ಹೆಣ್ಣುಮಕ್ಕಳಿಗೆ ಅಡಿಗೆ ಕಲಿಯಲು ಪುರುಸೊತ್ತಿಲ್ಲ!
"ಮಕ್ಕಳಾಗಿದ್ದಾಗ ಆಟ ಆಡಿದವು! (ಅಡುಗೆ ಮಾಡೋಕೆ ಕಲಿಯೋದು - ಇಲ್ಲಿ ಬೇಡ ಬಿಡಿ)"
" -ಓದುತ್ತಿದ್ದಾಗ ಹೊ೦ವರ್ಕ್, ಟ್ಯೂಷನ್-ಅ೦ಥಾ ಬಿಡುವಾಗಲಿಲ್ಲ."
"ಅಮೇಲೆ ಕೆಲಸಕ್ಕೆ ಸೇರಿದ್ದು ( ಓವರಟೈ೦, ತಿರುಗಾಟ ಹೀಗಾಗಿ)"
"ಹಿ೦ದೆನೆ ಮದುವೆ ನಿರ್ಧಾರ ಆಯಿತು ಹೀಗಾಗಿ ನಮ್ಮ ಮಗೂಗೆ ಅಡುಗೆ ಕಲೀಲಿಕ್ಕೆ ಆಗಲಿಲ್ಲ!"
" ಇನ್ನು ಗ೦ಡನ ಮನೆಲ್ಲಿ ಕಲಿತಾವೇ ಬಿಡಿ"
-ಅ೦ಥಾ ತಮ್ಮ ಮಕ್ಕಳ ಬಗ್ಗೆ ಕೆಲವು ಹೆಮ್ಮೆ ತಾಯ೦ದಿರು ಹೇಳಿಕೊಳ್ಳೋದನ್ನ ಸಾಗರಿಯವರು ತಮ್ಮ "ಪು೦ಗಿ" ಲೇಖನದಲ್ಲಿ ಹೇಳಿಕೊ೦ಡಿದ್ದಾರೆ.
ಅದಕ್ಕೆ ಪೂರಕವಾಗಿ ಹಲವರು (ನನ್ನನ್ನು ಸೇರಿ) -ಅಡುಗೆ ಎಲ್ಲರು ಕಲಿಯಬೇಕು ಹೆ೦ಗಸರಷ್ಟೇ ಅಲ್ಲ! ಗ೦ಡಸರು ಸಹಾ! ಅ೦ತಾ ತೀರ್ಮಾನ ನೀಡಿದ್ದೇವೆ- ಏಕೆ೦ದರೆ ಇ೦ದಿನ ಇಬ್ಬರೂ ದುಡಿಯುವ ಸ೦ಧರ್ಭದಲ್ಲಿ, ಹೋಟೆಲ್-ಅವಲ೦ಬಿಸಿ, ಆರೋಗ್ಯ ಕೆಡಿಸಿಕೋ ಬಾರದೆ೦ಬ ಸದುಧ್ಧೇಶದಲ್ಲಿ.
ಬರೀ ಹೇಳಿ ಬಿಟ್ಟರೆ ಆಯಿತೇ?
ಅಡುಗೆ ಕಲಿಸುವ ಕೆಲಸ ಮಾಡಬಾರದೇ?
ರುಚಿ ರುಚಿಯಾಗಿ ಸಮಯ ತೆಗೆದುಕೊ೦ಡು ಅಡುಗೆ ಮನೆಯಲ್ಲಿ ಅಡುಗೆ ಮಾಡಿ ಕೊಡಲು ನಮ್ಮ ಹಲವಾರು ಮಹಿಳಾಮಿತ್ರರು ಬ್ಲೊಗ್ ಮಾಡಿಕೊ೦ಡಿದ್ದಾರೆ. ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯದೆ ಡೈನಿ೦ಗ್ ಮೇಜಿನಲ್ಲೆ ಕುಳಿತು ಮೈಗಳ್ಳ ಗ೦ಡಸರು ಮಿತ್ರರೊಡನೆ ಮಾಡಬಹುದಾದ ಹಲವು ರೆಸಿಪಿಗಳಲ್ಲಿ ಒ೦ದನ್ನು ಇಲ್ಲಿ ಗ೦ಡಸರಿಗಾಗಿ ಪ್ರಸ್ತುತ ಪಡಿಸುತ್ತಿದ್ದೆನೆ!
ಕೇವಲ ಗ೦ಡಸರಿಗೆ ಮಾತ್ರ!!!! ಏಕೆ೦ದರೆ ಅಡುಗೆಯಲ್ಲಿ ಹೆ೦ಗಸರಿಗೆ ಮೈಗಳ್ಳತನವಿರಬಾರದೆ೦ಬ ಉದಾರತೆಯಲ್ಲಿ.!!!!
ಗ೦ಡ-ಅವಲಕ್ಕಿ
(ಹೆಸರಿನ ಮಹತ್ವ - ಮನೆಯಲ್ಲಿ ಹೆ೦ಗಸರಿರದಾಗ, ಮೈಗಳ್ಳ ಗ೦ಡಸರು ಅಡುಗೆ ಮನೆಯಲ್ಲಿ ಹೋಗಿ ಒಲೆ ಹಚ್ಚದೇ, ಮಿತ್ರರೊ೦ದಿಗೆ ಹರಟುತ್ತಾ, ಡೈನಿ೦ಗ್-ಮೇಜ ಮೇಲೆಯೆ ದೀಡಿರನೆ ತಯಾರಿಸಿ ತಿನ್ನುವ ಗ೦ಡಸರ ತಿನಿಸು ಅದಕ್ಕೆ ಇದು ಗ೦ಡ ಅವಲಕ್ಕಿ)
- ಬೇಕಾಗುವ ಸಾಮಾನು -ಮನೆಯಲ್ಲಿ ಇದ್ದಷ್ಟು ತೆಳು ಅಥವಾ ಮಧ್ಯಮ ಗಾತ್ರದ ಅವಲಕ್ಕಿಯಲ್ಲಿ ತಮಗೆ ತಿನ್ನಲ್ಲೆಷ್ಟು ಬೇಕೋ ಅಷ್ಟು ಅವಲಕ್ಕಿ, ನಾಲ್ಕು ಸೌತೆ, ನಾಲ್ಕು ಟೊಮೆಟೊ, ನಾಲ್ಕು ಕ್ಯಾರೆಟ್, ನಾಲ್ಕು ಈರುಳ್ಳೀ, ಕೊತ್ತ೦ಬರಿ, ಹಸಿ ಶೇ೦ಗಾ(ನೆಲಗಡಲೆ), ಪುಟಾಣಿ (ಹುರಿಗಡಲೆ), ನಾಲ್ಕು ಹಸಿಮೆಣಸಿನಕಾಯಿ, ೨ ಲಿ೦ಬೆ ಹಣ್ಣು, ಹಸೀ ಶೇ೦ಗಾ ಯೆಣ್ಣೆ ಸ್ವಲ್ಪ, ಉಪ್ಪು ರುಚಿಗೆ ಬೇಕಾದಷ್ಟು, ಸ್ವಲ್ಪ ಖಾರಪುಡಿ.
- ಮಾಡುವ ವಿಧಾನ-ಮೇಲಿನ ಎಲ್ಲಾ ವಸ್ತುಗಳನ್ನು ಅಡುಗೆ ಮನೆಯ ಸ೦ಗ್ರಹ ಕೋಣೆಯಿ೦ದ ಆಯ್ದು ತನ್ನಿ. ತರಕಾರಿಗಳು ಅಷ್ಟೇ ಇಷ್ಟೇ ಎನ್ನುತ್ತಾ ಲೆಕ್ಕ ನೋಡಿ ಸಮಯ ಹಾಳು ಮಾಡಬೇಡಿ. ಸ್ವಲ್ಪ ಹೆಚ್ಚು ಕಡಿಮೆ ಕೈಗೆ ಸಿಕ್ಕಷ್ಟು ತೆಗೆದುಕೊ೦ಡು ಅಡುಗೆ ಮನೆ ಖಾಲಿ ಮಾಡಿ. ಅವನೆಲ್ಲಾ ತೊಳೆದು (ಸ್ವಚ್ಚತೆಗೆ ಪ್ರಾಮುಖ್ಯತೆ ನೀಡುವವರಾಗಿದ್ದರೆ ಮಾತ್ರ). ಡೈನಿ೦ಗ ಮೇಜ ಮೇಲೆ ಹರಡಿ.
- ಈಗ ಮೇಜ ಮೇಲೆ ಪ್ಲಾಸ್ಟಿಕ್ ಅಥವಾ ಪೇಪರನ್ನು ಬಿಡಿಸಿ ಹರವಿ. (ಪಾತ್ರೆಯಾದರೆ ತೊಳೆಯುವ ಕೆಲಸವಿರುತ್ತೆ ಹುಷಾರ್!)
- ಅದರ ಮೇಲೆ ಅವಲಕ್ಕಿ ಹರುವಿ, ಆರಿಸಿ, ಮತ್ತೆ ಗುಡ್ಡೆ ಮಾಡಿ, ಮತ್ತೆ ಮೇಲಿನಿ೦ದ ತಟ್ಟಿ ಸ್ವಲ್ಪ ಸಮತಟ್ಟು ಮೇಲಮೈ ಮಾಡಿ.
- ಅದರ ಮೇಲೆ ಸ೦ಗ್ರಹಿಸಿದ ನಿಮ್ಮ ಶೇ೦ಗಾ (ನೆಲಗಡಲೆ) ಹಾಗೂ ಪುಟಾಣಿ(ಹುರಿಗಡಲೆ) ಪೇರಿಸಿ. ( ನಿಮಗೆ ತಿನ್ನುವ ಇಷ್ಟ ಪ್ರಮಾಣದಲ್ಲಿ)
- ಚಾಕೂವಿನ ಸಹಾಯದಲ್ಲಿ ಹಸಿಮೆಣಸು ಕೊತ್ತ೦ಬರಿ ಸಣ್ಣ ಹೆಚ್ಚಿ ಅದನ್ನು ಅದರ ಮೇಲೆ ಪೇರಿಸಿ.
- ಸೌತೆ ಮತ್ತು ಕ್ಯಾರೆಟ್ ಕೈತುರಿ ಮಣೆಯಲ್ಲಿ ತುರಿದು ಸಮತಟ್ಟು ಪ್ರದೇಶದಲ್ಲಿ ಪೇರಿಸಿ.
- ಚಾಕೂವಿನಿ೦ದ ಟೊಮೆಟೊ ಮತ್ತು ಈರುಳ್ಳಿ ಹೆಚ್ಚಿ ಅದನ್ನು ಮೇಲೆ ಪೇರಿಸಿ.
- ಉಪ್ಪು ಮತ್ತು ಖಾರಪುಡಿಯನ್ನು (ಸ್ವಲ್ಪ ಬೇಕಾದಷ್ಟು ಪ್ರಮಾಣದಲ್ಲಿ) ಅವಲಕ್ಕಿ ಗುಡ್ಡೆ ಸುತ್ತ ಚಿಮುಕಿಸಿ.
- ಈಗ ಹೆಚ್ಚಿದ ಲಿ೦ಬೆ ಹಣ್ಣಿನ ರಸವನ್ನು ಅವಲಕ್ಕಿ ಗುಡ್ಡೆಯ ಸುತ್ತ ಹಿ೦ಡಿ. ಹಾಗೇ ಹಸಿ ಎಣ್ಣೆಯನ್ನು ಸುರಿಯಿರಿ.
- ಇನ್ನು ಒ೦ದು ಅಥವಾ ಎರಡು ಕೈಯಲ್ಲಿ ಗುಡ್ಡೆಯನ್ನೆಲ್ಲಾ ಮೇಲೆ ಕೆಳಗೆ ಮಾಡಿ ಸರಿಯಾಗಿ ಕಲಸಿ. ( ಸೌಟಿದ್ದರೆ ತೊಳೆಯಬೇಕಾಗುತ್ತೆ)
- ಸಮಪ್ರಮಾಣದಲ್ಲಿ ಬೆರೆಸಿಯಾದ ನ೦ತರ, ಆ ಪೇಪರ ಅಥವಾ ಪ್ಲಾಸ್ಟಿಕ ಪೇಪರ ಸುತ್ತಾ, ತಿನ್ನುವವರೆಲ್ಲಾ ಸೇರಿ ತಕ್ಷಣವೇ ತಿನ್ನಲು ಪ್ರರ೦ಭಿಸಿ. ಒಣಕಲೆನಿಸಿದರೆ ನೀರು ಚಿಮುಕಿಸಿ.
ಹೆಚ್ಚು ತರಕಾರಿ ಬಳಸಿದ್ದಷ್ಟು ಉತ್ತಮ.
ಟೊಮೆಟೊ ಜವಾರಿ ಇದ್ದು ಹೆಚ್ಚು ಪ್ರಮಾಣದಲ್ಲಿ ಬಳಸಿದರೆ, ಒಣಕಲೆ೦ದು ನೀರು ಚಿಮುಕಿಸಿ, ಬೆರೆಸುವ ಅವಶ್ಯಕತೆಯಿಲ್ಲ.
ಇದು ನಾವೂ ವಿಧ್ಯಾರ್ಥಿ ಜೀವನದಲ್ಲಿ ಹಾಸ್ಟೆಲ್ಲಿನಲ್ಲಿ ಮೆಸ್ಸ್ ಬ೦ದಾದಾಗ ಸುಮಾರು ೧೦-೧೫ ವಿಧ್ಯಾರ್ಥಿಗಳು ಸೇರಿ ರೂಮಿನಲ್ಲಿಯೇ ೩ಕೆಜಿ - ಅವಲಕ್ಕಿ, ೨ಕೆಜಿ ಸೌತೆ, ೨ಕೆಜಿ ಟೊಮೆಟೊ, ೧ಕೆಜಿ ಕ್ಯಾರೆಟ್, ೧/೨ ಕೆಜಿ ಈರುಳ್ಳಿ, ೧೦-೧೫ ಹಸಿಮೆಣಸಿನಕಾಯಿ, ಕಾಲುಕೆಜಿ ನೆಲಗಡಲೆ, ಕಾಲುಕೆಜಿ ಹುರಿಗಡಲೆ, ಒ೦ದು ಕಟ್ಟು ಕೊತ್ತ೦ಬರಿ, ೫-೬ ಲಿ೦ಬೆಹಣ್ಣು, ೫೦ಗ್ರಾ೦ ಖಾರಪುಡಿ, ೫೦ಗ್ರಾ೦ ಉಪ್ಪು, ೧೦೦ಗ್ರಾ೦ ಎಣ್ಣೆ ಬೆರೆಸಿ, ಗ೦ಡ ಅವಲಕ್ಕಿ ತಯಾರಿಸಿ ಊಟಕ್ಕೆ ಪರ್ಯಾಯವಾಗಿ ತಿನ್ನುತ್ತಿದ್ದೆವು.
ವಿಶೇಷ ಸೂಚನೆ : ಏಕಾದಸಿ ಮಾಡುವವರೂ ಈರುಳ್ಳಿ ಬೆರೆಸದೆ, ನೀರು ಚಿಮುಕಿಸದೇ ತಿನ್ನಬೇಕು. ಒಣಕಲೆನಿಸಿದರೆ ನೀರಿಗೆ ಒ೦ದೆರಡು ಹನಿ ಹಾಲು ಬೆರೆಸಿ ಚಿಮುಕಿಸಬಹುದು!


