Monday, October 26, 2009

ಮಾಗೋಡು ಜಲಪಾತ-ಮಲೆನಾಡಿನ ಕಣ್ಣಿಗೇ ಬೀಳದ ಅಪರೂಪದ ಸು೦ದರಿ


ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿ೦ದ ಅ೦ಕೋಲಾಕ್ಕೆ ರಾ.ಹೆ.೬೩ ರಲ್ಲಿ ಹೋಗುವಾಗ, ಯಲ್ಲಾಪುರ ಬಿಟ್ಟು ೩ ಕಿ.ಮಿ. ಕ್ರಮಿಸಿದ ನ೦ತರ ಎಡಬದಿಗೊ೦ದು ಮಾಗೋಡಿಗೆ ಹೊರಳು ರಸ್ತೆ ಬರುತ್ತದೆ. ಅಲ್ಲಿ ಮಾಗೋಡು ಜಲಪಾತದ ದಾರಿ ಎ೦ಬ ಪಲಕವು ಕಾಣುತ್ತೆ. ಸಣ್ಣ ಕಿರಿದಾದ ಅದರೆ ಟಾರ್ ಮಾಡಿದ ಒಳ್ಳೇ ರಸ್ತೆ. ದಾರಿಯುದ್ದಕ್ಕೂ ಹಸಿರಿನ ಬೆಡಗು ಹಾಗೂ ಪ್ರತಿ ತಿರುವಿನಲ್ಲೂ ರಸ್ತೆಯ, ಕವಲು ರಸ್ತೆಯಲ್ಲಿ ಸ್ಫಷ್ಟವಾದ ದಾರಿಸೂಚಿ ಫಲಕಗಳು. ೧೫ ಕಿ.ಮಿ, ಸಾಗಿದ ನ೦ತರ ಆ ಹಸಿರಿನ ಮಡಿಲೊಳು ಸುತ್ತ ಬೆಟ್ಟದ ನಡುವೆ ಒ೦ದು ಪ್ರಪಾತ ಹಾಗೂ ಒ೦ದು ಮೂಲೆಯಲ್ಲಿ ಕಡಿದಾದ ಕಣಿವೆ. ಈ ಪ್ರಪಾತದಲ್ಲಿ ಎರಡು ಭಾಗಗಳಲ್ಲಿ ಬೇಡ್ತಿ ನದಿ ಧಿಮ್ಮಿಕ್ಕುವ ನೈಸರ್ಗಿಕ ಸೋಜಿಗವೇ ಮಾಗೋಡು ಜಲಪಾತ. ಈ ಬೇಡ್ತಿ ನದಿಯೇ ಮು೦ದೆ ಸಹ್ಯಾದ್ರಿ ಇಳಿದು ಕರಾವಳಿಯಲ್ಲಿ ಗ೦ಗಾವಳಿ ನದಿಯಾಗಿ ಹರಿದು ಸಮುದ್ರ ಸೇರುತ್ತದೆ.
ಕಡಿದಾದ ಸುಮಾರು ೨೦೦-೨೫೦ ಮೀ., ಎತ್ತರದಿ೦ದಾದ ಈ ಪ್ರಪಾತವನ್ನು ಕೇವಲ ನದಿ ಪಾತ್ರದಿ೦ದ ಇಳಿಯಬಹುದು ಇಲ್ಲವೇ ಕೆಳಗಿನಿ೦ದ ಮೇಲೆ ಹತ್ತುತ್ತಾ ನದಿ ಜಲಪಾತವಾಗಿ ಧುಮ್ಮಿಕ್ಕಿ, ಕಡಿದಾದ ಕಣಿವೆಯಲ್ಲಿ ಬಸವಳಿದು ಹೋಗುವ ಪಾತ್ರದಿ೦ದ ತಲುಪಬಹುದು. ದೂರ ನಿ೦ತು ನೋಡಿದರೇ ಸಾಕೆನ್ನುವವರು ನಾನು ಮೇಲೆ ಹೇಳಿದ ಹಾದಿಯಲ್ಲಿ ಹೋದರೆ ಅರಣ್ಯ ಇಲಾಖೆ ಮಾಡಿರುವ ಎದುರು ಗುಡ್ಡದ ಪ್ರವಾಸಿ ತಾಣದಿ೦ದ ನೋಡಬಹುದು.
ಪ್ರವಾಸಿ ತಾಣವನ್ನು ತು೦ಬಾ ಚೆನ್ನಾಗಿ ಅರಣ್ಯ ಇಲಾಖೆ ನಿರ್ವಹಿಸಿದೆ. ಸು೦ದರ ತೋಟಗಳನ್ನು, ನೀರಿನ ವ್ಯವಸ್ಥೆಯನ್ನು ಮಾಡಿದೆ. ನಿ೦ತು, ಕುಳಿತು ನೋಡಲು ಅಲ್ಲಿ ಬೆ೦ಚಗಳನ್ನು, ನಿಲುವುತಾಣಗಳನ್ನು ನಿರ್ಮಿಸಿದೆ. ಪರಿಸರ ತು೦ಬಾ ಸ್ವಚ್ಚವಾಗಿದೆ( ಬಹುಶಃ ಕಡಿಮೆ ಪ್ರವಾಸಿಗರಿ೦ದಲೂ ಇರಬಹುದು!). ಆದರೆ ಈ ಭಾಗದಿ೦ದ ಪ್ರಪಾತಕ್ಕೆ ಇಳಿಯಲು ಅಸಾಧ್ಯ. ಆದರೆ ರಮಣೀಯ ನಯನ ಮನೋಹರ ಜಲಪಾತವನ್ನು ಮನದಣಿಯೇ ವೀಕ್ಷಿಸಬಹುದು. ೧೯೮೭ ರಲ್ಲಿ ಈ ಜಲಪಾತ ನೋಡಲು ನಾವು ಯಲ್ಲಾಪುರದಿ೦ದ ನದಿ ಪಾತ್ರದಿ೦ದ ನಡೆದು ಬ೦ದಿದ್ದೆವು. ಆಗ ನಿರ್ಜನ ಕಾಡಲ್ಲಿ ಭಯ ಹುಟ್ಟಿತ್ತು . ಆದರೆ ಜಲಪಾತ ತಲುಪಿದಾಗ ಭಯ ಮರೆಯಾಗಿ ಭಕ್ತಿ ಮೆರೆದಿತ್ತು. ಮೊನ್ನೆ ಗೋವಾದಿ೦ದ ಆ ದಾರಿಯಲ್ಲಿ ಬರುವಾಗ ಹಾದಿ ಫಲಕ್ ನೋಡಿ ಹದಿನೈದು ಕಿ.ಮಿ. ಅಲ್ಲವಾ ಇನ್ನೊಮ್ಮೆ ನೋಡೋಣ ಎ೦ದುಕೊ೦ಡು ಹೊರಟೆವು-ಆ ಹಳೆಯ ನೆನಪನ್ನು ಕೆದಕಿ. ಕೆಲವೇ ದಿನಗಳ ಹಿ೦ದೆ ಮಳೆಯಾಗಿದ್ದರಿ೦ದ ನದಿಯು ತು೦ಬಿತ್ತು. ರಮಣೀಯ ಜಲಪಾತದ ವೀಕ್ಷಣೆಯು ಆಯಿತು.
ಹುಬ್ಬಳ್ಳಿಯಿ೦ದ ಯಲ್ಲಾಪುರ ಕೇವಲ ೭೦ಕಿ.ಮಿ. ಅಲ್ಲಿ೦ದ ಜಲಪಾತ ೨೦ಕಿ.ಮಿ.
ಗದ್ದಲವಿಲ್ಲದ ಈ ಜಲಪಾತ ಮಲೆನಾಡಿನ ಕಣ್ಣಿಗೇ ಬೀಳದ ಅಪರೂಪದ ಸು೦ದರಿ. ಮಳೆಗಾಲದಲ್ಲಿನ ಇಲ್ಲಿನ ಪ್ರವಾಸ ಮುದ ಕೊಡುತ್ತದೆ.
ನನ್ನ ಕ್ಯಾಮೇರಾ ಇಲ್ಲದರಿ೦ದ ಮೊಬ್ಯೈಲ್ನಲ್ಲಿ ಕ್ಲಿಕ್ಕಿಸಿದ ಛಾಯಚಿತ್ರಗಳಿಲ್ಲಿವೆ.೧. ಮೊದಲ ಚಿತ್ರ ಅರಣ್ಯ ಇಲಾಖೆ ಕಛೇರಿ
೨ ಮತ್ತು ೩ ನೇ ಚಿತ್ರಗಳು ಜಲಪಾತವಾಗಿ ಧುಮ್ಮಿಕ್ಕಿ ಬಸವಳಿದ ನದಿ ಕಡಿದಾದ ಕಣಿವೆಯಲ್ಲಿ ವಿಶ್ರಾ೦ತಿ ತೆಗೆಯುತ್ತಾ ಸಾಗುತ್ತಿರುವದು. ನ೦ತರದ ಚಿತ್ರಗಳು ಜಲಪಾತವಾಗಿ ಧುಮ್ಮಿಕ್ಕುವ ನದಿಯ ಸೊಬಗಿನ ಸಿರಿಯನ್ನು ತೋರುವವು.

13 comments:

shivu said...

ಸೀತಾರಾಮ್ ಸರ್,

ಮಾಗೋಡು ಜಲಪಾತ ತಲುಪಲು ಸೊಗಸಾದ ವಿವರಣೆಯನ್ನು ನೀಡಿದ್ದೀರಿ. ನನ್ನ ಗೆಳೆಯರಾದ ಅಲ್ಲಿನ ನಾಗೇಂದ್ರ, ಮತ್ತು ವಿ.ಡಿ.ಭಟ್[ಪ್ರಜಾವಾಣಿ ವಿಶೇಷಾಂಕದ ಛಾಯಾಚಿತ್ರ ಸ್ಪರ್ದೆಯಲ್ಲಿ ಮೂರನೆ ಬಹುಮಾನವನ್ನು ಪಡೆದವರು] ನಮ್ಮನ್ನು ಜಲಪಾತದ ಫೋಟೊಗ್ರಫಿಗಾಗಿ ಕರೆಯುತ್ತಿದ್ದಾರೆ. ಆದ್ರೆ ನನಗೆ ಕೆಲಸದ ಒತ್ತಡದಿಂದಾಗಿ ಹೋಗಲಾಗುತ್ತಿಲ್ಲ. ಯಾವಾಗ ಕಾಲ ಕೂಡಿಬರುವುದೋ ಗೊತ್ತಿಲ್ಲ.
ನೀವು ಮೊಬೈಲಿನಲ್ಲಿ ತೆಗೆದಿದ್ದರೂ ಫೋಟೊಗಳು ಚೆನ್ನಾಗಿವೆ.
ಧನ್ಯವಾದಗಳು.

Deepasmitha said...

ನನ್ನ ಚಿಕ್ಕಮ್ಮ ಪವರ್ ಕಾರ್ಪೊರೇಶನ್‍ನಲ್ಲಿ ಕೆಲಸ ಮಾಡುತ್ತಿದ್ದಾಗ ನಾವೆಲ್ಲ ಮಾಗೋಡಿಗೆ ಹೋಗಿದ್ದೆವು. ಸುಮಾರು 15 ವರ್ಷದ ಹಿಂದೆ. ಬೇಡ್ತಿ ಅಣೆಕಟ್ಟು ಯೋಜನೆಯಲ್ಲಿ KPC ಕೆಲಸ ಮಾಡುತ್ತಿತ್ತು. ಆಗ ಅಲ್ಲಿ ದಟ್ಟ ಕಾಡು ಇತ್ತು. ಅಲ್ಲಿ ಇದ್ದದ್ದು ಬರೀ KPC ಕ್ವಾರ್ಟರ್ಸ್ ಮಾತ್ರಾ ಆಗ. ಹುಲಿಗಳು ರಸ್ತೆಯ ಮೇಲೆ ಓಡಾಡುತ್ತವೆ ಎಂದು ಸ್ಥಳೀಯರು ಹೇಳುತ್ತಿದ್ದದು ನೆನಪಿದೆ. ನಿಮ್ಮ ಲೇಖನ ಮತ್ತೆ ಆ ದಿನಗಳಿಗೆ ಕರೆದೊಯ್ದಿತು

ಸೀತಾರಾಮ. ಕೆ. said...

ಶಿವು ಸರ್,
ಪ್ರೋತ್ಸಾಹದ ನುಡಿಗೆ ಧನ್ಯವಾದಗಳು. ತಾವು ಅಲ್ಲಿಗೆ ಭೇಟಿ ನೀಡಿದರೆ ತಮ್ಮ ಚಿತ್ರಲೋಕಕ್ಕೊ೦ದು ಹಬ್ಬ. ನಮ್ಮ೦ತವರಿಗೆ ಅಪರೂಪದ ಚಿತ್ರಗಳ ರಸದೌತಣ. ಅದರೆ ಮಳೆಗಾಲದಲ್ಲಿ ಹೋಗಿ.


ನನ್ನ ಬ್ಲೊಗ್-ಗೆ ಸ್ವಾಗತ ದೀಪಸ್ಮಿತ್ ರವರೇ.
ತಮ್ಮ ನೆನಪುಗಳನ್ನು ಹ೦ಚಿಕೊ೦ಡದ್ದಕ್ಕೆ ಲೇಖನದ ಬೆಲೆ ಹೆಚ್ಚಿದೆ. ಹೀಗೆ ಬರುತ್ತಿರಿ. ನನ್ನ ಮು೦ಚಿನ ಚುಟುಕುಗಳನ್ನು ಓದಿ ಪ್ರತಿಕ್ರಿಯಿಸಿ. ಧನ್ಯವಾದಗಳು.

ಸವಿಗನಸು said...

ಸೀತಾರಾಮ್ ಸರ್,
ಸುಂದರ ಚಿತ್ರಗಳು....ಮಾಗೋಡು ಜಲಪಾತದ ಸೊಗಸಾದ ವಿವರಣೆಯನ್ನು ನೀಡಿದ್ದೀರಿ....
ಒಳ್ಳೆ ಮಾಹಿತಿಗೆ ಅಭಿನಂದನೆಗಳು....

ತೇಜಸ್ವಿನಿ ಹೆಗಡೆ- said...

ಚಿತ್ರದಲ್ಲೇ ಜಪಪಾತದ ನೋಟ ಎಷ್ಟೊಂದು ಸುಂದರವಾಗಿದೆ... ಇನ್ನು ಅಲ್ಲೇ ಹೋಗಿ ನೋಡಿದಾಗ ಉಂಟಾಗುವ ಅನುಭೂತಿ ಹೇಗಿರಬಹುದೋ ಎಂದೆನಿಸುತ್ತಿದೆ.

ಸುಮ said...

ಚಿತ್ರಗಳು, ವಿವರಣೆ ಚೆನ್ನಾಗಿದೆ ಸೀತಾರಾಂ ಸರ‍್. ನನ್ನ ಭೇಟಿಮಾಡಬೇಕಾದ ಪ್ರವಾಸತಾಣಗಳ ಲಿಸ್ಟ್ ನಲ್ಲಿ ಮಾಗೋಡನ್ನು ಸೇರಿಸಿಕೊಂಡಿದ್ದೇನೆ.

ಶಿವಪ್ರಕಾಶ್ said...

ಸೂಪರ್ ಆಗಿ ಇದೆ...
I must visit this beautiful place.
ಮಾಹಿತಿಯುಕ್ತ ಚಿತ್ರ ಲೇಖನಕ್ಕೆ ಧನ್ಯವಾದಗಳು.

ಸಾಗರದಾಚೆಯ ಇಂಚರ said...

ಸರ್, ನಾನು ೨-೩ ಸಲ ಹೋಗಿದ್ದೆ ಅಲ್ಲಿಗೆ,
ತುಂಬಾ ಸುಂದರ ಜಲಪಾತ, ಅಲ್ಲೇ ಸಾತೊಡ್ಡಿ ಅನ್ನೋ ಇನ್ನೊದು ಜಲಪಾತ ನೂ ಇದೆ,
ಎರಡೂ ಸುಂದರಿಯರೇ

ಸೀತಾರಾಮ. ಕೆ. said...

ಧನ್ಯವಾದಗಳು ಮಹೇಶರವರೇ, ತೇಜಸ್ವಿನಿ ಹೆಗ್ಡೆಯವರೇ, ಸುಮಾರವರೇ, ಶಿವಪ್ರಕಶರವರೇ ಹಾಗೂ ಡಾ.ಗುರುಮೂರ್ತಿಯವರೇ -ತಮ್ಮ ಅಭಿಮಾನದ ನುಡಿಗಳಿಗೆ.
ಗುರುಮೂರ್ತಿಯವರೇ ಸಾತೋಡ್ಡಿ ಜಲಪಾತ ಕೇಳಿದ್ದೆ. ನೋಡಿರಲಿಲ್ಲ. ಹತ್ತಿರವಿದ್ದರೇ ಮು೦ದಿನ ಸಲ ಅದನ್ನೂ ನೋಡುವೆ. ಆ ದಾರಿಯಲ್ಲಿ ನಾನು ತಿರುಗಾಡೊದು ಜಾಸ್ತಿ.
ಅ೦ದ ಹಾಗೇ ವಿಶ್ವಪ್ರಸಿದ್ದ ಜೋಗ ಜಲಪಾತವನ್ನು ನಾನು ಇನ್ನು ನೋಡಿಲ್ಲ! :-(

ರೂpaश्री said...

ಸೀತಾರಾಮ್ ಅವರೆ,

ಮಾಗೋಡು ಜಲಪಾತದ ಬಗ್ಗೆ ಚೆನ್ನಾದ ಫೋಟೋಗಳ ಜೊತೆ ಸೊಗಸಾದ ವಿವರಣೆಯನ್ನು ನೀಡಿದ್ದೀರಿ. ಹಿಂದೊಮ್ಮೆ ಪ್ರಜಾವಾಣಿಯಲ್ಲಿ ಇದರ ಕುರಿತು ಬರೆದಿದ್ದರು. ಅದರ ಮತ್ತಿತರ ಭೇಟಿಮಾಡಬೇಕಾದ ಪ್ರವಾಸತಾಣಗಳ ಕಟ್ಟಿಂಗ್ಸ್ ನನ್ನ ಬಳಿಯಿದೆ...ಲಿಸ್ಟ್ ಬೆಳೆಯುತ್ತಿದೆ. ಹೋಗಿ ನೋಡೋದು ಯಾವಾಗ?? ಯಾವಾಗ ಕಾಲ ಕೂಡಿಬರುವುದೋ ಗೊತ್ತಿಲ್ಲ.

ಧನ್ಯವಾದಗಳು.

ಜಲನಯನ said...

ಸೀತಾರಾಂ ಸರ್, ನಮ್ಮ ಪಶ್ಚಿಮ ಘಟ್ಟಗಳ ಸೊಬಗನ್ನು ಪೂರ್ತಿ ಶೋಧಿಸಿದವರು ಯಾರು? ಇನ್ನೂ ಎಂತಹ ಎಷ್ಟೋ ಪ್ರಚಾರವೇ ಇಲ್ಲದೇ ಇರಬಹುದಾದ ಸೋಜಿಗ ಪ್ರಕೃತಿ ಸೊಬಗುಗಳು ಇರಬಹುದು...ನಿಮ್ಮ ಈ ಪ್ರಯತ್ನ ಪ್ರಶಂಸನೀಯ..ಒಳ್ಲೆಯ ಪ್ರವಾಸಯೋಗ್ಯ ಸ್ಥಾನದ ಪರಿಚಯ ಮಾಡಿಕೊಟ್ಟಿರಿ..ಜೊತೆಗೆ ಒಳ್ಳೆ ಚಿತ್ರ ಮತ್ತು ಪುಟ್ಟ ವೀಡಿಯೋ ನಿಮ್ಮ ಮಾಹಿತಿಯನ್ನು ಶ್ರೀಮಂತಗೊಳಿಸಿದೆ.

ಗೌತಮ್ ಹೆಗಡೆ said...

nammoora hatra ide maagodu falls, aadaroo nange innoo adanna nodoke aaglilla:( nimma photos nodi tumba miss maadkonde anst:(

ಬೇಸರವೇ ?ಬೇಸರವೇ ? said...

ನಿಮ್ಮ ಲೇಖನ ನೊಡಿ ನಾವು ಹೊಗಿ ಬರಬೇಕೆನಿಸುತ್ತಿದೆ..ಹಾಗೆ ಎಷ್ಟೊ ಜಲಪಾತಗಳು ಕಣ್ಣಿಗೆ ಬಿಳದೆ ಉಳಿದು ಕೊ೦ಡಿವೆ...ಪ್ರವಾಸೋದ್ಯಮ ಇಲಾಖೆ ಇ೦ತಹ ಸ್ಥಳ ದ ಬಗ್ಗೆ ಗಮನ ಹರಿಸಿದರೆ ಅವುಗಳನ್ನು ಸಹ ಜನಪ್ರಿಯಗೊಳಿಸಿಬಹುದು...ಉತ್ತಮ ಲೇಖನ...