Wednesday, April 21, 2010

"ಕಗ್ಗತ್ತಲೆಯ ಖಂಡದಲ್ಲಿ ........ (ಭಾಗ ೨ )" ಬ೦ಗಾರದ ಹಿ೦ದೆ ಬದುಕು ಅರಸುತ್ತಾಹಸಿರ ಸೀರೆಯ ಹೊದ್ದ ತಿರೆಯಾ ಒಡಲಲ್ಲಿ ,
ಬಗೆಬಗೆಯ
ಖನಿಜ ನಿಕ್ಷೇಪ .
ಮನುಜನಾ ಆಶೆಗೆ ಬೇಕು ಇವುಗಳೆಲ್ಲಾ !
ಬಗೆದು
ತೆಗೆಯಲು ಇಲ್ಲ ಅವಳಾ ಆಕ್ಷೇಪ !!
ಉರುಳಿದವು ಮರಗಳು ಧರೆಯೊಡಲಿಗೆ ಒರಗಿ
ಶಸ್ತ್ರಚಿಕಿತ್ಸೆಯ ಮುನ್ನ ಕ್ಷೌರ ಕರ್ಮದ೦ತೆ
ಗಣಿಗಾರಿಕೆಗೆ ತೆರವಾಗಿ !
ಉರುಳಿ ಒಣಗಿದ ಮರಗಳ ಅ೦ತಿಮದಹನ
ಪ್ರಾರ೦ಭಗೊಳಬೇಕಿದೆ ಗಣಿಗಾರಿಕೆ
ಹೆಕ್ಕಿ ತೆಗೆಯಬೇಕಿದೆ ಖನಿಜ
ಚಲಿಸಬೇಕಿದೆ -ಬಡತನದಿ ನಿಂತ ಬದುಕು.
೧೦೦ ಅಡಿ ಆಳದ ಸುರ೦ಗ- ತೆಗೆದಾಗಿದೆ,
ನಿಕ್ಷೇಪದ ಎಳೆಯ ಹುಡುಕಿ.
ತರುಣ -ಯುವಕರ ತಂಡ ತೆವಳಿ ತರಬೇಕಿದೆ,
ಬ೦ಗಾರದ ಅದಿರು ಹೆಕ್ಕಿ.ಆಳದಲ್ಲಿಹ ಯೆಜಮಾನ ತುಂಬಿ ಕೊಡುತಿಹನು
ಅದಿರು ತು೦ಬಿದ ಮಂಕರಿ
ಎಳೆದು ಗುಡ್ಡೆ ಹೊಯ್ಯುತಿಹೆವು,
ಸ೦ಸ್ಕರಿಸಿ
ಹುಡುಕಬೇಕಿದೆ
ಬದುಕ ಹೊರೆವ ಪರಿ
ನಾನೇ ಬಾಲೆ!
ನನಗೊಂದು ಕೈಗೂಸು!!
ಬಿಟ್ಟಿರಲಾರೆನು ,
ಹೊತ್ತು ತಂದಿಹೆನು,
ಆಳದಾ ಗಣಿಗೆ, ಹೆಕ್ಕಿ ತೆಗೆಯಲು ಚಿನ್ನ!
ತು೦ಬಿಸಬೇಕಲ್ಲ ಹಸಿದೊಟ್ಟೆಗೆ ಅನ್ನ!!

ಕೆಲಸದಾ ನಡುವೆ ಒ೦ದಿಷ್ಟು ವಿರಾಮ
ಚಹದೊಂದಿಗೆ ಮಂಥನ !
ತಾಯಂದಿರಿಂದ ಹಸಿದ ಕ೦ದಮ್ಮಗಳಿಗೆ
ಎದೆಹಾಲ ಸಿಂಚನ !
ಬೇಗ ಬೇಗ ಅಗೆದು ತುಂಬಿಕೊಡಿ
ಹೊರುವವರಿಗಿಲ್ಲ ಕೆಲಸ!!

ಪುಟ್ಟ ಕ೦ದರು ನಾವು ಪುಟ್ಟ ಮಂಕರಿಯಲ್ಲಿ
ಹೊತ್ತು ಸಾಗಿಸುವೆವು ಅದಿರು
ಸ೦ಸ್ಕರಿಸುವರು ಅದನ್ನು ವೃದ್ಧ ಅಜ್ಜ -ಅಜ್ಜಿಯರು!!

ಕಲ್ಲಿನಲ್ಲಿದೆ ಕಣ್ಣಿಗೆ ಕಾಣುವ ಬಂಗಾರ
ಇ೦ತಹ ಹಲವು ಸಿಕ್ಕಲ್ಲಿ ಅದು ನಮಗುಪಕಾರ

ಪುಟ್ಟ ಪೋರರು ಹೊತ್ತು ತ೦ದಿಹರು ಅದಿರು
ನೀರಲ್ಲಿ ಅದನ್ನು ಗಾಲಿಸಿ ಬೇರ್ಪಡಿಸುತಿಹೆವು ಚಿನ್ನಅದಿರನ್ನು ಗಾಲಿಸಿ ಬಂಗಾರ ಬೇರ್ಪಡಿಸುವ ತೊಟ್ಟಿ
ವಯೋವೃದ್ಧರಿಗೊಂದು ಹಗುರ ಚಾಣಾಕ್ಷ ವೃತ್ತಿ .
ನಮ್ಮ ಬದುಕನ್ನು ಸೆರೆಹಿಡಿಯುವ ಇವರು ಯಾಕಿಲ್ಲಿ?
ನೋಟದಿ ಕೊಲ್ಲುತಿಹ ಪ್ರಶ್ನೆಗಳು ಇದಕೆ ಉತ್ತರವೆಲ್ಲಿ?ಇಡೀದಿನದ ಕುಟುಂಬದವರೆಲ್ಲ ಶ್ರಮ
ದಕ್ಕಿದ್ದು ನಮಗಿಷ್ಟು!
ಯೌವ್ವನದ ಜನ ಅಗೆದು ಬಗೆದು ಎಳೆತ೦ದರು ಅದಿರು ಹೊರಕ್ಕೆ,
ಮಕ್ಕಳು ಸಾಗಿಸಿದರ ಅದನ್ನು ಸ೦ಸ್ಕರಣ ಶಿಬಿರಕ್ಕೆ,
ವೃದ್ಧರು ಸ೦ಸ್ಕರಿಸಿದರು ಚಿನ್ನ ಹೆಕ್ಕುವದಕ್ಕೆ,
ನಮ್ಮೆಲ್ಲರ ಶ್ರಮ ಯಾವದೋ ದೇಶದ ಜನಕ್ಕೆ ಶೃಂಗಾರ
ನಮ್ಮ ಬದುಕಿಗದು ಅನ್ನ- ಆಹಾರ .

(ಪಾಶ್ಚಿಮಾತ್ಯ ಆಫ್ರಿಕಾ ಖಂಡದ ಗಿನಿ-ಕೊನಾಕ್ರಿ ಎ೦ಬ ದೇಶದಲ್ಲಿ ಜನರು ಹೊಟ್ಟೆಪಾಡಿಗೆ ದುಡ್ಡು ಮಾಡಲು ಗಣಿಗಾರಿಕೆ ಮಾಡುವ ಚಿತ್ರಣದ ಲೇಖನ. ಅವರ ಉದ್ದೇಶ ಕೇವಲ ಬದುಕು -ಹೊಟ್ಟೆ ಹೊರೆಯುವದು. ಲ್ಲಿ ನಡೆವುದು ಮಾನವ ಶಾರೀರಿಕ ಗಣಿಗಾರಿಕೆ. ಅಲ್ಲಿನ ಪರಿಸರದ ಸಾಮಾಜಿಕ, ಆರ್ಥಿಕ, ರಾಜಕೀಯ, ತಾಂತ್ರಿಕ ಪರಿಸ್ಥಿತಿಯ ಜೊತೆಗೆ ಅವರ ಬದುಕು ಚಿತ್ರಣವನ್ನು ಚಿತ್ರಲೇಖನದಲ್ಲಿ ಹೇಳದೆ ಮಾಡುವ ಪ್ರಯತ್ನವಿದೆ -ಅದು ಓದುಗರಿಗೆ ವೇದ್ಯವಾಗುವದು ಎ೦ದು ನನ್ನ ಅನಿಸಿಕೆ)


21 comments:

Subrahmanya said...

Excellent ಗುರುಗಳೆ. ಸಚಿತ್ರ ಮಾಹಿತಿಯೊಂದಿಗೆ , ಪುಟ್ಟ ಅಡಿಬರಹಗಳಲ್ಲಿ ಎಷ್ಟೊಂದು ವಿಷಯ ಹೇಳಿದ್ದೀರಿ. ಧನ್ಯವಾದ ನಿಮಗೆ.

ಸುಮ said...

ಅತ್ಯುತ್ತಮ ಚಿತ್ರಕಾವ್ಯ ಸರ್ . ಇದನ್ನು ನೋಡಿದ ಮೇಲೆ ಬಂಗಾರದ ಮೇಲೆ ಜಿಗುಪ್ಸೆ ಹುಟ್ಟುತ್ತಿದೆ . ನಮ್ಮ ಶೋಕಿಗೆ ಉಪಯೋಗಿಸುವ ಇಂತಹ ಎಷ್ಟೋ ವಸ್ತುಗಳ ಹಿಂದಿನ ಕಥೆ ನಿಜಕ್ಕೂ ದಾರುಣವಾಗಿರುತ್ತದೆ .

ತೇಜಸ್ವಿನಿ ಹೆಗಡೆ said...

ಹೊಳೆವ ದುಬಾರಿ ಬಂಗಾರದ ಹಿಂದಿರುವ ಕಳೆಗುಂದಿದ, ನೋವಿನ ಕಥೆಯನ್ನು ಸಚಿತ್ರವಾಗಿ ನೋಡಿ ತುಂಬಾ ಬೇಸರವಾಯಿತು. ಬಂಗಾರದ ಲಾಲಸೆ ಹೋದರೆ ಎಷ್ಟೋ ಪಾಪ ಕೂಪಗಳೂ ಕಡಿಮೆಯಾಗುವವು ಅಲ್ಲವೇ? ತುಂಬಾ ಚೆನ್ನಾಗಿದೆ ಚಿತ್ರಲೇಖನ.

ಮನಮುಕ್ತಾ said...

ಚಿತ್ರಗಳಿಗೆ ಸೂಕ್ತ ವಿವರಣೆಯೊ೦ದಿಗೆ ನಿಮ್ಮ ಬರಹ ಅನೇಕ ಮಾಹಿತಿ ಒದಗಿಸಿದವು..ನಿಸ್ತೇಜ ಮುಖಗಳು ಮನಸ್ಸನ್ನು ಅಯ್ಯೊ..ಎನ್ನಿಸಿದವು.

ವನಿತಾ / Vanitha said...

ಅತ್ಯುತ್ತಮ ಬರಹ ಸರ್.. ಎಲ್ಲವೂ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ.

sunaath said...

ಹೊಳೆವ ಚಿನ್ನದ ಹಿಂದಿನ ಕರುಣ ಕತೆಯನ್ನು ತುಂಬ ಚೆನ್ನಾಗಿ ಕವನಿಸಿದ್ದೀರಿ.

PrashanthKannadaBlog said...

excellent article. Very thought provoking.

ಡಾ.ಕೃಷ್ಣಮೂರ್ತಿ.ಡಿ.ಟಿ. said...

ಸೀತಾರಾಮ ಸರ್ ;ಕಣ್ಣು ತೆರೆಸುವ ಚಿತ್ರಗಳು ,ಮನ ಮಿಡಿಯುವ ಲೇಖನಗಳು.'ಏನೆಂದು ನಾ ಹೇಳಲೀ ಮಾನವನಾಸೆಗೆ ಕೊನೆಯೆಲ್ಲಿ?'ಎನ್ನುವ
ಅಣ್ಣಾವ್ರ ಹಾಡು ನೆನಪಿಗೆ ಬಂತು.ವಜ್ರದ ಗಣಿಗಾರಿಕೆ ಗಾಗಿ ಆಫ್ರಿಕಾದಲ್ಲಿ ರಕ್ತಪಾತವೇ ನಡೆಯುತ್ತವೆ ಎಂದು ಕೇಳಿದ್ದೇನೆ.ಅದರ ಬಗ್ಗೆ ತಿಳಿಸಿಕೊಡುವಂತಹ ಲೇಖನಗಳು ಮುಂದೆನಿಮ್ಮಿಂದ ಬರಲಿ.ಮರಗಳನ್ನು ಕಡಿದಿರುವುದನ್ನು ನೋಡಿ 'ಮರ ಕಡಿದು ,ವೈಶಾಕದಲ್ಲಿ ,ವೈ ಶಾಖ ? ಎಂದರೆ ಹೇಗೆ ?'ಎನ್ನುವ ಡುಂಡಿಯವರ ಹನಿಗವನ ನೆನಪಾಯಿತು.ಅಭಿನಂದನೆಗಳು .ಬ್ಲಾಗಿಗೆ ಬನ್ನಿ.ನಮಸ್ಕಾರಗಳು.

ಸಿಮೆಂಟು ಮರಳಿನ ಮಧ್ಯೆ said...

ಸೀತಾರಾಮ್ ಸರ್...

ನಿಮ್ಮ ಚಿತ್ರ ಲೇಖನ ಹೊಸತನದಿಂದ ಕೂಡಿದೆ...

ಚಿನ್ನ ಅಗೆದು ಬರಿದಾದ ಮೇಲೆ
ಅಲ್ಲಿನ ಜನರ ಬದುಕೂ ಬರಿದಾಯಿತೆ ?

ಪ್ರಕೃತಿಯ ಸಮತೋಲನ ಹೇಗೆ ?

ಫೋಟೊಗಳು ಮನ ಮುಟ್ಟುವಂತಿದೆ...
ಫೋಟೊ ಅಡಿಯಲ್ಲಿನ ಸಾಲುಗಳೂ ತುಂಬಾ ಚೆನ್ನಾಗಿದೆ...

ಮಾಹಿತಿ ಒದಗಿಸಿದ ನಿಮಗೆ ನಮ್ಮ ಅಭಿನಂದನೆಗಳು..

ಇಂಥಹ ಚಿತ್ರ ಮಾಹಿತಿ ಲೇಖನ ಇನ್ನಷ್ಟು ಬರಲಿ....

ಸೀತಾರಾಮ. ಕೆ. said...

ಯಾರೋ ದುಡ್ಡಿದ್ದವರ ಶ್ರೀಮ೦ತಿಕೆಯ ಮೆರವಣಿಗೆಗೆ ಬೇಡಿಕೆ ಹೊ೦ದಿದ ಲೋಹವನ್ನು ಮನೆ ಮ೦ದಿಯೆಲ್ಲಾ ಕಷ್ಟಪತ್ತು ಜೀವವನ್ನು ಒತ್ತೆಇಟ್ಟು ತಮ್ಮ ಹೊಟ್ಟೆ ಹೊರೆದುಕೊಳ್ಳುವ ದಾರುಣ ಸಾಮಾಜಿಕ ಅಸಮತೋಲನ ಮತ್ತು ಇದರ ಮಧ್ಯೆ ಪ್ರಕೃತಿ-ವಸು೦ಧರೆ ನಲುಗುವ ಚಿತ್ರಣ ಕ್ರೂರವಾದದ್ದು.
ಆ ತಾಯಿ ವಸು೦ಧರೆ ಬಡತನದಲ್ಲಿರುವ ತನ್ನ ಮಕ್ಕಳನ್ನು ತನ್ನೊಡಲಲ್ಲಿರುವ ಖನಿಜ ಸ೦ಪತ್ತನ್ನು ತೆಗೆದು ಹೊಟ್ಟೇ ಹೊರೆದುಕೊಳ್ಳಲೆ೦ದು ಸಿರಿವ೦ತರಲ್ಲಿ ಲೋಹದ ಆಶೆಯನ್ನು ಬಿತ್ತಿರುವಳೆನೋ?
ಆದರು ನಲುಗುವದು ಅವಳೇ!!!
ನಿಜವಾಗಿಯೂ ಭೂದೇವಿಯು ತಾಯಿಗಿ೦ತ ಕರುಣಾಮಯಿಯಾದ ಮಹಾತಾಯಿ!
ಪ್ರತಿಕ್ರಿಯಿಸಿದ ಸುಬ್ರಮಣ್ಯರಿಗೆ, ಸುಮಾರವರಿಗೆ, ತೇಜಸ್ವಿನಿಯವರಿಗೆ, ಮನಮುಕ್ತಾರರಿಗೆ, ಸುನಾಥರಿಗೆ, ಡಾ! ಕೃಷ್ಣಮೂರ್ತಿಯವರಿಗೆ ಮತ್ತು ಪ್ರಕಾಶರವರಿಗೆ ಧನ್ಯವಾದಗಳು.
ವನಿತಾರವರಿಗೆ ಮತ್ತು ಪ್ರಶಾ೦ತರವರಿಗೆ ನನ್ನ ಬ್ಲೊಗ್-ಗೆ ಸ್ವಾಗತ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು. ಹೀಗೆ ಬರುತ್ತಾ ಇರಿ.
॒ ಡಾ! ಕೃಷ್ಣ್ಸಮೂರ್ತಿಯವರಿಗೆ ನನ್ನ ಮು೦ದಿನ ಕಗ್ಗತ್ತಲೆಯ ಖ೦ಡದಲ್ಲಿ ಬರುವ ವಿಷಯವನ್ನು ತಾವು ಪ್ರಸ್ತಾವಿಸಿದ್ದಿರಾ... ವಜ್ರಗಳ ಗಣಿಗಾರಿಕೆಯ ಲೇಖನ ನನ್ನ ತಲೆಯಲ್ಲಿ ಸುಳಿಯುತ್ತಾ ಇದೆ. ಚಿತ್ರಗಳು ತಯಾರಿವೆ. ಸಧ್ಯದಲ್ಲಿ ಹೊರಬರಲಿದೆ.

ಆ ಗಣಿಯಲ್ಲಿ ಮಣ್ಣು ಮೆತ್ತಿಕೊ೦ಡು ಅಮ್ಮನ ಬೆನ್ನಲ್ಲಿರುವ ಕೈಕೂಸುಗಳನ್ನು ನೋಡಿದಾಗ ಮತ್ತು ೧೪-೧೫ ಪ್ರಾಯದ ಹುಡುಗಿಯರು ಮಕ್ಕಳನ್ನು ಹೆತ್ತು ಹೆಗಲಿಗೇರಿಸಿ ದುಡಿಯುವದ ನೋಡಿದಾಗ ಕರುಳು ಚುರ್ರ್ ಎನ್ನುತ್ತಿತ್ತು. ಆದರೇ ಎನು ಮಾಡಬೇಕು ಬದುಕು ಸಾಗಬೇಕಲ್ಲ!! ಹೊಟ್ಟೆ ಹೊರೆಯಬೇಕಲ್ಲ. ಹಸಿದ ಹೊಟ್ಟೆಯನ್ನು ತು೦ಬಲು ಎನೆಲ್ಲಾ ಮಾಡಬೇಕಲ್ಲ!!
ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು ಮತ್ತು ವ೦ದನೆಗಳು.

ಜಲನಯನ said...

ಸೀತಾರಾಂ ಸರ್, ಎಲ್ಲ ಹೊರನೋಟದ ನಯ, ನಾಜೋಕಿನ ಹಿಂದೆ ಇಂತಹ ಶ್ರಮಜೀವಿಗಳ ಶ್ರಮ, ಗೋಳಾಟ, ತೊಳಲಾಟ ತುಂಬಿರುತ್ತೆ ಎನ್ನುವುದು ನಿಮ್ಮ ಸಚಿತ್ರ ಲೇಖನದಿಂದ ವೇದ್ಯವಾಗುತ್ತದೆ..ಸ್ವತಃ ವಿವರಣೆ ನೀಡಬಲ್ಲ ಈ ಚಿತ್ರಗಳಿಗೆ ನಿಮ್ಮ ಕಾಮೆಂಟರಿ - ಸೋನೆ ಪೆ ಸುಹಾಗ...ನಿಮ್ಮ ವಜ್ರ ಖನನದ ಲೇಖನವನ್ನು ಎದುರುನೋಡುತ್ತೇನೆ...

Deepasmitha said...

ಸಚಿತ್ರ ಲೇಖನ ಚೆನ್ನಾಗಿತ್ತು. ಹೊಟ್ಟೆಬಟ್ಟೆಗಾಗಿ ಏನೆಲ್ಲ ಮಾಡಬೇಕು ಎಂದು ಮನಮಿಡಿಯಿತು

ಸಾಗರಿ.. said...

ಚಿನ್ನದ ಅದಿರಿನ ಹಿಂದೆ ಇಷ್ಟೊಂದು ಕಥೆಯಿರುತ್ತದೆಯೆಂದು ತಿಳಿದಿರಲಿಲ್ಲ... ಚಿನ್ನದ ಹುಡುಕಾಟದಲ್ಲಿ ಕಸರತ್ತಾದರೂ ಎಷ್ಟೊಂದಿರುತ್ತದೆ.. ಚಿತ್ರದೊಂದಿಗಿನ ಬರಹಗಳು ಎಂದಿನಂತೆ ಬಹಳ ಸೂಪರ್ರಾಗಿದೆ.

ಸೀತಾರಾಮ. ಕೆ. said...

ಪ್ರತಿಕ್ರಿಯೆಗೆ ಧನ್ಯವಾದಗಳು -ಜಲನಯನರೇ, ದೀಪಸ್ಮಿಥ್-ರೇ ಮತ್ತು ಸಾಗರಿಯವರೇ.

nimmolagobba said...

ಸೀತಾರಾಮ್ ಸರ್ ಬಹಳ ಒಳ್ಳೆಯ ಚಿತ್ರ ಲೇಖನ ,ಫೋಟೋಸ್ ಗೆ ಒಪ್ಪುವ ಬರಹ !!! ನಿಮ್ಮ ಬರಹ ಉತ್ತಮವಾಗಿದೆ.ಒಳ್ಳೆಯ ಮಾಹಿತಿ ನೀಡಿದ್ದಿರಿ ಧನ್ಯವಾದಗಳು.

ಮನಸು said...

ಒಳ್ಳೆಯ ಸಚಿತ್ರ ಮಾಹಿತಿ ನೀಡಿದ್ದೀರಿ, ಅಲ್ಲಿ ಅವರು ಗಣಿಗಾರಿಕೆ ಹೊಟ್ಟೆಪಾಡಿಗೆ ಮಾಡುತ್ತಾರೆ....ಅವರ ಕಷ್ಟ ನೋಡಿ ಅಯ್ಯೋ ಅನ್ನಿಸಿದ್ದಂತೂ ನಿಜ... ಕಷ್ಟದ ಗಣಿಗಾರಿಕೆಯಿಂದ ಹೊರ ತಂದ ಬಂಗಾರವನ್ನು ಮೈ ಮೇಲೆ ಸರಮಾಲೆಗಳಾಗಿ ನಾವುಗಳು ಹೊರುತ್ತೇವೆ.

!! ಜ್ಞಾನಾರ್ಪಣಾಮಸ್ತು !! said...

ಸೀತಾರಾಮ.ಕೆ.,
ಅತ್ಯುತ್ತಮ ಚಿತ್ರಗಳ ಜೊತೆಗೆ ಉತ್ತಮ ಲೇಖನ..

ಸಾಗರದಾಚೆಯ ಇಂಚರ said...

Wonderful article sir
loved it

ಸೀತಾರಾಮ. ಕೆ. / SITARAM.K said...

ನಿಮ್ಮೊಳಗೊಬ್ಬ ಬಾಲುರವರಿಗೆ, ಮನಸು-ರವರಿಗೆ, ಜ್ಞಾನಾರ್ಪಣಮಸ್ತುರವರಿಗೆ ಮತ್ತು ಗುರುಮೂರ್ತಿ ಹೆಗಡೆಯವರಿಗೆ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

Manjula said...

ಅಬ್ಬಾ ನನಗೆ ಗೊತ್ತೇ ಇರದ ಪ್ರಪಂಚ..! ಹೊಳಪು-ಹೊಳಪಿನ ಚಿನ್ನದ ಹಿಂದಿರುವ ಭಯಂಕರ ಬದುಕು..!

ಸೀತಾರಾಮ. ಕೆ. / SITARAM.K said...

ಧನ್ಯವಾದಗಳು ಮ೦ಜುಳಾರವರೇ.