(ಚಿತ್ರ ಕೃಪೆ : ಅಂತರಜಾಲ ಸರಕು ಮಿಶ್ರಣ )
ಜನಪದ ಮೂಲದ ನಿರ್ವಹಣೆ ಪಾಠದ ಕಥೆ
(FOLK STORY OF MANAGEMENT LESSONS)
ಒಂದಾನೊಂದು ಊರು...
ಊರಬದಿಯಲ್ಲೊಂದು ಕೆರೆ....
ಕೆರೆಬದಿಗೊಂದು ಪೊದೆ......
ಪೊದೆಯಲ್ಲೊಂದು ಕಾರ್ಕೋಟಕ ನಾಗರನ ವಾಸ....
ಹತ್ತು ಹಲವರನ್ನು ಕಚ್ಚಿ...ಕೊಂದಿತ್ತು....
ಅಲ್ಲಿ ಜನರು ತಿರುಗಲು ಹೆದರುತ್ತಿದ್ದರು.....ಆ ಪೊದೆಯ ಬದಿಯ ರಸ್ತೆ ನಿರ್ಜನವಾಗಿತ್ತು....
ಕೊಳಕ್ಕೆ ಸುತ್ತು ಬಳಸಿನ ರಸ್ತೆಯ ಕಂಡುಕೊಂಡಿದ್ದರು ಊರಜನ.
ಆದರೂ ಕೆರೆಬದಿಯಲ್ಲೂ ಕಾಣಿಸಿಕೊಂಡು ಅಪಾಯ ಒಡ್ಡುತ್ತಿದ್ದ ನಾಗರಾಜ.
ಜನ ನಾಗಣ್ಣನ ಉಪಟಳದಿಂದ ಬೇಸತ್ತಿದ್ದರು.....
ಊರಿಗೊಮ್ಮೆ ಸನ್ಯಾಸಿಯೊಬ್ಬರ ಆಗಮನವಾಯಿತು....
ಕೆರೆಬದಿಗೆ ದೈನಂದಿನ ಕಾರ್ಯಕ್ಕೆ ಹೊರಟ ಅವರಿಗೆ ಊರಜನ ನಾಗಣ್ಣನ ಉಪಟಳದ ಬಗ್ಗೆ ಹೇಳಿ ಎಚ್ಚರಿಸಿದರು....
ಆದರೂ ಸನ್ಯಾಸಿಗಳು ಅದೇ ದಾರಿಯಲ್ಲಿ ಹೊರಟರು...
ನಾಗಣ್ಣನಿಗೆ...ತನ್ನ ವಾಸಸ್ಥಳದ ಹತ್ತಿರ ಧೈರ್ಯದಲ್ಲಿ ಬರುತ್ತಿದ್ದ ಸನ್ಯಾಸಿಯ ಕಂಡು ಕೋಪ ಬಂದು... ಭುಸುಗುಡುತ್ತಾ ಕಚ್ಚಲು ಬಂದ .....
ತಪಶಕ್ತಿಯ ಸನ್ಯಾಸಿಗಳು, ಕಚ್ಚಲು ಬಂದ ಹಾವನ್ನು ಕ್ಷಣ ಮಂತ್ರದಿ ದಿಗ್ಬ್ರಮೆ ಗೊಳಿಸಿ, ನಿಲ್ಲಿಸಿ.. ಅದನ್ನು ಕೇಳಿದರು...
"ಅಯ್ಯಾ ನಾಗರಾಜ ನಿನಗೆ ಜನರನ್ನು ಕಚ್ಚಿ ಸಾಯಿಸುವದರಿಂದ ಸಿಗುವುದೇನು? -ಕಾಡು ಮೃಗಗಳು ಹಸಿವೆಯಾಗದ ಹೊರತು ಬೇಟೆಯಾಡಿ ಕೊಂದು ತಿನ್ನುವದಿಲ್ಲ...ಜನರನ್ನು ಕೊಂದು ನೀನೇನು ಅವರನ್ನು ತಿನ್ನುವೆಯಾ...ಇದರಿಂದ ನಿನಗೇನೂ ಸಿಗುತ್ತೆ? " ಎಂದು ಪ್ರಶ್ನಿಸಲಾಗಿ....ನಾಗಣ್ಣನಿಗೆ ಜ್ಞಾನೋದಯವಾಯಿತು... ಅನ್ಯಾಯವಾಗಿ ತಾನು ಜನರನ್ನು ಸುಮ್ಮನೆ ಕೊಲ್ಲುತ್ತಿದ್ದೆನಲ್ಲಾ ... ಹಸಿವೆಗಲ್ಲ... ಮತ್ತಾವ ಸುಖಕ್ಕೂ ಅಲ್ಲ.... ತಾನು ಅಮಾಯಕರನ್ನು ಕೊಂದೆನಲ್ಲಾ.. ಎಂದು ಪಶ್ಚಾತಾಪಗೊಂಡಿತು....
ಸನ್ಯಾಸಿ ಸತ್ಯದ ಅರಿವು ಮಾಡಿಸಿದ್ದಕ್ಕೆ ವಂದಿಸಿ... "ಅಯ್ಯಾ ಸ್ವಾಮಿಗಳೇ ಇನ್ನು ನಾನು ಯಾರನ್ನು ಕಚ್ಚಿಕೊಲ್ಲುವದಿಲ್ಲ "ಎಂದು ಪ್ರಮಾಣಿಸಿತು...
ಮುಂದೆ ಆ ದಾರಿಯಲ್ಲಿ ತಿರುಗುವವರಿಗೆ ಅದು ಉಪಟಳ ಕೊಡುವದನ್ನು ನಿಲ್ಲಿಸಿತು....
ಸಂತರ ಜ್ಞಾನದ ಮಾತುಗಳಿಂದ ಪ್ರೇರಿತವಾದ ಅದು ತೀವ್ರ ಸಾತ್ವಿಕ ಜೀವನ ನಡೆಸಲು ಪ್ರಾರಂಭಿಸಿತು...
ಜನಕ್ಕೆ ಹಾವು ಕಚ್ಚುವದಿಲ್ಲವೆಂದು ತಿಳಿದ ಬಳಿಕ, ಆ ರಸ್ತೆಯಲ್ಲಿ ಸರಾಗವಾಗಿ ತಿರುಗಾಡ ತೊಡಗಿದರು....
ಕೆಲವು ಕಿಡಿಗೇಡಿಗಳು ಹಾವು ಏನು ಮಾಡುವದಿಲ್ಲವೆಂದು ತಿಳಿದ ಬಳಿಕ ಅದನ್ನು ಕಲ್ಲಿನಿಂದ... ಕೋಲಿನಿಂದ ಹೊಡೆದು ತಮ್ಮ ವಿಕೃತಿ ತೀರಿಸಿಕೊಳ್ಳ ಹತ್ತಿದ್ದರು.. ಮಕ್ಕಳು ಹಾವನ್ನು ಹಿಡಿದು ತಿರುಗಿಸುತ್ತಾ..ಆಟ ಆಡಲು ಪ್ರಾರಂಬಿಸಿದರು.... ಹಾವಿನ ಮೈಯೆಲ್ಲಾ ಗಾಯ ..ವೃಣಗಳಾಗಿ ಅದರ ದೇಹ ಪರಿಸ್ಥಿತಿ ತೀವ್ರ ಹದೆಗೆಟ್ಟು.. ಸಾಯಲು ಇಗಲೋ.. ಆಗಲೋ... ಎನ್ನುವಂತಾಯಿತು....
ಸನ್ಯಾಸಿಗಳು ಮತ್ತೊಮ್ಮೆ ಆ ಹಾದಿಯಲ್ಲಿ ಬರುವಾಗ, ಹಾವನ್ನು ಕಂಡು, ಅದರ ಪರಿಸ್ಥಿತಿ ಕಂಡು, ಮರುಗಿ ಇದಕ್ಕೆ ಕಾರಣವೆಂದು ಕೇಳಿದರು ...
ಆಗ ನಾಗ ವಿನಮ್ರವಾಗಿ "ತಾವು ತಿಳಿ ಹೇಳಿದಂತೆ ಕಚ್ಚುವಾದ ಬಿಟ್ಟೆ... ಅದಕ್ಕೆ ಹೀಗಾದೆ...ಆದರೂ ಬೇಜಾರಿಲ್ಲ... ಇನ್ನೊಬ್ಬರ ಅಲಾಭ ಹತ್ಯೆಯ ದೋಷ ನನಗೆ ತಟ್ಟುವದಿಲ್ಲವಲ್ಲಾ .... ಅದೇ ಸಾಕು ನನಗೆ.." ಎಂದಿತು.
ಆಗ ಸನ್ಯಾಸಿ ಹೇಳಿದರು " ಅಯ್ಯಾ ನಾಗರಾಜ ನಾನು ನಿನಗೆ ಕಚ್ಚುವಾದ ಬಿಡು ಎಂದಿದ್ದೇನೆ ಹೊರತು... ಭುಸುಗುದುವದನ್ನು ಬಿಡು ಎಂದಿಲ್ಲಾ ... ಆತ್ಮರಕ್ಷಣೆಗೆ ಭುಸುಗುದಲೇ ಬೇಕು ಕಚ್ಚುವ... ಕಚ್ಚಿ ಸಾಯಿಸುವ... ಹೆದರಿಕೆ ಸದಾ ಉಪಟಲಿಸುವ ಜನರಿಗೆ ತೋರಿಸಲೇ ಬೇಕು ಇಲ್ಲಾ ಬದುಕುವದು ದುಸ್ತರ" ಎಂದರು...
ಈಗ ನಾಗಣ್ಣನಿಗೆ ತನ್ನ ತಪ್ಪು ಏನೆಂದು ಅರಿವಾಗಿ ಅವರ ಮಾರ್ಗದರ್ಶನದಂತೆ ಮುಂದಿನ ಜೀವನ ಕ್ರಮಿಸಿ ಯಾರಿಗೂ ತೊಂದರೆ ಕೊಡದೆ ತಾನು ತೊಂದರೆ ಪಡೆಯದೇ ಬದುಕಿದ...
ನೀತಿ : ಹೇಗೆ ಇತರರಿಗೆ ಅನಾವಶ್ಯಕ ತೊಂದರೆ ಕೊಡುವದು ತಪ್ಪೋ ಹಾಗೆ ಸ್ವತಹ ತೊಂದರೆಗೊಳಗಾಗುವದು ತಪ್ಪು... ತೊಂದರೆಗಳನ್ನೂ ಬರದಂತೆ ತಡೆಗಟ್ಟಲು ಇತರರಿಗೆ ಸ್ವಲ್ಪ ತೋರಿಕೆಯ ತೊಂದರೆಯನ್ನೂ ತೊಂದರೆಯಾಗದಂತೆ ಪ್ರಯೋಗಿಸಬೇಕು... ತನ್ನ ತೊಂದರೆ ತಡೆಯಲು ತೊಂದರೆ ಕೊಡುವವರಿಗೆ ಸ್ವಲ್ಪ ಬಿಸಿ ಮುಟ್ಟಿಸುವಷ್ಟು ತೊಂದರೆ ಕೊಡಬೇಕಾದುದು ಬದುಕ ಅನಿವಾರ್ಯತೆ..
DON'T BITE TO TROUBLE OTHERS UNNECESSARILY BUT KEEP HISSING FOR SELF DEFENSE
(ಬಹಳ ದಿನಗಳಿಂದಲೂ ಬರೆಯಲಾಗದೆ ಬ್ಲಾಗ್ ಖಾಲಿ ಇದ್ದುದ್ದಕ್ಕೆ ಕ್ಷಮೆ ಇರಲಿ )