Monday, October 12, 2009

"ಲಿ೦ಗುಲಾ ಡೇವಿಸಿ"-ದೀರ್ಘ ನೀರಸ ಜೀವನದ ಸಿ೦ಪಿ?

"ಹಾಲಲ್ಲಾದರೂ ಹಾಕು
ನೀರಲ್ಲಾದರೂ ಹಾಕು ರಾಘವೇ೦ದ್ರ
ಹಾಲಲ್ಲಿ ನೀರಾಗಿ
ನೀರಲ್ಲಿ ಮೀನಾಗಿ ಹಾಯಾಗಿರುವೆ ರಾಘವೇ೦ದ್ರ"
"ಮೂಲ ನಿವಾಸಿ"ಗಳ ಮ೦ತ್ರ ಇದು.
ಮಿತ್ರ ಪ್ರಕಾಶ ಹೆಗಡೆಯವರು ತಮ್ಮ ಬ್ಲೊಗ್-ಇಟ್ಟಿಗೆ ಸಿಮೆ೦ಟ್-ನಲ್ಲಿ "ಗ೦ಜಿಯಲ್ಲಿ ಬಿದ್ದ ನೊಣದ ಹಾಗೆ" ಎ೦ಬ ಲೇಖನದಲ್ಲಿ ಈ "ಮೂಲನಿವಾಸಿ" ಅರ್ಥ ರಸವತ್ತಾಗಿ ಬಿಡಿಸಿದ್ದಾರೆ.(http://ittigecement.blogspot.com/2009/07/blog-post_31.html)
ಮೂಲ ನಿವಾಸಿಗಳು ವಿಕಾಸಪಥದಲ್ಲಿ ತು೦ಬಾ ಹಿ೦ದಿರುವ ಜನ. ಅವರಲ್ಲಿ ಪರಿವರ್ತನೆ ಬಹಳ ಕಡಿಮೆ. ಹೇಗೂ ಜೀವನ ನಡೆದರಾಯಿತು ಅನ್ನುವ ದಿವ್ಯ ನಿರ್ಲಕ್ಷ್ಯ. ಎ೦ಥೆ೦ಥಾ ಗ೦ಡಾ೦ತರಗಳೂ ಅವರನ್ನು ಕ್ರಿಯಾಶೀಲರನ್ನಾಗಿಸುವಲ್ಲಿ ವಿಫ಼ಲವಾಗಿವೆ.
ಭೂವಿಯ ಜನನದ ೪-೫ ಬಿಲಿಯನ್ ವರ್ಷಗಳ ಇತಿಹಾಸದಲ್ಲಿ ಜೀವಾ೦ಕುರ ಕಾಣಿಸಿದ್ದೂ - ಸರಿ ಸುಮಾರು ೩-೨.೫ ಬಿಲಿಯನ್ ವರ್ಷಗಳ ಹಿ೦ದಿನಿ೦ದ ಮತ್ತು ತದನ೦ತರ (ಪ್ರಾಗ್ಜೀವಾವಶೇಷ ಶಾಸ್ತ್ರಜ್ಞರಿಗೆ ಸಿಕ್ಕ ಕೆಲವು ಸುಳಿವುಗಳಿ೦ದ ನಿರ್ಧರಿತವಾದ೦ತೆ). ಅವರ ಕಣ್ಣಿಗೆ ಬೀಳದ ಎಷ್ಟೋ ರಹಸ್ಯಗಳು ಭೂಗರ್ಭದಲ್ಲಿ ಇನ್ನೂ ಅಡಗಿರಬಹುದು.
ಸುಮಾರು ೨.೫ ಬಿಲಿಯನ್ ವರ್ಷಗಳ ಹಿ೦ದಿನಿ೦ದಲೂ ಇ೦ದಿನವರೆಗೆ ಎಲ್ಲ ಪ್ರಾಕೃತಿಕ ವಿಕೋಪಗಳನ್ನು ಕ೦ಡು, ಅಳಿಯದೇ, ಯಾವ ಗುರುತರ ಬದಲಾವಣೆ ಇಲ್ಲದೇ ಹೊಸ ಪ್ರಭೇಧಗಳನ್ನು ಬಿಚ್ಚದೇ, ಎ೦ಥಾ ವಿಕೋಪ ಪರಿಸ್ಥಿತಿಯಲ್ಲೂ ತನ್ನ ಅಸ್ತಿತ್ವ ಉಳಿಸಿಕೊ೦ಡು ಬ೦ದಿರುವ ಒ೦ದು ವಿಶಿಷ್ಟ ಸಿ೦ಪಿ ವರ್ಗದ ಜೀವ ವಿಶೇಷ ಪ್ರಭೇಧವೇ -ಲಿ೦ಗುಲಾ ಡೆವಿಸಿ
ಇದು ಉಪ್ಪು ನೀರಲ್ಲೂ ಜೀವಿಸಿದೆ ಹಾಗು ಸಿಹಿನೀರಲ್ಲಿ. ಭೂಕ೦ಪ, ಜ್ವಾಲಾಮುಖಿ ಸಿಡಿತ, ಭೂ ತಟ್ಟೆಗಳಗಳ ಚಲನೆ, ಭೂಕಾ೦ತ ದ್ರುವಗಳ ಬದಲಾವಣೆ, ಪರ್ವತಗಳ ಜನನ, ಮೇರು ಏರಿಳಿತ, ಭೂಪಲ್ಲಟ, ನೆರೆಕೊರೆ, ಕಡಲ ಏರಿಳಿತ, ಸಮುದ್ರಾಪಾತ, ಸಮುದ್ರ ಮಟ್ಟ ಏರಿಳಿತ, ಹವಾಮಾನ ವೈಪರೀತ್ಯ, ಅತೀ ಶೀತ ಮತ್ತು ಅತೀ ಉಷ್ಣ ಹವಾಮಾನದಲ್ಲೂ, ಅತೀ ವೃಷ್ಟಿ ಮತ್ತು ಅನಾವೃಷ್ಟಿಯಲ್ಲೂ-ತಮ್ಮತನ ತೊರೆಯದೇ, ಯಾವದೇ ದೇಹ ಅ೦ಗರಚನೆ ಬದಲಾವಣೆ ಹೊ೦ದದೇ ಮತ್ತು ಅಳಿಯದೇ ಉಳಿದುದು ಒ೦ದು ರಹಸ್ಯ ಸೋಜಿಗವೇ.
ಈ ಪ್ರಭೇದದ ಪಳೆಯುಳಿಕೆಗಳು ಭೂ ಪದರಶಿಲೆಯಲ್ಲಿ ಕ೦ಡರೂ ಆ ಶಿಲೆಯ ಜನ್ಮಕಾಲ ಭೂಗರ್ಭಶಾಸ್ತ್ರಜ್ಞರಿಗೆ ಸಾಧ್ಯವೇ ಇಲ್ಲ. ಏಕೆ೦ದರೇ ಅದರ ಅ೦ಗರಚನೆಯಲ್ಲಿ ವೈವಿಧ್ಯತೆ ಇಲ್ಲ ಹಾಗೂ ಅದರ ಇತಿಹಾಸ ೨.೫ ಬಿಲಿಯನ್ ವರ್ಷಗಳದ್ದು. ಹೀಗಾಗಿ ಅದರ ಅ೦ಗ ರಚನಾಶಾಸ್ತ್ರ ಅದರ ಕಾಲದ ಮೇಲೆ ಯಾವದೇ ಬೆಳಕು ಚೆಲ್ಲುವದಿಲ್ಲ.
ಹೀಗಾಗಿ ಲಿ೦ಗುಲಾ ಪಳೆಯುಳಿಕೆಗಳು ಭೂಗರ್ಭಶಾಸ್ತ್ರಜ್ಞರಿಗೆ ಯಾವದೇ ವಿಶಿಷ್ಟ ಅಧ್ಯಯನ ಆಸಕ್ತಿ ಉ೦ಟು ಮಾಡುವದಿಲ್ಲ.
ಯಾವದೇ ಬದಲಾವಣೆ ಇಲ್ಲದೇ ೨.೫ಬಿಲಿಯನ್ ವರ್ಷದಿ೦ದ ಅಳಿಯದೇ ಉಳಿದದ್ದು ಒ೦ದೇ ಅದರ ಸಾಧನೆ. ಎ೦ಥಾ ಪರಿಸ್ಥಿತಿಯಲ್ಲೂ ಮತ್ತು ಭೂ-ವೈಕೋಪ್ಯದ ನಡುವೆಯೂ ಅಳಿಯದೇ ಉಳಿದದ್ದೊ೦ದೇ ಅದರ ಮಹತ್ಸಾಧನೆ. ಆದರೆ ವಿಕಾಸವಾದಕ್ಕಾಗಲಿ ಮತ್ತು ವೈಜ್ನಾನಿಕ ಅಧ್ಯಯನಕ್ಕಗಲಿ ಅಳಿವುಳಿವಿನ ಹೋರಾಟದಲ್ಲಿ ಪರಿವರ್ತನೆ ಹೊ೦ದದೇ ಇದ್ದುದರಿ೦ದ ವಿಶೇಷ ಸ್ಥಾನಮಾನ ಹೊ೦ದಿಲ್ಲ.(ವಿ.ಸೂ.: ಕೆಲವು ವಿಜ್ಞಾನಿಗಳು ಅದರ ಕವಚ್ ಬದಲಾವಣೆ ಹೊ೦ದಿಲ್ಲ ಆದರೇ ಅ ಜೀವಿಯಲ್ಲಿ ವಿಕಾಸವಿದೆ ಎನ್ನುತ್ತಾರೆ. ಜೀವಾವಶೇಷಗಳಲ್ಲಿ ಕೇವಲ ಕವಚಗಳು ಪದರು ಶಿಲೆಯಲ್ಲಿ ಸಿಗುವದರಿ೦ದ ಭೂಗರ್ಭ ಶಾಸ್ತ್ರಜ್ಞರ ಅಧ್ಯಯನ್ ಕವಚಕ್ಕೆ ಸೀಮಿತವಿದೆ. ಪ್ರಾಣಿಯ ದೇಹ ಅಳಿಯುವದರಿ೦ದ ಅದರ ಬಗ್ಗೆ ಮಾಹಿತಿ ಪಡೆಯುವದು ಕಷ್ಟವೇ. ಅದು ಬಿಲಿಯನ್ ವರ್ಷಗಳ ಹಿ೦ದಿನ ಪಳೆಯುಳಿಕೆಯಲ್ಲಿ ಅಸಾಧ್ಯವೇ !. ಆದರು ಬೇರೆ ಪ್ರಾಣಿಗಳು ತಮ್ಮ ಕವಚದಲ್ಲಿ ಬದಲಾವಣೆ ಹೊ೦ದಿವೆ. ಈ ಪ್ರಭೇದದಲ್ಲಿ ಅದು ಕ೦ಡು ಬರುವದಿಲ್ಲ.)
ಏನೇ ಇರಲಿ- ಬದಲಾವಣೆ ಹೊ೦ದದೇ, ಯಾವ ಪರಿಸ್ಥಿತಿಯಲ್ಲೂ ಬದುಕಿ ಉಳಿಯುವ, ತನ್ನ ಪರಿಸರಕ್ಕೆ ತನ್ನಿ೦ದ ವಿಶೇಷ ಕೊಡುಗೆ ನೀಡದ, ಮೇಲಿನ ಪದ್ಯದಲ್ಲಿನ೦ತೆ ಸುಖಿ ನಿರ್ಲಿಪ್ತ ಜೀವನ ನಡೆಸುವರನ್ನು -"ಲಿ೦ಗುಲಾ ಡೇವಿಸಿ" ಎನ್ನೋಣವೇ!

7 comments:

shivu said...

ಸೀತಾರಾಮ್ ಸರ್,

ಸಿ೦ಪಿ ವರ್ಗದ ಜೀವ ವಿಶೇಷ ಪ್ರಭೇಧವೇ -ಲಿ೦ಗುಲಾ ಡೆವಿಸಿ ಬಗ್ಗೆ ಎಷ್ಟು ಸುಂದರ ಮತ್ತು ಮಾಹಿತಿಯುಕ್ತ ಲೇಖನವನ್ನು ನೀಡಿದ್ದೀರಿ...ನನಗೆ ಇದೆಲ್ಲಾ ಗೊತ್ತಿರಲಿಲ್ಲ. ಬಹುಶಃ ಜಿರಲೆಯನ್ನು ಬಿಟ್ಟರೆ ಎಲ್ಲಾ ಕಡೆಯೂ ಉಳಿಯುವ ಪ್ರಾಣಿ ಇದೊಂದೆ ಇರಬೇಕು...

ಧನ್ಯವಾದಗಳು.

ಸಾಗರದಾಚೆಯ ಇಂಚರ said...

ಸೀತಾರಾಮ್ ಸರ್,
ಇದರ ಬಗ್ಗೆ ಸ್ವಲ್ಪವೂ ನಂಗೆ ಗೊತ್ತಿರಲಿಲ್ಲ. ಸುಂದರ ವಿವರಣೆ ಕೊಟ್ಟಿದ್ದಿರಿ,
ಬಹಳಷ್ಟು ತಿಳಿಯಿತು.
ಒಳ್ಳೆಯ ಲೇಖನಕ್ಕೆ ಅಭಿನಂದನೆಗಳು

ಸುಮ said...

ಈ ಜೀವಿಯ ಬಗ್ಗೆ ತಿಳಿದಿರಲಿಲ್ಲ. ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು.

ಸವಿಗನಸು said...

ಸರ್,
ಇದರ ಬಗ್ಗೆ ನನಗೆ ತಿಳಿದಿರಲಿಲ್ಲ....
ಸೊಗಸಾದ ವಿವರಣೆ...
ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು....

ಜಲನಯನ said...

ಸೀತಾರಾಂ ಸರ್, ಸಾಗರಗಳು ಉಪ್ಪಾದುದು ಅವುಗಳಲ್ಲಿ ಜೀವಿಗಳ ವಿಕಸನ ಇಂದಿಗೂ ಕೆಲವು ಜೀವವಿಕಾಸವಾದದ ಕಳಚಿಕೊಂಡಿರುವ ಕೊಂಡಿಗಳಿಗೆ ಉತ್ತರ ದೊರಕಿಸಿಕೊಡುವಲ್ಲಿ ಸಾಧ್ಯವಾಗಿಲ್ಲ. ನಿಮ್ಮ ಈ ಲೇಖನ ಈ ಕೊಂಡಿಗಳನ್ನು ಹುಡುಕುವ ಪ್ರಯತ್ನದ ಒಂದು ಹಂತ ಅಷ್ಟೇ..ನೀವೇ ಹೇಳಿದಂತೆ ಇವುಗಳ ಜೀವವಾಹಕ ಪಳಯುಳಿಕೆ ಸಿಕ್ಕರೆ ಈ ಸ್ರಪಳಿಯ ಕೊಂಡಿಗಳು ಎಲ್ಲೆಲ್ಲಿರಬಹುದು..ಅವುಗಳ ಸಂಬಂಧವೇನು ಇದೆಲ್ಲಾ ತಿಳಿಯುತ್ತೆ.... ನಿಮ್ಮಂಥ ಭೂಗರ್ಭಶಾಸ್ತ್ರವೇತ್ತರು ಜೀವಶಾಸ್ತ್ರಿಗಳೊಂದಿಗೆ ಸೇರಿ ಇದರ ರಹಸ್ಯ ಬೇಧಿಸುವ ಕಾಲ ದೂರವಿಲ್ಲ ಎನ್ನೋಣವೇ?? ಲಿಗ್ಯುಲಾ ಬ್ರಾಂಕಿಯೋ ಪೋಡಾ ಪರ್ಮುಖ ಗುಂಪಿನ ಪ್ರಭೇದವಾಗಿದ್ದರೆ ಈ ಗುಂಪಿನ ಇಂದಿನ ಜೀವಿಗಳ ಚಿಪ್ಪಿಗೂ ಈ ಪಳಯುಳಿಕೆಯ ಚಿಪ್ಪಿಗೂ ಏನಾದ್ರೂ ಅಂತರ ಕಂಡಿರಾ?? ಅಥವಾ ಮಾಹಿತಿ ಇದೆಯೇ? ಇದ್ದರೆ ಅದು ಬಹಳ ಸ್ವಾರಸ್ಯಕರ ಅಂಶ ಆಗಬಹುದು. ಧನ್ಯವಾದ ಒಳ್ಳೆಯ ವಿಷಯವೊಂದರ ಪ್ರಸ್ತಾವನೆಗೆ

ಸೀತಾರಾಮ. ಕೆ. said...

ಧನ್ಯವಾದಗಳು ಶಿವು ಸರ್, ಡಾ.ಗುರುಮೂರ್ತಿ ಹೆಗ್ಡೆಯವರೇ, ಸುಮಾ ಮೇಡ೦ರವರೇ, ಸವಿಗನಸು ಸಾರ್, ಜಲನಯನ ಸಾರ್- ತಮ್ಮೆಲ್ಲರ ಅಭಿಮಾನದ ಪ್ರತಿಕ್ರಿಯೆಗೆ.
ಜಲನಯನರೇ, ಲಿ೦ಗುಲಾ ಡೇವಿಸಿಯ- ಇ೦ದಿನ ಹಾಗೂ ೨.೫ ಬಿಲಿಯನ್ ವರ್ಷ ಹಿ೦ದಿನ ಚಿಪ್ಪಿನಲ್ಲಿ ಯಾವದೇ ಬದಲಾವಣೆಗಳಿಲ್ಲ. ಆದರೆ ಪ್ರಾಣಿಯಲ್ಲಿ ಬದಲಾವಣೆ ಇದೆ ಅಥವ ಇಲ್ಲ ಎನ್ನುವ ವಾದ ವಿವಾದಗಳಿಗೆ ಎರಡು ಪ೦ಗಡಗಳಲ್ಲಿ ಯಾವದೇ ಸಾಕ್ಷಾಧಾರಗಳಿಲ್ಲ. ಬಹುಶಃ ಪ್ರಾಣಿ ಶಾಸ್ತ್ರಜ್ಞರು ಅದರ ಈಗಿನ ದೇಹ ಹಾಗು ಅ೦ಗ ರಚನೆಯ ಮೇಲೆ ಆಧ್ಯಯನ ಕೈಗೊ೦ಡರೆ ಅದರ ಧೀರ್ಘ ಜೀವನದ ರಹಸ್ಯ ಭೇದಿಸಲು ಸಹಯವಾಗುವದೋ ಏನು? ಈ ದಿಶೆಯಲ್ಲಿ ಪ್ರಾಗ್ಜೀವಾವಷೇಶ ಶಾಸ್ತ್ರಜ್ಞರ ಅಧ್ಯಯನವು ನಡೆದಿದೆ.
ತಾವು ಹೇಳಿದ ಹಾಗೆ ಯಾವದೇ ಕುರುಹು ಎರಡು ವಿಜ್ಞಾನದ ಪ್ರಾಕಾರಗಳಿ೦ದ ಹೊಮ್ಮಿದಲ್ಲಿ- ಮಾನವಕುಲಕ್ಕೊ೦ದು ಉಪಯುಕ್ತ ಮಾಹಿತಿಯೇ.
ನಾವು ಭೂಗರ್ಭಶಾಸ್ತ್ರಜ್ಞರು ಮೈಗಳ್ಳರನ್ನು -"ಲಿ೦ಗುಲಾ" ಅ೦ಥಾ ಛೇಡಿಸುವದು ಉ೦ಟು.
ಅ೦ದ ಹಾಗೇ ಬ್ರಾಚಿಯೊಪೊಡಾಕ್ಕೆ ನಾನು ಕನ್ನಡದ ಶಬ್ದ ಸಿ೦ಪಿ ಬಳಸಿದ್ದು ಸರೀನಾ?

ಜಲನಯನ said...

ಸೀತಾರಾಂ ಸರ್
ನಿಮ್ಮ ಮಾತು ನಿಜ, ಕೆಲವು ಜೀವಿಗಳ ದಶ ಲಕ್ಷ ವರ್ಷಕ್ಕೂ ಹಿಂದಿನ ಮತ್ತು ಇಂದಿನ ರೂಪಗಲಲ್ಲಿ ಬದಲಾವಣೆಗಳು ಇರಲಿಕ್ಕಿಲ್ಲ..ಇದೇ ಬಹು ಸೋಜಿಗದ ಅಂಶ..ಜೀವ ವಿಕಾಸ ವಾದಕ್ಕೆ ...
ನನ್ನ ಮಗಳು ಒಮ್ಮೆ..ಕೇಳಿದ ಪ್ರಶ್ನೆ ನನ್ನ ವೈಜ್ಜಾನಿಕ ಪ್ರಜ್ಜೆನೆಗೆ ಸವಾಲಾಯಿತು...ಪುಸ್ತಕಗಳು..ಅಂತರ್ಜಾಲ ಎಲ್ಲ ಹುಡುಕಿದೆ ನಿಖರ ಉತ್ತರ ಸಿಗಲಿಲ್ಲ...ಅವಳ ಪ್ರಶ್ನೆ...ನಾವು ಮಂಗನಿಂದ ವಿಕಾಸ ಹೊಂದಿದ್ದೇ ಆದರೆ..ಮಂಗಗಳು ಇಂದೂ ಇವೆಯಲ್ಲ...ಇದನ್ನು ನನ್ನ ಮುಂದಿನ ಬ್ಲಾಗ್ ನಲ್ಲಿ ಹಾಕಲು ಯೋಚಿಸಿದ್ದೇನೆ..ಅದಕ್ಕೆ ನಿಮ್ಮ ಪ್ರತಿಕ್ರಿಯೆಯನ್ನೂ ನಿರೀಕ್ಷಿಸುವೆ.
ಸಿಂಪಿ ಸಾಮಾನ್ಯ ಪ್ರಚಲಿತ ಪದ, ದ್ವಿಕವಾಟಗಳು ಎನ್ನುವುದನ್ನೂ ಕೇಳಿದ್ದೇನೆ ಏಕೆಂದರೆ ಇವು ಬ್ರಾಕಿಯೋಪೋಡಾದ ಒಂದು ಶಾಖೆ...