Wednesday, August 25, 2010

ಬ್ಲಾಗಿಗರ ಮಿಲನಕ್ಕೆ ನಾಂದಿಯಾದ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಈ ಸಮಯಾ ಆನಂದಮಯಾ...
ಬ್ಲೊಗರಗಳೆಲ್ಲರ ಮಿಲನದ ಸುಸಮಯಾ...



ಈ ಸಮಯಾ.. ಮೀನ ವಿಜ್ಞಾನಿ.. ಕುವೈಟ್ ನಲ್ಲಿನ ಕನ್ನಡಿಗ ಅಜಾದನ.. ಕವನ ಸಂಕಲನ....ಜಲನಯನ ....
ದುಂಡಿಮದ ದು೦ಡಿರಾಜರಿಂದ ಅನಾವರಣಗೊಂಡು ಲೋಕಾರ್ಪಣವಾದ ದಿನ....
ಬ್ಲಾಗಿಗ.. ಇದು ಕೇವಲ ಜಲನಯನದ ಅನಾವರಣವಲ್ಲ......
ಈ ಸಮಯ ಛಾಯಾಕನ್ನಡಿ ಬ್ಲಾಗಿಗ ಮಿತ್ರ, ದಿನಪತ್ರಿಕೆ ವಿತರಕ, ಹವ್ಯಾಸಿ ಚಾಯಚಿತ್ರಗಾರ ಕೆ.ಶಿವುನ ....
ಎರಡನೇ ಲಲಿತ ಪ್ರಭಂಧ ಸಂಕಲನ "ಗುಬ್ಬಿ ಎಂಜಲು" ಸುಧೀಂದ್ರ ಹಾಲ್ದೋಡ್ಡೇರಿಯವರಿಂದ....
ಲೋಕಾರ್ಪಣವಾದ ದಿನ....


ಮನದಾಳದ ಪ್ರವೀಣನ.... ಮೃದುಮನಸ್ಸಿನ ಸುಗುಣೆಯ..
ಸುಂದರ ನಿರೂಪಣೆಯ ಕಾರ್ಯಕ್ರಮ....


ಈ ಸಮಯಾ... ಬಾಲೆಯಾ ಪ್ರಾರ್ಥನೆಯಲ್ಲಿ ಪ್ರಾರಂಭವಾದ
ಮಧುರ ಬ್ಲಾಗಿಗರ ಮಿಲನದಾ..ದಿನಾ...

ಈ ಸಮಯಾ ದೀಪ ಬೆಳಗಿ ಕಾರ್ಯಕ್ರಮ ಪ್ರಾರಂಭವಾದ ದಿನಾ....


ಈ ಸಮಯಾ.... ಪ್ರೊಫೆಸ್ಸರ್ ಶೇಷಾಶಾಸ್ತ್ರೀ ಯವರ
ಆತ್ಮೀಯ ಉಪಸ್ಥಿತಿಯಲ್ಲಿ....ಬ್ಲಾಗಿಗರು ನಲಿದ ದಿನ....

ಈ ಸಮಯಾ...ಡುಂಡಿಮರ ಚಟಾಕಿ ಸಿಡಿದು
ನಗೆಹೊನಲು ಹರಿದ ದಿನ ......


ಈ ಸಮಯಾ ... ಸುಧೀಂದ್ರರ ಮನದ ಮಾತ ದಿನ .....



ಈ ಸಮಯಾ... ತೆರೆಮರೆ ಹಿಂದೆ ಗಣಕಯಂತ್ರದ ಸೂತ್ರಧಾರಿ
ಸವಿಗನಸಿನ ಮಹೇಶನ ಕೈಚಳಕದ ದಿನ.....

ಈ ಸಮಯಾ...ತೆರೆಮರೆಯಲ್ಲಿ ಪೆನ್ನು ಪೇಪರನ
ಅನಿಲ -ನಾಗರಾಜರ, ಹಳ್ಳಿಹುಡುಗ- ನವೀನನ, ಛಾಯಾಗ್ರಾಹಕ ಉದಯನ, ಮಲ್ಲಿಕಾರ್ಜುನನ
ಶ್ರಮದ ವೈಭವದ ದಿನ.....
ಹತ್ತು ಹಲವು ಛಾಯಾಚಿತ್ರಕಾರ ಮೋಹಕ ಚಿತ್ರಗಳು ಹುಟ್ಟಿದಾ ದಿನ ...
ರಸಮಯ ಕ್ಷಣ ಹಿಡಿದಾದ ದಿನಾ....



ಬರೀ ಇಷ್ಟೇ ಅಲ್ಲಾ ಮಿತ್ರಾ....ಈ ಸಮಯಾ... ಎಲ್ಲರನೂ ಸೇರಿಸಿದ
ದೊಡ್ದತಲೇ -ಗೊಮ್ಮಟೇಶ-ಧೈತ್ಯಕಾಯ-ದೊಡ್ಡ ಹೃದಯ-ಮಗುವ ಮನಸ
ನಿಷ್ಕಲ್ಮಶ ಪ್ರೇಮದ ಸ್ನೇಹಜೀವಿ-ಇಟ್ಟಿಗೆ ಸಿಮೆಂಟಿನ
-ಕಂತ್ರಾಟುದಾರ-ಚಿತ್ರಗ್ರಾಹಕ-ಕವಿಹೃದಯದ ಸಜ್ಜನನ-
ಎಲ್ಲರಳೋ೦ದಾಗುವ ಪ್ರಕಾಶಣ್ಣನ ತೆರೆಮರೆಯ ಪರಿಶ್ರಮ ಸಾರ್ಥವಾದ ದಿನಾ...

ಈ ಸಮಯಾ... 'ಕೊಳಲಿ'ನ ಸಜ್ಜನ ಸರ್ಜನ್ನ ಕೃಷ್ಣಮೂರ್ತಿಯವರ ಮತ್ತು ಶಿವಕುಮಾರರ ಗಾನಸುಧೆಯಲಿ
ಬ್ಲಾಗಿಗರು ಮಿಂದು ನಲಿದ ದಿನಾ....

ಜೊತೆಗೆ ಎಲ್ಲಾ ಬ್ಲಾಗಿಗರು -ಸಕಲಕಲಾಸಂಪನ್ನ ದಿನಕ್ಕೊಂದರ 'ನಮ್ಮೊಡೆನೆಯ ವಿಆರ್ ಬಿ'ಯವರು , ಸದಾ ಮೌನ ಹಸನ್ಮುಖಿ 'ಜೀವನ್ಮುಖಿ'ಯ ಪರಾಂಜಪೆಯವರು, ಗುರುಪ್ರಪಂಚದ ಗುರುರವರು, 'ನಮ್ಮೊಳಗೊಬ್ಬ ಬಾಲು'ರವರು , 'ನಾಭಿ'ಯ ನಾರಾಯಣ ಭಟ್ಟರು, 'ನೀವೇದನೆ'ಯ ಉಮಾಭಟ್ಟರು, 'ಸುಮ್ನೆ ಹೀಗಂದೆ'ಯ ಸುಮನಾ ವೆಂಕಟರು, 'ಓ ಮನಸೇ ನೀನೇಕೆ ಹೀಗೆ'ಯ ಚೇತನಾ ಭಟ್ಟ ದಂಪತಿಯರು, 'ಹನಿಹನಿ'ಯ ದೀಲೀಪ ಹೆಗಡೆಯವರು, 'ನಿಶಾಂತರಂಗ'ದ ನಿಶಾ ದಂಪತಿಯರು, ’ಅಂತರಂಗದ ಮಾತುಗಳ' ಶ್ಯಾಮಲಾರವರು, 'ಅನುರಾಗ'ದ ಮತ್ತು ಗಾದೆಗಳ ರಾಣಿ ಶಶಿ ಜೋಯಿಷರು, 'ಓ ಮನಸೇ ನೀನೇಕೆ ಹೀಗೆ'ಯ ಚೆತನಾರವರು, 'ಚಿತ್ತಾರ'ದ ಪ್ರಗತಿ ಹೆಗಡೆ ದಂಪತಿಗಳು, ’ದೇಸಾಯಿಯವರ ಅಂಬೋಣ'ದ ದೇಸಾಯಿಯವರು, 'ನೆನಪಿನ ಪುಟಗಳ' ಶಿವಪ್ರಕಾಶರು,”ಮೂಕಮನದ ಮಾತಿ’ನ ದಿನಕರ ಮೊಗೇರ ದಂಪತಿಗಳು, ಶಿವಶಂಕರ ವಿಷ್ಣು ಯೆಳವತ್ತಿಯವರು, 'ಶ್ರಾವಣದ ಮಳೆ ಸುರಿಸಿದೆಯಾದರು'ವಿನ ಗೌತಮ ಹೆಗಡೆ ಭಾವಿ ದಂಪತಿಗಳು, ಎಸ್.ಎಸ್.ಕೆ ಕಾವ್ಯನಾಮಧೇಯದ ಶೋಭಾರವರು, 'ಕ್ಷಣ ಚಿಂತನೆ'ಯ ಚಂದ್ರು ರವರು, ನಂಜುಂಡರು, ಮನಸಿನ ಮಾತುಗಳ ದಿವ್ಯಾ, 'ಅನುಭವ ಮಂಟಪ'ದ ಫಾಲಚಂದ್ರರು, 'ನಾನಿಸಾಹ'ದ ಲಕ್ಷ್ಮಣ ಬಿರಾದಾರರು, ಹಿರಿಯ ಬ್ಲಾಗಿಗ ಹೆಬ್ಬಾರರು, 'ನನ್ನದೊ೦ದ್ಮಾತಿ' ಸತ್ಯನಾರಾಯಣರು, 'ಹೇಳಬೇಕೆನಿಸುತಿದೆ'ಯ ಜಯಲಕ್ಷ್ಮಿಯವರು,'ಖುಷಿ- ನಮ್ಮ ಮನೆಯ ದೀಪ’ ದ ಅಶೋಕ ಕೊಡ್ಲಾಡಿಯವರು, ’ಮೌನದ ಪದಗಳ’ ರಾಘುರವರು, ಹಲವಾರು ಬ್ಲಾಗಿಗ ಬಂಧುಗಳು (ಹೆಸರು ನೆನಪಿಡದುದ್ದಕ್ಕೆ ಉಳಿದವರು ಕ್ಷಮಿಸಬೇಕು) ಸೇರಿ ನಕ್ಕು ನಲಿದ ಕ್ಷಣಗಳು ಮರೆಯಲಾರದ ಅನುಭವ.
ಈ ನಡುವೆ ನನಗೆ ನಾರಾಯಣ ಭಟ್ಟ ದಂಪತಿಗಳ ಮತ್ತು ವಿಆರ್.ಭಟ್ಟ ದಂಪತಿಗಳ ಆದರಾತಿತ್ಯದ ಸವಿಯುಣ್ಣುವ ಅವಕಾಶ ದೊರಕಿತು. ದಣಿವಿನ ಅಸ್ವಸ್ಥತೆಯಲ್ಲೂ ಉಮಾ ಭಟ್ಟರ ಆದರಾತಿತ್ಯ ಮರೆಯಲಾಗದ್ದು. ಮನೆಯ ತುಂಬಾ ನೆ೦ಟರಿದ್ದರೂ ನಮ್ಮನ್ನು ಸ್ವಾಗತಿಸಿ, ಆದರಿಸಿ, ಆತಿಥ್ಯ ನೀಡಿ, ಜೊತೆಗೆ ತಮ್ಮ ಸುಮಧುರ ಕಂಠಸಿರಿಯಿಂದ ಮನತಣಿಸಿದ ವಿ.ಆರ್.ಭಟ್ಟ ರ ಶ್ರೀಮತಿಯವರು ಬಹುಮುಖ ಪ್ರತಿಭೆಯವರು.
ಈ ದಂಪತಿ ಜೋಡಿಗಳಿಗೆ ನನ್ನ ಮನಪೂರ್ವಕ ನಮನಗಳು. ಉಮಾಭಟ್ಟ ರ ಕವನ ಸಂಕಲನವೊಂದು (ಸಧ್ಯ ಕೈಪಿಡಿಯಲ್ಲಿದ್ದು ಪ್ರಾದೇಶಿಕವಾಗಿ ಬಹುಮಾನ ಪಡೆದು ಮೆಚ್ಚುಗೆ ಗಳಿಸಿರುವ) ಪ್ರಕಟನೇಯ ಹಾದಿಯಲ್ಲಿದೆ.
ಒಟ್ಟಿನಲ್ಲಿ ಇದು ಮರೆಯದ ಮಧುರ ನೆನಪಿನ ಸಮಾನ ಮನಸ್ಕ ಬ್ಲಾಗಿಗರ ಮಿಲನ. ಇದಕ್ಕೆ ನಾಂದಿಯಾಗಿದ್ದು ಶಿವು-ರವರ ಮತ್ತು ಆಜಾದರ ಪುಸ್ತಕ ಪ್ರಕಟಣೆ. ಈ ಕಾರಣಕ್ಕಾಗಿ ಅವರಿಬ್ಬರನ್ನು ಅಭಿನಂದಿಸುತ್ತಾ, ತುಂತುರು ಪ್ರಕಾಶನವನ್ನ ನೆನೆದು, ಮತ್ತೆಲ್ಲಾ ಸಮಾರಂಭದ ಬೆನ್ನೆಲುಬಾದ ಪ್ರಕಾಶಣ್ಣ ಹಾಗೂ ಅವರ ಅಳಿಯಂದಿರ ತಂಡ (ಮದುವೆಗೆ ಹೆಣ್ಣು ಹುಡುಕುವ ಜವಾಬ್ದಾರಿ ಮಾವನಿಗೆ ಕೊಟ್ಟು) ಮತ್ತು ಮಹೇಶ ದಂಪತಿಗಳನ್ನು ವಂದಿಸುತ್ತಾ ಬರಹವನ್ನ ಮುಕ್ತಾಯಿಸುವೆ. ಎಲ್ಲಾ ಛಾಯಾಚಿತ್ರಕಾರರು ಅದ್ಭುತವಾಗಿ ಚಿತ್ರ ಸೆರೆ ಹಿಡಿದಿದ್ದಾರೆ.

ಹೆಚ್ಚಿನ ಚಿತ್ರಗಳು ನನ್ನ ಕ್ಯಾಮೆರಾದಲ್ಲಿ ಕಂಡಂತೆ ನೋಡಲು ಕ್ಲಿಕ್ಕಿಸಿ:
http://picasaweb.google.co.in/116434280314025211668/Blog?authkey=Gv1sRgCPfxoput2ubJ0wE#


Friday, August 20, 2010

ಸಮಾವೇಶಗಳು - ಸಾರ್ವಜನಿಕರು



ನಿನ್ನೆ ರಾತ್ರಿ ಗೋವೆಯಿಂದ ಹಿಂದುರಿಗಿ ಬರುತ್ತಾ ಇದ್ದೆ -ನೂರಾರು ಖಾಲಿ ಬಸ್ಸುಗಳು ಬಿಜಾಪುರ-ಹುಬ್ಬಳ್ಳಿ ಹಾಗೂ ಉತ್ತರ ಕರ್ನಾಟಕದ ಇತರೇ ಭಾಗದಿಂದ ಹೊಸಪೇಟೆ ಗಡಿ ನುಗ್ಗುತ್ತಾ ಇದ್ದವು. ಯಾಕೆಂದು ಯೋಚಿಸುತ್ತಿದ್ದೆ. ಕೆಲವು ಬಸ್ಸುಗಳ ಮೇಲೆ ಅರೋಗ್ಯ ಶಿಬಿರದ ಫಲಕಗಳಿದ್ದವು. ಆರೋಗ್ಯ ಶಿಬಿರ ಇದೆಯೇನೋ ಅಂದುಕೊಂಡೆ. ಇಡೀ ಹೊಸಪೇಟೆ ಊರಲ್ಲಿ ಎಲ್ಲೆಂದರಲ್ಲಿ ಅಲ್ಲಿ ಬಸ್ಸುಗಳು ನಿಂತಿದ್ದವು. ಸುತ್ತಲ್ಲಿನ ಎಲ್ಲ ಊರು-ಕೇರಿಗಳಲ್ಲಿ ಹೀಗೆ ಬಸ್ಸುಗಳು ನಿಂತಿದ್ದವು.
ಬೆಳಿಗ್ಗೆಯಂತೂ ಸಂದಿ ಗೊಂದಿಗಳಲ್ಲಿ ಚಾಲಕರು ಕಷ್ಠ ಪಟ್ಟು ಬಸ್ಸುಗಳನ್ನು ತಂದಿದ್ದು, ದಲ್ಲಾಳಿಗಳು ಜನರನ್ನು ತುಂಬಿಸಿ ಕರೆದೊಯ್ಯಲು ಮನವೊಲಿಸಿ ಒಯ್ಯಲು ಚರ್ಚೆ/ಚೌಕಾಶಿ ನಡೆಸುತ್ತಿದ್ದರು.

ಬಸ್ಸಿಗೆ ರೂ.೨೫೦೦೦/-ದಂತೆ ದಲ್ಲಾಳಿಗಳು ತೆಗೆದುಕೊಂಡು ಬಂದು ಜನರಿಗೆ ಹಂಚಿ ಬಸ್ಸು ತುಂಬಿಸುತ್ತಿದ್ದರು. ಬಸ್ಸುಗಳು ಹಲವು ರಾಜಕೀಯ ಕಾರ್ಯಕರ್ತರ ಮೇಲುಸ್ತುವಾರಿಯಲ್ಲಿ ಜನರನ್ನು ಬಳ್ಳಾರಿಯಲ್ಲಿ ನಡೆವ ಸಮಾವೇಶಕ್ಕೆ ಕರೆದೊಯ್ಯಲು ಬಂದಿದ್ದು!
ಖಾಲಿ ಖಾಲಿ ಬಸ್ಸುಗಳು ತುಂಬಿದವು. ೩೦೦ ರೂ ನಿಂದ ೫೦೦ರೂಪಡೆದ ಜನ ಊಟ, ತಿಂಡಿ, ಎಲ್ಲ ಖರ್ಚನ್ನು ಭಾರಿಸಿದ ಪಕ್ಷದ ಸಾಧನೆಯ ಸಮಾವೇಶಕ್ಕೆ ಮತ್ತು ವರಮಹಾಲಕ್ಷ್ಮಿ ಪೂಜೆಗೆ ಬಂದ ಭಾವಿ ಭಾರತದ ಪ್ರಧಾನಿ ಕನಸು ಕಾಣುತ್ತಿರುವ, ಸುಷ್ಮಾ ಸ್ವರಾಜರವರ ಬಳ್ಳಾರಿ ಭೇಟಿಯ ಸಂಧರ್ಭದಲ್ಲಿ ಮಾಡಬೇಕಿದ್ದ ಪಕ್ಷದ ಸಾಧನ ಸಮಾವೇಶದ ಭಾಷಣ ಆಲಿಸಲು ಜಮಾಗೊಳ್ಳುತ್ತಿದ್ದರು.
ಮೊನ್ನೆ ನಡೆದ ಕಾಂಗ್ರೆಸಿಗರ ಸಮಾವೇಶದ ಆರುಪಟ್ಟು ಜನರನ್ನು ಸೇರಿಸುವ ಸಂಕಲ್ಪದಲ್ಲಿ ರೆಡ್ಡಿಯವರು ಗಣಿಧನವನ್ನ ಪಣಕ್ಕಿಟ್ಟಿದ್ದರು.

ಇನ್ನೊಂದು ಕಡೆ ಬಸ್ಸಿಲ್ಲದೆ ಊರಿಂದ ಊರಿಗೆ ಹೋಗಬೇಕಾದ ಪ್ರಯಾಣಿಕರ ಪಾಡು, ಅವರನ್ನು ಸಂತೈಸುವಲ್ಲಿ ವಿಫಲರಾದ ಬಸ್ಸ ನಿಯಂತ್ರಣಾಧಿಕಾರಿಗಳು, ಹತಾಶಜನ, ಮಧ್ಯ ಸಿಕ್ಕಿ ಹಾಕಿಕೊಂಡ ಜನ, ಸಂಚಾರ ನಿಯ೦ತ್ರಣದಲ್ಲಿ ಹುಚ್ಚರಾಗದೆ ಉಳಿದ ಸಂಚಾರಿ ಪೊಲೀಸರು, ಜನರನ್ನು ನಿಯಂತ್ರಿಸುವಲ್ಲಿ ಹೈರಣಾದ ಪೊಲೀಸರು, ಬರುತ್ತಿರುವ ಮಂತ್ರಿ-ತಂತ್ರಿಗಳನ್ನು ಬರಮಾಡಿ ಕೊಳ್ಳುವದರಲ್ಲಿ ಸುಸ್ತಾದ ಜಿಲ್ಲಾ ಅಧಿಕಾರ ವರ್ಗ, ಊಟ-ತಿಂಡಿಗೆ ಹೋಟೆಲ್ ಅವಲಂಬಿಸಿದ ಜನ ಆಹಾರಕ್ಕೆ ಪರದಾಡುತ್ತಿದ್ದದ್ದು, ಇಂದು ಕಣ್ಣಿಗೆ ರಾಚುತ್ತಿತ್ತು.
ಸಂಜೆ ಎಲ್ಲ ಬಸ್ಸುಗಳು ಜನರನ್ನು ಹಿಂದೆ ತಂದು ಬಿಡುತ್ತಿದ್ದವು. ಏಕಮುಖ-ದ್ವಿಮುಖ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಸಂಚರಿಸುವ ಈ ಬಸ್ಸುಗಳನ್ನು ಹತಾಶೆಯಲ್ಲಿ ನೋಡುತ್ತಿದ್ದ ಸಂಚಾರಿ ಪೊಲೀಸರು.

ಈ ಎಲ್ಲ ಗೊಂದಲಗಳಲ್ಲಿ ಹೆಚ್ಚಿನ ಸಾಮಾನ್ಯ ಮತ್ತು ಕದುಬದವಜನ ಊಟ-ತಿಂಡಿ-ಇತರೇ ಜೊತೆಗೆ ೩೦೦-೫೦೦ ರುಪಾಯಿ ದುಡಿದದ್ದು ಒಂದು ವಿಶೇಷವೇ! ಅವರು ಹೊಟ್ಟೆಹೊರೆಯಲು ಇಡೀ ದಿನ ದುಡಿದರು ೧೦೦ರೂ ಸಿಗುವದು ಕಷ್ಟ. ಅನ್ಥದುರಲ್ಲಿ ಈ ದುಡಿಮೆ ಒಂದು ವಿಶೇಷವೇ!
ಒಮ್ಮೆ ಅನಿಸಿತು ಈ ಸಮಾವೇಶದಿಂದ ಕೆಲವು ಜನರಿಗೆ ತೊಂದರೆ ಆದರು ಕೆಲವು ಜನರಿಗೆ ಅಯಾಚಿತ ದುಡಿಮೆಯೂ ಆಯಿತಲ್ಲವೇ. ಆದರೆ ನೋವಿನ ಸಂಗತಿ ಎಂದರೆ ಈ ಮುಗ್ದಜನರ ಬದುಕಿನ ಅವಶ್ಯಕತೆಯನ್ನು ತಮ್ಮ ರಾಜಕೀಯ ಸಂಖ್ಯಾಬಲ ತೋರಿಸುವಲ್ಲಿ ಅವರನ್ನು ಉಪಯೋಗಿಸಿದ್ದು ಮತ್ತು ಜನರನ್ನು ಕುರಿಯಂತೆ ತಂದು ಪ್ರದರ್ಶಿಸಿದ್ದು.
ಅಂದು ಕಾಂಗ್ರೆಸ್ಸಿಗರು, ಇಂದು ಬಿಜೆಪಿಯವರು ಮತ್ತೆ ನಾಳೆ ದಳದವರು. ಹೀಗೆ ಒಬ್ಬರ ನಂತರ ಇನ್ನೊಬ್ಬರು. ಮೊನ್ನೆ ಸರಕಾರದ ಸಾಧನೆ ಏನು ಇಲ್ಲ ಎಂದು ಪ್ರತಿಭಟಿಸಿದ ವಿರೋಧ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿದ ಜನವೇ ಇಂದು ಸರಕಾರದ ಸಾಧನೆ ಘನ೦ದಾರಿಯದು ಎನ್ನುವರ ಜೊತೆ ಇದ್ದರು!
ಅವರಿಗೆ ಸಮಾವೇಶ ಯಾರು ಮಾಡಿದರೇನು ? ಯಾತಕ್ಕಾದರೂ ಮಾಡಿದರೇನು! ಸುಲಭದಲ್ಲಿ ತುತ್ತಿನ ಚೀಲ ತುಂಬಬೇಕಿತ್ತು! ಜೊತೆಗೆ ಮನೋರಂಜನೆಯು ಇತ್ತಲ್ಲವೇ!

ಜನ ಮರುಳೋ! ಜಾತ್ರೆ ಮರುಳೋ!

ಸಮಾವೇಶಗಳು ತಮಾಷೆಗಳಾಗುತ್ತಿವೆ, ಮಾನವೀಯ ಮೌಲ್ಯದ ಅಣುಕುಗಳಾಗುತಿವೆ.
ಯಾಕೋ ಮನ ಉದ್ವಿಗ್ನಗೊಂಡಿದೆ.
ನಾವೆತ್ತ ಸಾಗುತ್ತಿದ್ದೇವೆ.
ಜನಕ್ಕೂ ಬೇಕಾಗಿದ್ದೇ ರಾಜಕೀಯದವರು ಮಾಡುತ್ತಿರಬಹುದು. ನಮ್ಮ ಯೋಚನೆಗಳು ಅಲ್ಪಸಂಖ್ಯಾತವೆ!

Saturday, August 14, 2010

ಎಸ್.ಎಲ್.ಭೈರಪ್ಪನವರ "ಕವಲು" -ನಾ ಕಂಡಂತೆ






ಕಾದಂಬರಿ : ಕವಲು
ಲೇಖಕರು : ಸಂತೆಶಿವರ.ಲಿಂಗಣ್ಣಯ್ಯ.ಭೈರಪ್ಪ
ಪುಟಗಳು : ೩೦೦
ಬೆಲೆ : ರೂಪಾಯಿ-೨೫೦
ಪ್ರಕಾಶನ : ಸಾಹಿತ್ಯ ಭಂಡಾರ ಪ್ರಕಾಶನ, ಜಂಗಮ ಮೆಸ್ತ್ರೀಗಲ್ಲಿ, ಬಳೆಪೇಟೆ,ಬೆಂಗಳೂರು.

ಸಾಹಿತಿ ಪರಿಚಯ : ಸಂತೇಶಿವರದಲ್ಲಿ (ಚನ್ನರಾಯಪಟ್ಟಣ ತಾಲುಕು ಹಾಸನ ಜಿಲ್ಲೆಯಲ್ಲಿ) ಹುಟ್ಟಿದ ಭೈರಪ್ಪನವರು ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡು, ಓದಿಗಾಗಿ ಹತ್ತು ಹಲವಾರು ಕೆಲಸಗಳನ್ನೂ ಮಾಡಿ, ತದನಂತರ ಕೆಲವು ಕಾಲ ಅಲೆಮಾರಿ ಜೀವನ ನಡೆಸಿ (ಮು೦ಬಯಿಯಲ್ಲಿ), ಆಮೇಲೆ ಮೈಸೂರಿಗೆ ಹಿಂದುರಿಗಿ ಓದು ಮುಂದುವರೆಸಿದರು. ಗೊರೂರು ರಾಮಸ್ವಾಮಿ ಅಯ್ಯಂಗಾರರ ಕಥೆಗಳಿಂದ ಪ್ರಭಾವಿತರಾದ ಅವರು ಬಾಲ್ಯದಲ್ಲೇ ಸಾಹಿತ್ಯದ ಗೀಳು ಹಿಡಿಸಿಕೊಂಡಿದ್ದರು. ಚಿಕ್ಕ ವಯಸ್ಸಿನಲ್ಲಿ(೧೩) ಅವರು ಸ್ವಾತ೦ತ್ರ್ಯಹೋರಾಟದಲ್ಲೂ ಧುಮಿಕಿದ್ದರು. ಮೈಸೂರು ವಿಶ್ವ ವಿಧ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಸ್ನಾತಕ ಪದವಿಯನ್ನ ಪಡೆದ ಭೈರಪ್ಪನವರು , ಸತ್ಯ ಹಾಗೂ ಸೌ೦ದರ್ಯದ ಬಗ್ಗೆ ಸ೦ಶೋಧನಾ ಗ್ರಂಥ ಬರೆದು ಬರೋಡಾ ವಿಶ್ವವಿಧ್ಯಾಲಯದಿಂದ ಪಿ.ಹೆಚ್.ಡಿ. ಪದವಿಯನ್ನೂ ಸಂಪಾದಿಸಿದ್ದಾರೆ. ಅವರು ಗುಲಬರ್ಗಾ ವಿಶ್ವವಿಧ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ.

ಸುಮಾರು ೨೨ ಕಾದಂಬರಿಗಳನ್ನ (ಭೀಮಕಾಯ, ಧರ್ಮಶ್ರೀ, ದೂರ ಸರಿದರು, ಮತದಾನ, ವಂಶವೃಕ್ಷ, ಜಲಪಾತ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೇ, ಗೃಹಭಂಗ,ನಿರಾಕರಣ, ಗ್ರಹಣ, ದಾಟು, ಅನ್ವೇಷಣೆ, ಪರ್ವ, ನೆಲೆ, ಸಾಕ್ಷಿ, ಅಂಚು, ತಂತು, ಸಾರ್ಥ, ಮಂದ್ರ, ಆವರಣ ಮತ್ತು ಕವಲು) ಬರೆದ ಭೈರಪ್ಪನವರು ಕನ್ನಡದ ಅಪರೂಪದ ಸಾಹಿತಿ. ಅವರ ಎಲ್ಲ ಕೃತಿಗಳು ವಸ್ತು ಮತ್ತು ತಂತ್ರ ವೈಶಿಷ್ಟ್ಯ ಹಾಗು ವೈವಿಧ್ಯ ಹೊಂದಿದ್ದು, ಓದುಗರನ್ನು ಅಪಾರ ಆಕರ್ಷಣೆ ಮಾಡುತ್ತವೆ. ಹೀಗಾಗಿ ಭೈರಪ್ಪನವರು ಅಪಾರ ಓದುಗರನ್ನು ಪಡೆದ ಮತ್ತು ಜನಪ್ರಿಯ ಲೇಖಕ. ಅವರ ಕಾದಂಬರಿಗಳಲ್ಲಿ ಕಥಾ ವಸ್ತುಗಳು ತೀವ್ರ ಸಂಶೋಧನೆಯ ಸತ್ಯದಲ್ಲಿ ಅವಿರ್ಭವಿಸಿರುವದು, ಸರಳ ಭಾಷೆಯಲ್ಲಿ ಹೇಳಲ್ಪಟ್ಟಿರುವದು ಮತ್ತು ಸಮಕಾಲಿನ ಜ್ವಲಂತ ವಿಷಯಗಳ ಸುತ್ತ ವಸ್ತು-ನಿಷ್ಟುರತೆಯ ಹೊಂದಿರುವದರಿಂದ ಓದುಗರಿಗೆ ಅಪ್ಯಾಯ ಮಾನವೆನಿಸುವದು. ಅವರ ಕಾದಂಬರಿಗಳು ಹತ್ತು ಹಲವಾರು ಭಾಷೆಗೆ ತರ್ಜುಮೆಯಾಗಿ ಅಲ್ಲೂ ಮನ್ನಣೆ ಪಡೆದಿವೆ. ಇದಲ್ಲದೆ ಅವರು ೪ ತತ್ವಶಾಸ್ತ್ರ ಗ್ರಂಥಗಳನ್ನು(ಸತ್ಯ ಮತ್ತು ಸೌಂದರ್ಯ, ಸಾಹಿತ್ಯ ಮತ್ತು ಪ್ರತೀಕ, ಕಥೆ ಮತ್ತು ಕಥಾವಸ್ತು ಹಾಗೂ ನಾನೇಕೆ ಬರೆಯುತ್ತೇನೆ) ಮತ್ತು ಒಂದು ಆತ್ಮ ಕಥೆಯನ್ನೂ(ಭಿತ್ತಿ) ಬರೆದಿದ್ದಾರೆ. ಅವರ ೪ ಕಾದಂಬರಿಗಳು (ವಂಶವೃಕ್ಷ, ತಬ್ಬಲೀಯು ನೀನಾದೆ ಮಗನೇ, ಮತದಾನ ಮತ್ತು ನಾಯಿ-ನೆರಳು) ಚಲನಚಿತ್ರವಾಗಿವೆ ಮತ್ತು ಎರಡು ಕಾದಂಬರಿಗಳು ಧಾರಾವಾಹಿಗಳಾಗಿ ದೂರದರ್ಶನದಲ್ಲಿ ಬಂದಿವೆ (ದಾಟು ಮತ್ತು ಗೃಹಭಂಗ).

ಭೈರಪ್ಪನವರು ಪಂಪ ಸಾಹಿತ್ಯ ಪ್ರಶಸ್ತಿ, ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಆಕಾಡೆಮಿಯ ಹಲವು ಪ್ರಶಸ್ತಿ, ಕನ್ನಡ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಮತ್ತು ಏನ್-ಟಿ-ಆರ್ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪಡೆದಿದ್ದಾರೆ. ಅವರ ಹೆಚ್ಚಿನ ಕಾದಂಬರಿಗಳು ಕನ್ನಡದಲ್ಲಿ ಅತೀ ಹೆಚ್ಚು ಮಾರಾಟವಾದ ಮತ್ತು ದಾಖಲೆ ಮರು ಮುದ್ರಣ ಕಂಡ ಪುಸ್ತಕಗಳು. ಹಿಂದಿಯಲ್ಲೂ ಅವರ ಅನುವಾದಕೃತಿಗಳು ಅವರನ್ನು ಮೇಲ್ಮಟ್ಟದ ೫ ಲೇಖಕರಲ್ಲಿ ಸೇರಿಸಿದೆ.

ಕವಲು ಕಾದಂಬರಿ : (ಸಂಕ್ಷಿಪ್ತ ಕಥಾಹಂದರ)

ಕಾದ೦ಬರಿಯಲ್ಲಿ ಎರಡು ಸಮಾನಾಂತರದಲ್ಲಿನ ಕಥೆಗಳಿವೆ.
ಕಥೆ-೧: ಜಯಕುಮಾರ ಎ೦ಬ ಯಶಸ್ವೀ ಉಧ್ಯಮಿ ವಿಧುರ ತನ್ನ ಆಫಿಸ್ನಲ್ಲಿ ಕೆಲಸ ಮಾಡುವ ಮಂಗಳೇ ಎಂಬ ಕೆಲಸಗಾರ್ತಿಯೊಡನೆ ಲೈಂಗಿಕ ಸಂಪರ್ಕಕ್ಕೆ ಬಂದು, ಅವಳು ಗರ್ಭವತಿಯಾಗಿ, ಒತ್ತಾಯದಿಂದ ಅವಳನ್ನು ಮದುವೆ ಮಾಡಿಕೊಳ್ಳುತ್ತಾನೆ.

ಮಧ್ಯಮ ಕೆಲಸವರ್ಗದಲ್ಲಿ ತುಂಬಾ ಕಷ್ಟಪಟ್ಟು ಹೆಂಡತಿ ವೈಜಯ೦ತಿಯೋಡನೇ ಜಯಕುಮಾರ ಸ್ವಂತ ಉಧ್ಯಮ ಪ್ರಾರಂಬಿಸಿ ಅವಳ ಸಹಕಾರದಿಂದ ಹಂತ-ಹಂತವಾಗಿ ಬೆಳೆದು ಅತೀ ದೊಡ್ಡ ಸಂಸ್ಥೆಯೊಂದನ್ನು ಹುಟ್ಟುಹಾಕಿ ಸಂತೃಪ್ತ ಜೀವನ ನಡೆಸುತ್ತಿರುವಾಗ ರಸ್ತೆ ಅಫಘಾತವೊಂದರಲ್ಲಿ ಹೆ೦ಡತಿಯನ್ನು ಕಳೆದು ಕೊಂಡು, ಜೊತೆಗೆ ಪುಟ್ಟ ಮಗಳಿಗೆ ತೀವ್ರ ತಲೆಗಾಯಗಳಾಗಿ, ಆ ಮಗುವಿನ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ.

ಮಂಗಳೇ ಆಧುನಿಕ ವಿಚಾರದ ಮಹಿಳೆಯಾಗಿದ್ದು ಕಾಲೇಜಿನಲ್ಲೇ ಪ್ರಭಾಕರ ಎಂಬ ಸಹಪಾಠಿಯೊಡನೆ ಪ್ರೇಮಿಸಿ ಲೈಂಗಿಕ ಸಂಪರ್ಕಕ್ಕೆ ಬಂದು ಗರ್ಬವತಿಯಾಗಿ ಮದುವೆಯಾಗದೆ ಗರ್ಭ ತೆಗೆಸಿದ್ದು, ಮುಂದೆ ಹಲವರು ಸ್ತ್ರೀ ಸಮಾನತೆ-ಇತ್ಯಾದಿ ಆಧುನಿಕ ಧೋರಣೆಗಳಿಂದ ಪ್ರಭಾವಿತಳಾಗಿ (ಇಳಾ ಮೇಡಂರ ಪ್ರಭಾವದಿಂದಾಗಿ), ಸ್ತ್ರೀ ಸ೦ಘಟನೆಗಳಲ್ಲಿ ತೊಡಗಿಸುತ್ತ ಜಯಕುಮಾರನ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರುತ್ತಾಳೆ ಹಾಗೂ ಜಯಕುಮಾರನೊಡನೆ ಲೈಗಿ೦ಕ ಬಯಕೆಗೊಳಗಾಗಿ ಅವನನ್ನು ಅನೀವಾರ್ಯವಾಗಿ ಮದುವೆ ಮಾಡಿಕೊಳ್ಳುವಲ್ಲಿ ಶ್ರಮಪಟ್ಟು ಯಶಸ್ವೀಯು ಆಗುತ್ತಾಳೆ.

ಈ ನಡುವೆ ಮಂಗಳೆಗೆ ಗಂಡು ಮಗು ಆಗುತ್ತದೆ ಹಾಗು ಅವಳು ಹಳೆಯ ಪ್ರಭಾಕರನೊಡನೆ ನಿರಂತರ ಲೈಂಗಿಕ ಸಂಪರ್ಕದಲ್ಲೂ ಇರುತ್ತಾಳೆ. ಪರಸ್ಪರರ ಒತ್ತಾಯದಲ್ಲಿ ಮದುವೆಯಾದ ಮತ್ತು ವಿರುಧ್ಧ ವಿಚಾರದ ಅವರಲ್ಲಿ ದಾಂಪತ್ಯ ಸುಸೂತ್ರವಾಗಿರದೆ ಹದಗೆಡುತ್ತದೆ. ಈ ನಡುವೆ ಜಯಕುಮಾರಗೆ ವೇಶ್ಯಯರ ಸಂಗಕ್ಕೆ ಬಿದ್ದು ಪೋಲಿಸ ರೈಡ-ನಲ್ಲಿ ಸಿಕ್ಕು, ಸೆರೆಮನೆವಾಸವಾಗಿ, ಆಡಳಿತ ಕುಸಿದು ಅವನ ಸ೦ಸ್ಥೆಯೂ ವಿಷಮ ಸ್ಥಿತಿಗೆ ತಲುಪಿ, ಅವುಗಳಿಂದ ಹೊರ ಬರಲು ಅವನು ಸ೦ಸ್ಥೆ ಮಾರಿ ಹೆಂಡತಿಗೆ ವಿಚ್ಚೇದನ ನೀಡಿ ಪರಿಹಾರಾರ್ಥವಾಗಿ ಮನೆ ಹಣ ಕೊಟ್ಟು ಕೋಟಲೆಗಳಿಂದ ಹೊರಬರುತ್ತಾನೆ.

ಈ ನಡುವೆ ಜಯಕುಮಾರನ ನಚಿಕೇತ ಎಂಬ ವಿದೇಶದಲ್ಲಿರುವ ಅಳಿಯನೊಬ್ಬ ಎರಡು ವಿಧೇಶಿ ಹೆಂಗಸರುಗಳಿಂದ ಮೋಸ ಹೋಗಿ ವಿಚ್ಚೇದನ ಪರಿಹಾರವಾಗಿ ದಂಡಿಯಾಗಿ ಹಣ ಕಟ್ಟುತ್ತಿದ್ದು, ಅದೆಲ್ಲವುಗಳಿಂದ ಹೇಗೋ ಬಿಡಿಸಿಕೊಂಡು ಭಾರತಕ್ಕೆ ಬಂದು, ಇಲ್ಲಿಯೇ ಕೆಲಸವನ್ನೂ ಸೇರಿ, ಸ್ವಲ್ಪ ಕಾಲಾನಂತರ ಮಾವನ ಮಾನಸಿಕ ಕುಂಠಿತ ಮಗಳನ್ನೂ ಮದುವೆಯಾಗಿ, ಮಗುವನ್ನ ಹೊಂದಿ, ಮಾವನ ಅಳಿದುಳಿದ ಸ್ವಲ್ಪ ಹಣದಲ್ಲಿ ಉಧ್ಯಮವೊಂದನ್ನು ಪ್ರಾರಂಭಿಸುತ್ತಾನೆ.

ಕಥೆ ೨: ಇಷಾ ಮೇಡಂ ತನ್ನ ಬಹುರಾಷ್ಟ್ರೀಯ ಕ೦ಪನಿಯ ಉದ್ಯೋಗಿ ಗಂಡನೊಡನೆ ತನ್ನ ಕೆಲಸ ಬಿಟ್ಟು ಅವನೊಡನೆ ಸಂಸಾರಕ್ಕೆ ತಿರುಗಲಾಗದೇ, ಬೆಂಗಳೂರಿನ ತನ್ನ ಕೆಲಸದಲ್ಲೇ ಮುಂದುವರಿಯುತ್ತಾಳೆ. ಅಧುನಿಕ ಧೋರಣೆಯ ಮತ್ತು ಯುರೋಪಿಯನ್ನರ ಆಚಾರಕ್ಕೆ ವಿಚಾರಕ್ಕೆ ಮಾರುಹೋಗಿರುವ ಈ ಪಾತ್ರ ಸ್ವಂತ ಸುಖಕ್ಕೆ ಏನು ಮಾಡಲು ತಯಾರಾಗಿರುತ್ತಾಳೆ. ಈ ನಡುವೆ ಅವಳು ಒಬ್ಬ ಮಧ್ಯಮ ವಯಸ್ಸಿನ ರಾಜಕಾರಣಿಯಲ್ಲಿ ಲೈಂಗಿಕ ಸಂಪರ್ಕ್ಕೆ ಒಳಗಾಗಿ ಅನುರಕ್ತಳಾಗಿ ಅವನ ಫಾರಂಮನೆಯಲ್ಲಿ ಹೋಗಿರುತ್ತಾಳೆ. ಈ ವಿಷಯ ರಾಜಕಾರಣಿ ಹೆಂಡತಿಗೆ ಗೊತ್ತಾಗಿ ಅವಳು ಇವಳೊಡನೆ ರಂಪ ಮಾಡುತ್ತಾಳೆ. ಈ ನಡುವೆ ಇವಳ ಗಂಡ ವಿನಯಚಂದ್ರ ರಾಜಕಾರಣಿಯೊಡನೆ ಇವಳ ಲೈಂಗಿಕ ಚಿತ್ರಗಳನ್ನೂ ತೆಗಿಸಿರುತ್ತಾನೆ. ಈ ಚಿತ್ರಗಳನ್ನೂ ಉಪಯೋಗಿಸಿ ರಾಜಕಾರಣಿ ಇವಳನ್ನು ಫಾರ್ಮ ಮನೆಯಿಂದ ಹೊರಹಾಕಿಸುತ್ತಾನೆ. ವಿನಯಚಂದ್ರ ಅವಳಿಂದ ವಿಚ್ಛೇದನೆ ಪಡೆಯುತ್ತಾನೆ.

ವಿನಯಚಂದ್ರನ ಮಗಳು ತಾಯಿ ಇಷಾಳ ಆಶ್ರಯ ಬಿಟ್ಟು ಹಾಸ್ಟೆಲ್-ಗೆ ಸೇರಿ ತನ್ನ ಅಣ್ಣನಿಗೆ (ದೊಡ್ಡಪ್ಪನ ಮಗ) "ವಿಚ್ಚೆದಿತಳ ಮಗಳಾದ ತನಗೆ ಸೂಕ್ತ ಗಂಡೊಂದನ್ನು ಹುಡುಕುವ ಕಷ್ಟಕರದ ಕೆಲಸ ಮಾಡು" ಎಂಬ ಈಮೇಲ್-ನೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ.

ಎರಡು ಸಮಾನಾ೦ತರ ಕಥೆಗಳಿಗೆ ನಂಟೆ೦ದರೆ -ಇಷಾ ಮೇಡಂ ಮಂಗಳೇ ಮತ್ತು ಪ್ರಭಾಕರರಿಗೆ ಗುರು, ಪ್ರಭಾಕರ ರಾಜಕಾರಣಿಯ ಆಪ್ತ ಹಿಂಬಾಲಕ ಮತ್ತು ಇಷಾಳನ್ನು ಫಾರಂ ಮನೆಯಿಂದ ತೆರವು ಗೊಳಿಸುವಲ್ಲಿ ಪಾತ್ರವಹಿಸುತ್ತಾನೆ.

ಇತರ ಉಪಕಥೆಗಳು ಮತ್ತು ಪೂರಕ ಪಾತ್ರಗಳು: ಈ ನಡುವೆ ಜಯಕುಮಾರನ ಹೆಂಡತಿಯ ಕಾಲದ ಕೆಲಸದಾಳು-ನಮ್ರತೆಯಲ್ಲಿ ಕೆಲಸ ಮಾಡಿ ತಾಯಿಯಿಲ್ಲದ ಅವನ ಮತಿಕುಂಠಿತ ಮಗಳು ಪುಟ್ಟಕ್ಕಳನ್ನು ಮಗಳಂತೆ ಸಾಕಿ ಬೆಳೆಸಿ ದೊಡ್ದವಳನ್ನಾಗಿ ಮಾಡುವ ದ್ಯಾವಕ್ಕ, ಅವನ ಅತ್ತಿಗೆಯ ವರದಕ್ಷಿಣೆ ಕಿರುಕುಳದ ಸುಳ್ಳು ವಿಚಾರದಡೀ ಜೈಲಿಗೋಗಿ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿ ಯಾರಿಗೂ ಕಾಣದೆ ಇದ್ದು ಆಮೇಲೆ ಬಂದು ಜಯಕುಮಾರನನ್ನು ಸೇರುವ ಅವನ ತಾಯಿ, ಅವನ ಮುಗ್ದ ಅಣ್ಣ- ಜೋರಿನ ಅತ್ತಿಗೆ, ವರದಕ್ಷಿಣೆ ವಿಚಾರದಲ್ಲಿ ಅತ್ಮಹತ್ಯೆ ಮಾಡಿಕೊಳ್ಳುವ ಅವನ ಅಣ್ಣ -ಅತ್ತಿಗೆಯ ಮಗಳು(ತಾಯಿ ವರದಕ್ಷಿಣೆ ಕೊಡುವ ವಾಗ್ದಾನ ಮಾಡಿ ಆಮೇಲೆ ತಿರುಗಿರುತ್ತಾಳೆ), ಅವನ ಅಕ್ಕ-ಭಾವ (ನಚಿಕೇತನ ತಂದೆ ತಾಯಿ) ಮತ್ತು ಅವನ ಮಿತ್ರ ಶೇಖರ ಪಾತ್ರಗಳು ಪೂರಕವಾಗಿ ಕಾದಂಬರಿಯಲ್ಲಿ ಬರುತ್ತವೆ. ಜೊತೆಗೆ ಮಂಗಳೆಯ ತಾಯಿ, ಅಣ್ಣ-ಅತ್ತಿಗೆ, ಮಂಗಳೆಯ ತಂದೆ, ಮಂಗಲೆಯ ಗೆಳತಿಯರು, ಸಲಿಂಗಿ ಸರಾಫ್ಮೇಡಂ, ಲಾಯರುಗಳು, ಮಹಿಳಾವಾದಿ ಪಾತ್ರಗಳು ಬರುತ್ತವೆ.

ಆ ಕಡೆ ಇಷಾ-ಮತ್ತು ವಿನಯಚಂದ್ರರ ಕಥೆಗೆ ಪೂರಕವಾಗಿ, ವಿನಯಚಂದ್ರನ ಅಣ್ಣ -ಅತ್ತಿಗೆ ಮತ್ತು ಅವರ ಮಗ (ವಿನಯಚಂದ್ರನ ಮಗಳೊಡನೆ ಪ್ರೀತಿಯ ಒಡನಾಡಿ ಅಣ್ಣ), ರಾಜಕಾರಣಿ, ಅವನ ಹೆಂಡತಿ, ಹೆಣ್ಣು ಲಾಯರುಗಳು ಬರುತ್ತಾರೆ.

ಇದು ಮುಖ್ಯ ಕಥಾಹಂದರ. ಆದರೆ ಕಾದಂಬರಿಯ ಹರವನ್ನು ಅನುಭೂತಿ ಹೊಂದಬೇಕಾದರೆ ಪ್ರತಿಯೊಂದು ಸಾಲುಗಳು ಓದುಗನಿಗೆ ಅವಶ್ಯ.

ಕಥಾ ತಂತ್ರ : ಕಥೆಯ ಅಧ್ಯಾಯಗಳು ಮುಖ್ಯ ಪಾತ್ರಗಳ ಸ್ವಗತದೊಂದಿಗೆ ವಿವರವಾಗಿವೆ. ಒಮ್ಮೆ ಜಯಕುಮಾರ, ಒಮ್ಮೆ ಮಂಗಳೆ, ಒಮ್ಮೆ ಇಷಾ ಹಾಗೂ ಒಮ್ಮೆ ವಿನಯಚಂದ್ರ ಹೀಗೆ ಸರತಿಯ ಮೇಲೆ ಸ್ವಗತದಲ್ಲಿ ಕಥೆಯನ್ನು ಹೆಣೆಯುತ್ತಾರೆ. ಈ ನಡುವೆ ನಚಿಕೇತ-ರಾಜಕಾರಣಿ-ಪ್ರಭಾಕರ-ವಿನಯಕುಮಾರನಾ ತಾಯಿ ಹಲವಾರು ಸಂಧರ್ಭದಲ್ಲಿ ಮಾತಿನಲ್ಲಿ ತಮ್ಮ ಉಪಕಥೆಗಳನ್ನು ತೋಡಿಕೊಳ್ಳುತ್ತಾರೆ. ಕಾದ೦ಬರಿಯಲ್ಲಿ ಎಲ್ಲೂ ತಟಸ್ಥ ವಿವರಣೆ ಅಥವಾ ಲೇಖಕನ ನಿರೂಪಣೆಯಲ್ಲಿ ಬರಲಾರದ್ದು ಓದುಗರು ಗಮನಿಸಬೇಕಾದ ಮುಖ್ಯ ಅ೦ಶ. ಕೆಲವು ಅಧ್ಯಾಯಗಳು ಮಂಗಳೆ ಮತ್ತು ಜಯಕುಮಾರರ ಕಥೆಗಾದರೆ ಮತ್ತೆ ಕೆಲವು ಅಧ್ಯಾಯಗಳು ಇಷಾ-ವಿನಯಚಂದ್ರರ ಕಥೆಗಿದ್ದೂ ಒಂದರ ನಂತರ ಒಂದು ಬಂದಿವೆ. ಒಬ್ಬರೊಬ್ಬರ ಸ್ವಗತಗಳು ಉಪ-ಅಧ್ಯಾಯಗಳಾಗಿವೆ. ಸ್ವಗತಗಳ ಮುಖಾ೦ತರವೇ ಕಾದ೦ಬರಿಯ ಕಥೆಗಳು ಹರಿದಿವೆ, ಜೊತೆಗೆ ಕಥೆಯ ಮೇಲೆ ಆಯಾ ಪಾತ್ರಗಳ ದೃಷ್ಟಿಕೋನ ಅವರಿಂದಲೇ ಹೇಳಿಸಲ್ಪಟ್ಟಿದೆ. ಹೀಗಾಗಿ ಕಾದ೦ಬರಿಕಾರ ಕಾದ೦ಬರಿಯಲ್ಲಿ ಕಾಣುವದೇ ಇಲ್ಲ. ಪಾತ್ರಗಳೇ ಕಥೆ ಹೇಳುತ್ತವೆ ಮತ್ತು ಪರಸ್ಪರ ವಿಮರ್ಶಿಸಿಕೊಳ್ಳುತ್ತವೆ.

ಕಥೆಯ ಆಶಯ:
ಈ ಎರಡು ಸಮಾನಾಂತರ ಕಥೆಗಳ ಸಮ್ಮಿಲನದ "ಕವಲು" ಕಾದಂಬರಿಯಲ್ಲಿನ ಆಶಯಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು.
  • ಭಾರತೀಯ ಕೌಟುಂಬಿಕ ಮೌಲ್ಯಗಳು ಮತ್ತು ಪಾಶ್ಚ್ಯಾತ್ಯ ಕೌಟುಂಬಿಕ ಮೌಲ್ಯಗಳು ಮತ್ತು ಅವೆರಡರ ತುಲನೆ.
  • ಸ್ತ್ರೀ ಚಳುವಳಿಗಳು ಮತ್ತು ಸ್ತ್ರೀ ಪರ ಕಾನೂನುಗಳು -ಅದರ ವ್ಯಾಪ್ತಿ, ಉದ್ಧೇಶ, ಉಪಯೋಗ ಮತ್ತು ದುರುಪಯೋಗ. ಪಾಶ್ಚ್ಯಾತ್ಯ ಎರವಲು ಕಾನೂನುಗಳು ಭಾರತೀಯ ಕುಟುಂಬಕ್ಕೆ ಎಷ್ಟರಮಟ್ಟಿಗೆ ಪ್ರಸ್ತುತ -ಎಂಬುದರ ಮೀಮಾ೦ಷೆ.
  • ಮುಕ್ತ ಲೈಂಗಿಕತೆ ಅದರ ಪ್ರಸ್ತುತತೆ. ವಿಚ್ಛೇದನಾ ಕಾನೂನುಗಳಲ್ಲಿ ಗಂಡ-ಹೆಂಡತಿಯ ಸಂಭಂಧ ಮತ್ತು ಅವರ ಮಕ್ಕಳು ನೋಡುತ್ತದೆ ಹೊರತು ತಂದೆ ತಾಯಿ ಮತ್ತು ಇತರೆ ಅವಲಂಬಿತ ಕುಟುಂಬದ ಸ೦ಭ೦ಧಗಳ ಪರಿಗಣನೆಗೆ ತೆಗೆದು ಕೊಳ್ಳದ್ದು. ಅದಲ್ಲದೆ ಸ್ತ್ರೀ ಪರ ವರದಕ್ಷಿಣೆ, ವಿಚ್ಚೇದಿತ ಕಾನೂನುಗಳು ಹೇಗೆ ದುರುಪಯೋಗಪಡಲ್ಪಡುತ್ತವೆ.
  • ಪಾಶ್ಚ್ಯತೀಕಣ ಮೌಲ್ಯದ ಮೋಹದಲ್ಲಿ ಆಕರ್ಷಿತಗೊಳ್ಳುವ ಭಾರತೀಯ ಮನಗಳು ಸಮಗ್ರವಾಗಿ ತಮ್ಮನ್ನು ತಾವೂ ಅತ್ತವೂ ತೊಡಗಿಸದೆ, ಇತ್ತಲೂ ತೊಡಗಿಸದೆ ತೊಳಲಾಡುವ ಮತ್ತು ಸಂಭಂಧಗಳನ್ನು ತೊಳಲಾಡಿಸುವ ಪರಿ.
  • ಲೈಂಗಿಕ ಹಸಿವೆಗೆ ವೇಶ್ಯಾ/ವಿಟವೃತ್ತಿ ಅನಿವಾರ್ಯವೇ? ಸಲಿಂಗಕಾಮ ಸಹ್ಯವೇ?
  • ಜಾಗತೀಕರಣದ ವ್ಯವಹಾರಗಳಿಂದ, ಉಧ್ಯೋಗದಲ್ಲಿನ ಮಹದಾಶೆಗಳಿಂದ, ಹೆಚ್ಚು ಸಂಪಾದಿಸುವ ಹುಚ್ಚಿನಲ್ಲಿ, ಸಂಭಂಧಗಳು ಪೊಳ್ಳುಗೊಳ್ಳುತ್ತಿರುವ ಸ೦ಧರ್ಭ ಮತ್ತು ಮತ್ತು ಭಾರತೀಯ ಕುಟುಂಬದ ಮೌಲ್ಯಗಳು ಈ ನಿಟ್ಟಿನಲ್ಲಿ ಸಡಿಲವಾಗುತ್ತಿರುವ ಚಿತ್ರಣ.
ಕಾದ೦ಬರಿಯಲ್ಲಿನ ಬಾರತೀಯ ಕುಟುಂಬ ಮೌಲ್ಯಗಳ ಮಂಥನಗಳು:
  • ಸಂಕಲ್ಪ(commitment)ದಿಂದ ಪ್ರಾರಂಭವಾಗಿ, ಮನಗಳು ಪ್ರಾರಂಬದಲ್ಲಿ ತೊಡಗದೇ ಇದ್ದರೂ, ಕ್ರಮೇಣ ದೈಹಿಕ-ಮಾನಸಿಕ ಆಯಾಮಗಳಲ್ಲಿ, ಕುಟುಂಬದ ಇತರೇ ಹಿರೀ-ಕಿರಿ ಸಂಭಂಧಗಳ ಮಾರ್ಗದರ್ಶನ ಮತ್ತು ಪ್ರೀತಿಯಲ್ಲಿ ಒಂದಾಗಿ, ಪರಸ್ಪರರಲ್ಲಿ ಅನುರಕ್ತರಾಗಿ, ಗಟ್ಟಿಗೊಳ್ಳುವ ವೈವಾಹಿಕ ಸಂಭಂಧಗಳು. ಇದಕ್ಕೆ ಉದಾಹರಣೆ -ಮನಸ್ಸಿಲ್ಲದಿದ್ದರೂ ಮಾನಸಿಕ ಬೆಳವಣಿಗೆಯಲ್ಲಿ ಕುಂಠಿತಳಾದ ಪುಟ್ಟಕ್ಕನನ್ನು ಮದುವೆಯಾಗುವ ನಚಿಕೇತ ಕ್ರಮೇಣ ದಾಂಪತ್ಯದಲ್ಲಿ ಸಾಮರಸ್ಯ ಸಾಧಿಸಿ ಯಶಸ್ವೀಯಾಗುವದು, ಅಕ್ಕ-ಭಾವರ ಮಾರ್ಗದರ್ಶನದಲ್ಲಿ ವೈಜಯಂತಿಯನ್ನೂ ಮದುವೆಯಾಗಿ ಜಯಕುಮಾರ ದಾಂಪತ್ಯದಲ್ಲಿ ಯಶಸ್ವೀಯಾಗುವದು.
  • ಭಾರತೀಯ ನಾರಿ ತ್ಯಾಗ ಆದರ್ಶಗಳಲ್ಲಿ ಮನೆಯನ್ನು ನಡೆಸಿ, ಸಂಭಂಧಗಳನ್ನು ಗಟ್ಟಿಗೊಳಿಸುವದು - ಕುಡುಕ ಗಂಡನಿದ್ದರೂ ಅವನ್ನನ್ನು ಪ್ರೇಮದಿ೦ದ ಕಂಡು ದುಡ್ಡು ಕೊಟ್ಟು ತನ್ನ ಮುತ್ತೈದೆ ಭಾಗ್ಯ ಉಳಿದರೆ ಸಾಕೆಂದು ಪರೋಪಕಾರದಲ್ಲಿ (ಜಯಕುಮಾರ ಕುಟುಂಬಕ್ಕಾಗಿ , ಪುಟ್ಟಕ್ಕಳನ್ನು ಬೆಳೆಸುವಲ್ಲಿ) ಬದುಕನ್ನು ದೂಡುವ ದ್ಯಾವಕ್ಕ, ಸೊಸೆ ಸುಳ್ಳು ಆರೋಪ ನೀಡಿ ಜೈಲಿಗೆ ಹಾಕಿಸಿದರೂ ಸೊಸೆಯ ಮಗಳು ಆತ್ಮಹತ್ಯೆ ಮಾಡಿಕೊಂಡಾಗ ಅವಳನ್ನು ಕಾಣಲು ಹೋಗುವ- ವ್ಯೆಶ್ಯೆಯರ ಸಂಗ ಮಾಡಿ ಸಾಮಾಜಿಕವಾಗಿ ಹಾಗೂ ಔಧ್ಯೋಗಿಕವಾಗಿ ಹಾಳಾದ ಮಗನನ್ನು ಕ್ಷಮಿಸಿ ಅವನ ಬಾಳು ಹಸನು ಮಾಡಲು ಪ್ರಯತ್ನಿಸುವ ಜಯಕುಮಾರನ ತಾಯಿ, ಮನೆಕೆಲಸ ಒಪ್ಪ ಓರಣವಾಗಿ ಹಿರಿಕಿರಿಯರನ್ನು ಗೌರವಿಸುವ ವಿನಯಚಂದ್ರನ ಅತ್ತಿಗೆ, ಗಂಡನ ಕಚ್ಚೆಹರುಕತನ ಗೊತ್ತಿದ್ದರೂ ಅದನ್ನು ತಡೆಗಟ್ಟಲು ಗಂಡನೊಡನೆ ಹೋರಾಡದೆ ಅವನೊಡನೆ ಸಂಪರ್ಕದಲ್ಲಿರುವ ಹೆನ್ನುಗಲೊಡನೆ ಹೋರಾಡುವ ರಾಜಕಾರಣಿಯ ಪತ್ನಿ, ಇವುಗಳಿಗೆ ಉದಾಹರಣೆಯಾಗುವರು. ಈ ನಡುವೆ ಓದಿದ ವೈಜಯಂತಿ ಒಪ್ಪ ಓರಣವಾಗಿ ಮನೆಯನ್ನೂ ನಡೆಸಿ, ಮಗಳನ್ನೂ ಉತ್ತಮವಾಗಿ ಬೆಳಸಿ ಜೊತೆಗೆ ಆಫೀಸನಲ್ಲಿ ದುಡಿದು ಗಂಡನ ಯಶಸ್ಸಿಗೆ ಕಾರಣವಾಗಿರುತ್ತಾ ಆದರ್ಶ ಭಾರತೀಯ ಮಜಲಿನ ಪರಾಕಾಷ್ಠೆಯನ್ನೂ ಕಾದಂಬರಿಯಲ್ಲಿ ಕಾಣಬಹುದು.
  • ಲೈಗಿಂಕ ಸಂಭಂಧಗಳು ಯಶಸ್ವೀಯಾಗಲು ಮನ ಒಂದಾಗಿರಬೇಕು ಅದಕ್ಕೆ ಪರಸ್ಪರರಲ್ಲಿ ಗೌರವ ಪ್ರೀತಿ ಭಾವಗಳಿರಬೇಕು - ಮಂಗಳೆಯೊಡನೆ ಒತ್ತಾಯದಲ್ಲಿ ಮದುವೆಯಾದ ಜಯಕುಮಾರ ಅವಳೊಡನೆ ದೈಹಿಕ ಸಂಪರ್ಕದಲ್ಲಿ ವಿಫಲನಾಗುವದು, ಪುಟ್ಟಕ್ಕನಂತ ಮಾನಸಿಕ ಬೆಳವಣಿಗೆಯಾಗದ ಹೆಣ್ಣೋಡನೆ ಪ್ರೀತಿಯಿಂದ ಬೆರೆವ ನಚಿಕೇತ ಮಗುವನ್ನ ಪಡೆಯುವದು.
  • ಕುಟುಂಬದ ವ್ಯವಸ್ಥೆಯ ಎಲ್ಲ ಸಂಭಂಧಗಳ ಬೆಳವಣಿಗೆಗೆ ಆರ್ಥಿಕವಾಗಿ ಸಬಲರಿರುವವರು ನಿಲ್ಲುವದು- ಅತ್ತಿಗೆಯರ ಕಷ್ಟಕ್ಕೆ ಒದಗುವ ವಿನಯಚಂದ್ರ, ತಮ್ಮ ಜಯಕುಮಾರನ ಓದು ಮತ್ತು ಬೆಳವಣಿಗೆಗೆ ಕಾರಣಳಾಗುವ ಶೋಭಕ್ಕ ಮತ್ತು ಅವಳ ಗಂಡ, ಅಳಿಯ ನಚಿಕೇತನನ್ನು ಬೆಳೆಸುವ ಜಯಕುಮಾರ್-ವೈಜಯಂತಿ, ಮಾವನನ್ನು ಸ್ವಲ್ಪ ಕಾಲ ಸಾಕುವ ನಚಿಕೇತ, ತಾಯಿಯನ್ನು ಸಲಹುವ ಮಂಗಳೆ, ಜಯಕುಮಾರನ ಕಷ್ಟದಲ್ಲಿ ತಾನು ಕೂಡಿಟ್ಟ ಹಣ ವಿನಿಯೋಗಿಸುವ ಅವನ ತಾಯಿ ಹೀಗೆ ಹತ್ತು ಹಲವಾರು ಉದಾಹರಣೆ ನಿಲ್ಲುತ್ತವೆ.
  • ಭಾರತೀಯ ಉಡುಗೆ-ತೊಡುಗೆ-ಅಲಂಕಾರ ಮಹತ್ವ -ಕುಂಕುಮ ಬಳೆ ಸೀರೆ ಬಳಸಿದರೆ ಲಕ್ಷಣವಾಗಿದ್ದು ಮನೆ-ಮನ ಪ್ರಫುಲ್ಲವಾಗಿರುವದು ಎಂಬುದನ್ನು ವೈಜಯಂತಿ, ವಿನಚಂದ್ರನ ಅಣ್ಣನ ಹೆಂಡತಿ, ಪುಟ್ಟಕ್ಕಳ ಮುಖಾಂತರ ಹೇಳಿದೆ. ಹಾಗು ಇಲ್ಲದಿದ್ದರೆ ಸರಿಯಿರುವದಿಲ್ಲ ಎಂಬುದನ್ನು ಮಂಗಳೆ ಮತ್ತು ಇಶಾರ ಮುಖಾಂತರ ಕೆಲವು ಪಾತ್ರಗಳು ಹೇಳಿವೆ (ಮಂಗಳೆ ಪ್ರಭಾಕರನಿಗೆ ರುಚಿ ಇದ್ದರೆ ಅರುಚಿ ಹಾಗೂ ಇಷಾ ರಾಜಕಾರಣಿಗೆ ರುಚಿ ಇದ್ದರೆ ವಿನಯಚಂದ್ರಗೆ ಅರುಚಿ).
  • ಈ ನಡುವೆ ಭಾರತೀಯ ಕಂದಾಚಾರಗಳು ಎತ್ತಿ ತೋರಿಸಲ್ಫಟ್ಟಿವೆ- ಕುಟುಂಬಕ್ಕೆ ಗಂಡು ಬೇಕೆನ್ನುವ ಜಯಕುಮಾರನನ್ನು ವೈಜಯಂತಿ ಪುಟ್ಟಕ್ಕ ಏಕೆ ಆ ಸ್ಥಾನಕ್ಕೆ ಅರ್ಹಳಲ್ಲ ಎಂದು ವಾದಿಸಿ ಅವನ್ನನ್ನು ಒಪ್ಪಿಸುವದು, ಹೆಣ್ಣು ಮನೆಗೆ ಸೀಮತವಾಗಿರದೆ ವ್ಯವಹಾರಗಳಲ್ಲೂ ತೊಡಗಿಸಿಕೊಳ್ಳುವದು -ವೈಜಯಂತಿ ಉದಾಹರಣೆ ಮುಖಾಂತರ ತೋರಿಸಿ ಭಾರತೀಯ ಮನಗಳಲ್ಲಾಗಬೇಕಾಗಿರುವ ಬದಲಾವಣೆಗಳನ್ನ ಹೇಳಲಾಗಿದೆ.
  • ಲೈಂಗಿಕ ಸ್ವಾತಂತ್ರ ಮುಕ್ತತೆಯಿಂದ ಭಾರತೀಯ ಗಂಡುಗಳು ಅನುಭವಿಸಬೇಕಾದ ಪಾಡು ಗಳನ್ನ -ಇಷಾಳ ಸಂಪರ್ಕಕ್ಕೆ ಬಂದ ರಾಜಕಾರಣಿ ಪಾತ್ರ, ಮಂಗಳೆ ಸಂಪರ್ಕಕ್ಕೆ ಮತ್ತು ವೆಶ್ಯಯರ ಸಂಪರ್ಕಕ್ಕೆ ಬರುವ ಜಯಕುಮಾರಣ ಮುಖಾಂತರ ವಿವರಿಸಲ್ಪಟ್ಟಿದೆ.
  • ಲೈಂಗಿಕ ಮುಕ್ತತೆಯಿಂದ ಹೆಣ್ಣು ಭಾರತೀಯ ಮನಗಳ ನಡುವೆ ಪಡುವ ಪಾಡನ್ನು ಮಂಗಳೆ ಮತ್ತು ಇಶಾರ ಮಲಕ ಹೇಳಲ್ಪಟ್ಟಿದೆ.
  • ಹೆಂಡತಿ ಸಮಭಾಗಿಯಾಗಿ ದುಡಿದರೂ ಅವಳನ್ನುಳಿಗೆ ಸಂಸ್ಥೆಯಲ್ಲಿ ಪಾಲುದಾರಳನ್ನಾಗಿ ಮಾಡದೆ ಹೋದದ್ದಕ್ಕೆ ಆಗುವ ಪರಿಣಾಮಗಳು. (ಜಯಕುಮಾರನ ಸಂಸ್ಥೆಯನ್ನೂ ಕಟ್ಟಿ ಬೆಳಸುವದರಲ್ಲಿ ಹೆಚ್ಸಿನಪತ್ರ ವಹಿಸಿದ್ದ ವೈಜಯಂತಿಗೆ ಅದರಲ್ಲಿ ಪಾಲೇ ಇರುವದಿಲ್ಲ.
  • ಈ ನಡುವೆ ಜಯಕುಮಾರನ ಮಿತ್ರ ಶೇಖರ್ - ಒಬ್ಬರಿಗೊಬ್ಬರು ಹೇಗೆ ಸಹಾಯವಾಗುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುತ್ತಾರೆ. ಅವರು ಅವನನ್ನು ಎರಡು ಸಲ ಜೈಲಿಂದ ಬಿಡಿಸುವಲ್ಲಿ ಮತ್ತು ಉಧ್ಯಮವನ್ನ ಮರುಸ್ಥಾಪನೆ ಮಾಡಿಸುವಲ್ಲಿ ನೆರವಾಗುತ್ತಾರೆ. ಒಂದು ಕಡೆ ಅವನ್ ವೇಶ್ಯಾಸಂಗಕ್ಕೆ ಅವರು ಕಾರಣರಾಗಿರುತ್ತಾರೆ.
ಕಾದ೦ಬರಿಯಲ್ಲಿನ ಭಾರತೀಯ ಮನಗಳಲ್ಲಿ ಪಾಶ್ಚಾತ್ಯ ಕುಟುಂಬ ಮೌಲ್ಯಗಳ ಮಂಥನಗಳು:
  • ಪರಸ್ಪರ ಆಕರ್ಷಣೆಯಿಂದ "ಒಟ್ಟಿಗಿರುವದರಿಂದ (living together) ಪ್ರಾರಂಭವಾಗುವ ಸಂಭಂಧಗಳು ಭಾರತೀಯ ಮನದಲ್ಲಿ ಊರ್ಜಿತವಾಗದೆ ಇರುವದು- ನಚಿಕೇತ ಒಟ್ಟಿಗಿರುವದರಿಂದ ಪ್ರಾರಂಭಿಸಿದ ಸ೦ಭಂಧ ಊರ್ಜಿತವಾಗದೆ ಇದ್ದಾಗ ಅದನ್ನು ಪಾಶ್ಚ್ಯಾತ್ಯರಂತೆ ಸಾಮಾನ್ಯವಾಗಿ ತೆಗೆದುಕೊಳ್ಳದೆ ಕೊರಗುವದು, ಪ್ರಭಾಕರನೊಡನೆ ಲೈಗಿಂಕ ಸಂಪರ್ಕಕ್ಕೆ ಬರುವ ಪಾಶ್ಚ್ಯತ್ಯ ಮತ್ತು ಅಧುನಿಕ ಧೋರಣೆಯಲ್ಲಿ ಮುಂದುವರೆಯುವ ಮಂಗಳೆ ಗರ್ಭವತಿಯದಾಗ ಗರ್ಭವನ್ನು ತೆಗೆಸಲು ಅವಳಲ್ಲಿನ ಭಾರತೀಯ ಮನ ಅಡ್ಡ ಬರುವದು, ಗಂಡನೊಡನೆ ಹೋಗದೆ ಅವನನ್ನು ಬಿಟ್ಟಿರದೆ ತೊಳಲಾಡುವ ಇಷಾಳು, ಕಾನೂನು ಮೊರೆ ಹೊಕ್ಕು ವಿಚ್ಛೇದನೆ ತೆಗೆದುಕೊಂಡರೂ ಮನದ ಕೊರಗಲ್ಲಿ ಉಳಿವ ಮಂಗಳೆ ಹೀಗೆ ಹಲವಾರು ಸಂಧರ್ಭಗಳಲ್ಲಿ ಉದಾಹರಣೆ ದೊರೆಯುತ್ತದೆ.
  • ಸ್ತ್ರೀ ಸಮಾನತೆಯ ಹೆಸರಲ್ಲಿ ಮುಕ್ತ ಲೈಂಗಿಕತೆಗೆ ಆಕರ್ಷಿತರಾಗಿ ಅದನ್ನು ಅನುಭವಿಸಿ ಅದರ ಪರಿಣಾಮ ಮತ್ತು ಅನುಭವಗಳನ್ನೂ ಸಹಜ ಎಂದು ಪರಿಗಣಿಸದೆ ತೊಳಲಾಡುವ ಪಾತ್ರಗಳು.
ಕಾದಂಬರಿಯಲ್ಲಿನ ಕುಟುಂಬ ಕಾನೂನು ಮಂಥನ:
  • ಸಣ್ಣ ಕಾರಣಕ್ಕೆ ಅತ್ತೆ ಸೊಸೆ ಜಗಳಾಡಿ, ಸೊಸೆ ವರದಕ್ಷಿಣೆ ಕಾನೂನಡೀ ಅತ್ತೆಯನ್ನು ಜೈಲಿಗೆ ಕಳಿಸುವದು ಮತ್ತು ಆಮೇಲೆ ಆ ಕೇಸನ್ನು ಹಿಂತೆಗೆಯಲಾಗದೇ ಅವಳಿಗೆ ಶಿಕ್ಷೆ ಆಗುವದು. (ಜಯಕುಮಾರ ಅತ್ತಿಗೆ ಮತ್ತು ತಾಯಿ ನಡುವೆ)
  • ಗಂಡ -ಹೆಂಡತಿ ಜಗಳದಲ್ಲಿ ಹೆಂಡತಿಗೆ ಕೈ ಎತ್ತಿದ ಪ್ರಸಂಗದಲ್ಲಿ ಹೆಂಡತಿ ದೂರು ನೀಡಿ ಅವನ್ನನ್ನು ಮಾನಸಿಕ ಕಿರುಕುಳದ ಅಡೀ ಜೈಲಿಗಟ್ಟುವದು. (ಮಂಗಳೆ-ಜಯಕುಮಾರ)
  • ಪರಿಹಾರ ಪಡೆಯುವ ಉದ್ಹ್ಧೆಶದಲ್ಲಿ ನಚಿಕೇತನನ್ನು ಮದುವೆಯಾಗಿ ಆಮೇಲೆ ವಿಚ್ಛೇದನೆ ಪಡೆದು ವಂಚಿಸುವ ವಿದೇಶೀ ಮಹಿಳೆ (ಅವಳು ಇದನ್ನು ಉದ್ಹ್ಯೋಗವನ್ನಾಗಿಸಿರುತ್ತಾಳೆ!)
  • ವೇಶ್ಯಾವಾಟಿಕೆಯಲ್ಲಿ ತೊಡಗುವದು ಅದರಿಂದ ಕಾನೂನು ಕ್ರಮಕ್ಕೊಳಗಾಗುವದು. ಜಯಕುಮಾರನ ತಾಯಿ ತಪ್ಪಲ್ಲ ಎನ್ನುವದರ ಮುಖಾಂತರ ವಿಧುರ ಮತ್ತು ಮನೆಯಲ್ಲಿ ಸುಖ ಸಿಗದ ಗಂಡು ವೇಶ್ಯೇಯಾರಲ್ಲಿ ಲೈಂಗಿಕ ದಾಹ ತೀರಿಸಿಕೊಳ್ಳುವದು ಸಹಜ ಎಂಬತಿದೆ. ಇತಿಹಾಸದಲ್ಲೂ ಇದು ಇತ್ತು ಇನ್ನು ಸಮರ್ಥನೆಯು ಇದೆ.
  • ವಿನಯಚಂದ್ರ ಚಾಣಾಕ್ಷವಾಗಿ ಒಲ್ಲದ ಹೆಂಡತಿಯಿಂದ(ಇಷಾ) ವಿಚ್ಛೇದನೆ ಪಡೆಯಲು ಅವಳನ್ನು ದೂರ ಮಾಡುವದು, ಲೈಂಗಿಕ ಹಸಿವಿನ್ನಲ್ಲಿಡುವದು, ಅವಳು ಬೇರೆಯವನೊಡನಿರುವಾಗ ಚಿತ್ರಗಳನ್ನೂ ತೆಗೆದು ಸುಲಭದಲ್ಲಿ ವಿಚ್ಛೇದನೆ ಪಡೆಯುವ ತಂತ್ರ.
  • ಕುಟುಂಬ ಕನುನುಗಳನ್ನು ಉಪಯೋಗಿಸಿ ಅದಲಿತವರ್ಗದವರು ಹಣ ಮಾಡುವ ತಂತ್ರವನ್ನು ಒಬ್ಬ ಮಹಿಳಾಪೋಲಿಸ್ ಅಧಿಕಾರಿ ಪಾತ್ರದಲ್ಲಿ ಹೇಳಲಾಗಿದೆ.
ವೈಭವ ವಿಲಾಸೀ ಜೀವನ ಕ್ರಮ : ಇಷಾ ಮತ್ತು ವಿನಯಚಂದ್ರರ ಕಥೆಯಲ್ಲಿ ಹೆಚ್ಚು ಸಂಪಾದಿಸಿ, ವೈಬ್ಹೊವೆಪೆತ ಜೀವನ ನಡೆಸುವ ಕುಟುಂಬದಲ್ಲಿನ ಸ೦ಭಂಧಗಳ ಕುಸಿತ ಜೊತೆಗೆ ಹೆಣ್ಣು ಸ್ವತಂತ್ರ ಮನೋಭಾವದಲ್ಲಿ ವರ್ತಿಸಿದಾಗ ಆಗುವ ಪರಿಣಾಮಗಳು ವಿಶದವಾಗಿವೆ. ಮಂಗಳೆಯ ಜೀವನ ಕ್ರಮ ಸಹಾ.

ನನ್ನ ವಿಚಾರ :
  • ಕಾದಂಬರಿಯ ಆಶಯ ಪ್ರಸ್ತುತ ಕಾಲಕ್ಕೆ ಔಚಿತ್ಯ ಪೂರ್ಣವಾಗಿದ್ದು ಕಾದಂಬರಿ ಈ ಹರವಿನಲ್ಲಿ ಸಾಕಷ್ಟು ಪರಿಶ್ರಮ ಹೊಂದಿದೆ. ಆದರೆ ಎಲ್ಲ ಸ್ವತಂತ್ರ ಮನೋಭಾವ ಹೊಂದಿದ ಸ್ತ್ರೀ ಪಾತ್ರಗಳು ನಕಾರಾತ್ಮಕವಾಗಿ ಆಡಿಸಲ್ಪಟ್ಟಿವೆ. ಈ ಕಾರಣಕ್ಕಾಗಿ ಸ್ತ್ರೀ ವಿರೋದ್ಧಿ ದೋರಣೆಯ ಕಾದಂಬರಿ ಎನ್ನುವ ಅಪಾಯ ತಪ್ಪಿಸಿಕೊಳ್ಳಲಾಗಿಲ್ಲ. ವೈಜಯಂತಿಯ ಪಾತ್ರ ಮಾತ್ರ ಅಪವಾದ. ಆದರೆ ಆ ಪಾತ್ರ ಕೇವಲ ಬೇರೆಯವರ ಸ್ವಗತದಲ್ಲಿ ಬರುವ ಪಾತ್ರವಾಗಿದ್ದರಿಂದ ಓದುಗರಿಗೆ ಅದರ ಕಡೆ ಗಮನ ಹರಿಯುವದಿಲ್ಲ.
  • ಒಟ್ಟಿನಲ್ಲಿ- ಸಂಕಲ್ಪವಿಲ್ಲದ ಆಕರ್ಷಣಾ ಪ್ರೇಮಗಳು ಹೆಚ್ಚು ಗಟ್ಟಿಯಾಗಲಾರವು, ಪ್ರೀತಿಯಲ್ಲಿ ಅಧಿಕಾರ ಚಲಾಯಿಸಿದರೆ ಅದು ಅಧಿಕಾರವಾಗಲಾರದು, ಅಧಿಕಾರಯುತವಾಗಿ ಪ್ರೀತಿ ಪಡೆಯಲೆತ್ನಿಸಿದರೆ ಅದು ಸಂಪೂರ್ಣ ವೇಧ್ಯವಾಗದು, ಮನಗಳು ತೊಡಗದೇ ಲೈಂಗಿಕ ಕ್ರಿಯೆಗಳು ಸಂತೃಪ್ತಿಯಲ್ಲಿ ಮುಗಿಯವು, ತ್ಯಾಗವಿಲ್ಲದೆ ಪ್ರೀತಿ ಅರಳದು, ಕುಟುಂಬವೆಂದರೆ ಬರಿ ಗಂಡ ಹೆಂಡತಿ ಮತ್ತು ಅವರ ಪ್ರಾಪ್ತರಲ್ಲದ ಮಕ್ಕಳು ಎಂಬ ಸೀಮಿತ ಅರ್ಥದ ಕಾನೂನಿನ ಔಚಿತ್ಯವಲ್ಲ, ಕುಟುಂಬ ಎಂದರೆ ಎಲ್ಲ ಸಂಭಂಧಗಳು ಸೇರಬೇಕು ಎಂಬ ನೀತಿಗಳು ಕಾದಂಬರಿಯಲ್ಲಿ ಸಿಗುತ್ತೆ.
  • ಎರಡು ಕಥೆಗಳು ಸೇರಿ ಹರವು ದೊಡ್ಡದಾಗಿ ಮತ್ತು ಹೇಳಬೇಕಾದ ಅ೦ಶಗಳು ಹೆಚ್ಚಾಗಿ ಯಾವದೂ ಪ್ರಭಾವಕಾರಿಯಾಗಿ ಹೇಳಲಾಗದೆ ಹೋಗಿದೆ. ಕೇವಲ ಒಂದು ಕಥೆ ತೆಗೆದುಕೊಂಡು ಯಾವದೇ ಒಂದು ವಿಚಾರದ ಸುತ್ತ ಮಂಥನ ನಡೆದಿದ್ದರೆ ಚೆನ್ನಾಗಿರುತ್ತಿತ್ತು ಎನಿಸಿತು.
  • ಪ್ರಭಾಕರ ಮತ್ತು ರಾಜಕಾರಣಿ-ಯಂಥ ಪಾತ್ರಗಳು ಭಾರತೀಯ ಮೌಲ್ಯಗಳ ದುರುಪಯೋಗದಲ್ಲಿ ಹೆಣ್ಣನ್ನು ಉಪಯೋಗಿಸುವದಕ್ಕೆ ನಿಂತಿರುವಾಗ, ಬೇಕಾದ ಖಂಡನೆ ಕಾದಂಬರಿಯಲ್ಲಿ ಕಾಣಲಿಲ್ಲ.
  • ಜಯಕುಮಾರನು ಆಧುನಿಕ ಹೆಸರಲ್ಲಿ ತನ್ನ ವಿಧುರ ಜೀವನದಲ್ಲಿ ಮಜಾ ಪಡೆಯಲು ನೋಡುವದರಿಂದ ಮಂಗಳೆ ಮಾಡಿದ್ದು ಒಮ್ಮೆ ಸರಿಯೇನ್ನಿಸಬಹುದು.
  • ಸಂಕಲ್ಪದಲ್ಲಿ ಅರಳಿದ ಸಂಬಂಧಗಳಲ್ಲಿ ಪ್ರೀತಿ ತಾನೇ ಸುರಿದು ಅವು ಗಟ್ಟಿಯಾಗುತ್ತವೆ.
  • ಪುರುಷರ ತಪ್ಪುಗಳು ಸ್ವಾಭಾವಿಕ ( ವಿವಾಹೇತರ ಸಂಭಂಧಗಳು) ಎನ್ನುವಷ್ಟು ದಾರ್ಷ್ಟ್ಯವಾಗಿ ಮಹಿಳೆಯ ಸಂಭಂಧಗಳು ಸ್ವಾಭಾವಿಕ ಎನ್ನದ ಧೋರಣೆ ಮೆಚ್ಚುಗೆಯಾಗಲಿಲ್ಲ. ತಪ್ಪೆಂದರೆ ಇಬ್ಬರದೂ ತಪ್ಪೇ, ಅಲ್ಲವೆಂದರೆ ಇಬ್ಬರದೂ ತಪ್ಪಿಲ್ಲ.
  • ಪಾಶ್ಯಾತ್ಯ ಅನುಕರಣೆ ಮಾಡಿದರೂ ನಮ್ಮ ಭಾರತೀಯ ಮನಗಳು ಸಂಪೂರ್ಣ ಪರಿವರ್ತಿತವಾಗದು. ಈ ನಿಟ್ಟಿನಲ್ಲಿ ನಮ್ಮ ಸ೦ಸ್ಕ್ರತಿಗೆ ತಕ್ಕ ಹಾಗಿದ್ದು, ಪಾಶ್ಚಾತ್ಯ ಜ್ಞಾನವನ್ನು ಪಡೆದು ಉಧ್ಯೋಗ ಮತ್ತು ಆರ್ಥಿಕ ಕ್ಷೇತ್ರದಲ್ಲಿ ನಾವು ಪ್ರಗತಿ ಸಾಧಿಸಬಹುದು-ವೈಜಯಂತಿ ತರಹ.
  • ಜೀವನದ ಮಟ್ಟದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಸ್ತರಗಳು ನಮ್ಮ ಮನೋಧರ್ಮವನ್ನು ಸಂಪೂರ್ಣ ಬದಲಾರಗಿಸಲಾರದ ಮಟ್ಟದಲ್ಲಿ ಆಳವಿರುವದರಿಂದ ಅದರಲ್ಲಿ ಪಾಶ್ಯಾತ್ಯ ಧೋರಣೆ ಅಳವಡಿಕೆ ಕಷ್ಟ. ಆದರೆ ಅದನ್ನು ನಾವು ವಿಧ್ಯೆ ಉಧ್ಯೋಗ ದಲ್ಲಿ ರೂಡಿಸಿಕೊಳ್ಳಬಹುದು.
  • ಕಾದಂಬರಿ ಹಸರು ಹೇಳುವ ಹಾಗೆ ನಮ್ಮ ಭಾರತೀಯ ಮನಗಳು ಇತ್ತ ಭಾರತೀಯ ಮೌಲ್ಯಗಳನ್ನು ಸಂಪೂರ್ಣ ಬಿಡದೇ, ಅತ್ತ ಪಾಶ್ಚ್ಯಾತ್ಯ ಮೌಲ್ಯಗಳನ್ನು ಸಂಪೂರ್ಣ ಅಪ್ಪಿಕೊಳ್ಳದೇ ತೊಳಲಾಡುತ್ತಾ"ಕವಲು" ದಾರಿಯಲ್ಲಿವೆ. ಯಾವಕಡೆ ಹೋಗಬೇಕು ಯಾವಕಡೆ ಇರಬೇಕು ಎಂಬುದರ ವಿಚಕ್ಷಣೆ ಬೇಕು. ಈ ನಿಟ್ಟಿನಲ್ಲಿ ಕವಲು ಓದುಗರ ಮನದಲ್ಲಿ ಸಾಕಷ್ಟು ತರಂಗಗಗಳನ್ನೆಬ್ಬಿಸುವದು.
  • ಆದರೆ ಎರಡು ಕಥೆಗಳನ್ನು- ಅದೊಂದು ಸ್ವಲ್ಪ ಇದೊಂದು ಸ್ವಲ್ಪ ಹೇಳುತ್ತಾ ಹೋಗುವದರಿಂದ ಓದುಗರಿಗೆ ಓದಿನ ಓಟ ಕಷ್ಟವೆನಿಸುತ್ತದೆ. ಜೊತೆಗೆ ಹಲವಾರು ವಿಷಯಗಳು-ಮೌಲ್ಯ, ಸಂಭಂಧಗಳು, ಕಾನೂನು, ಲೈಂಗಿಕತೆ, ಸ್ತ್ರೀ ಸಮಾನತೆ, ಆಧುನಿಕತೆ-ಸನಾತನತೆ, ಹೀಗೆ ಹಲವಾರು ವಿಷಯಗಳ ಸುತ್ತ ಹರಿಯುವದರಿಂದ ಓದುಗರಿಗೆ ಸ್ವಲ್ಪ ಕವಲಿನ ದಾರಿಯೇ ಎನಿಸುವದು.
  • ಎಲ್ಲ ಆಧುನಿಕ ಧೋರಣೆ ಮತ್ತು ಸ್ತ್ರೀ ಸಂಘಟನೆಗಳ ಮಹಿಳೆಯರು (ಕಾದಂಬರಿಯಲ್ಲಿ ಬರುವ) ನಕಾರಾತ್ಮಕ ಧೋರಣೆ ಇರುವದರಿಂದ ಜನ ಕಾದ೦ಬರಿ ಸ್ತ್ರೀ ಧೋರಣಾವಾದಿಗಳ ವಿರೋಧಿಯೆಂಬ ನಿಲುವಿಗೆ ಬರಬಹುದು.
ಒಟ್ಟಿನಲ್ಲಿ ಕಾದಂಬರಿ ಸಮಕಾಲೀನ ಪರಿಸ್ಥಿತಿಯಲ್ಲಿನ ಭಾರತೀಯ ಮನಗಳ ತಮ್ಮ ಪರಂಪರಾಗತ ಮೌಲ್ಯ ಮತ್ತು ಆಧುನಿಕ ಮೌಲ್ಯಗಳ ಮನ್ವಂತರದ ಕವಲಿನಲ್ಲಿ ನಿಂತು ದ್ವಂದ ಎದುರಿಸುವಲ್ಲಿನ ಕ್ಷಣಗಳನ್ನು, ಒಂದನ್ನೂ ಪೂರ್ತಿ ಬಿಡದ, ಒಂದನ್ನೂ ಪೂರ್ತಿ ಅಪ್ಪಿಕೊಳ್ಳದ ಸಂಧರ್ಭಗಳಲ್ಲಿ ಸಂಭಂಧಗಳು ಹಾಗೂ ಕುಟುಂಬ ವ್ಯವಸ್ಥೆ ಸಡಿಲಳವಾಗುತ್ತಿರುವ ಚಿತ್ರಣವನ್ನ ಮೂಡಿಸುವ ಪ್ರಯತ್ನವಾಗಿದೆ.
ಎರಡು ಕಥೆ ಮತ್ತು ಹಲವಾರು ವಿಷಯಗಳ ಸುತ್ತಲಿನ ಚಿಂತನ ಏಕ ಕಾದಂಬರಿಯಲ್ಲಿ ಮೂಡಿ ಯಾವದೇ ಒಂದು ವಿಷಯ ಸದೃಡ ಹರಳುಗಟ್ಟಲು ಆಗಿಲ್ಲ ಹಾಗೂ ಮಂಥನ ಓದುಗರನ್ನು ಕೆಣಕುವ ಮಟ್ಟಕ್ಕೆ ಹೋಗಿಲ್ಲ. ಈ ನಡುವೆ ಓದುಗರು ಕಾದಂಬರಿ ಅಭಿವ್ಯಕ್ತಿ ಗಳನ್ನು ಭೈರಪ್ಪನವರದ್ದಾಗಿಸಿ ಆ ವಿಷಯಗಳಿನ ತಮ್ಮ ಅಭಿಪ್ರಾಯ ಮೂಸೆಯಲ್ಲಿ ಅವರ ಪರ-ವಿರೋಧಿ ನಿಲುವಿಗೆ ನಿಲ್ಲುವದಾಗಲಿ ಅಥವಾ ಅವರ ಹಿಂದಿನ ಕಾದ೦ಬರಿಗಳಿಗೆ ಹೋಲಿಸಿ ಇದು ಉತ್ತಮ ಅಥವಾ ಕಳಪೆ ಎನ್ನುವ ವಿಮರ್ಶೆಗೆ ನಿಂತು ಕಾದಂಬರಿಯಲ್ಲಿನ ಆಶಯಗಳು ಸರಿಯಾದ ಮಂಥನವಿಲ್ಲದೆ ಸೊರಗುವ ಸಾಧ್ಯತೆ ಇಲ್ಲದೆ ಇಲ್ಲ!

(ಚಿತ್ರಗಳ ಕೃಪೆ : ಕನ್ನಡಿ ಅಂಗಡಿ ಅಂತರ್ಜಾಲ ತಾಣ ಮತ್ತು ಭೈರಪ್ಪನವರ ಅಂತರ್ಜಾಲ.
ಭೈರಪ್ಪನವರ ಬಗೆಗಿನ ಮಾಹಿತಿ ಕೃಪೆ : ವಿಕಿಪೀಡಿಯಾ ಅಂತರ್ಜಾಲ ತಾಣ)

Tuesday, August 10, 2010

ನೊರೆಹಾಲಿನ ಸಮುದ್ರೋಪಾದಿ ಜಲಪಾತ (ದೂದಸಾಗರ ಫಾಲ್ಸ್)

ಅದೊಂದು ರುದ್ರ ರಮಣೀಯ ಕಣ್ನೋಟ!
ಕರ್ನಾಟಕ -ಗೋವಾ ಸರಹದ್ದಿನಲ್ಲಿ ಗೋವಾ ರಾಜ್ಯದಲ್ಲಿ, ಸಹ್ಯಾದ್ರಿ ಬೆಟ್ಟದ ತಪ್ಪಲಿನಲ್ಲಿ ಮಾಂಡೋವಿ ನದಿಯು ಸುಮಾರು ೩೦೦ ಮೀಟರ ಎತ್ತರದಿಂದ ಸರಿಸುಮಾರು ೩೦-೩೫ ಮೀಟರ್ ಅಗಲದಲ್ಲಿ , ಗ್ರಾನೈಟ್- ನಿಸ್ಸ್ ಎಂಬ ಹೆಬ್ಬಂಡೆಯ ಮೇಲಿಂದ ಸರಸರನೆ, ನೊರೆನೊರೆಯಾಗಿ, ಧುಮ್ಮಿಕ್ಕುತ್ತಾ, ಅಗಲವನ್ನು ಕವಲುಗಳನ್ನಾಗಿ ಹೆಚ್ಚಿಸುತ್ತಾ, ಇಳಿದಿಳಿದಂತೆ, ಮತ್ತೆ ಒಗ್ಗೂಡುತ್ತಾ, ವಜ್ರಾಕೃತಿಯಲ್ಲಿ, ಹಾಲಿನ ನೊರೆಯಂತೆ, ಸಾಗರೋಪಾದಿಯಲ್ಲಿ, ಧುಮ್ಮಿಕ್ಕಿ ಹರಿವ, ನಯನ ಮನೋಹರ ನೋಟ ಎಂತಹ ಅರಸಿಕನ ಮೈಯನ್ನು ಜುಮ್ಮೆನ್ನಿಸದೆ ಬಿಡದು!

ಅದಕೆಂದೇ ಇದನ್ನು ದೂದಸಾಗರ ಜಲಪಾತ ಎಂದು ಇದನ್ನು ಕರೆಯುವದು.

ಇದಕ್ಕೊಂದು ಕಥೆಯು ಇದೆ. ನದಿ ತಟದ ಹತ್ತಿರದ ಅರಮನೆಯಲ್ಲಿದ್ದ ರಾಜಕುಮಾರಿಯೋರ್ವಳು ನಿತ್ಯ ಈ ನದಿಯಲ್ಲಿ ಸ್ನಾನ ಮಾಡುತ್ತಿದ್ದಳಂತೆ. ಒಂದು ದಿನ ಅವಳು ಸ್ನಾನ ಮಾಡುತ್ತಿದ್ದಾಗ ರಾಜಕುಮಾರನೋರ್ವನು ಅಲ್ಲಿಗೆ ಬಂದಾಗ ನಾಚಿದ ನಗ್ನ ರಾಜಕುಮಾರಿ ಅಲ್ಲಿಯೇ ಇದ್ದ ಪಾತ್ರೆಯಲ್ಲಿನ ಹಾಲನ್ನು ಮೈ ಮೇಲೆ ಸುರಿದುಕೊಂಡಳಂತೆ ನಗ್ನತೆ ಮುಚ್ಚಲು. ಹಾಲು ಮೈ ಮೇಲಿಂದ ಹರಿದು ಹೋಗುವಷ್ಟರಲ್ಲಿ ಸಖಿಯರು ಉಡುಗೆ ತೊಡಿಸಿದ್ದರು. ಆ ಹರಿದ ಹಾಲು ನದಿ ಸೇರಿ ನೀರು ಹಾಲಾಯಿತಂತೆ. ಇದೊಂದು ಸುಮ್ಮನೆ ಪೂರಕ ಕಥೆ.

ಆದರೆ ಆ ಜಲಪಾತ ನೋಡಿದಾಗ ನೀರು ಕಲ್ಲಿನ ಮೈಯಲ್ಲಿ ನೊರೆನೊರೆಯಾಗಿ ಸರಿವಾಗ, ಅಚ್ಚ ಬಿಳುಪಿನ ರಾಶಿ ಮುತ್ತಂತೆ ಹರವಿದಾಗ, ಈ ದಂತ ಕತೆ ನಿಜವಿರಬಹುದೇನೋ ಎಂದು ಯಾರಿಗೂ ಅನ್ನಿಸದೆ ಇರದು!

ಈ ಜಲಪಾತ ನೋಡಲು ಹುಬ್ಬಳ್ಳಿಯ ಅಥವಾ ಬೆಳಗಾವಿಯಿಂದ ಗೋವೆಗೆ ಹೋಗುವ ರೈಲಿನ ಮಾರ್ಗ -ತಲುಪಲು ಉತ್ತಮ ವ್ಯವಸ್ಥೆ. ಎಲ್ಲಾ ರೈಲುಗಳು ದೂದಸಾಗರ ನಿಲ್ದಾಣದಲ್ಲಿ ನಿಲ್ಲುತ್ತವೆ. ನಿಲ್ದಾಣದ ಪಕ್ಕವೇ ಜಲಪಾತ. ಬಸ್ಸಿನಲ್ಲಿ ಕೊಲೆಮ್-ಗೆ ಬಂದು ಅಲ್ಲಿಂದ ಜೀಪ ಅಥವಾ ಕಾರಿನಲ್ಲಿ ಇಲ್ಲಿಗೆ ಬರಬಹುದು. ಆದರೆ ರೈಲಿನ ಮಾರ್ಗ ಉತ್ತಮ.
ಟ್ಯಾಕ್ಷಿಯಲ್ಲಿ ಅಥವಾ ಸ್ವಂತ ಕಾರಿನಲ್ಲಿ ಬರುವ ಜನ ಕರ್ನಾಟಕದ ಅನಮೋಡ/ಕ್ಯಾಸಲ್ ರಾಕ್ ಅಥವಾ ಗೋವೆಯ ಮೊಲ್ಲೇಮ್ ನಿಂದ ಪಯಣಿಸಬಹುದು.

ಕ್ಯಾಸಲ್ ರಾಕ್ ನಿಲ್ದಾಣಕ್ಕೆ ಬಂದು, ಅಲ್ಲಿಂದ ರೈಲಿನಲ್ಲಿ ದೂದಸಾಗರಕ್ಕೆ ಪಯಣಿಸಬಹುದು. ರೈಲಿನಲ್ಲಿನ ಪಯಣದಲ್ಲಿ, ನೀವು ಇದನ್ನು ಪಕ್ಕದಲ್ಲಿಯೇ ನೋಡಿ ಅನುಭವಿಸಬಹುದು. ಹಾಗೆ ನಾನು ಹೋಗುತ್ತಿರುವ ರೈಲಿನಿಂದ ತೆಗೆದ ಚಿತ್ರಗಳು ಇಲ್ಲಿವೆ.
ಇಲ್ಲಿನ ನೀರಿನಲ್ಲಿ ಸ್ನಾನ ಮಾಡಬಹುದು ಹಾಗೂ ಜಲಕ್ರೀಡೆಯಾಡಬಹುದು. ಅದಕ್ಕಾಗಿ ಜಲಪಾತದ ಸ್ತರದಲ್ಲಿ ೩-೪ ಸ್ಥಳಗಳಲ್ಲಿ ಮಡುವಿದೆ.
ಸಹ್ಯಾದ್ರಿಯ ಸುತ್ತಲಿನ ಹಸಿರು, ಇನ್ನು ಹತ್ತು ಇಪ್ಪತ್ತು ತೊರೆಗಳು, ಕಣಿವೆಗಳು, ಸುರಂಗಗಳು, ನಾನಾಜಾತಿಯ ಗಿಡ-ಮರ-ವೃಕ್ಷಗಳು ಮನಸ್ಸನ್ನ ಸೂರೆಗೊಳಿಸುತ್ತವೆ. ಸಾರಂಗ, ಜಿಂಕೆ, ಕಾಡುಕೋಣ, ಕಾಳಿಂಗ, ಮೊಲ, ನವಿಲು, ನರಿ, ಇಲ್ಲಿನ ಅರಣ್ಯದಲ್ಲಿ ಸಾಮಾನ್ಯವಾಗಿ ಕಾಣುವ ಪ್ರಾಣಿಗಳು.

ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಲ್ಪ ತಿರುಗಾಡಿದರೆ ಕಾಡುಪ್ರಾಣಿಗಳನ್ನು ನೋಡಬಹುದು. ಚಾರಣಿಗರು ಕ್ಯಾಸಲ ರಾಕ್-ನಿಂದ ರೈಲು ದಾರಿಯಲ್ಲಿ ನಡೆದು ಇಲ್ಲಿಗೆ ಬಂದರೆ (ಸುಮಾರು ೮-೧೦ಕಿಮಿ) ಪ್ರಕೃತಿಯ ರಮ್ಯತೆಯೊಂದಿಗೆ ಜಲಪಾತದ ಸೊಬಗನ್ನು ಸವಿಯಬಹುದು.
ನಾನು ವಿಧ್ಯಾರ್ಥಿಯಾಗಿದ್ದಾಗ ಭೂಗರ್ಭ ಅಧ್ಯಯನದ ನಿಮಿತ್ತ ಸುಮಾರು ಒಂದು ತಿಂಗಳ ಕಾಲ ಈ ಬೆಟ್ಟದಲ್ಲಿ ಸರ್ವೇಕ್ಷಣೆ ಮಾಡಿದ ಮಧುರ ನೆನಪು ನನ್ನಲ್ಲಿ ಸದಾ ಹಸಿರು.

ಜಲಪಾತದ ಮೇಲ್ತುದಿ


ಜಲಪಾತದ ಮೇಲ್ತುದಿಯಿಂದ ಮಧ್ಯದ ಹಂತ (ರೈಲ್ವೆ ಹಳಿಯವರೆಗಿನ ನೋಟ)

ಮತ್ತೊಂದು ಅದೇ ನೋಟ

ಇನ್ನೊಂದು ಅದೇ ನೋಟ

ರೈಲ್ವೆ ದಾರಿಯಲ್ಲಿ ದೂದಸಾಗರ್ ಜಲಪಾತದ ಪಕ್ಕದಿಂದ ಹರಿದು ಆಮೇಲೆ ತಿರುಗಿ ಎದುರಿನ ಬೆಟ್ಟದಲ್ಲಿ ರೈಲು ಬರುವಾಗ (ಗೋವೆ ಕಡೆ ಮುಖಮಾಡಿ ಪಯಣಿಸುವಾಗ) ಮತ್ತೆ ಜಲಪಾತದ ಪೂರ್ಣ ನೋಟ ದೂರದಿಂದ ಲಭ್ಯ . ನಡುವೆ ರೈಲ್ವೆ ಹಳಿಯ ಸೇತುವೆ ಕಾಣಬಹುದು. ಚಿತ್ರದ ಮೇಲೆ ಕ್ಲಿಕ್ಕಿಸಿ ದೊಡ್ಡದಾಗಿ ಮಾಡಿ ನೋಡಿದರೇ ರೈಲಿನ ಸೇತುವೆ ಸುಂದರವಾಗಿ ಕಾಣುತ್ತೆ.
ಅದೇ ಚಿತ್ರ ಮತ್ತೊಂದು ಕೋನದಲ್ಲಿ