Monday, June 6, 2011

"ತಲೆ" ಹರಟೆ

ಉದಯಿಸುತ್ತಿರುವ ಚಂದ್ರ
ಪೂರ್ಣ ಚಂದ್ರ
"ಪೂರ್ಣಚಂದ್ರ" (ಪೂರ್ತಿ), "ಅರ್ಧಚಂದ್ರ"( ಅರ್ಧ), "ಮುಳುಗುತಿರುವ ಚಂದ್ರ"(ಹಿಂದಿನಿಂದ), ಉದಯಿಸುತಿರುವ ಚಂದ್ರ"(ಮುಂದಿನಿಂದ) -ಎಂದು ಚಂದ್ರನಿಗೆ ಹೋಲಿಸಿ ; "ಪೂರ್ಣ ಪ್ರತಿಫಲನ ", " ಆರೇ ಪ್ರತಿಫಲನ", "ಕನ್ನಡಿ" ಎಂದು ಬೆಳಕು ಸ್ಪಂದಿಸುವ ಗುಣಧರ್ಮಕ್ಕೆ ಹೋಲಿಸಿ, "ಜಾರುಬಂಡೆ", "ನೀರು ನಿಲ್ಲದ ತಲೆ", "ತಲೆ ತೊಯ್ದರು ಶೀತವಾಗದವರು", "ಎಣ್ಣೆ -ಶಾಂಪು ಉಳಿತಾಯದ ತಲೆ", "ಕ್ಷೌರದ ಖರ್ಚಿಲ್ಲದವರು", "ತಲೆ ಬಾಚುವ ತೊಂದರೆ ಇಲ್ಲದವರು"" ಹಾಗೆ..... ಹೀಗೆ..... ಎಂದು ತಲೆ ಇದ್ದವರಿಗೆ ಮತ್ತು ಅದರಲ್ಲಿ ಕೂದಲು ಕಳೆದುಕೊಳ್ಳುತ್ತಿರುವವರಿಗೆ ಜನ ಕರೆದು ಗೇಲಿ ಮಾಡುತ್ತಾ ಮೋಜು ನೋಡುತ್ತಾರೆ... ನೋಡಲಿ ಬಿಡಿ ... ಅದಕ್ಕೇನು.... ಅವರಿಗೆ ಸ್ವಲ್ಪ ಸಂತೋಷವಾದರೆ ಸಾಕು ಧನ್ಯರು ನಾವು ಎಂದು ಸುಮ್ಮನಾಗಬಹುದು...

ಆದರೆ ವಿಷಯ ಅದಲ್ಲ...

ಎಣ್ಣೆ -ಶಾಂಪೂ ಖರ್ಚಿಲ್ಲ ಅಂತಾರಲ್ಲ ಆಗ ಬೇಜಾರಾಗುತ್ತೆ...ಯಾಕೆಂದರೆ ಎಣ್ಣೆ -ಶಾಂಪು ಸ್ವಲ್ಪ ಅಲ್ಲಿ ಇಲ್ಲಿ ಉಳಿದ ಕೂದಲಿನ ಬಳಕೆಗೆ ಬೇಕು ... ಪೂರ್ತಿ ಉಳಿತಾಯವಿಲ್ಲ.. ಜೊತೆಗೆ ಪ್ರತಿ ಸಲ ಮುಖ ತೊಳೆಯುವಾಗ ಎಲ್ಲರಿಗಿಂತಾ ಹೆಚ್ಚು ಸೋಪು ಉಪಯೋಗವಾಗುತ್ತೆ ಯಾಕೆಂದರೆ ಮುಖದ ಪಾತ್ರ ಹೆಚ್ಚಾಗಿರುತ್ತೆ... ಹೆಚ್ಚಾದ ಮುಖದ ಪಾತ್ರ -ಕಡಿಮೆಯಾದ ತಲೆ ಪಾತ್ರಕ್ಕೆ ನೇರವಾಗಿ ಸಮಪಾತದಲ್ಲಿರುವದರಿಂದ ತಲೆಯ ಶಾಂಪೂ ಮತ್ತು ಎಣ್ಣೆ ಉಳಿತಾಯಗಳು ವಿಲೋಮ ಅನುಪಾತದಲ್ಲಿ ಹೆಚ್ಚಾದ ಮುಖಪಾತ್ರಕ್ಕೆ ಬೇಕಾಗುವ ಹೆಚ್ಚಿನ ಸೋಪು ಮತ್ತು ಮುಖ ಪ್ರಸಾಧನಗಳ ಖರ್ಚಿಗೆ ಸಮಾನವಾಗಿರುವದರಿಂದ - ಒಟ್ಟು ಉಳಿತಾಯ ಸೊನ್ನೆ. ಗಣಿತ ಅರ್ಥವಾಗದವರು ರೀತಿ ವಿಮರ್ಶೆ ಮಾಡಿದಾಗ ಬೇಜಾರಾಗುತ್ತೆ... ಅಲ್ಲವಾ......ಜೊತೆಗೆ ಉಳಿದ ಕೂದಲುಗಳನ್ನು ಅಳಿಯದಂತೆ ಉಳಿಸಲು ಬಳಸುವ ಪ್ರಸಾಧನ -ಎಣ್ಣೆಗಳು ಅವುಗಳ ಖರ್ಚು-ವೆಚ್ಚ ಸಮಯ ಸ್ವಲ್ಪವೇ!!!
ಇನ್ನು
ಕ್ಷೌರದ ಖರ್ಚಿನ ವಿಷಯಕ್ಕೆ ಬರುವ ಅಲ್ಲಿ ಇಲ್ಲಿ ಉಳಿದ ಕೂದಲ೦ತೂ ಬೆಳೆಯುತ್ತಲೇ ಇರುವದರಿಂದ ಕ್ಷೌರ ಮಾಡಿಸದೆ ಇರಲಾಗದು... ಅಕ್ಕಪಕ್ಕದಲ್ಲಿ ಒತ್ತೊತ್ತಾಗಿ ಇರುದುದರಿಂದ ಚೆನ್ನಾಗಿ ಮೇಯ್ದು ಉಳಿದ ಕೆಲವೇ ಕೂದಲುಗಳು ಬೆಳೆಯುವದು ....ತೀವ್ರವೇ! ಹೀಗಾಗಿ ಕ್ಷೌರ ಕರ್ಮ ಪದೇ ಪದೇ ಬೇಗ ನಡೆಯಲೇ ಬೇಕು! ಕ್ಷೌರಕ್ಕೆ ಹೋದರೆ ಅರೆ-ಮತ್ತು ಪೂರ್ಣ ತಲೆಕೂದಲಿಗೆ ಬೇರೆ ಬೇರೆ ದರ ಇರದೇ ಇರುವದರಿಂದ ಪೂರ್ತಿ ಹಣ ತೆತ್ತಲೇ ಬೇಕು ! ರಿಯಾಯತಿ ಇಲ್ಲವೇ ಇಲ್ಲ! ಪೂರ್ಣ ತಲೆಗೆ ಒಂದು ಗಂಟೆ ತಗಲುವ ಕೆಲಸಕ್ಕೆ ತೆಗೆದುಕೊಳ್ಳುವ ಕ್ಷೌರಿಕ ೧೦-೧೫ ನಿಮಿಷದಲ್ಲಿ ಮುಗಿಯುವ ಅರೆ ತಲೆಯ ಕ್ಷೌರಕ್ಕೆ ಅಷ್ಟೆ ಹಣ ತೆಗೆದುಕೊಳ್ಳುತ್ತಾನೆ. ಎಲ್ಲ ತಲೆಗಳು ಅರೆತಲೇ-ಗಳಾಗಲಿ ಎಂದು ಬೇಡುತ್ತಾನೆ- ಕೆಲಸ ಉಳಿಯುವದರಿಂದ ಮತ್ತು ಅಷ್ಟೆ ಆದಾಯವಿರುವದರಿಂದ...ಅದಕ್ಕೆ ತಲೆ ಕೂದಲಿರುವವರೇ .. ಹುಷಾರಾಗಿರಿ... ಕ್ಷೌರಿಕರ ಬೇಡಿಕೆ ಹಾರೈಕೆಗೆ ದೇವರು ತಥಾಸ್ತು ಎಂದಾನು!! ಹದಿನೈದು ನಿಮಿಷದ ಕ್ಷೌರಕ್ಕೆ ಒಂದು ಗಂಟೆ ಕ್ಷೌರದ ದುಡ್ಡು ಕೊಟ್ಟು ಬಂದರೆ ಉರಿಯುತ್ತೆ ಅಲ್ಲವಾ... ನಿಟ್ಟಿನಲ್ಲಿ ಸರಕಾರ ಬೆಲೆ ನಿಯಂತ್ರಣ ಮತ್ತು ನೀತಿ ಸಂಹಿತೆ ಜಾರಿ ಮಾಡಬೇಕಲ್ಲವೇ??ಇನ್ನು ಅಳಿದುಳಿದ ಹಲವು ಕೂದಲುಗಳು ನೆರೆತರೆ ಅವುಗಳ ಬಣ್ಣ ಮಾಡುವದು ದೊಡ್ಡ ಗೋಳು..... ಎರಾಬಿರ್ರಿ ಹಚ್ಚಿದರೆ ಬಣ್ಣ ತಲೆಗೆ ಹತ್ತುತ್ತೆ ಮತ್ತು ಕಪ್ಪಾಗಿ ಅಸಹ್ಯವಾಗಿ ಬಿಡುತ್ತೆ .. ಅದಕ್ಕೆ ನಿದಾನವಾಗಿ ಒಂದೊದು ಕೂದಲನ್ನು ಹಿಡಿದು ಬಣ್ಣ ಬಳಿಯಬೇಕು. ಇಲ್ಲಿ ವ್ಯರ್ಥವಾಗುವ ಸಮಯದಲ್ಲಿ ಪೂರ್ಣ ಕೂದಲಿರುವ ನಾಲ್ಕು ನೆರೆತ ತಲೆಗಳ ಬಣ್ಣ ಮಾಡಬಹುದು...ನ್ನು ತಲೆ ತೊಯ್ದರೆ ಶೀತವಾಗದು ಎಂಬ ಪಟ್ಟವು ಬಕ್ಕ ತಲೆಯವರ ಮೇಲಿದೆ ಅದನ್ನು ನೋಡೋಣ!
"
ಕೂದಲಿರದ ತಲೆಗಳೇ....ತೊಯ್ದಾಗ..ನೀರು ನಿಲ್ಲದ ಜಾಗ... ನಿಮ್ಮದು...
ಅದಕೆಂದೇ
ನಿಮಗೆ ಶೀತ ಬಾಧಿಸದು..."
ಇದು
ನಿಜವಾದರೂ.. ಬಿಸಿಲು ನಿಮ್ಮ ಬಾಧಿಸುವದು...ಚಳಿಯು ಕೂಡಾ ಬಾಧಿಸುವದು...
ಹೀಗಾಗಿ
ಮಳೆಯಲ್ಲಿ ತೊಯ್ದಾಗ ಬರಬೇಕಾದ ಶೀತ ಚಳಿಗಾಲದಲ್ಲಿ ಬರುವದರಿಂದ .. ಆರೋಪವು ಕೂಡದು ಅಲ್ಲವೇ!!!
ಇನ್ನು
ಬಿಸಿಲಿನ ಬಾಧೆಗೆ ಸುಟ್ಟು ಕಪ್ಪಾಗುವ ತಲೆಯ ಕಷ್ಟ ಇನ್ನು ಹೆಚ್ಚಿನದು ಅಲ್ಲವೇ???
ಇದಕ್ಕಾಗಿ
ಟೋಪಿ ಖರೀದಿಸಿ ಉಪಯೋಗಿಸುವದು ತ್ರಾಸಲ್ಲವೇ..
ಆದ್ದರಿಂದಾ
ಕೂದಲಿರದ ತಲೆಗಳ ಆಡಿಕೊಳ್ಳಬೇಡಿ..
ಅವುಗಳ
ಚಿತ್ರಗಳ ತೆಗೆದು ಬ್ಲಾಗಲ್ಲಿ ಹಾಕಿ .. ಸಂತಸಪಡುವ ಮನಗಳಾಗಬೇಡಿ...
ಇನ್ನು
ತಲೆಯಲ್ಲಿ ಕೂದಲಿರದವರ ಸಂಬ್ರಮವೆಂದರೆ....
  • Bald is sign of intelligence..
  • balds are romantic....
ಎಂಬ ಗಾದೆಗಳನ್ನು ಕೇಳಿದಾಗ... ( ಗಾದೆಗಳು ಇವೆಯೋ ಇಲ್ಲವೋ ಅಥವಾ ಇದನ್ನು ಹುಟ್ಟು ಹಾಕಿದವರ ಬಗ್ಗೆ ಹೆಚ್ಚಿನ ಮಾಹಿತಿ ನಮ್ಮಲ್ಲಿಲ್ಲ -ಬೇಕಾದವರು ಗಾದೆಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿರುವ ಮತ್ತು ಮಾಡುತ್ತಿರುವ ಶಶಿ ಜೋಯಿಶ್ ಮೇಡಂ ರನ್ನು ಸಂಪರ್ಕಿಸಲು ಕೋರಿದೆ)
ಇದನ್ನು
ಹೇಳೋಕ್ಕೆ ಕಾರಣವು ಇದೆ...
  • ವಿಷಯಗಳುತಲೆ ಒಳಗೆ ಹೋಗೋದಕ್ಕೂ ಮತ್ತು ಬರೋದಕ್ಕೂ ಕೂದಲಿನಿಂದ ಅಡೆತಡೆಗಳಿಲ್ಲ !!!!
  • ಎರಡನೆಯದನ್ನು ನೀವೇ ಯೋಚಿಸಿ.... ಕಮೆಂಟಿನಲ್ಲಿ ಬರಲಿ... ಸರಿಯಾಗಿ ಹೇಳಿದವರಿಗೆ ಬಹುಮಾನ... ಉತ್ತರ ಒಂದು ತಿಂಗಳ ನಂತರ ಹಾಕುವೆ...
ನನ್ನ ಇನ್ನೊಂದು ಸಮಸ್ಯೆ ಅಥವಾ ಉತ್ತರ ಸಿಗದ ಪ್ರಶ್ನೆ " ಬಕ್ಕ ತಲೆ ಕೇವಲ ಗಂಡಸರಿಗೆ ಯಾಕೆ ? ಹೆಂಗಸರಿಗೆ ಏಕೆ ಬಕ್ಕ ತಲೆ ಸಾಮಾನ್ಯವಾಗಿ ಇರುವದಿಲ್ಲ?"
ಬಹುಶ:
ಇದು ನನ್ನ ಮುಂದಿನ ಬರಹದ ವಿಷಯವೋ ? ಏನೋ?
ಆ ಹರಟೆ ಮೊದಲು ನನ್ನ ತಲೆಯಲ್ಲಾಗಬೇಕು!!!!

Please view my post in other blog (Deep From The Earth) for World Environment Day theme of 2011 i.e. FOREST : NATURE IS AT YOUR SERVICE & this year India is hosting the event.

Link : http://sitara123gmail.blogspot.com/2011/06/world-environment-day-2011-5th-may.html

21 comments:

ಸಿಮೆಂಟು ಮರಳಿನ ಮಧ್ಯೆ said...

ಸ್ವಾಮಿ.. ಗುರುಗಳೆ...

ನಾನು ನನ್ನ ಮಗನ ಸಂಗಡ ಹೋದರೆ ಇಬ್ಬರಿಗೂ ಒಂದೇ ಚಾರ್ಜ್ ಮಾಡ್ತಾನೆ ನಮ್ಮ ಸೆಲೂನ್ ಮಾಲಿಕ..

ಇದು ಯಾವ ನ್ಯಾಯ ಸ್ವಾಮಿ ಅಂತ ಕೇಳಿದರೆ...

"ಸರ್.. ನಾವು ನಿಮ್ಮ ಮಗನಿಗೆ ಎಷ್ಟು ಬಾರಿ ಕತ್ತರಿ ಆಡಿಸುತ್ತೇವೋ ..
ಅಷ್ಟೇ ಬಾರಿ ನಿಮ್ಮ ತಲೆಗೂ ಕತ್ತರಿ ಅಡಿಸುತ್ತೇವೆ...
ಬೋಳು ಬೆಟ್ಟದಲ್ಲಿ ಹುಲ್ಲು ಸಿಗದಿದ್ದರೆ ನಮ್ಮ ತಪ್ಪೇನಿಲ್ಲ ಸ್ವಾಮಿ
ನಮ್ಮ ಕೆಲಸ ನಾವು ಮಾಡಿರ್ತೇವೆ.." ಅಂತ ಅಂದು ಬಿಟ್ಟ...

ಚಂದದ ಲೇಖನಕ್ಕೆ ಅಭಿನಂದನೆಗಳು..

ಮೊದಲ ಫೋಟೊದ ತಲೆ ಬಲು ಸುಂದರವಾಗಿದೆ ಗುರುಗಳೇ..

ಇಲ್ಲಿ ಓದುವವರ ತಲೆಗಳೆಲ್ಲ ಬಲು ಬೇಗ ಹಾಗೆಯೇ ಆಗಲೆಂಬುದು ನಮ್ಮ ಆಶಯ...

nimmolagobba said...

ಪ್ರಪಂಚದಲ್ಲಿ ಬಹಳಷ್ಟು ಜನರು ಬೇರೆಯವರನ್ನು ಹಂಗಿಸಿಕೊಂಡು ನಗುವ ಕಾಲದಲ್ಲಿ ತಮ್ಮನ್ನೇ ವಿಡಂಬನೆಗೆ ಒಳಪಡಿಸಿಕೊಳ್ಳುವ ದೊಡ್ಡತನ ಮೆಚ್ಚುಗೆಯಾಯಿತು.ಚಿತ್ರದಲ್ಲಿರುವ ಎರಡೂ ಅಸಮಾನ್ಯ ತಲೆಗಳ ಚಿತ್ರ ಚೆನ್ನಾಗಿದೆ. ಕೆಲವೊಮ್ಮೆ ನನಗೂ ಹೀಗೆ ಅನ್ನಿಸಿದೆ ಹೆಂಗಸರಿಗೆ ಬೊಕ್ಕ ತಲೆ ಇರುವುದಿಲ್ಲಾ ಯಾಕೆ??? ಲೇಖನ ಮೊದಲು ನಗು ಬರಿಸಿದರೂ ಯೋಚಿಸಬೇಕಾದ ಹಲವಾರು ವಿಚಾರಗಳಿವೆ??? ಉತ್ತಮ ಲೇಖನ ಚೆನ್ನಾಗಿದೆ.ಮತ್ತೊಂದು ವಿಚಾರ ಬೋಕ್ಕತಲೆಯವರು ಉತ್ತಮ ಹಾಸ್ಯಗಾರರು!!!! ಉದಾಹರಣೆ:- ನೀವು, ಪ್ರಕಾಶ್ ಹೆಗ್ಡೆ, ಸಿಹಿಕಹಿ ಚಂದ್ರೂ, ಅನುಪಮ್ ಖೇರ್ ಇತ್ಯಾದಿ.

umesh desai said...

ಛಲೋ ಅದ ನಿಮ್ಮ ತಲಿಪುರಾಣ
ಒಳಗಿನ ಹೂರಣ ಮುಖ್ಯ ಹೊರತು ಮ್ಯಾಲಿನ ಪದರ ಅಲ್ಲ

ಚುಕ್ಕಿಚಿತ್ತಾರ said...

ಸೀತಾರಾ೦ ಸರ್..
ಏನ್ ತಲೆ ಸರ್ ನಿಮ್ದು..
ನಿಮಗೇಕೆ ಹೊಟ್ಟೆಕಿಚ್ಚು.. ನಮ್ಮ ತಲೆ ಬಗ್ಗೆ..?..:)
ಬೊಕ್ಕತಲೆ ನಿಮಗೇ ಇರಲಿ ಮತ್ತು ಇರುತ್ತದೆ ಕೂಡಾ..:)
ತಳಿ ಶಾಸ್ತ್ರದ ಪ್ರಕಾರ ಅದು x-linked ಜೀನ್ಸ್ ಪ್ರಕಾರ ಬ೦ದಿದ್ದು..recessive gene ಅದು.ಬೊಕ್ಕತಲೆಗೆ ಹೆಚ್ಚಿನ ಕೊಡುಗೆ ಇದರದ್ದೆ.X linked androgen receptor gene ಪ್ರಭಾವ ಅದು. ಉಳಿದದ್ದನ್ನು ನೀವೆ ಬರೀರಿ..:))

ಹೆ೦ಗಸರಲ್ಲಿ ಜುಟ್ಟು ಹಾಕಿಕೊಳ್ಳುವವರಲ್ಲಿ ಕೂದಲು ಉದುರುವುದು ಬೇಗ ಅ೦ತೆ. ಎಳೆತ ಇರುವ ಕಾರ‍ಣ.
ಎಳೆಯುವವರಿ೦ದ ಹುಶಾರಾಗಿರಬೇಕು....

ಅ೦ತೂ ಒಳ್ಳೆ ತಲೆ..

ಸುಮ said...

ಹೌದಲ್ವ ಸರ್ ಸುಮ್ಮನೇ ಬೊಕ್ಕತಲೆಯ ಬಗ್ಗೆ ಕಮೆಂಟುಗಳು ಹುಟ್ಟಿಕೊಂಡುಬಿಡುತ್ತವೆ !! ಅದರ ಹಿಂದಿನ ಸತ್ಯ ಅನುಭವಿಸಿದವರಿಗೇ ಗೊತ್ತು :)

Subrahmanya said...

ಗುರುಗಳೇ,

ನಿಮ್ಮ ಅನುಪಾತದ ಲೆಕ್ಕಾಚಾರಕ್ಕೆ ಬೆರಗಾದೆ. ಹೀಗೂ ಉಂಟೆ ಅನ್ನಿಸಿತು (TV9 Style ನಲ್ಲಿ) . ನಿಜ, ತಲೆಯ ಮೇಲೆ ಕೂದಲಿದ್ದರೂ ಇರದಿದ್ದರೂ ಒಳಗೆ ಮೆದುಳಂತೂ ಇದ್ದೇ ಇರುತ್ತದೆ, ಅದೇ ಮುಖ್ಯ ಅಲ್ಲವೇ ? !

ಗಿರೀಶ್.ಎಸ್ said...

ellara burudeyallu onde medulante!!aadare kudalugala sankhye maatra bere bere...
haasyabharitha mattu kelavu vicharapuraka maahitigalu..chennagide..

ಮನಸು said...

hahaha chennagide nimma lEkhana heegu unTe..???

sunaath said...

ಸೀತಾರಾಮರೆ,
ನಿಮ್ಮ ‘ತಲೆಹರಟೆ’ಯ ಫೋಟೋ ನನ್ನದಲ್ಲ. ಆದರೆ ಲೇಖನದ ವಿಷಯ ಮಾತ್ರ ನನ್ನ ತಲೆಗೇ ಸಂಬಂಧಿಸಿದ್ದು, ಸಾರ್! ನನ್ನ ತಲೆಗೆ ಕೀರ್ತಿ ತಂದುಕೊಟ್ಟಿದ್ದಕ್ಕಾಗಿ ಧನ್ಯವಾದಗಳು,ಸಾರ್!

ಸವಿಗನಸು said...

hahahha....

ಹರಿಕಥಾಮೃತಸಾರ said...

Blog friends galalli e group navara "ondu sangha" madikondre olledu ansatte..adarinda tale ginta dhwani ge ondistu maanyate sikkabahudu.. :)
hasya lekhanakke abhinandanegalu.

ananth

Sandeep.K.B said...

ಬೊಕ್ಕ ತಲೆಯವರಿಗೆ ಬೇಜಾರಗದಂತೆ ಕರೆಯಲು ಹೊಸ ಪದ ಕೊಟ್ಟಿದ್ದೀರ , ಧನ್ಯವಾದಗಳು
ವರ್ಣನೆ ಚೆನ್ನಾಗಿದೆ ....

prabhamani nagaraja said...

ತಮ್ಮನ್ನೇ ತಾವು ವಿಡ೦ಬನೆ ಮಾಡಿಕೊ೦ಡು ನಗಿಸುವುದು ಅತ್ಯುತ್ತಮವಾದ ಹಾಸ್ಯ ಕಲೆ ಎನ್ನುತ್ತಾರೆ. ಧನ್ಯವಾದಗಳು ಸರ್

ಶಿವರಾಮ ಭಟ್ said...

ಸುಂದರ ನಿರೂಪಣೆಯ ಸೀತಾರಾಮ ವಿರಚಿತ "ಖಲ್ವಾಟ ಪುರಾಣ"!
ತಲೆಯಲ್ಲಿ ಕೂದಲಿಲ್ಲದಿದ್ದರೆ ಕೆರೆದಾಗ ಗಾಯವಾಗುತ್ತದೆ! ತಲೆ ಹೊಟ್ಟು ಹುಟ್ಟುವುದೇ ಇಲ್ಲ!
ಬೇಕಾದ ಸ್ಟೈಲ್ ಟೋಪನ್ ಬಳಸಬಹುದು! ನೀವು ಕ್ಷೌರಿಕನಿಗೆ ಕೂದಲನ್ನು ಕೊಟ್ಟು ಮೇಲಾಗಿ ದುಡ್ಡನ್ನು ಕೊಡಬೇಕಾಗಿ ಬಂದದ್ದು ಕೇಳಿ ನಗು ಬಂತು!.
ಹೆಂಗಸರ ತಲೆ ಬೋಳಾಗಿದ್ದರೆ ಜನ ಇನ್ನು ಏನೇನೋ ಹೇಳುತ್ತಾರೆ! ಅದಕ್ಕೆ ಭಗವಂತ ಗಂಡಸರಿಗೆ ಮಾತ್ರ ಬಕ್ಕ ತಲೆ ಕೊಟ್ಟಿರಬೇಕು!
ತಲೆಮೇಲೆ ಕೂದಲಿಲ್ಲದಿದ್ದರೆ ಒಳಗೆ ಬುಧ್ಧಿ ಇದೆ ಅನ್ನುವುದು ಎಷ್ಟು ಸರಿ? ಸೋರೆಕಾಯಿ "ಟೊಳ್ಳು" ಆಗಿರುತ್ತದಲ್ಲವೇ? ನಿತ್ಯವೂ ತಿರುಪತಿಯ ಹರಕೆ ತೀರಿಸಿ ಪುಣ್ಯವಂತರಾಗಬಹುದಲ್ಲ?
ಗೋಕರ್ಣಕ್ಕೆ ಹೋದರೆ ಆಗುವ ಫಜೀತಿ ಕೂದಲಿದ್ದವರಿಗೆ ಗೊತ್ತು! ತೊಡೆದೆವು ಅನ್ನುವ ಕಬ್ಬಿನ ರಸದ ತಿಂಡಿಯನ್ನು ಗಡಿಗೆ ಸಿಗದಿದ್ದರೆ ಬಿಸಿಯಾದ ಬೋಳುತಲೆ ಉಪಯೋಗಿಸಿ ತಯಾರಿಸಬಹುದು.
ಬೋಳುತಲೆ ಬಿಸಿ ಆದರೆ ಆಮ್ಲೆಟ್ ಮಾಡಬಹುದು!. ಸಿನೆಮಾಗಳಲ್ಲಿ ವಿಲನ್ಗಳ ತಲೆ ಯಾಕೆ ಬೋಳು? ಅಮೆರಿಕಾಗೆ ಹೋದಾಗ ತಲೆ ಬೋಳಾಗಿದ್ದರೆ ಚೆನ್ನಾಗಿತ್ತು ಅನ್ನಿಸಿದ್ದಿದೆ.
ಬೋಕ್ಕುತಲೆಯವರನ್ನು ನಿತ್ಯ ವೈರಾಗಿಗಳು ಅಥವಾ ಗಾಂಧಿವಾದಿಗಳು ಅನ್ನಬಹುದು. ಕಿಲಾಡಿಗಳು " ನಿತ್ಯ ಸೂತಕಿಗಳು" ಅಂತ ತಲೆಹರಟೆ ಮಾಡಿದ್ದು ಉಂಟು.
"balds are romantic" ಅನ್ನುವುದು ಪಾಶ್ಚಿಮಾತ್ಯ ಮಾತು!. ಹೆಂಗಸರನ್ನು ದೂರವಿಡಲು ನಮ್ಮಲ್ಲಿ ಬೊಕ್ಕ ತಲೆಯೇ ಸಾಧನ!.

Pradeep Rao said...

ಹ್ಹ ಹ್ಹ ಹ್ಹಾ ಅರೆ ಬಕ್ಕತನದ ತೊಂದರೆಗಳನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರ ಸಾರ್.. "bald people are romantic" ಎಂಬುದು ಏಕೆ ಎಂದು ಎಷ್ಟು ಯೋಚಿಸಿದರೂ ಹೊಳೆಯುತ್ತಿಲ್ಲ. ನೀವೇ ಉತ್ತರ ಹೇಳಿಬಿಡಿ!

http://jyothibelgibarali.blogspot.com said...

ಸರ್ ನಿಮ್ಮ ಹರಟೆ ತುಂಬಾ ಚನ್ನಾಗಿದೆ... ಶುರುವಿನಿಂದ ಕಡೆತನಕ ನನ್ನ ಮುಖದ ನಗು ಮಾಸಲಿಲ್ಲ.. ನೀವು ತೆರೆದಿಟ್ಟ ಕೆಲವು ವಿಮರ್ಶೆಗಳು ನನ್ನ ತಲೆ ತಿನ್ನುತ್ತಿವೆ..
ನಿಮ್ಮ ಎರಡನೆ ವಿಮರ್ಶೆಗೆ ನನ್ನ ಉತ್ತರ romantic ವಿಷಯಗಳು ಬಾಕಿ ವಿಷಯಗಳಂತೆ ತಲೆ ಒಳಗೆ ಹೋಗೋದಕ್ಕೂ ಮತ್ತು ಬರೋದಕ್ಕೂ ಕೂದಲಿನಿಂದ ಅಡೆತಡೆಗಳಿಲ್ಲವೋ ಎನೋ ಎಂದು
ನನ್ನ ಭ್ಲಾಗ್ ಗೆ ನಿಮಗೆ ಸ್ವಾಗತ

ಶಿವಪ್ರಕಾಶ್ said...

ಹ್ಹ ಹ್ಹ ಹ್ಹ... ಲೆಕ್ಕಾಚಾರದ(ತೂಕದ)ಮಾತು ಚೆನ್ನಾಗಿದೆ ಸರ್..

Narayan Bhat said...

"ದೇವರೇ ಹೆಂಗಸರ ಕೈಯಲ್ಲಿ ನನ್ನ ಜುಟ್ಟು ಸಿಗದಿರಲಿ" ಅಂತ ಗಂಡಸರು ದೇವರಲ್ಲಿ ಬೇಡಿಕೊಂಡದ್ದಕ್ಕಿರಬೇಕು...ಬಕ್ಕ ತಲೆ!

ದಿನಕರ ಮೊಗೇರ said...

hha hha...
ee barahadalli nanna hesaru missing sir...

PARAANJAPE K.N. said...

ನಿಮ್ಮ ತಲೆಹರಟೆ ಚೆನ್ನಾಗಿದೆ. ಬಕ್ಕತಲೆಯವರು ಅಸಾಧಾರಣ ಬುದ್ಧಿವಂತರು ಎನ್ನುವ ಅಭಿಪ್ರಾಯ ಇದೆ. ನಿಮ್ಮನ್ನು ನೀವೇ ಗೇಲಿ ಮಾಡಿಕೊಳ್ಳುತ್ತ ಬರೆದ ಈ ಹರಟೆ ಆಪ್ತವಾಗಿದೆ, ಮೊಗದಲ್ಲಿ ಮಂದಹಾಸ ಮೂಡಿಸುತ್ತದೆ. ಚೆನ್ನಾಗಿದೆ, ಇನ್ನಷ್ಟು ಹೊರಬರಲಿ ನಿಮ್ಮ ಬತ್ತಳಿಕೆಯಲ್ಲಿನ ಬಾಣಗಳು

ವಿ.ಆರ್.ಭಟ್ said...

ಹರಟೆಗಳ ಒಂದು ಪ್ರಕಾರ ’ತಲೆಹರಟೆ’ ಅಂತಾರೆ ಹರಟುವ ಜನ. ತಲೆಯನ್ನೇ ಹರಟೆಯ ವಿಷಯವನ್ನಾಗಿಸಿ ನಿಮ್ಮ ತಲೆಯನ್ನೂ ಸೇರಿಸಿ ನಿಮ್ಮನ್ನು ನೀವೇ ಪೂರ್ಣಚಂದ್ರ ತೇಜಸ್ವಿಯನ್ನಾಗಿ ಕಂಡುಕೊಂಡಿದ್ದೀರಿ! ಬೊಕ್ಕತಲೆಯವರೆಲ್ಲಾ ಬುದ್ಧಿವಂತರೆಂಬ ವಾದವನ್ನು ನಾನು ಒಪ್ಪುವುದಿಲ್ಲ !!---[ಯಾಕೆ ನೀವು ಮಾತ್ರ ಬುದ್ಧಿವಂತರೋ ? ಕೂದಲು ಉಳ್ಳವರಿಗೂ ಮತಹಕಿ ಸ್ವಾಮೀ !] Infact its a myth ! ಹರಟೆ ತಲೆಹಗುರಗೊಳಿಸಿತು, ಮುಂದಿನ ಕಂತು ಇನ್ನಷ್ಟು ಹಗುರಾಗುವಂತೇ ಬರಲಿ ! Nice.