ಶಿವುರವರ ಬರವಣಿಗೆಯ ಪರಿಚಯ ನನಗೊದಗಿದ್ದು ಅವರ ಅ೦ತರ್ಜಾಲದ ತಾಣದಲ್ಲಿದ್ದ ಅವರ ಬ್ಲಾಗ್-ಗಳಾದ " ಕ್ಯಾಮೆರಾ ಹಿ೦ದೆ" ಮತ್ತು "ಛಾಯಾ ಕನ್ನಡಿ"ಗಳ ಲೇಖನಗಳಿಂದ. ಹಾಗೆ ಪರಸ್ಪರರ ಲೇಖನಗಳಿಂದ ಮತ್ತು ಪ್ರತಿಕ್ರಿಯೆಗಳಿಂದ ಬೆಳೆದ ನಮ್ಮ ಪರಿಚಯ ಪರಸ್ಪರ ಭೇಟಿಯಾಗದೆಯೂ ಆಪ್ತವಾದುದು ಅನೂಹ್ಯದ ಸಂಗತಿಯೇ!
ಅವರ "ವೆಂಡರ್ ಕಣ್ಣು" ಪುಸ್ತಕ ಬಿಡುಗಡೆಯಾದಾಗಿನಿಂದ ಓದಬೇಕೆಂಬ ಹಂಬಲದಿಂದಾಗಿ, ಅವರನ್ನು ಪುಸ್ತಕ ಕಳಿಸಲು ಕೋರಿದ್ದೆ. ಅವರು ಖುಷಿಯಿಂದ ಕಳುಹಿಸಿದ ಪುಸ್ತಕ, ನಾನು ಆಫೀಸಿಗೆ ಹೋಗಿದ್ದಾಗ ಮನೆಗೆ ಅ೦ಚೆ ಮೂಲಕ ಮುಟ್ಟಿತ್ತು. ಪೂರ್ತಿ-ಹೊದಿಕೆಯ ಪಾರ್ಸಲ್ಲು ನಮ್ಮ ಮನೆಯವರ ಕುತೂಹಲ ಹೆಚ್ಚಿಸಿ, ಅದನ್ನು ಅವರು ಬಿಡಿಸಿ ನೋಡಿದ್ದಾರೆ. ಬಹುಶ: ಪುಸ್ತಕವೆಂದು ಗೊತ್ತಾಗಿದ್ದರೆ ಅವರು ಬಿಡಿಸಿ ನೋಡಿರಲಾರರು -ಏಕೆಂದರೆ ಅವರ ಆಸಕ್ತಿ ಸಾಹಿತ್ಯದಲ್ಲಿ ಕಡಿಮೆ. ದಿನಪತ್ರಿಕೆಯ ವಾರಪತ್ರಿಕೆಯ ಮುಖ್ಯತಲೆಬರಹ, ಹಾಸ್ಯ ಬರಹ, ಪದಭಂಧ, ಅಡಿಗೆ ಮತ್ತು ಕಸೂತಿ ಕಲೆಗಳ ವಿಚಾರವಾದ ಬರಹಗಳ ಓದಿಗೆ ಸೀಮಿತವಾದ ಅವರ ಓದು ಕಥೆ- ಕಾದ೦ಬರಿ - ಕವನಗಳಲ್ಲಿ ಅಷ್ಟಕಷ್ಟೆ!. ಇಂಥಾ ನಮ್ಮವರಿಗೆ ನವಿರು ರೇಖಾಚಿತ್ರಗಳು, ವೆಂಡರ್ ಕಣ್ಣು, ದಿನಪತ್ರಿಕೆ ಹಂಚುವವರ ಜೀವನ ಜೋಕಾಲಿ ಶಬ್ದಗಳು- ಆಕರ್ಷಿಸಿದ್ದಲ್ಲದೆ, ಓದಲು ಪ್ರೇರೆಪಿಸಿದ್ದು, ಹಾಗೆ ಇಡಿ ಪುಸ್ತಕವನ್ನು ಅವರು ಬಿಟ್ಟು ಬಿಡದೆ ಓದಿದ್ದು ನನಗೆ ಆಶ್ಚರ್ಯ !. ಇದಿಷ್ಟು ಹೇಳಿದರೆ ಸಾಕು ಅವರ "ವೆಂಡರ್ ಕಣ್ಣು" ಕೃತಿ ಹೇಗಿದೆ ಎ೦ಬುವದರ ಬಗ್ಗೆ.
ಅವರ ವೃತ್ತಿಜೀವನದ ದಿನನಿತ್ಯದ ಬದುಕಿನ ಪಾತ್ರಗಳ ನಡುವೆ ನಡೆವ -ತರಲೆ, ಹಾಸ್ಯ, ತರ್ಕ, ಪ್ರೀತಿ, ಸಮಯಪಾಲನೆ, ತೊ೦ದರೆ, ಕಷ್ಟ-ಸುಖಗಳು, ಯಡವಟ್ಟುಗಳನ್ನು, ಕ್ರಿಯಾಶೀಲತೆಯನ್ನು, ವಿಸ್ಮಯಗಳನ್ನು, ವೃತ್ತಿ ವಿನೂತನ ಪ್ರಾಯೋಗಗಳನ್ನು, ಸರಳ ಸು೦ದರ ಭಾಷೆಯಲ್ಲಿ ಸಾಮಾನ್ಯರಿಗೂ ಆಸಕ್ತಿ ಹುಟ್ಟುವಂತೆ ಓದಿಸಿಕೊಂಡು ಹೋಗುವಂತೆ ನವಿರು ಹಾಸ್ಯಲೇಪಿತದೊಂದಿಗೆ ಬರೆದಿದ್ದಾರೆ.
ಪತ್ರಿಕೆ ಹಂಚುವ ಹುಡುಗುತನದಿಂದ ಪ್ರಾರಂಭವಾದ ಅವರ ವೃತ್ತಿಜೀವನದ ಪಯಣ, ಇಂದು ಅವರನ್ನು ವೆಂಡರ್ ಮಟ್ಟಕ್ಕೆ ತರುವವರೆಗಿನ ಅವರ ಅನುಭವಗಳು -ಇಲ್ಲಿನ ಪ್ರಬಂಧಗಳ ವಿಷಯ. ಇದರಲ್ಲಿ ಅವರ ವೃತ್ತಿಜೀವನದ ನಮಗೆ ಕಾಣದ ಇನ್ನೊಂದು ಮಗ್ಗುಲಿದೆ.
ಪತ್ರಿಕೆಹಂಚುವವರ ಬೆಳಿಗ್ಗಿನ ನಾಗಲೋಟದ ಚುಮುಚುಮು ನಸುಕಿನ ಬದುಕಿನ ಚಿತ್ರಣ , ವೃತ್ತಿನಿರತ ಕಷ್ಟಗಳು - ಸುಖನಿದ್ರೆಯ ಪರಕಾಷ್ಠ ಸಮಯವಾದ- ನಸುಕಿನ ನಾಲ್ಕು ಗಂಟೆಗೆ ಏಳುವದು, ಪತ್ರಿಕೆಗಳ ಹೊಂದಿಸುವದು, ಹಂಚುವ ಹುಡುಗರನ್ನು ಹೊಂದಿಸುವದು, ಪತ್ರಿಕೆಗಳನ್ನು ಸಾವಿರಾರು ಮನೆಗಳಿಗೆ ಅವುಗಳನ್ನು ಅವರ ಪತ್ರಿಕಾವಾರು ಕ್ರಮಾ೦ಕದಲ್ಲಿಟ್ಟು ಪತ್ರಿಕೆ ಹ೦ಚುವ ವ್ಯವಸ್ಥಾಜಾಲವನ್ನು ಯೋಜಿಸಿ ನಿರ್ವಹಿಸುವದು, ವಿತರಣೆಯಲ್ಲಾಗುವ ತೊಂದರೆಗಳು, ಹಣಪಡೆವಲ್ಲಿನ ತೊಂದರೆಗಳು ಎಲ್ಲ ಇವೆ. ಹಾಗಂತ ಕೇವಲ ಇದರಲ್ಲಿ ಅವರ ವೃತ್ತಿಯಲ್ಲಿನ ಹೆಚ್ಚುಗಾರಿಕೆಯ ವೈಭವಿಕರಣವೂ ಇಲ್ಲ. ಅವರ ವೃತ್ತಿಯಲ್ಲಿನ ಅವರ ತರಲೆಗಳು ಇವೆ.
ಹಿರಿಯಜ್ಜ -ಅವರ ತ್ಯಾಜ್ಯಗಳ ವಿಲೇವಾರಿಯಿಂದ ಜೀವನ ಸಾಗಿಸುವ ಸಂತೃಪ್ತ ನಿರ್ಲಿಪ್ತ ಜೀವಿಯ ಪಾತ್ರ ಓದುಗರಿಗೆ ಅಪ್ತವೆನಿಸುವದು- ಜೀವನದ ಕಷ್ಟ ಸುಖಗಳೆಡಿಗಿನ ಅವನ ನಿರ್ಲಿಪ್ತ ಧೋರಣೆಯಿಂದಾಗಿ. ಜೊತೆಗೆ ಬಿಹಾರಿ -ಯುವಕನ ಪಾತ್ರ ಚಿಂದಿ ಆಯ್ಧು ಪಾರ್ಟ್ ಟೈಮ್ ಕೆಲಸ ಮಾಡಿ ಹಣ ಕೂಡಿಡುವದು-ಬೆಳಿಗ್ಗಿನ ಖಾಲಿ ಸಮಯವನ್ನು ವ್ಯರ್ಥವಾಗಿಸದೇ ದುಡಿಯುವ ಪ್ರವೃತ್ತಿ, ರಮೇಶನ ಪೇಪರಿಗೆ ರಬ್ಬರ ಬ್ಯಾಂಡನ್ನು ಸುತ್ತಿ ಸಮಯ ಉಳಿಸುವ ತ೦ತ್ರದ ಕ್ರಿಯಾಶೀಲತೆ, ಗ್ರಾಹಕರ ಮನೆ ನೆನಪಿಡುವ ವಿವಿಧ ಪಾತ್ರಗಳ ಚಿತ್ರಣ, ಶೆಟ್ಟರ ಲೆಕ್ಕದ ಗೋಜಲುಗಳು ಹೀಗೆ ಹತ್ತು ಹಲವಾರು ಪಾತ್ರಗಳು ಓದುಗರ ಮನದಲ್ಲಿ ಆಪ್ತವೆನಿಸಿ ನೆಲೆಯೂರುವವು.
ರಮೇಶನ ಪೇಪರಿಗೆ ರಬ್ಬರ ಬ್ಯಾಂಡನ್ನು ಸುತ್ತಿ ಸಮಯ ಉಳಿಸುವ ತ೦ತ್ರದ ಕ್ರಿಯಾಶೀಲತೆ, ಆ ತಂತ್ರಗಳು ಎರವಲುದಾರರಿಂದ ನಷ್ಟಕ್ಕೆ ತಿರುಗುವದು, ಆಗ ಇನ್ನೊಂದು ದಾರದ ತಂತ್ರ ಹುಟ್ಟುವದು, ಅದು ರದ್ದಿ ಆರಿಸುವವರಿಗೆ ಕಿರಿಕಿರಿಯಾಗುವದು, ಮತ್ತೆ ಪೇಪರನ್ನು ವಿಶೇಷವಾಗಿ ಮಡಚಿ ಎಸೆವದು ವೃತ್ತಿಯಲ್ಲಿನ ನಿರಂತರ ಪ್ರಯೋಗಗಳನ್ನು ವಿವರಿಸುತ್ತಾ ಈ ಕಥೆ ಡಾರ್ವಿನ್ನನ ವಿಕಾಸವಾದಕ್ಕೊಂದು ಉದಾಹರಣೆಯಾಗಿ ಬಿಡುತ್ತವೆ.
ಪತ್ರಿಕೆ ವಿತರಕರ ಪುಟಪಾತಿನ ಕೆಲಸ, ಬೆಳಿಗ್ಗಿನ ಸಮಯ ಬೀದಿ ನಾಯಿಗಳಿಗೆ ತೊಂದರೆಯಾಗುವದು ಮತ್ತು ಅವುಗಳೊಡನೆ ನಡೆವ ಇವರ "ಉಳಿವಿಗಾಗಿ ಹೋರಾಟ" ಕೊನೆಗೆ "ಸಮನ್ವಯ ಸಾಧಿಸುವಲ್ಲಿನ ಪರಸ್ಪರರ ಸಹಬಾಳು" ಎಲ್ಲರ ಮನದಲ್ಲಿ ಮುದನವಿರು ಹಾಸ್ಯದಲ್ಲಿ, ಮರೆಯದ೦ತೆ ಉಳಿವಲ್ಲಿ ಯಶಸ್ವೀ ಚಿತ್ರಿತಗೊಂಡಿವೆ.
ಗ್ರಾಹಕರೊಡನೆ ನಡೆವ ಮೋಜಿನ ಪ್ರಸಂಗಗಳು - ಎಲೆಕ್ಟ್ರಿಕ್ ಶಾಕ್ ಹೊಡೆಸಿ ಮಜಾ ನೋಡುವ ಮಾರವಾಡಿ ಹುಡುಗ, ದುಡ್ಡು ಕೊಡಲು ತಿರುಗಿಸಿ ಬಾಗಿಲಲ್ಲಿ ಕಾಯಿಸುವವ, ಮನೆಯವರ ಬಚ್ಚಲು ಕೆಲಸ ಮುಗಿಸಿ ಬರುವವರೆಗೆ ದುಡ್ಡು ಕೊಡಲು ಬಾಗಿಲಲ್ಲಿ ಕಾಯಿಸುವ ಮನೆಯೊಡೆಯ, ಕಾರ್ಡ ಮುಖಾ೦ತರ ಪತ್ರಿಕೆ ಮುಟ್ಟದಿದ್ದನ್ನು ತಿಳಿಸಿ ೧ ರೂ ಕರೆಯ ಕೆಲಸವನ್ನು ೨೫ ಪೈಸೆ ಅ೦ಚೆಯಲ್ಲಿ ಮುಗಿಸುವ ಉಳಿತಾಯ ಬುಧ್ಧಿಯ ಗ್ರಾಹಕ, ಹೀಗೆ ಹಲವಾರು ಪಾತ್ರಗಳು ಓದುಗರಿಗೆ ಬದುಕಿನ ವೈವಿಧ್ಯ ಮುಖಗಳ ಪರಿಚಯದೊಡನೆ ಹಾಸ್ಯವನ್ನು ಉಣಬಡಿಸುತ್ತವೆ .
ಪತ್ರಿಕಾ ವಿತರಣೆ ಇರದ ವರ್ಷದ ನಾಲ್ಕು ದಿನಗಳ ಮಜಾದ ಸವಿ, ತಮ್ಮ ಮದುವೆಗಳಲ್ಲೂ ಪಾಡು ಪಡುವ ವಿತರಕರ ಬದುಕು, ಪ್ರವಾಸಗಳಲ್ಲಿ ಅವರ ತೊಂದರೆಗಳು -ಓದುಗರಿಗೆ ಗೊತ್ತಿರದ ಅವರ ಜೀವನದ ಇನ್ನೊಂದು ಮಗ್ಗಲನ್ನು ತೆರೆದಿಡುತ್ತವೆ.
ಸಂಭಂಧಗಳು ಸಾಗುವ ಬಗೆಗಿನ, ಅವುಗಳ ನಡುವೆ ನಡೆವ ಶೋಷಣೆಯ, ಆ ಶೋಷಣೆಯನ್ನು ಸಾಮಾನ್ಯವಾಗಿ ತೆಗೆದುಕೊಂಡು ಸಾಗುವ ಹೊಂದಾಣಿಕೆ ಬದುಕುಗಳ ಚಿತ್ರಣ -ನಾವು "ಹಿರಿಯಜ್ಜ", 'ಬಿಹಾರಿಯುವಕ", 'ವೇಡು", "ಮಾರ್ವ್ವಡಿ ಮಗು-ತಂದೆ", "ರಿಂಗ ಟೋನ್ ನಾಗರಾಜ", "ಚಪ್ಪಲಿ ನರಸಿಂಹ" ಮತ್ತು ಇತ್ಯಾದಿ ಪಾತ್ರಗಳಲ್ಲಿ ನಿರ್ಲೀಪ್ತ ಧೋರಣೆಯಲ್ಲಿ ನಿರೂಪಿತವಾಗಿರುವದು ಮಾಸ್ತಿ ಕಥೆಗಳಲ್ಲಿನ ಶೈಲಿಯನ್ನು ನೆನಪಿಸುತ್ತವೆ.
ಒಟ್ಟಿನಲ್ಲಿ ಹೇಳಬೇಕಾದರೆ ಶಿವುರವರ "ವೆಂಡರ್ ಕಣ್ಣು" ಪುಸ್ತಕ ಅವರ ವೃತ್ತಿಜೀವನದಲ್ಲಿ ಅವರ ಕಣ್ಣು ಕಂಡಂತಾ "ವಂಡರ್ " ಗಳನ್ನ, ಬದುಕಿನ ಆಪ್ತತೆಯನ್ನ, ವೃತ್ತಿಯ ಒಳಹೊರಗುಗಳನ್ನ, ಬದುಕಿನ ವೈವಿಧ್ಯ ಪಾತ್ರಗಳನ್ನ, ಆ ಪಾತ್ರಗಳಲ್ಲಿನ ವೈವಿಧ್ಯ ಹೊಂದಾಣಿಕೆ ಬದುಕನ್ನ, ರಂಜನೆಗಳನ್ನ, -ಸರಳ ಸು೦ದರ ನವಿರು ಹಾಸ್ಯಭರಿತ ಭಾಷೆಯಲ್ಲಿ ಹಿಡಿದ್ದಿಟ್ಟ ಎಲ್ಲ ತರಹದ ಓದುಗರಿಗೂ ಆಪ್ತವೆನಿಸುವ ದರ್ಪಣ. ನಾನು ಓದಿದ ಪುಸ್ತಕಗಳಲ್ಲಿ ಇದೊಂದು ವಿನೂತನ.
ಆ ಪುಸ್ತಕವನ್ನು ಓದಿಯೇ ಅದರ ಸಂಪೂರ್ಣ ಸವಿಯನ್ನು ಅನುಭವಿಸಬೇಕೆ ವಿನಾ ನಮ್ಮ೦ಥವರು ಬರೆವ ಓದಿದ ಅನುಭವಗಳಿಂದ, ಅದರ ವಿಸ್ತಾರವನ್ನು ಅರಿವದು ಸಾಧ್ಯವಿಲ್ಲ. ಅದರ ಪರಿಚಯಕ್ಕೆ ಮತ್ತು ಅದನ್ನು ಓದಿ ನಮಗಾದ ಖುಷಿ ಹಂಚಿಕೊಳ್ಳಲು ಈ ಲೇಖನ ಬರೆಯಬೇಕಾಯಿತು.
12 comments:
ಶಿವುರವರ "ವೆಂಡರ್ ಕಣ್ಣು"-ಪುಸ್ತಕ ಅಜಾದಣ್ಣನಿಂದ ತಗೊಂಡು ಓದಿದ್ದೀನಿ...
ಅನುಭವಿಸಿ ಬರೆದಿದ್ದಾರೆ....
ಎಲ್ಲವು ಬಹಳ ಚೆನ್ನಾಗಿದೆ....
ಶಿವು ಅವರ ಬ್ಲಾಗ್ ನಲ್ಲಿ ಈ ಪುಸ್ತಕವನ್ನು ನೋಡಿದಾಗಿನಿಂದ ಇದನ್ನು ಓದಬೇಕು ಎಂದುಕೊಳ್ಲುತ್ತಿದ್ದೆ...ಆಗಿಲ್ಲ. ಈಗ ನಿಮ್ಮ ಓದಿನ ಅನುಭವ ಓದಿ ಆ ಪುಸ್ತಕವನ್ನು ಕೊಂಡು ಓದಲೇಬೇಕೆನಿಸುತ್ತಿದೆ. ನೀವದನ್ನು ಇನ್ನಷ್ಟು ಆಪ್ಯಾಯಮಾನವಾಗಿ ಪರಿಚಯಿಸಿದ್ದೀರಿ..
ಶಿವು ಅವರದು ಬಹುಮುಖ ಪ್ರತಿಭೆ, ವೆಂಡರ್ ಕಣ್ಣು ಪುಸ್ತಕವನ್ನು ಚೆನ್ನಾಗಿ ಪರಿಚಯಿಸಿದ್ದೀರಿ..ನಾನು ಇನ್ನೂ ಪುಸ್ತಕ ವನ್ನು ಓದಿಲ್ಲ, ಡಿಸೆಂಬರ್ ತನಕ ಕಾಯಬೇಕು..All the good wishes to him:)
ಶಿವು ಅವರ ಫೋಟೊಗಳಷ್ಟೇ.. ಚಂದ ಅವರ ಬರಹಗಳು...
ಹೌದು ಸೀತಾರಾಂ ಸರ್..ನಾನು ಬ್ಲಾಗಿನಲ್ಲಿ ನೋಡಿದಾಗಿನಿಂದ...ಈ ವ್ಯಕ್ತಿ ಹೇಗಿರಬೇಕು ಎನಿಸಿತ್ತು..ಅವರನ್ನ ಅವರ ಶ್ರೀಮತಿಯವರನ್ನು ನೋಡಿದಮೇಲೆ...ಮೂರ್ತಿ ಚಿಕ್ಕದಾದ್ರೂ ಕೀತ್ರಿ ದೊಡ್ಡದು ಎನ್ನುವುದಕ್ಕೆ ಇನ್ನೊಂದು ನಿದರ್ಶನ ಸಿಕ್ಕಂತಾಯಿತು...ಅವರ ವಂಡರ್ ಕಣ್ಣು..ಅವರ ಲೇಖನ ಸಾಮರ್ಥ್ಯವನ್ನೂ ಎತ್ತಿ ತೋರಿಸಿದೆ..
ಶಿವುರವರ ಪುಸ್ತಕದ ತಿರುಳನ್ನು ಚೆನ್ನಾಗಿ ತೋರಿಸಿದ್ದೀರಿ.
ಶಿವೂ ಅವರ ಬರಹಗಳು ಅಂದ್ರೆ ನೈಜತೆಯ ಲೇಪನದ ಬರಹಗಳು. ಊರಿಗೆ ಬಂದಾಗ ಅವರ ಪುಸ್ತಕವನ್ನು ಕೊಂಡುಕೊಂಡು ಓದಬೇಕೆಂದುಕೊಂಡಿದ್ದೆ. ಆದರೆ ಇನ್ನು "ವೆಂಡರ್ ಕಣ್ಣು" ಓದಿಲ್ಲ ಅಂದ್ರೆ ನಾನು ಏನು ಮಾಡಲು ಆಗುವುದಿಲ್ಲ. ನೀವು ಹೇಳಿದ ಮೇಲೆ ಆಸಕ್ತಿ ಜಾಸ್ತಿ ಆಗ್ತಾ ಇದೆ. ದಯವಿಟ್ಟು ದೆಹಲಿಗೆ ಪುಸ್ತಕವನ್ನು ತರಿಸಿಕೊಳ್ಳುವ ಉಪಾಯ ತಿಳಿಸಿ.
ನನಗೂ ತುಂಬಾ ಪ್ರೀತಿಯಿಂದ ಕಳಿಸಿದ್ದರು........ ತುಂಬಾ ಸುಲಭವಾಗಿ ಓದಿಸಿಕೊಂಡು ಹೋಯಿತು........ ಅವರ ಬರಹ ಅವರ ಫೋಟೋ ದಷ್ಟೇ ಸುಂದರ ....... ಧನ್ಯವಾದ......
vender kannu pustakavannu Odabeku ennisuttide.sundaravaagi varnisiddiri.
ನನಗೂ ಓದಬೇಕು
ತುಂಬಾ ಚೆನ್ನಾಗಿ ತಿಳಿಸಿದ್ದಿರಿ
ಶಿವೂ ಅವರಿಗೆ ಶಿವೂ ನೆ ಸಾಟಿ
ವೆಂಡರ್ ಕಣ್ಣು ಪುಸ್ತಕವನ್ನು ಓದುವ ಕುತೂಹಲ ನನಗೂ ಇದೆ. ನಿಮ್ಮ ಬರಹದಿಂದ ಕುತೂಹಲ ಇನ್ನೂ ಕೆರಳಿದೆ. ಆದಷ್ಟು ಬೇಗ ಓದುತ್ತೇನೆ. ಧನ್ಯವಾದಗಳು
'ಸೀತಾರಾಮ.ಕೆ. '-
ನನಗೂ ಓದಬೇಕೆನಿಸುತ್ತಿದೆ...
ನಿಮ್ಮದೇ ನಿರೀಕ್ಷೆಯಲ್ಲಿ..: http://manasinamane.blogspot.com/
Post a Comment