ವಿಶಿಷ್ಟ ಶಿಲಾಪಾಕ ಕುದಿಯುತ್ತ,
ಮೇಲ್ಬರಲು ತೆವಳುತ್ತಾ ,
ಮೇಲ್ಪದರದ ಗಟ್ಟಿಶಿಲೆಯ ಸೀಳುತ್ತಾ,
ಅದರಲ್ಲೇ ದಾರಿಮಾಡಿ ಸಾಗುತ್ತಾ,
ಈ ಹೋರಾಟದಲ್ಲಿ ತನ್ನ ಬಿಸಿ ಕಳೆದುಕೊಳ್ಳುತ್ತಾ,
ಭೂಮೇಲ್ಪದರದಾ ಶಿಲೆಯ ಗರ್ಭದಲ್ಲಿ ತಣ್ಣಗಾಗುತ್ತಾ ,
ಸೃಷ್ಟಿಸಿತ್ತು ಕಿ೦ಬರ್ಲೈಟ ಎ೦ಬ ಅಗ್ನಿಜನ್ಯ ಶಿಲೆಯ!!
ಈ ಶಿಲೆಯ ಗರ್ಭದಲ್ಲೇ ಅಡಗಿಹವು ವಜ್ರಗಳು!!
ಸಾಮಾನ್ಯ ಕಣ್ಣಿಗೆ ಕಾಣದಂತೆ !!!
ಸಾವಿರಾರು ವರ್ಷಗಳ ಕಾಲದಲಿ,
ಈ ಶಿಲೆಯ ಮೇಲೆ ಹರಿದ ನೀರು ಕಲ್ಲನ್ನು ಕರಗಿಸಿ,
ಅದರಲ್ಲಿರುವ ಕಾಣದ೦ತಿರುವ ವಜ್ರವಾ ಬೇರ್ಪಡಿಸಿ ,
ಸಾಣೆ ಹಿಡಿಸಿ ಹೊಳೆವ ವಜ್ರವನ್ನಾಗಿಸಿ,
ನದಿಯ ಪಾತ್ರದಿ ಹರಿದ ನಿ೦ತಾ ಹೂಳಲ್ಲಿ ಹುದುಗಿಸಿ,
ಹುಡುಕುವಾ ತೆವಲಿಗೆ ಮನುಜನಾ ಹತ್ತಿಸಿದೆ !!!!
ಅಪರೂಪದಾ ಈ ಶಿಲೆಯು ಸಾಣೆಯಾದ ಮೇಲೆ -
ಅತ್ಯ೦ತ ಹೊಳಪು ,
ಕಾಠಿನ್ಯದ ಪರಾಕಾಷ್ಟೆ,
ಉನ್ನತ ಪಾರದರ್ಶಕತೆ,
ಬೆಳಕಿನೊಡನೆ ಸೇರಿ ವರ್ಣಗಳ ವಿಭಜನೆ,
ಮತ್ತು ನೋಡುಗರಿಗೆ ಕಣ್ಣಿಗೆ ಹಬ್ಬ !
ಇದಕೆ೦ದೆ ಇದು ಎಲ್ಲರ ಅ೦ದಕ್ಕೆ ಮೋಹಕದ ಮಾಯೆ,
ಅದಕೆಂದೇ ಮುಗಿಬಿದ್ದಿಹರು ಮನುಜರು ತೆವಲಿಗೆ !!!
ಇದು ನದಿಯ ಪಾತ್ರ ,
ಇಕ್ಕೆಲದಲ್ಲಿ ಸಹಸ್ರಮಾನ ಶತಮಾನದ ಹೂಳು ಸ೦ಗ್ರಹ ,
ಯಾರಿಗೋ ಸಿಕ್ಕಿಹುದು ಆಕಸ್ಮಿಕಕ್ಕೆ ಇಲ್ಲಿ ವಜ್ರವೊ೦ದು!!
ಇದ್ದಿರಬಹುದು ಇನ್ನು ಹತ್ತು ಹಲವಾರು !!! ಯಾರಿಗ್ಗೊತ್ತು?
ಅದಕೆ೦ದೆ ಹಿ೦ದೆ ಬಿದ್ದಿಹೆವು ಸಲಿಕೆ- ಪುಟ್ಟಿಯ ಹೊತ್ತು !!
ಅಗೆದು ಬಗೆದು ಜಾಲಾಡಲು!!!
ವಜ್ರ ಹುಡುಕಿ ಹೊಟ್ಟೆ ಹೊರೆಯಲು!!!
ನದಿಯ ಇಕ್ಕೆಲದ ಪಾತ್ರದಾ ಮರಗಳ ಮಾರಣ,
ತೆಗೆದು ಸಾಣಿಸಬೇಕಲ್ಲ ಅದರಡಿಯಲ್ಲಿರುವ
ಸಹಸ್ರಮಾನದಾ ಹೂಳಿನಾ ಮಣ್ಣ.
ನೀರ ಹರಿಸಿ, ಹಾಯಿಸಿ, ಗಟ್ಟಿಯಾದ ಹೂಳುಮಣ್ಣ ಸಡಿಲಿಸಿ,
ತೆಗೆದು ಗಾಲಿಸಬೇಕಲ್ಲ ವಜ್ರಕ್ಕಾಗಿ!!
ಸಡಿಲಿಸಿದ ಮಣ್ಣ, ಆದೆ ನದಿಯ ನೀರಲ್ಲಿ, ಗಾಲಿಸಿ, ಸೋಸುತಿಹೆವು
ಹುಡುಕಬೇಕಲ್ಲ ವಜ್ರ !!!!
ಸಣ್ಣ ಚೆಪ್ಪರವೊ೦ದು, ಬಿಸಿಲ ರಕ್ಷಣೆಗೆ ಎ೦ದು ಕಟ್ಟಿಹೆವು ನಾವು-
ತೆ೦ಗಿನಾ ನಾರು ಮತ್ತು ಬಿದಿರಿನಲ್ಲಿ.
ಗಾಲಿಸುವ ಜನರು
ಬೇರ್ಪಡುತಲಿಹುದು ಜಿನುಗಾದ ಮಣ್ಣು
ಜರಡಿಯಾ ಅಡಿಯಿ೦ದ ನೀರಲ್ಲಿ ಇಳಿದು !
ಶೇಖರಣೆಯಾಗುತಿಹುದು ಹರಳು ಜರಡಿ ಮೇಲೆ !!
ಇವರಾರಪ್ಪ ನಮ್ಮ ಬದುಕನ್ನು ಚಿತ್ರಿಸುವ ಪರದೇಶಿಗಳು ????
ಈ ಹರಳುಗಳನ್ನು ಒ೦ದೊ೦ದಾಗಿ ಎತ್ತಿ ಪರೀಕ್ಷಿಸಬೇಕಾಗಿದೆ
ವಜ್ರ ಅಹುದೋ ಅಲ್ಲವೋ ಎಂದು!!
ಹೆಕ್ಕಿದಾ ಹರಳುಗಳಾ ಹತ್ತಿರದ ನೋಟ
ವಜ್ರಕ್ಕಾಗಿ ನಡೀಬೇಕು ಇನ್ನು ಹುಡುಕಾಟ !!
(ನನ್ನ ಕೈಯಲ್ಲಿ ಕ್ಷಣಿಕ ಸಮಯದಿ ಪವಡಿಸಿದ ಯಾರದೋ
ಶ್ರಮದ ಮತ್ತು ಯಾರ ಮೈ ಅಲ೦ಕಾರವಾಗುವಾ ವಜ್ರ)
ಸಿಕ್ಕಿಹುದು ಒ೦ದು ಪುಟ್ಟ ವಜ್ರದಾ ಹರಳು
೨೦೦ ರಿಂದಾ ೨೫೦ ಜನರ ಒ೦ದು ದಿನದಾ ಶ್ರಮ
ಒಮ್ಮೊಮ್ಮೆ ಇದೂ ಇಲ್ಲ ಅವರ ಪಾಲಿಗೆ!
ಮತ್ತೊಮ್ಮೊಮ್ಮೆ ಹತ್ತು ಹಲವಾರು!!
ಬ೦ದು ಹೊತ್ತೊಯ್ಯುವನು ವಣಿಕ ಬೆಲೆ ಕಟ್ಟಿ ಕೊಟ್ಟು,
ಮಾರಿ ಹೊರೆಯುವರು ಹೊಟ್ಟೆ,
ಅವರು ಶ್ರಮಕೆ ತಮ್ಮ ಮೈ ಕೊಟ್ಟು !!