Tuesday, December 14, 2010

ನವನೀತ

(ಚಿತ್ರ ಅಂತರ್ಜಾಲ ಕೃಪೆ - ದೊಡ್ದಮಾಳುರಿನ ಅಂಬೆಗಾಲು ಕೃಷ್ಣ)


ಮೊನ್ನೆ ೧೨ನೆ ತಾರೀಕಿಗೆ ನನ್ನ ಮಗನ ನಾಮಕರಣ ಶಾಸ್ತ್ರ ಮುಗಿಸಿದೆವು.
ಅವನಿಗೆ ಇಟ್ಟ ಹೆಸರು "ನವನೀತ"
ಈ ಸಂಧರ್ಭದಲ್ಲಿ ಮಿತ್ರ ವಾಮನ ಬರೆದ "ನವನೀತ" ಭಾವಗೀತೆಯನ್ನು ಸಂಧರ್ಭಕ್ಕೆ ಒಪ್ಪುವಂತಿರುವದರಿಂದ ಅವರ ಒಪ್ಪಿಗೆಯೊಂದಿಗೆ ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ.


"
ನವನೀತ"-ಭಾವಗೀತೆ
ಬರೆದವರು : ವಾಮನ ಕುಲಕರ್ಣಿ
(ಅವರ "ತೆರೆಗಳು" ಕವನ ಸಂಕಲನದಿಂದ ಆಯ್ದದ್ದು)

ಎದೆಯಲ್ಲಿ ಭಾವ ಕಡೆದಾಗ ಬಂತು
ನವನೀತ ನನ್ನ ಕವನ.
ಹೂತಿಟ್ಟ ಸುಮಕೆ ಹೂಗಂಧ ಸವರಿ
ದಾಳಿಂಬ ಬಿರಿದ ವದನ.

ಮುಗಿಲಲ್ಲಿ ಮೋಡ ಗುಡುಗುಡುವ ರಾಗ
ಶ್ರುತಿ ಆಲೆಯ ಧಾರೆ ಮಳೆಯು.
ತೊರೆಯಾಗಿ ಝರಿಯು ಗಿರಿಯಿಂದ ಧುಮುಕಿ
ಕಾಲುವೆಗಳಾಗಿ ಕೆರೆಯು.

ಈ ಜಗದ ದುಂಬಿ ಮಧುವನ್ನು ಈ೦ಟೀ
ಸಂಚಯಿಸಿ ಜೇನಗೊನೆಯು
ಮಧುಮಧುರ ಸಿಹಿಯ ಈ ಜಗಕೆ ಹಂಚಿ
ಹಂಚುವನು ದಾನಿ ಕವಿಯು.

ಹಾಲ್ಗಾಳ ಹೊತ್ತ ತೆನೆತೆನೆಗೂ ಅಲ್ಲಿ
ಮುಗಿಬಿದ್ದ ಹಕ್ಕಿ ಹಿಂಡು
ಹೊಂಬಣ್ಣ ಸಂಜೆ ಸೆರಗನ್ನು ಹಿಡಿದು
ಗುಟುಕಾಗಿ ತಂದ ಬಂಡು.

ಸಲಗಗಳ ದಂಡು ಭೋರಾಡಿ ಮದದಿ
ಕಿಚ್ಚತ್ತಿ ಕಾಡು ಉರಿದು.
ಖೆಡ್ಡಗಳ ಕಟ್ಟಿ ಸಲಗಗಳ ಒಟ್ಟಿ
ನಿಟ್ಟುಸಿರ ಬಿಟ್ಟ ಕವಿಯು.

ಭಾವಗಳ ಬೆನ್ನ ಹತ್ತುತ್ತ ನಡೆದು
ಏನೇನೋ ಕಂಡ ಮಗುವು.
ಎದ್ದೆದ್ದು ಬಿದ್ದು ಭಯದಲ್ಲಿ ಅತ್ತು
ಹಾಲ್ಗೆನ್ನೇ ತೊದಲು ನುಡಿಯು.

ಕುರುಡನಿಗೆ ನಯನ ಮುಕನಿಗೆ ಮಾತು
ನೀಡಿಲ್ಲ ನನ್ನ ಕವನ.
ಮೊಲೆಯುಣಿಸಿ ತಾಯಿ ನೋವುಗಳ ಒರೆಸಿ
ಸಾಂತ್ವನ ಕವಿಯ ನಯನ.

ಭುವಿಯಲ್ಲಿ ಬೀಜ ಛಲದಿಂದ ಸಹಜ
ಮುಟ್ಟುವದು ದೂರ ಗಗನ.
ಗಿಡದಲ್ಲಿ ಕುಸುಮ ಹೋಲಿಕೆಯು ಅಸಮ
ಸೌರಭವು ನನ್ನ ಕವನ.

ಆ ರವಿಯ ತಂದು ಕಣ್ಣಲ್ಲಿ ಇಟ್ಟು
ನೀ ದಿನವು ಹುಟ್ಟು ಇಲ್ಲಿ.
ಉರಿಯಾಗಿ ನನ್ನ ದಿನದಿನವು
ಸುಟ್ಟು ಬೆಳಕಾಗು ಜನರಿಗಿಲ್ಲಿ.