Thursday, September 30, 2010

ಮಗುವಿನ ಅಳಲು


ಗತಿಸಿದ ನೆಚ್ಚಿನ ಅಜ್ಜ ಪಿಜ್ಜರ
ಹೆಸರ ಹಿಡಿದು
ನನ್ನ ಕೂಗಿ
ಲಲ್ಲೆಗರೆವ ಜನರೇ.....

ಮುದ್ದು, ಮೊದ್ದು,
ಪುಟ್ಟ, ಕಿಟ್ಟ,
ಕಳ್ಳ, ಮಳ್ಳ,
ತುಂಟ, ಎಂಬ ವಿಶೇಷಣದೀ
ಮುದ್ದುಗರೆವ ಜನರೇ.....

ಬಂಗಾರು, ಚಿನ್ನ,
ರನ್ನ, ರತುನ,
ಮುತ್ತು, ಹವಳ
ಎಂಬ ಅಮೂಲ್ಯಗಳ
ಹೆಸರಲ್ಲಿ ಮುದ್ದಿಸುವ ಜನರೇ....

ಎಲ್ಲ- ಏನೋ,
ಹೇಳಿ ಕರೆದರೇ
ಕತ್ತು ಎತ್ತಿ ನೋಡೋ
ಹವ್ಯಾಸಕ್ಕೆ
ನಾನು ಒಗ್ಗೋ ಮುನ್ನ
ನನಗೆ ನನ್ನದಾದ
ಒಂದು ಹೆಸರು ಇಟ್ಟು ಬಿಡಿ!