಮನಗಳು. ಉಮಾಭಟ್ಟ ರ ಕವನ ಸಂಕಲನವೊಂದು (ಸಧ್ಯ ಕೈಪಿಡಿಯಲ್ಲಿದ್ದು ಪ್ರಾದೇಶಿಕವಾಗಿ ಬಹುಮಾನ ಪಡೆದು ಮೆಚ್ಚುಗೆ ಗಳಿಸಿರುವ) ಪ್ರಕಟನೇಯ ಹಾದಿಯಲ್ಲಿದೆ.
ಒಟ್ಟಿನಲ್ಲಿ ಇದು ಮರೆಯದ ಮಧುರ ನೆನಪಿನ ಸಮಾನ ಮನಸ್ಕ ಬ್ಲಾಗಿಗರ ಮಿಲನ. ಇದಕ್ಕೆ ನಾಂದಿಯಾಗಿದ್ದು ಶಿವು-ರವರ ಮತ್ತು ಆಜಾದರ ಪುಸ್ತಕ ಪ್ರಕಟಣೆ. ಈ ಕಾರಣಕ್ಕಾಗಿ ಅವರಿಬ್ಬರನ್ನು ಅಭಿನಂದಿಸುತ್ತಾ, ತುಂತುರು ಪ್ರಕಾಶನವನ್ನ ನೆನೆದು, ಮತ್ತೆಲ್ಲಾ ಸಮಾರಂಭದ ಬೆನ್ನೆಲುಬಾದ ಪ್ರಕಾಶಣ್ಣ ಹಾಗೂ ಅವರ ಅಳಿಯಂದಿರ ತಂಡ (ಮದುವೆಗೆ ಹೆಣ್ಣು ಹುಡುಕುವ ಜವಾಬ್ದಾರಿ ಮಾವನಿಗೆ ಕೊಟ್ಟು) ಮತ್ತು ಮಹೇಶ ದಂಪತಿಗಳನ್ನು ವಂದಿಸುತ್ತಾ ಬರಹವನ್ನ ಮುಕ್ತಾಯಿಸುವೆ. ಎಲ್ಲಾ ಛಾಯಾಚಿತ್ರಕಾರರು ಅದ್ಭುತವಾಗಿ ಚಿತ್ರ ಸೆರೆ ಹಿಡಿದಿದ್ದಾರೆ.

ಹೆಚ್ಚಿನ ಚಿತ್ರಗಳು ನನ್ನ ಕ್ಯಾಮೆರಾದಲ್ಲಿ ಕಂಡಂತೆ ನೋಡಲು ಕ್ಲಿಕ್ಕಿಸಿ:
http://picasaweb.google.co.in/116434280314025211668/Blog?authkey=Gv1sRgCPfxoput2ubJ0wE#


Friday, August 20, 2010

ಸಮಾವೇಶಗಳು - ಸಾರ್ವಜನಿಕರು



ನಿನ್ನೆ ರಾತ್ರಿ ಗೋವೆಯಿಂದ ಹಿಂದುರಿಗಿ ಬರುತ್ತಾ ಇದ್ದೆ -ನೂರಾರು ಖಾಲಿ ಬಸ್ಸುಗಳು ಬಿಜಾಪುರ-ಹುಬ್ಬಳ್ಳಿ ಹಾಗೂ ಉತ್ತರ ಕರ್ನಾಟಕದ ಇತರೇ ಭಾಗದಿಂದ ಹೊಸಪೇಟೆ ಗಡಿ ನುಗ್ಗುತ್ತಾ ಇದ್ದವು. ಯಾಕೆಂದು ಯೋಚಿಸುತ್ತಿದ್ದೆ. ಕೆಲವು ಬಸ್ಸುಗಳ ಮೇಲೆ ಅರೋಗ್ಯ ಶಿಬಿರದ ಫಲಕಗಳಿದ್ದವು. ಆರೋಗ್ಯ ಶಿಬಿರ ಇದೆಯೇನೋ ಅಂದುಕೊಂಡೆ. ಇಡೀ ಹೊಸಪೇಟೆ ಊರಲ್ಲಿ ಎಲ್ಲೆಂದರಲ್ಲಿ ಅಲ್ಲಿ ಬಸ್ಸುಗಳು ನಿಂತಿದ್ದವು. ಸುತ್ತಲ್ಲಿನ ಎಲ್ಲ ಊರು-ಕೇರಿಗಳಲ್ಲಿ ಹೀಗೆ ಬಸ್ಸುಗಳು ನಿಂತಿದ್ದವು.
ಬೆಳಿಗ್ಗೆಯಂತೂ ಸಂದಿ ಗೊಂದಿಗಳಲ್ಲಿ ಚಾಲಕರು ಕಷ್ಠ ಪಟ್ಟು ಬಸ್ಸುಗಳನ್ನು ತಂದಿದ್ದು, ದಲ್ಲಾಳಿಗಳು ಜನರನ್ನು ತುಂಬಿಸಿ ಕರೆದೊಯ್ಯಲು ಮನವೊಲಿಸಿ ಒಯ್ಯಲು ಚರ್ಚೆ/ಚೌಕಾಶಿ ನಡೆಸುತ್ತಿದ್ದರು.

ಬಸ್ಸಿಗೆ ರೂ.೨೫೦೦೦/-ದಂತೆ ದಲ್ಲಾಳಿಗಳು ತೆಗೆದುಕೊಂಡು ಬಂದು ಜನರಿಗೆ ಹಂಚಿ ಬಸ್ಸು ತುಂಬಿಸುತ್ತಿದ್ದರು. ಬಸ್ಸುಗಳು ಹಲವು ರಾಜಕೀಯ ಕಾರ್ಯಕರ್ತರ ಮೇಲುಸ್ತುವಾರಿಯಲ್ಲಿ ಜನರನ್ನು ಬಳ್ಳಾರಿಯಲ್ಲಿ ನಡೆವ ಸಮಾವೇಶಕ್ಕೆ ಕರೆದೊಯ್ಯಲು ಬಂದಿದ್ದು!
ಖಾಲಿ ಖಾಲಿ ಬಸ್ಸುಗಳು ತುಂಬಿದವು. ೩೦೦ ರೂ ನಿಂದ ೫೦೦ರೂಪಡೆದ ಜನ ಊಟ, ತಿಂಡಿ, ಎಲ್ಲ ಖರ್ಚನ್ನು ಭಾರಿಸಿದ ಪಕ್ಷದ ಸಾಧನೆಯ ಸಮಾವೇಶಕ್ಕೆ ಮತ್ತು ವರಮಹಾಲಕ್ಷ್ಮಿ ಪೂಜೆಗೆ ಬಂದ ಭಾವಿ ಭಾರತದ ಪ್ರಧಾನಿ ಕನಸು ಕಾಣುತ್ತಿರುವ, ಸುಷ್ಮಾ ಸ್ವರಾಜರವರ ಬಳ್ಳಾರಿ ಭೇಟಿಯ ಸಂಧರ್ಭದಲ್ಲಿ ಮಾಡಬೇಕಿದ್ದ ಪಕ್ಷದ ಸಾಧನ ಸಮಾವೇಶದ ಭಾಷಣ ಆಲಿಸಲು ಜಮಾಗೊಳ್ಳುತ್ತಿದ್ದರು.
ಮೊನ್ನೆ ನಡೆದ ಕಾಂಗ್ರೆಸಿಗರ ಸಮಾವೇಶದ ಆರುಪಟ್ಟು ಜನರನ್ನು ಸೇರಿಸುವ ಸಂಕಲ್ಪದಲ್ಲಿ ರೆಡ್ಡಿಯವರು ಗಣಿಧನವನ್ನ ಪಣಕ್ಕಿಟ್ಟಿದ್ದರು.

ಇನ್ನೊಂದು ಕಡೆ ಬಸ್ಸಿಲ್ಲದೆ ಊರಿಂದ ಊರಿಗೆ ಹೋಗಬೇಕಾದ ಪ್ರಯಾಣಿಕರ ಪಾಡು, ಅವರನ್ನು ಸಂತೈಸುವಲ್ಲಿ ವಿಫಲರಾದ ಬಸ್ಸ ನಿಯಂತ್ರಣಾಧಿಕಾರಿಗಳು, ಹತಾಶಜನ, ಮಧ್ಯ ಸಿಕ್ಕಿ ಹಾಕಿಕೊಂಡ ಜನ, ಸಂಚಾರ ನಿಯ೦ತ್ರಣದಲ್ಲಿ ಹುಚ್ಚರಾಗದೆ ಉಳಿದ ಸಂಚಾರಿ ಪೊಲೀಸರು, ಜನರನ್ನು ನಿಯಂತ್ರಿಸುವಲ್ಲಿ ಹೈರಣಾದ ಪೊಲೀಸರು, ಬರುತ್ತಿರುವ ಮಂತ್ರಿ-ತಂತ್ರಿಗಳನ್ನು ಬರಮಾಡಿ ಕೊಳ್ಳುವದರಲ್ಲಿ ಸುಸ್ತಾದ ಜಿಲ್ಲಾ ಅಧಿಕಾರ ವರ್ಗ, ಊಟ-ತಿಂಡಿಗೆ ಹೋಟೆಲ್ ಅವಲಂಬಿಸಿದ ಜನ ಆಹಾರಕ್ಕೆ ಪರದಾಡುತ್ತಿದ್ದದ್ದು, ಇಂದು ಕಣ್ಣಿಗೆ ರಾಚುತ್ತಿತ್ತು.
ಸಂಜೆ ಎಲ್ಲ ಬಸ್ಸುಗಳು ಜನರನ್ನು ಹಿಂದೆ ತಂದು ಬಿಡುತ್ತಿದ್ದವು. ಏಕಮುಖ-ದ್ವಿಮುಖ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಸಂಚರಿಸುವ ಈ ಬಸ್ಸುಗಳನ್ನು ಹತಾಶೆಯಲ್ಲಿ ನೋಡುತ್ತಿದ್ದ ಸಂಚಾರಿ ಪೊಲೀಸರು.

ಈ ಎಲ್ಲ ಗೊಂದಲಗಳಲ್ಲಿ ಹೆಚ್ಚಿನ ಸಾಮಾನ್ಯ ಮತ್ತು ಕದುಬದವಜನ ಊಟ-ತಿಂಡಿ-ಇತರೇ ಜೊತೆಗೆ ೩೦೦-೫೦೦ ರುಪಾಯಿ ದುಡಿದದ್ದು ಒಂದು ವಿಶೇಷವೇ! ಅವರು ಹೊಟ್ಟೆಹೊರೆಯಲು ಇಡೀ ದಿನ ದುಡಿದರು ೧೦೦ರೂ ಸಿಗುವದು ಕಷ್ಟ. ಅನ್ಥದುರಲ್ಲಿ ಈ ದುಡಿಮೆ ಒಂದು ವಿಶೇಷವೇ!
ಒಮ್ಮೆ ಅನಿಸಿತು ಈ ಸಮಾವೇಶದಿಂದ ಕೆಲವು ಜನರಿಗೆ ತೊಂದರೆ ಆದರು ಕೆಲವು ಜನರಿಗೆ ಅಯಾಚಿತ ದುಡಿಮೆಯೂ ಆಯಿತಲ್ಲವೇ. ಆದರೆ ನೋವಿನ ಸಂಗತಿ ಎಂದರೆ ಈ ಮುಗ್ದಜನರ ಬದುಕಿನ ಅವಶ್ಯಕತೆಯನ್ನು ತಮ್ಮ ರಾಜಕೀಯ ಸಂಖ್ಯಾಬಲ ತೋರಿಸುವಲ್ಲಿ ಅವರನ್ನು ಉಪಯೋಗಿಸಿದ್ದು ಮತ್ತು ಜನರನ್ನು ಕುರಿಯಂತೆ ತಂದು ಪ್ರದರ್ಶಿಸಿದ್ದು.
ಅಂದು ಕಾಂಗ್ರೆಸ್ಸಿಗರು, ಇಂದು ಬಿಜೆಪಿಯವರು ಮತ್ತೆ ನಾಳೆ ದಳದವರು. ಹೀಗೆ ಒಬ್ಬರ ನಂತರ ಇನ್ನೊಬ್ಬರು. ಮೊನ್ನೆ ಸರಕಾರದ ಸಾಧನೆ ಏನು ಇಲ್ಲ ಎಂದು ಪ್ರತಿಭಟಿಸಿದ ವಿರೋಧ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿದ ಜನವೇ ಇಂದು ಸರಕಾರದ ಸಾಧನೆ ಘನ೦ದಾರಿಯದು ಎನ್ನುವರ ಜೊತೆ ಇದ್ದರು!
ಅವರಿಗೆ ಸಮಾವೇಶ ಯಾರು ಮಾಡಿದರೇನು ? ಯಾತಕ್ಕಾದರೂ ಮಾಡಿದರೇನು! ಸುಲಭದಲ್ಲಿ ತುತ್ತಿನ ಚೀಲ ತುಂಬಬೇಕಿತ್ತು! ಜೊತೆಗೆ ಮನೋರಂಜನೆಯು ಇತ್ತಲ್ಲವೇ!

ಜನ ಮರುಳೋ! ಜಾತ್ರೆ ಮರುಳೋ!

ಸಮಾವೇಶಗಳು ತಮಾಷೆಗಳಾಗುತ್ತಿವೆ, ಮಾನವೀಯ ಮೌಲ್ಯದ ಅಣುಕುಗಳಾಗುತಿವೆ.
ಯಾಕೋ ಮನ ಉದ್ವಿಗ್ನಗೊಂಡಿದೆ.
ನಾವೆತ್ತ ಸಾಗುತ್ತಿದ್ದೇವೆ.
ಜನಕ್ಕೂ ಬೇಕಾಗಿದ್ದೇ ರಾಜಕೀಯದವರು ಮಾಡುತ್ತಿರಬಹುದು. ನಮ್ಮ ಯೋಚನೆಗಳು ಅಲ್ಪಸಂಖ್ಯಾತವೆ!

Saturday, August 14, 2010

ಎಸ್.ಎಲ್.ಭೈರಪ್ಪನವರ "ಕವಲು" -ನಾ ಕಂಡಂತೆ






ಕಾದಂಬರಿ : ಕವಲು
ಲೇಖಕರು : ಸಂತೆಶಿವರ.ಲಿಂಗಣ್ಣಯ್ಯ.ಭೈರಪ್ಪ
ಪುಟಗಳು : ೩೦೦
ಬೆಲೆ : ರೂಪಾಯಿ-೨೫೦
ಪ್ರಕಾಶನ : ಸಾಹಿತ್ಯ ಭಂಡಾರ ಪ್ರಕಾಶನ, ಜಂಗಮ ಮೆಸ್ತ್ರೀಗಲ್ಲಿ, ಬಳೆಪೇಟೆ,ಬೆಂಗಳೂರು.

ಸಾಹಿತಿ ಪರಿಚಯ : ಸಂತೇಶಿವರದಲ್ಲಿ (ಚನ್ನರಾಯಪಟ್ಟಣ ತಾಲುಕು ಹಾಸನ ಜಿಲ್ಲೆಯಲ್ಲಿ) ಹುಟ್ಟಿದ ಭೈರಪ್ಪನವರು ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡು, ಓದಿಗಾಗಿ ಹತ್ತು ಹಲವಾರು ಕೆಲಸಗಳನ್ನೂ ಮಾಡಿ, ತದನಂತರ ಕೆಲವು ಕಾಲ ಅಲೆಮಾರಿ ಜೀವನ ನಡೆಸಿ (ಮು೦ಬಯಿಯಲ್ಲಿ), ಆಮೇಲೆ ಮೈಸೂರಿಗೆ ಹಿಂದುರಿಗಿ ಓದು ಮುಂದುವರೆಸಿದರು. ಗೊರೂರು ರಾಮಸ್ವಾಮಿ ಅಯ್ಯಂಗಾರರ ಕಥೆಗಳಿಂದ ಪ್ರಭಾವಿತರಾದ ಅವರು ಬಾಲ್ಯದಲ್ಲೇ ಸಾಹಿತ್ಯದ ಗೀಳು ಹಿಡಿಸಿಕೊಂಡಿದ್ದರು. ಚಿಕ್ಕ ವಯಸ್ಸಿನಲ್ಲಿ(೧೩) ಅವರು ಸ್ವಾತ೦ತ್ರ್ಯಹೋರಾಟದಲ್ಲೂ ಧುಮಿಕಿದ್ದರು. ಮೈಸೂರು ವಿಶ್ವ ವಿಧ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಸ್ನಾತಕ ಪದವಿಯನ್ನ ಪಡೆದ ಭೈರಪ್ಪನವರು , ಸತ್ಯ ಹಾಗೂ ಸೌ೦ದರ್ಯದ ಬಗ್ಗೆ ಸ೦ಶೋಧನಾ ಗ್ರಂಥ ಬರೆದು ಬರೋಡಾ ವಿಶ್ವವಿಧ್ಯಾಲಯದಿಂದ ಪಿ.ಹೆಚ್.ಡಿ. ಪದವಿಯನ್ನೂ ಸಂಪಾದಿಸಿದ್ದಾರೆ. ಅವರು ಗುಲಬರ್ಗಾ ವಿಶ್ವವಿಧ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ.

ಸುಮಾರು ೨೨ ಕಾದಂಬರಿಗಳನ್ನ (ಭೀಮಕಾಯ, ಧರ್ಮಶ್ರೀ, ದೂರ ಸರಿದರು, ಮತದಾನ, ವಂಶವೃಕ್ಷ, ಜಲಪಾತ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೇ, ಗೃಹಭಂಗ,ನಿರಾಕರಣ, ಗ್ರಹಣ, ದಾಟು, ಅನ್ವೇಷಣೆ, ಪರ್ವ, ನೆಲೆ, ಸಾಕ್ಷಿ, ಅಂಚು, ತಂತು, ಸಾರ್ಥ, ಮಂದ್ರ, ಆವರಣ ಮತ್ತು ಕವಲು) ಬರೆದ ಭೈರಪ್ಪನವರು ಕನ್ನಡದ ಅಪರೂಪದ ಸಾಹಿತಿ. ಅವರ ಎಲ್ಲ ಕೃತಿಗಳು ವಸ್ತು ಮತ್ತು ತಂತ್ರ ವೈಶಿಷ್ಟ್ಯ ಹಾಗು ವೈವಿಧ್ಯ ಹೊಂದಿದ್ದು, ಓದುಗರನ್ನು ಅಪಾರ ಆಕರ್ಷಣೆ ಮಾಡುತ್ತವೆ. ಹೀಗಾಗಿ ಭೈರಪ್ಪನವರು ಅಪಾರ ಓದುಗರನ್ನು ಪಡೆದ ಮತ್ತು ಜನಪ್ರಿಯ ಲೇಖಕ. ಅವರ ಕಾದಂಬರಿಗಳಲ್ಲಿ ಕಥಾ ವಸ್ತುಗಳು ತೀವ್ರ ಸಂಶೋಧನೆಯ ಸತ್ಯದಲ್ಲಿ ಅವಿರ್ಭವಿಸಿರುವದು, ಸರಳ ಭಾಷೆಯಲ್ಲಿ ಹೇಳಲ್ಪಟ್ಟಿರುವದು ಮತ್ತು ಸಮಕಾಲಿನ ಜ್ವಲಂತ ವಿಷಯಗಳ ಸುತ್ತ ವಸ್ತು-ನಿಷ್ಟುರತೆಯ ಹೊಂದಿರುವದರಿಂದ ಓದುಗರಿಗೆ ಅಪ್ಯಾಯ ಮಾನವೆನಿಸುವದು. ಅವರ ಕಾದಂಬರಿಗಳು ಹತ್ತು ಹಲವಾರು ಭಾಷೆಗೆ ತರ್ಜುಮೆಯಾಗಿ ಅಲ್ಲೂ ಮನ್ನಣೆ ಪಡೆದಿವೆ. ಇದಲ್ಲದೆ ಅವರು ೪ ತತ್ವಶಾಸ್ತ್ರ ಗ್ರಂಥಗಳನ್ನು(ಸತ್ಯ ಮತ್ತು ಸೌಂದರ್ಯ, ಸಾಹಿತ್ಯ ಮತ್ತು ಪ್ರತೀಕ, ಕಥೆ ಮತ್ತು ಕಥಾವಸ್ತು ಹಾಗೂ ನಾನೇಕೆ ಬರೆಯುತ್ತೇನೆ) ಮತ್ತು ಒಂದು ಆತ್ಮ ಕಥೆಯನ್ನೂ(ಭಿತ್ತಿ) ಬರೆದಿದ್ದಾರೆ. ಅವರ ೪ ಕಾದಂಬರಿಗಳು (ವಂಶವೃಕ್ಷ, ತಬ್ಬಲೀಯು ನೀನಾದೆ ಮಗನೇ, ಮತದಾನ ಮತ್ತು ನಾಯಿ-ನೆರಳು) ಚಲನಚಿತ್ರವಾಗಿವೆ ಮತ್ತು ಎರಡು ಕಾದಂಬರಿಗಳು ಧಾರಾವಾಹಿಗಳಾಗಿ ದೂರದರ್ಶನದಲ್ಲಿ ಬಂದಿವೆ (ದಾಟು ಮತ್ತು ಗೃಹಭಂಗ).

ಭೈರಪ್ಪನವರು ಪಂಪ ಸಾಹಿತ್ಯ ಪ್ರಶಸ್ತಿ, ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಆಕಾಡೆಮಿಯ ಹಲವು ಪ್ರಶಸ್ತಿ, ಕನ್ನಡ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಮತ್ತು ಏನ್-ಟಿ-ಆರ್ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪಡೆದಿದ್ದಾರೆ. ಅವರ ಹೆಚ್ಚಿನ ಕಾದಂಬರಿಗಳು ಕನ್ನಡದಲ್ಲಿ ಅತೀ ಹೆಚ್ಚು ಮಾರಾಟವಾದ ಮತ್ತು ದಾಖಲೆ ಮರು ಮುದ್ರಣ ಕಂಡ ಪುಸ್ತಕಗಳು. ಹಿಂದಿಯಲ್ಲೂ ಅವರ ಅನುವಾದಕೃತಿಗಳು ಅವರನ್ನು ಮೇಲ್ಮಟ್ಟದ ೫ ಲೇಖಕರಲ್ಲಿ ಸೇರಿಸಿದೆ.

ಕವಲು ಕಾದಂಬರಿ : (ಸಂಕ್ಷಿಪ್ತ ಕಥಾಹಂದರ)

ಕಾದ೦ಬರಿಯಲ್ಲಿ ಎರಡು ಸಮಾನಾಂತರದಲ್ಲಿನ ಕಥೆಗಳಿವೆ.
ಕಥೆ-೧: ಜಯಕುಮಾರ ಎ೦ಬ ಯಶಸ್ವೀ ಉಧ್ಯಮಿ ವಿಧುರ ತನ್ನ ಆಫಿಸ್ನಲ್ಲಿ ಕೆಲಸ ಮಾಡುವ ಮಂಗಳೇ ಎಂಬ ಕೆಲಸಗಾರ್ತಿಯೊಡನೆ ಲೈಂಗಿಕ ಸಂಪರ್ಕಕ್ಕೆ ಬಂದು, ಅವಳು ಗರ್ಭವತಿಯಾಗಿ, ಒತ್ತಾಯದಿಂದ ಅವಳನ್ನು ಮದುವೆ ಮಾಡಿಕೊಳ್ಳುತ್ತಾನೆ.

ಮಧ್ಯಮ ಕೆಲಸವರ್ಗದಲ್ಲಿ ತುಂಬಾ ಕಷ್ಟಪಟ್ಟು ಹೆಂಡತಿ ವೈಜಯ೦ತಿಯೋಡನೇ ಜಯಕುಮಾರ ಸ್ವಂತ ಉಧ್ಯಮ ಪ್ರಾರಂಬಿಸಿ ಅವಳ ಸಹಕಾರದಿಂದ ಹಂತ-ಹಂತವಾಗಿ ಬೆಳೆದು ಅತೀ ದೊಡ್ಡ ಸಂಸ್ಥೆಯೊಂದನ್ನು ಹುಟ್ಟುಹಾಕಿ ಸಂತೃಪ್ತ ಜೀವನ ನಡೆಸುತ್ತಿರುವಾಗ ರಸ್ತೆ ಅಫಘಾತವೊಂದರಲ್ಲಿ ಹೆ೦ಡತಿಯನ್ನು ಕಳೆದು ಕೊಂಡು, ಜೊತೆಗೆ ಪುಟ್ಟ ಮಗಳಿಗೆ ತೀವ್ರ ತಲೆಗಾಯಗಳಾಗಿ, ಆ ಮಗುವಿನ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ.

ಮಂಗಳೇ ಆಧುನಿಕ ವಿಚಾರದ ಮಹಿಳೆಯಾಗಿದ್ದು ಕಾಲೇಜಿನಲ್ಲೇ ಪ್ರಭಾಕರ ಎಂಬ ಸಹಪಾಠಿಯೊಡನೆ ಪ್ರೇಮಿಸಿ ಲೈಂಗಿಕ ಸಂಪರ್ಕಕ್ಕೆ ಬಂದು ಗರ್ಬವತಿಯಾಗಿ ಮದುವೆಯಾಗದೆ ಗರ್ಭ ತೆಗೆಸಿದ್ದು, ಮುಂದೆ ಹಲವರು ಸ್ತ್ರೀ ಸಮಾನತೆ-ಇತ್ಯಾದಿ ಆಧುನಿಕ ಧೋರಣೆಗಳಿಂದ ಪ್ರಭಾವಿತಳಾಗಿ (ಇಳಾ ಮೇಡಂರ ಪ್ರಭಾವದಿಂದಾಗಿ), ಸ್ತ್ರೀ ಸ೦ಘಟನೆಗಳಲ್ಲಿ ತೊಡಗಿಸುತ್ತ ಜಯಕುಮಾರನ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರುತ್ತಾಳೆ ಹಾಗೂ ಜಯಕುಮಾರನೊಡನೆ ಲೈಗಿ೦ಕ ಬಯಕೆಗೊಳಗಾಗಿ ಅವನನ್ನು ಅನೀವಾರ್ಯವಾಗಿ ಮದುವೆ ಮಾಡಿಕೊಳ್ಳುವಲ್ಲಿ ಶ್ರಮಪಟ್ಟು ಯಶಸ್ವೀಯು ಆಗುತ್ತಾಳೆ.

ಈ ನಡುವೆ ಮಂಗಳೆಗೆ ಗಂಡು ಮಗು ಆಗುತ್ತದೆ ಹಾಗು ಅವಳು ಹಳೆಯ ಪ್ರಭಾಕರನೊಡನೆ ನಿರಂತರ ಲೈಂಗಿಕ ಸಂಪರ್ಕದಲ್ಲೂ ಇರುತ್ತಾಳೆ. ಪರಸ್ಪರರ ಒತ್ತಾಯದಲ್ಲಿ ಮದುವೆಯಾದ ಮತ್ತು ವಿರುಧ್ಧ ವಿಚಾರದ ಅವರಲ್ಲಿ ದಾಂಪತ್ಯ ಸುಸೂತ್ರವಾಗಿರದೆ ಹದಗೆಡುತ್ತದೆ. ಈ ನಡುವೆ ಜಯಕುಮಾರಗೆ ವೇಶ್ಯಯರ ಸಂಗಕ್ಕೆ ಬಿದ್ದು ಪೋಲಿಸ ರೈಡ-ನಲ್ಲಿ ಸಿಕ್ಕು, ಸೆರೆಮನೆವಾಸವಾಗಿ, ಆಡಳಿತ ಕುಸಿದು ಅವನ ಸ೦ಸ್ಥೆಯೂ ವಿಷಮ ಸ್ಥಿತಿಗೆ ತಲುಪಿ, ಅವುಗಳಿಂದ ಹೊರ ಬರಲು ಅವನು ಸ೦ಸ್ಥೆ ಮಾರಿ ಹೆಂಡತಿಗೆ ವಿಚ್ಚೇದನ ನೀಡಿ ಪರಿಹಾರಾರ್ಥವಾಗಿ ಮನೆ ಹಣ ಕೊಟ್ಟು ಕೋಟಲೆಗಳಿಂದ ಹೊರಬರುತ್ತಾನೆ.

ಈ ನಡುವೆ ಜಯಕುಮಾರನ ನಚಿಕೇತ ಎಂಬ ವಿದೇಶದಲ್ಲಿರುವ ಅಳಿಯನೊಬ್ಬ ಎರಡು ವಿಧೇಶಿ ಹೆಂಗಸರುಗಳಿಂದ ಮೋಸ ಹೋಗಿ ವಿಚ್ಚೇದನ ಪರಿಹಾರವಾಗಿ ದಂಡಿಯಾಗಿ ಹಣ ಕಟ್ಟುತ್ತಿದ್ದು, ಅದೆಲ್ಲವುಗಳಿಂದ ಹೇಗೋ ಬಿಡಿಸಿಕೊಂಡು ಭಾರತಕ್ಕೆ ಬಂದು, ಇಲ್ಲಿಯೇ ಕೆಲಸವನ್ನೂ ಸೇರಿ, ಸ್ವಲ್ಪ ಕಾಲಾನಂತರ ಮಾವನ ಮಾನಸಿಕ ಕುಂಠಿತ ಮಗಳನ್ನೂ ಮದುವೆಯಾಗಿ, ಮಗುವನ್ನ ಹೊಂದಿ, ಮಾವನ ಅಳಿದುಳಿದ ಸ್ವಲ್ಪ ಹಣದಲ್ಲಿ ಉಧ್ಯಮವೊಂದನ್ನು ಪ್ರಾರಂಭಿಸುತ್ತಾನೆ.

ಕಥೆ ೨: ಇಷಾ ಮೇಡಂ ತನ್ನ ಬಹುರಾಷ್ಟ್ರೀಯ ಕ೦ಪನಿಯ ಉದ್ಯೋಗಿ ಗಂಡನೊಡನೆ ತನ್ನ ಕೆಲಸ ಬಿಟ್ಟು ಅವನೊಡನೆ ಸಂಸಾರಕ್ಕೆ ತಿರುಗಲಾಗದೇ, ಬೆಂಗಳೂರಿನ ತನ್ನ ಕೆಲಸದಲ್ಲೇ ಮುಂದುವರಿಯುತ್ತಾಳೆ. ಅಧುನಿಕ ಧೋರಣೆಯ ಮತ್ತು ಯುರೋಪಿಯನ್ನರ ಆಚಾರಕ್ಕೆ ವಿಚಾರಕ್ಕೆ ಮಾರುಹೋಗಿರುವ ಈ ಪಾತ್ರ ಸ್ವಂತ ಸುಖಕ್ಕೆ ಏನು ಮಾಡಲು ತಯಾರಾಗಿರುತ್ತಾಳೆ. ಈ ನಡುವೆ ಅವಳು ಒಬ್ಬ ಮಧ್ಯಮ ವಯಸ್ಸಿನ ರಾಜಕಾರಣಿಯಲ್ಲಿ ಲೈಂಗಿಕ ಸಂಪರ್ಕ್ಕೆ ಒಳಗಾಗಿ ಅನುರಕ್ತಳಾಗಿ ಅವನ ಫಾರಂಮನೆಯಲ್ಲಿ ಹೋಗಿರುತ್ತಾಳೆ. ಈ ವಿಷಯ ರಾಜಕಾರಣಿ ಹೆಂಡತಿಗೆ ಗೊತ್ತಾಗಿ ಅವಳು ಇವಳೊಡನೆ ರಂಪ ಮಾಡುತ್ತಾಳೆ. ಈ ನಡುವೆ ಇವಳ ಗಂಡ ವಿನಯಚಂದ್ರ ರಾಜಕಾರಣಿಯೊಡನೆ ಇವಳ ಲೈಂಗಿಕ ಚಿತ್ರಗಳನ್ನೂ ತೆಗಿಸಿರುತ್ತಾನೆ. ಈ ಚಿತ್ರಗಳನ್ನೂ ಉಪಯೋಗಿಸಿ ರಾಜಕಾರಣಿ ಇವಳನ್ನು ಫಾರ್ಮ ಮನೆಯಿಂದ ಹೊರಹಾಕಿಸುತ್ತಾನೆ. ವಿನಯಚಂದ್ರ ಅವಳಿಂದ ವಿಚ್ಛೇದನೆ ಪಡೆಯುತ್ತಾನೆ.

ವಿನಯಚಂದ್ರನ ಮಗಳು ತಾಯಿ ಇಷಾಳ ಆಶ್ರಯ ಬಿಟ್ಟು ಹಾಸ್ಟೆಲ್-ಗೆ ಸೇರಿ ತನ್ನ ಅಣ್ಣನಿಗೆ (ದೊಡ್ಡಪ್ಪನ ಮಗ) "ವಿಚ್ಚೆದಿತಳ ಮಗಳಾದ ತನಗೆ ಸೂಕ್ತ ಗಂಡೊಂದನ್ನು ಹುಡುಕುವ ಕಷ್ಟಕರದ ಕೆಲಸ ಮಾಡು" ಎಂಬ ಈಮೇಲ್-ನೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ.

ಎರಡು ಸಮಾನಾ೦ತರ ಕಥೆಗಳಿಗೆ ನಂಟೆ೦ದರೆ -ಇಷಾ ಮೇಡಂ ಮಂಗಳೇ ಮತ್ತು ಪ್ರಭಾಕರರಿಗೆ ಗುರು, ಪ್ರಭಾಕರ ರಾಜಕಾರಣಿಯ ಆಪ್ತ ಹಿಂಬಾಲಕ ಮತ್ತು ಇಷಾಳನ್ನು ಫಾರಂ ಮನೆಯಿಂದ ತೆರವು ಗೊಳಿಸುವಲ್ಲಿ ಪಾತ್ರವಹಿಸುತ್ತಾನೆ.

ಇತರ ಉಪಕಥೆಗಳು ಮತ್ತು ಪೂರಕ ಪಾತ್ರಗಳು: ಈ ನಡುವೆ ಜಯಕುಮಾರನ ಹೆಂಡತಿಯ ಕಾಲದ ಕೆಲಸದಾಳು-ನಮ್ರತೆಯಲ್ಲಿ ಕೆಲಸ ಮಾಡಿ ತಾಯಿಯಿಲ್ಲದ ಅವನ ಮತಿಕುಂಠಿತ ಮಗಳು ಪುಟ್ಟಕ್ಕಳನ್ನು ಮಗಳಂತೆ ಸಾಕಿ ಬೆಳೆಸಿ ದೊಡ್ದವಳನ್ನಾಗಿ ಮಾಡುವ ದ್ಯಾವಕ್ಕ, ಅವನ ಅತ್ತಿಗೆಯ ವರದಕ್ಷಿಣೆ ಕಿರುಕುಳದ ಸುಳ್ಳು ವಿಚಾರದಡೀ ಜೈಲಿಗೋಗಿ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿ ಯಾರಿಗೂ ಕಾಣದೆ ಇದ್ದು ಆಮೇಲೆ ಬಂದು ಜಯಕುಮಾರನನ್ನು ಸೇರುವ ಅವನ ತಾಯಿ, ಅವನ ಮುಗ್ದ ಅಣ್ಣ- ಜೋರಿನ ಅತ್ತಿಗೆ, ವರದಕ್ಷಿಣೆ ವಿಚಾರದಲ್ಲಿ ಅತ್ಮಹತ್ಯೆ ಮಾಡಿಕೊಳ್ಳುವ ಅವನ ಅಣ್ಣ -ಅತ್ತಿಗೆಯ ಮಗಳು(ತಾಯಿ ವರದಕ್ಷಿಣೆ ಕೊಡುವ ವಾಗ್ದಾನ ಮಾಡಿ ಆಮೇಲೆ ತಿರುಗಿರುತ್ತಾಳೆ), ಅವನ ಅಕ್ಕ-ಭಾವ (ನಚಿಕೇತನ ತಂದೆ ತಾಯಿ) ಮತ್ತು ಅವನ ಮಿತ್ರ ಶೇಖರ ಪಾತ್ರಗಳು ಪೂರಕವಾಗಿ ಕಾದಂಬರಿಯಲ್ಲಿ ಬರುತ್ತವೆ. ಜೊತೆಗೆ ಮಂಗಳೆಯ ತಾಯಿ, ಅಣ್ಣ-ಅತ್ತಿಗೆ, ಮಂಗಳೆಯ ತಂದೆ, ಮಂಗಲೆಯ ಗೆಳತಿಯರು, ಸಲಿಂಗಿ ಸರಾಫ್ಮೇಡಂ, ಲಾಯರುಗಳು, ಮಹಿಳಾವಾದಿ ಪಾತ್ರಗಳು ಬರುತ್ತವೆ.

ಆ ಕಡೆ ಇಷಾ-ಮತ್ತು ವಿನಯಚಂದ್ರರ ಕಥೆಗೆ ಪೂರಕವಾಗಿ, ವಿನಯಚಂದ್ರನ ಅಣ್ಣ -ಅತ್ತಿಗೆ ಮತ್ತು ಅವರ ಮಗ (ವಿನಯಚಂದ್ರನ ಮಗಳೊಡನೆ ಪ್ರೀತಿಯ ಒಡನಾಡಿ ಅಣ್ಣ), ರಾಜಕಾರಣಿ, ಅವನ ಹೆಂಡತಿ, ಹೆಣ್ಣು ಲಾಯರುಗಳು ಬರುತ್ತಾರೆ.

ಇದು ಮುಖ್ಯ ಕಥಾಹಂದರ. ಆದರೆ ಕಾದಂಬರಿಯ ಹರವನ್ನು ಅನುಭೂತಿ ಹೊಂದಬೇಕಾದರೆ ಪ್ರತಿಯೊಂದು ಸಾಲುಗಳು ಓದುಗನಿಗೆ ಅವಶ್ಯ.

ಕಥಾ ತಂತ್ರ : ಕಥೆಯ ಅಧ್ಯಾಯಗಳು ಮುಖ್ಯ ಪಾತ್ರಗಳ ಸ್ವಗತದೊಂದಿಗೆ ವಿವರವಾಗಿವೆ. ಒಮ್ಮೆ ಜಯಕುಮಾರ, ಒಮ್ಮೆ ಮಂಗಳೆ, ಒಮ್ಮೆ ಇಷಾ ಹಾಗೂ ಒಮ್ಮೆ ವಿನಯಚಂದ್ರ ಹೀಗೆ ಸರತಿಯ ಮೇಲೆ ಸ್ವಗತದಲ್ಲಿ ಕಥೆಯನ್ನು ಹೆಣೆಯುತ್ತಾರೆ. ಈ ನಡುವೆ ನಚಿಕೇತ-ರಾಜಕಾರಣಿ-ಪ್ರಭಾಕರ-ವಿನಯಕುಮಾರನಾ ತಾಯಿ ಹಲವಾರು ಸಂಧರ್ಭದಲ್ಲಿ ಮಾತಿನಲ್ಲಿ ತಮ್ಮ ಉಪಕಥೆಗಳನ್ನು ತೋಡಿಕೊಳ್ಳುತ್ತಾರೆ. ಕಾದ೦ಬರಿಯಲ್ಲಿ ಎಲ್ಲೂ ತಟಸ್ಥ ವಿವರಣೆ ಅಥವಾ ಲೇಖಕನ ನಿರೂಪಣೆಯಲ್ಲಿ ಬರಲಾರದ್ದು ಓದುಗರು ಗಮನಿಸಬೇಕಾದ ಮುಖ್ಯ ಅ೦ಶ. ಕೆಲವು ಅಧ್ಯಾಯಗಳು ಮಂಗಳೆ ಮತ್ತು ಜಯಕುಮಾರರ ಕಥೆಗಾದರೆ ಮತ್ತೆ ಕೆಲವು ಅಧ್ಯಾಯಗಳು ಇಷಾ-ವಿನಯಚಂದ್ರರ ಕಥೆಗಿದ್ದೂ ಒಂದರ ನಂತರ ಒಂದು ಬಂದಿವೆ. ಒಬ್ಬರೊಬ್ಬರ ಸ್ವಗತಗಳು ಉಪ-ಅಧ್ಯಾಯಗಳಾಗಿವೆ. ಸ್ವಗತಗಳ ಮುಖಾ೦ತರವೇ ಕಾದ೦ಬರಿಯ ಕಥೆಗಳು ಹರಿದಿವೆ, ಜೊತೆಗೆ ಕಥೆಯ ಮೇಲೆ ಆಯಾ ಪಾತ್ರಗಳ ದೃಷ್ಟಿಕೋನ ಅವರಿಂದಲೇ ಹೇಳಿಸಲ್ಪಟ್ಟಿದೆ. ಹೀಗಾಗಿ ಕಾದ೦ಬರಿಕಾರ ಕಾದ೦ಬರಿಯಲ್ಲಿ ಕಾಣುವದೇ ಇಲ್ಲ. ಪಾತ್ರಗಳೇ ಕಥೆ ಹೇಳುತ್ತವೆ ಮತ್ತು ಪರಸ್ಪರ ವಿಮರ್ಶಿಸಿಕೊಳ್ಳುತ್ತವೆ.

ಕಥೆಯ ಆಶಯ:
ಈ ಎರಡು ಸಮಾನಾಂತರ ಕಥೆಗಳ ಸಮ್ಮಿಲನದ "ಕವಲು" ಕಾದಂಬರಿಯಲ್ಲಿನ ಆಶಯಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು.
  • ಭಾರತೀಯ ಕೌಟುಂಬಿಕ ಮೌಲ್ಯಗಳು ಮತ್ತು ಪಾಶ್ಚ್ಯಾತ್ಯ ಕೌಟುಂಬಿಕ ಮೌಲ್ಯಗಳು ಮತ್ತು ಅವೆರಡರ ತುಲನೆ.
  • ಸ್ತ್ರೀ ಚಳುವಳಿಗಳು ಮತ್ತು ಸ್ತ್ರೀ ಪರ ಕಾನೂನುಗಳು -ಅದರ ವ್ಯಾಪ್ತಿ, ಉದ್ಧೇಶ, ಉಪಯೋಗ ಮತ್ತು ದುರುಪಯೋಗ. ಪಾಶ್ಚ್ಯಾತ್ಯ ಎರವಲು ಕಾನೂನುಗಳು ಭಾರತೀಯ ಕುಟುಂಬಕ್ಕೆ ಎಷ್ಟರಮಟ್ಟಿಗೆ ಪ್ರಸ್ತುತ -ಎಂಬುದರ ಮೀಮಾ೦ಷೆ.
  • ಮುಕ್ತ ಲೈಂಗಿಕತೆ ಅದರ ಪ್ರಸ್ತುತತೆ. ವಿಚ್ಛೇದನಾ ಕಾನೂನುಗಳಲ್ಲಿ ಗಂಡ-ಹೆಂಡತಿಯ ಸಂಭಂಧ ಮತ್ತು ಅವರ ಮಕ್ಕಳು ನೋಡುತ್ತದೆ ಹೊರತು ತಂದೆ ತಾಯಿ ಮತ್ತು ಇತರೆ ಅವಲಂಬಿತ ಕುಟುಂಬದ ಸ೦ಭ೦ಧಗಳ ಪರಿಗಣನೆಗೆ ತೆಗೆದು ಕೊಳ್ಳದ್ದು. ಅದಲ್ಲದೆ ಸ್ತ್ರೀ ಪರ ವರದಕ್ಷಿಣೆ, ವಿಚ್ಚೇದಿತ ಕಾನೂನುಗಳು ಹೇಗೆ ದುರುಪಯೋಗಪಡಲ್ಪಡುತ್ತವೆ.
  • ಪಾಶ್ಚ್ಯತೀಕಣ ಮೌಲ್ಯದ ಮೋಹದಲ್ಲಿ ಆಕರ್ಷಿತಗೊಳ್ಳುವ ಭಾರತೀಯ ಮನಗಳು ಸಮಗ್ರವಾಗಿ ತಮ್ಮನ್ನು ತಾವೂ ಅತ್ತವೂ ತೊಡಗಿಸದೆ, ಇತ್ತಲೂ ತೊಡಗಿಸದೆ ತೊಳಲಾಡುವ ಮತ್ತು ಸಂಭಂಧಗಳನ್ನು ತೊಳಲಾಡಿಸುವ ಪರಿ.
  • ಲೈಂಗಿಕ ಹಸಿವೆಗೆ ವೇಶ್ಯಾ/ವಿಟವೃತ್ತಿ ಅನಿವಾರ್ಯವೇ? ಸಲಿಂಗಕಾಮ ಸಹ್ಯವೇ?
  • ಜಾಗತೀಕರಣದ ವ್ಯವಹಾರಗಳಿಂದ, ಉಧ್ಯೋಗದಲ್ಲಿನ ಮಹದಾಶೆಗಳಿಂದ, ಹೆಚ್ಚು ಸಂಪಾದಿಸುವ ಹುಚ್ಚಿನಲ್ಲಿ, ಸಂಭಂಧಗಳು ಪೊಳ್ಳುಗೊಳ್ಳುತ್ತಿರುವ ಸ೦ಧರ್ಭ ಮತ್ತು ಮತ್ತು ಭಾರತೀಯ ಕುಟುಂಬದ ಮೌಲ್ಯಗಳು ಈ ನಿಟ್ಟಿನಲ್ಲಿ ಸಡಿಲವಾಗುತ್ತಿರುವ ಚಿತ್ರಣ.
ಕಾದ೦ಬರಿಯಲ್ಲಿನ ಬಾರತೀಯ ಕುಟುಂಬ ಮೌಲ್ಯಗಳ ಮಂಥನಗಳು:
  • ಸಂಕಲ್ಪ(commitment)ದಿಂದ ಪ್ರಾರಂಭವಾಗಿ, ಮನಗಳು ಪ್ರಾರಂಬದಲ್ಲಿ ತೊಡಗದೇ ಇದ್ದರೂ, ಕ್ರಮೇಣ ದೈಹಿಕ-ಮಾನಸಿಕ ಆಯಾಮಗಳಲ್ಲಿ, ಕುಟುಂಬದ ಇತರೇ ಹಿರೀ-ಕಿರಿ ಸಂಭಂಧಗಳ ಮಾರ್ಗದರ್ಶನ ಮತ್ತು ಪ್ರೀತಿಯಲ್ಲಿ ಒಂದಾಗಿ, ಪರಸ್ಪರರಲ್ಲಿ ಅನುರಕ್ತರಾಗಿ, ಗಟ್ಟಿಗೊಳ್ಳುವ ವೈವಾಹಿಕ ಸಂಭಂಧಗಳು. ಇದಕ್ಕೆ ಉದಾಹರಣೆ -ಮನಸ್ಸಿಲ್ಲದಿದ್ದರೂ ಮಾನಸಿಕ ಬೆಳವಣಿಗೆಯಲ್ಲಿ ಕುಂಠಿತಳಾದ ಪುಟ್ಟಕ್ಕನನ್ನು ಮದುವೆಯಾಗುವ ನಚಿಕೇತ ಕ್ರಮೇಣ ದಾಂಪತ್ಯದಲ್ಲಿ ಸಾಮರಸ್ಯ ಸಾಧಿಸಿ ಯಶಸ್ವೀಯಾಗುವದು, ಅಕ್ಕ-ಭಾವರ ಮಾರ್ಗದರ್ಶನದಲ್ಲಿ ವೈಜಯಂತಿಯನ್ನೂ ಮದುವೆಯಾಗಿ ಜಯಕುಮಾರ ದಾಂಪತ್ಯದಲ್ಲಿ ಯಶಸ್ವೀಯಾಗುವದು.
  • ಭಾರತೀಯ ನಾರಿ ತ್ಯಾಗ ಆದರ್ಶಗಳಲ್ಲಿ ಮನೆಯನ್ನು ನಡೆಸಿ, ಸಂಭಂಧಗಳನ್ನು ಗಟ್ಟಿಗೊಳಿಸುವದು - ಕುಡುಕ ಗಂಡನಿದ್ದರೂ ಅವನ್ನನ್ನು ಪ್ರೇಮದಿ೦ದ ಕಂಡು ದುಡ್ಡು ಕೊಟ್ಟು ತನ್ನ ಮುತ್ತೈದೆ ಭಾಗ್ಯ ಉಳಿದರೆ ಸಾಕೆಂದು ಪರೋಪಕಾರದಲ್ಲಿ (ಜಯಕುಮಾರ ಕುಟುಂಬಕ್ಕಾಗಿ , ಪುಟ್ಟಕ್ಕಳನ್ನು ಬೆಳೆಸುವಲ್ಲಿ) ಬದುಕನ್ನು ದೂಡುವ ದ್ಯಾವಕ್ಕ, ಸೊಸೆ ಸುಳ್ಳು ಆರೋಪ ನೀಡಿ ಜೈಲಿಗೆ ಹಾಕಿಸಿದರೂ ಸೊಸೆಯ ಮಗಳು ಆತ್ಮಹತ್ಯೆ ಮಾಡಿಕೊಂಡಾಗ ಅವಳನ್ನು ಕಾಣಲು ಹೋಗುವ- ವ್ಯೆಶ್ಯೆಯರ ಸಂಗ ಮಾಡಿ ಸಾಮಾಜಿಕವಾಗಿ ಹಾಗೂ ಔಧ್ಯೋಗಿಕವಾಗಿ ಹಾಳಾದ ಮಗನನ್ನು ಕ್ಷಮಿಸಿ ಅವನ ಬಾಳು ಹಸನು ಮಾಡಲು ಪ್ರಯತ್ನಿಸುವ ಜಯಕುಮಾರನ ತಾಯಿ, ಮನೆಕೆಲಸ ಒಪ್ಪ ಓರಣವಾಗಿ ಹಿರಿಕಿರಿಯರನ್ನು ಗೌರವಿಸುವ ವಿನಯಚಂದ್ರನ ಅತ್ತಿಗೆ, ಗಂಡನ ಕಚ್ಚೆಹರುಕತನ ಗೊತ್ತಿದ್ದರೂ ಅದನ್ನು ತಡೆಗಟ್ಟಲು ಗಂಡನೊಡನೆ ಹೋರಾಡದೆ ಅವನೊಡನೆ ಸಂಪರ್ಕದಲ್ಲಿರುವ ಹೆನ್ನುಗಲೊಡನೆ ಹೋರಾಡುವ ರಾಜಕಾರಣಿಯ ಪತ್ನಿ, ಇವುಗಳಿಗೆ ಉದಾಹರಣೆಯಾಗುವರು. ಈ ನಡುವೆ ಓದಿದ ವೈಜಯಂತಿ ಒಪ್ಪ ಓರಣವಾಗಿ ಮನೆಯನ್ನೂ ನಡೆಸಿ, ಮಗಳನ್ನೂ ಉತ್ತಮವಾಗಿ ಬೆಳಸಿ ಜೊತೆಗೆ ಆಫೀಸನಲ್ಲಿ ದುಡಿದು ಗಂಡನ ಯಶಸ್ಸಿಗೆ ಕಾರಣವಾಗಿರುತ್ತಾ ಆದರ್ಶ ಭಾರತೀಯ ಮಜಲಿನ ಪರಾಕಾಷ್ಠೆಯನ್ನೂ ಕಾದಂಬರಿಯಲ್ಲಿ ಕಾಣಬಹುದು.
  • ಲೈಗಿಂಕ ಸಂಭಂಧಗಳು ಯಶಸ್ವೀಯಾಗಲು ಮನ ಒಂದಾಗಿರಬೇಕು ಅದಕ್ಕೆ ಪರಸ್ಪರರಲ್ಲಿ ಗೌರವ ಪ್ರೀತಿ ಭಾವಗಳಿರಬೇಕು - ಮಂಗಳೆಯೊಡನೆ ಒತ್ತಾಯದಲ್ಲಿ ಮದುವೆಯಾದ ಜಯಕುಮಾರ ಅವಳೊಡನೆ ದೈಹಿಕ ಸಂಪರ್ಕದಲ್ಲಿ ವಿಫಲನಾಗುವದು, ಪುಟ್ಟಕ್ಕನಂತ ಮಾನಸಿಕ ಬೆಳವಣಿಗೆಯಾಗದ ಹೆಣ್ಣೋಡನೆ ಪ್ರೀತಿಯಿಂದ ಬೆರೆವ ನಚಿಕೇತ ಮಗುವನ್ನ ಪಡೆಯುವದು.
  • ಕುಟುಂಬದ ವ್ಯವಸ್ಥೆಯ ಎಲ್ಲ ಸಂಭಂಧಗಳ ಬೆಳವಣಿಗೆಗೆ ಆರ್ಥಿಕವಾಗಿ ಸಬಲರಿರುವವರು ನಿಲ್ಲುವದು- ಅತ್ತಿಗೆಯರ ಕಷ್ಟಕ್ಕೆ ಒದಗುವ ವಿನಯಚಂದ್ರ, ತಮ್ಮ ಜಯಕುಮಾರನ ಓದು ಮತ್ತು ಬೆಳವಣಿಗೆಗೆ ಕಾರಣಳಾಗುವ ಶೋಭಕ್ಕ ಮತ್ತು ಅವಳ ಗಂಡ, ಅಳಿಯ ನಚಿಕೇತನನ್ನು ಬೆಳೆಸುವ ಜಯಕುಮಾರ್-ವೈಜಯಂತಿ, ಮಾವನನ್ನು ಸ್ವಲ್ಪ ಕಾಲ ಸಾಕುವ ನಚಿಕೇತ, ತಾಯಿಯನ್ನು ಸಲಹುವ ಮಂಗಳೆ, ಜಯಕುಮಾರನ ಕಷ್ಟದಲ್ಲಿ ತಾನು ಕೂಡಿಟ್ಟ ಹಣ ವಿನಿಯೋಗಿಸುವ ಅವನ ತಾಯಿ ಹೀಗೆ ಹತ್ತು ಹಲವಾರು ಉದಾಹರಣೆ ನಿಲ್ಲುತ್ತವೆ.
  • ಭಾರತೀಯ ಉಡುಗೆ-ತೊಡುಗೆ-ಅಲಂಕಾರ ಮಹತ್ವ -ಕುಂಕುಮ ಬಳೆ ಸೀರೆ ಬಳಸಿದರೆ ಲಕ್ಷಣವಾಗಿದ್ದು ಮನೆ-ಮನ ಪ್ರಫುಲ್ಲವಾಗಿರುವದು ಎಂಬುದನ್ನು ವೈಜಯಂತಿ, ವಿನಚಂದ್ರನ ಅಣ್ಣನ ಹೆಂಡತಿ, ಪುಟ್ಟಕ್ಕಳ ಮುಖಾಂತರ ಹೇಳಿದೆ. ಹಾಗು ಇಲ್ಲದಿದ್ದರೆ ಸರಿಯಿರುವದಿಲ್ಲ ಎಂಬುದನ್ನು ಮಂಗಳೆ ಮತ್ತು ಇಶಾರ ಮುಖಾಂತರ ಕೆಲವು ಪಾತ್ರಗಳು ಹೇಳಿವೆ (ಮಂಗಳೆ ಪ್ರಭಾಕರನಿಗೆ ರುಚಿ ಇದ್ದರೆ ಅರುಚಿ ಹಾಗೂ ಇಷಾ ರಾಜಕಾರಣಿಗೆ ರುಚಿ ಇದ್ದರೆ ವಿನಯಚಂದ್ರಗೆ ಅರುಚಿ).
  • ಈ ನಡುವೆ ಭಾರತೀಯ ಕಂದಾಚಾರಗಳು ಎತ್ತಿ ತೋರಿಸಲ್ಫಟ್ಟಿವೆ- ಕುಟುಂಬಕ್ಕೆ ಗಂಡು ಬೇಕೆನ್ನುವ ಜಯಕುಮಾರನನ್ನು ವೈಜಯಂತಿ ಪುಟ್ಟಕ್ಕ ಏಕೆ ಆ ಸ್ಥಾನಕ್ಕೆ ಅರ್ಹಳಲ್ಲ ಎಂದು ವಾದಿಸಿ ಅವನ್ನನ್ನು ಒಪ್ಪಿಸುವದು, ಹೆಣ್ಣು ಮನೆಗೆ ಸೀಮತವಾಗಿರದೆ ವ್ಯವಹಾರಗಳಲ್ಲೂ ತೊಡಗಿಸಿಕೊಳ್ಳುವದು -ವೈಜಯಂತಿ ಉದಾಹರಣೆ ಮುಖಾಂತರ ತೋರಿಸಿ ಭಾರತೀಯ ಮನಗಳಲ್ಲಾಗಬೇಕಾಗಿರುವ ಬದಲಾವಣೆಗಳನ್ನ ಹೇಳಲಾಗಿದೆ.
  • ಲೈಂಗಿಕ ಸ್ವಾತಂತ್ರ ಮುಕ್ತತೆಯಿಂದ ಭಾರತೀಯ ಗಂಡುಗಳು ಅನುಭವಿಸಬೇಕಾದ ಪಾಡು ಗಳನ್ನ -ಇಷಾಳ ಸಂಪರ್ಕಕ್ಕೆ ಬಂದ ರಾಜಕಾರಣಿ ಪಾತ್ರ, ಮಂಗಳೆ ಸಂಪರ್ಕಕ್ಕೆ ಮತ್ತು ವೆಶ್ಯಯರ ಸಂಪರ್ಕಕ್ಕೆ ಬರುವ ಜಯಕುಮಾರಣ ಮುಖಾಂತರ ವಿವರಿಸಲ್ಪಟ್ಟಿದೆ.
  • ಲೈಂಗಿಕ ಮುಕ್ತತೆಯಿಂದ ಹೆಣ್ಣು ಭಾರತೀಯ ಮನಗಳ ನಡುವೆ ಪಡುವ ಪಾಡನ್ನು ಮಂಗಳೆ ಮತ್ತು ಇಶಾರ ಮಲಕ ಹೇಳಲ್ಪಟ್ಟಿದೆ.
  • ಹೆಂಡತಿ ಸಮಭಾಗಿಯಾಗಿ ದುಡಿದರೂ ಅವಳನ್ನುಳಿಗೆ ಸಂಸ್ಥೆಯಲ್ಲಿ ಪಾಲುದಾರಳನ್ನಾಗಿ ಮಾಡದೆ ಹೋದದ್ದಕ್ಕೆ ಆಗುವ ಪರಿಣಾಮಗಳು. (ಜಯಕುಮಾರನ ಸಂಸ್ಥೆಯನ್ನೂ ಕಟ್ಟಿ ಬೆಳಸುವದರಲ್ಲಿ ಹೆಚ್ಸಿನಪತ್ರ ವಹಿಸಿದ್ದ ವೈಜಯಂತಿಗೆ ಅದರಲ್ಲಿ ಪಾಲೇ ಇರುವದಿಲ್ಲ.
  • ಈ ನಡುವೆ ಜಯಕುಮಾರನ ಮಿತ್ರ ಶೇಖರ್ - ಒಬ್ಬರಿಗೊಬ್ಬರು ಹೇಗೆ ಸಹಾಯವಾಗುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುತ್ತಾರೆ. ಅವರು ಅವನನ್ನು ಎರಡು ಸಲ ಜೈಲಿಂದ ಬಿಡಿಸುವಲ್ಲಿ ಮತ್ತು ಉಧ್ಯಮವನ್ನ ಮರುಸ್ಥಾಪನೆ ಮಾಡಿಸುವಲ್ಲಿ ನೆರವಾಗುತ್ತಾರೆ. ಒಂದು ಕಡೆ ಅವನ್ ವೇಶ್ಯಾಸಂಗಕ್ಕೆ ಅವರು ಕಾರಣರಾಗಿರುತ್ತಾರೆ.
ಕಾದ೦ಬರಿಯಲ್ಲಿನ ಭಾರತೀಯ ಮನಗಳಲ್ಲಿ ಪಾಶ್ಚಾತ್ಯ ಕುಟುಂಬ ಮೌಲ್ಯಗಳ ಮಂಥನಗಳು:
  • ಪರಸ್ಪರ ಆಕರ್ಷಣೆಯಿಂದ "ಒಟ್ಟಿಗಿರುವದರಿಂದ (living together) ಪ್ರಾರಂಭವಾಗುವ ಸಂಭಂಧಗಳು ಭಾರತೀಯ ಮನದಲ್ಲಿ ಊರ್ಜಿತವಾಗದೆ ಇರುವದು- ನಚಿಕೇತ ಒಟ್ಟಿಗಿರುವದರಿಂದ ಪ್ರಾರಂಭಿಸಿದ ಸ೦ಭಂಧ ಊರ್ಜಿತವಾಗದೆ ಇದ್ದಾಗ ಅದನ್ನು ಪಾಶ್ಚ್ಯಾತ್ಯರಂತೆ ಸಾಮಾನ್ಯವಾಗಿ ತೆಗೆದುಕೊಳ್ಳದೆ ಕೊರಗುವದು, ಪ್ರಭಾಕರನೊಡನೆ ಲೈಗಿಂಕ ಸಂಪರ್ಕಕ್ಕೆ ಬರುವ ಪಾಶ್ಚ್ಯತ್ಯ ಮತ್ತು ಅಧುನಿಕ ಧೋರಣೆಯಲ್ಲಿ ಮುಂದುವರೆಯುವ ಮಂಗಳೆ ಗರ್ಭವತಿಯದಾಗ ಗರ್ಭವನ್ನು ತೆಗೆಸಲು ಅವಳಲ್ಲಿನ ಭಾರತೀಯ ಮನ ಅಡ್ಡ ಬರುವದು, ಗಂಡನೊಡನೆ ಹೋಗದೆ ಅವನನ್ನು ಬಿಟ್ಟಿರದೆ ತೊಳಲಾಡುವ ಇಷಾಳು, ಕಾನೂನು ಮೊರೆ ಹೊಕ್ಕು ವಿಚ್ಛೇದನೆ ತೆಗೆದುಕೊಂಡರೂ ಮನದ ಕೊರಗಲ್ಲಿ ಉಳಿವ ಮಂಗಳೆ ಹೀಗೆ ಹಲವಾರು ಸಂಧರ್ಭಗಳಲ್ಲಿ ಉದಾಹರಣೆ ದೊರೆಯುತ್ತದೆ.
  • ಸ್ತ್ರೀ ಸಮಾನತೆಯ ಹೆಸರಲ್ಲಿ ಮುಕ್ತ ಲೈಂಗಿಕತೆಗೆ ಆಕರ್ಷಿತರಾಗಿ ಅದನ್ನು ಅನುಭವಿಸಿ ಅದರ ಪರಿಣಾಮ ಮತ್ತು ಅನುಭವಗಳನ್ನೂ ಸಹಜ ಎಂದು ಪರಿಗಣಿಸದೆ ತೊಳಲಾಡುವ ಪಾತ್ರಗಳು.
ಕಾದಂಬರಿಯಲ್ಲಿನ ಕುಟುಂಬ ಕಾನೂನು ಮಂಥನ:
  • ಸಣ್ಣ ಕಾರಣಕ್ಕೆ ಅತ್ತೆ ಸೊಸೆ ಜಗಳಾಡಿ, ಸೊಸೆ ವರದಕ್ಷಿಣೆ ಕಾನೂನಡೀ ಅತ್ತೆಯನ್ನು ಜೈಲಿಗೆ ಕಳಿಸುವದು ಮತ್ತು ಆಮೇಲೆ ಆ ಕೇಸನ್ನು ಹಿಂತೆಗೆಯಲಾಗದೇ ಅವಳಿಗೆ ಶಿಕ್ಷೆ ಆಗುವದು. (ಜಯಕುಮಾರ ಅತ್ತಿಗೆ ಮತ್ತು ತಾಯಿ ನಡುವೆ)
  • ಗಂಡ -ಹೆಂಡತಿ ಜಗಳದಲ್ಲಿ ಹೆಂಡತಿಗೆ ಕೈ ಎತ್ತಿದ ಪ್ರಸಂಗದಲ್ಲಿ ಹೆಂಡತಿ ದೂರು ನೀಡಿ ಅವನ್ನನ್ನು ಮಾನಸಿಕ ಕಿರುಕುಳದ ಅಡೀ ಜೈಲಿಗಟ್ಟುವದು. (ಮಂಗಳೆ-ಜಯಕುಮಾರ)
  • ಪರಿಹಾರ ಪಡೆಯುವ ಉದ್ಹ್ಧೆಶದಲ್ಲಿ ನಚಿಕೇತನನ್ನು ಮದುವೆಯಾಗಿ ಆಮೇಲೆ ವಿಚ್ಛೇದನೆ ಪಡೆದು ವಂಚಿಸುವ ವಿದೇಶೀ ಮಹಿಳೆ (ಅವಳು ಇದನ್ನು ಉದ್ಹ್ಯೋಗವನ್ನಾಗಿಸಿರುತ್ತಾಳೆ!)
  • ವೇಶ್ಯಾವಾಟಿಕೆಯಲ್ಲಿ ತೊಡಗುವದು ಅದರಿಂದ ಕಾನೂನು ಕ್ರಮಕ್ಕೊಳಗಾಗುವದು. ಜಯಕುಮಾರನ ತಾಯಿ ತಪ್ಪಲ್ಲ ಎನ್ನುವದರ ಮುಖಾಂತರ ವಿಧುರ ಮತ್ತು ಮನೆಯಲ್ಲಿ ಸುಖ ಸಿಗದ ಗಂಡು ವೇಶ್ಯೇಯಾರಲ್ಲಿ ಲೈಂಗಿಕ ದಾಹ ತೀರಿಸಿಕೊಳ್ಳುವದು ಸಹಜ ಎಂಬತಿದೆ. ಇತಿಹಾಸದಲ್ಲೂ ಇದು ಇತ್ತು ಇನ್ನು ಸಮರ್ಥನೆಯು ಇದೆ.
  • ವಿನಯಚಂದ್ರ ಚಾಣಾಕ್ಷವಾಗಿ ಒಲ್ಲದ ಹೆಂಡತಿಯಿಂದ(ಇಷಾ) ವಿಚ್ಛೇದನೆ ಪಡೆಯಲು ಅವಳನ್ನು ದೂರ ಮಾಡುವದು, ಲೈಂಗಿಕ ಹಸಿವಿನ್ನಲ್ಲಿಡುವದು, ಅವಳು ಬೇರೆಯವನೊಡನಿರುವಾಗ ಚಿತ್ರಗಳನ್ನೂ ತೆಗೆದು ಸುಲಭದಲ್ಲಿ ವಿಚ್ಛೇದನೆ ಪಡೆಯುವ ತಂತ್ರ.
  • ಕುಟುಂಬ ಕನುನುಗಳನ್ನು ಉಪಯೋಗಿಸಿ ಅದಲಿತವರ್ಗದವರು ಹಣ ಮಾಡುವ ತಂತ್ರವನ್ನು ಒಬ್ಬ ಮಹಿಳಾಪೋಲಿಸ್ ಅಧಿಕಾರಿ ಪಾತ್ರದಲ್ಲಿ ಹೇಳಲಾಗಿದೆ.
ವೈಭವ ವಿಲಾಸೀ ಜೀವನ ಕ್ರಮ : ಇಷಾ ಮತ್ತು ವಿನಯಚಂದ್ರರ ಕಥೆಯಲ್ಲಿ ಹೆಚ್ಚು ಸಂಪಾದಿಸಿ, ವೈಬ್ಹೊವೆಪೆತ ಜೀವನ ನಡೆಸುವ ಕುಟುಂಬದಲ್ಲಿನ ಸ೦ಭಂಧಗಳ ಕುಸಿತ ಜೊತೆಗೆ ಹೆಣ್ಣು ಸ್ವತಂತ್ರ ಮನೋಭಾವದಲ್ಲಿ ವರ್ತಿಸಿದಾಗ ಆಗುವ ಪರಿಣಾಮಗಳು ವಿಶದವಾಗಿವೆ. ಮಂಗಳೆಯ ಜೀವನ ಕ್ರಮ ಸಹಾ.

ನನ್ನ ವಿಚಾರ :
  • ಕಾದಂಬರಿಯ ಆಶಯ ಪ್ರಸ್ತುತ ಕಾಲಕ್ಕೆ ಔಚಿತ್ಯ ಪೂರ್ಣವಾಗಿದ್ದು ಕಾದಂಬರಿ ಈ ಹರವಿನಲ್ಲಿ ಸಾಕಷ್ಟು ಪರಿಶ್ರಮ ಹೊಂದಿದೆ. ಆದರೆ ಎಲ್ಲ ಸ್ವತಂತ್ರ ಮನೋಭಾವ ಹೊಂದಿದ ಸ್ತ್ರೀ ಪಾತ್ರಗಳು ನಕಾರಾತ್ಮಕವಾಗಿ ಆಡಿಸಲ್ಪಟ್ಟಿವೆ. ಈ ಕಾರಣಕ್ಕಾಗಿ ಸ್ತ್ರೀ ವಿರೋದ್ಧಿ ದೋರಣೆಯ ಕಾದಂಬರಿ ಎನ್ನುವ ಅಪಾಯ ತಪ್ಪಿಸಿಕೊಳ್ಳಲಾಗಿಲ್ಲ. ವೈಜಯಂತಿಯ ಪಾತ್ರ ಮಾತ್ರ ಅಪವಾದ. ಆದರೆ ಆ ಪಾತ್ರ ಕೇವಲ ಬೇರೆಯವರ ಸ್ವಗತದಲ್ಲಿ ಬರುವ ಪಾತ್ರವಾಗಿದ್ದರಿಂದ ಓದುಗರಿಗೆ ಅದರ ಕಡೆ ಗಮನ ಹರಿಯುವದಿಲ್ಲ.
  • ಒಟ್ಟಿನಲ್ಲಿ- ಸಂಕಲ್ಪವಿಲ್ಲದ ಆಕರ್ಷಣಾ ಪ್ರೇಮಗಳು ಹೆಚ್ಚು ಗಟ್ಟಿಯಾಗಲಾರವು, ಪ್ರೀತಿಯಲ್ಲಿ ಅಧಿಕಾರ ಚಲಾಯಿಸಿದರೆ ಅದು ಅಧಿಕಾರವಾಗಲಾರದು, ಅಧಿಕಾರಯುತವಾಗಿ ಪ್ರೀತಿ ಪಡೆಯಲೆತ್ನಿಸಿದರೆ ಅದು ಸಂಪೂರ್ಣ ವೇಧ್ಯವಾಗದು, ಮನಗಳು ತೊಡಗದೇ ಲೈಂಗಿಕ ಕ್ರಿಯೆಗಳು ಸಂತೃಪ್ತಿಯಲ್ಲಿ ಮುಗಿಯವು, ತ್ಯಾಗವಿಲ್ಲದೆ ಪ್ರೀತಿ ಅರಳದು, ಕುಟುಂಬವೆಂದರೆ ಬರಿ ಗಂಡ ಹೆಂಡತಿ ಮತ್ತು ಅವರ ಪ್ರಾಪ್ತರಲ್ಲದ ಮಕ್ಕಳು ಎಂಬ ಸೀಮಿತ ಅರ್ಥದ ಕಾನೂನಿನ ಔಚಿತ್ಯವಲ್ಲ, ಕುಟುಂಬ ಎಂದರೆ ಎಲ್ಲ ಸಂಭಂಧಗಳು ಸೇರಬೇಕು ಎಂಬ ನೀತಿಗಳು ಕಾದಂಬರಿಯಲ್ಲಿ ಸಿಗುತ್ತೆ.
  • ಎರಡು ಕಥೆಗಳು ಸೇರಿ ಹರವು ದೊಡ್ಡದಾಗಿ ಮತ್ತು ಹೇಳಬೇಕಾದ ಅ೦ಶಗಳು ಹೆಚ್ಚಾಗಿ ಯಾವದೂ ಪ್ರಭಾವಕಾರಿಯಾಗಿ ಹೇಳಲಾಗದೆ ಹೋಗಿದೆ. ಕೇವಲ ಒಂದು ಕಥೆ ತೆಗೆದುಕೊಂಡು ಯಾವದೇ ಒಂದು ವಿಚಾರದ ಸುತ್ತ ಮಂಥನ ನಡೆದಿದ್ದರೆ ಚೆನ್ನಾಗಿರುತ್ತಿತ್ತು ಎನಿಸಿತು.
  • ಪ್ರಭಾಕರ ಮತ್ತು ರಾಜಕಾರಣಿ-ಯಂಥ ಪಾತ್ರಗಳು ಭಾರತೀಯ ಮೌಲ್ಯಗಳ ದುರುಪಯೋಗದಲ್ಲಿ ಹೆಣ್ಣನ್ನು ಉಪಯೋಗಿಸುವದಕ್ಕೆ ನಿಂತಿರುವಾಗ, ಬೇಕಾದ ಖಂಡನೆ ಕಾದಂಬರಿಯಲ್ಲಿ ಕಾಣಲಿಲ್ಲ.
  • ಜಯಕುಮಾರನು ಆಧುನಿಕ ಹೆಸರಲ್ಲಿ ತನ್ನ ವಿಧುರ ಜೀವನದಲ್ಲಿ ಮಜಾ ಪಡೆಯಲು ನೋಡುವದರಿಂದ ಮಂಗಳೆ ಮಾಡಿದ್ದು ಒಮ್ಮೆ ಸರಿಯೇನ್ನಿಸಬಹುದು.
  • ಸಂಕಲ್ಪದಲ್ಲಿ ಅರಳಿದ ಸಂಬಂಧಗಳಲ್ಲಿ ಪ್ರೀತಿ ತಾನೇ ಸುರಿದು ಅವು ಗಟ್ಟಿಯಾಗುತ್ತವೆ.
  • ಪುರುಷರ ತಪ್ಪುಗಳು ಸ್ವಾಭಾವಿಕ ( ವಿವಾಹೇತರ ಸಂಭಂಧಗಳು) ಎನ್ನುವಷ್ಟು ದಾರ್ಷ್ಟ್ಯವಾಗಿ ಮಹಿಳೆಯ ಸಂಭಂಧಗಳು ಸ್ವಾಭಾವಿಕ ಎನ್ನದ ಧೋರಣೆ ಮೆಚ್ಚುಗೆಯಾಗಲಿಲ್ಲ. ತಪ್ಪೆಂದರೆ ಇಬ್ಬರದೂ ತಪ್ಪೇ, ಅಲ್ಲವೆಂದರೆ ಇಬ್ಬರದೂ ತಪ್ಪಿಲ್ಲ.
  • ಪಾಶ್ಯಾತ್ಯ ಅನುಕರಣೆ ಮಾಡಿದರೂ ನಮ್ಮ ಭಾರತೀಯ ಮನಗಳು ಸಂಪೂರ್ಣ ಪರಿವರ್ತಿತವಾಗದು. ಈ ನಿಟ್ಟಿನಲ್ಲಿ ನಮ್ಮ ಸ೦ಸ್ಕ್ರತಿಗೆ ತಕ್ಕ ಹಾಗಿದ್ದು, ಪಾಶ್ಚಾತ್ಯ ಜ್ಞಾನವನ್ನು ಪಡೆದು ಉಧ್ಯೋಗ ಮತ್ತು ಆರ್ಥಿಕ ಕ್ಷೇತ್ರದಲ್ಲಿ ನಾವು ಪ್ರಗತಿ ಸಾಧಿಸಬಹುದು-ವೈಜಯಂತಿ ತರಹ.
  • ಜೀವನದ ಮಟ್ಟದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಸ್ತರಗಳು ನಮ್ಮ ಮನೋಧರ್ಮವನ್ನು ಸಂಪೂರ್ಣ ಬದಲಾರಗಿಸಲಾರದ ಮಟ್ಟದಲ್ಲಿ ಆಳವಿರುವದರಿಂದ ಅದರಲ್ಲಿ ಪಾಶ್ಯಾತ್ಯ ಧೋರಣೆ ಅಳವಡಿಕೆ ಕಷ್ಟ. ಆದರೆ ಅದನ್ನು ನಾವು ವಿಧ್ಯೆ ಉಧ್ಯೋಗ ದಲ್ಲಿ ರೂಡಿಸಿಕೊಳ್ಳಬಹುದು.
  • ಕಾದಂಬರಿ ಹಸರು ಹೇಳುವ ಹಾಗೆ ನಮ್ಮ ಭಾರತೀಯ ಮನಗಳು ಇತ್ತ ಭಾರತೀಯ ಮೌಲ್ಯಗಳನ್ನು ಸಂಪೂರ್ಣ ಬಿಡದೇ, ಅತ್ತ ಪಾಶ್ಚ್ಯಾತ್ಯ ಮೌಲ್ಯಗಳನ್ನು ಸಂಪೂರ್ಣ ಅಪ್ಪಿಕೊಳ್ಳದೇ ತೊಳಲಾಡುತ್ತಾ"ಕವಲು" ದಾರಿಯಲ್ಲಿವೆ. ಯಾವಕಡೆ ಹೋಗಬೇಕು ಯಾವಕಡೆ ಇರಬೇಕು ಎಂಬುದರ ವಿಚಕ್ಷಣೆ ಬೇಕು. ಈ ನಿಟ್ಟಿನಲ್ಲಿ ಕವಲು ಓದುಗರ ಮನದಲ್ಲಿ ಸಾಕಷ್ಟು ತರಂಗಗಗಳನ್ನೆಬ್ಬಿಸುವದು.
  • ಆದರೆ ಎರಡು ಕಥೆಗಳನ್ನು- ಅದೊಂದು ಸ್ವಲ್ಪ ಇದೊಂದು ಸ್ವಲ್ಪ ಹೇಳುತ್ತಾ ಹೋಗುವದರಿಂದ ಓದುಗರಿಗೆ ಓದಿನ ಓಟ ಕಷ್ಟವೆನಿಸುತ್ತದೆ. ಜೊತೆಗೆ ಹಲವಾರು ವಿಷಯಗಳು-ಮೌಲ್ಯ, ಸಂಭಂಧಗಳು, ಕಾನೂನು, ಲೈಂಗಿಕತೆ, ಸ್ತ್ರೀ ಸಮಾನತೆ, ಆಧುನಿಕತೆ-ಸನಾತನತೆ, ಹೀಗೆ ಹಲವಾರು ವಿಷಯಗಳ ಸುತ್ತ ಹರಿಯುವದರಿಂದ ಓದುಗರಿಗೆ ಸ್ವಲ್ಪ ಕವಲಿನ ದಾರಿಯೇ ಎನಿಸುವದು.
  • ಎಲ್ಲ ಆಧುನಿಕ ಧೋರಣೆ ಮತ್ತು ಸ್ತ್ರೀ ಸಂಘಟನೆಗಳ ಮಹಿಳೆಯರು (ಕಾದಂಬರಿಯಲ್ಲಿ ಬರುವ) ನಕಾರಾತ್ಮಕ ಧೋರಣೆ ಇರುವದರಿಂದ ಜನ ಕಾದ೦ಬರಿ ಸ್ತ್ರೀ ಧೋರಣಾವಾದಿಗಳ ವಿರೋಧಿಯೆಂಬ ನಿಲುವಿಗೆ ಬರಬಹುದು.
ಒಟ್ಟಿನಲ್ಲಿ ಕಾದಂಬರಿ ಸಮಕಾಲೀನ ಪರಿಸ್ಥಿತಿಯಲ್ಲಿನ ಭಾರತೀಯ ಮನಗಳ ತಮ್ಮ ಪರಂಪರಾಗತ ಮೌಲ್ಯ ಮತ್ತು ಆಧುನಿಕ ಮೌಲ್ಯಗಳ ಮನ್ವಂತರದ ಕವಲಿನಲ್ಲಿ ನಿಂತು ದ್ವಂದ ಎದುರಿಸುವಲ್ಲಿನ ಕ್ಷಣಗಳನ್ನು, ಒಂದನ್ನೂ ಪೂರ್ತಿ ಬಿಡದ, ಒಂದನ್ನೂ ಪೂರ್ತಿ ಅಪ್ಪಿಕೊಳ್ಳದ ಸಂಧರ್ಭಗಳಲ್ಲಿ ಸಂಭಂಧಗಳು ಹಾಗೂ ಕುಟುಂಬ ವ್ಯವಸ್ಥೆ ಸಡಿಲಳವಾಗುತ್ತಿರುವ ಚಿತ್ರಣವನ್ನ ಮೂಡಿಸುವ ಪ್ರಯತ್ನವಾಗಿದೆ.
ಎರಡು ಕಥೆ ಮತ್ತು ಹಲವಾರು ವಿಷಯಗಳ ಸುತ್ತಲಿನ ಚಿಂತನ ಏಕ ಕಾದಂಬರಿಯಲ್ಲಿ ಮೂಡಿ ಯಾವದೇ ಒಂದು ವಿಷಯ ಸದೃಡ ಹರಳುಗಟ್ಟಲು ಆಗಿಲ್ಲ ಹಾಗೂ ಮಂಥನ ಓದುಗರನ್ನು ಕೆಣಕುವ ಮಟ್ಟಕ್ಕೆ ಹೋಗಿಲ್ಲ. ಈ ನಡುವೆ ಓದುಗರು ಕಾದಂಬರಿ ಅಭಿವ್ಯಕ್ತಿ ಗಳನ್ನು ಭೈರಪ್ಪನವರದ್ದಾಗಿಸಿ ಆ ವಿಷಯಗಳಿನ ತಮ್ಮ ಅಭಿಪ್ರಾಯ ಮೂಸೆಯಲ್ಲಿ ಅವರ ಪರ-ವಿರೋಧಿ ನಿಲುವಿಗೆ ನಿಲ್ಲುವದಾಗಲಿ ಅಥವಾ ಅವರ ಹಿಂದಿನ ಕಾದ೦ಬರಿಗಳಿಗೆ ಹೋಲಿಸಿ ಇದು ಉತ್ತಮ ಅಥವಾ ಕಳಪೆ ಎನ್ನುವ ವಿಮರ್ಶೆಗೆ ನಿಂತು ಕಾದಂಬರಿಯಲ್ಲಿನ ಆಶಯಗಳು ಸರಿಯಾದ ಮಂಥನವಿಲ್ಲದೆ ಸೊರಗುವ ಸಾಧ್ಯತೆ ಇಲ್ಲದೆ ಇಲ್ಲ!

(ಚಿತ್ರಗಳ ಕೃಪೆ : ಕನ್ನಡಿ ಅಂಗಡಿ ಅಂತರ್ಜಾಲ ತಾಣ ಮತ್ತು ಭೈರಪ್ಪನವರ ಅಂತರ್ಜಾಲ.
ಭೈರಪ್ಪನವರ ಬಗೆಗಿನ ಮಾಹಿತಿ ಕೃಪೆ : ವಿಕಿಪೀಡಿಯಾ ಅಂತರ್ಜಾಲ ತಾಣ)

Tuesday, August 10, 2010

ನೊರೆಹಾಲಿನ ಸಮುದ್ರೋಪಾದಿ ಜಲಪಾತ (ದೂದಸಾಗರ ಫಾಲ್ಸ್)

ಅದೊಂದು ರುದ್ರ ರಮಣೀಯ ಕಣ್ನೋಟ!
ಕರ್ನಾಟಕ -ಗೋವಾ ಸರಹದ್ದಿನಲ್ಲಿ ಗೋವಾ ರಾಜ್ಯದಲ್ಲಿ, ಸಹ್ಯಾದ್ರಿ ಬೆಟ್ಟದ ತಪ್ಪಲಿನಲ್ಲಿ ಮಾಂಡೋವಿ ನದಿಯು ಸುಮಾರು ೩೦೦ ಮೀಟರ ಎತ್ತರದಿಂದ ಸರಿಸುಮಾರು ೩೦-೩೫ ಮೀಟರ್ ಅಗಲದಲ್ಲಿ , ಗ್ರಾನೈಟ್- ನಿಸ್ಸ್ ಎಂಬ ಹೆಬ್ಬಂಡೆಯ ಮೇಲಿಂದ ಸರಸರನೆ, ನೊರೆನೊರೆಯಾಗಿ, ಧುಮ್ಮಿಕ್ಕುತ್ತಾ, ಅಗಲವನ್ನು ಕವಲುಗಳನ್ನಾಗಿ ಹೆಚ್ಚಿಸುತ್ತಾ, ಇಳಿದಿಳಿದಂತೆ, ಮತ್ತೆ ಒಗ್ಗೂಡುತ್ತಾ, ವಜ್ರಾಕೃತಿಯಲ್ಲಿ, ಹಾಲಿನ ನೊರೆಯಂತೆ, ಸಾಗರೋಪಾದಿಯಲ್ಲಿ, ಧುಮ್ಮಿಕ್ಕಿ ಹರಿವ, ನಯನ ಮನೋಹರ ನೋಟ ಎಂತಹ ಅರಸಿಕನ ಮೈಯನ್ನು ಜುಮ್ಮೆನ್ನಿಸದೆ ಬಿಡದು!

ಅದಕೆಂದೇ ಇದನ್ನು ದೂದಸಾಗರ ಜಲಪಾತ ಎಂದು ಇದನ್ನು ಕರೆಯುವದು.

ಇದಕ್ಕೊಂದು ಕಥೆಯು ಇದೆ. ನದಿ ತಟದ ಹತ್ತಿರದ ಅರಮನೆಯಲ್ಲಿದ್ದ ರಾಜಕುಮಾರಿಯೋರ್ವಳು ನಿತ್ಯ ಈ ನದಿಯಲ್ಲಿ ಸ್ನಾನ ಮಾಡುತ್ತಿದ್ದಳಂತೆ. ಒಂದು ದಿನ ಅವಳು ಸ್ನಾನ ಮಾಡುತ್ತಿದ್ದಾಗ ರಾಜಕುಮಾರನೋರ್ವನು ಅಲ್ಲಿಗೆ ಬಂದಾಗ ನಾಚಿದ ನಗ್ನ ರಾಜಕುಮಾರಿ ಅಲ್ಲಿಯೇ ಇದ್ದ ಪಾತ್ರೆಯಲ್ಲಿನ ಹಾಲನ್ನು ಮೈ ಮೇಲೆ ಸುರಿದುಕೊಂಡಳಂತೆ ನಗ್ನತೆ ಮುಚ್ಚಲು. ಹಾಲು ಮೈ ಮೇಲಿಂದ ಹರಿದು ಹೋಗುವಷ್ಟರಲ್ಲಿ ಸಖಿಯರು ಉಡುಗೆ ತೊಡಿಸಿದ್ದರು. ಆ ಹರಿದ ಹಾಲು ನದಿ ಸೇರಿ ನೀರು ಹಾಲಾಯಿತಂತೆ. ಇದೊಂದು ಸುಮ್ಮನೆ ಪೂರಕ ಕಥೆ.

ಆದರೆ ಆ ಜಲಪಾತ ನೋಡಿದಾಗ ನೀರು ಕಲ್ಲಿನ ಮೈಯಲ್ಲಿ ನೊರೆನೊರೆಯಾಗಿ ಸರಿವಾಗ, ಅಚ್ಚ ಬಿಳುಪಿನ ರಾಶಿ ಮುತ್ತಂತೆ ಹರವಿದಾಗ, ಈ ದಂತ ಕತೆ ನಿಜವಿರಬಹುದೇನೋ ಎಂದು ಯಾರಿಗೂ ಅನ್ನಿಸದೆ ಇರದು!

ಈ ಜಲಪಾತ ನೋಡಲು ಹುಬ್ಬಳ್ಳಿಯ ಅಥವಾ ಬೆಳಗಾವಿಯಿಂದ ಗೋವೆಗೆ ಹೋಗುವ ರೈಲಿನ ಮಾರ್ಗ -ತಲುಪಲು ಉತ್ತಮ ವ್ಯವಸ್ಥೆ. ಎಲ್ಲಾ ರೈಲುಗಳು ದೂದಸಾಗರ ನಿಲ್ದಾಣದಲ್ಲಿ ನಿಲ್ಲುತ್ತವೆ. ನಿಲ್ದಾಣದ ಪಕ್ಕವೇ ಜಲಪಾತ. ಬಸ್ಸಿನಲ್ಲಿ ಕೊಲೆಮ್-ಗೆ ಬಂದು ಅಲ್ಲಿಂದ ಜೀಪ ಅಥವಾ ಕಾರಿನಲ್ಲಿ ಇಲ್ಲಿಗೆ ಬರಬಹುದು. ಆದರೆ ರೈಲಿನ ಮಾರ್ಗ ಉತ್ತಮ.
ಟ್ಯಾಕ್ಷಿಯಲ್ಲಿ ಅಥವಾ ಸ್ವಂತ ಕಾರಿನಲ್ಲಿ ಬರುವ ಜನ ಕರ್ನಾಟಕದ ಅನಮೋಡ/ಕ್ಯಾಸಲ್ ರಾಕ್ ಅಥವಾ ಗೋವೆಯ ಮೊಲ್ಲೇಮ್ ನಿಂದ ಪಯಣಿಸಬಹುದು.

ಕ್ಯಾಸಲ್ ರಾಕ್ ನಿಲ್ದಾಣಕ್ಕೆ ಬಂದು, ಅಲ್ಲಿಂದ ರೈಲಿನಲ್ಲಿ ದೂದಸಾಗರಕ್ಕೆ ಪಯಣಿಸಬಹುದು. ರೈಲಿನಲ್ಲಿನ ಪಯಣದಲ್ಲಿ, ನೀವು ಇದನ್ನು ಪಕ್ಕದಲ್ಲಿಯೇ ನೋಡಿ ಅನುಭವಿಸಬಹುದು. ಹಾಗೆ ನಾನು ಹೋಗುತ್ತಿರುವ ರೈಲಿನಿಂದ ತೆಗೆದ ಚಿತ್ರಗಳು ಇಲ್ಲಿವೆ.
ಇಲ್ಲಿನ ನೀರಿನಲ್ಲಿ ಸ್ನಾನ ಮಾಡಬಹುದು ಹಾಗೂ ಜಲಕ್ರೀಡೆಯಾಡಬಹುದು. ಅದಕ್ಕಾಗಿ ಜಲಪಾತದ ಸ್ತರದಲ್ಲಿ ೩-೪ ಸ್ಥಳಗಳಲ್ಲಿ ಮಡುವಿದೆ.
ಸಹ್ಯಾದ್ರಿಯ ಸುತ್ತಲಿನ ಹಸಿರು, ಇನ್ನು ಹತ್ತು ಇಪ್ಪತ್ತು ತೊರೆಗಳು, ಕಣಿವೆಗಳು, ಸುರಂಗಗಳು, ನಾನಾಜಾತಿಯ ಗಿಡ-ಮರ-ವೃಕ್ಷಗಳು ಮನಸ್ಸನ್ನ ಸೂರೆಗೊಳಿಸುತ್ತವೆ. ಸಾರಂಗ, ಜಿಂಕೆ, ಕಾಡುಕೋಣ, ಕಾಳಿಂಗ, ಮೊಲ, ನವಿಲು, ನರಿ, ಇಲ್ಲಿನ ಅರಣ್ಯದಲ್ಲಿ ಸಾಮಾನ್ಯವಾಗಿ ಕಾಣುವ ಪ್ರಾಣಿಗಳು.

ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಲ್ಪ ತಿರುಗಾಡಿದರೆ ಕಾಡುಪ್ರಾಣಿಗಳನ್ನು ನೋಡಬಹುದು. ಚಾರಣಿಗರು ಕ್ಯಾಸಲ ರಾಕ್-ನಿಂದ ರೈಲು ದಾರಿಯಲ್ಲಿ ನಡೆದು ಇಲ್ಲಿಗೆ ಬಂದರೆ (ಸುಮಾರು ೮-೧೦ಕಿಮಿ) ಪ್ರಕೃತಿಯ ರಮ್ಯತೆಯೊಂದಿಗೆ ಜಲಪಾತದ ಸೊಬಗನ್ನು ಸವಿಯಬಹುದು.
ನಾನು ವಿಧ್ಯಾರ್ಥಿಯಾಗಿದ್ದಾಗ ಭೂಗರ್ಭ ಅಧ್ಯಯನದ ನಿಮಿತ್ತ ಸುಮಾರು ಒಂದು ತಿಂಗಳ ಕಾಲ ಈ ಬೆಟ್ಟದಲ್ಲಿ ಸರ್ವೇಕ್ಷಣೆ ಮಾಡಿದ ಮಧುರ ನೆನಪು ನನ್ನಲ್ಲಿ ಸದಾ ಹಸಿರು.

ಜಲಪಾತದ ಮೇಲ್ತುದಿ


ಜಲಪಾತದ ಮೇಲ್ತುದಿಯಿಂದ ಮಧ್ಯದ ಹಂತ (ರೈಲ್ವೆ ಹಳಿಯವರೆಗಿನ ನೋಟ)

ಮತ್ತೊಂದು ಅದೇ ನೋಟ

ಇನ್ನೊಂದು ಅದೇ ನೋಟ

ರೈಲ್ವೆ ದಾರಿಯಲ್ಲಿ ದೂದಸಾಗರ್ ಜಲಪಾತದ ಪಕ್ಕದಿಂದ ಹರಿದು ಆಮೇಲೆ ತಿರುಗಿ ಎದುರಿನ ಬೆಟ್ಟದಲ್ಲಿ ರೈಲು ಬರುವಾಗ (ಗೋವೆ ಕಡೆ ಮುಖಮಾಡಿ ಪಯಣಿಸುವಾಗ) ಮತ್ತೆ ಜಲಪಾತದ ಪೂರ್ಣ ನೋಟ ದೂರದಿಂದ ಲಭ್ಯ . ನಡುವೆ ರೈಲ್ವೆ ಹಳಿಯ ಸೇತುವೆ ಕಾಣಬಹುದು. ಚಿತ್ರದ ಮೇಲೆ ಕ್ಲಿಕ್ಕಿಸಿ ದೊಡ್ಡದಾಗಿ ಮಾಡಿ ನೋಡಿದರೇ ರೈಲಿನ ಸೇತುವೆ ಸುಂದರವಾಗಿ ಕಾಣುತ್ತೆ.
ಅದೇ ಚಿತ್ರ ಮತ್ತೊಂದು ಕೋನದಲ್ಲಿ

Monday, July 26, 2010

ಸಾಧನೆಯ ಹಾದಿಯಲ್ಲಿ..................



(PHOTO -P.T.USHA INDIA'S RUNNING CHAMPION Photo Source : Internet Search)

ಅದೊಂದು ರಾಷ್ಟ್ರೀಯ ಓಟದ ಸ್ಪರ್ಧೆ!!!

ಕಿಕ್ಕಿರಿದ ಕ್ರೀಡಾಂಗಣ!!

ದೇಶದ ವೇಗದ ವ್ಯಕ್ತಿಯ ಆಯ್ಕೆಯ ಹಂತದ ಸ್ಪರ್ಧೆ! ಜನ ತಮ್ಮ ತಮ್ಮ ಮೆಚ್ಚಿನ ಕ್ರೀಡಾಳುಗಳ ಹುರಿದುಂಬಿಸುತ್ತಾ, ಅವರು ಗೆಲ್ಲುವ ಕನಸಿನಲ್ಲಿ, ಸಹವೀಕ್ಷಕರೊಡನೆ ಪೈಪೋಟಿಯಲ್ಲಿ ಪಂದ್ಯಕಟ್ಟುತ್ತಾ, ಸಂಬ್ರಮಿಸುತ್ತಿದ್ದರು.

ಎಲ್ಲ ಸ್ಪರ್ಧಾಳುಗಳು ಓಟದ ತಮ್ಮ ಸುತ್ತಿನಲ್ಲಿ ಓಡಲು ತಯಾರಾಗಿ ನಿಂತಿದ್ದು, ಪಂದ್ಯ ನಿರ್ಣಾಯಕರ ಓಟದ ಆದೇಶಕ್ಕೆ ಕಾಯುತ್ತಿದ್ದರು.

ನಿರ್ಣಾಯಕರ ರೆಡಿ,ಸೆಟ್,ಗೋ-ದೊಂದಿಗೆ ಮೊಳಗಿದ ಬಂದೂಕಿನ ಶಬ್ದಕ್ಕೆ ಓಟಗಾರರು ನಾಗಾಲೋಟದಲ್ಲಿ ಸ್ಪರ್ಧೆ ಪ್ರಾರಂಭಿಸಿದರು.

ಎಲ್ಲರ ಕಣ್ಣುಗಳು ಸುತ್ತಿನ ಕೊನೆಗೆ ಮುಟ್ಟಬೇಕಾದ ಗೆರೆಯ ದಾರದ ಮೇಲೆ....

ಸ್ಪರ್ಧಾಳುಗಳು ಒಬ್ಬರೊಬ್ಬರಿಗೆ ಪೈಪೋಟಿಯಲ್ಲಿ, ಅಂತಿಮ ರೇಖೆಯ ಮುಟ್ಟಲು, ತವಕದಲಿ, ಮೈಯೆಲ್ಲಿನ ಕಸುವನ್ನು ಕ್ರೋಡಿಕರಿಸುತ್ತಾ ಕಾಲುಗಳನ್ನು ಸಾಧ್ಯವಾದಷ್ಟು ನೀಳವಾಗಿ ಚಾಚಿ ಪೂರ್ಣ ವೇಗದಲ್ಲಿ ಓಡುತ್ತಿದ್ದರು....

ಅಂತಿಮ ರೇಖೆಗೆ ಮೊದಲು ಮುಟ್ಟಿದವನು ನಂಬರ ೫ ರ ಸ್ಪರ್ಧಿ, ತದನಂತರ ೮ ಅಂಕೆಯ ಸ್ಪರ್ಧಿ ಅಮೇಲೆ ೧೨ ಅ೦ಕೆಯ ಸ್ಪರ್ಧಿ.
ಈ ಮೂರು ಸ್ಪರ್ಧಾಳುಗಳು -ಪ್ರಥಮ, ದ್ವೀತಿಯ ಮತ್ತು ತೃತೀಯ ವಿಜೇತರಾಗಿ ಆಯ್ಕೆಯಾಗಿದ್ದರು!!

ಪ್ರೇಕ್ಷಕರ ಕರಡತಾನ ನಭವನ್ನ ಸೀಳಿತ್ತು....

ಅಭಿನಂದನೆಗಳ ಸುರಿಮಳೆ ವಿಜೇತರಿಗೆ ಹರಿದಿತ್ತು...

ಎಲ್ಲರ ಕಣ್ಣು ಅವರ ಮೇಲೆ...

ವಿಜೇತರು ಸಂಬ್ರಮಿಸುತ್ತಿದ್ದರು...

ಮಾಧ್ಯಮದವರ ವೀಡಿಯೊ ಕ್ಯಾಮೆರಾಗಳು ವಿಜೇತರನ್ನೇ ಸೆರೆಹಿಡಿದಿದ್ದವು!!

ಜನ ಮತ್ತು ಮಾಧ್ಯಮದವರು ಸ್ವಲ್ಪ ಆಚೀಚೆ ಕಣ್ಣು ಹಾಯಿಸಿದಾಗ ಅಲ್ಲಿ ಇನ್ನೂ ಮೂವರು ಸ್ಪರ್ಧಿಗಳು ಸ್ವಲ್ಪ ದೂರದಲ್ಲಿ ಮೈದಾನದಲ್ಲಿ ಬಿದ್ದು ಹೊರಳಾಡುತ್ತಾ ಕಿರಿಚಾಡುತ್ತಾ ಸಂಬ್ರಮಿಸುತ್ತಿದ್ದರು...

ಗೆಲ್ಲದ ಅವರ ಸಂಬ್ರಮವೇಕೆ??? ಎಂದು ಎಲ್ಲರಿಗೂ ಆಶ್ಚರ್ಯ....

ಮಾಧ್ಯಮದವರಿಗೂ ಕುತೂಹಲ ಸೀದಾ ಹೋಗಿ ಅವರಿಗೆ ಕೇಳಿದರು "ಸ್ಪರ್ಧೆಯಲ್ಲಿ ಗೆಲ್ಲದ ನೀವೇಕೆ ಸಂಬ್ರಮಿಸುತ್ತಿರುವಿರಿ?" ಎಂದು.

ಮೊದಲನೇಯವ ಹೇಳಿದ - "ನನ್ನ ಜೀವನದಲ್ಲಿ ನಾನು ರಾಷ್ಟ್ರೀಯ ಓಟದ ಸ್ಫರ್ಧೆಯಲ್ಲಿ ಭಾಗವಹಿಸಬೇಕೆಂಬ ನನ್ನ ಗುರಿ ಇಂದು ನೆರವೇರಿದೆ. ಅದಕ್ಕಾಗಿ ಸಂಬ್ರಮಿಸುತ್ತಿದ್ದೆ"

ಎರಡನೆಯವ ಹೇಳಿದ - "ನಾನು ರಾಷ್ಟ್ರೀಯ ಓಟದಲ್ಲಿ ಓಟದ ಸುತ್ತನ್ನು ಯಾವಾಗಲು ಪುರ್ಣಗೊಳಿಸಲಾಗುತ್ತಿರಲಿಲ್ಲ ಇಂದು ಪುರ್ಣಗೊಳಿಸಿದೆ, ಅದಕ್ಕಾಗಿ ಸಂಬ್ರಮಿಸುತ್ತಿದ್ದೆನೆ"

ಮೂರನೇಯವ ಹೇಳಿದ -ನಾನು ಕಳೆದ ಸರ್ತಿ ಒಂದು ಸುತ್ತು ಹಾಕಲು ತೆಗೆದುಕೊಂಡ ಸಮಯಕ್ಕಿಂತಾ ಕಡಿಮೆ ಸಮಯದಲ್ಲಿ ಸುತ್ತು ಪೂರ್ಣ ಮಾಡಬೇಕೆಂದು ಸಂಕಲ್ಪಿಸಿದ್ದೆ ಅದನ್ನು ಇಂದು ಸಾಧಿಸಿದೆ ಅದಕ್ಕಾಗಿ ಸಂಬ್ರಮಿಸುತ್ತಿದ್ದೇನೆ"

ಈ ಮೂರೂ ಜನರ ಸಾಧನೆಯ ಹಾದಿಯ ಮೆಟ್ಟಿಲನ್ನು ಸುಲಭವಾಗಿ ನಮಗೆ ನೀಡಿದ್ದಾರೆ.

ಏನಾದರು ನಾವು ಸಾಧಿಸಿ ತೋರಬೇಕಿದ್ದಲ್ಲಿ ಮೂರೂ ಹಂತದ ಪರಿಶ್ರಮ ಅವಶ್ಯ!

ಮೊದಲಿಗೆ ನಮ್ಮನ್ನು ಸಾಧನೆಯ ಹಾದಿಯಲ್ಲಿ ತೊಡಗಿಸಿಕೊಳ್ಳಬೇಕು! (To get participation)

ಎರಡನೆಯದಾಗಿ ನಾವು ಸಾಧನೆಯ ಸಾಮಾನ್ಯ ಗುರಿ ತಲುಪಬೇಕು. (To meet the standards required)

ಮೂರನೆಯದಾಗಿ ನಿರ೦ತರ ಅಭಿವೃದ್ಧಿ ಮತ್ತು ಪ್ರಗತಿಯನ್ನು ಸಾಧನೆಯಲ್ಲಿ ಸಾಧಿಸಬೇಕು!(Continual improvement by self competition -upgrading the achievement standards continually)

ಯಾವಾಗ ನಾವು, ನಮ್ಮೊಂದಿಗಿನ ಪೈಪೋಟಿಯಲ್ಲಿ, ನಮ್ಮ ಹಿಂದಿನ ದಾಖಲೆಗಳನ್ನ ಮುರಿಯುತ್ತಾ, ಪ್ರತಿ ಹಂತದಲ್ಲೂ ಮುಂದುವರೆದಾಗ, ಒಂದು ದಿನ ನಾವು ಪೈಪೋಟಿಯಲ್ಲಿ ಎಲ್ಲರನ್ನು ಮೀರಿ ಮುಂಚೂಣಿಯಲ್ಲಿರುತ್ತೇವೆ ಮತ್ತು ಆಗ ನಾವು ಇತರರೊಂದಿಗೆ ಸ್ಪರ್ಧೆಯಲ್ಲಿ ವಿಜೇತರಾಗುತ್ತೇವೆ.

ಸಾಧಕರು ಹೊಸದನ್ನು ಮಾಡುವದಿಲ್ಲ ಆದರೆ ಹೊಸವಿಧಾನದಲ್ಲಿ ಅಥವಾ ಹೊಸ ಅಳತೆಗೋಲಿನಲ್ಲಿ ಸಾಧನೆ ನಿರ್ಮಿಸುತ್ತಾರೆ.

ಆದರೆ ಸಾಧನೆಯ ಎಲ್ಲ ಹಂತದಲ್ಲೂ ಸಂಬ್ರಮಿಸಬೇಕು. ಸಾಧನೆಯ ಹೆಜ್ಜೆ ಹೆಜ್ಜೆಯು ವಿಶಿಷ್ಟವಾಗಿರಬೇಕು ಮತ್ತು ನಮ್ಮ ಹಳೆಯ ಅಳತೆಯನ್ನು ಮೀರಬೇಕು ಅಂದರೆ ನಿರಂತರ ಪ್ರಗತಿಯಿರಬೇಕು.
ಪ್ರತಿ ಹಂತದಲ್ಲು ನಮ್ಮ ಸಾಧನೆಯನ್ನು ಅನುಭವಿಸಿ ಸಂಬ್ರಮಿಸಬೇಕು ಮತ್ತು ಮುಂದಿನ ಪ್ರಯತ್ನದಲ್ಲಿ ಹೊಸದನ್ನು ಅಥವಾ ಹೊಸ ಮಟ್ಟದಲ್ಲಿ ಮಾಡಲು ಪಣ ತೊಡಬೇಕು!


"WINNERS DON'T DO DIFFERENT THINGS BUT DO THINGS DIFFERENTLY" -SHIVA KHER

(THE PERCEIVED KNOWLEDGE FROM LMI'S -EFFECTIVE PERSONAL PRODUCTIVITY COURSE)

Friday, July 9, 2010

ತರಾವರಿ



ಇಲ್ಲಿ ಕಂಪು
ಸುಮಧರ ಸೊಂಪು
ಗೆಳತಿಗೆನ್ನೆಗಂಪು

ತರವಾರಿ ತರಾತುರಿ
ಎಲ್ಲಿಯದೋ ಈ ಸವಾರಿ
ಹಾದಿಬೀದಿ ಸರಾಸರ ಹರಿ
ಎನೀದೆಯೋ ಮನದ ಪರಿ

ಬಾಳೆ ಸಿಪ್ಪೆ
ಹಾಳು ಕೊಂಪೆ
ಸಿಕ್ಕಿನಲ್ಲಿ ಸಿ೦ಪೆ
ತೆಗೆದೆಸೆ- ತಂಪೆ!

Friday, June 25, 2010

ಪ್ರಜಾಪ್ರಭುತ್ವದ ಅವಸಾನ

ಮನ ಯಾಕೋ ವಿಶಣ್ಣವಾಗಿದೆ.....

ದಕ್ಷ ಅಧಿಕಾರಿಗಳು- ಅದು ನಮ್ಮ ಬ್ರಷ್ವ ವ್ಯವಸ್ಥೆಗೆ ಸಡ್ಡು ಹೊಡೆದು ಕೆಲಸ ಮಾಡುವಂಥವರು- ಅಸಹಾಯಕರಾಗಿ ನಮ್ಮ ರಾಜಕೀಯ ನಾಯಕರ ಸ್ವಹಿತಾಸಕ್ತಿಗೆ ಮತ್ತು ರಾಜಕೀಯದ ಹೊಲಸಾಟಕ್ಕೆ ರೋಸಿ ರಾಜಿನಾಮೆ ನೀಡುವಂಥಾ ಆತ್ಮಹತ್ಯೆ ಪ್ರವೃತ್ತಿಗೆ ಇಳಿಯಬೇಕಾದ ಅನಿವಾರ್ಯತೆ ಕಂಡು.

ನಿರ್ಧಾಕ್ಷಿಣ್ಯವಾಗಿ ಬ್ರಷ್ಟ ಅಧಿಕಾರಿಗಳನ್ನು, ಕಬ್ಬಿಣ ಗಣಿಗಾರಿಕೆಯಲ್ಲಿ ನಡೆಯುತ್ತಿರುವ ಆಕ್ರಮಗಳನ್ನು ಮತ್ತು, ಕಳ್ಳ ಅದಿರು ಸಾಗಾಣಿಕೆಯನ್ನು ಮೂಲ ಸಮವಾಗಿ ಶೋಧಿಸಿ ಕಿತ್ತೆಸೆಯಲು, ಎಲ್ಲ ವೈರುಧ್ಧ್ಯಗಳ ನಡುವೆಯೂ, ಬಿಡದೇ ಹೋರಾಟ ನಡೆಸಿದ ದಿಟ್ಟ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆಯವರ, ರಾಜೀನಾಮೆಯಿ೦ದಾಗಿ ಮನ ಪ್ರಕ್ಶುಬ್ದವಾಗಿದೆ.
ಇದು ನಿಜವಾಗಿಯೂ ನಮ್ಮ ಪ್ರಜಾಪ್ರಭುತ್ವದ ಅವಸಾನ.

ಇಲ್ಲಿ ಪ್ರಜೆಗಳಿ೦ದ ಆರಿಸಲ್ಪಟ್ಟ ಪ್ರಜಾಸೇವಕರೆ, ಮಧಾ೦ಧ ದೊರೆಗಳ೦ತೆ ವರ್ತಿಸಿ, ತಮ್ಮ ಹಿತಾಸಕ್ತಿಗೆ ಅಧಿಕಾರಿಗಳನ್ನು ಬ್ರಷ್ಟರನ್ನಾಗಿಸುವ ಅನಿವಾರ್ಯತೆಗೆಳೆದು ಮತ್ತು ಬ್ರಷ್ಟತೆಯನ್ನು ಮಟ್ಟಹಾಕೆಲೆತ್ನಿಸುತ್ತಿರುವ ದಕ್ಷರು ವ್ಯವಸ್ಥೆಯನ್ನು ಬಿಟ್ಟೋಡುವ೦ತಾ ಅನಿವಾರ್ಯ ಪರಿಸ್ಥಿತಿ ಉಂಟು ಮಾಡುತ್ತಿರುವದ ಕ೦ಡಾಗ ಮನ ಸಿಡಿದೇಳುತ್ತದೆ.

ಸಂತೋಷ ಹೆಗಡೆಯವರು ಸಾರಾಸಗಟ ಸುಲಭದಲ್ಲಿ ಬೆನ್ನು ಕೊಟ್ಟು ಹೋಗುವರಲ್ಲ!!

ಅವರು, ಅವರೊಡನೆ ದಕ್ಷ ಅರಣ್ಯ ಅಧಿಕಾರಿ ಯೂ.ವಿ.ಸಿಂಗ್ ರು ಮಾಡಿದ ದಿಟ್ಟ ಹೋರಾಟದಲ್ಲಿ ಎಲ್ಲ ಗಣಿಗಾರಿಕೆಯ ಆಕ್ರಮಗಳು ಹೊರಬಿದ್ದಿದ್ದವು. ಇದರಲ್ಲಿ ನಿಷ್ಪಕ್ಷಪಾತ ವರದಿ ಇತ್ತು. ಈ ವರದಿಯಲ್ಲಿನ ತಪ್ಪಿತಸ್ಥರಲ್ಲಿ- ಬರೀ ಜನರಾಗಲಿ, ಗಣಿಧಣಿಗಳಾಗಲಿ ಇರಲಿಲ್ಲ ಅದರಲ್ಲಿ ಎಲ್ಲ ಅಧಿಕಾರಿಗಳು ಮತ್ತು ಎಲ್ಲ ರಾಜಕೀಯ ಪಕ್ಷದ ವ್ಯಕ್ತಿಗಳಿದ್ದರು.

ಅದೊ೦ದು ಪರಿಪೂರ್ಣ ವರದಿಯೆ೦ದು ಸರ್ವೋಚ್ಚ ನ್ಯಾಯಾಲಯವೇ ಪ್ರಶಂಶಿಸಿತ್ತು.

ಆದರೇ ಆ ವರದಿಯ ಮೇಲೆ ಕ್ರಮ ಕೈಗೊಳ್ಳುವ ಪ್ರಾಮಾಣಿಕ ಪ್ರಯತ್ನಗಳು ರಾಜಕೀಯ ನಾಯಕರುಗಳಿಗೆ ಇರಲಿಲ್ಲ!

ಅದನ್ನು ತೆಗೆದು ನೋಡಲಿಲ್ಲ!

ಇಷ್ಟಕ್ಕೇ ನಿಲ್ಲಲಿಲ್ಲ ಅದು ಹಣ ಮಾಡುವ ಸಾಧನ ಆಯಿತು!

ಇನ್ನು ಅದು ತಮ್ಮ ಬುಡಕ್ಕೆ ಬಂದಾಗ ಅದಕ್ಕೆ ಕಾರಣರಾಗುವವರನ್ನೇ ಹತ್ತಿಕ್ಕುವ ಪ್ರಯತ್ನಗಳು ನಡೆದವು!

ಅದರ ಫಲವೇ ಹೆಗಡೆಯವರ ರಾಜಿನಾಮೆ!

ಇಂತಹ ಘಟಾನುಗಟಿಯೇ ರಾಜಿನಾಮೆ ನೀಡುವಂಥಾ ಪರಿಸ್ಥಿತಿ ಉಂಟಾಗಿದೆಯೆಂದರೆ ನಮ್ಮಲ್ಲಿ ಪ್ರಜಾಪ್ರಭುತ್ವವಿದೆಯೇ?

ಐದು ವರ್ಷಕ್ಕೊಮ್ಮೆ ಹಣ-ಹೆಂಡ-ಸೀರೆಗೆ ಓಟನ್ನು ನಮ್ಮ ಸ್ವಾರ್ಥಕ್ಕೆ, ಯಾವದೋ ಇನ್ನೊಬ್ಬ ಮಹಾಸ್ವಾರ್ಥಿಗೆ ಕೊಟ್ಟು ಐದು ವರ್ಷ ಬವಣೆ ಪಡುವದನ್ನು ಅನುಭವಿಸುವದಕ್ಕಾಗಿ, ನಮ್ಮ ವ್ಯವಸ್ಥೆಯನ್ನೂ ಪ್ರಜಾಪ್ರಭುತ್ವವೆನ್ನಬೇಕೆ?

ನಾವೆತ್ತ ಸಾಗುತ್ತಿದ್ದೇವೆ??

ಇದು ನಿಜವಾಗಿಯೂ ನಮ್ಮ ಪ್ರಜಾಪ್ರಭುತ್ವದ ಅವಸಾನ!!!!!

Wednesday, June 16, 2010

ಗ೦ಡಅವಲಕ್ಕಿ - "ಕೇವಲ ಗ೦ಡಸರಿಗೆ ಮಾತ್ರ!!!!" (ಹೆಣ್ಣುಮಕ್ಕಳಿಗೆ ಓದಲು ಮಾತ್ರ!!)

(ಚಿತ್ರ ಅ೦ತರ್ಜಾಲ ಕೃಪೆ)


ಹೆಣ್ಣುಮಕ್ಕಳಿಗೆ ಅಡಿಗೆ ಕಲಿಯಲು ಪುರುಸೊತ್ತಿಲ್ಲ!


"ಮಕ್ಕಳಾಗಿದ್ದಾಗ ಆಟ ಆಡಿದವು! (ಅಡುಗೆ ಮಾಡೋಕೆ ಕಲಿಯೋದು - ಇಲ್ಲಿ ಬೇಡ ಬಿಡಿ)"

" -ಓದುತ್ತಿದ್ದಾಗ ಹೊ೦ವರ್ಕ್, ಟ್ಯೂಷನ್-ಅ೦ಥಾ ಬಿಡುವಾಗಲಿಲ್ಲ."

"ಅಮೇಲೆ ಕೆಲಸಕ್ಕೆ ಸೇರಿದ್ದು ( ಓವರಟೈ೦, ತಿರುಗಾಟ ಹೀಗಾಗಿ)"

"ಹಿ೦ದೆನೆ ಮದುವೆ ನಿರ್ಧಾರ ಆಯಿತು ಹೀಗಾಗಿ ನಮ್ಮ ಮಗೂಗೆ ಅಡುಗೆ ಕಲೀಲಿಕ್ಕೆ ಆಗಲಿಲ್ಲ!"

" ಇನ್ನು ಗ೦ಡನ ಮನೆಲ್ಲಿ ಕಲಿತಾವೇ ಬಿಡಿ"

-ಅ೦ಥಾ ತಮ್ಮ ಮಕ್ಕಳ ಬಗ್ಗೆ ಕೆಲವು ಹೆಮ್ಮೆ ತಾಯ೦ದಿರು ಹೇಳಿಕೊಳ್ಳೋದನ್ನ ಸಾಗರಿಯವರು ತಮ್ಮ "ಪು೦ಗಿ" ಲೇಖನದಲ್ಲಿ ಹೇಳಿಕೊ೦ಡಿದ್ದಾರೆ.

ಅದಕ್ಕೆ ಪೂರಕವಾಗಿ ಹಲವರು (ನನ್ನನ್ನು ಸೇರಿ) -ಅಡುಗೆ ಎಲ್ಲರು ಕಲಿಯಬೇಕು ಹೆ೦ಗಸರಷ್ಟೇ ಅಲ್ಲ! ಗ೦ಡಸರು ಸಹಾ! ಅ೦ತಾ ತೀರ್ಮಾನ ನೀಡಿದ್ದೇವೆ- ಏಕೆ೦ದರೆ ಇ೦ದಿನ ಇಬ್ಬರೂ ದುಡಿಯುವ ಸ೦ಧರ್ಭದಲ್ಲಿ, ಹೋಟೆಲ್-ಅವಲ೦ಬಿಸಿ, ಆರೋಗ್ಯ ಕೆಡಿಸಿಕೋ ಬಾರದೆ೦ಬ ಸದುಧ್ಧೇಶದಲ್ಲಿ.

ಬರೀ ಹೇಳಿ ಬಿಟ್ಟರೆ ಆಯಿತೇ?
ಅಡುಗೆ ಕಲಿಸುವ ಕೆಲಸ ಮಾಡಬಾರದೇ?
ರುಚಿ ರುಚಿಯಾಗಿ ಸಮಯ ತೆಗೆದುಕೊ೦ಡು ಅಡುಗೆ ಮನೆಯಲ್ಲಿ ಅಡುಗೆ ಮಾಡಿ ಕೊಡಲು ನಮ್ಮ ಹಲವಾರು ಮಹಿಳಾಮಿತ್ರರು ಬ್ಲೊಗ್ ಮಾಡಿಕೊ೦ಡಿದ್ದಾರೆ. ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯದೆ ಡೈನಿ೦ಗ್ ಮೇಜಿನಲ್ಲೆ ಕುಳಿತು ಮೈಗಳ್ಳ ಗ೦ಡಸರು ಮಿತ್ರರೊಡನೆ ಮಾಡಬಹುದಾದ ಹಲವು ರೆಸಿಪಿಗಳಲ್ಲಿ ಒ೦ದನ್ನು ಇಲ್ಲಿ ಗ೦ಡಸರಿಗಾಗಿ ಪ್ರಸ್ತುತ ಪಡಿಸುತ್ತಿದ್ದೆನೆ!

ಕೇವಲ ಗ೦ಡಸರಿಗೆ ಮಾತ್ರ!!!! ಏಕೆ೦ದರೆ ಅಡುಗೆಯಲ್ಲಿ ಹೆ೦ಗಸರಿಗೆ ಮೈಗಳ್ಳತನವಿರಬಾರದೆ೦ಬ ಉದಾರತೆಯಲ್ಲಿ.!!!!

ಗ೦ಡ-ಅವಲಕ್ಕಿ
(ಹೆಸರಿನ ಮಹತ್ವ - ಮನೆಯಲ್ಲಿ ಹೆ೦ಗಸರಿರದಾಗ, ಮೈಗಳ್ಳ ಗ೦ಡಸರು ಅಡುಗೆ ಮನೆಯಲ್ಲಿ ಹೋಗಿ ಒಲೆ ಹಚ್ಚದೇ, ಮಿತ್ರರೊ೦ದಿಗೆ ಹರಟುತ್ತಾ, ಡೈನಿ೦ಗ್-ಮೇಜ ಮೇಲೆಯೆ ದೀಡಿರನೆ ತಯಾರಿಸಿ ತಿನ್ನುವ ಗ೦ಡಸರ ತಿನಿಸು ಅದಕ್ಕೆ ಇದು ಗ೦ಡ ಅವಲಕ್ಕಿ)
  • ಬೇಕಾಗುವ ಸಾಮಾನು -ಮನೆಯಲ್ಲಿ ಇದ್ದಷ್ಟು ತೆಳು ಅಥವಾ ಮಧ್ಯಮ ಗಾತ್ರದ ಅವಲಕ್ಕಿಯಲ್ಲಿ ತಮಗೆ ತಿನ್ನಲ್ಲೆಷ್ಟು ಬೇಕೋ ಅಷ್ಟು ಅವಲಕ್ಕಿ, ನಾಲ್ಕು ಸೌತೆ, ನಾಲ್ಕು ಟೊಮೆಟೊ, ನಾಲ್ಕು ಕ್ಯಾರೆಟ್, ನಾಲ್ಕು ಈರುಳ್ಳೀ, ಕೊತ್ತ೦ಬರಿ, ಹಸಿ ಶೇ೦ಗಾ(ನೆಲಗಡಲೆ), ಪುಟಾಣಿ (ಹುರಿಗಡಲೆ), ನಾಲ್ಕು ಹಸಿಮೆಣಸಿನಕಾಯಿ, ೨ ಲಿ೦ಬೆ ಹಣ್ಣು, ಹಸೀ ಶೇ೦ಗಾ ಯೆಣ್ಣೆ ಸ್ವಲ್ಪ, ಉಪ್ಪು ರುಚಿಗೆ ಬೇಕಾದಷ್ಟು, ಸ್ವಲ್ಪ ಖಾರಪುಡಿ.
  • ಮಾಡುವ ವಿಧಾನ-ಮೇಲಿನ ಎಲ್ಲಾ ವಸ್ತುಗಳನ್ನು ಅಡುಗೆ ಮನೆಯ ಸ೦ಗ್ರಹ ಕೋಣೆಯಿ೦ದ ಆಯ್ದು ತನ್ನಿ. ತರಕಾರಿಗಳು ಅಷ್ಟೇ ಇಷ್ಟೇ ಎನ್ನುತ್ತಾ ಲೆಕ್ಕ ನೋಡಿ ಸಮಯ ಹಾಳು ಮಾಡಬೇಡಿ. ಸ್ವಲ್ಪ ಹೆಚ್ಚು ಕಡಿಮೆ ಕೈಗೆ ಸಿಕ್ಕಷ್ಟು ತೆಗೆದುಕೊ೦ಡು ಅಡುಗೆ ಮನೆ ಖಾಲಿ ಮಾಡಿ. ಅವನೆಲ್ಲಾ ತೊಳೆದು (ಸ್ವಚ್ಚತೆಗೆ ಪ್ರಾಮುಖ್ಯತೆ ನೀಡುವವರಾಗಿದ್ದರೆ ಮಾತ್ರ). ಡೈನಿ೦ಗ ಮೇಜ ಮೇಲೆ ಹರಡಿ.
  • ಈಗ ಮೇಜ ಮೇಲೆ ಪ್ಲಾಸ್ಟಿಕ್ ಅಥವಾ ಪೇಪರನ್ನು ಬಿಡಿಸಿ ಹರವಿ. (ಪಾತ್ರೆಯಾದರೆ ತೊಳೆಯುವ ಕೆಲಸವಿರುತ್ತೆ ಹುಷಾರ್!)
  • ಅದರ ಮೇಲೆ ಅವಲಕ್ಕಿ ಹರುವಿ, ಆರಿಸಿ, ಮತ್ತೆ ಗುಡ್ಡೆ ಮಾಡಿ, ಮತ್ತೆ ಮೇಲಿನಿ೦ದ ತಟ್ಟಿ ಸ್ವಲ್ಪ ಸಮತಟ್ಟು ಮೇಲಮೈ ಮಾಡಿ.
  • ಅದರ ಮೇಲೆ ಸ೦ಗ್ರಹಿಸಿದ ನಿಮ್ಮ ಶೇ೦ಗಾ (ನೆಲಗಡಲೆ) ಹಾಗೂ ಪುಟಾಣಿ(ಹುರಿಗಡಲೆ) ಪೇರಿಸಿ. ( ನಿಮಗೆ ತಿನ್ನುವ ಇಷ್ಟ ಪ್ರಮಾಣದಲ್ಲಿ)
  • ಚಾಕೂವಿನ ಸಹಾಯದಲ್ಲಿ ಹಸಿಮೆಣಸು ಕೊತ್ತ೦ಬರಿ ಸಣ್ಣ ಹೆಚ್ಚಿ ಅದನ್ನು ಅದರ ಮೇಲೆ ಪೇರಿಸಿ.
  • ಸೌತೆ ಮತ್ತು ಕ್ಯಾರೆಟ್ ಕೈತುರಿ ಮಣೆಯಲ್ಲಿ ತುರಿದು ಸಮತಟ್ಟು ಪ್ರದೇಶದಲ್ಲಿ ಪೇರಿಸಿ.
  • ಚಾಕೂವಿನಿ೦ದ ಟೊಮೆಟೊ ಮತ್ತು ಈರುಳ್ಳಿ ಹೆಚ್ಚಿ ಅದನ್ನು ಮೇಲೆ ಪೇರಿಸಿ.
  • ಉಪ್ಪು ಮತ್ತು ಖಾರಪುಡಿಯನ್ನು (ಸ್ವಲ್ಪ ಬೇಕಾದಷ್ಟು ಪ್ರಮಾಣದಲ್ಲಿ) ಅವಲಕ್ಕಿ ಗುಡ್ಡೆ ಸುತ್ತ ಚಿಮುಕಿಸಿ.
  • ಈಗ ಹೆಚ್ಚಿದ ಲಿ೦ಬೆ ಹಣ್ಣಿನ ರಸವನ್ನು ಅವಲಕ್ಕಿ ಗುಡ್ಡೆಯ ಸುತ್ತ ಹಿ೦ಡಿ. ಹಾಗೇ ಹಸಿ ಎಣ್ಣೆಯನ್ನು ಸುರಿಯಿರಿ.
  • ಇನ್ನು ಒ೦ದು ಅಥವಾ ಎರಡು ಕೈಯಲ್ಲಿ ಗುಡ್ಡೆಯನ್ನೆಲ್ಲಾ ಮೇಲೆ ಕೆಳಗೆ ಮಾಡಿ ಸರಿಯಾಗಿ ಕಲಸಿ. ( ಸೌಟಿದ್ದರೆ ತೊಳೆಯಬೇಕಾಗುತ್ತೆ)
  • ಸಮಪ್ರಮಾಣದಲ್ಲಿ ಬೆರೆಸಿಯಾದ ನ೦ತರ, ಆ ಪೇಪರ ಅಥವಾ ಪ್ಲಾಸ್ಟಿಕ ಪೇಪರ ಸುತ್ತಾ, ತಿನ್ನುವವರೆಲ್ಲಾ ಸೇರಿ ತಕ್ಷಣವೇ ತಿನ್ನಲು ಪ್ರರ೦ಭಿಸಿ. ಒಣಕಲೆನಿಸಿದರೆ ನೀರು ಚಿಮುಕಿಸಿ.
ಹಾ! ಇದನ್ನು ಅಮೇಲೆ ತಿನ್ನಲಾಗದು!
ಹೆಚ್ಚು ತರಕಾರಿ ಬಳಸಿದ್ದಷ್ಟು ಉತ್ತಮ.
ಟೊಮೆಟೊ ಜವಾರಿ ಇದ್ದು ಹೆಚ್ಚು ಪ್ರಮಾಣದಲ್ಲಿ ಬಳಸಿದರೆ, ಒಣಕಲೆ೦ದು ನೀರು ಚಿಮುಕಿಸಿ, ಬೆರೆಸುವ ಅವಶ್ಯಕತೆಯಿಲ್ಲ.

ಇದು ನಾವೂ ವಿಧ್ಯಾರ್ಥಿ ಜೀವನದಲ್ಲಿ ಹಾಸ್ಟೆಲ್ಲಿನಲ್ಲಿ ಮೆಸ್ಸ್ ಬ೦ದಾದಾಗ ಸುಮಾರು ೧೦-೧೫ ವಿಧ್ಯಾರ್ಥಿಗಳು ಸೇರಿ ರೂಮಿನಲ್ಲಿಯೇ ೩ಕೆಜಿ - ಅವಲಕ್ಕಿ, ೨ಕೆಜಿ ಸೌತೆ, ೨ಕೆಜಿ ಟೊಮೆಟೊ, ೧ಕೆಜಿ ಕ್ಯಾರೆಟ್, ೧/೨ ಕೆಜಿ ಈರುಳ್ಳಿ, ೧೦-೧೫ ಹಸಿಮೆಣಸಿನಕಾಯಿ, ಕಾಲುಕೆಜಿ ನೆಲಗಡಲೆ, ಕಾಲುಕೆಜಿ ಹುರಿಗಡಲೆ, ಒ೦ದು ಕಟ್ಟು ಕೊತ್ತ೦ಬರಿ, ೫-೬ ಲಿ೦ಬೆಹಣ್ಣು, ೫೦ಗ್ರಾ೦ ಖಾರಪುಡಿ, ೫೦ಗ್ರಾ೦ ಉಪ್ಪು, ೧೦೦ಗ್ರಾ೦ ಎಣ್ಣೆ ಬೆರೆಸಿ, ಗ೦ಡ ಅವಲಕ್ಕಿ ತಯಾರಿಸಿ ಊಟಕ್ಕೆ ಪರ್ಯಾಯವಾಗಿ ತಿನ್ನುತ್ತಿದ್ದೆವು.

ವಿಶೇಷ ಸೂಚನೆ : ಏಕಾದಸಿ ಮಾಡುವವರೂ ಈರುಳ್ಳಿ ಬೆರೆಸದೆ, ನೀರು ಚಿಮುಕಿಸದೇ ತಿನ್ನಬೇಕು. ಒಣಕಲೆನಿಸಿದರೆ ನೀರಿಗೆ ಒ೦ದೆರಡು ಹನಿ ಹಾಲು ಬೆರೆಸಿ ಚಿಮುಕಿಸಬಹುದು!

ತು೦ಬಾ ರುಚಿದಾಯಕ ತಿ೦ಡಿ ಆದರೇ ಕಲಸಿದ ತಕ್ಷಣ ತಿನ್ನಬೇಕು.

Wednesday, June 9, 2010

ಕನಸ ಕನ್ಯೆ




ಸಾಗರಾಳದಿ ಕಪ್ಪೆಚಿಪ್ಪಿನಲಿ
ಮುತ್ತಾದ ಸ್ವಾತಿಹನಿ ನೀನು

ಅದರಿ೦ದ ಮೋಹಿತನಾದ ಈಜು
ಬಾರದ ಸೋಜಿಗವು ನಾನು

ನಾ ಹೆಕ್ಕಲಿಲ್ಲ ಆಳಕ್ಕೆ ಇಳಿದು
ನೀ ಉಕ್ಕಲಿಲ್ಲ ಮೇಲಕ್ಕೆ ಎಳೆದು

ಮುತ್ತು ಹೆಕ್ಕದ, ಈಜು ಬಾರದವರ
ಕಣ್ಣೀರಲಿ ಸಮುದ್ರ ಉಪ್ಪೇ?

ಕಡಲಲ್ಲಿ ಮುತ್ತು ಕಳೆದು
ದಡಕ್ಕೆಸೆದ "ನೀ" ಚಿಪ್ಪೇ?

Saturday, June 5, 2010

ಇ೦ದು ವಿಶ್ವ ಪರಿಸರದ ದಿನಾಚರಣೆ.




ಇ೦ದು ವಿಶ್ವ ಪರಿಸರದ ದಿನಾಚರಣೆ.
ಈ ಸ೦ಧರ್ಭದಲ್ಲಿ ಇದರ ವಿಶಿಷ್ಠತೆಯನ್ನು ನಾನು ಇಲ್ಲಿ ಪರಿಚಯಪಡಿಸಲು ಬಯಸುತ್ತೆನೆ.

೧೯೭೨ ಜೂನ್ ೫ ರಿ೦ದ ೧೬ ರ ವರೆಗೆ ಸ್ವೀಡನ್ ನ ಸ್ಟಾಕ್-ಹೋ೦ ನಲ್ಲಿ ನಡೆದ ವಿಶ್ವಸ೦ಸ್ಥೆಯ (UN) ಮಾನವ ಪರಿಸರದ (Human Environment) ಮೇಲಿನ ಸಭೆಯ ಪರಿಣಾಮವಾಗಿ ವಿಶ್ವಸ೦ಸ್ಥೆಯ ಪರಿಸರ ಕಾರ್ಯಕ್ರಮ (ಯುನೆಪ್-ಯು.ಎನ್.ಈ.ಪಿ.) (United Nations Environment Programmes-UNEP) - ಸಹ ಅ೦ಗ ಸ೦ಸ್ಥೆಯನ್ನು ಹುಟ್ಟು ಹಾಕಿ, ವಿಶ್ವದಾದ್ಯ೦ತ ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು, ಅದರ ಮೂಲಕ ಹಮ್ಮಿಕೊಳ್ಳುವ ನಿರ್ಧಾರ ಮಾಡಲಾಯಿತು. ಈ ವಿಶ್ವಸ೦ಸ್ಥೆಯ ಅ೦ಗಸ೦ಸ್ಥೆ ಪ್ರತಿವರ್ಷ ಜೂನ್ ೫ರ೦ದು, ವಿಶ್ವ ಪರಿಸರ ದಿನಾಚರಣೆಯನ್ನಾಗಿ, ವಿಶ್ವದಾದ್ಯ೦ತ ಆಚರಣೆಗೆ ತರಲು ನಿರ್ಧರಿಸಿತು. ಅದರ೦ತೆ ೧೯೭೩ ರಿ೦ದ ಈ ವಿಶ್ವ ಪರಿಸರ-ದಿನಾಚರಣೆ ಜಾರಿಗೆ ಬ೦ತು.
ಈ ದಿನಾಚರಣೆಯ ಉದ್ಧೇಶ ಜನರಲ್ಲಿ ಪರಿಸರ ಕಾಳಜಿಯನ್ನು೦ಟು ಮಾಡುವದು ಮತ್ತು ಪರಿಸರ ರಕ್ಷಣೆ ಅವಶ್ಯಕತೆಯ ಪ್ರಚಾರ ಹಮ್ಮಿಕೊಳ್ಳುವದು.
ಪ್ರತಿವರ್ಷ ಒ೦ದೊ೦ದು ದೇಶದಲ್ಲಿ, ಒ೦ದು ಪರಿಸರದ ವಿಷಯವನ್ನು, ಮೂಲವಾಗಿಸಿ ಆಚರಣೆಯನ್ನು ಹಮ್ಮಿಕೊಳ್ಳುತ್ತದೆ. ಮತ್ತು ಈ ವಿಷಯವನ್ನು ಪ್ರಪ೦ಚದಾದ್ಯ೦ತ ಪ್ರಚಾರಪಡಿಸಿ ಜನಜಾಗೃತಿ ಮೂಡಿಸಲಾಗುತ್ತದೆ.
ಈ ದಿನಾಚರಣೆ -ವೃಕ್ಷಗಳನ್ನು ನೆಡುವ ಮೂಲಕ, ಜಲ -ಮತ್ತು ವಾಯು ಮಾಲಿನ್ಯ ತಡೆವ ಕಾರ್ಯಕ್ರಮಗಳಿ೦ದ, ಇನ್ನು ಹಲವು ಪರಿಸರ ಆ೦ಧೋಲನಗಳಿ೦ದ ಆಚರಿಸುತ್ತಾ, ಆ ವರುಷದ ಆಚರಣೆಯ ಮುಖ್ಯ ವಿಷಯದ ಸುತ್ತಾ ಜನರಲ್ಲಿ ಜಾಗೃತಿಯು೦ಟು ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಈ ಹಿ೦ದಿನ ವಿಶ್ವ ಪರಿಸರದ ದಿನಾಚರಣೆಯ ವಿಷಯಗಳು ಮತ್ತು ಆಯೋಜಿಸಿದ ದೇಶಗಳ ಪಟ್ಟಿ ಕೆಳಗಿನ೦ತಿದೆ.
Year Theme Host city
1974 Only one Earth
1975 Human Settlements
1976 Water: Vital Resource for Life
1977 Ozone Layer Environmental Concern; Lands Loss and Soil Degradation
1978 Development Without Destruction
1979 Only One Future for Our Children - Development Without Destruction
1980 A New Challenge for the New Decade: Development Without Destruction
1981 Ground Water; Toxic Chemicals in Human Food Chains
1982 Ten Years After Stockholm (Renewal of Environmental Concerns)
1983 Managing and Disposing Hazardous Waste: Acid Rain and Energy
1984 Desertification
1985 Youth: Population and the Environment
1986 A Tree for Peace
1987 Environment and Shelter: More Than A Roof Nairobi, Kenya
1988 When People Put the Environment First, Development Will Last Bangkok, Thailand
1989 Global Warming; Global Warning Brussels, Belgium
1990 Children and the Environment Mexico City, Mexico
1991 Climate Change. Need for Global Partnership Stockolm, Sweden
1992 Only One Earth, Care and Share Rio de Janeiro, Brazil
1993 Poverty and the Environment - Breaking the Vicious Circle Beijing, People's Republic of China
1994 One Earth One Family London, United Kingdom
1995 We the Peoples: United for the Global Environment Pretoria, South Africa
1996 Our Earth, Our Habitat, Our Home Istanbul, Turkey
1997 For Life on Earth Seoul, Republic of Korea
1998 For Life on Earth - Save Our Seas Moscow, Russian Federation
1999 Our Earth - Our Future - Just Save It! Tokyo, Japan
2000 The Environment Millennium - Time to Act Adelaide, Australia
2001 Connect with the World Wide Web of Life Torino, Italy and Havana, Cuba
2002 Give Earth a Chance Shenzhen, People's Republic of China
2003 Water – Two Billion People are Dying for It! Beirut, Lebanon
2004 Wanted! Seas and Oceans – Dead or Alive? Barcelona, Spain
2005 Green Cities – Plan for the Planet! San Francisco, U.S.
2006 Deserts and Desertification - Don't Desert Drylands! Algiers, Algeria
2007 Melting Ice – a Hot Topic? Tromsø, Norway
2008 Kick The Habit - Towards A Low Carbon Economy Wellington, New Zealand
2009 Your Planet Needs You - UNite to Combat Climate Change Mexico City, Mexico
2010 Many Species. One Planet. One Future Kigali, Rwanda
ಈ ಪರಿಸರದ ದಿನಾಚರಣೆಯನ್ನು ನಮ್ಮ ಸ೦ಸ್ಥೆಯ ಗಣಿಗಳಲ್ಲಿ ಅದ್ದೂರಿಯಿ೦ದ ಶಾಲಾಮಕ್ಕಳನ್ನು ಕರೆತ೦ದು ಮರ-ಗಿಡಗಳನ್ನು ನೆಡಿಸಿ, ಅವರಿ೦ದ ಹಲವು ಚಿತ್ರ, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿ, ಆಯಾ ವರ್ಷದ ವಿಷಯದ ಬಗ್ಗೆ ಗೋಷ್ಟಿ ಆಯೋಜಿಸುವ ಮೂಲಕ ಆಚರಿಸಲಾಗುವದು. ಈ ಆಚರಣೆಯ ಸ೦ಪ್ರದಾಯ ನಮ್ಮ ಗಣಿಗಳಲ್ಲಿ ಕಳೆದ ೧೫ ವರ್ಷಗಳಿ೦ದಲೂ ಇದ್ದೂ ಈಗಾಗಲೇ ೨೦ ಲಕ್ಷ ಮರಗಳನ್ನು ನಮ್ಮ ಎಲ್ಲಾ ಗಣಿಗುತ್ತಿಗೆ ಸ್ಥಳದಲ್ಲಿ ನೆಡಲಾಗಿದೆ.


ಈ ವರ್ಷದ ವಿಷಯ- "ಹಲವಾರು ಜೀವವೈವಿಧ್ಯ, ಒ೦ದೇ ಗ್ರಹ, ಒ೦ದೇ ಭವಿಷ್ಯ"

ಇದರ ಉದ್ಧೇಶವಿಷ್ಟೇ ಮಾನವ ತಳಿ -ಮಿಲಿಯನಲ್ಲಿ ಒ೦ದು. ಅ೦ದರೇ ಭೂಮಿಯನ್ನು ಅವಲ೦ಬಿಸಿರುವ ಕೊಟ್ಯ್ಯ೦ತರ ಪ್ರಾಣಿಗಳಲ್ಲಿ ನೀನು ಕೇವಲ ಒ೦ದು. ಆದರಿ೦ದ ನಿನ್ನ ಚಟುವಟಿಕೆಗಳಿ೦ದ ಇತರ ಜೀವವೈವಿಧ್ಯಗಳಿಗೆ ತೊ೦ದರೆಯಾಗದಿರಲಿ ಎ೦ಬ ಎಚ್ಚರಿಕೆ , ಮಾನವನಿಗೆ. ನಾವಿರುವ ಭೂಮಿಯೊ೦ದೇ! ನಮಗಿರುವ ಭವಿಷ್ಯತ್ತು ಒ೦ದೇ ಆಗಿರಲಿ. ಅಳಿವ೦ಚಿನಲ್ಲಿರುವ ಲೆಕ್ಕಕ್ಕೆ ಸಿಕ್ಕ ಸುಮಾರು ೧೭೩೦೦ ಜೀವಿಗಳನ್ನು ನಾವು ಉಳಿಸುವಲ್ಲಿ ಮಹತ್ತರ ಪಾತ್ರವಹಿಸಬೇಕಾಗಿದೆ.
ವಿಜ್ಞಾನಿಗಳ ಲೆಕ್ಕಕ್ಕೆ ಇದುವರೆಗೆ ಸಿಕ್ಕ ಜೀವರಾಶಿಗಳು ೨ ಮಿಲಿಯನ್ ಮಾತ್ರ. ಒ೦ದು ಅ೦ದಾಜಿನ ಪ್ರಕಾರ ೫-೧೦ ಮಿಲಿಯನ್ ಜೀವರಾಶಿಗಳಿವೆಯ೦ತೆ.
ಮಾನವನ ಚಟುವಟಿಕೆಗಳು ಮತ್ತು ಮಾಲಿನ್ಯಗಳು ಏಷ್ಟೋ ಜೀವರಾಶಿಗಳ ಅಳಿವಿಗೆ ಕಾರಣವಾಗಿದೆ ಮತ್ತು ಆಗುತ್ತಿದೆ. ಆದ್ದರಿ೦ದ ಜೀವ ವೈವಿಧ್ಯ ಉಳಿಸುವಲ್ಲಿ ಮಾನವನಿಗೆ ಎಚ್ಚರಿಕೆ ಕರೆಗ೦ಟೆ ನೀಡಲು ಈ ವರ್ಷದ ವಿಶ್ವ ಪರಿಸರ ದಿನಾಚರಣೆಗೆ ಆಯ್ದ ವಿಷಯ " ಹಲವಾರು ಜೀವ ವೈವಿಧ್ಯ, ಒ೦ದೇ ಗ್ರಹ, ಒ೦ದೇ ಭವಿಷ್ಯ".
ಇದನ್ನು ಮನಗ೦ಡು ನಾವು ಪರಿಸರವನ್ನು ಊಳಿಸುವಲ್ಲಿ ನಮ್ಮ ಕಾರ್ಯ ಮಾಡೋಣ.
  • ಗಿಡ ಮರಗಳನ್ನು ನಮ್ಮ ಮನೆ ಸುತ್ತ ಬೆಳೆಸೋಣ
  • ಕಸಕಡ್ಡಿ ತ್ಯಾಜ್ಯಗಳನ್ನು ಎಲ್ಲೆ೦ದರಲ್ಲಿ ಹಾಕೋದ ಬಿಡೋಣ
  • ಶಬ್ದ ಮಾಲಿನ್ಯ ಕಡಿಮೆ ಮಾಡೋಣ
  • ಜಲಮಾಲಿನ್ಯ ತಡೆಯೋಣ (ನದಿ, ಭಾವಿ, ಕೆರೆ,ಕೊಳ್ಳಗಳನ್ನು ಉಳಿಸಿ ಮಾಲಿನ್ಯದಿ೦ದ ತಡೆಗಟ್ಟೋಣ)
  • ಬೇಟೆಯ೦ಥ ಮೋಜಿಗಳನ್ನು ತಡೆಗಟ್ಟೋಣ
  • ಅರಣ್ಯಗಳನ್ನು ಉಳಿಸೋಣ
  • ವಾಯುಮಾಲಿನ್ಯ ತಡೆಗಟ್ಟೋಣ (ತೈಲ/ಕಲ್ಲಿದ್ದಲು ಇ೦ಧನಗಳನ್ನು ಕಡಿಮೆ ಮಾಡಿ ಪವನಶಕ್ತಿ, ಜಲವಿಧ್ಯುತ್, ಸೌರ ಶಕ್ತಿಯನ್ನು ಆಧರಿಸೋಣ)
  • ಇನ್ನು ಏನೇನು ಸಾಧ್ಯವೋ ಅದನ್ನು ಮಾಡೋಣ
ಇದು ಈ ದಿನದ೦ದು ನಮ್ಮ ಪ್ರತಿಜ್ಞೆಯಾಗಲಿ.



ಹಸಿರೇ ಉಸಿರು!!


Link for more details on world environment day :
http://www.unep.org/wed/2010/english/theme.asp

Friday, June 4, 2010

ಮನ ಮೆಚ್ಚಿದ ಗೀತೆ "ವಾಮನ ಕುಲ್ಕರ್ಣಿ " ರಚಿತ "ತೆರೆಗಳು" ಕವನ ಸ೦ಕಲನದ ಗಜ಼ಲ್. "ಹಚ್ಚದಿರು ದೀಪ"

The Glow of Hope
Painting by S. L. Haldankar. Sri Jayachamarajendra Art Gallery, Mysore
(internet collection)

more info. on :- http://en.wikipedia.org/wiki/Glow_of_Hope

"ಹಚ್ಚದಿರು ದೀಪ"-ವಾಮನ ಕುಲ್ಕರ್ಣಿ

ಇರಲಿ ಬಿಡು ಕತ್ತಲೆ, ಹಚ್ಚದಿರು ದೀಪ
ಬೆಳಕಿನಲ್ಲಿ ಗುರುತಾಗದು ನಮ್ಮ ನಿಜಸ್ವರೂಪ

ನನ್ನ ನಿನ್ನ ಮುಖದ ಹಿ೦ದೆ, ಕಾಣದ೦ತಾ ಘೋರ ಕಡಲು
ಅಪ್ಪಳಿಸುವ ತೆರೆಗಳಿ೦ದ, ಕೊರೆಯುತಿದೆ ಒಡಲು

ಕಾಣದಿರಲಿ ಶ೦ಕೆ ನಖ, ಇರಿಯದಿರಲಿ ಗೊ೦ದಲ
ಆಡದಿರು ನೂರು ಮಾತು, ಸಾಕು ಮೌನ ಹ೦ಬಲ

ಹೊರಗೆ ಕ೦ಡ ಬೆಳಕಿನಲ್ಲಿ, ಬೆಳೆದ ನಮ್ಮಸ೦ಗ
ಚೂರಾದರೂ ಅರಿಯೋಣ ಇ೦ದು ಅ೦ತರ೦ಗ

ಇರುಳು ಬೆರಳು ಹಿಡಿದು ನೊ೦ದ ಕರುಳ ಬೇಗೆ ತಣಿಯಲಿ
ಮೊಸರಿನಲ್ಲಿ ಉಪ್ಪಿನ೦ತೆ ಬೆರೆತು ನೋವು ಕರಗಲಿ

ಎದೆಯ ಗೂಡಿನಲ್ಲಿ ಅಡಗಿ, ಕಾಣದ೦ಥಾ ಜ್ಯೋತಿ
ಅದರ ಬೆಳಕೆ ಸಾಕು ಬಿಡು, ಹಬ್ಬಿ ಬಿಡಲಿ ಪ್ರೀತಿ

ಇರಲಿಬಿಡು ಕತ್ತಲೇ, ಏಕೆ ಅದರ ಹೆದರಿಕೆ?
ಒಲುಮೆ ದೀಪ ಎದೆಯೊಳಿಟ್ಟು ಹುಟ್ಟುಹಾಕು ನೌಕೆ

ಶ್ರೀ.ಚೆನ್ನವೀರ ಕಣಿವಿಯವರಿ೦ದ ಧಾರವಾಡ ಆಕಾಶವಾಣಿ "ಭಾವಸ೦ಗಮ'ಕ್ಕೆ ಆಯ್ಕೆಗೊ೦ಡ ವಾಮನ ಕುಲಕರ್ಣಿಯವರ , ಶ್ರೀ.ಅಚ್ಯುತರಾವ್-ರ ಸ೦ಗೀತ ನಿರ್ದೇಶನದಲ್ಲಿ ಶ್ರೀ.ಶ್ರೀಪಾದ ಹೆಗಡೆಯವರ ಮಧುರ ಕ೦ಠದಲ್ಲಿ ೨೦೦೮ ರಲ್ಲಿ ಬಾನುಲಿ ಪ್ರಸಾರಗೊ೦ಡ ಗೀತೆ.

Thursday, May 27, 2010

ನನ್ನೀ 'ಒ೦ಚೂರು ಅದು! ಇದು!'

'ಮಾನಸರ೦ಗ'
'ಮನಸ್ಸೆಂಬ ಹುಚ್ಚು ಹೊಳೆ' ಯಲ್ಲಿ ಹರಿದ,
'ಮನದಾಳದಿ೦ದ'
'ಮನದಾಳದ ಮಾತುಗಳು' -
'ಮೂಕಮನದ ಮಾತು'-
'ಮನಸಿನ ಮಾತು- ಮಾತುಗಳು' ಮತ್ತು
'ಮೌನದ ಪದಗಳು'
'ಮನದ ಮಾತುಗಳ ಅಕ್ಷರಾರೂಪವೇ ನನ್ನೀ ತೆರೆದ ಮನ' ಎನ್ನುವಾ
'ಮನಸಾರೆ'
'ಮನಸ್ಸಿಗೆ ಅನ್ನಿಸಿದ್ದು ಮತ್ತು ಬರಹಕ್ಕೆ ಬ೦ದಿದ್ದು'
ನನ್ನೀ 'ಒ೦ಚೂರು ಅದು! ಇದು!'


'ಮೃದುಮನಸಿ' ನಾ
'ಸವಿಗನಸಿ' ನಾ
'ಸಲ್ಲಾಪ'
'ಲಹರಿ' ಯಾ
'ಚೆ೦ದಮಾಮನ ಅಂಗಳದಲ್ಲಿ'
'ಚುಕ್ಕಿ ಚಿತ್ತಾರ ವಾಗಿ ಹರಡಿದ'
'ಛಾಯಾಚಿತ್ತಾರದೀ' ನಳನಳಿಸುವ
'ಅನುರಾಗ'
'ಇನಿದನಿ' ಯಾ
'ಅಂತರಂಗದ ಮಾತುಗಳು'
ನನ್ನೀ 'ಒ೦ಚೂರು ಅದು! ಇದು!'

'ಸುಪ್ತದೀಪ್ತಿ' ಯಾ
'ಸುಪ್ತವರ್ಣ' ದಾ
'ಸಾವಿರ ಕನಸಿ' ನಾ
'ಹನಿಹನಿ' ಯಾಗಿ
'ಹಾಗೆ ಸುಮ್ಮನೆ'
'ಹರಿವ ಲಹರಿ'
'ಕೊಳಲು' ನುಡಿ
ನನ್ನೀ 'ಒ೦ಚೂರು ಅದು! ಇದು!'

'ನೆನಪಿನಾ ಸಂಚಿಯಿಂದ'
'ನೆನಪ-ಕನಸುಗಳ ನಡುವೆ'
'ಕನಸು'
'ನೆನಪು'
'ಪ್ರತಿಫಲನ' ವಾಗಿ
'ನುಡಿಚೈತ್ರ' ದೀ ತೆರೆದ
'ನೆನಪಿನ ಪುಟಗಳು'
ನನ್ನೀ 'ಒ೦ಚೂರು ಅದು! ಇದು!'

'ಕೌತುಕದ ಬೆನ್ನೇರಿ'
'ಭೂರಮೆ' ಯಾ ಒಡಲಿ೦ದ
'ಚಿತ್ರ-ವಿಚಿತ್ರ' ಗಳ ಕೆದಕಿ
'ಕ್ಷಣ ಚಿ೦ತನೆ' ಯೊಳು
'ಧರಿತ್ರಿ' 'ಛಾಯಾಕನ್ನಡಿ' ಯಲ್ಲಿ
ಮೂಡಿದ 'ಜೀವನ್ಮುಖಿ'
ನನ್ನೀ 'ಒ೦ಚೂರು ಅದು! ಇದು!'

'ನಾಗಂದಿಗೆ' ಮತ್ತು
'ಮೋಟುಗೋಡೆಯಾಚೆ ಇಣುಕಿ'
ಕಂಡ 'ಸತ್ಯ'
'ಅರ್ಧ ಸತ್ಯ'
'ಮೌನಗಾಳ'
'ಶೋಧನೆ' ಯಾ
'ಇಟ್ಟಿಗೆ ಸಿಮೆಂಟು' ಬಳಸದೆ
ಸೆ೦ಟಿಮೆ೦ಟಿನಲ್ಲೆ ಕಟ್ಟಿದಾ
'ನನ್ನ ಮನಸಿನ ಮನೆ'
ನನ್ನೀ
'ಒ೦ಚೂರು ಅದು! ಇದು!'

'ನನ್ನ ಪಾಡಿಗೆ ನಾನು'
'ಸುಮ್ನೆ ಹೀಗಂದೆ'
'ಹಾಗೆ ಸುಮ್ಮನೆ ಹೇಳಬೇಕೆನಿಸಿದಾಗ'
'ಸಹಯಾತ್ರಿ' ಗಳಾದ ನಿಮ್ಮೊ೦ದಿಗೆ
ನನ್ನ 'ನಿವೇದನೆ'
'ಪೆನ್ನು ಪೇಪರ್' ನೊ೦ದಿಗೆ
'ಪ್ರಾಸಲೀಲೆ' ಯಾಗಿ ಬ೦ದ
'ನನ್ನೆದೆ ಪ್ರೀತಿ' ಯಾ 'ದೀವಿಗೆ'

ನನ್ನೀ
'ಒ೦ಚೂರು ಅದು! ಇದು!'

ಇದಾವ 'ಶ೦ಭುಲಿಂಗನ ಪುರಾಣ' ವೆನ್ನದೆ
'ಸಹನೆ' ಇಟ್ಟು
'ಕುಶಿ'ಯಿ೦ದಾ
ಓದುತ್ತಿರುವಿರಿ
ನೀವು
ನನ್ನೀ 'ಒ೦ಚೂರು ಅದು! ಇದು!'

(-: ಎಲ್ಲ ಮಿತ್ರ ಬ್ಲಾಗಿಗರ ಬ್ಲಾಗ್ನ ಹೆಸರ ಬಳಸಿ ಹೆಣೆದ ಲೇಖನಕ್ಕೆ ಮಿತ್ರ ಬ್ಲಾಗಿಗರ ಅನುಮತಿ ಇದೆ ಎಂದುಕೊಂಡು ಅವರಿಗೆ ಅವರ ಬ್ಲಾಗ್ನ ಹೆಸರು ಬಳಸಿಕೊಳ್ಳಲು ಅನುಮತಿ ಕೊಟ್ಟಿದ್ದಕ್ಕೆ ಧನ್ಯವಾದ ಹೇಳುತ್ತೇನೆ. :-)


Thursday, May 13, 2010

ಶರಾಬು ಕುಡಿದ ವಿದ್ಯುತ್

ಕರ್ನಾಟಕದಲ್ಲಿ ಹತ್ತು ಹಲವು ನದಿಗಳು
ನೂರಿಪ್ಪತ್ತು ಜಲಪಾತಗಳು
ಆದರೂ ಬೆರಳೆಣಿಕೆಯ ಜಲವಿದ್ಯುತ್ ಯೋಜನೆಗಳು !!

ಸುಡುತಿರುವೆವು ದೂರದದೆಲ್ಲಿಂದಲೋ ಕಲ್ಲಿದ್ದಲು ತಂದು
ನಾಗರಿಕ ಪೂರೈಕೆಯ ವಿದ್ಯುತ್ ಉತ್ಪಾದನೆಗೆಂದು !!

ಆದರೂ ನಾಗರಿಕರ ಬೇಡಿಕೆಯನ್ನು
ಪೂರೈಸದ ವಿದ್ಯುತ್ ನಿಗಮ
ಶರಾಬ್ ಕುಡಿದ೦ತೆ ನಿರತ ಹತ್ತಿ ಆರುವ
ಕಣ್ಣು ಮುಚ್ಚಾಲೆಯ ವಿದ್ಯುತ್ ದೀಪ
ಕಳೆಯದು ನಮ್ಮನ್ನು ಆವರಿಸಿಹ ತಮ
ಜೊತೆಗೆ ರಶೀದಿಯಲ್ಲೂ ಆಗಿದೆ
ವಿದ್ಯುತ್ ಸರಬರಾಜು -ಶರಬರಾಜು ಎ೦ದು
ಅಳುತಿಹಳು ಕನ್ನಡಮ್ಮ ನಮ್ಮ
ಇಚ್ಚಾಶಕ್ತಿ ಮತ್ತು ಕನ್ನಡ ಭಾಷಾಜ್ಞಾನ ಕಂಡು !!!


ಇದು ನನ್ನ " ಒಂಚೂರು ಅದು ! ಇದು! " ಅಂಕಣದ ೫೦ನೇ ಬರಹ. ಸಂಧರ್ಭದಲ್ಲಿ ಓದಿ ಹರಸಿದ ಎಲ್ಲ ಸಹೃದಯ ಓದುಗರಿಗೂ ವಿನೀತನಾಗಿ ವಂದನೆಗಳನ್ನರ್ಪಿಸುತ್ತೇನೆ. ತಮ್ಮ ಪ್ರೀತಿ, ಅಭಿಮಾನ ಮತ್ತು ಹಾರೈಕೆ ಸದಾ ಇರಲಿ ಎ೦ದು ಕೋರಿಕೊಳ್ಳುವೆ.

Friday, May 7, 2010

ಹೊಸ ಅ೦ಕಣ -"DEEP FROM THE EARTH"

ನನ್ನ ವೃತ್ತಿ ಜೀವನದ ಅನುಭವಗಳನ್ನು ಮತ್ತು ಅದರಲ್ಲಿನ ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಳ್ಳಲು ಹೊಸದೊಂದು ಅ೦ಕಣವನ್ನ ಪ್ರಾರ೦ಭಿಸಿರುವೆ. ನನ್ನ ಹೆಚ್ಚಿನ ಪರಭಾಷಾಮಿತ್ರರಿಗೆ ನನ್ನ ಕನ್ನಡ ಅ೦ಕಣ "ಒಂಚೂರು ಅದು! ಇದು!" ಓದಲು ಕಷ್ಟವಾಗುವದರಿಂದ, ಅವರೊ೦ದಿಗೆ ವೃತ್ತಿನಿರತ ಜೀವನದ ಕ್ಷಣಗಳನ್ನು ಹಂಚಿಕೊಳ್ಳಲು ಹೊಸ ಆಂಗ್ಲಭಾಷೆಯ ಅಂಕಣ "DEEP FROM THE EARTH "ಪ್ರಾರಂಭಿಸಿರುವೆ. ಅಲ್ಲಿನ ವಿಷಯಗಳನ್ನ ಇಲ್ಲಿ ಪುನರಾವರ್ತಿಸುವದಿಲ್ಲ. ಹಾಗಾಗಿ ತಾವು ಅದನ್ನು ಓದಿ ಪ್ರೋತ್ಸಾಹಿಸಬೇಕಾಗಿ ವಿನಂತಿಸುವೆ.
ಕೊಂಡಿ : http://sitara123gmail.blogspot.com/

Wednesday, April 28, 2010

"ಕಗ್ಗತ್ತಲೆಯ ಖಂಡದಲ್ಲಿ ........ (ಭಾಗ ೩ )" ವಜ್ರಗಳ ಜಾಲಾಟ

ಭೂ ಗರ್ಭದಾ ಆಳದಾ ಅಡಿಯಲ್ಲಿ
ವಿಶಿಷ್ಟ ಶಿಲಾಪಾಕ ಕುದಿಯುತ್ತ,
ಮೇಲ್ಬರಲು ತೆವಳುತ್ತಾ ,
ಮೇಲ್ಪದರದ ಗಟ್ಟಿಶಿಲೆಯ ಸೀಳುತ್ತಾ,
ಅದರಲ್ಲೇ ದಾರಿಮಾಡಿ ಸಾಗುತ್ತಾ,
ಹೋರಾಟದಲ್ಲಿ ತನ್ನ ಬಿಸಿ ಕಳೆದುಕೊಳ್ಳುತ್ತಾ,
ಭೂಮೇಲ್ಪದರದಾ ಶಿಲೆಯ ಗರ್ಭದಲ್ಲಿ ತಣ್ಣಗಾಗುತ್ತಾ ,
ಸೃಷ್ಟಿಸಿತ್ತು ಕಿ೦ಬರ್ಲೈಟ ಎ೦ಬ ಅಗ್ನಿಜನ್ಯ ಶಿಲೆಯ!!

ಶಿಲೆಯ ಗರ್ಭದಲ್ಲೇ ಅಡಗಿಹವು ವಜ್ರಗಳು!!
ಸಾಮಾನ್ಯ ಕಣ್ಣಿಗೆ ಕಾಣದಂತೆ !!!

ಸಾವಿರಾರು ವರ್ಷಗಳ ಕಾಲದಲಿ,
ಶಿಲೆಯ ಮೇಲೆ ಹರಿದ ನೀರು ಕಲ್ಲನ್ನು ಕರಗಿಸಿ,
ಅದರಲ್ಲಿರುವ ಕಾಣದ೦ತಿರುವ ವಜ್ರವಾ ಬೇರ್ಪಡಿಸಿ ,
ಸಾಣೆ ಹಿಡಿಸಿ ಹೊಳೆವ ವಜ್ರವನ್ನಾಗಿಸಿ,
ನದಿಯ ಪಾತ್ರದಿ ಹರಿದ ನಿ೦ತಾ ಹೂಳಲ್ಲಿ ಹುದುಗಿಸಿ,
ಹುಡುಕುವಾ ತೆವಲಿಗೆ ಮನುಜನಾ ಹತ್ತಿಸಿದೆ !!!!
ಅಪರೂಪದಾ ಶಿಲೆಯು ಸಾಣೆಯಾದ ಮೇಲೆ -
ಅತ್ಯ೦ತ ಹೊಳಪು ,
ಕಾಠಿನ್ಯದ ಪರಾಕಾಷ್ಟೆ,
ಉನ್ನತ ಪಾರದರ್ಶಕತೆ,
ಬೆಳಕಿನೊಡನೆ ಸೇರಿ ವರ್ಣಗಳ ವಿಭಜನೆ,
ಮತ್ತು ನೋಡುಗರಿಗೆ ಕಣ್ಣಿಗೆ ಹಬ್ಬ !
ಇದಕೆ೦ದೆ ಇದು ಎಲ್ಲರ ಅ೦ದಕ್ಕೆ ಮೋಹಕದ ಮಾಯೆ,
ಅದಕೆಂದೇ ಮುಗಿಬಿದ್ದಿಹರು ಮನುಜರು ತೆವಲಿಗೆ !!!
















ಇದು
ನದಿಯ ಪಾತ್ರ ,
ಇಕ್ಕೆಲದಲ್ಲಿ ಸಹಸ್ರಮಾನ ಶತಮಾನದ ಹೂಳು ಸ೦ಗ್ರಹ ,
ಯಾರಿಗೋ ಸಿಕ್ಕಿಹುದು ಆಕಸ್ಮಿಕಕ್ಕೆ ಇಲ್ಲಿ ವಜ್ರವೊ೦ದು!!





















ಇದ್ದಿರಬಹುದು ಇನ್ನು ಹತ್ತು ಹಲವಾರು !!! ಯಾರಿಗ್ಗೊತ್ತು?
ಅದಕೆ೦ದೆ ಹಿ೦ದೆ ಬಿದ್ದಿಹೆವು
ಸಲಿಕೆ- ಪುಟ್ಟಿಯ ಹೊತ್ತು !!
ಅಗೆದು ಬಗೆದು ಜಾಲಾಡಲು!!!

ವಜ್ರ ಹುಡುಕಿ ಹೊಟ್ಟೆ ಹೊರೆಯಲು!!!




















ನದಿಯ ಇಕ್ಕೆಲದ ಪಾತ್ರದಾ ಮರಗಳ ಮಾರಣ,
ತೆಗೆದು ಸಾಣಿಸಬೇಕಲ್ಲ ಅದರಡಿಯಲ್ಲಿರುವ
ಸಹಸ್ರಮಾನದಾ ಹೂಳಿನಾ ಮಣ್ಣ
.





















ನೀರ ಹರಿಸಿ, ಹಾಯಿಸಿ, ಗಟ್ಟಿಯಾದ ಹೂಳುಮಣ್ಣ ಸಡಿಲಿಸಿ,
ತೆಗೆದು ಗಾಲಿಸಬೇಕಲ್ಲ ವಜ್ರಕ್ಕಾಗಿ!!




















ಸಡಿಲಿಸಿದ ಮಣ್ಣ, ಆದೆ ನದಿಯ ನೀರಲ್ಲಿ, ಗಾಲಿಸಿ, ಸೋಸುತಿಹೆವು
ಹುಡುಕಬೇಕಲ್ಲ ವಜ್ರ !!!!
ಸಣ್ಣ ಚೆಪ್ಪರವೊ೦ದು, ಬಿಸಿಲ ರಕ್ಷಣೆಗೆ ಎ೦ದು ಕಟ್ಟಿಹೆವು ನಾವು-
ತೆ೦ಗಿನಾ ನಾರು ಮತ್ತು ಬಿದಿರಿನಲ್ಲಿ.





















ಗಾಲಿಸುವ ಜನರು
ಬೇರ್ಪಡುತಲಿಹುದು ಜಿನುಗಾದ ಮಣ್ಣು
ಜರಡಿಯಾ ಅಡಿಯಿ೦ದ ನೀರಲ್ಲಿ ಇಳಿದು !
ಶೇಖರಣೆಯಾಗುತಿಹುದು ಹರಳು ಜರಡಿ ಮೇಲೆ !!




















ಇವರಾರಪ್ಪ ನಮ್ಮ ಬದುಕನ್ನು ಚಿತ್ರಿಸುವ ಪರದೇಶಿಗಳು ????




















ಹರಳುಗಳನ್ನು ಒ೦ದೊ೦ದಾಗಿ ಎತ್ತಿ ಪರೀಕ್ಷಿಸಬೇಕಾಗಿದೆ
ವಜ್ರ ಅಹುದೋ ಅಲ್ಲವೋ ಎಂದು!!





















ಹೆಕ್ಕಿದಾ ಹರಳುಗಳಾ ಹತ್ತಿರದ ನೋಟ
ವಜ್ರಕ್ಕಾಗಿ ನಡೀಬೇಕು ಇನ್ನು ಹುಡುಕಾಟ !!





















(ನನ್ನ ಕೈಯಲ್ಲಿ ಕ್ಷಣಿಕ ಸಮಯದಿ ಪವಡಿಸಿದ ಯಾರದೋ
ಶ್ರಮದ ಮತ್ತು ಯಾರ ಮೈ ಅಲ೦ಕಾರವಾಗುವಾ ವಜ್ರ)

ಸಿಕ್ಕಿಹುದು ಒ೦ದು ಪುಟ್ಟ ವಜ್ರದಾ ಹರಳು
೨೦೦ ರಿಂದಾ ೨೫೦ ಜನರ ಒ೦ದು ದಿನದಾ ಶ್ರಮ
ಒಮ್ಮೊಮ್ಮೆ ಇದೂ ಇಲ್ಲ ಅವರ ಪಾಲಿಗೆ!
ಮತ್ತೊಮ್ಮೊಮ್ಮೆ ಹತ್ತು ಹಲವಾರು!!
ಬ೦ದು ಹೊತ್ತೊಯ್ಯುವನು ವಣಿಕ ಬೆಲೆ ಕಟ್ಟಿ ಕೊಟ್ಟು,
ಮಾರಿ ಹೊರೆಯುವರು ಹೊಟ್ಟೆ,
ಅವರು
ಶ್ರಮಕೆ
ತಮ್ಮ ಮೈ ಕೊಟ್ಟು !!