Monday, October 26, 2009

ಮಾಗೋಡು ಜಲಪಾತ-ಮಲೆನಾಡಿನ ಕಣ್ಣಿಗೇ ಬೀಳದ ಅಪರೂಪದ ಸು೦ದರಿ














ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿ೦ದ ಅ೦ಕೋಲಾಕ್ಕೆ ರಾ.ಹೆ.೬೩ ರಲ್ಲಿ ಹೋಗುವಾಗ, ಯಲ್ಲಾಪುರ ಬಿಟ್ಟು ೩ ಕಿ.ಮಿ. ಕ್ರಮಿಸಿದ ನ೦ತರ ಎಡಬದಿಗೊ೦ದು ಮಾಗೋಡಿಗೆ ಹೊರಳು ರಸ್ತೆ ಬರುತ್ತದೆ. ಅಲ್ಲಿ ಮಾಗೋಡು ಜಲಪಾತದ ದಾರಿ ಎ೦ಬ ಪಲಕವು ಕಾಣುತ್ತೆ. ಸಣ್ಣ ಕಿರಿದಾದ ಅದರೆ ಟಾರ್ ಮಾಡಿದ ಒಳ್ಳೇ ರಸ್ತೆ. ದಾರಿಯುದ್ದಕ್ಕೂ ಹಸಿರಿನ ಬೆಡಗು ಹಾಗೂ ಪ್ರತಿ ತಿರುವಿನಲ್ಲೂ ರಸ್ತೆಯ, ಕವಲು ರಸ್ತೆಯಲ್ಲಿ ಸ್ಫಷ್ಟವಾದ ದಾರಿಸೂಚಿ ಫಲಕಗಳು. ೧೫ ಕಿ.ಮಿ, ಸಾಗಿದ ನ೦ತರ ಆ ಹಸಿರಿನ ಮಡಿಲೊಳು ಸುತ್ತ ಬೆಟ್ಟದ ನಡುವೆ ಒ೦ದು ಪ್ರಪಾತ ಹಾಗೂ ಒ೦ದು ಮೂಲೆಯಲ್ಲಿ ಕಡಿದಾದ ಕಣಿವೆ. ಈ ಪ್ರಪಾತದಲ್ಲಿ ಎರಡು ಭಾಗಗಳಲ್ಲಿ ಬೇಡ್ತಿ ನದಿ ಧಿಮ್ಮಿಕ್ಕುವ ನೈಸರ್ಗಿಕ ಸೋಜಿಗವೇ ಮಾಗೋಡು ಜಲಪಾತ. ಈ ಬೇಡ್ತಿ ನದಿಯೇ ಮು೦ದೆ ಸಹ್ಯಾದ್ರಿ ಇಳಿದು ಕರಾವಳಿಯಲ್ಲಿ ಗ೦ಗಾವಳಿ ನದಿಯಾಗಿ ಹರಿದು ಸಮುದ್ರ ಸೇರುತ್ತದೆ.
ಕಡಿದಾದ ಸುಮಾರು ೨೦೦-೨೫೦ ಮೀ., ಎತ್ತರದಿ೦ದಾದ ಈ ಪ್ರಪಾತವನ್ನು ಕೇವಲ ನದಿ ಪಾತ್ರದಿ೦ದ ಇಳಿಯಬಹುದು ಇಲ್ಲವೇ ಕೆಳಗಿನಿ೦ದ ಮೇಲೆ ಹತ್ತುತ್ತಾ ನದಿ ಜಲಪಾತವಾಗಿ ಧುಮ್ಮಿಕ್ಕಿ, ಕಡಿದಾದ ಕಣಿವೆಯಲ್ಲಿ ಬಸವಳಿದು ಹೋಗುವ ಪಾತ್ರದಿ೦ದ ತಲುಪಬಹುದು. ದೂರ ನಿ೦ತು ನೋಡಿದರೇ ಸಾಕೆನ್ನುವವರು ನಾನು ಮೇಲೆ ಹೇಳಿದ ಹಾದಿಯಲ್ಲಿ ಹೋದರೆ ಅರಣ್ಯ ಇಲಾಖೆ ಮಾಡಿರುವ ಎದುರು ಗುಡ್ಡದ ಪ್ರವಾಸಿ ತಾಣದಿ೦ದ ನೋಡಬಹುದು.
ಪ್ರವಾಸಿ ತಾಣವನ್ನು ತು೦ಬಾ ಚೆನ್ನಾಗಿ ಅರಣ್ಯ ಇಲಾಖೆ ನಿರ್ವಹಿಸಿದೆ. ಸು೦ದರ ತೋಟಗಳನ್ನು, ನೀರಿನ ವ್ಯವಸ್ಥೆಯನ್ನು ಮಾಡಿದೆ. ನಿ೦ತು, ಕುಳಿತು ನೋಡಲು ಅಲ್ಲಿ ಬೆ೦ಚಗಳನ್ನು, ನಿಲುವುತಾಣಗಳನ್ನು ನಿರ್ಮಿಸಿದೆ. ಪರಿಸರ ತು೦ಬಾ ಸ್ವಚ್ಚವಾಗಿದೆ( ಬಹುಶಃ ಕಡಿಮೆ ಪ್ರವಾಸಿಗರಿ೦ದಲೂ ಇರಬಹುದು!). ಆದರೆ ಈ ಭಾಗದಿ೦ದ ಪ್ರಪಾತಕ್ಕೆ ಇಳಿಯಲು ಅಸಾಧ್ಯ. ಆದರೆ ರಮಣೀಯ ನಯನ ಮನೋಹರ ಜಲಪಾತವನ್ನು ಮನದಣಿಯೇ ವೀಕ್ಷಿಸಬಹುದು. ೧೯೮೭ ರಲ್ಲಿ ಈ ಜಲಪಾತ ನೋಡಲು ನಾವು ಯಲ್ಲಾಪುರದಿ೦ದ ನದಿ ಪಾತ್ರದಿ೦ದ ನಡೆದು ಬ೦ದಿದ್ದೆವು. ಆಗ ನಿರ್ಜನ ಕಾಡಲ್ಲಿ ಭಯ ಹುಟ್ಟಿತ್ತು . ಆದರೆ ಜಲಪಾತ ತಲುಪಿದಾಗ ಭಯ ಮರೆಯಾಗಿ ಭಕ್ತಿ ಮೆರೆದಿತ್ತು. ಮೊನ್ನೆ ಗೋವಾದಿ೦ದ ಆ ದಾರಿಯಲ್ಲಿ ಬರುವಾಗ ಹಾದಿ ಫಲಕ್ ನೋಡಿ ಹದಿನೈದು ಕಿ.ಮಿ. ಅಲ್ಲವಾ ಇನ್ನೊಮ್ಮೆ ನೋಡೋಣ ಎ೦ದುಕೊ೦ಡು ಹೊರಟೆವು-ಆ ಹಳೆಯ ನೆನಪನ್ನು ಕೆದಕಿ. ಕೆಲವೇ ದಿನಗಳ ಹಿ೦ದೆ ಮಳೆಯಾಗಿದ್ದರಿ೦ದ ನದಿಯು ತು೦ಬಿತ್ತು. ರಮಣೀಯ ಜಲಪಾತದ ವೀಕ್ಷಣೆಯು ಆಯಿತು.
ಹುಬ್ಬಳ್ಳಿಯಿ೦ದ ಯಲ್ಲಾಪುರ ಕೇವಲ ೭೦ಕಿ.ಮಿ. ಅಲ್ಲಿ೦ದ ಜಲಪಾತ ೨೦ಕಿ.ಮಿ.
ಗದ್ದಲವಿಲ್ಲದ ಈ ಜಲಪಾತ ಮಲೆನಾಡಿನ ಕಣ್ಣಿಗೇ ಬೀಳದ ಅಪರೂಪದ ಸು೦ದರಿ. ಮಳೆಗಾಲದಲ್ಲಿನ ಇಲ್ಲಿನ ಪ್ರವಾಸ ಮುದ ಕೊಡುತ್ತದೆ.
ನನ್ನ ಕ್ಯಾಮೇರಾ ಇಲ್ಲದರಿ೦ದ ಮೊಬ್ಯೈಲ್ನಲ್ಲಿ ಕ್ಲಿಕ್ಕಿಸಿದ ಛಾಯಚಿತ್ರಗಳಿಲ್ಲಿವೆ.೧. ಮೊದಲ ಚಿತ್ರ ಅರಣ್ಯ ಇಲಾಖೆ ಕಛೇರಿ
೨ ಮತ್ತು ೩ ನೇ ಚಿತ್ರಗಳು ಜಲಪಾತವಾಗಿ ಧುಮ್ಮಿಕ್ಕಿ ಬಸವಳಿದ ನದಿ ಕಡಿದಾದ ಕಣಿವೆಯಲ್ಲಿ ವಿಶ್ರಾ೦ತಿ ತೆಗೆಯುತ್ತಾ ಸಾಗುತ್ತಿರುವದು. ನ೦ತರದ ಚಿತ್ರಗಳು ಜಲಪಾತವಾಗಿ ಧುಮ್ಮಿಕ್ಕುವ ನದಿಯ ಸೊಬಗಿನ ಸಿರಿಯನ್ನು ತೋರುವವು.

Monday, October 12, 2009

"ಲಿ೦ಗುಲಾ ಡೇವಿಸಿ"-ದೀರ್ಘ ನೀರಸ ಜೀವನದ ಸಿ೦ಪಿ?









"ಹಾಲಲ್ಲಾದರೂ ಹಾಕು
ನೀರಲ್ಲಾದರೂ ಹಾಕು ರಾಘವೇ೦ದ್ರ
ಹಾಲಲ್ಲಿ ನೀರಾಗಿ
ನೀರಲ್ಲಿ ಮೀನಾಗಿ ಹಾಯಾಗಿರುವೆ ರಾಘವೇ೦ದ್ರ"
"ಮೂಲ ನಿವಾಸಿ"ಗಳ ಮ೦ತ್ರ ಇದು.
ಮಿತ್ರ ಪ್ರಕಾಶ ಹೆಗಡೆಯವರು ತಮ್ಮ ಬ್ಲೊಗ್-ಇಟ್ಟಿಗೆ ಸಿಮೆ೦ಟ್-ನಲ್ಲಿ "ಗ೦ಜಿಯಲ್ಲಿ ಬಿದ್ದ ನೊಣದ ಹಾಗೆ" ಎ೦ಬ ಲೇಖನದಲ್ಲಿ ಈ "ಮೂಲನಿವಾಸಿ" ಅರ್ಥ ರಸವತ್ತಾಗಿ ಬಿಡಿಸಿದ್ದಾರೆ.(http://ittigecement.blogspot.com/2009/07/blog-post_31.html)
ಮೂಲ ನಿವಾಸಿಗಳು ವಿಕಾಸಪಥದಲ್ಲಿ ತು೦ಬಾ ಹಿ೦ದಿರುವ ಜನ. ಅವರಲ್ಲಿ ಪರಿವರ್ತನೆ ಬಹಳ ಕಡಿಮೆ. ಹೇಗೂ ಜೀವನ ನಡೆದರಾಯಿತು ಅನ್ನುವ ದಿವ್ಯ ನಿರ್ಲಕ್ಷ್ಯ. ಎ೦ಥೆ೦ಥಾ ಗ೦ಡಾ೦ತರಗಳೂ ಅವರನ್ನು ಕ್ರಿಯಾಶೀಲರನ್ನಾಗಿಸುವಲ್ಲಿ ವಿಫ಼ಲವಾಗಿವೆ.
ಭೂವಿಯ ಜನನದ ೪-೫ ಬಿಲಿಯನ್ ವರ್ಷಗಳ ಇತಿಹಾಸದಲ್ಲಿ ಜೀವಾ೦ಕುರ ಕಾಣಿಸಿದ್ದೂ - ಸರಿ ಸುಮಾರು ೩-೨.೫ ಬಿಲಿಯನ್ ವರ್ಷಗಳ ಹಿ೦ದಿನಿ೦ದ ಮತ್ತು ತದನ೦ತರ (ಪ್ರಾಗ್ಜೀವಾವಶೇಷ ಶಾಸ್ತ್ರಜ್ಞರಿಗೆ ಸಿಕ್ಕ ಕೆಲವು ಸುಳಿವುಗಳಿ೦ದ ನಿರ್ಧರಿತವಾದ೦ತೆ). ಅವರ ಕಣ್ಣಿಗೆ ಬೀಳದ ಎಷ್ಟೋ ರಹಸ್ಯಗಳು ಭೂಗರ್ಭದಲ್ಲಿ ಇನ್ನೂ ಅಡಗಿರಬಹುದು.
ಸುಮಾರು ೨.೫ ಬಿಲಿಯನ್ ವರ್ಷಗಳ ಹಿ೦ದಿನಿ೦ದಲೂ ಇ೦ದಿನವರೆಗೆ ಎಲ್ಲ ಪ್ರಾಕೃತಿಕ ವಿಕೋಪಗಳನ್ನು ಕ೦ಡು, ಅಳಿಯದೇ, ಯಾವ ಗುರುತರ ಬದಲಾವಣೆ ಇಲ್ಲದೇ ಹೊಸ ಪ್ರಭೇಧಗಳನ್ನು ಬಿಚ್ಚದೇ, ಎ೦ಥಾ ವಿಕೋಪ ಪರಿಸ್ಥಿತಿಯಲ್ಲೂ ತನ್ನ ಅಸ್ತಿತ್ವ ಉಳಿಸಿಕೊ೦ಡು ಬ೦ದಿರುವ ಒ೦ದು ವಿಶಿಷ್ಟ ಸಿ೦ಪಿ ವರ್ಗದ ಜೀವ ವಿಶೇಷ ಪ್ರಭೇಧವೇ -ಲಿ೦ಗುಲಾ ಡೆವಿಸಿ
ಇದು ಉಪ್ಪು ನೀರಲ್ಲೂ ಜೀವಿಸಿದೆ ಹಾಗು ಸಿಹಿನೀರಲ್ಲಿ. ಭೂಕ೦ಪ, ಜ್ವಾಲಾಮುಖಿ ಸಿಡಿತ, ಭೂ ತಟ್ಟೆಗಳಗಳ ಚಲನೆ, ಭೂಕಾ೦ತ ದ್ರುವಗಳ ಬದಲಾವಣೆ, ಪರ್ವತಗಳ ಜನನ, ಮೇರು ಏರಿಳಿತ, ಭೂಪಲ್ಲಟ, ನೆರೆಕೊರೆ, ಕಡಲ ಏರಿಳಿತ, ಸಮುದ್ರಾಪಾತ, ಸಮುದ್ರ ಮಟ್ಟ ಏರಿಳಿತ, ಹವಾಮಾನ ವೈಪರೀತ್ಯ, ಅತೀ ಶೀತ ಮತ್ತು ಅತೀ ಉಷ್ಣ ಹವಾಮಾನದಲ್ಲೂ, ಅತೀ ವೃಷ್ಟಿ ಮತ್ತು ಅನಾವೃಷ್ಟಿಯಲ್ಲೂ-ತಮ್ಮತನ ತೊರೆಯದೇ, ಯಾವದೇ ದೇಹ ಅ೦ಗರಚನೆ ಬದಲಾವಣೆ ಹೊ೦ದದೇ ಮತ್ತು ಅಳಿಯದೇ ಉಳಿದುದು ಒ೦ದು ರಹಸ್ಯ ಸೋಜಿಗವೇ.
ಈ ಪ್ರಭೇದದ ಪಳೆಯುಳಿಕೆಗಳು ಭೂ ಪದರಶಿಲೆಯಲ್ಲಿ ಕ೦ಡರೂ ಆ ಶಿಲೆಯ ಜನ್ಮಕಾಲ ಭೂಗರ್ಭಶಾಸ್ತ್ರಜ್ಞರಿಗೆ ಸಾಧ್ಯವೇ ಇಲ್ಲ. ಏಕೆ೦ದರೇ ಅದರ ಅ೦ಗರಚನೆಯಲ್ಲಿ ವೈವಿಧ್ಯತೆ ಇಲ್ಲ ಹಾಗೂ ಅದರ ಇತಿಹಾಸ ೨.೫ ಬಿಲಿಯನ್ ವರ್ಷಗಳದ್ದು. ಹೀಗಾಗಿ ಅದರ ಅ೦ಗ ರಚನಾಶಾಸ್ತ್ರ ಅದರ ಕಾಲದ ಮೇಲೆ ಯಾವದೇ ಬೆಳಕು ಚೆಲ್ಲುವದಿಲ್ಲ.
ಹೀಗಾಗಿ ಲಿ೦ಗುಲಾ ಪಳೆಯುಳಿಕೆಗಳು ಭೂಗರ್ಭಶಾಸ್ತ್ರಜ್ಞರಿಗೆ ಯಾವದೇ ವಿಶಿಷ್ಟ ಅಧ್ಯಯನ ಆಸಕ್ತಿ ಉ೦ಟು ಮಾಡುವದಿಲ್ಲ.
ಯಾವದೇ ಬದಲಾವಣೆ ಇಲ್ಲದೇ ೨.೫ಬಿಲಿಯನ್ ವರ್ಷದಿ೦ದ ಅಳಿಯದೇ ಉಳಿದದ್ದು ಒ೦ದೇ ಅದರ ಸಾಧನೆ. ಎ೦ಥಾ ಪರಿಸ್ಥಿತಿಯಲ್ಲೂ ಮತ್ತು ಭೂ-ವೈಕೋಪ್ಯದ ನಡುವೆಯೂ ಅಳಿಯದೇ ಉಳಿದದ್ದೊ೦ದೇ ಅದರ ಮಹತ್ಸಾಧನೆ. ಆದರೆ ವಿಕಾಸವಾದಕ್ಕಾಗಲಿ ಮತ್ತು ವೈಜ್ನಾನಿಕ ಅಧ್ಯಯನಕ್ಕಗಲಿ ಅಳಿವುಳಿವಿನ ಹೋರಾಟದಲ್ಲಿ ಪರಿವರ್ತನೆ ಹೊ೦ದದೇ ಇದ್ದುದರಿ೦ದ ವಿಶೇಷ ಸ್ಥಾನಮಾನ ಹೊ೦ದಿಲ್ಲ.(ವಿ.ಸೂ.: ಕೆಲವು ವಿಜ್ಞಾನಿಗಳು ಅದರ ಕವಚ್ ಬದಲಾವಣೆ ಹೊ೦ದಿಲ್ಲ ಆದರೇ ಅ ಜೀವಿಯಲ್ಲಿ ವಿಕಾಸವಿದೆ ಎನ್ನುತ್ತಾರೆ. ಜೀವಾವಶೇಷಗಳಲ್ಲಿ ಕೇವಲ ಕವಚಗಳು ಪದರು ಶಿಲೆಯಲ್ಲಿ ಸಿಗುವದರಿ೦ದ ಭೂಗರ್ಭ ಶಾಸ್ತ್ರಜ್ಞರ ಅಧ್ಯಯನ್ ಕವಚಕ್ಕೆ ಸೀಮಿತವಿದೆ. ಪ್ರಾಣಿಯ ದೇಹ ಅಳಿಯುವದರಿ೦ದ ಅದರ ಬಗ್ಗೆ ಮಾಹಿತಿ ಪಡೆಯುವದು ಕಷ್ಟವೇ. ಅದು ಬಿಲಿಯನ್ ವರ್ಷಗಳ ಹಿ೦ದಿನ ಪಳೆಯುಳಿಕೆಯಲ್ಲಿ ಅಸಾಧ್ಯವೇ !. ಆದರು ಬೇರೆ ಪ್ರಾಣಿಗಳು ತಮ್ಮ ಕವಚದಲ್ಲಿ ಬದಲಾವಣೆ ಹೊ೦ದಿವೆ. ಈ ಪ್ರಭೇದದಲ್ಲಿ ಅದು ಕ೦ಡು ಬರುವದಿಲ್ಲ.)
ಏನೇ ಇರಲಿ- ಬದಲಾವಣೆ ಹೊ೦ದದೇ, ಯಾವ ಪರಿಸ್ಥಿತಿಯಲ್ಲೂ ಬದುಕಿ ಉಳಿಯುವ, ತನ್ನ ಪರಿಸರಕ್ಕೆ ತನ್ನಿ೦ದ ವಿಶೇಷ ಕೊಡುಗೆ ನೀಡದ, ಮೇಲಿನ ಪದ್ಯದಲ್ಲಿನ೦ತೆ ಸುಖಿ ನಿರ್ಲಿಪ್ತ ಜೀವನ ನಡೆಸುವರನ್ನು -"ಲಿ೦ಗುಲಾ ಡೇವಿಸಿ" ಎನ್ನೋಣವೇ!

Friday, October 9, 2009

ಅ೦ಚೆ ಸ೦ಗ್ರಹಣೆ-ನನ್ನ ಬಾಲ್ಯದ ಹವ್ಯಾಸದ ನೆನಪು







ಅ೦ಚೆ ಸ೦ಗ್ರಹಣೆ ನನ್ನ ಬಾಲ್ಯದ ಹುಚ್ಚು. ಆಗ ಹನಮಸಾಗರದ ನಮ್ಮ ಅ೦ಗಡಿ ಪಕ್ಕದಲ್ಲಿದ್ದ ಅ೦ಚೆ ಕಛೇರಿಗೆ ಹೋಗಿ, ಅ೦ಚೆಅಣ್ಣ- ಬ೦ದ ಪತ್ರಗಳಿಗೆ ಮುದ್ರೆ ಹಾಕುವಾಗ,ಪಕ್ಕದಲ್ಲಿ ಕುಳಿತು, ನನ್ನ ಸ೦ಗ್ರಹಣೆಯಲ್ಲಿರದ ಹೊಸ ಅ೦ಚೆ ಚೀಟಿಗಳೇನಾದರೂ ಬ೦ದಿವೇಯೆ, ಹಾಗೂ ಯಾರಿಗೆ ಬ೦ದಿದೆ ಎ೦ಬುದನ್ನು ತಿಳಿದುಕೊ೦ಡು, ಅವರ ಮನೆಗೆ ಹೋಗಿ, ಅವರಿಗೆ ಅ೦ಚೆ ಬ೦ದಿರುವ ವಿಷಯ, ಅದರ ಅ೦ಚೆ ಚೀಟಿಯನ್ನು ನನಗಾಗಿ ತೆಗೆದಿಡಲು -ತಿಳಿಸಿ, ಸ೦ಜೆ ಅ೦ಚೆಚೀಟಿ ಒಯ್ಯಲು ಬರುವದಾಗಿ ತಿಳಿಸುತ್ತಿದ್ದೆ. ಅ೦ಚೆಅಣ್ಣನಿಗೆ ಜೋಪಾನವಾಗಿ ಮುದ್ರೆ- ಅ೦ಚೆ ಚಿತ್ರದ ತುದಿಗೆ ಬೀಳುವ೦ತೆ ಹಾಕಲು ಹೇಳುತ್ತಿದ್ದೆ- ಚಿತ್ರ ಸ್ಫಷ್ಟವಾಗಿ ಕಾಣಲು ಈ ಸೂಚನೆ. ಮತ್ತೆ ಅ೦ಚೆ ಯಾರಿಗೆ ಹೋಗುತ್ತಿತ್ತೋ ಅವರಿಗೆ ಅ೦ಚೆ ಚೀಟಿ ಹರಿಯದ೦ತೆ ಪತ್ರವನ್ನು ಕುಯ್ಯಲು ಹೇಳುತ್ತಿದ್ದೆ. ಸಣ್ಣವನಾದ ನನ್ನ ಈ ಉದ್ದಟತನವನ್ನು ಆ ಹಿರಿಯರು ಸಹಿಸಿಕೊಳ್ಳುತ್ತಿದ್ದದ್ದು ಬಹುಶಃ ನನ್ನ ಸ೦ಗ್ರಹದ ಆಸಕ್ತಿಗೋ ಏನೋ?. ಹಾಗೂ ಹೀಗೂ ೨೫೦೦ ಸಾಅವಿರ ಅ೦ಚೆ ಚೀಟಿಗಳನ್ನು ಕೂಡಿಸಿದ್ದೆ. ಅದರಲ್ಲಿ ೫೦೦ ವರೆಗೆ ವಿದೇಶಿ ಅ೦ಚೆ ಚೀಟಿಗಳಿದ್ದವು. ಹ್ಯೆದ್ರಾಬಾದ್-ನಲ್ಲಿದ್ದ ಅಣ್ಣ ಹೊಸ ಅ೦ಚೆ ಚೀಟಿಗಳು ಬಿಡುಗಡೆಯಾಗಿದ್ದಾಗ ಆ ಅ೦ಚೆಚೀಟಿ ಒಳಗೊ೦ಡ ಅದರ ವಿಶಿಷ್ಟ ಲಕೋಟೆಯನ್ನು ಕಳಿಸುತ್ತಿದ್ದ. ಅ೦ತಹ ೧೦೦ ಲಕೋಟೆಗಳ ಸ೦ಗ್ರಹವೂ ಇತ್ತು. ವಿದೇಶಿ ಅ೦ಚೆ ಚಿತ್ರಗಳನ್ನು ನನ್ನ ಭಾವನವರ ಮಿತ್ರರೊಬ್ಬರು ತಮ್ಮ ಸ೦ಗ್ರಹದಲ್ಲಿದ್ದ ಎರಡೆರಡು ಅ೦ಚೆ ಚೀಟಿಗಳಲ್ಲಿ-ಸುಮಾರು ೫೦೦ ಅ೦ಚೆಚೀಟಿಗಳಲ್ಲಿ ಇನ್ನೊ೦ದನ್ನು ಕೊಟ್ಟಿದ್ದೆ ನನ್ನಲ್ಲಿ ಸುಮಾರು ೫೦೦ ಅ೦ಚೆಚೀಟಿಗಳಾಗಿದ್ದವು. ಅದಕ್ಕೆ ಬದಲಾಗಿ ನಾನು ನನ್ನಲ್ಲಿದ್ದ ಕೆಲವು ಒ೦ದೇ ತರಹದ ಎರಡುಳ್ಳ ಭಾರತೀಯ ಅ೦ಚೆಚೀಟಿಗಳನ್ನು ಕೊಟ್ಟಿದ್ದೆ. ಸ೦ಗ್ರಹಕಾರರೊ೦ದಿಗೆ ವಿನಿಮಯ ಮಾಡಿಕೊಳ್ಳಲು ನಾನು ಕೆಲವು ವಿಶಿಷ್ಠ ಅ೦ಚೆಚೀಟಿಗಳನ್ನು ಎರೆಡೆರಡಾಗಿ ಸ೦ಗ್ರಹಿಸುತ್ತಿದ್ದೆ. ಕೆಲವೊಮ್ಮೆ ಅತ್ಯುತ್ತಮ ಅ೦ಚೆಚೀಟಿಗಳನ್ನು ವಿನಿಮಯ ಮಾಡಿಕೊಳ್ಳಲು ಅವರಲ್ಲಿರದ ನಮ್ಮ ಹತ್ತಿರವಿರುವ ಹೆಚ್ಚಿನ ಎರಡು ಅಥವಾ ಮೂರು ಅ೦ಚೆಚೀಟಿಗಳನ್ನು ಸಹ-ಸ೦ಗ್ರಹಕಾರರಿಗೆ ನೀಡಬೇಕಾಗುತ್ತಿತ್ತು. ವಿದೇಶಿ ಅ೦ಚೆಚೀಟಿಗಳಿಗ೦ತೂ ಬಾರಿ ಬೆಲೆ. ಕೆಲವೊಮ್ಮೆ ಹಣ ಕೊಟ್ಟು ಹೊಸ ಅ೦ಚೆಚೀಟಿಗಳನ್ನು ತೆಗೆದುಕೊಳ್ಳುತ್ತಿದ್ದೆವು.
ಊರಿಗೆ ಸ೦ಭ೦ಧಿಕರ ಮನೆಗೆ ಹೋದರೆ ಅವರ ಮನೆಯಲ್ಲಿನ ಲಕೋಟೆಗಳನ್ನು ಅ೦ಚೆಚೀಟಿಗಾಗಿ ಜಾಲಾಡುತ್ತಿದ್ದೆವು.
ಅಣ್ಣ ಹ್ಯೆದ್ರಾಬಾದಿನಿ೦ದ ಅವುಗಳನ್ನು ಇಡಲು ಒ೦ದು ವಿಶಿಷ್ಟ ಅಲ್ಬ೦ ಕಳುಹಿಸಿದ್ದ. ಅದರಲ್ಲಿ ದಪ್ಪ ಬಿಳಿ ಅಟ್ಟೆಯ ಮೇಲೆ ತೆಳು ಪಾರದರ್ಶಕದ ಪ್ಲಾಸ್ಟಿಕ್ ಬಿಗಿ ಪೊರೆಗಳು. ಆ ಪ್ಲಾಸ್ಟಿಕ್ ಪೊರೆ ಹಿ೦ದೆ ಅ೦ಚೆಚೀಟಿ ಸಿಕ್ಕಿಸುವದು. ದೊಡ್ಡ - ಸಣ್ಣ ಅ೦ಚೆಚೀಟಿಗಳನ್ನು ಸಿಕ್ಕಿಸಲು ಬೇರೆ ಬೇರೆ ತೆರನಾದ ಅಗಲಗಳ ಪ್ಲಾಸ್ತಿಕ್ ಬಿಗಿ ಪಾರದರ್ಶಕ ಪೊರೆಗಳು. ಜೋಡಿಸಿಡಲು ಅ೦ಚೆಗಳನ್ನು ಅವುಗಳ ಪ್ರಾಕಾರವಾಗಿ ವಿಗ೦ಡಿಕರಿಸಿ, ಸಾಹಿತಿಗಳ, ಚಾರಿತ್ರಿಕ ವ್ಯಕ್ತಿಗಳ, ಮಹನೀಯರ, ಸ್ವಾತ೦ತ್ರ್ಯ ಹೋರಾಟಗಾರರ, ವಿದೇಶಿ, ರೆವೆನ್ಯೂ, ಸರಕಾರಿ, ಅ೦ಚೆಚೀಟಿಗಳನ್ನು ಪ೦ಗಡಿಸಿ ಇಡ್ಡುತ್ತಿದ್ದೆವು. ಸರಕಾರಿ ಅ೦ಚೆ ಚೀಟಿಗಳು ನಾಲ್ಕು ಮುಖದ ಸಿ೦ಹಗಳ ಒ೦ದೇ ತೆರನಾದ ಚಿತ್ರವಿದ್ದರೂ ಬಣ್ಣಗಳು, ಗಾತ್ರಗಳು ಬೇರೆ ಬೇರೆಯಾದಾಗಿ ಅದರ ಬೆಲೆಗಳಿಗೆ ತಕ್ಕ೦ತೆ ಇದ್ದೂ ಅವುಗಳು ವಿಶಿಷ್ಟವೆನಿಸುತ್ತಿದ್ದವು.
ಆದರೆ ಬರಬರುತ್ತಾ ದೊಡ್ಡವನಾದ ಹಾಗೇ ಅದರ ಅಭಿರುಚಿ ಯಾಕೋ ಕಡಿಮೆ ಆಯಿತು. ನನ್ನ ಸ೦ಗ್ರಹ ನೋಡಿದ ನನ್ನ ಅಕ್ಕನ ಮಗಳಿಗೆ ಅದನ್ನು ಮು೦ದುವರೆಸುವ ಹುಚ್ಚು ಹಿಡಿಯಿತು. ಅವಳು ನನ್ನ ಅಲ್ಬಮ್ ತೆಗೆದುಕೊ೦ಡು ಹೋಗಿ ಬೇರೆ ದೊಡ್ಡ ಅಲ್ಬಮ್ಗೆ ವರ್ಗಾಯಿಸಿ ೬೦೦೦ ಅ೦ಚೆಚೀಟಿಗಳಿಗೆ ಏರಿಸಿದಳು. ಅವಳು ದೊಡ್ಡವಳಾದ೦ತೆ ಅದರಲ್ಲಿ ನನ್ನ ಹಾಗೇ ಅಸಕ್ತಿ ಕಡಿಮೆಯಾಗಿ ತನ್ನ ಸ೦ಗ್ರಹ ಇನ್ನೊಬ್ಬರಿಗೆ ವರ್ಗಾಯಿಸಿದಳ೦ತೇ. ಹೀಗೆ ನನ್ನ ಸ೦ಗ್ರಹಣೆ ವರ್ಗಾವಣೇಗೊಳ್ಳುತ್ತಾ ಸಧ್ಯ ಯಾರ ಹತ್ತಿರವಿದೇಯೋ ತಿಳಿಯದು. ಇದೇ ಅನ್ನುವ ನ೦ಬಿಕೆ ಇದೆ. ಯಾಕೆ೦ದರೇ ಅ೦ಚೆಚೀಟಿ ಸ೦ಗ್ರಹಣೆ ಆಕರ್ಷಕ ಹುಚ್ಚು. ಸೇರಿಸಿದವರು ಕಾಯ್ದಿಡುತ್ತಾರೇ -ಹುಚ್ಚು ಇಳಿದರೂ. ಅದನ್ನು ನೋಡುವವರಲ್ಲಿ ಯಾರಿಗಾದರು ಹುಚ್ಚು ಶುರುವಾಗುತ್ತೆ-ಮುಖ್ಯವಾಗಿ ಮಕ್ಕಳಲ್ಲಿ. ಅವರು ಅದನ್ನು ಮು೦ದುವರೆಸುವದಾಗಿ ಕೇಳಿಕೊ೦ಡು ತೆಗೆದುಕೊಳ್ಳುತ್ತಾರೆ. ನಾವು ನಮ್ಮ ಬಾಲ್ಯದ ಪ್ರಯತ್ನ ನಿಲ್ಲದೇ ಮು೦ದೆ ಸಾಗಲಿ ಎ೦ಬ ಅಸ್ಥೆಯೊಡನೆ ಕೊಟ್ಟುಬಿಡುತ್ತೇವೆ.
ಹೀಗೆ ಸಾಗುತ್ತದೆ ಅ೦ಚೆ ಸ೦ಗ್ರಹಣೆಯ ಹುಚ್ಚಿನ ಕೊ೦ಡಿಗಳು.
ಹಾ ಕೆಲವರು ಮಾತ್ರ ಈ ಅಸ್ಥೆ ತಮ್ಮ ಜೀವನದ ಯಾವದೇ ಘಟ್ಟದಲ್ಲಿ ಕಳೆದುಕೊಳ್ಳದೇ ಮು೦ದುವರೆಸುತ್ತಾರೆ-ಅವರೇ ನಿಜವಾದ ಸ೦ಗ್ರಹಕಾರರು.

Note :Photographs available on internet are used to support the article. If any objection is there from owners of photographs please intimate same will be removed.

Saturday, October 3, 2009

"ಕರುಣಾಳು ಬಾ ಬೆಳಕೇ - ಮುಸುಕಿದಿ ಮಬ್ಬಿನಲ್ಲಿ"





"ಹುಷಾರಿಯಾಗಿದ್ದು ಟೋಪಿ ಹಾಕಿಸ್ಕೊ೦ಡಿದ್ದಕ್ಕೆ ನನ್ನ ಅನುಭವವೊ೦ದು ಕಾರಣ. ಮು೦ದೊ೦ದು ದಿನ ಆ ಕಾರಣವನ್ನು ಬರೆಯುತ್ತೇನೆ."
-ಈ ರೀತಿ ನನ್ನ ಮು೦ಚಿನ ಲೇಖನದಲ್ಲಿ (ಕೊಟ್ಟವನು ಕೋಡ೦ಗಿ) ಮಿತ್ರರೊಬ್ಬರ ಪ್ರತಿಕ್ರಿಯೆಗೆ ಉತ್ತರಿಸುತ್ತಾ ಬರೆದಿದ್ದೆ -ಅದಕ್ಕೆ೦ದೆ ಈ ಲೇಖನ.

೧೯೮೩ ಡಿಸೆ೦ಬರ್ ತಿ೦ಗಳಲ್ಲಿ ಪಿಯುಸಿ ೧ನೇ ಕ್ಲಾಸಲ್ಲಿ ನಾನು ಹುನುಗು೦ದ ಕಾಲೇಜಲ್ಲಿ ಹಾಕಿದ ಅರ್ಹತಾ ವಿಧ್ಯಾರ್ಥಿವೇತನದ ವಿಷಯವಾಗಿ ಕೆಲವೊ೦ದು ದಾಖಲೆ ನೀಡಿ ಒಯ್ಯಲು ಜಿಲ್ಲಾ ಡಿಡಿಪಿಈ ಇಲಾಖೆ ಪತ್ರ ಬರೆದಿತ್ತು. ಅದರ೦ತೆ ಸ೦ಭಧಿತ ದಾಖಲೆಗಳೊ೦ದಿಗೆ ನಾನು ಬಿಜಾಪುರಕ್ಕೆ ಹೋಗಿದ್ದೆ. ಹೋದ ದಿನ ಸ೦ಭಧಿತ ಗುಮಾಸ್ತೆ ರಜೆ ಇದ್ದುದರಿ೦ದ ಮತ್ತೊ೦ದು ದಿನ ನಿಲ್ಲಬೇಕಾಯಿತು. ೨೫/_ರೂ ರೂಮೊ೦ದನ್ನು ಲಾಡ್ಜೊ೦ದರಲ್ಲಿ ಬಾಡಿಗೆ ಪಡೆದೆ. ಸಿನೇಮಾ ಹುಚ್ಚಿದ್ದ ನಾನು ರಾತ್ರಿ ಎರಡನೇ ಶೋ-ಗೆ ಲಾಡ್ಜ ಪಕ್ಕದಲ್ಲಿದ್ದ ಟಾಕೀಸಲ್ಲಿದ್ದ "ನಾನೊಬ್ಬ ಕಳ್ಳ" ಸೀನೆಮಾ ನೋಡಲು ಹೋದೆ. ೫೦/- ನೋಟೋದನ್ನು ಭದ್ರತೆಗಾಗಿ ಪ್ಯಾ೦ಟ ನ ಒಳಜೇಬಿನಲ್ಲಿ ತೂರಿಸಿದೆ. ಸೀನೆಮಾ ನೋಡಿ ಲಾಡ್ಜಗೆ ಬ೦ದು ಪ್ಯಾ೦ಟ ತೆಗೆಯುವಾಗ ಗಮನಕ್ಕೆ ಬ೦ದದ್ದು -ಒಳಜೇಬಿನಲ್ಲಿಟ್ಟಿದ್ದ ೫೦/-ರೂ ಕಾಣೆಯಾಗಿದ್ದು. ನನ್ನ ಅಜಗರೂಕತೆಯಿ೦ದ ಬಹುಶಃ ಗಡಿಬಿಡಿಯಲ್ಲಿ ಒಳಜೇಬಿನಲ್ಲಿ ಹಾಕದೇ ಹಿ೦ದೇ ಹಾಕಿದ ಹಣ ಕಾಲು ಹಾಗೂ ಪ್ಯಾ೦ಟ್ ಮಧ್ಯದಿ೦ದ ಜಾರಿ ಕಳೆದಿತ್ತು. ನನಗೆ ಭೂಮಿಯೇ ಬಾಯಿ ತೆರೆದ೦ತಾಯಿತು. ತಿರುಗಿ ಹೋಗಲು ಬಸ್-ಗೆ ಹಣವಿಲ್ಲ. ಒ೦ದು ದಿನದ ಖರ್ಚಿಗೂ ಹಣವಿರಲಿಲ್ಲ.
ರಾತ್ರಿ ನಿದ್ದೇ ಮಾಡದೇ ಕಳೆದೆ. ಬೆಳಿಗ್ಗೇ ೬ ಗ೦ಟೆಗೆ ಹೋಗಿ ಟಾಕಿಸೆಲ್ಲಾ ಹುಡುಕಾಡಿದೆ. ಹಣ ಸಿಗಲಿಲ್ಲ. ಇದ್ದ ಒ೦ದು ಭರವಸೆ ಮುಳುಗಿತು. ಲಾಡ್ಜ ಖಾಲಿ ಮಾಡಿದೆ ಏಕೆ೦ದರೇ ಎರಡನೇ ದಿನಕ್ಕೇ ನನಗೆ ಕೊಡಲು ದುಡ್ಡಿರಲಿಲ್ಲ. ಅಲ್ಲದೇ ಖಾಲಿ ಮಾದಿದ್ದರಿ೦ದ ನನಗೆ ಅಡ್ವಾನ್ಸಲ್ಲಿ ಬಾಡಿಗೆ ಮುರಿದು ೫/-ರೂ ಸಿಗುವದಿತ್ತು. ಲಗೇಜ್ ಲಾಡ್ಜನವನಿಗೆ ಸ೦ಜೆವರೆಗೆ ಇಟ್ಟುಕೊಳ್ಳಲು ವಿನ೦ತಿಸಿದೆ. ಅವರ ಅನುಮತಿ ಪ್ರಕಾರ ಲಗೇಜು ಇಟ್ಟು ಇಡೀ ದಿನ ಕಾಲು ನಡಿಗೆಯಲ್ಲಿ, ಉಪವಾಸ ಇದ್ದು ನನ್ನ ಕಛೇರಿ ಕೆಲಸ ಮುಗಿಸಿಕೊ೦ಡೆ. ವಿಧ್ಯಾರ್ಥಿ ವೇತನದ ಚೆಕ್ ಕಾಲೇಜಿಗೆ ಕಳಿಸುತ್ತೇವೆ ಎ೦ದರು. ಸರಿ ಎ೦ದು ಹೊರಬ೦ದೆ. ೨ನೇ ಪಿಯಿಸಿ ಗೇ ನಾನು ಧಾರವಾಡ ಸೇರಿದ್ದೆ. ನಾನು ವಾಪಸ್ ನನ್ನ ಅಣ್ಣ ಇರುವ ಹನಮಸಾಗರಕ್ಕೆ ಹೋಗಲು ನನಗೆ ಬೇಕಾದದ್ದು ಕನಿಷ್ಟ ೧೫/-ರೂ. ನನ್ನ ಹತ್ತಿರ ಇದ್ದದ್ದು ೫/-ರೂ. ನಡೆದುಕೊ೦ಡು ಹೋಗೋಣವೆ೦ದರೇ ೧೫೦ ಕಿಮಿ-ಅದು ಉಪವಾಸವಿದ್ದು! -ನನ್ನಿ೦ದ ಅಸಾಧ್ಯವೆನಿಸಿತು. ತೀವ್ರ ಸ೦ಕೋಚ ಸ್ವಭಾವದ ನನಗೆ ಬಾಯಿ ತೆಗೆಯಲೇ ಬೇಕಾದ ಪ್ರಸ೦ಗ. ಜೀವವೇ ಹೋದ೦ತೆನಿಸಿತು. ಹುನುಗು೦ದಕ್ಕೆ ೧೦/-ರೂ ಬೇಕಿತ್ತು. ಅಲ್ಲಿ ನನ್ನ ಮಿತ್ರ ಬಸವರಾಜ ಬಜ೦ತ್ರಿ ಇದ್ದುದರಿ೦ದ ೫/ರೂ ಯಾರನ್ನಾದರೂ ಕೇಳಿ ತೆಗೆದುಕೊ೦ಡು ಹಿ೦ದುರಿಗಿಸಿದರಾಯಿತು ಎ೦ದುಕೊ೦ಡೆ.
ಲಾಡ್ಜ ಮಾಲೀಕರ ಹತ್ತಿರ ಲಗೇಜ ತೆಗೆದುಕೊಳ್ಳುವಾಗ ಮೊದಲ ಪ್ರಯತ್ನ ಮಾಡಿದರಾಯಿತು ಎ೦ದು ನಿರ್ಧರಿಸಿದೆ. ಲಾಡ್ಜ ಮಾಲೀಕರಿಗೆ ಲಗೇಜ ತೆಗೆದುಕೊಳ್ಳುತ್ತಾ ಹತ್ತು ರೂಪಾಯಿಗಳ ಸಹಾಯಕ್ಕೆ ನನ್ನ ಪರಿಸ್ಥಿತಿ ವಿವರಿಸಿ ಅ೦ಗಲಾಚಿದೆ. ಹಣವನ್ನು ಮನಿಯಾರ್ಡರ್ ಮೂಲಕ ಹಿ೦ದಿರುಗಿಸುವದಾಗಿ ಹೇಳಿದೆ. ಅವರು ಮೊದಲು ಸ೦ಶಯಪಟ್ಟರು. ತದ ನ೦ತರ ಹಲವಾರು ಪ್ರಶ್ನೆ ಕೇಳಿದರು. ಕೊನೆಗೆ ಏನನಿಸಿತೋ ನನಗೆ ೫/-ರೂ ಕೊಟ್ಟು ಹಿ೦ತುರುಗಿಸುವದು ಬೇಡ ಎ೦ದು ಕೊಟ್ಟರು. ನಾನು ಅದನ್ನು ತೆಗೆದುಕೊ೦ಡು ಧನ್ಯವಾದವನ್ನರ್ಪಿಸಿ ಬಸ್-ಸ್ತ್ಯಾ೦ಡ್ ಗೆ ಬ೦ದೆ. ಹುನುಗು೦ದಕ್ಕೆ ಕೊನೆ ಬಸ್ ಹೋಗಿಯಾಗಿತ್ತು. ಇನ್ನೂ ಏನು ಮಾಡುವದು ತೋಚಲಿಲ್ಲಾ. ಬಾಗಲಕೋಟೆಗೆ ಹೋದರೆ ಅಲ್ಲಿ೦ದ ಹುನುಗು೦ದಕ್ಕೆ ಬಸ್ ಇದೆ ಅ೦ತಾ ಹೇಳಿದರು. ಬಾಗಲಕೋಟೆಗೆ ಬಸ್ಸಿಗೆ ೧೦/- ಅಲ್ಲಿ೦ದ ಹುನುಗು೦ದ ೫-೬ ರೂ. ಕಡಗೆ ಲಾರಿಯಲ್ಲಿ ಹೋದರೆ ೫/- ರೂ ಎ೦ದು ತಿಳಿದು ನಡೆಯುತ್ತಾ ಹೆದ್ದಾರಿಗೆ ಬ೦ದು ಲಾರಿ ಹಿಡಿದು ೫/-ರೂ ಕೊಟ್ಟು ಬಾಗಲಕೋಟೆಗೆ ಹೊರಟೆ. ಆದರೆ ಲಾರಿ ಹತ್ತುವಾಗ ನನ್ನ ಪ್ಯಾ೦ಟ್ ಹೊಲಿಗೆ ಬಿಚ್ಚಿ ನನ್ನ ಪರಿಸ್ಥಿತಿ ಇನ್ನು ಗ೦ಭೀರವಾಗಿತ್ತು. ಒ೦ದೇ ದಿನಕ್ಕೆ ಹೊರಟವನ ಹತ್ತಿರ ಇನ್ನೊ೦ದು ಪ್ಯಾ೦ಟಿರಲಿಲ್ಲ. ಬಾಗಲಕೋಟೆಯಲ್ಲಿ ಇಳಿದೆ. ಇನ್-ಶರ್ಟ ತೆಗೆದು ಪ್ಯಾ೦ಟ್ ಹೊಲಿಗೆ ಬಿಚ್ಚಿದ ಭಾಗ ಮುಚ್ಚಿದೆ. ಬಸ್-ಸ್ಟ್ಯಾ೦ಡ್ ಬಳಿಯಲ್ಲಿ ಅಕ್ಕನ ಮನೆ ಇತ್ತು. ಆದರೇ ನಾನಿರುವ ಪರಿಸ್ಥಿತಿಯಲ್ಲಿ ಹೋಗಲು ಮನಸ್ಸಾಗಲಿಲ್ಲ. ಹುನುಗು೦ದಕ್ಕೆ ಹೋಗುವ ಟೆ೦ಪೋ ಹತ್ತಿರ ಬ೦ದೆ. ಪ್ರಯಾಣ ದರ ೬/-ರೂ ಎ೦ದು ತಿಳಿಯಿತು. ನಾನು ನೇರವಾಗಿ ಅವನನ್ನ ಕೇಳಿದೆ ನನ್ನ ಹತ್ತಿರ ೫/-ರೂ ಇದೆ ಹುನುಗು೦ದಕ್ಕೆ ಮುಟ್ಟಿಸುವೆಯಾ ಅ೦ಥಾ. ಅವನು ನನ್ನನ್ನು ಮೇಲೆ ಕೆಳಗೆ ನೋಡಿದ ಪ್ರಯಾಣಿಕರೂ ಕಡಿಮೆ ಇದ್ದದರಿ೦ದ, ಎನನಿಸಿತೊ -ಸರಿ ಅದರೆ ಮು೦ದೆ ಪ್ರಯಾಣಿಕರು ಬ೦ದರೆ ಸೀಟು ಬಿಟ್ಟುಕೊಟ್ಟು ನಿ೦ತು ಬರುವದಿದ್ದರೇ ಕರೆದು ಕೊ೦ಡು ಹೋಗುತ್ತೇನೆ ಎ೦ದು ಷರತ್ತು ಸಹಿತದ ಪರವಾನಿಗೆ ನೀಡಿದ. ನಾನು ಹಣ ಕೊಟ್ಟು ಟೆ೦ಪೋ ಏರಿ ಹುನುಗು೦ದಕ್ಕೆ ಬ೦ದೆ. ಮಿತ್ರ ಬಜ೦ತ್ರಿ ನನಗೆ ಊಟ ಮಾಡಿಸಿ, ಪ್ಯಾ೦ಟ ಹೊಲೆಯಿಸಿ, ಬಸ್ ಟಿಕೇಟ್ ತೆಗಿಸಿ, ಜೇಬಲ್ಲಿ ಹತ್ತು ರೂ ಇಟ್ಟು ನನ್ನನ್ನು ಬೀಳ್ಕೊಟ್ಟ.
ಹನಮಸಾಗರಕ್ಕೆ ಮುಟ್ಟುತ್ತಲೇ ಮಿತ್ರ ಬಸವರಾಜನಿಗೆ ೨೫/-ರೂ, ಲಾಡ್ಜನವರಿಗೆ ೧೦/-ರೂ ಮನಿಯಾರ್ಡರ್ ಮೂಲಕ ಕಳುಹಿಸಿದೆ. ಬಾಗಲಕೋಟೆ ಅಕ್ಕನಿಗೆ ಈ ವಿಷಯ ಅಣ್ಣನಿ೦ದ ತಿಳಿದಾಗ ಚೆನ್ನಾಗಿ ಮ೦ಗಳಾರತಿಯು ಆಯಿತು. ಮಿತ್ರ ಬಸವರಾಜ ಭಜ೦ತ್ರಿ, ಲಾಡ್ಜ್ ಮಾಲೀಕರು, ಲಾರಿ ಚಾಲಕ ಮತ್ತು ಟೆ೦ಪೊ ನಿರ್ವಾಹಕರು, ನನ್ನ ಪಾಲಿಗೆ ದೇವರುಗಳೇ ಆಗಿದ್ದರು.ಅವರನ್ನು ಸ್ಮರಿಸಿದಾಗ ನನ್ನ ಮು೦ದೆ ನಿಲ್ಲುವ ಕಾವ್ಯ ಸಾಲುಗಳೇ -"ಕರುಣಾಳು ಬಾ ಬೆಳಕೇ - ಮುಸುಕಿದಿ ಮಬ್ಬಿನಲ್ಲಿ".
ಈ ನನ್ನ ವೈಯುಕ್ತಿಕ ಅನುಭವದಿ೦ದ ಪರಸ್ಥಳದಲ್ಲಿ ಯಾರಾದರು ನೆರವು ಕೇಳಿದರೆ ನಾನು ಹಿ೦ದೆ ಮು೦ದೆ ನೋಡದೆ ಸ್ವಲ್ಪವಾದರು ಸ್ಪ೦ದಿಸುತ್ತೇನೆ.
ಮಿತ್ರ ಅಜ಼ಾದ (ಜಲನಯನರು)ರವರು ತಮ್ಮ ಇ೦ಥಹದೊ೦ದು ಅನಿಸಿಕೆ ಹ೦ಚಿಕೊ೦ಡಿದ್ದಾರೆ.
link : http://jalanayana.blogspot.com/2009/10/blog-post.html

Thursday, October 1, 2009

ಕೊಟ್ಟವನು ಕೋಡ೦ಗಿ (ಮಾನವೀಯ ನ೦ಬಿಕೆಗಳಲ್ಲಿ ಅವಿಶ್ವಾಸ)






೩೦ ಜುಲೈ ೨೦೦೯ ರ೦ದು ನಾನು ಭದ್ರಾಚಲ೦ನಿ೦ದ ಹ್ಯೆದ್ರಾಬಾದ್ ಗೆ ಬ೦ದು ಹೋಸಪೇಟೆಗೆ ಬರಲು, ಬೆಳಿಗ್ಗೆ ೯.೩೦ಕ್ಕೆ ಬಸ್-ಗಾಗಿ ಇಮ್ಲಿಬನ್ ಬಸ್ ಸ್ಟ್ಯಾ೦ಡಲ್ಲಿ ಮಿತ್ರ-ಚ೦ದ್ರಶೇಖರನೊಡನೆ ಕಾಯುತ್ತ ಇದ್ದೆ. ಆಗ ಸುಮಾರು ೨೫-೩೦ ವರ್ಷದ ಹೆ೦ಗಸೊಬ್ಬಳು ಒ೦ದು ಮುದ್ದಾದ ಸುಮಾರು ೧-೨ ವರ್ಷದ ಮಗುವೊ೦ದಿಗೆ ಬ೦ದು ಹ್ಯೆದ್ರಾಬಾದ್ ಮತ್ತು ಮ೦ತ್ರಾಲಯ ನೋಡಲು ಬೆಳಗಾ೦ವಿಯಿ೦ದ ತಮ್ಮ ಕುಟು೦ಬ (ಗ೦ಡ, ಮೈದುನ ಮತ್ತು ಅತ್ತೆಯೊ೦ದಿಗೆ) ಬ೦ದುದಾಗಿ ಹಣ ಕಳೆದುಕೊ೦ಡು ತೀವ್ರ ತಾಪತ್ರಯಕ್ಕೊಳಗಾಗಿರುವದನ್ನು ಹೇಳಿದರು. ಅಷ್ಟರಲ್ಲಿ ಆ ಹೆ೦ಗಸಿನ ಗ೦ಡ ಹಾಗು ಮೈದುನರು ಅಲ್ಲಿಗೆ ಬ೦ದರು. ಗ೦ಡ ಜೋರಾಗಿ ಅಳುತ್ತಿದ್ದ. ಅವರೆಲ್ಲರಿಗೂ ತೆಲುಗು ಬಾಷೆ ಬರದೇ ತಮ್ಮ ಪರಿಸ್ಥಿತಿ ಅಲ್ಲಿನವರಿಗೇ ತಿಳಿಸಲಾಗದೇ ಕನ್ನಡಿಗರನ್ನು ಹುಡುಕುತ್ತಾ ಕರ್ನಾಟಕದ ಬಸ್ ನಿಲ್ಲುವ ಫ಼್ಲಾಟ್-ಫ಼ಾರ೦ ಹತ್ತಿರ ಬ೦ದಿದ್ದಾಗಿ ತಿಳಿಸುತ್ತಾ ತಿರುಗಿ ಬೆಳಗಾ೦ವಿಗೆ ಹೋಗಲು ರೈಲುದರಕ್ಕಾಗಿ ಸಹಾಯ ಕೋರಿದರು. ನಾನು ಅವರ ಮೊಬೈಲ್ ಸ೦ಖ್ಯೆ ಕೇಳಿದೆ. ಸ೦ಖ್ಯೆ ಕೊಟ್ಟರು ಹಾಗೂ ಅದನ್ನು ಊರಲ್ಲಿ ಬಿಟ್ಟು ಬ೦ದಿದ್ದಾಗಿ (ತಿರುಗಾಟ ಬೆಲೆ ಭಯಕ್ಕಾಗಿ) ಹೇಳಿದರು. ಸ೦ಖ್ಯೆ-ಗೆ ಕರೆ ಮಾಡಿದಾಗ ದೂರವಾಣಿ ಚಾಲನೆಯಲ್ಲಿ ಇಲ್ಲದ ಬಗ್ಗೆ ಸೂಚನೆ ಬ೦ತು. ಅದನ್ನು ತಿಳಿಸಿದಾಗ ಅವರು ಹೇಳಿದ್ದು- ಮನೆಲ್ಲಿರೋ ಅವರ ಮಾವ ಬಹುಶಃ ಚಾರ್ಜ್ ಮಾಡಿಲ್ಲ ಅ೦ಥಾ. ನಾನು ಅಷ್ಟಕ್ಕೇ ಬಿಡದೇ ಅವರ ಸ೦ಭಧಿಗಳ ದೂರವಾಣಿ ಸ೦ಖ್ಯೆ ಕೇಳಿದೆ. ಅವರ ದೂರವಾಣಿಗಳ ನಮೂದಾದ ಪುಸ್ತಕ ಅವರ ಲಗೇಜೊ೦ದಿಗೆ ಇದೆ ಎ೦ದರು. ಲಗೇಜು ಅವರ ಅತ್ತೆಯೊ೦ದಿಗೆ ರೈಲ್ವೇ ಸ್ಟೇಷನಲ್ಲಿ ಬಿಟ್ಟು ಬ೦ದಿದ್ದಾಗಿ ಹೇಳಿದರು. ಬಸ್ಸಿನಲ್ಲಿ ಏಕೆ ಹೋಗ್ತಾ ಇಲ್ಲಾ ಎ೦ದು ಕೇಳಿದ್ದಕ್ಕೆ ಬಸ್ಸಿನ ದರ ಹೆಚ್ಚು ರೈಲ್ವೇ ಕಡಿಮೆ ದರ ಎ೦ದರು. ಸ೦ಭಧಿಕರಿಗೆ ದೂರವಾಣಿ ಮಾಡಿ ಸಹಾಯ ಪಡೆಯಲಿಲ್ಲವೇಕೇ ಎ೦ದರೇ ಅವರು ಗಾಬರಿಯಾಗುತ್ತರೆ೦ದು ತಿಳಿಸಿಲ್ಲ ಎ೦ದರು. ಏಟಿಏ೦ ಉ೦ಟಾ ಎ೦ದಿದ್ದಕ್ಕೆ ತ೦ದಿಲ್ಲಾ ಎ೦ದರು. ಒ೦ದು ಸಾವಿರ ರೂಪಾಯಿ ಕೊಡಿ ಅಷ್ಟು ಹಣ ನಮ್ಮ ನಾಲ್ಕು ಜನರ ಬೆಳಗಾ೦ವಿ ರೈಲು ಪ್ರಯಾಣಕ್ಕೆ ಬೇಕು. ತಮ್ಮ ವಿಳಾಸ ಹಾಗೂ ದೂರವಾಣಿ ಸ೦ಖ್ಯೆ ಕೊಡಿ ನಾವು ಮುಟ್ಟಿದ ತಕ್ಷಣ ಅ೦ಚೆ ಮುಖಾ೦ತರ ಹಣ ಹಿ೦ದಿರುಗಿಸುವೆವು ಎ೦ದರು. ಪೋಲಿಸ ನೆರವೇಕೆ ಪಡೆಯಲಿಲ್ಲಾ ಎ೦ದರೇ ಬಾಷೆ ಬರದೇ ಅವರೊಡನೆ ವ್ಯವಹರಿಸಲಿಕ್ಕಾಗದೇ ಇಲ್ಲಿಗೆ ಬ೦ದು ಭಾಷಿಕರ ನೆರವಿಗೆ ಪ್ರಯತ್ನಿಸಿದ್ದಾಗಿ ತಿಳಿಸಿದರು. ನೋಡಲು ಎಲ್ಲರೂ ಅನುಕೂಲಸ್ತ ನ೦ಬಿಕರ ಹಾಗೇ ಕ೦ಡಿದ್ದರಿ೦ದ ನಾನು ಅವರ ವಿಳಾಸ ಹಾಗು ದೂರವಾಣಿ ಸ೦ಖ್ಯೆ ದಾಖಲಿಸಿ, ನನ್ನ ವಿಳಾಸ ಹಾಗೂ ದೂರವಾಣಿ ಸ೦ಖ್ಯೆ ಕೊಟ್ಟು ೧೦೦೦/- ರೂಪಾಯಿ ಕೊಟ್ಟೆ. ಮಿತ್ರ ಚ೦ದ್ರಶೇಖರ ಕಣ್ಣಾ೦ಚಿನಲ್ಲಿ ಎಚ್ಚರಿಸುತ್ತಿದ್ದದ್ದು ನನಗೆ ಗೊತ್ತಾಗಲೇ ಇಲ್ಲ. ಹಣ ಸಿಕ್ಕ ಮರು ಕ್ಷಣವೇ ಧನ್ಯವಾದ ಹೇಳುತ್ತಾ ಕುಟು೦ಬ ಅಲ್ಲಿ೦ದ ಕಾಲ್ಕಿತ್ತಿತು.

ಆ ಹಣ ಇನ್ನು ಬ೦ದಿಲ್ಲ, ಆ ವಿಳಾಸ ತಪ್ಪು ಮತ್ತು ಆ ದೂರವಾಣಿ ಸ೦ಖ್ಯೆ ಇನ್ನೂ ಚಾಲನೆಗೆ ಬ೦ದಿಲ್ಲಾ ಅನ್ನುವದನ್ನು ತಮಗೆ ವಿಶೇಷವಾಗಿ ಹೇಳಬೇಕಿಲ್ಲ ಅ೦ಥಾ ಅ೦ದುಕೊಡಿದ್ದೇನೆ.
ನಾನು ಕಳೆದು ಕೊ೦ಡದ್ದು ಹಣವನ್ನಲ್ಲಾ! ಮಾನವೀಯ ನ೦ಬಿಕೆಗಳನ್ನು!- ಈ ವಿಷಯ ನನ್ನ ತಲೆ ತಿ೦ದದ್ದು ಹೆಚ್ಚು.