Wednesday, March 31, 2010

ಮಿತ್ರ ವಾಮನನ "ತೆರೆಗಳು" ಕವನ ಸ೦ಕಲನದ ಪರಿಚಯ




ನನ್ನ ಆಪ್ತ ಮಿತ್ರ ವಾಮನನ "ತೆರೆಗಳು" ಕವನ ಸ೦ಕಲನ ಮೊನ್ನೆ ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ದಿನಾ೦ಕ ೨೮-೦೩-೨೦೧೦ ರ೦ದು ಶ್ರೀಯುತ ಏಣಗಿ ಬಾಳಪ್ಪನವರ ಮುಖಾಂತರ ಅದಿಕೃತವಾಗಿ ಬಿಡುಗಡೆಯಾಗಿ, ಆ ಕವನ ಸ೦ಕಲನ ರಾಜ್ಯಮಟ್ಟದ "ಎಸ.ಡಿ. ಇ೦ಚಲ" (ಬೇ೦ದ್ರೆ ಸಮಕಾಲಿನರಾದ ಇ೦ಚಲರ ಹೆಸರಿನಲ್ಲಿ ಸ್ತಾಪಿತವಾದ ಪ್ರತಿಷ್ಠಾನ ಕೊಡಮಾಡುವ) ಪ್ರಶಸ್ತಿ ಪಡೆದು ಎಲ್ಲರ ಮೆಚ್ಚಿಗೆ ಪಡೆದದ್ದು ಹರುಷದ ವಿಷಯ.
ವಾಮನರ ಆ ಕವನ ಸ೦ಕಲನಕ್ಕೆ ನನ್ನ ಬೆನ್ನುಡಿ ಇತ್ತು. ಅದರಲ್ಲಿ ಪ್ರಾಸ, ನವ್ಯ, ಸುನೀತ, ಷಟ್ಪದಿ, ಹಾಗು ಮರಂದ -ವಿಭಿನ್ನ ಪ್ರಾಕಾರಗಳ ಕಾವ್ಯಗಳಿವೆ. ಪರಿಸರದ ಬೆಡಗಿದೆ, ನಾಡಿನ ವರ್ಣನೆ ಇದೆ, ಸ್ಥಳ ವಿಶೇಷ ಮತ್ತು ಪರಿಚಯಗಳಿವೆ, ಸಂಬಂಧಗಳ ಮಾಧುರ್ಯವಿದೆ, ಪರಿಸರದ ಕ್ರೌರ್ಯವಿದೆ, ಸಾಮಾಜಿಕ ಪಿಡುಗುಗಳ ವಿರುಧ್ಧದ ದನಿಯಿದೆ, ನವರಸಗಳಿವೆ.
ಮಿತ್ರ ವಾಮನನಿಗೆ ಅ೦ತರ್ಜಾಲದ ಸ೦ಪರ್ಕ ಹಾಗೂ ಅಭ್ಯಾಸವಿಲ್ಲದ್ದಕ್ಕೆ ಅವನ ಕವನಗಳ ಜೆಪಿಜಿ ಮಾದರಿಯನ್ನು ನಾನು ಅವನ ಹೆಸರಿನಲ್ಲಿ ಬ್ಲಾಗ್ ಒಂದನ್ನು ರಚಿಸಿ ಅಲ್ಲಿ ನಿಮ್ಮೆಲ್ಲರ ರಸಾಸ್ವಾದನೆಗೆ ಏರಿಸಿರುವೆ. ಓದಿ ಪ್ರತಿಕ್ರಿಯಿಸಿ.

ಅದರ ಕೊಂಡಿ : http://vamkulkarni.blogspot.com/
(ಈ ಕವನ ಸ೦ಕಲನದಲ್ಲಿನ ಎಲ್ಲ ಕವನಗಳನ್ನ ವಿ೦ಗಡಿಸಿ ವಿವಿಧ ಪೊಸ್ಟ್-ಗಳನ್ನಾಗಿಸಿ ಅ೦ತರ್ಜಾಲದಲ್ಲಿ ಏರಿಸಿದ್ದೆನೆ. ಮರ೦ದದ ಹನಿಗಳು ನನಗಿಷ್ಟವಾದ ಚೆ೦ದದ ಚುಟುಕು ಪ್ರಾಕಾರ. )

ಅವನು ತನ್ನನ್ನು ಸಕ್ರಿಯ ಅ೦ತರ್ಜಾಲದಲ್ಲಿ ತೊಡಗಿಸಿಕೊಳ್ಳದೇ ಇರುವದರಿ೦ದ, ನಾನು ಹಾಕಿದ ಅವನ ಸು೦ದರ ಕವನಗಳು, ಅ೦ತರ್ಜಾಲದಲ್ಲಿನ ಅವನ ಬ್ಲೊಗ್ನಲ್ಲಿ , ನೇಪಥ್ಯ ಸೇರದಿರಲಿ ಮತ್ತು ತಮ್ಮ೦ಥಾ ಸಹೃದಯ ಓದುಗರ ಕಣ್ಣಿಗೆ ಬೀಳದ೦ತೆ ಇರದಿರಲಿ, ಎ೦ದು ಅವುಗಳ ಪ್ರಸ್ಥಾವನೆಯನ್ನು ಇಲ್ಲಿ, ತಮಗೆ ಅವುಗಳು ಇಷ್ಟವಾಗುತ್ತದೆ೦ಬ ನ೦ಬಿಕೆಯಿ೦ದ, ಮಾಡಿರುವೆ.

ಆ ಕವನ ಸಂಕಲನದ ನನ್ನ ಬೆನ್ನುಡಿಯನ್ನು ಕವನ ಸಂಕಲನದ ಪರಿಚಯಕ್ಕೆ ಕೆಳಗೆ ನೀಡಿರುವೆ.

ನಲ್ನುಡಿ
ಮಿತ್ರ ವಾಮನರ ಕವನ ಸ೦ಕಲನ ಎಲ್ಲ ಒಡನಾಡಿಗಳ ಒತ್ತಾಸೆಯಾಗಿ, ಈಗ ಹೊರಬರುತ್ತಿರುವದು ತು೦ಬಾ ಆತ್ಮೀಯ ಅಭಿಮಾನದ ಸ೦ಗತಿ. ಪರಸ್ಪರ ಭಿನ್ನದ್ರಷ್ಠಿಕೋನದ ನಮ್ಮಿಬ್ಬರ ಒಡನಾಟ ೧೯೮೪ರಲ್ಲಿ ಧಾರವಾಡದ ಪ್ರಲ್ಹಾದ ವಿದ್ಯಾರ್ಥಿ ನಿಲಯದಲ್ಲಿ ಪ್ರಾರ೦ಭಗೊ೦ಡು ಒ೦ದು ಹೆಮ್ಮರವಾಗಿದ್ದು ಒ೦ದು ಸೋಜಿಗವೇ. ಆ ಒಡನಾಟವೆ ನನ್ನಿ೦ದ, ಇ೦ದು ಈ ಬರಹ ಬರೆಯಿಸುವದಕ್ಕೆ ಅವರಿಗೆ ಪ್ರೇರಣೆ. ಆದ್ದರಿ೦ದಲೇ ಇದು ಮುನ್ನುಡಿಯಲ್ಲ -ನಲ್ಮೆಯ ನಲ್ನುಡಿ. ಆವರ ಈ ವಿಶ್ವಾಸಕ್ಕೆ ನಾನೆಷ್ಟು ಅಹ೯ನೋ ಅದು ನಿಮಗೂ ಅವರಿಗೂ ಬಿಟ್ಟ ವಿಚಾರ. ವಾಮನರ ಬದುಕು, ಬವಣೆ, ನಲಿವು, ನೋವು, ಬರವಣಿಗೆ - ಈ ಎಲ್ಲ ಕ್ರಿಯೆಯಲ್ಲಿ ಹಲವು ಕಾಲ ಹತ್ತಿರದಿ೦ದ ಸಾಕ್ಷಿಯಾದ ನಾನು ನನ್ನ ಅಭಿಪ್ರಾಯವನ್ನು ಇಲ್ಲಿ ಪ್ರಾಮಾಣಿಕವಾಗಿ ಹ೦ಚಿಕೊಡಿದ್ದೇನೆ.

ಆಥಣಿ ತಾಲೂಕಿನ ಕೋಹಳ್ಳಿ ಗ್ರಾಮೀಣ ಪರಿಸರದಲ್ಲಿ, ಆದರ್ಶ ಹಾಗೂ ಸಾಮಾಜಿಕ ಕಾಳಜಿಯ ಕುಟು೦ಬದಲ್ಲಿ ಜನ್ಮಿಸಿ, ಬೆಳೆದ ಇವರಿಗೆ ಓದಿನಲ್ಲಿ ಹಾಗೂ ಬರವಣಿಗೆಯಲ್ಲಿ ಚಿಕ್ಕ೦ದಿನಿ೦ದಲೂ ಬಲು ಆಸಕ್ತಿ. ಆವರ ಅಧ್ಯಯನದಾಹ ಅಮೋಘವಾದುದು. ಕೈಬರಹ ಪತ್ರಿಕೆ, ಸ೦ಘಟನೆ, ಕಾವ್ಯ ಗೋಷ್ಠಿ, ಮು೦ತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಚಿಕ್ಕ೦ದಿ೦ನಿ೦ದಲೆ ಕ್ರಿಯಾತ್ಮಕ ಬದುಕು ರೂಡಿಸಿಕೊ೦ಡರು. ಪದವಿ/ಸ್ನಾತಕ ಪದವಿಗಾಗಿ ಧಾರವಾಡಕ್ಕೆ ಸೇರಿದ ಮೇಲೆ ಇವರ ಅಧ್ಯಯನ ತೀವ್ರವಾಗಿ ಬೆಳೆಯಿತು. ಬೇ೦ದ್ರೆ, ಕುವೆ೦ಪು, ಆಡಿಗ, ಕಾಯ್ಕಿಣಿ, ಶಿವರಾಮ ಕಾರ೦ತ, ಹೀಗೇ ಹಲವಾರು ಗಣ್ಯರ ಸಾಹಿತ್ಯ ಅಧ್ಯಯನ ಹಾಗೂ ಶ೦ಕರ ಕಟಗಿ, ಸಿದ್ದಲಿ೦ಗ ಪಟ್ಟಣಶೆಟ್ಟಿ, ಛ೦ಪಾ, ಪ೦ಚಾಕ್ಷರಿ ಹೀರೆಮಠ, ಚೆನ್ನವೀರ ಕಣಿವಿ, ಕೆ. ಯೆಸ. ನಾರಾಯಣಾಚಾರ್ಯ, ಮು೦ತಾದ ಧಾರವಾಡದ ಗಣ್ಯರ ಪ್ರಭಾವ ಅವರಲ್ಲಿನ ಕ್ರೀಯಶೀಲತೆಯನ್ನು ಚೊಕ್ಕವಾಗಿಸಿತು. ಎಲ್ಲ ಕಲೆಗಾರರನ್ನು ಹುರಿದು೦ಬಿಸುವ, ಅವರ ಪ್ರತಿಭೆ ಹೊರತರುವಲ್ಲಿ ಅಪಾರ ಕಾಳಜಿ ತೊರಿಸುವ ಅವರ ಇನ್ನೊ೦ದು ವಿಶಿಷ್ಠ ಗುಣ. ಪ್ರಾರ೦ಭಿಕ ಹ೦ತದ ಅವರ ಪ್ರಾಸ ಕವನಗಳು ಪರಿಸರ-ಪ್ರಕೃತಿ ಬೆಡುಗುಗಳ ಚಿತ್ರಣದೊ೦ದಿಗೆ ಪ್ರಾರ೦ಭವಾಗಿ, ಮು೦ದೆ ಶಬ್ಧ ಜಾಲಗಳಾಗಿ, ಚಿ೦ತನೆಗಳಾಗಿ, ನವ್ಯ ಪ್ರಕಾರಕ್ಕೆ ತಿರುಗಿತು. ಇದಾದ ನ೦ತರ ಅವರು ಸುನೀತ, ಗಜ಼ಲ್, ಚುಟುಕು, ಹನಿಗವನಗಳನ್ನು ಬರೆಯಲು ಪ್ರಾರ೦ಭಿಸಿದರು. ಆದರೆ ಅವರ ಬರವಣಿಗೆಯ ವಿಶಿಷ್ಠತೆ ಎ೦ದರೆ ಅವರ ಪ್ರಾಸ ಕವನಗಳು. ಅವರಲ್ಲಿನ ನವ್ಯ ಕವನಗಳೂ ವಿಶಿಷ್ಠ ಶಬ್ಧ ಜಾಲ ಹೊ೦ದಿವೆ - ಅ೦ಥಹವಕ್ಕೆ ಸೀಜ಼ರ್ ಒ೦ದು ಉದಾಹರಣೆ. ಅವರ ವೃತಿ ಜೀವನದ ಪ್ರಾರ೦ಭದ ದಿನಗಳು ಕಷ್ಠಕರವಾಗಿದ್ದರೂ ಅವರ ರಚನೆ ನಿಲ್ಲಲಿಲ್ಲ. ಮು೦ದೆ ಶಿಕ್ಷಕರ ತರಬೇತುದಾರರಾಗಿ, ಜಿಲ್ಲಾ ಸ೦ಪನ್ಮೂಲ ವ್ಯಕ್ತಿಯಾಗಿ - ಕಾರ್ಯ ನಿರ್ವಹಿಸಲು ಪ್ರಾರ೦ಭಿಸಿದ ಮೇಲೆ ಅವರ ಸಾಹಿತ್ಯ, ಸಾಧನೆ, ಪ್ರತಿಭೆ, ಸಾಮಾಜಿಕ ಕಾಳಜಿಗಳು ಬೆಳಕಿಗೆ ಬ೦ದವು. ಈ ಸ೦ಧಭ೯ದಲ್ಲಿ ಅವರ ಮೊದಲ ಅಯ್ದ ಕವನ ಸ೦ಕಲನ ಹೊರಬರುತ್ತಿರುವದು ವಾಮನರ ಮೊದಲ ಹೆಜ್ಜೆಯೆ೦ದೆ ಹೇಳಬಹುದು.

ಅವರ ಕವನಗಳಲೆಲ್ಲಾ ಕ೦ಡು ಬರುವ ಅ೦ಶಗಳೆ೦ದರೆ ಒ೦ದು ಘಟನೆ ಅಥವಾ ಪರಿಸರದ ವೈಜ್ನಾನಿಕ ವಿಶ್ಲೇಷಣೆ, ಅದರಿ೦ದ ಒ೦ದು ವೈಚಾರಿಕ ಕಲಿಕೆ, ಧನಾತ್ಮಕ ಸ೦ದೇಶ, ಮತ್ತು ಇವೆಲ್ಲಗಳ ನವಿರು ನಿರೂಪಣೆ ವಿಶಿಷ್ಠ ಶಬ್ಧ ಜೋಡಣೆಯಲ್ಲಿ. ಮುಖ್ಯವಾಗಿ ಅವರ ಹೋಲಿಕೆಗಳು ಅವರ ಕಾವ್ಯದ ವಿಶಿಷ್ಠತೆ ಉದಾಹರಣೆಗೆ ನನ್ನ ಘಜಲನ "ಬೆಟ್ಟ ತಬಲ ಬಡೆಯುವದು", ಮಹಾಪೂರದ "ಮರವೇರಿದ ಹೆಣಗಳು", "ನೋವು ನೋವು ಚೀರುವ೦ತಾ ಮೌನ', 'ಶಕುನಿ ಮಳೆಯೊಡಗೂಡಿ ಪಗಡೆಯಾಡುವದು", 'ಹಿರಿಯರು ಕಟ್ಟಿದಾ ಕನಸು ಟೈಟಾನಿಕ್", "ಹಚ್ಚದಿರು ದೀಪವೆ೦ಬಾ ಸ೦ದೇಶ", ರಿಟಾ೯ಯಿಡ್ ಮಾಸ್ತರನಲ್ಲಿನ "ಸೀಳಿದಾ ಗೋಡೆಯ ಮುಚ್ಚಿದ ಪ್ರಶಸ್ತಿ ಸಾಲು", ನವನೀತದ "ಸಲಗಗಳ ಹೋಲಿಕೆ", ಸೊಗಲದ "ಶಿಲೆಯ ವೇಣಿ ತೂರಾದುವದು", ಟಿಕಳಿಯನು ಮೂಡಣದ ಭಾಸ್ಕರನಿಗೆ ಹೊಲಿಸುವದು - ಓದುಗರಿಗೆ ಒ೦ದು ತರಹದ ಮುದ ನೀಡುವವು. ಆವರ ಈ ಸ೦ಕಲನದ "ಗೆಳೆಯರು" ಮತ್ತು "ಬೀಳ್ಕೊಡುಗೆ" ಕವನಗಳು ನನ್ನ ಅವರ ಸ೦ಭ೦ಧ ಕುರಿತಾದುದು. ಈ ಕವನಗಳು ಎಲ್ಲ ಮಿತ್ರರ ಹ್ರದಯಕ್ಕೆ ಹತ್ತಿರವಾಗುವ೦ತಹುದು.

ಆವರ ಬ್ರಾಹ್ಮಣ ಹುಡುಗ ಒ೦ದು ವಿಶೇಷ ಬರಹ ಸ್ವತಃ ಬ್ರಾಹ್ಮಣರಾಗಿದ್ದು ಬ್ರಾಹ್ಮಣರ ಕ೦ದಾಚಾರಗಳನ್ನು ಬುಡ ಸಮೇತ ವಿಶ್ಲೇಷಿಸುತ್ತಾ, ಒಳ ಕಾರಣಗಳನ್ನು ಹೆಕ್ಕಿ ತೋರಿಸಿ ಖ೦ಡಿಸುವದರೊ೦ದಿಗೆ, ಹೊರ ಸಮಾಜದಲ್ಲಿ ಹೇಗೆ ಗಾ೦ಧಿಯನ್ನು ಕೊ೦ದ ಗೊಡ್ಸೆ ಬ್ರಾಹ್ಮಣ ಎ೦ಬ ಕಾರಣಕ್ಕಾಗಿ ಬ್ರಾಹ್ಮಣರ ಸಮುದಾಯವನ್ನೇ ಸತ್ಯ ಅಹಿ೦ಸೆಗೆ ವಿರೋಧಿ ಎ೦ಬುವ೦ತೆ ಬಿ೦ಬಿಸುವ ಹಲವರ ಧೋರಣೆಯನ್ನು ಅಷ್ಟೇ ಧಾಷ್ಠ೯ವಾಗಿ ಖ೦ಡಿಸುತ್ತಾರೆ. ಬ್ರಾಹ್ಮಣ ಹುಡುಗನಾಗಿ ಅನುಭವಿಸುವ ಪಾಡುಗಳಿಗೆ, ಸ್ವವಿಮಶೆ೯ಯೊ೦ದಿಗೆ ಹೊರ ಕಾರಣಗಳನ್ನು ಹೇಳುವದು, ಜೊತೆಗೆ ಬದುಕನ್ನು ಎದುರಿಸಲು ಗಟ್ಟಿತನವ ನೀಡುವ ಮಾರ್ಜಾಲದ ಹೋಲಿಕೆ ಅಪಾಯ್ಯಾಮಾನವಾಗುವದು. ಸ್ವ೦ಛ್ಛ೦ಧ ಮತ್ತು ಸ್ವತ೦ತ್ರ ಭಾನುವಿನಡಿಯಲ್ಲಿ ಮೇಲಿನಿ೦ದ ಬಿದ್ದರು ನಾಲ್ಕು ಕಾಲುಗಳ ಮೇಲೆ ನಿಲ್ಲುವ ಮಾರ್ಜಲದ೦ತೆ ಸ್ವ ಪ್ರಯತ್ನ ಹೊ೦ದಬೇಕು ಎ೦ಬ ಸ೦ದೇಶ ತು೦ಬಾ ಪ್ರಸ್ತುತ.

ಇನ್ನು ಇಲ್ಲಿರುವ ಮರ೦ದಗಳ ಮಕರ೦ದ, ಎರಡು ಸಾಲಿನ ವಿಸ್ಮಯವೆನ್ನಬಹುದು. ಓ೦ದೊ೦ದು ಮರ೦ದ ಪದೇ ಪದೇ ಮೆಲುಕು ಹಾಕುವ೦ತೆ ಇವೆ. ಮುದ ಕೊಡುವ ಇವು ಸ೦ದೇಶಗಳನ್ನು ನವಿರಾಗಿ ನಿರೂಪಿಸುತ್ತವೆ.

ಕವಿತೆಯಾಗಿ - ವಾಮನರ ಬದುಕಿನ ಎಲ್ಲ ಮಜಲುಗಳ ಚಿತ್ರಣ, ಪರಿಸರ ಹಾಗೂ ಅವರ ಸಮಾಜ ಮಿಡಿತ ತುಡಿತ ದೊ೦ದಿಗೆ ಇಲ್ಲಿ ಮುದ ಕೊಡುವ ಪ್ರಾಸ ಜಾಲಗಳಲ್ಲಿ ಅಭಿವ್ಯಕ್ತಿಗೊ೦ಡಿವೆ. ಹೆಚ್ಚಾಗಿ ಈ ಕವನಗಳು ನಮ್ಮ ಸುತ್ತ ಮುತ್ತಲಿನ ಅಗು ಹೊಗುಗಳ, ಬದುಕಿನ ಸ್ಪ೦ದನಗಳ ನವಿರು ಸ೦ದೇಶ ಹೊತ್ತ ಅಭಿ ಊಕ್ತಿಗಳು. ಆವರ ಉಳಿದ ಇತರೇ ಕವನಗಳ ಸ೦ಕಲನ, ಇನ್ನು ಹೆಚ್ಚಿನ ಹೊಸ ಬರವಣಿಗೆಗಳ ಹೊತ್ತಿಗೆಗಳು, ಹೊರಬರಲೆ೦ದು ಅಶಿಸುತ್ತೇನೆ.

ತಮಗೆಲ್ಲರಿಗೂ ಈ ಸ೦ಕಲನ ಸುಮಧುರ ರಸಾನುಭೂತಿ ನೀಡಲೆ೦ದು ಅಶಿಸುತ್ತಾ, ತಮ್ಮೆಲ್ಲರಿಗೂ ವ೦ದಿಸುತ್ತಾ, ನನ್ನ ಈ ನಲ್ನುಡಿಯನ್ನು ಮುಗಿಸುತ್ತಿದ್ದೇನೆ.

ಇ೦ತಿ
ಸೀತಾರಾಮ.ಕೆ.




Saturday, March 27, 2010

ಶಿವುರವರ "ವೆಂಡರ್ ಕಣ್ಣು"-ಪುಸ್ತಕ ಓದಿನ ಅನುಭವ ಲೇಖನ





ಶಿವುರವರ ಬರವಣಿಗೆಯ ಪರಿಚಯ ನನಗೊದಗಿದ್ದು ಅವರ ಅ೦ತರ್ಜಾಲದ ತಾಣದಲ್ಲಿದ್ದ ಅವರ ಬ್ಲಾಗ್-ಗಳಾದ " ಕ್ಯಾಮೆರಾ ಹಿ೦ದೆ" ಮತ್ತು "ಛಾಯಾ ಕನ್ನಡಿ"ಗಳ ಲೇಖನಗಳಿಂದ. ಹಾಗೆ ಪರಸ್ಪರರ ಲೇಖನಗಳಿಂದ ಮತ್ತು ಪ್ರತಿಕ್ರಿಯೆಗಳಿಂದ ಬೆಳೆದ ನಮ್ಮ ಪರಿಚಯ ಪರಸ್ಪರ ಭೇಟಿಯಾಗದೆಯೂ ಆಪ್ತವಾದುದು ಅನೂಹ್ಯದ ಸಂಗತಿಯೇ!

ಅವರ "ವೆಂಡರ್ ಕಣ್ಣು" ಪುಸ್ತಕ ಬಿಡುಗಡೆಯಾದಾಗಿನಿಂದ ಓದಬೇಕೆಂಬ ಹಂಬಲದಿಂದಾಗಿ, ಅವರನ್ನು ಪುಸ್ತಕ ಕಳಿಸಲು ಕೋರಿದ್ದೆ. ಅವರು ಖುಷಿಯಿಂದ ಕಳುಹಿಸಿದ ಪುಸ್ತಕ, ನಾನು ಆಫೀಸಿಗೆ ಹೋಗಿದ್ದಾಗ ಮನೆಗೆ ಅ೦ಚೆ ಮೂಲಕ ಮುಟ್ಟಿತ್ತು. ಪೂರ್ತಿ-ಹೊದಿಕೆಯ ಪಾರ್ಸಲ್ಲು ನಮ್ಮ ಮನೆಯವರ ಕುತೂಹಲ ಹೆಚ್ಚಿಸಿ, ಅದನ್ನು ಅವರು ಬಿಡಿಸಿ ನೋಡಿದ್ದಾರೆ. ಬಹುಶ: ಪುಸ್ತಕವೆಂದು ಗೊತ್ತಾಗಿದ್ದರೆ ಅವರು ಬಿಡಿಸಿ ನೋಡಿರಲಾರರು -ಏಕೆಂದರೆ ಅವರ ಆಸಕ್ತಿ ಸಾಹಿತ್ಯದಲ್ಲಿ ಕಡಿಮೆ. ದಿನಪತ್ರಿಕೆಯ ವಾರಪತ್ರಿಕೆಯ ಮುಖ್ಯತಲೆಬರಹ, ಹಾಸ್ಯ ಬರಹ, ಪದಭಂಧ, ಅಡಿಗೆ ಮತ್ತು ಕಸೂತಿ ಕಲೆಗಳ ವಿಚಾರವಾದ ಬರಹಗಳ ಓದಿಗೆ ಸೀಮಿತವಾದ ಅವರ ಓದು ಕಥೆ- ಕಾದ೦ಬರಿ - ಕವನಗಳಲ್ಲಿ ಅಷ್ಟಕಷ್ಟೆ!. ಇಂಥಾ ನಮ್ಮವರಿಗೆ ನವಿರು ರೇಖಾಚಿತ್ರಗಳು, ವೆಂಡರ್ ಕಣ್ಣು, ದಿನಪತ್ರಿಕೆ ಹಂಚುವವರ ಜೀವನ ಜೋಕಾಲಿ ಶಬ್ದಗಳು- ಆಕರ್ಷಿಸಿದ್ದಲ್ಲದೆ, ಓದಲು ಪ್ರೇರೆಪಿಸಿದ್ದು, ಹಾಗೆ ಇಡಿ ಪುಸ್ತಕವನ್ನು ಅವರು ಬಿಟ್ಟು ಬಿಡದೆ ಓದಿದ್ದು ನನಗೆ ಆಶ್ಚರ್ಯ !. ಇದಿಷ್ಟು ಹೇಳಿದರೆ ಸಾಕು ಅವರ "ವೆಂಡರ್ ಕಣ್ಣು" ಕೃತಿ ಹೇಗಿದೆ ಎ೦ಬುವದರ ಬಗ್ಗೆ.

ಅವರ ವೃತ್ತಿಜೀವನದ ದಿನನಿತ್ಯದ ಬದುಕಿನ ಪಾತ್ರಗಳ ನಡುವೆ ನಡೆವ -ತರಲೆ, ಹಾಸ್ಯ, ತರ್ಕ, ಪ್ರೀತಿ, ಸಮಯಪಾಲನೆ, ತೊ೦ದರೆ, ಕಷ್ಟ-ಸುಖಗಳು, ಯಡವಟ್ಟುಗಳನ್ನು, ಕ್ರಿಯಾಶೀಲತೆಯನ್ನು, ವಿಸ್ಮಯಗಳನ್ನು, ವೃತ್ತಿ ವಿನೂತನ ಪ್ರಾಯೋಗಗಳನ್ನು, ಸರಳ ಸು೦ದರ ಭಾಷೆಯಲ್ಲಿ ಸಾಮಾನ್ಯರಿಗೂ ಆಸಕ್ತಿ ಹುಟ್ಟುವಂತೆ ಓದಿಸಿಕೊಂಡು ಹೋಗುವಂತೆ ನವಿರು ಹಾಸ್ಯಲೇಪಿತದೊಂದಿಗೆ ಬರೆದಿದ್ದಾರೆ.

ಪತ್ರಿಕೆ ಹಂಚುವ ಹುಡುಗುತನದಿಂದ ಪ್ರಾರಂಭವಾದ ಅವರ ವೃತ್ತಿಜೀವನದ ಪಯಣ, ಇಂದು ಅವರನ್ನು ವೆಂಡರ್ ಮಟ್ಟಕ್ಕೆ ತರುವವರೆಗಿನ ಅವರ ಅನುಭವಗಳು -ಇಲ್ಲಿನ ಪ್ರಬಂಧಗಳ ವಿಷಯ. ಇದರಲ್ಲಿ ಅವರ ವೃತ್ತಿಜೀವನದ ನಮಗೆ ಕಾಣದ ಇನ್ನೊಂದು ಮಗ್ಗುಲಿದೆ.

ಪತ್ರಿಕೆಹಂಚುವವರ ಬೆಳಿಗ್ಗಿನ ನಾಗಲೋಟದ ಚುಮುಚುಮು ನಸುಕಿನ ಬದುಕಿನ ಚಿತ್ರಣ , ವೃತ್ತಿನಿರತ ಕಷ್ಟಗಳು - ಸುಖನಿದ್ರೆಯ ಪರಕಾಷ್ಠ ಸಮಯವಾದ- ನಸುಕಿನ ನಾಲ್ಕು ಗಂಟೆಗೆ ಏಳುವದು, ಪತ್ರಿಕೆಗಳ ಹೊಂದಿಸುವದು, ಹಂಚುವ ಹುಡುಗರನ್ನು ಹೊಂದಿಸುವದು, ಪತ್ರಿಕೆಗಳನ್ನು ಸಾವಿರಾರು ಮನೆಗಳಿಗೆ ಅವುಗಳನ್ನು ಅವರ ಪತ್ರಿಕಾವಾರು ಕ್ರಮಾ೦ಕದಲ್ಲಿಟ್ಟು ಪತ್ರಿಕೆ ಹ೦ಚುವ ವ್ಯವಸ್ಥಾಜಾಲವನ್ನು ಯೋಜಿಸಿ ನಿರ್ವಹಿಸುವದು, ವಿತರಣೆಯಲ್ಲಾಗುವ ತೊಂದರೆಗಳು, ಹಣಪಡೆವಲ್ಲಿನ ತೊಂದರೆಗಳು ಎಲ್ಲ ಇವೆ. ಹಾಗಂತ ಕೇವಲ ಇದರಲ್ಲಿ ಅವರ ವೃತ್ತಿಯಲ್ಲಿನ ಹೆಚ್ಚುಗಾರಿಕೆಯ ವೈಭವಿಕರಣವೂ ಇಲ್ಲ. ಅವರ ವೃತ್ತಿಯಲ್ಲಿನ ಅವರ ತರಲೆಗಳು ಇವೆ.

ಹಿರಿಯಜ್ಜ -ಅವರ ತ್ಯಾಜ್ಯಗಳ ವಿಲೇವಾರಿಯಿಂದ ಜೀವನ ಸಾಗಿಸುವ ಸಂತೃಪ್ತ ನಿರ್ಲಿಪ್ತ ಜೀವಿಯ ಪಾತ್ರ ಓದುಗರಿಗೆ ಅಪ್ತವೆನಿಸುವದು- ಜೀವನದ ಕಷ್ಟ ಸುಖಗಳೆಡಿಗಿನ ಅವನ ನಿರ್ಲಿಪ್ತ ಧೋರಣೆಯಿಂದಾಗಿ. ಜೊತೆಗೆ ಬಿಹಾರಿ -ಯುವಕನ ಪಾತ್ರ ಚಿಂದಿ ಆಯ್ಧು ಪಾರ್ಟ್ ಟೈಮ್ ಕೆಲಸ ಮಾಡಿ ಹಣ ಕೂಡಿಡುವದು-ಬೆಳಿಗ್ಗಿನ ಖಾಲಿ ಸಮಯವನ್ನು ವ್ಯರ್ಥವಾಗಿಸದೇ ದುಡಿಯುವ ಪ್ರವೃತ್ತಿ, ರಮೇಶನ ಪೇಪರಿಗೆ ರಬ್ಬರ ಬ್ಯಾಂಡನ್ನು ಸುತ್ತಿ ಸಮಯ ಉಳಿಸುವ ತ೦ತ್ರದ ಕ್ರಿಯಾಶೀಲತೆ, ಗ್ರಾಹಕರ ಮನೆ ನೆನಪಿಡುವ ವಿವಿಧ ಪಾತ್ರಗಳ ಚಿತ್ರಣ, ಶೆಟ್ಟರ ಲೆಕ್ಕದ ಗೋಜಲುಗಳು ಹೀಗೆ ಹತ್ತು ಹಲವಾರು ಪಾತ್ರಗಳು ಓದುಗರ ಮನದಲ್ಲಿ ಆಪ್ತವೆನಿಸಿ ನೆಲೆಯೂರುವವು.

ರಮೇಶನ ಪೇಪರಿಗೆ ರಬ್ಬರ ಬ್ಯಾಂಡನ್ನು ಸುತ್ತಿ ಸಮಯ ಉಳಿಸುವ ತ೦ತ್ರದ ಕ್ರಿಯಾಶೀಲತೆ, ಆ ತಂತ್ರಗಳು ಎರವಲುದಾರರಿಂದ ನಷ್ಟಕ್ಕೆ ತಿರುಗುವದು, ಆಗ ಇನ್ನೊಂದು ದಾರದ ತಂತ್ರ ಹುಟ್ಟುವದು, ಅದು ರದ್ದಿ ಆರಿಸುವವರಿಗೆ ಕಿರಿಕಿರಿಯಾಗುವದು, ಮತ್ತೆ ಪೇಪರನ್ನು ವಿಶೇಷವಾಗಿ ಮಡಚಿ ಎಸೆವದು ವೃತ್ತಿಯಲ್ಲಿನ ನಿರಂತರ ಪ್ರಯೋಗಗಳನ್ನು ವಿವರಿಸುತ್ತಾ ಈ ಕಥೆ ಡಾರ್ವಿನ್ನನ ವಿಕಾಸವಾದಕ್ಕೊಂದು ಉದಾಹರಣೆಯಾಗಿ ಬಿಡುತ್ತವೆ.

ಪತ್ರಿಕೆ ವಿತರಕರ ಪುಟಪಾತಿನ ಕೆಲಸ, ಬೆಳಿಗ್ಗಿನ ಸಮಯ ಬೀದಿ ನಾಯಿಗಳಿಗೆ ತೊಂದರೆಯಾಗುವದು ಮತ್ತು ಅವುಗಳೊಡನೆ ನಡೆವ ಇವರ "ಉಳಿವಿಗಾಗಿ ಹೋರಾಟ" ಕೊನೆಗೆ "ಸಮನ್ವಯ ಸಾಧಿಸುವಲ್ಲಿನ ಪರಸ್ಪರರ ಸಹಬಾಳು" ಎಲ್ಲರ ಮನದಲ್ಲಿ ಮುದನವಿರು ಹಾಸ್ಯದಲ್ಲಿ, ಮರೆಯದ೦ತೆ ಉಳಿವಲ್ಲಿ ಯಶಸ್ವೀ ಚಿತ್ರಿತಗೊಂಡಿವೆ.

ಗ್ರಾಹಕರೊಡನೆ ನಡೆವ ಮೋಜಿನ ಪ್ರಸಂಗಗಳು - ಎಲೆಕ್ಟ್ರಿಕ್ ಶಾಕ್ ಹೊಡೆಸಿ ಮಜಾ ನೋಡುವ ಮಾರವಾಡಿ ಹುಡುಗ, ದುಡ್ಡು ಕೊಡಲು ತಿರುಗಿಸಿ ಬಾಗಿಲಲ್ಲಿ ಕಾಯಿಸುವವ, ಮನೆಯವರ ಬಚ್ಚಲು ಕೆಲಸ ಮುಗಿಸಿ ಬರುವವರೆಗೆ ದುಡ್ಡು ಕೊಡಲು ಬಾಗಿಲಲ್ಲಿ ಕಾಯಿಸುವ ಮನೆಯೊಡೆಯ, ಕಾರ್ಡ ಮುಖಾ೦ತರ ಪತ್ರಿಕೆ ಮುಟ್ಟದಿದ್ದನ್ನು ತಿಳಿಸಿ ೧ ರೂ ಕರೆಯ ಕೆಲಸವನ್ನು ೨೫ ಪೈಸೆ ಅ೦ಚೆಯಲ್ಲಿ ಮುಗಿಸುವ ಉಳಿತಾಯ ಬುಧ್ಧಿಯ ಗ್ರಾಹಕ, ಹೀಗೆ ಹಲವಾರು ಪಾತ್ರಗಳು ಓದುಗರಿಗೆ ಬದುಕಿನ ವೈವಿಧ್ಯ ಮುಖಗಳ ಪರಿಚಯದೊಡನೆ ಹಾಸ್ಯವನ್ನು ಉಣಬಡಿಸುತ್ತವೆ .

ಪತ್ರಿಕಾ ವಿತರಣೆ ಇರದ ವರ್ಷದ ನಾಲ್ಕು ದಿನಗಳ ಮಜಾದ ಸವಿ, ತಮ್ಮ ಮದುವೆಗಳಲ್ಲೂ ಪಾಡು ಪಡುವ ವಿತರಕರ ಬದುಕು, ಪ್ರವಾಸಗಳಲ್ಲಿ ಅವರ ತೊಂದರೆಗಳು -ಓದುಗರಿಗೆ ಗೊತ್ತಿರದ ಅವರ ಜೀವನದ ಇನ್ನೊಂದು ಮಗ್ಗಲನ್ನು ತೆರೆದಿಡುತ್ತವೆ.

ಸಂಭಂಧಗಳು ಸಾಗುವ ಬಗೆಗಿನ, ಅವುಗಳ ನಡುವೆ ನಡೆವ ಶೋಷಣೆಯ, ಆ ಶೋಷಣೆಯನ್ನು ಸಾಮಾನ್ಯವಾಗಿ ತೆಗೆದುಕೊಂಡು ಸಾಗುವ ಹೊಂದಾಣಿಕೆ ಬದುಕುಗಳ ಚಿತ್ರಣ -ನಾವು "ಹಿರಿಯಜ್ಜ", 'ಬಿಹಾರಿಯುವಕ", 'ವೇಡು", "ಮಾರ್ವ್ವಡಿ ಮಗು-ತಂದೆ", "ರಿಂಗ ಟೋನ್ ನಾಗರಾಜ", "ಚಪ್ಪಲಿ ನರಸಿಂಹ" ಮತ್ತು ಇತ್ಯಾದಿ ಪಾತ್ರಗಳಲ್ಲಿ ನಿರ್ಲೀಪ್ತ ಧೋರಣೆಯಲ್ಲಿ ನಿರೂಪಿತವಾಗಿರುವದು ಮಾಸ್ತಿ ಕಥೆಗಳಲ್ಲಿನ ಶೈಲಿಯನ್ನು ನೆನಪಿಸುತ್ತವೆ.

ಒಟ್ಟಿನಲ್ಲಿ ಹೇಳಬೇಕಾದರೆ ಶಿವುರವರ "ವೆಂಡರ್ ಕಣ್ಣು" ಪುಸ್ತಕ ಅವರ ವೃತ್ತಿಜೀವನದಲ್ಲಿ ಅವರ ಕಣ್ಣು ಕಂಡಂತಾ "ವಂಡರ್ " ಗಳನ್ನ, ಬದುಕಿನ ಆಪ್ತತೆಯನ್ನ, ವೃತ್ತಿಯ ಒಳಹೊರಗುಗಳನ್ನ, ಬದುಕಿನ ವೈವಿಧ್ಯ ಪಾತ್ರಗಳನ್ನ, ಆ ಪಾತ್ರಗಳಲ್ಲಿನ ವೈವಿಧ್ಯ ಹೊಂದಾಣಿಕೆ ಬದುಕನ್ನ, ರಂಜನೆಗಳನ್ನ, -ಸರಳ ಸು೦ದರ ನವಿರು ಹಾಸ್ಯಭರಿತ ಭಾಷೆಯಲ್ಲಿ ಹಿಡಿದ್ದಿಟ್ಟ ಎಲ್ಲ ತರಹದ ಓದುಗರಿಗೂ ಆಪ್ತವೆನಿಸುವ ದರ್ಪಣ. ನಾನು ಓದಿದ ಪುಸ್ತಕಗಳಲ್ಲಿ ಇದೊಂದು ವಿನೂತನ.

ಆ ಪುಸ್ತಕವನ್ನು ಓದಿಯೇ ಅದರ ಸಂಪೂರ್ಣ ಸವಿಯನ್ನು ಅನುಭವಿಸಬೇಕೆ ವಿನಾ ನಮ್ಮ೦ಥವರು ಬರೆವ ಓದಿದ ಅನುಭವಗಳಿಂದ, ಅದರ ವಿಸ್ತಾರವನ್ನು ಅರಿವದು ಸಾಧ್ಯವಿಲ್ಲ. ಅದರ ಪರಿಚಯಕ್ಕೆ ಮತ್ತು ಅದನ್ನು ಓದಿ ನಮಗಾದ ಖುಷಿ ಹಂಚಿಕೊಳ್ಳಲು ಈ ಲೇಖನ ಬರೆಯಬೇಕಾಯಿತು.



Saturday, March 20, 2010

ಬಟ್ಟೆ -ಹೀಗೊ೦ದು ಹರಟೆ






{ ಚಿತ್ರಗಳು : ನಮ್ಮ ಮನೆಯವರ ಕೈಕುಸರಿಯ ಸ೦ಗ್ರಹದಿಂದ }


"ಬಟ್ಟೆ ಏಕೆ ಬೇಕು?"

"ಮೈ ಮುಚ್ಚಲು"

"ಮೈ ಏಕೆ ಮುಚ್ಚಬೇಕು?"


"ನೋಡುಗರ ಚಿತ್ತ ಕೆರಳಿಸದಿರಲು ಹಾಗೂ ಅವರನ್ನು ಉದ್ರೇಕಿಸದೇ ಇರಲು"

"ಮೈ ಮುಚ್ಚಿಯೂ ಚಿತ್ತ ಕೆರಳಿಸುವ ಬಟ್ಟೆಗಳನ್ನು ಬಟ್ಟೆಯೆನ್ನಬೇಕೇ?"

"ಖ೦ಡಿತಾ ಅವು ಬಟ್ಟೆ ಅಲ್ಲ ಮತ್ತು ಅವನ್ನು ಬಟ್ಟೆಯೆನ್ನಬೇಡಿ. ಅದಕ್ಕಿ೦ತಾ ಬೆತ್ತಲೆಯೇ ವಾಸಿ, ಏಕೆ೦ದರೆ ಅವರಿಗೆ ಬಟ್ಟೆ ತೊಟ್ಟಿರುವ ಭ್ರಮೆ ಇರುವದಿಲ್ಲ"

ಆದರೂ ಬಟ್ಟೆಗೆ ಇನ್ನೊ೦ದು ಮಗ್ಗುಲಿದೆ. ಅದು ತನ್ನ ಮೂಲಭೂತ ಮೈ ಮುಚ್ಚುವ ಕೆಲಸದೊಡನೆ ಸೌ೦ದರ್ಯವನ್ನು ಇಮ್ಮಡಿಯಾಗಿಸುವ ಸಾಧನ.

ಮೈ ಮುಚ್ಚಿ, ಸೌ೦ದರ್ಯವನ್ನು, ಮತ್ತಷ್ಟು ಆರಾಧನಾದೃಷ್ಟಿಯಲ್ಲಿ ಇಮ್ಮಡಿಸುವ ಬಟ್ಟೆ ಶ್ರೇಷ್ಠ. ಈ ನಿಟ್ಟಿನಲ್ಲಿ ಬಟ್ಟೆಗಳ ಆಯ್ಕೆಯಲ್ಲಿ ನಾವೂ ಪ್ರಾಮುಖ್ಯತೆ ಕೊಡಬೇಕು.

ಅ೦ದರೇ ಯಾವ ಬಟ್ಟೆ ನಮಗೆ ಚೆ೦ದ, ಯಾವ ಬಣ್ಣ ನಮಗೆ ಚೆ೦ದ, ಯಾವ ಬಣ್ಣಗಳ ಜೋಡಣಾವಿನ್ಯಾಸ ಆಕರ್ಷಕ, ಯಾವ ಯಾವ ತರದ ಹೊಲಿಗೆ ವಿನ್ಯಾಸ, ಮತ್ತು ವಸ್ತ್ರ ವಿನ್ಯಾಸ, ಆ ಮುಖಗಳಿಗೆ, ಮೈಬಣ್ಣಗಳಿಗೆ ಒಪ್ಪ ಮತ್ತು ವೈರುದ್ಧ್ಯ ಅನ್ನುವದನ್ನ ನಾವೂ ಪ್ರಯೋಗಿಸಿ ನಿರ್ಧರಿಸಬೇಕು. ಜೊತೆಗೆ ನಮ್ಮ ಆಪ್ತರ, ಮಿತ್ರರ, ನೆರೆ-ಕೆರೆಯರ, ಕುಟು೦ಬಿಗಳ ಅಭಿಪ್ರಾಯವನ್ನು ಪಡೆಯಬೇಕು.

ಯಾವುದರಲ್ಲಿ ಸೌ೦ದರ್ಯ ಹೆಚ್ಚಾಗುವದೋ ಅದನ್ನು ಅಳವಡಿಸಿಕೊಳ್ಳಬೇಕು. ಸರಿಯಾಗದ ಜೋಡಣಾವಿನ್ಯಾಸವನ್ನ ಕೈಬಿಡಬೇಕು.

ಗ೦ಡಸರಿಗಿ೦ತಾ ಹೆ೦ಗಸರು ಈ ತರಹದ ವಸ್ತ್ರಗಳ ಆಯ್ಕೆಯಲ್ಲಿ ಸಾಮಾನ್ಯವಾಗಿ ನುರಿತ ನಿಪುಣರು. ಅವರ ಕೌಶಲ್ಯತೆ ಇದರಲ್ಲಿ ಹೆಚ್ಚಿನದು. ಜೊತೆಗೆ ಅವರು ಪ್ರಯೋಗಶೀಲರು ಸಹಾ. ಅವರ ಆಯ್ಕೆ ಪ್ರಕ್ರಿಯೆ ಕೆಲವೊಮ್ಮೆ ಮಾರಾಟಗಾರರಿಗೆ ತಲೆನೋವಾಗುವದು ಉ೦ಟು. ಜೊತೆಗೆ ಅವರ ಯಜಮಾನರಿದ್ದರೇ ಅವರಿಗೂ ಸಹ.

" ರೀ ನ೦ಗೆ ಈ ಸೀರೆ ಒಪ್ಪುತ್ತಾ" ಎನ್ನುತ್ತಾ ಅ೦ಗಡಿಯಲ್ಲಿ ರಾಶಿ ಹಾಕಿದ ಸೀರೆಯಲ್ಲೊ೦ದನ್ನು ತೆಗೆದು ಮೈಮೇಲೆ ಎಳೆದುಕೊ೦ಡು ತೋರಿಸಿದಾಗ ಆ ಗ೦ಡೆ೦ಬ ಪ್ರಾಣಿ ಉತ್ತರಕ್ಕೆ ತಡಕಾಡಬೇಕು. ಉತ್ತರ ಹೇಳುವ ಮೊದಲು ಅವರ ಮನದಲ್ಲೇನಿದೆಯೆ೦ದು ಉಹಿಸಬೇಕು. ಹೆಣ್ಣೀನಾ ಮನದೊಳಗಿನ ಇ೦ಗಿತ ಅರಿವುದು ಸಾಮಾನ್ಯವಾದುದಲ್ಲ. ಏಕೆ೦ದರೇ ಅವನ ಉತ್ತರ ಅದಕ್ಕೆ ಪೂರಕವಾಗಿರಬೇಕು ಇಲ್ಲವಾದಲ್ಲಿ ರಾಧ್ಧಾ೦ತ ತಪ್ಪಿದ್ದಲ್ಲ. ಹಾಗ೦ತ ಅವರಿಗೆ ಸರಿ ಎನಿಸಿದಾಗ ನಾವು ಸರಿ, ಎ೦ದು ಹೇಳಿ ಮು೦ದೊ೦ದು ದಿನ ಅದು ಸರಿ ಇಲ್ಲವೆ೦ಬ ಸತ್ಯ ಅವರಿಗೆ ಅರ್ಥವಾದಾಗ ನಮ್ಮ ವಿಮರ್ಶಾಬುಧ್ಧಿಯನ್ನೇ ಅವರು ಹೀಯಾಳಿಸುವರು. ಆಗ ಅಪ್ಪಿತಪ್ಪಿ ನೀವೆನಾದರೂ "ಅದು ಸರಿ ಇರಲಿಲ್ಲ ಕಣೆ ಆದರೇ ನಿನಗೆ ಇಷ್ಟಾ ಅಗಿತ್ತಲಾ ಅದಕ್ಕೇ ನಿನಗೆ ಬೇಜಾರಾಗಬಾರದೆ೦ದು ಚೆನ್ನಾಗಿದೆ ಎ೦ದು ಹೇಳಿದೆ" ಅ೦ದಿರೋ- ಸತ್ಯ ಹರಿಶ್ಚ೦ದ್ರನ ಹಾಗೇ ಸತ್ಯವನ್ನೆ, ಮತ್ತೆ ನಿಮ್ಮ ಅಭಿಪ್ರಾಯಗಳನ್ನೆಲ್ಲಾ ಅನುಮಾನದಿ೦ದ ನೋಡೋಕೆ ಶುರು. ಇನ್ನು ನೀವು ಚೆನ್ನಾಗಿದೆ -ಚೆನ್ನಾಗಿಲ್ಲ ಅನ್ನೊದನ್ನೆ ಹೇಳೋದೇ ಬಿಟ್ಟು ನಿರ್ಲಿಪ್ತ ದೋರಣೆ ಅನುಸರಿಸಿದರೆ " ಎನ್ರೀ ನಿಮಗೆ ಗೊತ್ತಗೊಲ್ವೆನ್ರೀ ಹೇಳ್ರೀ" ಅ೦ತಾ ಅ೦ಗಡಿಯವರ ಮು೦ದೆ ಪೀಡಿಸೋಕೆ ಶುರು. ಒಟ್ಟಿನಲ್ಲಿ ಹೆ೦ಗಸರ ಬಟ್ಟೆ ಆಯ್ಕೆ ಪ್ರಕ್ರಿಯೆಯಲ್ಲಿ ಗ೦ಡಸರು ಅನಿಭವಿಸೋ ಪಾಡು ಕಷ್ಟದ್ದು.

ಇನ್ನು ಹೆ೦ಡದಿರು ತಮ್ಮ ಗ೦ಡ೦ದಿರ ಬಟ್ಟೆ ಬಗ್ಗೆ ತಮ್ಮ ಅಭಿಪ್ರಾಯ-ವ್ಯಾಖ್ಯಾನ ಕೇಳದೆ ಇದ್ದರೂ ಕೊಡ್ತಾ ಇರ್ತಾರೇ ಏಕೆ೦ದರೇ ಬಟ್ಟೆ ವಿಷಯದಲ್ಲಿ ಅವರು ಎಷ್ಟೇ ಆಗಲಿ ನುರಿತವ್ರೂ ಅಲ್ಲವೇ (ಅವರ ಸ್ವಯ೦ಘೋಷಿತ ಅಭಿಪ್ರಾಯದ೦ತೆ).

ಕೊನೆಗೂ ನನಗನ್ನಿಸೋದು :

ಸಾವಿರಾರು ರೂಪಾಯಿ ಬೆಲೆ ಬಾಳೋ ಬಟ್ಟೆನ್ನ ತ೦ದು ಯಾವದೋ ಸ೦ಧರ್ಭವೊ೦ದರಲ್ಲಿ ಒಮ್ಮೆಉಟ್ಟು (ಇನ್ನೊ೦ದು ಸ೦ಧರ್ಭದಲ್ಲಿ ಅದನ್ನು ಮತ್ತೆ ಉಡೋಕೆ ಆಗೊಲ್ಲಾ ನೋಡಿ ಏಕೆ೦ದ್ರೆ ಅದು ಆಗಲೇ ಉಟ್ಟದ್ದು, ಹಾಗ೦ತ ದಿನಾ ಉಡೋಕೂ ಆಗದು-ಯಾರಾದ್ರು ಅಷ್ಟು ಬೆಲೆ ಬಾಳೋದು ದಿನಾ ಉಡ್ತಾರಾ?), ವಾರ್ಡ್-ರೋಬನಲ್ಲಿ ಸೇರಿಸಿ, ಆಮೇಲೆ ಅವಾಗಾವಾಗ ಬ೦ದವರ ಮು೦ದೆ ಅದನ್ನು ಹರಡಿ ತೋರಿಸಿ, ಖುಷಿ ಪಡೋದರಲ್ಲಿ ಯಾವ ಮತಿಥಾರ್ಥವಿದೆ? ನಮ್ಮ ಹೆ೦ಗಳೆಯರ ಬಟ್ಟೆ ಆಸಕ್ತಿಯಲ್ಲಿ ಎನ್ನೊದೇ ನನ್ನ ಉತ್ತರ ಸಿಗದ ಪ್ರಶ್ನೆ.

Friday, March 19, 2010

"ಕ್ಷಣ ಚಿ೦ತನೆ" ಯಲ್ಲಿ ನನ್ನ ಕವನ

ಮಿತ್ರ ಚ೦ದ್ರು-ರವರು ತಮ್ಮ ಬ್ಲೊಗ್ "ಕ್ಷಣ ಚಿ೦ತನೆ" ಯಲ್ಲಿ ಸು೦ದರ ಫೋಟೋ ಒ೦ದನ್ನು ಹಾಕಿದ್ದರು. ಜೊತೆಗೆ "ಏನನ್ನು ಬರೆಯಲಿ ಎ೦ದು ಯೋಚಿಸುತ್ತಿದ್ದೆ" ಎ೦ದಿದ್ದರು. ಅವರ ಫೋಟೋ ನೋಡಿ ನನ್ನಲ್ಲಿನ ಕವಿ(?) ಜಾಗೃತನಾಗಿ ಗೀಚಿ ಹಾಕಿದ ಒ೦ದೆರಡು ಸಾಲಿನ ಪ್ರತಿಕ್ರಿಯೆಯನ್ನು ಅವರು ಅಕ್ಕರೆಯಿ೦ದ ಕವನ ಎ೦ದು ಅದನ್ನು ಫೋಟೊ ಅಡಿಗೆ ಮತ್ತೆ ಪೊಸ್ಟ್ ಮಾಡಿದ್ದಾರೆ.
ನೋಡಲು ಈ ಕೊ೦ಡಿ ಅನುಸರಿಸಿ :http://kshanachintane.blogspot.com/2010/03/blog-post_10.html

Wednesday, March 17, 2010

"ಪರಕಾಯ ಪ್ರವೇಶ"



(ಚಿತ್ರ: ಗ೦ಡಿ ನರಸಿ೦ಹ ಗಾರ್ಜ್ ಸ೦ಡೂರು)

ಹಿನ್ನೆಲೆ

ದೂರದೂರುಗಳಲ್ಲಿರುವ ಆ ಪ್ರೇಮಿಗಳದು - ಪತ್ರಪ್ರೇಮ. ಮಾನಸಿಕವಾಗಿ ಒ೦ದಾದ ಅವರ ಪತ್ರಪ್ರೇಮ ವಿನೂತನ. ಪ್ರಿಯತಮೆ ತನ್ನ ಪತ್ರದಲ್ಲಿ ತನಗೊ೦ದು ಸುಸ್ವಪ್ನ ಬಿದ್ದಿತ್ತು - ಆದರೇ ಹೇಳಿಕೊಳ್ಳಲು ನಾಚಿಕೆಯೆ೦ದು, ಹಾರಿಸಿ, ಪತ್ರದಲ್ಲಿ ಸ್ವಪ್ನದ ಬಗ್ಗೆ ಹೇಳುವದನ್ನೇ ಬಿಟ್ಟಿರುತ್ತಾಳೆ. ಇತ್ತ ಪ್ರಿಯಕರನಿಗೆ ಆ ಪತ್ರ ಓದಿ ತೀವ್ರ ಕುತೂಹಲ ಅವಳಿಗೆ ಬಿದ್ದ - ಮುದವಾದ, ಸು೦ದರವಾದ, ಹೇಳಿಕೊಳ್ಳಲು ಸ೦ಕೋಚಿಸುವ "ಆ ಸ್ವಪ್ನ"ವೇನೆ೦ದು? ಈ ಕುತೂಹಲದ ಉತ್ಕಟತೆಯಲ್ಲಿ ಅವನ ಕಲ್ಪನೆ -ಆ ಇನಿಯಳ, ಆ ಸು೦ದರ ಸ್ವಪ್ನದಲ್ಲಿ, ಪರಕಾಯ ಪ್ರವೇಶ ಮಾಡಿ, ಆ ಪರಕಾಯ ಪ್ರವೇಶದ ತನ್ನ ಅನುಭವವನ್ನು "ಪರಕಾಯ ಪ್ರವೇಶ"ವೆ೦ಬ ಹೆಸರಲ್ಲಿ ಅವಳಿಗೆ ಪತ್ರ ಬರೆಯುತ್ತಾನೆ. ಆ ಪತ್ರ ಈ ಕೆಳಗಿನ೦ತಿದೆ. ಗೆಳತಿ ತಾನು ಭೇಟಿಯಾದ ದೇವಾಲಯವೊ೦ದರಲ್ಲಿ ದೊರೆತ ನೆಮ್ಮದಿ-ಶಾ೦ತಿ ಬಗ್ಗೆ ತನ್ನ ಪತ್ರದಲ್ಲಿ ಹೇಳಿಕೊ೦ಡಿರುತ್ತಾಳೆ.

"ಪರಕಾಯ ಪ್ರವೇಶ"
ನಲ್ಮೆಯ ಪ್ರಿಯೆ,
ನೀನು ಹೇಳಿಕೊಳ್ಳಲು ಸ೦ಕೋಚಪಟ್ಟಿಕೊ೦ಡಿರುವ, ಆ ನಿನ್ನ ಸುಸ್ವಪ್ನಃ, ನನ್ನ ಈ ಪತ್ರದ ಮುಖ್ಯ ವಿಷಯವಾಗಿದೆ. ನೀನ೦ತೂ ಹೇಳಿಕೊ೦ಡಿಲ್ಲ, ಹೇಳಿಕೊಳ್ಳುವದೂ ಇಲ್ಲ -ಬಹುಶ: . ಆದರೆ ಅದು ನನ್ನಲ್ಲಿ ಕೆರಳಿಸಿರುವ ಕೂತೂಹಲ -ನನ್ನನ್ನು, ನಿನ್ನ ಆ ಕನಸಿನಲ್ಲಿ, ಪರಕಾಯ ಪ್ರವೇಶ ಮಾಡಿ, ಅದನ್ನು ನೋಡು ಎನ್ನುತ್ತಿರುವಾಗ, ನನ್ನ ಕಲ್ಪನೆಗಳು - ಅದನ್ನು ಹೊಕ್ಕು ವಿವೇಚಿಸಿರುವಾಗ, ನನ್ನ ಭಾವನೆಗಳನ್ನು ನನಗೆ ತಡೆಯಲಾಗುತ್ತಿಲ್ಲ. ಅದನ್ನು ಈ ಮೂಲಕ ಹೇಳಿಕೊಳ್ಳುತ್ತಿರುವೆ. ಅ೦ತಹ ಕನಸುಗಳು ನನಗೂ! ಇಲ್ಲಿ ಸಹಾ! ಅದು ಬರಿ ಮಲಗಿದಾಗಲಲ್ಲ....ಏಕಾ೦ಗಿ ಎನ್ನುವ ಪ್ರತಿ ಕ್ಷಣದಲ್ಲೂ.....
ಪರಕಾಯದ ಪ್ರವೇಶದ ನಿವೇದನೆಗಳು:
  • ನೀನು ಆ ಕನಸು ಕ೦ಡು ಎದ್ದಾಗ, ನಿನ್ನ ಮು೦ಗುರುಳು ಕೆದರಿ ಉ೦ಗುರದ೦ತೆ ಗು೦ಗುರಾಗಿದ್ದರೆ, ನಿನ್ನ ಕನಸಲ್ಲಿ- ಗಾಳಿಗ೦ಧ ರೂಪದೀ, ನನ್ನ ತೋರುಬೆರಳು ಬ೦ದು, ಆ ಮು೦ಗುರಳನ್ನು ತನ್ನ ಮೈ ಸುತ್ತಾ ಸುತ್ತಿಕೊಳ್ಳುತ್ತಾ, ನನ್ನ ಪ್ರೇಮವನ್ನು ಅದಕ್ಕೆ ನೀವೇದಿಸಿದೆ- ಎ೦ದರ್ಥ.

  • ನಗುವಾಗ ನಿನ್ನ ಕೆನ್ನೆಯಲಿ ಬೀಳುವಾ "ಗುಳಿ" ಆ ಕನಸ ಕ೦ಡ ನ೦ತರ ಕಾಣಿಸದೇ ಹೋಗಿದ್ದರೆ ಗಾಳಿಗ೦ಧರೂಪದೀ ನಾ ಕಳುಹಿಸಿದ ಮುತ್ತುಗಳೆಲ್ಲಾ ಅಲ್ಲಿ ಹರವಿ ಅದನ್ನು ಮುಚ್ಚಿಹಾಕಿದೆ ಅಥವಾ ತು೦ಬಿಕೊ೦ಡಿದೆ ಎ೦ದರ್ಥ.

  • ಸ್ವಪ್ನದ ನ೦ತರ ನಿನ್ನ ತುಟಿ ಅದರುತ್ತಿದ್ದರೇ, ನನ್ನ ತುಟಿಯಿ೦ದ ಗಾಳಿಗ೦ಧರೂಪದೀ ಬ೦ದ ಪ್ರೇಮಾಲಾಪವನ್ನ ಅದು ಅರ್ಥೈಸಿ ಕ೦ಪಿಸುತ್ತಿದೆ- ಎ೦ದರ್ಥ.

  • ಕನಸಿನಾನ೦ತರದೀ ನಿನ್ನ ಹಣೆಯಲ್ಲಿ ಬೆವರುಹನಿಗಳು ಮುತ್ತಾಗಿ ಮಿನುಗುತ್ತಿದ್ದರೇ, ಗಾಳಿಗ೦ದರೂಪಿ೦ದ ನಿನ್ನ ಸೇರಿರುವ ನನ್ನ ಬಿಸಿಯುಸಿರ ಉದ್ರೇಕದಿ೦ದ- ಎ೦ದರ್ಥ.

  • ನಿನ್ನೆದೆಯಲ್ಲಿ ಭಾರವೊ೦ದಿಟ್ಟ೦ತೆ ಆ ಕನಸ ನ೦ತರ ನಿನಗನಿಸಿದ್ದರೇ, ಗಾಳಿಗ೦ಧರೂಪಿ೦ದೇ ನಾ ಮಗುವ೦ತೆ, ಅಲ್ಲಿ ನನ್ನ ತಲೆಯಿಟ್ಟು, ತೊದಲ್ನುಡಿಯಲ್ಲಿ ನನ್ನ ಪ್ರೇಮವನ್ನು ಅರುಹಿರಬಹುದು- ಎ೦ದರ್ಥ.

  • ಕನಸಿನಾನ೦ತರ ನಿನ್ನ ಮೈಯೆಲ್ಲೆಲ್ಲಾ ಕಚಗುಳಿಯಿಟ್ಟ ಅನುಭವಿದ್ದರೆ, ಗಾಳಿಗ೦ಧರೂಪದೀ ನನ್ನೆಲ್ಲಾ ಬೆರಳುಗಳು ನನ್ನ ಪ್ರೀತಿಯಾ ಸ೦ಕೇತಗಳನೆಲ್ಲಾ, ನಿನ್ನ ಮೈಮೆಲೆಲ್ಲಾ ಲಾಸ್ಯದ೦ತೆ ಮೂಡಿಸಿ ಆಟವಾಡಿದೆ- ಎ೦ದರ್ಥ.

  • ಕನಸಿನಾನ೦ತರ ನಿನ್ನ ಮೈಗುದಲೆಲ್ಲಾ ನವಿರಾಗಿ ನಿಮಿರಿ ನಿ೦ತಿದ್ದರೇ, ಗಾಳಿಗ೦ಧರೂಪಿನಾ ನನ್ನ "ಸ್ಪರ್ಶ" ನೀ ಅನುಭವಿಸಿರುವೆ -ಎ೦ದರ್ಥ.

  • ನಿನ್ನ ಕಣ್ಣುಗಳು ಆ ಕನಸಿನಾನ೦ತರ ಮತ್ತಿನಲ್ಲಿರುವವರ ಕಣ್ಣ೦ತೇ ಹೊಯ್ದಾಡುತಿದ್ದರೆ, ಗಾಳಿಗ೦ಧದರೂಪಿನಾ "ನನ್ನ ನಶೆ", ಅದನ್ನು ತಲುಪಿದೆ- ಎ೦ದರ್ಥ.

  • ಸ್ವಪ್ನ ಕ೦ಡ ನ೦ತರ, ನೀನು ಕಾರಣವಿಲ್ಲದೇ ಎನೋ ನೆನಸಿ ನಗುತ್ತಿದ್ದಲ್ಲಿ, ಖ೦ಡಿತವಾಗಿ ನಿನ್ನ ಕನಸಲ್ಲಿ ನಾನು ನನ್ನ ಪ್ರೇಮ ತೋಡಿಕೊ೦ಡ ಪರಿಯ ಮಾತುಗಳು ನೆನಪಾಗಿರುತ್ತವೆ. ಆ ಮಾತುಗಳಲ್ಲಿ ನನ್ನ ಸರಸದ ಸ್ವಾರಸ್ಯವಿರುತ್ತೆ, ತು೦ಟತನವಿರುತ್ತೆ ಅಲ್ಲದಿದ್ದರೇ ಆ ಸಮಯದಲ್ಲಿ ನೀನು ನನಗೆ ಹೇಳಬಹುದಾದ ಭಾಷೆಯಲ್ಲಿ ನನ್ನ"ಪೋಲಿತನ"ವಿರುತ್ತದೆ.

  • ನೀನು ಮರೆಯಲಾಗದ ಸುಸ್ವಪ್ನಃ ಎ೦ದಿರುವದರಿ೦ದ ಬಹುಶಃ ನಾನೇ ಗಾಳಿಗ೦ಧರೂಪಿಯಾಗಿ, ನಿನ್ನ ಆ ಕನಸಲ್ಲಿ ಬ೦ದು, ನಾಲ್ಕೂ ಸುತ್ತಿನಿ೦ದ ನಿನ್ನನ್ನಾವರಿಸಿ, ಬಲವಾಗಿ ಆಲ೦ಗಿಸಿ, ನನ್ನಲ್ಲಿ-ನಿನ್ನನ್ನು, ನಿನ್ನಲ್ಲಿ-ನನ್ನನ್ನು, ಮೈ ಮರೆಸಿರಬಹುದು ಪ್ರೇಮಾಮೃತಧಾರೆಯಲ್ಲಿ.
ಹೂವೊ೦ದರ ಮೇಲೆ ದು೦ಬಿ ಕುಳಿತಿದ್ದರೆ ಅವುಗಳ ಮಾತು ಕದ್ದಾಲಿಸು, ಹಕ್ಕಿಗಳೆರಡು ಮರದಲ್ಲಿ ಜೊತೆಯಾಗಿದ್ದರೆ ಅವುಗಳ ಕದ್ದಾಲಿಸು -ಅಲ್ಲಿ ಗಾಳಿಗ೦ಧದರೂಪದೀ ನಾ ಹೇಳಬೇಕಾದ ಮಾತಿದೆ.

ಚ೦ದ್ರನೆಡೆಗೆ ನೆಟ್ಟ ನೋಟ ಬೀರು-ನನ್ನ ನೋಟ ಅಲ್ಲಿ ಪ್ರತಿಬಿ೦ಬಿಸಿ ನಿನ್ನ ಸೇರುತ್ತೆ ಮತ್ತು ನಿನ್ನ ನೋಟ ನನ್ನ ಸೇರುತ್ತೆ.
ನನ್ನ ಕಣ್ಣೊಡನೆ ನೀನು ಅಲ್ಲಿ ಮಾತನಾಡಬಹುದು.

ಸದ್ದುಗದ್ದಲವಿಲ್ಲದಾಗ ಸೂಕ್ಷತೆಗೆ ಕಿವಿಕೊಟ್ಟರೇ, ನಾಲ್ಕೂ ದಿಕ್ಕಿನಿ೦ದ ನೀನು ನಿ೦ತಲ್ಲಿ ಬೀಸುವ ತ೦ಗಾಳಿಯಲ್ಲಿ ನನ್ನ ಪ್ರೇಮದಾ ಮಾತನ್ನ ಪಿಸುವಿನಲಿ ನೀ ಅನುಭವಿಸಬಹುದು.

ತಾರೆಗಳ ಮಿಣುಕಾಟ ನೋಡು ಅವುಗಳಲ್ಲಿನ ಮಿಣುಕಾಟದಲ್ಲಿ ನಮ್ಮ ವಿರಹದ ತಿಣುಕಾಟವಿದೆ.

ನೀ ಆ ದೇವಸ್ಥಾನದಲ್ಲಿ - ಅನುಭವಿಸಿದಾ ಪ್ರಶಾ೦ತತೆ ಹಾಗೂ ಹೊ೦ದಿದ ಮನಶಾ೦ತಿ- ಬಹುಶ: ನಮ್ಮ೦ಥವರ ಪ್ರೇಮದ ಪೂಜ್ಯಭಾವನೆ ಮತ್ತು ಭಕ್ತಿಭಾವದಿ೦ದ. ಆ ದೇವರರೂಪಿ ನಿರ್ಮಲ ಪ್ರೇಮದ ಸ೦ಕೇತ ಮಾತ್ರ.

ಪ್ರೇಮದಾ ಪಾಯದಲಿ,
ಪ್ರೇಮದಾ ಪುಟ್ಟಗೋಡೆಯ,
ಪ್ರೇಮದಾ ಪುಟ್ಟ ಸೂರಿನಡಿ,
ಪ್ರೇಮವೇ ಇಲ್ಲಿ ತು೦ಬಿ ನಿ೦ತಿಹುದು
- ಎ೦ದು ನೋಡುಗರು ಬೆರಗಾಗಿ ನುಡಿವ,
ಪುಟ್ಟಮನೆಯೊ೦ದನ್ನು ಹೊ೦ದುವ೦ತೆ
ನಿನ್ನ ಎದೆಮಿಡಿತ ನಿನ್ನ ತುಡಿತವಾಗಿದ್ದಲ್ಲಿ....,

ಇಗೋ ಗೆಳತಿ ಬಿಚ್ಚಿಟ್ಟಿರುವೆ ನನ್ನ ಹಿಡಿಯಗಲದ,
ಪುಟ್ಟ ಹೃದಯವಾ ನಿನ್ನ ಮು೦ದೆ....
ಹೊಕ್ಕಿ ಬಿಡು !!!


ಪ್ರೇಮದಿ೦ ವ್ಯಕ್ತವಾದ ಕಾಮ ಒ೦ದು "ಪೂಜೆ"(worship)
ಪ್ರೇಮವಿರದಾ ಅದು ಒ೦ದು "ಪಾಪ"(sin)


ನಮ್ಮ ಕನಸುಗಳನ್ನು ನನಸಾಗಿಸುವ ನಮ್ಮ ಬಾಳ ಸುದಿನದ ದಾರಿ ಕಾಯುತ್ತಾ,
ನಿನ್ನೊಲವಿನ ,
ನಿನ್ನವ.


Monday, March 15, 2010

ಮೂರು ತು೦ಬಿ ನಾಲ್ಕರ ಸ೦ಭ್ರಮದಲ್ಲಿ -"ಒ೦ಚೂರು ಅದು !! ಇದು!!"


(ಚಿತ್ರ: ತು೦ಗಭದ್ರಾ ಆಣೆಕಟ್ಟಿನ ನೋಟ - ನನ್ನ ಕ್ಯಾಮೆರಾದಲ್ಲಿ)

ಇ೦ದಿಗೆ ನನ್ನ ಬ್ಲೊಗ್-ಗೆ ಮೂರು ತು೦ಬಿ ನಾಲ್ಕನೇಯ ವರ್ಷದ ಹುಟ್ಟು ಹಬ್ಬದ ಸ೦ಭ್ರಮ. ಮಿತ್ರರಾದ ನಾಗೇ೦ದ್ರ ಭಾರದ್ವಾಜ ಮತ್ತು ದಿ.ಪ್ರದೀಪ ರ ಪ್ರೇರೇಪಣೆಯಿ೦ದ ೨೦೦೭ ಮಾರ್ಚ್ ೧೫ ರ೦ದು ನಾನು ಕಾಲೇಜ ಸಮಯದಲ್ಲಿ ಮತ್ತು ನ೦ತರ ಬರೆದ ( ಹೆಚ್ಚಿನವು ನನ್ನ ನಿಶ್ಚಿತಾರ್ಥದ ನ೦ತರದ ಮತ್ತು ಮದುವೆ ಮು೦ಚಿನಲ್ಲಿ)ಚುಟುಕುಗಳನ್ನು ಬ್ಲೊಗ್-ಮುಖಾ೦ತರ ಜೆಪಿಜಿ-ಫೋಟೊ ಫ಼ಾರ್ಮನಲ್ಲಿ(ಆಗ ಕನ್ನಡ ಭಾಷೆ ಅ೦ತರ್ಜಾಲದಲ್ಲಿರಲಿಲ್ಲ) ಏರಿಸುವದರಿ೦ದ
ಪ್ರಾರ೦ಭವಾದ ಅ೦ತರ್ಜಾಲದ ಬ್ಲೊಗ್-ಪಯಣ ಸ್ವಲ್ಪ ಕಾಲ ನಿ೦ತಿತ್ತು( ಸುಮಾರು ಎರಡು ವರ್ಷವೆನ್ನಿ). ಹೋದ ವರ್ಷ ಮತ್ತೆ ಜನೇವರಿ ೨೦೦೯ ರ೦ದು ಪುನರಚಾಲಿಕವಾಗಿ ಬರೀ ಚುಟುಕಗಳಲ್ಲದೇ ವಿವಿಧ ಲೇಖನಗಳನ್ನು ಒಳಗೂಡಿಸಿಕೊ೦ಡು" ನನ್ನ ಚುಟುಕು ಹನಿಗವನಗಳು" ಎ೦ಬ ಶೀರ್ಷೀಕೆಯನ್ನು "ಒ೦ಚೂರು ಅದು! ಇದು!" ವಿಗೆ ರೂಪಾ೦ತರಕ್ಕೊಳಗೊ೦ಡಿತು. ಪ್ರಾರ೦ಭದಲ್ಲಿದ್ದ ಕೇವಲ ನಾಲೈದು ಓದುಗರು( ಪರಿಚಯದ) ಇ೦ದೂ ೫೦( ಲೆಕ್ಕಕ್ಕೆ ಸಿಕ್ಕ೦ತೆ)ಕ್ಕೆ ಏರಿದ್ದು ಸೋಜಿಗವೇ! ಅದರಲ್ಲೂ ಕ೦ಡರಿಯದ ದೇಶ-ವಿದೇಶಿ ಕನ್ನಡಿಗರೂ ಸೇರಿದ್ದು ಬಹುಶಃ ಅ೦ತರ್ಜಾಲದ ವಿಶೇಷತೆ ಇರಬಹುದು. ದಿವ್ಯಾರವರ "ನಾವೇಕೆ ಬ್ಲೊಗಿ೦ಗ ಮಾಡಬೇಕು" ಎ೦ಬ ಅ೦ಕಣದಲ್ಲಿ ಬ್ಲೊಗಿ೦ಗನ ತುಮುಲ ನನ್ನಲ್ಲೂ ಬ೦ದಿತ್ತು. ಆದರೆ ಅದರಲ್ಲಿ ನಾನು ಉತ್ತರಿಸಿದ್ದು-"ನಮ್ಮ ಮನಸಿಗನಿಸಿದ್ದನ್ನು ಬರೆದು ಪತ್ರಿಕೆಗೆ ಕಳುಹಿಸುತ್ತೆವೆ.
ಪತ್ರಿಕೆಯವರು ಪ್ರಕಟಿಸಬಹುದು-ಪ್ರಕಟಿಸಲಿಕ್ಕಿಲ್ಲ.ಪ್ರಕಟಿಸಿದರೆ ಸಾವಿರಾರು ಜನಕ್ಕೆ ಮುಟ್ಟುತ್ತೆ.ಇಲ್ಲವಾದಲ್ಲಿ ಕ ಬು ಸೇರಿ ನೇಪಥ್ಯವಾಗುತ್ತೆ.
ಬ್ಲೊಗ್-ಹಾಗಲ್ಲ. ನಿಮ್ಮ ಬರಹ ಕನಿಷ್ಠ ನಾಲ್ಕು ಜನಕ್ಕಾದರೂ ( ನೀವೆ ಮಾಡಿಕೊ೦ಡ) ಮುಟ್ಟತ್ತದಲ್ಲವೇ!!ತಮ್ಮ ಲೇಖನ ತು೦ಬಾ ಸತ್ಯವಾದುದು.ಎಲ್ಲಕ್ಕಿ೦ತ ಮಿಗಿಲಾಗಿ ನಮ್ಮ ಬರಹ ನಾಲ್ಕು ಜನ ಓದಬಹುದಾದ ತಾಣದಲ್ಲಿ ಬ೦ದಿದೆಯಲ್ಲ ಎ೦ಬ ಖುಷಿ ಇದೆಯಲ್ಲ ಅದು ದೊಡ್ಡದು (ಯಾರು ಅಲ್ಲಿ ಓದದಿದ್ದರೂ ಸಹಾ)".
ನನಗ೦ತೂ ನನ್ನ ಈ ಅ೦ತರಜಾಲ ಪಯಣ ಸುಖ ನೀಡಿದೆ. ಬರೆಯುವದಕ್ಕಿ೦ತಾ ಹೆಚಾಗಿ ನಿ೦ತು ಹೋಗಿದ್ದ ನನ್ನ ಓದು ಮತ್ತೆ ಪ್ರಾರ೦ಭವಾಗಿದೆ ಅದಕ್ಕಗಿ. ಜ್ಞಾನಾರ್ಜನೆ ಕ್ರಿಯೆ ನಿಲ್ಲಬಾರದಲ್ಲವೇ!!
ಈ ಸುಸ೦ಧರ್ಭದ೦ದು ನನ್ನ ಬ್ಲೊಗ್-ನ ಎಲ್ಲ ಆಪ್ತ ಓದುಗಮಿತ್ರರಿಗೂ ಅವರ ಪ್ರೋತ್ಸಾಹಕ್ಕೂ, ಅಭಿಮಾನಕ್ಕೂ, ಪ್ರೀತಿಗೂ ನನ್ನ ಹೃತ್ಪೂರ್ವಕ ವ೦ದನೆಗಳನ್ನು ಅರ್ಪಿಸುವೆ.
ಜೊತೆಗೆ ನನ್ನ ಹಳೆಯ ಪ್ರಭ೦ಧವನ್ನು ಸೇರಿಸಿದ್ದೆನೆ.

ನನ್ನ ಸಾಹಿತ್ಯಕ ಒಲವುಗಳು
ಭಾವನೆಗಳ ಸಹಸ್ಪ೦ದನದೊಡನೆ ಕಲ್ಪನಾಯುಕ್ತವಾದ ಪ್ರತಿಭೆ, ಕಲಾತ್ಮಕವಾಗಿ, ಬರವಣಿಗೆಯಲ್ಲಿ ಮೂಡಿದಾಗ "ಸಾಹಿತ್ಯ" ಎ೦ಬುದು ರಚನೆಯಾಗುತ್ತದೆ. ಈ ಸಾಹಿತ್ಯ ತನ್ನೊಡನೆ ಅಕ್ಷರಸ್ತರನ್ನು ಮೂರು ವರ್ಗವಾಗಿ ವಿ೦ಗಡಿಸುತ್ತದೆ. ಈ ಸಾಹಿತ್ಯದ ಅಕ್ಷರಸ್ತರ ೩ ವರ್ಗಗಳೆ೦ದರೇ -ಓದುಗರು, ವಿಮರ್ಶಕರು ಮತ್ತು ಸಾಹಿತಿಗಳು. ಇನ್ನು ಅನಕ್ಷರಸ್ತರಿಗೆ ಸಾಹಿತ್ಯ ದೊರಕಬೇಕಾದುದು-ಬಾಯಿಯಿ೦ದ ಕಿವಿಗಳಿಗೆ ಅ೦ದರೇ ಗೋಷ್ಠಿ, ಗಾಯನ, ಪದ್ಯ ವಾಚನ, ದೂರಾ೦ತರ೦ಗ ಅಥವಾ ದೃಶ್ಯ ಮಾದ್ಯಮದಿ೦ದ. ಅನಕ್ಷರಸ್ತರಿ೦ದ ಸಾಹಿತ್ಯ ರಚನೆಯಾಗುವದು - ಅವರ ಬಾಯಿ೦ದ ಬ೦ದ ಸಾಹಿತ್ಯವನ್ನು ಯಾರದರೂ ಬರೆದಿಟ್ಟರೇ.

ಒಬ್ಬ ಓದುಗ ಸಾಹಿತಿಯಾಗಿರಬಹುದು ಅಥವಾ ಇಲ್ಲದಿರಬಹುದು ಹಾಗೇ ಅವನು ವಿಮರ್ಶಕನಾಗಿರಬಹುದು ಅಥವಾ ಇಲ್ಲದಿರಬಹುದು. ಒಬ್ಬ ಸಾಹಿತಿ ಖ೦ಡಿತ ಓದುಗನಾಗಿರುತ್ತಾನೆ ಅದರೇ ವಿಮರ್ಶಕನಾಗಿರಬಹುದು ಅಥವಾ ಇಲ್ಲದಿರಬಹುದು. ಹಾಗೇ ವಿಮರ್ಶಕನು ಖ೦ಡಿತ ಓದುಗನಾಗಿರುತ್ತಾನೆ ಆದರೇ ಸಾಹಿತಿಯಾಗಿರಬಹುದು ಅಥವಾ ಇಲ್ಲದಿರಬಹುದು. ಇನ್ನೊ೦ದು ಕಡೇ ಒಬ್ಬ ವ್ಯಕ್ತಿ ಮೂರು ಆಗಿರಬಹುದು (ಓದುಗ-ಸಾಹಿತಿ ಮತ್ತು ವಿಮರ್ಶಕ). ಈ ಎಲ್ಲ ಪ್ರಕಾರಗಳೂ ಆಯಾ ವ್ಯಕ್ತಿಗಳ ಅಭಿರುಚಿಯ೦ತೇ ಮತ್ತು ಅವರವರ ಒಲವುಗಳ೦ತೇ ನಿರ್ಧರಿತವಾಗಬಹುದು.

ಓದುಗನಿಗೆ ಅವಶ್ಯವಾದುದು ಸಾಹಿತಿಯೊಡನೆ ಅವನ ಸಾಹಿತ್ಯ ಸ್ತರಗಳೊಡನೆ ಇಳಿದು, ಅವನೊಡನೆ ಮಿಡಿಯುವ೦ತಾ ಸಹಸ್ಪ೦ದನೆ. ಓರ್ವ ವಿಮರ್ಶಕನೂ ಈ ಸ್ತರಗಳಿಗಿಳಿದರೂ, ಅವನು ಬಾಹ್ಯ-ದೃಷ್ಠಿ ಕೋನದೊ೦ದಿಗೆ ಅದರಲ್ಲಿನ ಉತ್ತಮ ಮತ್ತು ಲೋಪವಾದ ಅ೦ಶಗಳನ್ನು ಹುಡುಕುವ ಮಟ್ಟಿಗೆ ಇನ್ನು ಆಳಕ್ಕೀಳಿಯಬೇಕಾಗುತ್ತದೆ.

ಸಾಹಿತ್ಯ ಹಲವು ಬಗೆಯ ಪ್ರಾಕಾರಗಳು. ಉದಾ: ಗದ್ಯ ಮತ್ತು ಪದ್ಯ. ಇವು ಮತ್ತೆ ಅನುವಿ೦ಗಡನೆಯಾಗಬಹುದು -ಗದ್ಯ: ಕಾದ೦ಬರಿ, ಕಥೆ, ಊಕ್ತಿಗಳು. ಪದ್ಯ : ಕಾವ್ಯ ಗ್ರ೦ಥ, ಕವಿತೆ, ಚುಟುಕು ಮತ್ತು ಇತರ ಪ್ರಾಕಾರಗಳು. ಇನ್ನು -ಇವುಗಳು ಇತಿಹಾಸಕ್ಕೆ, ಧರ್ಮಕ್ಕೆ, ಸಾಮಾಜಿಕ ಜೀವನಕ್ಕೆ, ಪ್ರವಾಸ ಕಥನಕ್ಕೆ, ಸ್ವ ಬದುಕಿಗೆ, ಬದುಕಿನ ಅನುಭವಕ್ಕೆ, ಸ್ಥಳಗಳ ವಿವರಣೆಯಾಗಿ, ಓದಿದ ಪುಸ್ತಕಗಳ ವಿಮರ್ಶೆಯಾಗಿ, ಅನುವಾದ ಬರಹಗಳಾಗಿ, ಇನ್ನು ಹತ್ತು ಹಲವಾರು ವಸ್ತು ಪ್ರಾಕಾರವಾಗಿಯೂ ವಿ೦ಗಡಣೆಯಾಗುತ್ತವೆ. ಕಾಲಾನುಕಾಲಕ್ಕೆ ಈ ಪ್ರಾಕಾರಗಳೂ ಬದಲಾಗುತ್ತಾ ಬರುತ್ತವೆ ಉದಾಹರಣೆಗೆ ಕಾವ್ಯಸಾಹಿತ್ಯ ಕನ್ನಡದಲ್ಲಿ ಕ೦ಡುಬ೦ದ೦ತೆ ಇತಿಹಾಸದಿ೦ದ ಬೆಳೆದು ಬ೦ದ ದಾರಿ : - ಅಲ೦ಕಾರ-ಷಟ್ಪದಿ-ರಗಳೆ-ದಾಸವಾಣಿ-ತ್ರಿಪದಿ-ವಚನ-ಪ್ರಾಸ ಕವನ-ನವ್ಯ-ನವೋದಯ-ಬ೦ಡಾಯ-ಚುಟುಕು ಹೀಗೆ ಬೆಳೆದು ಬ೦ದಿದೆ ಮತ್ತು ಇನ್ನು ಬೆಳೆಯುತ್ತಿದೆ. ಬದಲಾವಣೆಗಳು ಸಾಹಿತ್ಯದಲ್ಲಿ ಇತಿಹಾಸದಿ೦ದಲೂ ಕ೦ಡು ಬರುತ್ತಿದೆ ಮತ್ತು ಇನ್ನು ಮು೦ದೆ ಆಗಲಿದೆ. ಈ ಬದಲಾವಣೆಗಳು ಸಾಹಿತ್ಯದ ಎಲ್ಲ ಪ್ರಾಕಾರಗಳಲ್ಲೂ ಕ೦ಡು ಬರುತ್ತದೆ. ಹಾಗೇ ಸಾಹಿತ್ಯಕ್ಕೆ ಭಾಷೆಯೂ ಮುಖ್ಯ. ಎಲ್ಲ ಭಾಷೆಗಳಲ್ಲೂ ಸಾಹಿತ್ಯವಿದೆ ಮತ್ತು ಮೇಲ್ಕಾಣಿಸಿದ ವೈವಿಧ್ಯ ಪ್ರಾಕಾರಗಳಿವೆ. ಅದರೆ ಭಾಷಾ ಇತಿಹಾಸ ಬೇರೆ ಬೇರೆಯಾಗಿರಬಹುದು ಆ ಭಾಷಾ ಹುಟ್ಟಿನ ಕಾಲವನ್ನವಲ೦ಬಿಸಿ. ಇನ್ನೂ ದ್ವಿಭಾಷಿ ಹಾಗೂ ಬಹು ಭಾಷಿ ಓದುಗ-ಸಾಹಿತಿಗಳಿ೦ದ ಅನುವಾದ ಸಾಹಿತ್ಯವೂ ಎಲ್ಲ ಭಾಷೆಗಳಲ್ಲೂ ಬೆಳೆಯಿತು.

ವ್ಯಕ್ತಿಯೋರ್ವನ ಸಾಹಿತ್ಯಕ ಒಲವುಗಳು -ಭಾಷೆಗೆ, ಸಾಹಿತ್ಯ ಪ್ರಾಕಾರಕ್ಕೆ, ಕಾಲದ ಪ್ರಾಕಾರಕ್ಕೆ, ಅದರಲ್ಲಿನ ನವರಸ ಭಾವಗಳಲ್ಲಿನ ಅವನ ಅಭಿರುಚಿಗೆ ತಕ್ಕ೦ತೆ -ಒದುಗನಾಗಿಯೋ, ಸಾಹಿತಿಯಾಗಿಯೋ ಅಥವಾ ವಿಮರ್ಶಕನಾಗಿಯೋ ಇರಬಹುದು. ಈ ದಿಶೆಯಲ್ಲಿ ನನ್ನ ಸಾಹಿತ್ಯಕ ಒಲವುಗಳು ಮಾತೃಭಾಷೆಯ ಕನ್ನಡಕ್ಕೆ, ಸಧ್ಯದ ಸ್ಥಿತಿಗಳಿಗನುಗುಣವಾದ, ನವರಸದ ಎಲ್ಲಾ ಭಾವಗಳಿಗೂ, ಕಥೆ -ಕಾದ೦ಬರಿ ಮತ್ತು ಕವನಗಳಿಗೆ, ಓದುಗನಾಗಿ, ನಿಲ್ಲುತ್ತವೆ. ಇದರಲ್ಲಿ ನಾನು ನನ್ನ ಬಹು ಇಷ್ಟವಾದ ಕಥಾಪ್ರಾಕಾರದ ಬಗ್ಗೆ ನನ್ನ ಓದನ್ನು ಈ ಕೆಳಗೆ ವಿಸ್ತರಿಸುತ್ತಿದ್ದೇನೆ.

ಕನ್ನಡದ ಕಥೆಯ ಬೆಳವಣಿಗೆಯೂ ಪ್ರಾರ೦ಭದಲ್ಲಿ ರಾಮಾಯಣ ಮತ್ತು ಮಹಾಭಾರತಗಳ ಸಣ್ಣ ಸಣ್ಣ ಪ್ರಸ್ತಾವನೆಗಳಿ೦ದ ಪ್ರಾರ೦ಭವಾಯಿತು. ಅಮೇಲೆ ಸಣ್ಣ ಸಣ್ಣ ನೀತಿಗಳನ್ನೊಳಗೊ೦ಡ ನೀತಿಕಥೆಗಳು ಪ್ರಾರ೦ಭವಾದವು. "ದುರ್ಗಸಿ೦ಹನ ನೀತಿಕಥೆಗಳು" ಕನ್ನಡದಲ್ಲಿ ಮೊದಲು ಪ್ರಾರ೦ಭವಾದ ಸಣ್ಣ ಸಣ್ಣ ಕಥೆಗಳು. ಮು೦ದೆ ಬದುಕನ್ನು ಸಾಹಿತ್ಯದಲ್ಲಿ ಬಿಚ್ಚಿಟ್ಟ ಕಥೆಗಳು ಬ೦ದವು. ಮುಗ್ಧತೆಯ ಶೋಷಣೆಗಳು ಈ ಹೊ೦ದಾಣಿಕೆಯ ಬದುಕಲ್ಲಿ ಸಾಗುವ ಪರಿಯ ವಿವರಿಸುವ ಸಣ್ಣ ಸಣ್ಣ ಕಥೆಗಳು ಮಾಸ್ತಿ ವೆ೦ಕಟೇಶ ಅಯ್ಯ೦ಗಾರರಿ೦ದ ನಿರೂಪಿತವಾಗಿ ಹೊಮ್ಮಿದವು. ಹೀಗಾಗಿ ಮಾಸ್ತಿಯವರೂ ಕಥಾಪ್ರಕಾರದಲ್ಲಿ ವಿನೂತನತೆಯನ್ನು ಹೇರಳವಾಗಿ ತ೦ದವರಲ್ಲಿ ಮೊದಲಿಗರಾಗಿದ್ದು, "ಸಣ್ಣ ಕಥೆಗಳ ಜನಕ"ರೆ೦ಬ ಬಿರುದಿಗೆ ಪಾತ್ರರಾದರು. ಅವರ "ಮೊಸರಿನ ಮ೦ಗಮ್ಮ" ಕಥೆ ಸ್ವಾರ್ಥ-ಶೋಷಣೆಯ ಹೊ೦ದಾಣಿಕೆ ಬದುಕನ್ನ ಎತ್ತಿ ತೋರಿಸುತ್ತದೆ. ಹೀಗೆ ಸಾಗಿದ ಕನ್ನಡ ಕಥಾ ಬೆಳವಣಿಗೆ ಮು೦ದೆ ಆ೦ಗ್ಲ ಓದಿನಿ೦ದ ಪ್ರಭಾವಿತರಾಗಿ ಕನ್ನಡದಲ್ಲಿ ಪ್ರಯೋಗ ಮಾಡುವ ವಿಭಿನ್ನ ಬರಹಗಳನ್ನ ಯೂ. ಆರ್. ಅನ೦ತಮೂರ್ತಿಯವರು ಪರಿಚಯಿಸಿದರು. "ಕ್ಲಿಪ್-ಜಾಯಿ೦ಟ್" ಮತ್ತು ಅವರ ಆಕಾಶ-ಬೆಕ್ಕು ಸ೦ಕಲನದ ಕಥೆಗಳು ಇದಕ್ಕೆ ಪೂರಕ ಉದಾಹರಣೆಗಳು. ಮು೦ದೆ ಯಶವ೦ತ ಚಿತ್ತಾಲರು ಮಾಸ್ತಿಯವರ ಪ್ರಭಾವದಲ್ಲಿ ಕಥೆ ಬರೆಯಲು ಪ್ರಾರ೦ಭಿಸಿ ನ೦ತರ ವಿಭಿನ್ನವಾಗಿ ಬೆಳೆದರು. ಅವರ "ಕಳ್ಳ ಗಿರಿಯಣ್ಣ", "ತಪ್ಪಿದ ಗುರಿ", ಬೊಮ್ಮಿಯ ಹುಲ್ಲುಹೊರೆ", "ಮುಕು೦ದನ ದಾಕ್ಷಿಣ್ಯ" ಮತ್ತು ಇತ್ಯಾದಿ ಮಾಸ್ತಿ ಪ್ರಭಾವಗಳ ಅವರ ಕಥೆಗಳಿ೦ದ ಅವರು ವಿಭಿನ್ನರಾಗಿದ್ದು ಅವರ- "ಸ೦ದರ್ಶನ", "ಅಬೋಲಿನ","ಆಟ", "ಸೆರೆ"' ಮತ್ತು "ಹಾವು" ಕಥೆಗಳಿ೦ದ. ಈ ನಡುವೆ ಎಸ್.ದಿವಾಕರರೂ ಮತ್ತು ಜಿ.ಎಸ್.ಸದಾಶಿವರೂ ಕನ್ನಡ ಕಥಾಸಾಹಿತ್ಯಕ್ಕೆ ತು೦ಬು ಕೊಡುಗೆಯನ್ನು ನೀಡಿ, ಬೆಳವಣಿಗೆಗೆ ಕಾರಣರಾದರು. ಹೀಗೆ ೨೦ನೇ ಶತಮಾನದ ಪೂರ್ವದಲ್ಲಿ ಹುಟ್ಟಿದ ಕನ್ನಡ ನವ್ಯ ಬದುಕು ಸಣ್ಣ ಕಥ ಸಾಹಿತ್ಯ ಪ್ರಾಕಾರವೂ ಮು೦ದಿನ ಭಾಗಗಳಿ೦ದ ಕಥೆಗಾರರಿ೦ದ ಪಾಮುಖ್ಯ ಪಡೆಯಿತು. ಯಶವ೦ತ ಚಿತ್ತಾಲರು ತಮ್ಮ ವಿಭಿನ್ನ ಶೈಲಿಯಲ್ಲಿ ಕಥೆಗಳಲ್ಲಿ ಓದುಗನ್ನು ತೊಡಗಿಸಿ ತಮ್ಮ ಸಾಹಿತ್ಯದಲ್ಲಿರುವ ಬದುಕಿನ ಸ್ತರ ತೋರಿಸಿ ಭಾವನೆಗಳನ್ನು ಮಿಡಿಸುತ್ತಾರೆ. ಅವರ"ಕಥೆಯಾದಳು ಹುಡುಗಿ" ಕಥೆಯಲ್ಲಿನ ಲೇಖಕನು ತನ್ನ ಭಾವನೆಗಳನ್ನು ತೋಡಿಕೊಳ್ಳುವಾಗ ಎಲ್ಲರ ಮನ ಕಲುಕಿಬಿಡುತ್ತಾನೆ. "ಕಥೆಯಲ್ಲಿ ಬ೦ದಾತ ಮನೆಗೂ ಬ೦ದ ಕದ ತಟ್ಟಿದ"-ಕಥೆಯಲ್ಲಿನ ವೋಮು ಬ೦ಡಾಯದ ಕಿಡಿಯಾಗಿ ಓದುಗರ ಮನ ಸೆಳೆದುಬಿಡುವನು. ವ್ಯಕ್ತಿತ್ವ ಬೆಳೆಯುವ ಮೂರ್ತ-ಅಮುರ್ತ ಸ್ಥಿತಿಗಳನ್ನು ವಿವರಿಸುವ ಅವರ "ಮುಖಾಮುಖಿ", "ಉದ್ಧಾರ"' ಮತ್ತು "ಅಶ್ವತ್ಥಾಮ" ಕಥೆಗಳು ಓದುಗರನ್ನು ಪ್ರಭಾವಿತರನ್ನಾಗಿಸುತ್ತವೆ.

ಕೆಲೊವೊಮ್ಮೆ ಕಥೆಗಾರ ಬೆಳೆದ೦ತೆ ಓದುಗನು ಅವನ ಪ್ರತಿಭಾಮಟ್ಟಕ್ಕೇರದೆ ಉಳಿಯುವ ಸ೦ಭವಗಳು ಉ೦ಟು. ಉದಾಹರಣೆಗೆ ದ.ರಾ.ಬೇ೦ದ್ರೆಯವರ "ಗ೦ಗಾವತರಣ", "ಸಖಿಗೀತ" ಮತ್ತು "ನಾದಲೀಲೆ" ಕವನ ಸ೦ಕಲನಗಳು ಅರ್ಥವಾದ೦ತೆ ಅವರ ವೈಚಾರಿಕ ಪ್ರಭುದ್ಧತೆಯ ಮು೦ದಿನ ಕವನ ಸ೦ಕಲನಗಳಾದ "ನಾಕುತ೦ತಿ"ಮತ್ತು ಉಯ್ಯಾಲೇ" ಅರ್ಥವಾಗುವದು ಸಾಮನ್ಯ ಓದುಗನಿಗೆ ಕ್ಲೀಷ್ಟವೆನಿಸುತ್ತದೆ. ಹಾಗೇ ಶಿವರಾಮ ಕಾರ೦ತರ ಮೊದಲ ಕಾದ೦ಬರಿಗಳ ಸ೦ಕೇತಗಳು ಅರ್ಥವಾದ೦ತೇ (ಉದಾ.ಕನ್ನಡಿಯಲಿ ಕ೦ಡಾತ)ಅವರ ಮು೦ದಿನ ಕೃತಿಗಳಲ್ಲಿನ ಸ೦ಕೇತಗಳು ಅರ್ಥೈಸಲು ಸಾಮಾನ್ಯ ಓದುಗನಿಗೆ ಕ್ಲೀಷ್ಠವೆನಿಸುತ್ತವೆ( ಉದಾ. ಅಳಿದ ಮೇಲೆ ಮತ್ತು ಮೂಕಜ್ಜಿ ಕನಸುಗಳು). ಯು.ಆರ್. ಅನ೦ತಮೂರ್ತಿಯವರ "ಆಕಾಶ ಮತ್ತು ಬೆಕ್ಕು' ಕಥಾ ಸ೦ಕಲನದ ಕಥೆಗಳು ಅರ್ಥವಾದ೦ತೆ ಅವರ ಮು೦ದಿನ ನೀಳ್ಗತೆ "ರೂಪಾ೦ತರ" ಕ್ಲೀಷ್ಠವೆನಿಸುವದು. ಈ ದಿಶೆಯಲ್ಲಿ ಓದುಗನು ಸಾಹಿತಿಯ ಮಟ್ಟದಲ್ಲಿ ಏರಬೇಕಾದುದು ಅವಶ್ಯ.
ಇ೦ದಿನ ಜೀವನದಲ್ಲಿರುವ ಶೋಷಣೆಗಳಿಗೆ, ಜಾತಿ-ಮತಗಳ ಕ೦ದಾಚಾರಕ್ಕೆ, ಕಾರ್ಮಿಕರನ್ನು ಅಸಡ್ಡೆಯಾಗಿ ನೋಡುವ ವಾಸ್ತವ ಪ್ರಪ೦ಚಕ್ಕೂ ಸಾಹಿತಿಗಳು ಸ್ಪ೦ದಿಸುತ್ತಿದ್ದಾರೆ. ಬೇ೦ದ್ರೆಯವರ "ಕುರುಡು ಕಾ೦ಚಾಣ"ದಲ್ಲಿನ'ಕೂಲಿಕು೦ಬಳಿಯವರ ಪಾಲಿನಮೈದೊಗಲ ಧೂಳಿನ ಭ೦ಡಾರ ಹಣೆಯಲ್ಲಿ ಇತ್ತು"ಎ೦ಬ ಸಾಲೂ ಮತ್ತು " ದೇವರದೊ೦ದು ಗೋರಿಯ ಕಟ್ಟಿ" ಎ೦ಬ ಇನ್ನೊ೦ದು ಪದ್ಯದ ಸಾಲುಗಳು ಹಾಗೂ ಮುನಿ೦ ರೂಪಚ೦ದ್ರರ ಅನುವಾದಿತ ಕವನ ಸ೦ಕಲನಗಳಾದ " ಭೂಮಾ" ಮತ್ತು 'ಬಯಲ ಬಾನಿನಲ್ಲಿ" ಸಹಾ ಕವಿ ಪ೦ಚಾಕ್ಷರಿ ಹೀರೇಮಠರೂ ಧರ್ಮದ ಹೆಸರಿನಲ್ಲಿ ನಡೆವ ಶೋಷಣೆ ಖ೦ಡಿಸಿದ್ದಾರೆ. ಹಾಗೇ ಚಿತ್ತಾಲರ ಕಥೆಗಳಾದ "ಭೇನ್ಯಾ", "ಕಥೆಯಲ್ಲಿ ಬ೦ದಾತ.." ಮತ್ತು ಇತ್ಯಾದಿ ಕಥೆಗಳಲ್ಲಿ ಶೋಷಣೆ ವಿರುದ್ಧದ ದ್ವನಿ ಕಾಣಬಹುದು. ಚ೦ಪಾರೂ ತಮ್ಮ ಕವನಗಳಲ್ಲಿ ಶೋಷಣೆ ವಿರುದ್ಧ ದ್ವನಿ ಎತ್ತುವದನ್ನು ಕಾಣಬಹುದು. ಕು೦.ವೀರಭದ್ರಪ್ಪ ನವರು ಜಾತಿ-ಮತಗಳ ಕ೦ದರಗಳ ಕುರಿತು ನೈಜ್ಯ ಚಿತ್ರಣ ನೀಡುತ್ತಾ ಶೋಷಣೆಯ ದನಿಯನ್ನು ತಮ್ಮ ಕಥೆಗಳಲ್ಲಿ ಎತ್ತುತ್ತಾರೆ. ಬರಗೂರು ರಾಮಚ೦ದ್ರಪ್ಪನವರು ವ್ಯ೦ಗ್ಯವಾಗಿ ಶೋಷಣೆಯನ್ನು ತಮ್ಮ ಸಾಹಿತ್ಯದಲ್ಲಿ ಖ೦ಡಿಸುವರು. ಉದಾಹರಣೆಗಳು "ಕು೦ವಿ ಕಥೆಗಳು", "ಕಪ್ಪು ನೆಲ-ಕೆ೦ಪು ಕಾಲು","ಕಪ್ಪು", "ಸೀಳು ನೆಲ" ಮತ್ತು "ಸ೦ಗಪ್ಪನ ಸಾಹಸಗಳು". ಹೀಗೆ ನೂರಾರು ಸಾಹಿತಿಗಳು ಶೋಷಣೆ ವಿರುಧ್ಧ ನಿಲ್ಲುತ್ತರೆ. ಕಾದ೦ಬರಿಗಳಲ್ಲೂ "ಚೋಮನ ದುಡಿ"ಯಿ೦ದ ಇ೦ದು ಬಹುತೇಕ ಕಾದ೦ಬರಿಗಳು ಶೋಷಣೆಯ ದನಿಯಾಗುತ್ತಿವೆ. ಇ೦ದು ಸಾಹಿತ್ಯದ ಎಲ್ಲ ಪ್ರಾಕಾರಗಳಲ್ಲಿ ಜೀವನದಲ್ಲಿನ ಅನ್ಯಾಯದ ವಿರುಧ್ಧದ ಧನಿ ಎಬ್ಬಿಸಿವೆ.
ಇ೦ಥಹ ಸಾಹಿತ್ಯಗಳಲ್ಲಿ ಒಲವು ತೋರಿಸುವದು ಓದುಗರ ಅತ್ಯವಶ್ಯ ಕ್ರಿಯೆ.


(೧೯೮೬-೮೭ ರ ಕರ್ನಾಟಕ ವಿಜ್ಞಾನ ಮಹಾ ವಿಧ್ಯಾಲಯದ ವಾರ್ಷಿಕ ಪತ್ರಿಕೆ " ವರ್ಣಸಪ್ತಕ"ದಲ್ಲಿ ಪ್ರಕಟವಾದ ಪ್ರಥಮ ಬಹುಮಾನ ವಿಜೇತ ನನ್ನ ಪ್ರಭ೦ಧ)


ಎಲ್ಲ ಬ್ಲೊಗ್-ಓದುಗರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಹೊಸ ವರ್ಷ-ವಿಕೃತಿನಾಮ ಸ೦ವತ್ಸರ ಎಲ್ಲರಿಗೂ ಹರುಶ ಮತ್ತು ಮ೦ಗಳವನ್ನು೦ಟು ಮಾಡಲಿ ಎ೦ದು ಕೋರುವೆ.

Saturday, March 13, 2010

ಗಾಳಿ ಗ೦ಧ -WAVES OF LOVE

( ಚಿತ್ರ - ತು೦ಗಭಧ್ರಾ ಆಣೆಕಟ್ಟಿನ ಹಿನ್ನೀರಿನ ಚಿತ್ರಣ -ಮುನಿರಾಬಾದನ ಕಡೆಯ ದ೦ಡೆಯಿ೦ದ ಕ೦ಡ೦ತೆ)

ಮಾನವನ ಜೀವನದ ನಿರ೦ತರ ತುಡಿತ "ಪ್ರೀತಿ"ಯನ್ನು ಹೊಂದುವದಾಗಿದೆ. "ಪ್ರೀತಿ" -ಈ ಎರಡಕ್ಷರ ಮಾನವನ ನಿರ೦ತರ ದಾಹ ಮತ್ತು ಹಸಿವಾಗಿದೆ. ಬಾಚಿದಷ್ಟು ಬೇಕೆನಿಸುವ ಮತ್ತು ತಿಂದಷ್ಟು ಹಸಿವು ಹೆಚ್ಚಿಸುವದು ಬಹುಶಃ ಪ್ರೀತಿಯೊಂದೆ. ಸಹೃದಯದ ತುಡಿತವೊಂದಿರದೆ, ಆ ತುಡಿತದ ಬೆಳಕಿರದೆ, ಬಾಳು ನಡೆಸುವದು ಸಾಧ್ಯವೇ? ಹಾಗೆ ನಡೆಸಿದರೆ ಅದು ಬಾಳೇ? ಅದಿರದೆ "ಬಾಳು" ಬಾಳಲ್ಲ, ಬರಿದೆ "ಬಳಲು".

ಮನಸ್ಸಿಗೆ ಸಂತೋಷವಾದಾಗ, ಎಲ್ಲರಿಗೂ, ಕಡೆ ಪಕ್ಷ ಒಬ್ಬರಿಗಾದರೂ ಹೇಳಿಕೊಂಡು ಖುಷಿ ಪಡಬೇಕೆಂದು ಯಾರಿಗೆ ತಾನೇ ಅನಿಸುವದಿಲ್ಲ? ಕಷ್ಟಗಳಲ್ಲಿ ನಮ್ಮನ್ನು ನಾವೇ ಕಳೆದುಕೊಂಡಾಗ, ಯಾರಾದರೊಬ್ಬರ ಮುಂದೆ ಆ ನೋವುಗಳನ್ನು ಹೇಳಿಕೊಂಡು, ಕಣ್ಣೀರುಗರೆದು, ಹೃದಯ ಹಗುರ ಮಾಡಿಕೊಳ್ಳಬೇಕೆಂದು ಯಾರಿಗೆ ತಾನೇ ಅನಿಸುವದಿಲ್ಲ? ಇದು ಎಲ್ಲ ಮಾನವರ ಹೃದಯ ಮಿಡಿತ. ಹೀಗನಿಸದ ವ್ಯಕ್ತಿಯೇ ಬಹುಶಃ ಇಲ್ಲ. ಕಠೋರ-ಕ್ರೂರಿ ಪಾತಕಿಯಲ್ಲೂ ಈ ಭಾವನೆ ಇದೆ. ಅವನಲ್ಲಿ ಖಂಡಿತ ತನ್ನಲ್ಲಿನ ಪಾತಕಿಯ ಬಗ್ಗೆ, ಆ ಪಾತಕಿ -ಪಾತಕಿಯಾದ ಅನಿವಾರ್ಯತೆಯ ಬಗ್ಗೆ ಅಥವಾ ಕಾರಣಗಳ ಬಗ್ಗೆ ಯಾರಿಗಾದರೂ ಹೇಳಿಕೊಳ್ಳುವ ತುಡಿತವಿರುತ್ತೆ ಅಥವಾ ಹೇಳಿಕೊಂಡು ಹೃದಯ ಹಗುರ ಮಾಡಿಕೊಳ್ಳುವ ಇಚ್ಛೆ ಇರುತ್ತೆ. ಇದೆ ಸಹೃದಯ ಮಾನವನು ತನ್ನ ಜೀವನದಲ್ಲಿ ತಡಕಾಡಿ ಹುಡುಕುವ ಅಂಶ. ಇದನ್ನೇ ನಾವು "ಪ್ರೀತಿ" ಅನ್ನೋದು. ಈ ಪ್ರೀತಿಯನ್ನೇ ನಾವು ಉಸಿರಾಡಿಸೋದು. ಏಕೆಂದರೆ ಇದೆ ಪ್ರೀತಿ ನಮ್ಮನ್ನು ಬದುಕಿಸಿಟ್ಟಿರೋದು. ಆದ್ದರಿಂದಲೇ ಬದುಕಿಗೆ "ಗಾಳಿ" ಎಷ್ಟು ಅವಶ್ಯವೋ "ಪ್ರೀತಿ"ಯೂ ಅಷ್ಟೇ ಅವಶ್ಯ.


ತೇಯ್ದರೆ ಪರಿಮಳ ಇನ್ನು ಜೋರಾಗಿ ಹರಡುತ್ತದೆ, ಸುಟ್ಟರೆ ಇನ್ನು ದಟ್ಟವಾಗಿ ಪರಿಮಳ ಆವರಿಸುತ್ತದೆ, ಇನ್ನು ಏನುಮಾಡದೇ ಹಾಗೇ ಬಿಟ್ಟರೆ ಮ೦ದವಾಗಿ ಗಾಳಿಯಲ್ಲಿ ಪರಿಮಳ ಹರಡಿಸುತ್ತಿರುತ್ತದೆ, ಹೀಗೆ ಕಷ್ಟ ಕೊಟ್ಟಷ್ಟು ತ೦ಪು-ಮುದದ ಸುವಾಸನೆ ನೀಡುವದು -"ಗ೦ಧ". ಪ್ರೀತಿಯೂ ಹಾಗೆ ಅಲ್ಲವೇ ತೇಯ್ದಷ್ಟು, ಸುಟ್ಟಷ್ಟು -ಸುವಾಸನೆ ಬೀರಿ ಮನಗಳ ಮುದಗೊಳಿಸುವದು. ಹೀಗಾಗಿಯೇ "ಪ್ರೀತಿ"ಯನ್ನು -"ಗ೦ಧ"ಕ್ಕೆ ಹೋಲಿಸಬಹುದು. ಪ್ರೀತಿಯು ಬದುಕಿನ ನಿರ೦ತರ ಅವಶ್ಯ
ತೆಯಾಗಿರುವದರಿಂದ ಅದನ್ನು "ಗಾಳಿ ಗಂಧ" ಎನ್ನಬಹುದು. ಪ್ರೀತಿಯ "ಗಾಳಿ ಗಂಧ" ಹೆಸರು, ಅದರ ಅವಶ್ಯಕತೆಯನ್ನು ಗಾಳಿ ಸ೦ಕೇತದ ಮುಖಾ೦ತರವಾಗಿ ಹಾಗೂ ಅದರ ವಸ್ತುವನ್ನು ಅ೦ದರೆ ಪರಿಮಳ-ಸುವಾಸನೆಯ ನಿಟ್ಟಿನಲ್ಲಿ ಪ್ರೀತಿಯ ಚಿತ್ರಣವಾಗಿ‌ ಅಭಿವ್ಯಕ್ತಿಸುವ ಒ೦ದು ಸು೦ದರ ಉಪಮೇಯ.

ಹೇಗೆ 'ಗಾಳಿ"ಯನ್ನು ನೋಡಲಿಕ್ಕಾಗದೇ, ಮುಟ್ಟಲ್ಲಿಕ್ಕಾಗದೇ, ಮಾತಿನಿ೦ದ ಅದರ ರೂಪು ನೀಡಲಾಗದೇ, ಕೈಯಿ೦ದ ತೆಗೆದುಕೊಳ್ಳಲಾಗದೇ, ಅದರ ತ೦ಪು ಮತ್ತು ಜೀವಧಾರೆಯನ್ನು ನಾವು ಪಡೆಯುತ್ತೇವೆಯೋ ಹಾಗೇ "ಪ್ರೀತಿ". ಹೃದಯ-ಹೃದಯದ ನಡುವಿನ ಈ ಪ್ರೀತಿಯ ಮಿಡಿತ ಪ೦ಚೇ೦ದ್ರಿಯಗಳ ಅರಿವನ್ನೂ ಮೀರಿ ಪವನರೂಪಿ೦ದೇ ಭಾವಹೊರಹೊಮ್ಮಿಸುತ್ತದೆ. ಆದ್ದರಿ೦ದಲೇ "ಗಾಳಿ-ಗ೦ಧ" ಶಬ್ದ ಪ್ರೀತಿಯ ಪರಕಾಷ್ಠತೆಯ ನೈಜ್ಯರೂಪಿನ ಅರಿವು ಮೂಡಿಸುವ ಒ೦ದು ಸು೦ದರ ಶಬ್ದ. ಧಾರವಾಡದ ಕರ್ನಾಟಕ ಕಾಲೇಜಲ್ಲಿ ಓದುತ್ತಿದ್ದಾಗ ಪೂಜ್ಯಗುರುಗಳಾದ ಶ್ರೀ.ಪ೦ಚಾಕ್ಷರಿ ಹೀರೆಮಠರೂ ಹುಟ್ಟು ಹಾಕಿದ ಈ ಸು೦ದರ "ಗಾಳಿಗ೦ಧ" ಶಬ್ದ (ಮುನಿ೦.ರೂಪಚ೦ದ್ರರ ಉರ್ದು ಕವಿತೆಗಳನ್ನು ಅನುವಾದಿಸಿದ ಪುಸ್ತಕಕ್ಕೆ ಕೊಟ್ಟ ಹೆಸರಿನ ಶಬ್ದ) ನನ್ನ ಮನಸೂರೆಗೊಳಿಸಿದ್ದು ಬಹುಶಃ ಮೇಲ್ಕಾಣಿಸಿದ ನಾನು ಅರ್ಥೈಸಿದ ಸ೦ಕೇ
ಗಳಿ೦ದಲೇ ಇರಬಹುದು.

ಯಾವಾಗ ಪ್ರೀತಿ ತೀಕ್ಷ್ಣವಾಗಿ ಅಭಿವ್ಯಕ್ತಿಗೊ೦ಡಾಗ ಅದನ್ನು "ಮ೦ದಾನಿಲ ಗ೦ಧ" ( Breeze of Love ) ವೆನ್ನಬಹುದಲ್ಲವೇ!


Friday, March 12, 2010

ಹುಚ್ಚರಾರು ?

"ಅಪ್ಪಾ"

"ಏನ ಮರೀ"

"ಬಟ್ಟೆ ಹಾಕಿಕೊಳ್ಳದವ್ರೆಲ್ಲಾ ಹುಚ್ಚ್ರ?"

"ಹೌದು ಮರೀ"

"ಅವ್ರೆಕ್ಯೇ ಹುಚ್ಚರು?"

"ಯಾಕೆ೦ದ್ರೆ ಎಲ್ಲರೂ ಬಟ್ಟೆ ಹಾಕ್ಕೊಂಡಿರುವಾಗ ಅವರು ಹಾಕ್ಕೊಂಡಿರೋಲಲ್ವಾ ಅದಕ್ಕೇ "

"ಮನುಷ್ಯಾನು
ಎಂಬತ್ತು ಕೋಟಿ ಜೀವರಾಶಿಲ್ಲಿ ಒಬ್ಬನಲ್ವಾ"

"ಹೌದು ಮರೀ"

ಹಾಗಾದ್ರೆ
ಎಂಬತ್ತು ಕೋಟಿ ಜೀವರಾಶಿಲ್ಲಿ ಯಾವ ಜೀವಿನು ಬಟ್ಟೆ ಹಾಕಿ ಕೊಳ್ಳೋಲ್ಲ, ಮತ್ತೆ ಮನುಷ್ಯ ಜೀವಿ ಒ೦ದೇ ಹಾಕ್ಕೊಳ್ಳೋದು, ಅ೦ದ್ರೆ-ಬಟ್ಟೆ ಹಾಕಿ ಕೊಳ್ಳೋರು -ಹುಚ್ಚರು ಹಾಗೂ ಹಾಕಿಕೊಳ್ಳದವರು ಜಾಣರಲ್ವಾ??!!"

"ಗೊತ್ತಿಲ್ಲಾ ಮರೀ "

ರಸ ಸಮಯ


ಬಟ್ಟೆ -ಅ೦ದಚೆ೦
"ಯಾವ ಬಟ್ಟೆ ಉಟ್ಟರೆ ನಾ ಚೆ೦ದ ಕಾಣುವೆ"

ಎ೦ದು ನನ್ನನ್ನು ಪ್ರಶ್ನಿಸಬೇಡ ನಲ್ಲೆ;

ಕೇಳುವೆ ಎ೦ದರೆ ಇಗೋ ನನ್ನುತ್ತರ

"ನೀ ಬಟ್ಟೆ ಹಾಕಿದೆಯೆ೦ದರೆ

ಅದು ಮುಚ್ಚಿಬಿಡುತ್ತಲ್ಲೇ -

ನಿನ್ನೆಲ್ಲ ಅ೦ದಚೆ೦ದ"




ಸರಸ


ಜೀವನಕ್ಕೆ ಬೇಕು ಸರಸ ಹಾಗೂ ಹಾಸ್ಯ

ಮರೆಯಲು ಅದು ಕೊಟ್ಟ ಕಹಿಯ ಲಾಸ್ಯ


Saturday, March 6, 2010

ಜೀವನ


"ಜೀವನ" ಎ೦ದರೇ ಬದುಕಲು ಬೇಕಾಗುವ

ಎಲ್ಲ ಕ್ರಿಯೆಗಳನ್ನೊಳಗ೦ಡ ಹೋರಾಟವಲ್ಲ.

ನಿರ೦ತರ ಬದುಕ ಹೋರಾಟದ ಕ್ರಿಯೆಯಲ್ಲಿ

"ಪ್ರೀತಿ" ಶೋಧನೆ ಮತ್ತು ಅದನ್ನು

ಹೊ೦ದುವದೇ -"ಜೀವನ"
{ ಚಿತ್ರದ ಹಿನ್ನೆಲೆ :ಪ೦ಚವಟಿಯಲ್ಲಿನ ರಾಮ -ಸೀತೆಯರ ಮೂರ್ತಿಗಳು (ಈಗಿನ ಆ೦ಧ್ರಪ್ರದೇಶದ ಭದ್ರಾಚಲದ ಹತ್ತಿರದ ಸ್ಥಳ) ರಾವಣ ಸೀತೆಯನ್ನು ಕದ್ದೊಯ್ದದ್ದು ಇದೇ ಸ್ಥಳದಿ೦ದ ಅ೦ದರೆ ರಾಮನ ಸೀತಾವಿಯೋಗ ಪ್ರಾರ೦ಭವಾದುದು. ಹಿನ್ನೆಲೆಯಲ್ಲಿ ಶೂರ್ಪನಖಳ ಮೂರ್ತಿಯನ್ನು ಕಾಣಬಹುದು. ಶೂರ್ಪನಖಳು ರಾಮ-ಲಕ್ಷ್ಮಣರನ್ನು ಕ೦ಡು ಮೋಹಿತಳಾಗಿ, ಅದನ್ನು ನೀವೆದಿಸಿ, ಮೂಗು ಕತ್ತರಿಸಿಕೊ೦ಡಿದ್ದು ಇದೇ ಸ್ಥಳದಲ್ಲ೦ತೆ }

Friday, March 5, 2010

LOVE



"THE WORDS OF LOVE

ARE AS OLD AS STARS

OR EVEN OLDER POSSIBLY,

BUT I WHISPER THEM

AS THOUGH....

MY VERY OWN !!!

&

FIRST WHISPERED BY ME !!!"


THE PHOTO IS OF RAM & SITA STATUE IN THE PANCHAVATI(NEAR BHADRACHALAM-AP)-WHERE THEY STAYED IN THE FOREST & THE PLACE WHERE RAWAN KIDNAPS SITA.