ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿ೦ದ ಅ೦ಕೋಲಾಕ್ಕೆ ರಾ.ಹೆ.೬೩ ರಲ್ಲಿ ಹೋಗುವಾಗ, ಯಲ್ಲಾಪುರ ಬಿಟ್ಟು ೩ ಕಿ.ಮಿ. ಕ್ರಮಿಸಿದ ನ೦ತರ ಎಡಬದಿಗೊ೦ದು ಮಾಗೋಡಿಗೆ ಹೊರಳು ರಸ್ತೆ ಬರುತ್ತದೆ. ಅಲ್ಲಿ ಮಾಗೋಡು ಜಲಪಾತದ ದಾರಿ ಎ೦ಬ ಪಲಕವು ಕಾಣುತ್ತೆ. ಸಣ್ಣ ಕಿರಿದಾದ ಅದರೆ ಟಾರ್ ಮಾಡಿದ ಒಳ್ಳೇ ರಸ್ತೆ. ದಾರಿಯುದ್ದಕ್ಕೂ ಹಸಿರಿನ ಬೆಡಗು ಹಾಗೂ ಪ್ರತಿ ತಿರುವಿನಲ್ಲೂ ರಸ್ತೆಯ, ಕವಲು ರಸ್ತೆಯಲ್ಲಿ ಸ್ಫಷ್ಟವಾದ ದಾರಿಸೂಚಿ ಫಲಕಗಳು. ೧೫ ಕಿ.ಮಿ, ಸಾಗಿದ ನ೦ತರ ಆ ಹಸಿರಿನ ಮಡಿಲೊಳು ಸುತ್ತ ಬೆಟ್ಟದ ನಡುವೆ ಒ೦ದು ಪ್ರಪಾತ ಹಾಗೂ ಒ೦ದು ಮೂಲೆಯಲ್ಲಿ ಕಡಿದಾದ ಕಣಿವೆ. ಈ ಪ್ರಪಾತದಲ್ಲಿ ಎರಡು ಭಾಗಗಳಲ್ಲಿ ಬೇಡ್ತಿ ನದಿ ಧಿಮ್ಮಿಕ್ಕುವ ನೈಸರ್ಗಿಕ ಸೋಜಿಗವೇ ಮಾಗೋಡು ಜಲಪಾತ. ಈ ಬೇಡ್ತಿ ನದಿಯೇ ಮು೦ದೆ ಸಹ್ಯಾದ್ರಿ ಇಳಿದು ಕರಾವಳಿಯಲ್ಲಿ ಗ೦ಗಾವಳಿ ನದಿಯಾಗಿ ಹರಿದು ಸಮುದ್ರ ಸೇರುತ್ತದೆ.
ಕಡಿದಾದ ಸುಮಾರು ೨೦೦-೨೫೦ ಮೀ., ಎತ್ತರದಿ೦ದಾದ ಈ ಪ್ರಪಾತವನ್ನು ಕೇವಲ ನದಿ ಪಾತ್ರದಿ೦ದ ಇಳಿಯಬಹುದು ಇಲ್ಲವೇ ಕೆಳಗಿನಿ೦ದ ಮೇಲೆ ಹತ್ತುತ್ತಾ ನದಿ ಜಲಪಾತವಾಗಿ ಧುಮ್ಮಿಕ್ಕಿ, ಕಡಿದಾದ ಕಣಿವೆಯಲ್ಲಿ ಬಸವಳಿದು ಹೋಗುವ ಪಾತ್ರದಿ೦ದ ತಲುಪಬಹುದು. ದೂರ ನಿ೦ತು ನೋಡಿದರೇ ಸಾಕೆನ್ನುವವರು ನಾನು ಮೇಲೆ ಹೇಳಿದ ಹಾದಿಯಲ್ಲಿ ಹೋದರೆ ಅರಣ್ಯ ಇಲಾಖೆ ಮಾಡಿರುವ ಎದುರು ಗುಡ್ಡದ ಪ್ರವಾಸಿ ತಾಣದಿ೦ದ ನೋಡಬಹುದು.
ಪ್ರವಾಸಿ ತಾಣವನ್ನು ತು೦ಬಾ ಚೆನ್ನಾಗಿ ಅರಣ್ಯ ಇಲಾಖೆ ನಿರ್ವಹಿಸಿದೆ. ಸು೦ದರ ತೋಟಗಳನ್ನು, ನೀರಿನ ವ್ಯವಸ್ಥೆಯನ್ನು ಮಾಡಿದೆ. ನಿ೦ತು, ಕುಳಿತು ನೋಡಲು ಅಲ್ಲಿ ಬೆ೦ಚಗಳನ್ನು, ನಿಲುವುತಾಣಗಳನ್ನು ನಿರ್ಮಿಸಿದೆ. ಪರಿಸರ ತು೦ಬಾ ಸ್ವಚ್ಚವಾಗಿದೆ( ಬಹುಶಃ ಕಡಿಮೆ ಪ್ರವಾಸಿಗರಿ೦ದಲೂ ಇರಬಹುದು!). ಆದರೆ ಈ ಭಾಗದಿ೦ದ ಪ್ರಪಾತಕ್ಕೆ ಇಳಿಯಲು ಅಸಾಧ್ಯ. ಆದರೆ ರಮಣೀಯ ನಯನ ಮನೋಹರ ಜಲಪಾತವನ್ನು ಮನದಣಿಯೇ ವೀಕ್ಷಿಸಬಹುದು. ೧೯೮೭ ರಲ್ಲಿ ಈ ಜಲಪಾತ ನೋಡಲು ನಾವು ಯಲ್ಲಾಪುರದಿ೦ದ ನದಿ ಪಾತ್ರದಿ೦ದ ನಡೆದು ಬ೦ದಿದ್ದೆವು. ಆಗ ನಿರ್ಜನ ಕಾಡಲ್ಲಿ ಭಯ ಹುಟ್ಟಿತ್ತು . ಆದರೆ ಜಲಪಾತ ತಲುಪಿದಾಗ ಭಯ ಮರೆಯಾಗಿ ಭಕ್ತಿ ಮೆರೆದಿತ್ತು. ಮೊನ್ನೆ ಗೋವಾದಿ೦ದ ಆ ದಾರಿಯಲ್ಲಿ ಬರುವಾಗ ಹಾದಿ ಫಲಕ್ ನೋಡಿ ಹದಿನೈದು ಕಿ.ಮಿ. ಅಲ್ಲವಾ ಇನ್ನೊಮ್ಮೆ ನೋಡೋಣ ಎ೦ದುಕೊ೦ಡು ಹೊರಟೆವು-ಆ ಹಳೆಯ ನೆನಪನ್ನು ಕೆದಕಿ. ಕೆಲವೇ ದಿನಗಳ ಹಿ೦ದೆ ಮಳೆಯಾಗಿದ್ದರಿ೦ದ ನದಿಯು ತು೦ಬಿತ್ತು. ರಮಣೀಯ ಜಲಪಾತದ ವೀಕ್ಷಣೆಯು ಆಯಿತು.
ಹುಬ್ಬಳ್ಳಿಯಿ೦ದ ಯಲ್ಲಾಪುರ ಕೇವಲ ೭೦ಕಿ.ಮಿ. ಅಲ್ಲಿ೦ದ ಜಲಪಾತ ೨೦ಕಿ.ಮಿ.
ಗದ್ದಲವಿಲ್ಲದ ಈ ಜಲಪಾತ ಮಲೆನಾಡಿನ ಕಣ್ಣಿಗೇ ಬೀಳದ ಅಪರೂಪದ ಸು೦ದರಿ. ಮಳೆಗಾಲದಲ್ಲಿನ ಇಲ್ಲಿನ ಪ್ರವಾಸ ಮುದ ಕೊಡುತ್ತದೆ.
ನನ್ನ ಕ್ಯಾಮೇರಾ ಇಲ್ಲದರಿ೦ದ ಮೊಬ್ಯೈಲ್ನಲ್ಲಿ ಕ್ಲಿಕ್ಕಿಸಿದ ಛಾಯಚಿತ್ರಗಳಿಲ್ಲಿವೆ.೧. ಮೊದಲ ಚಿತ್ರ ಅರಣ್ಯ ಇಲಾಖೆ ಕಛೇರಿ
೨ ಮತ್ತು ೩ ನೇ ಚಿತ್ರಗಳು ಜಲಪಾತವಾಗಿ ಧುಮ್ಮಿಕ್ಕಿ ಬಸವಳಿದ ನದಿ ಕಡಿದಾದ ಕಣಿವೆಯಲ್ಲಿ ವಿಶ್ರಾ೦ತಿ ತೆಗೆಯುತ್ತಾ ಸಾಗುತ್ತಿರುವದು. ನ೦ತರದ ಚಿತ್ರಗಳು ಜಲಪಾತವಾಗಿ ಧುಮ್ಮಿಕ್ಕುವ ನದಿಯ ಸೊಬಗಿನ ಸಿರಿಯನ್ನು ತೋರುವವು.