Thursday, June 17, 2021

ಸಾಸಿವೆ ತಂದವಳು -ಓದಿನ ಮೆಲುಕು


 

ಹಲವಾರು ಸಹೃದಯರ ಸೂಚನೆ, ಉಲ್ಲೇಖ ಮತ್ತು ಪ್ರಶಂಶೆಯ ನುಡಿಗಳಿಂದ ಪ್ರೇರಿತನಾಗಿ ಶ್ರೀಮತಿ ಭಾರತಿಯವರು ಬರೆದ "ಸಾಸಿವೆ ತಂದವಳು" ಪುಸ್ತಕವನ್ನ  ಓದಲು ತರಿಸಿದೆ.  ಪುಸ್ತಕ ತರಿಸಿ ಸುಮಾರು ಒಂದು ವರ್ಷವೇ ಕಳೆದರೂ  ಓದಲಾಗಿರಲಿಲ್ಲ.  ಹಲವು ವೈಯುಕ್ತಿಕ ಕೆಲಸ ಕಾರ್ಯ,  ಕೆಲವು ದಿನ ಮಿತ್ರರೊಬ್ಬರ ತಂದೆಗೆ  ಓದಲು ಕೊಟ್ಟಿದ್ದು, ಸಮಯ ಸಿಕ್ಕಾಗ ಓದಲು ಹಿಡಿದಾಗ ಹಿನ್ನುಡಿ, ಮುನ್ನುಡಿ , ಲೇಖಕರ ಮಾತು ಮತ್ತು  ಅರ್ಪಣೆಗಳನ್ನೆಲ್ಲಾ ಓದಿಯೇ ಕುಖ್ಯಾ ಕಥಾಧಾರೆಗೆ ಮುಂದುವರೆಯುವ ಅಭ್ಯಾಸದ  ನನಗೆ, ಹೀಗೆ ಹಲವಾರು ಕಾರಣಗಳಿಂದ  ಮುಖ್ಯ ಅನುಭವ ಕಥಾನಕಕ್ಕೆ ಪ್ರವೇಶ ಮಾಡಲಾಗಿರಲಿಲ್ಲ. ನೇಮಿಚಂದ್ರರ ನಲ್ಮೆಯ ಮುನ್ನುಡಿ ಮುನ್ನುಡಿಯಾಗಿರದೇ  ಅನುಭವ ಕಥಾನಕದ  ಕಿರುರೂಪವಾಗಿದ್ದು,ಒಂದು ರೀತಿಯಲ್ಲಿ ಮುಖ್ಯ ಕಥೆಯ ಸಂಹವನದ ಕುತೂಹಲವನ್ನ ಹಣಿಯುತ್ತಿದ್ದು ಓದಿನ ಓಟಕ್ಕೆ ಅಡ್ಡಿಯಾದ ಇನ್ನೊಂದು ಕಾರಣ. 

ಕಥೆಯ ಮುಖಚಿತ್ರವೇ ಕಥೆಯ ಮುಖ್ಯ ತಿರುಳನ್ನು ಹೇಳುತ್ತದೆ. ಮಂಡಿಯೂರಿ ತಲೆಯಲ್ಲಿ ಕೂದಲಿಲ್ಲದ (ಕ್ಯಾನ್ಸರ್ ಪೀಡನೆಯ ರೂಪಕ)  ದಯನೀಯ ದೇಹವನ್ನು ಅದೇ ದೇಹದ ನಿಂತ ರೂಪಕ ದೇಹವೊಂದು ತಬ್ಬಿ ಸಾಂತ್ವನ ಗೊಳಿಸುತ್ತಿರುವ ಚಿತ್ರ. ಕಥೆಯಲ್ಲಿಯೂ ಹೇಳ ಹೊರಟಿದ್ದು  ಕ್ಯಾನ್ಸರ್ ಗೆ ತುತ್ತಾಗಿ   ಶರೀರವೇ ಯಾತನಾಮಯವಾಗಿರುವಾಗ ಸ್ ಆತ್ಮ ಸ್ಥೈರ್ಯದಲ್ಲಿ ಒಳದನಿಯೆ ಶಕ್ತಿಯಾಗಿ ಸಂತೈಸಿ ಎದ್ದು ನಿಲ್ಲಿಸುವ ಛಲವಾಗಿ, ಹೋರಾಟದ ಶಕ್ತಿಯಾಗಬೇಕಾದ  ಸೂಕ್ತ ರೂಪಕ ಚಿತ್ರ. ಕ್ಯಾನ್ಸರ್  ರೋಗಕ್ಕೆ  ತುತ್ತಾಗಿ ಸಾವು-ಬದುಕಿನ    ಹೋರಾಟದ ನಡುವೆ, ಆತ್ಮ ಸ್ಥೈರ್ಯದಿಂದ ಎದುರಿಸಿ ಎದ್ದು ನಿಲ್ಲುವ ಲೇಖಕಿಯ ಸ್ವಾನುಭವವೇ  ಕಥೆಯ ಹಂದರ. ಹಾಗಾಗಿ ಇದೊಂದು ವಾಸ್ತವಿಕ ಕಥನ.. 

ಈ ಕಥಾನಕದಲ್ಲಿ ಬದುಕನ್ನು ಬದುಕುವ ಬಗೆಯಲ್ಲಿನ, ಸಂಕಷ್ಟಗಳನ್ನು  ದಿಟ್ಟತನದಲ್ಲಿ  ಎದುರಿಸುವಲ್ಲಿನ ಮತ್ತು  "ಸಾವೇ ಇನ್ನು" ಎನ್ನುವ ರೋಗದೊಡನೆ ಸೆಣಸಾಡುವಲ್ಲಿನ, ಹೋರಾಟದಲ್ಲಿ ಆತ್ಮ ಸ್ಥೈರ್ಯ, ಮನದ ಗಟ್ಟಿಗಾರಿಕೆ, ಬದುಕನ್ನು ಪ್ರೀತಿಸುವಲ್ಲಿನ ಛಲ,  ಹೇಗೆ ಸಹಕಾರಿಯಾಗಬಲ್ಲದು ಎಂಬುದನ್ನು ಲೇಖಕಿ ಸರಳ ಮತ್ತು ಸುಂದರ  ನವಿರು ಹಾಸ್ಯಭರಿತ ಲಾಲಿತ್ಯದಲ್ಲಿ ತಮ್ಮ ಸ್ವಂತ ಅನುಭವಗಳನ್ನು ಹಿಡಿದಿಟ್ಟಿದ್ದು  ಓದುಗರಿಗೆ ಆಸಕ್ತಿದಾಯಕವೂ ಆಗಿ ಮುಂದೊಂದು ದಿನ ಇಂತಹ ಸಂದರ್ಭದಲ್ಲಿ  ಮುಂದುವರೆಯುವ ಆತ್ಮಸ್ಥೈರ್ಯವನ್ನು ನೀಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.  ಕ್ಯಾನ್ಸರ್ ಗೆ ತುತ್ತಾದ ಲೇಖಕಿಯ ಈ ಸ್ಫೂರ್ತಿದಾಯಕ  ಹೋರಾಟದ ಚಿತ್ರಣ ಕೇವಲ ಕ್ಯಾನ್ಸರ್ ರೋಗಿಗಳಿಗೆ ಅಷ್ಟೇ ಅಲ್ಲ  ಯಾವದೇ ಮಾರಣಾಂತಿಕ ರೋಗಗಳಿಗೆ ತುತ್ತಾದವರಿಗೆ ರೋಗಗಳನ್ನು  ಎದುರಿಸಿ,  ನಿಲುವ  ತಾಕತ್ತು ಮತ್ತು ಮೋನೋಸ್ಥೈರ್ಯ  ನೀಡುವಲ್ಲಿ ಮಹತ್ತ ಪಾತ್ರ ವಹಿಸುವಲ್ಲಿ ಯಾವದೇ ಶಂಕೆಯಿಲ್ಲ. 
ಆಪ್ತ ಭಾಷೆ,  ಸುತ್ತ ಮುತ್ತ ನಡೆಯುವ  ದೈನಂದಿಕ  ,ನೈಜ್ಯ ಜನರ ವರ್ತನೆ, ಅದರಿಂದಾದ  ತುಮುಲ,ಹೊರಬರುವ ಲೇಖಕಿಯ ಅಪರೂಪದ ಮನಸ್ಥಿತಿ, ಮತ್ತು ಎಲ್ಲವನ್ನು ಸಾಮಾನ್ಯ ಎಂದುಕೊಳ್ಳುವ ಪರಿ, ನಮಮ್ ಸುತ್ತಮುತ್ತಲಿನ ಜನರ ಮನಸ್ಥಿತಿ, ಸ್ಪಂದನೆ  ಮತ್ತು ಅವುಗಳಿಗೆ ಪ್ರತಿಯಾಗಿ ನಮ್ಮ ಭಾವನೆ ಎಲ್ಲವನ್ನು ಸೂಕ್ಷ್ಮವಾಗಿ ಹಿಡಿದಿಟ್ಟು ಬದುಕಲ್ಲಿ ಎದ್ದು ನಿಲ್ಲುವ ಛಲವನ್ನು ತುಂಬುವಲ್ಲಿ ಕಥಾನಕವು  ಒಂದು ಮನೋವಿಶ್ಲೇಷಣೆಯೂ ಸಹಾ ಆಗಿದೆ.   

ಇದನ್ನು ಓದಿ ಮುನ್ನುಡಿ ಬರೆಯಿರಿ ಎಂದರೆ,  ಕಥಾನಕ ಓದಿ, ಓದಿನಲ್ಲಿ ಎಷ್ಟೊಂದು ಪ್ರಭಾವವಿತರಾಗುತ್ತೇವೆಂದರೇ ಕಥೆಯ ಬಗ್ಗೆ ಹೇಳುವದಕ್ಕಿಂತಾ,  ಕಥೆಯನ್ನೇ  ಸಂಕ್ಷಿಪ್ತವಾಗಿ  ಹೇಳ  ಹೊರಡುತ್ತೇವೆ  ನೇಮಿಚಂದ್ರರ ತರಹ ಅಷ್ಟೊಂದು ಮಾಂತ್ರಿಕತೆಯ  ಭಾರತಿಯವರದ್ದು. 

ಬದುಕಿನಲ್ಲಿ ಧನಾತ್ಮಕ  ದೃಷ್ಟಿಕೋನಕ್ಕೆ,  ಕಷ್ಟಗಳಲ್ಲಿ ಎದ್ದು ನಿಲ್ಲುವ ಛಲ ದಲ್ಲಿ, ಕ್ಯಾನ್ಸರ್ ನಂತಾ ಮಾರಾಣಾಂತಿಕ ರೋಗಗಳನ್ನು ಎದುರುಸುವಲ್ಲಿ ತೊಡಗಬೇಕಾದ ಮನಸ್ಥಿತಿಗೆ, ಬದುಕನ್ನು ಎದುರಿಸುವ, ಮತ್ತು ಬದುಕಿನ ಸವಾಲುಗಳನ್ನು ಎದುರಿಸುವಲ್ಲಿ ನಮ್ಮ ಆತ್ಮಸ್ಥೈರ್ಯ, ಮನೋಭಾಳ ಬೆಳೆಸುವಲ್ಲಿ ಈ ಕೃತಿ ಮದ್ದಿನ   ಹಾಗೆ ಕೆಲಸ ಮಾಡುತ್ತದೆ. ಇಂದಿನ  ಸಾಂಕ್ರಾಮಿಕ ಕರೋನ ರೋಗ ಚಿಕಿತ್ಸೆಗಳನ್ನು ಎದುರಿಸುವಲ್ಲಿ  ಹಾಗೂ   ತಡೆಯುವಲ್ಲಿಯೂ,  ಮನಸ್ಥಿತಿಯನ್ನು ತಯಾರು ಮಾಡಲು ಈ  ಕಥೆಯ ಓದು ತಯಾರು ಮಾಡುತ್ತದೆ. 

ರೋಗಕ್ಕಿಂತಾ  ಅದರ  ಚಿಕಿತ್ಸೆ ವಿಧಾನಗಳೇ ಭಯಾನಕ  ಎಂದು ಕ್ಯಾನ್ಸರ್ ನ ಮೇಲಿನ ಟಿಪ್ಪಣೆ... ಇದು    ಕರೋನ ರೋಗದ ಚಿಕಿತ್ಸೆಗೂ ಹೀಗೆಯೇ ಇದೆ.   ಇಂತಹ   ಟಿಪ್ಪಣೆಗಳೇ  ರೋಗಿಗಳ  ಆತ್ಮಸ್ಥೈರ್ಯ ಉಡುಗಿಸಿ  ರೋಗದೊಡಗಿನ ಹೋರಾಟದಲ್ಲಿ  ಶಸ್ತ್ರ   ಕೆಳಹಾಕಿಸಿಬಿಡುವ  ಸಂಧರ್ಭಗಳೇ  ಹೆಚ್ಚು  ಸಂದರ್ಭದಲ್ಲಿ ಭಾರತಿಯವರ ಈ ಅನುಭವ ಕಥಾನಕ  ಕೆಲಸ ಮಾಡುತ್ತದೆ. 

ಇಂಥ ಒಂದು ಕೃತಿಗೆ  ಭಾರತಿಯವರಿಗೆ ಅಭಿನಂದನೆಗಳು. 

1 comment:

bharathi said...

ಸರ್ ನಿಮ್ಮ ಪ್ರೀತಿಯ ಬರಹಕ್ಕೆ ಥ್ಯಾಂಕ್ ಯೂ ❤❤
ತುಂಬ ಖುಷಿಯಾಯ್ತು ನಿಮಗೆ ಪುಸ್ತಕ ಇಷ್ಟವಾಗಿದ್ದಕ್ಕೆ 🙏🙏