Thursday, July 26, 2018

ಓದಿನ ಅನುಭವಯಾನ - ಹಂಸಯಾನ (ಕಾದಂಬರಿ)- ತೇಜಸ್ವಿನಿ ಹೆಗಡೆ -ಜಯಶ್ರೀ ಪ್ರಕಾಶನ


ಬಹಳ ದಿನಗಳ (ವರ್ಷಗಳೇ ಇರಬಹುದು) ನಂತರದ ನನ್ನ ಓದಿನ ಯಾನ ಮತ್ತೆ ಪ್ರಾರಂಭವಾಗಿದ್ದು ಬ್ಲಾಗ್ ಸಹೃದಯಿ  ತೇಜಸ್ವಿನಿಯವರ "ಹಂಸಯಾನ" ಕಾದಂಬರಿಯೊಂದಿಗೆ,,,

ಕಾದಂಬರಿಯ ಸುಂದರ ಚಿತ್ರ, ಅದಕ್ಕೆ ಪೂರಕವಾದ ಹೆಸರು  ಜೊತೆಗೆ ತೇಜಸ್ವಿನಿಯವರ ಬರಹದ ಬಗ್ಗೆ ಗೊತ್ತಿದ್ದ ನಾನು, ಇದನ್ನು ಯಾವದೋ ಪ್ರೇಮ ಅಥವಾ ಸಾಮಾಜಿಕ ಕಾದಂಬರಿ (ನನ್ನ ಅಲ್ಪಾಸಕ್ತಿ ವಿಷಯ) ಎಂಬ ಪೂರ್ವಕಲ್ಪಿತದೊಡನೆ ಸಹೃದಯಿಯ ಬರಹ ಎನ್ನುವ ಓಘದೊಡನೆ ಓದನ್ನು ಪ್ರಾರಂಭಿಸಿದೆ.. ಅರ್ಪಣೆ ಓದುತ್ತಿದ್ದ ಹಾಗೆ ನನ್ನ ಕಲ್ಪಿತ ಇನ್ನೂ ಸ್ಪಷ್ಟವೆನಿಸಿತು... ಶ್ರೀಮತಿ ಜ್ಯೋತಿಯವರ ಮುನ್ನುಡಿ ಮಾತ್ರ ಓದಿನ ಕುತೂಹಲವನ್ನು ಹೆಚ್ಚಿಸಿ, ಏನೋ ಒಂದು ರಹಸ್ಯ ಭೇಧನೆ ಇದೆ ಎನ್ನುವ ಸುಳುಹಿನೊಂದಿಗೆ, ಪತ್ತೇದಾರಿ ಕಾದಂಬರಿ ಪ್ರಿಯನಾದ ನನಗೆ ಓದಿನ ಆಸಕ್ತಿ ಇನ್ನೂ ಹುಟ್ಟಿಸಿತು, ಜೊತೆಗೆ ಸಿಂದೂರಾವ್ ರ ಬೆನ್ನುಡಿ- ಕಾದಂಬರಿಯಯು ಗಟ್ಟಿ ಹಿಡಿತದ ಸರಕು ಹೊಂದಿದೆ ಎಂಬ ವಿವರಣೆಯೊಂದಿಗೆ, ಕಾದಂಬರಿಯನ್ನುಓದಲು ಬಲವಾದ ದೃಢತೆ ಮೂಡಿಸಿತು... 

ಲೇಖಕಿಯ ಮುನ್ನುಡಿಯು ಕಾದಂಬರಿ ಗುಟ್ಟು ಬಿಟ್ಟು ಕೊಡಲಿಲ್ಲ... 
ಕಾದಂಬರಿ ಪ್ರಾರಂಭದ ಸಾಲುಗಳನ್ನು ಓದುತ್ತ ಇದ್ದ ಹಾಗೆ ಆಸಕ್ತಿ ಹೆಚ್ಚುತ್ತಾ... ಹೋಯಿತು.... ಕಥೆ ಓದುತ್ತಿದ್ದಂತೆ ಓದಲ್ಲಿ ಕಳೆದಿದ್ದ ನಾನು ಕಣ್ಣೆತ್ತಿ ನೋಡುವ ಘಳಿಗೆಯಲ್ಲಿ (ಅದು ಯಾರೋ ಕರೆದುದ್ದಕ್ಕೆ) ಪುಸ್ತಕದ ೭೦ ಪುಟಗಳನ್ನೂ ಓದಿಯಾಗಿತ್ತು ಒಂದೇ ಯಾನದಲ್ಲಿ...   
ಮತ್ತೆ ರಾತ್ರಿ ಹಿಡಿದು ಕುಳಿತರೆ ಮುಗಿಸಿಯೇ ಮಲಗಲು ಎದ್ದಿದ್ದು... 
ಮಧ್ಯೆ ಮಧ್ಯೆ ಕೊನೆಯ ಅಧ್ಯಾಯ ಮೊದಲು ಓದೋಣ ಎನಿಸಿದ್ದು ಉಂಟು ಆ ಪರ್ಯಾ ಕುತೂಹಲ ... 
ಹಂಸಯಾನದ ಬಗ್ಗೆ ಹೇಳಬೇಕೆಂದರೇ 
ಅದೊಂದು ಭಾವಯಾನ.. ವಿಸ್ಮಯಯಾನ..   ರಹಸ್ಯಯಾನ... ಅಧ್ಯಾತ್ಮಯಾನ.. ಜೀವನಯಾನ... ಲೌಕಿಕ ಯಾನ...  

ಕಾದಂಬರಿ ನಾವು ಪತ್ತೇದಾರಿ, ಸಾಮಾಜಿಕ, ಆಧ್ಯಾತ್ಮಿಕ, ಎಂದೆಲ್ಲ ಒಂದೇ ಶಬ್ದದಲ್ಲಿ ಹಿಡಿದಿಡಲಾಗದ ಮತ್ತು ಎಲ್ಲವನ್ನು ಬಿಡಲಾಗದ ಒಂದು ವಿನೂತನ ಪ್ರಯೋಗದ ಕಾದಂಬರಿ.. 

ಯಾನದ ಹಂಸೆ ಮಹತಿ ಹೊಂದಾಣಿಕೆಯ, ಎಲ್ಲರಲ್ಲೂ ಒಂದಾಗುವ, ಎಲ್ಲರನ್ನು ನಂಬುವ ಮತ್ತು ಅಷ್ಟೇ ಹುಷಾರಿನಲ್ಲಿ ವ್ಯವಹರಿಸುವ ಚತುರೆ.  ಬಾಲ್ಯದ ಆಘಾತಗಳ ದುಸ್ವಪ್ನಗಳೊಂದಿಗೆ ಬದುಕನ್ನು ಚೆಲ್ಲದೇ ಅದನ್ನು ಚೊಕ್ಕವಾಗಿ ಬೆಳೆಸಿ... ಬಾಲ್ಯದ ಆಘಾತಗಳ ಹಿಂದಿನ ರಹಸ್ಯ ಶೋಧನೆಗೆ ತನ್ನನ್ನು ತಾನು ಪ್ರೇರೇಪಿಸಿ, ಸಾಹಸಯಾನ ಪ್ರಾರಂಭಿಸಿ ಆದ್ಯಾತ್ಮಯಾನ ಮತ್ತು ಲೌಕಿಕಯಾನದಲ್ಲಿ ವಿಸ್ಮಯಗಳನ್ನು ಛೇದಿಸಿ... ದುಸ್ವಪ್ನಗಳನ್ನು ಶಾಶ್ವತವಾಗಿ ನಿವಾರಿಸುವ ಯಾನವೇ.. ಕಾದಂಬರಿ ಹೂರಣ. 

ಬದುಕಿನ ಪಾತ್ರಗಳು ಹಾಗೂ ಅವುಗಳ ಒಪ್ಪ ಚಿತ್ರಣ ಕಾದಂಬರಿಯ ಮುಖ್ಯ ಅಂಶಗಳಾಗಿದ್ದು  ಎಲ್ಲೂ ಲೇಖಕಿಯ ಮೊದಲ ಹೆಜ್ಜೆ (ಕಾದಂಬರಿ) ಎನಿಸುವದೇ ಇಲ್ಲ. ಪ್ರತಿಯೊಂದು ಪಾತ್ರ ಚಿತ್ರಣ, ಘಟನಾವಳಿಗಳು, ಒಂದೊಂದು ಒಂದಕ್ಕೆ ಪೂರಕವೆನಿಸಿ ಓದುಗರನ್ನು ಓದಿನಲ್ಲಿ ಬಿಗಿಹಿಡಿಯುವಲ್ಲಿ ಗೆದ್ದಿವೆ. ೧೭೦ ಪುಟಗಳಲ್ಲಿನ ಸಂಯಮದ ಕಥಾಯಾನ ಕುತೂಹಲವನ್ನು ಹೆಚ್ಚಿಸುತ್ತ ಇದ್ದರೇ, ಮುಂದಿನ ೭೦ ಪುಟಗಳಲ್ಲಿ ನಾಗಾಲೋಟದ ಯಾನವಾಗಿ ಎಲ್ಲ ಕುತೂಹಲವನ್ನು ತೊಳೆದಿಡುತ್ತದೆ. ಹೀಗಾಗಿ ಮೊದಲಿನ ೧೭೦ ಪುಟದ ಭಾಗ ಎಳೆಯಲ್ಪಟ್ಟಿತೆ... ಅಥವಾ ಕೊನೆಯ ೭೦ ಪುಟಗಳ ಭಾಗ ಅವಸರಿಸಲ್ಪಟ್ಟಿತೆ.. ಎನ್ನುವ ಭಾವ ಓದುಗನಲ್ಲಿ ಬಂದರೂ ಯಾವದು ಸರಿ ಎನ್ನುವ ತೀರ್ಮಾನಕ್ಕೆ ಬರಲು ಆಗುವದಿಲ್ಲ. ಏಕೆಂದರೆ ಮೊದಲಿನ ಭಾಗ ಓದುವಾಗ ಅವನಿಗೆ ಎಳೆದಂತೆ ಅನಿಸದೇ ಕುತೂಹಲ ಹೆಚ್ಚಿ ಯಾವಾಗ ವಿಸ್ಮಯ ಹರೀದೀತು ಎನ್ನುವ ತವಕದಲ್ಲಿರುವಾಗ... ಮುಂದಿನ ಭಾಗದಲ್ಲಿ ಅದು ವೇದ್ಯವಾಗುವಾಗ ಅಲ್ಲಿ ಶಬ್ದಗಳು ಕಡಿಮೆ ಆದವೇನೋ .. ಇನ್ನು ಹೇಳಬೇಕಿತ್ತೇನೋ ಎನ್ನುತ್ತಿರುವ ಭಾವದಲ್ಲಿ ಎಲ್ಲ ವಿಸ್ಮಯಗಳು ಬೇಗ ಪರಿಹಾರವಾದವೆಲ್ಲ ಎಂಬ ಅನುಭೂತಿ...  ಅದೂ ಸರಿ ಎಂದು ಒಪ್ಪುವ ದ್ವಂದ್ವತೆಗೆ  ಓದುಗನನ್ನು ದೂಡುತ್ತದೆ.  ಆದರೂ ಗುಡ್ಡದಜ್ಜನ ವಿಸ್ಮಯ,  ಕಣ್ಣಿಲ್ಲದಿದ್ದರೂ ಎಲ್ಲವನ್ನು ಸ್ಪಷ್ಟವಾಗಿ ನೋಡಬಲ್ಲ ಕುರುಡು ಕಾಳವ್ವಜ್ಜಿ ಇನ್ನೂ ಬೇಕಾಗಿತ್ತು ಎನ್ನುವ ತುಡಿತ ಓದುಗರನ್ನು ಕಾಡುವದಂತೂ ನಿಜ. ನಚಿಕೇತನ ಚಿತ್ರಣ ಇನ್ನು ಬೇಕಿತ್ತು ಎನಿಸುತ್ತದೆ. ಅವರಿಬ್ಬರ ಪ್ರೇಮಕಥೆಯಾಗಿ ಕಾದಂಬರಿ ಮುಂದುವರಿಯಬೇಕಿತ್ತು ಎಂದೂ ಎನಿಸುತ್ತದೆ.   ಕೊನೆಯಲ್ಲಿನ ಇಂದುಲೇಖ ಕಥೆಗಾರ್ತಿ ಹೆಸರು ಓದುಗರನ್ನು ವಿಸ್ಮಯಕ್ಕೆ ಒಡ್ಡುವ ತಂತ್ರವು ವಿಶಿಷ್ಟವೆನಿಸುತ್ತದೆ. 

ಪರಮಹಂಸರ ಅಧ್ಯಾತ್ಮದ ತಿರುಳನ್ನು, ಅನುಭವಗಳನ್ನೂ, ಅನುಭೂತಿಗಳನ್ನು, ದಾಖಲೆಗಾಗಿ ದಾಖಲಿಸಿ ಓದುಗರ ಕಲ್ಪನೆಗೆ ಬಿಟ್ಟು... ಅನುಭೂತಿಗಳನ್ನು ಅಕ್ಷರದಲ್ಲಿ ಬಂಧಿಸುವ ಕ್ರಿಯೆಯಲ್ಲಿ ಅದು ತೆಳು ಅನುಭವವಾಗುವ ಅಪಾಯವನ್ನು  ಹೇಳುತ್ತಾ ಓದುಗರ ಕಲ್ಪನಾ ಓಘಾಲೋಟಕ್ಕೆ ಬಿಡುವ ಲೇಖಕಿಯ ಪರಿ ನಿಜಕ್ಕೂ ಅಭಿನಂದನೀಯ. 

ಪತ್ತೇದಾರಿ ಕಾದಂಬರಿ ಎಂದು ಸಾಮಾನ್ಯ ಓದುಗನಿಗೆ ಅನಿಸಿದರೆ, ಭಾವುಕರಿಗೆ ಭಾವಯಾನ, ಆಧ್ಯಾತ್ಮಿಕ ಒಲವಿನ ಓದುಗರಿಗೆ ಅಧ್ಯಾತ್ಮಯಾನ ಎನಿಸುತ್ತದೆ. 

ಇನ್ನೂ  ಬೇಕೇನುತ್ತಿರುವಾಗಲೇ ಕಾದಂಬರಿ ಅಂತಿಮ ರಹಸ್ಯಗಳನ್ನು ತೆರೆದಿಟ್ಟು ಮುಕ್ತಾಯಕ್ಕೆ ದೂಡುತ್ತದೆ.  ಓದುಗನಿ ರಹಸ್ಯ ಛೇದವಾದ ಸಂತಸದಲ್ಲಿ ಕಾದಂಬರಿ ಹರಹು ಇನ್ನು ಬೇಕಿತ್ತು ಎನ್ನುವ ಭಾವ ನಗಣ್ಯವಾಗುತ್ತದೆ. 

ಒಟ್ಟಿನಲ್ಲಿ ಕಾದಂಬರಿ ಕುತೂಹಲದಲ್ಲಿ ಓದಿಸಿ,  ಬಹುಕಾಲ ಮನದಲ್ಲಿ ಉಳಿಯುವಂತಹದು.
3 comments:

ತೇಜಸ್ವಿನಿ ಹೆಗಡೆ said...

ತುಂಬು ಮನದ ಕೃತಜ್ಞತೆಗಳು ಸರ್! ಸಹೃದಯ ಓದುಗರು, ಅವರ ಮುಕ್ತ ಅನಿಸಿಕೆಗಳೇ ಬರಹಗಾರರಿಗೆ ಪ್ರೇರಣೆ ಹಾಗೂ ಸ್ಫೂರ್ತಿ. _/_ :)

ವಿ.ರಾ.ಹೆ. said...

ಹತ್ತಿರ ಹತ್ತಿರ ಮೂರು ವರ್ಷಗಳ ನಂತರ ಬ್ಲಾಗಿನಲ್ಲಿ ಬರಹ ಮೂಡಿಸಿದ್ದೀರಿ. :) 'ಹಂಸಯಾನ' ಪುಸ್ತಕದ ಬಗ್ಗೆ ಬರೆದಿದ್ದು ಚೆನ್ನಾಗಿದೆ. ಪುಸ್ತಕ ನಾನು ಓದಿದ್ದೇನೆ. ಅದು ಕೂಡ ಚೆನ್ನಾಗಿದೆ. ನೀವೂ ಬರೆಯುತ್ತಿರಿ....

sunaath said...

ನನ್ನ ಗಣಕಯಂತ್ರದ ಸಮಸ್ಯೆಯಿಂದಾಗಿ ಲೇಖನವನ್ನು ಈ ಮೊದಲೇ ಓದಲು ಸಾಧ್ಯವಾಗಲಿಲ್ಲ. ‘ಹಂಸಯಾನ’ವು ಸುಂದರವಾಗಿದೆ. ಅದರ ಬಗೆಗಿನ ಲೇಖನವೂ ಸಹ ಅಷ್ಟೇ ಸುಂದರವಾಗಿದೆ. ಅಭಿನಂದನೆಗಳು.