Showing posts with label ಪ್ರವಾಸ. Show all posts
Showing posts with label ಪ್ರವಾಸ. Show all posts

Tuesday, August 10, 2010

ನೊರೆಹಾಲಿನ ಸಮುದ್ರೋಪಾದಿ ಜಲಪಾತ (ದೂದಸಾಗರ ಫಾಲ್ಸ್)

ಅದೊಂದು ರುದ್ರ ರಮಣೀಯ ಕಣ್ನೋಟ!
ಕರ್ನಾಟಕ -ಗೋವಾ ಸರಹದ್ದಿನಲ್ಲಿ ಗೋವಾ ರಾಜ್ಯದಲ್ಲಿ, ಸಹ್ಯಾದ್ರಿ ಬೆಟ್ಟದ ತಪ್ಪಲಿನಲ್ಲಿ ಮಾಂಡೋವಿ ನದಿಯು ಸುಮಾರು ೩೦೦ ಮೀಟರ ಎತ್ತರದಿಂದ ಸರಿಸುಮಾರು ೩೦-೩೫ ಮೀಟರ್ ಅಗಲದಲ್ಲಿ , ಗ್ರಾನೈಟ್- ನಿಸ್ಸ್ ಎಂಬ ಹೆಬ್ಬಂಡೆಯ ಮೇಲಿಂದ ಸರಸರನೆ, ನೊರೆನೊರೆಯಾಗಿ, ಧುಮ್ಮಿಕ್ಕುತ್ತಾ, ಅಗಲವನ್ನು ಕವಲುಗಳನ್ನಾಗಿ ಹೆಚ್ಚಿಸುತ್ತಾ, ಇಳಿದಿಳಿದಂತೆ, ಮತ್ತೆ ಒಗ್ಗೂಡುತ್ತಾ, ವಜ್ರಾಕೃತಿಯಲ್ಲಿ, ಹಾಲಿನ ನೊರೆಯಂತೆ, ಸಾಗರೋಪಾದಿಯಲ್ಲಿ, ಧುಮ್ಮಿಕ್ಕಿ ಹರಿವ, ನಯನ ಮನೋಹರ ನೋಟ ಎಂತಹ ಅರಸಿಕನ ಮೈಯನ್ನು ಜುಮ್ಮೆನ್ನಿಸದೆ ಬಿಡದು!

ಅದಕೆಂದೇ ಇದನ್ನು ದೂದಸಾಗರ ಜಲಪಾತ ಎಂದು ಇದನ್ನು ಕರೆಯುವದು.

ಇದಕ್ಕೊಂದು ಕಥೆಯು ಇದೆ. ನದಿ ತಟದ ಹತ್ತಿರದ ಅರಮನೆಯಲ್ಲಿದ್ದ ರಾಜಕುಮಾರಿಯೋರ್ವಳು ನಿತ್ಯ ಈ ನದಿಯಲ್ಲಿ ಸ್ನಾನ ಮಾಡುತ್ತಿದ್ದಳಂತೆ. ಒಂದು ದಿನ ಅವಳು ಸ್ನಾನ ಮಾಡುತ್ತಿದ್ದಾಗ ರಾಜಕುಮಾರನೋರ್ವನು ಅಲ್ಲಿಗೆ ಬಂದಾಗ ನಾಚಿದ ನಗ್ನ ರಾಜಕುಮಾರಿ ಅಲ್ಲಿಯೇ ಇದ್ದ ಪಾತ್ರೆಯಲ್ಲಿನ ಹಾಲನ್ನು ಮೈ ಮೇಲೆ ಸುರಿದುಕೊಂಡಳಂತೆ ನಗ್ನತೆ ಮುಚ್ಚಲು. ಹಾಲು ಮೈ ಮೇಲಿಂದ ಹರಿದು ಹೋಗುವಷ್ಟರಲ್ಲಿ ಸಖಿಯರು ಉಡುಗೆ ತೊಡಿಸಿದ್ದರು. ಆ ಹರಿದ ಹಾಲು ನದಿ ಸೇರಿ ನೀರು ಹಾಲಾಯಿತಂತೆ. ಇದೊಂದು ಸುಮ್ಮನೆ ಪೂರಕ ಕಥೆ.

ಆದರೆ ಆ ಜಲಪಾತ ನೋಡಿದಾಗ ನೀರು ಕಲ್ಲಿನ ಮೈಯಲ್ಲಿ ನೊರೆನೊರೆಯಾಗಿ ಸರಿವಾಗ, ಅಚ್ಚ ಬಿಳುಪಿನ ರಾಶಿ ಮುತ್ತಂತೆ ಹರವಿದಾಗ, ಈ ದಂತ ಕತೆ ನಿಜವಿರಬಹುದೇನೋ ಎಂದು ಯಾರಿಗೂ ಅನ್ನಿಸದೆ ಇರದು!

ಈ ಜಲಪಾತ ನೋಡಲು ಹುಬ್ಬಳ್ಳಿಯ ಅಥವಾ ಬೆಳಗಾವಿಯಿಂದ ಗೋವೆಗೆ ಹೋಗುವ ರೈಲಿನ ಮಾರ್ಗ -ತಲುಪಲು ಉತ್ತಮ ವ್ಯವಸ್ಥೆ. ಎಲ್ಲಾ ರೈಲುಗಳು ದೂದಸಾಗರ ನಿಲ್ದಾಣದಲ್ಲಿ ನಿಲ್ಲುತ್ತವೆ. ನಿಲ್ದಾಣದ ಪಕ್ಕವೇ ಜಲಪಾತ. ಬಸ್ಸಿನಲ್ಲಿ ಕೊಲೆಮ್-ಗೆ ಬಂದು ಅಲ್ಲಿಂದ ಜೀಪ ಅಥವಾ ಕಾರಿನಲ್ಲಿ ಇಲ್ಲಿಗೆ ಬರಬಹುದು. ಆದರೆ ರೈಲಿನ ಮಾರ್ಗ ಉತ್ತಮ.
ಟ್ಯಾಕ್ಷಿಯಲ್ಲಿ ಅಥವಾ ಸ್ವಂತ ಕಾರಿನಲ್ಲಿ ಬರುವ ಜನ ಕರ್ನಾಟಕದ ಅನಮೋಡ/ಕ್ಯಾಸಲ್ ರಾಕ್ ಅಥವಾ ಗೋವೆಯ ಮೊಲ್ಲೇಮ್ ನಿಂದ ಪಯಣಿಸಬಹುದು.

ಕ್ಯಾಸಲ್ ರಾಕ್ ನಿಲ್ದಾಣಕ್ಕೆ ಬಂದು, ಅಲ್ಲಿಂದ ರೈಲಿನಲ್ಲಿ ದೂದಸಾಗರಕ್ಕೆ ಪಯಣಿಸಬಹುದು. ರೈಲಿನಲ್ಲಿನ ಪಯಣದಲ್ಲಿ, ನೀವು ಇದನ್ನು ಪಕ್ಕದಲ್ಲಿಯೇ ನೋಡಿ ಅನುಭವಿಸಬಹುದು. ಹಾಗೆ ನಾನು ಹೋಗುತ್ತಿರುವ ರೈಲಿನಿಂದ ತೆಗೆದ ಚಿತ್ರಗಳು ಇಲ್ಲಿವೆ.
ಇಲ್ಲಿನ ನೀರಿನಲ್ಲಿ ಸ್ನಾನ ಮಾಡಬಹುದು ಹಾಗೂ ಜಲಕ್ರೀಡೆಯಾಡಬಹುದು. ಅದಕ್ಕಾಗಿ ಜಲಪಾತದ ಸ್ತರದಲ್ಲಿ ೩-೪ ಸ್ಥಳಗಳಲ್ಲಿ ಮಡುವಿದೆ.
ಸಹ್ಯಾದ್ರಿಯ ಸುತ್ತಲಿನ ಹಸಿರು, ಇನ್ನು ಹತ್ತು ಇಪ್ಪತ್ತು ತೊರೆಗಳು, ಕಣಿವೆಗಳು, ಸುರಂಗಗಳು, ನಾನಾಜಾತಿಯ ಗಿಡ-ಮರ-ವೃಕ್ಷಗಳು ಮನಸ್ಸನ್ನ ಸೂರೆಗೊಳಿಸುತ್ತವೆ. ಸಾರಂಗ, ಜಿಂಕೆ, ಕಾಡುಕೋಣ, ಕಾಳಿಂಗ, ಮೊಲ, ನವಿಲು, ನರಿ, ಇಲ್ಲಿನ ಅರಣ್ಯದಲ್ಲಿ ಸಾಮಾನ್ಯವಾಗಿ ಕಾಣುವ ಪ್ರಾಣಿಗಳು.

ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಲ್ಪ ತಿರುಗಾಡಿದರೆ ಕಾಡುಪ್ರಾಣಿಗಳನ್ನು ನೋಡಬಹುದು. ಚಾರಣಿಗರು ಕ್ಯಾಸಲ ರಾಕ್-ನಿಂದ ರೈಲು ದಾರಿಯಲ್ಲಿ ನಡೆದು ಇಲ್ಲಿಗೆ ಬಂದರೆ (ಸುಮಾರು ೮-೧೦ಕಿಮಿ) ಪ್ರಕೃತಿಯ ರಮ್ಯತೆಯೊಂದಿಗೆ ಜಲಪಾತದ ಸೊಬಗನ್ನು ಸವಿಯಬಹುದು.
ನಾನು ವಿಧ್ಯಾರ್ಥಿಯಾಗಿದ್ದಾಗ ಭೂಗರ್ಭ ಅಧ್ಯಯನದ ನಿಮಿತ್ತ ಸುಮಾರು ಒಂದು ತಿಂಗಳ ಕಾಲ ಈ ಬೆಟ್ಟದಲ್ಲಿ ಸರ್ವೇಕ್ಷಣೆ ಮಾಡಿದ ಮಧುರ ನೆನಪು ನನ್ನಲ್ಲಿ ಸದಾ ಹಸಿರು.

ಜಲಪಾತದ ಮೇಲ್ತುದಿ


ಜಲಪಾತದ ಮೇಲ್ತುದಿಯಿಂದ ಮಧ್ಯದ ಹಂತ (ರೈಲ್ವೆ ಹಳಿಯವರೆಗಿನ ನೋಟ)

ಮತ್ತೊಂದು ಅದೇ ನೋಟ

ಇನ್ನೊಂದು ಅದೇ ನೋಟ

ರೈಲ್ವೆ ದಾರಿಯಲ್ಲಿ ದೂದಸಾಗರ್ ಜಲಪಾತದ ಪಕ್ಕದಿಂದ ಹರಿದು ಆಮೇಲೆ ತಿರುಗಿ ಎದುರಿನ ಬೆಟ್ಟದಲ್ಲಿ ರೈಲು ಬರುವಾಗ (ಗೋವೆ ಕಡೆ ಮುಖಮಾಡಿ ಪಯಣಿಸುವಾಗ) ಮತ್ತೆ ಜಲಪಾತದ ಪೂರ್ಣ ನೋಟ ದೂರದಿಂದ ಲಭ್ಯ . ನಡುವೆ ರೈಲ್ವೆ ಹಳಿಯ ಸೇತುವೆ ಕಾಣಬಹುದು. ಚಿತ್ರದ ಮೇಲೆ ಕ್ಲಿಕ್ಕಿಸಿ ದೊಡ್ಡದಾಗಿ ಮಾಡಿ ನೋಡಿದರೇ ರೈಲಿನ ಸೇತುವೆ ಸುಂದರವಾಗಿ ಕಾಣುತ್ತೆ.
ಅದೇ ಚಿತ್ರ ಮತ್ತೊಂದು ಕೋನದಲ್ಲಿ

Monday, October 26, 2009

ಮಾಗೋಡು ಜಲಪಾತ-ಮಲೆನಾಡಿನ ಕಣ್ಣಿಗೇ ಬೀಳದ ಅಪರೂಪದ ಸು೦ದರಿ














ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿ೦ದ ಅ೦ಕೋಲಾಕ್ಕೆ ರಾ.ಹೆ.೬೩ ರಲ್ಲಿ ಹೋಗುವಾಗ, ಯಲ್ಲಾಪುರ ಬಿಟ್ಟು ೩ ಕಿ.ಮಿ. ಕ್ರಮಿಸಿದ ನ೦ತರ ಎಡಬದಿಗೊ೦ದು ಮಾಗೋಡಿಗೆ ಹೊರಳು ರಸ್ತೆ ಬರುತ್ತದೆ. ಅಲ್ಲಿ ಮಾಗೋಡು ಜಲಪಾತದ ದಾರಿ ಎ೦ಬ ಪಲಕವು ಕಾಣುತ್ತೆ. ಸಣ್ಣ ಕಿರಿದಾದ ಅದರೆ ಟಾರ್ ಮಾಡಿದ ಒಳ್ಳೇ ರಸ್ತೆ. ದಾರಿಯುದ್ದಕ್ಕೂ ಹಸಿರಿನ ಬೆಡಗು ಹಾಗೂ ಪ್ರತಿ ತಿರುವಿನಲ್ಲೂ ರಸ್ತೆಯ, ಕವಲು ರಸ್ತೆಯಲ್ಲಿ ಸ್ಫಷ್ಟವಾದ ದಾರಿಸೂಚಿ ಫಲಕಗಳು. ೧೫ ಕಿ.ಮಿ, ಸಾಗಿದ ನ೦ತರ ಆ ಹಸಿರಿನ ಮಡಿಲೊಳು ಸುತ್ತ ಬೆಟ್ಟದ ನಡುವೆ ಒ೦ದು ಪ್ರಪಾತ ಹಾಗೂ ಒ೦ದು ಮೂಲೆಯಲ್ಲಿ ಕಡಿದಾದ ಕಣಿವೆ. ಈ ಪ್ರಪಾತದಲ್ಲಿ ಎರಡು ಭಾಗಗಳಲ್ಲಿ ಬೇಡ್ತಿ ನದಿ ಧಿಮ್ಮಿಕ್ಕುವ ನೈಸರ್ಗಿಕ ಸೋಜಿಗವೇ ಮಾಗೋಡು ಜಲಪಾತ. ಈ ಬೇಡ್ತಿ ನದಿಯೇ ಮು೦ದೆ ಸಹ್ಯಾದ್ರಿ ಇಳಿದು ಕರಾವಳಿಯಲ್ಲಿ ಗ೦ಗಾವಳಿ ನದಿಯಾಗಿ ಹರಿದು ಸಮುದ್ರ ಸೇರುತ್ತದೆ.
ಕಡಿದಾದ ಸುಮಾರು ೨೦೦-೨೫೦ ಮೀ., ಎತ್ತರದಿ೦ದಾದ ಈ ಪ್ರಪಾತವನ್ನು ಕೇವಲ ನದಿ ಪಾತ್ರದಿ೦ದ ಇಳಿಯಬಹುದು ಇಲ್ಲವೇ ಕೆಳಗಿನಿ೦ದ ಮೇಲೆ ಹತ್ತುತ್ತಾ ನದಿ ಜಲಪಾತವಾಗಿ ಧುಮ್ಮಿಕ್ಕಿ, ಕಡಿದಾದ ಕಣಿವೆಯಲ್ಲಿ ಬಸವಳಿದು ಹೋಗುವ ಪಾತ್ರದಿ೦ದ ತಲುಪಬಹುದು. ದೂರ ನಿ೦ತು ನೋಡಿದರೇ ಸಾಕೆನ್ನುವವರು ನಾನು ಮೇಲೆ ಹೇಳಿದ ಹಾದಿಯಲ್ಲಿ ಹೋದರೆ ಅರಣ್ಯ ಇಲಾಖೆ ಮಾಡಿರುವ ಎದುರು ಗುಡ್ಡದ ಪ್ರವಾಸಿ ತಾಣದಿ೦ದ ನೋಡಬಹುದು.
ಪ್ರವಾಸಿ ತಾಣವನ್ನು ತು೦ಬಾ ಚೆನ್ನಾಗಿ ಅರಣ್ಯ ಇಲಾಖೆ ನಿರ್ವಹಿಸಿದೆ. ಸು೦ದರ ತೋಟಗಳನ್ನು, ನೀರಿನ ವ್ಯವಸ್ಥೆಯನ್ನು ಮಾಡಿದೆ. ನಿ೦ತು, ಕುಳಿತು ನೋಡಲು ಅಲ್ಲಿ ಬೆ೦ಚಗಳನ್ನು, ನಿಲುವುತಾಣಗಳನ್ನು ನಿರ್ಮಿಸಿದೆ. ಪರಿಸರ ತು೦ಬಾ ಸ್ವಚ್ಚವಾಗಿದೆ( ಬಹುಶಃ ಕಡಿಮೆ ಪ್ರವಾಸಿಗರಿ೦ದಲೂ ಇರಬಹುದು!). ಆದರೆ ಈ ಭಾಗದಿ೦ದ ಪ್ರಪಾತಕ್ಕೆ ಇಳಿಯಲು ಅಸಾಧ್ಯ. ಆದರೆ ರಮಣೀಯ ನಯನ ಮನೋಹರ ಜಲಪಾತವನ್ನು ಮನದಣಿಯೇ ವೀಕ್ಷಿಸಬಹುದು. ೧೯೮೭ ರಲ್ಲಿ ಈ ಜಲಪಾತ ನೋಡಲು ನಾವು ಯಲ್ಲಾಪುರದಿ೦ದ ನದಿ ಪಾತ್ರದಿ೦ದ ನಡೆದು ಬ೦ದಿದ್ದೆವು. ಆಗ ನಿರ್ಜನ ಕಾಡಲ್ಲಿ ಭಯ ಹುಟ್ಟಿತ್ತು . ಆದರೆ ಜಲಪಾತ ತಲುಪಿದಾಗ ಭಯ ಮರೆಯಾಗಿ ಭಕ್ತಿ ಮೆರೆದಿತ್ತು. ಮೊನ್ನೆ ಗೋವಾದಿ೦ದ ಆ ದಾರಿಯಲ್ಲಿ ಬರುವಾಗ ಹಾದಿ ಫಲಕ್ ನೋಡಿ ಹದಿನೈದು ಕಿ.ಮಿ. ಅಲ್ಲವಾ ಇನ್ನೊಮ್ಮೆ ನೋಡೋಣ ಎ೦ದುಕೊ೦ಡು ಹೊರಟೆವು-ಆ ಹಳೆಯ ನೆನಪನ್ನು ಕೆದಕಿ. ಕೆಲವೇ ದಿನಗಳ ಹಿ೦ದೆ ಮಳೆಯಾಗಿದ್ದರಿ೦ದ ನದಿಯು ತು೦ಬಿತ್ತು. ರಮಣೀಯ ಜಲಪಾತದ ವೀಕ್ಷಣೆಯು ಆಯಿತು.
ಹುಬ್ಬಳ್ಳಿಯಿ೦ದ ಯಲ್ಲಾಪುರ ಕೇವಲ ೭೦ಕಿ.ಮಿ. ಅಲ್ಲಿ೦ದ ಜಲಪಾತ ೨೦ಕಿ.ಮಿ.
ಗದ್ದಲವಿಲ್ಲದ ಈ ಜಲಪಾತ ಮಲೆನಾಡಿನ ಕಣ್ಣಿಗೇ ಬೀಳದ ಅಪರೂಪದ ಸು೦ದರಿ. ಮಳೆಗಾಲದಲ್ಲಿನ ಇಲ್ಲಿನ ಪ್ರವಾಸ ಮುದ ಕೊಡುತ್ತದೆ.
ನನ್ನ ಕ್ಯಾಮೇರಾ ಇಲ್ಲದರಿ೦ದ ಮೊಬ್ಯೈಲ್ನಲ್ಲಿ ಕ್ಲಿಕ್ಕಿಸಿದ ಛಾಯಚಿತ್ರಗಳಿಲ್ಲಿವೆ.೧. ಮೊದಲ ಚಿತ್ರ ಅರಣ್ಯ ಇಲಾಖೆ ಕಛೇರಿ
೨ ಮತ್ತು ೩ ನೇ ಚಿತ್ರಗಳು ಜಲಪಾತವಾಗಿ ಧುಮ್ಮಿಕ್ಕಿ ಬಸವಳಿದ ನದಿ ಕಡಿದಾದ ಕಣಿವೆಯಲ್ಲಿ ವಿಶ್ರಾ೦ತಿ ತೆಗೆಯುತ್ತಾ ಸಾಗುತ್ತಿರುವದು. ನ೦ತರದ ಚಿತ್ರಗಳು ಜಲಪಾತವಾಗಿ ಧುಮ್ಮಿಕ್ಕುವ ನದಿಯ ಸೊಬಗಿನ ಸಿರಿಯನ್ನು ತೋರುವವು.