Thursday, June 17, 2021

ಸಾಸಿವೆ ತಂದವಳು -ಓದಿನ ಮೆಲುಕು


 

ಹಲವಾರು ಸಹೃದಯರ ಸೂಚನೆ, ಉಲ್ಲೇಖ ಮತ್ತು ಪ್ರಶಂಶೆಯ ನುಡಿಗಳಿಂದ ಪ್ರೇರಿತನಾಗಿ ಶ್ರೀಮತಿ ಭಾರತಿಯವರು ಬರೆದ "ಸಾಸಿವೆ ತಂದವಳು" ಪುಸ್ತಕವನ್ನ  ಓದಲು ತರಿಸಿದೆ.  ಪುಸ್ತಕ ತರಿಸಿ ಸುಮಾರು ಒಂದು ವರ್ಷವೇ ಕಳೆದರೂ  ಓದಲಾಗಿರಲಿಲ್ಲ.  ಹಲವು ವೈಯುಕ್ತಿಕ ಕೆಲಸ ಕಾರ್ಯ,  ಕೆಲವು ದಿನ ಮಿತ್ರರೊಬ್ಬರ ತಂದೆಗೆ  ಓದಲು ಕೊಟ್ಟಿದ್ದು, ಸಮಯ ಸಿಕ್ಕಾಗ ಓದಲು ಹಿಡಿದಾಗ ಹಿನ್ನುಡಿ, ಮುನ್ನುಡಿ , ಲೇಖಕರ ಮಾತು ಮತ್ತು  ಅರ್ಪಣೆಗಳನ್ನೆಲ್ಲಾ ಓದಿಯೇ ಕುಖ್ಯಾ ಕಥಾಧಾರೆಗೆ ಮುಂದುವರೆಯುವ ಅಭ್ಯಾಸದ  ನನಗೆ, ಹೀಗೆ ಹಲವಾರು ಕಾರಣಗಳಿಂದ  ಮುಖ್ಯ ಅನುಭವ ಕಥಾನಕಕ್ಕೆ ಪ್ರವೇಶ ಮಾಡಲಾಗಿರಲಿಲ್ಲ. ನೇಮಿಚಂದ್ರರ ನಲ್ಮೆಯ ಮುನ್ನುಡಿ ಮುನ್ನುಡಿಯಾಗಿರದೇ  ಅನುಭವ ಕಥಾನಕದ  ಕಿರುರೂಪವಾಗಿದ್ದು,ಒಂದು ರೀತಿಯಲ್ಲಿ ಮುಖ್ಯ ಕಥೆಯ ಸಂಹವನದ ಕುತೂಹಲವನ್ನ ಹಣಿಯುತ್ತಿದ್ದು ಓದಿನ ಓಟಕ್ಕೆ ಅಡ್ಡಿಯಾದ ಇನ್ನೊಂದು ಕಾರಣ. 

ಕಥೆಯ ಮುಖಚಿತ್ರವೇ ಕಥೆಯ ಮುಖ್ಯ ತಿರುಳನ್ನು ಹೇಳುತ್ತದೆ. ಮಂಡಿಯೂರಿ ತಲೆಯಲ್ಲಿ ಕೂದಲಿಲ್ಲದ (ಕ್ಯಾನ್ಸರ್ ಪೀಡನೆಯ ರೂಪಕ)  ದಯನೀಯ ದೇಹವನ್ನು ಅದೇ ದೇಹದ ನಿಂತ ರೂಪಕ ದೇಹವೊಂದು ತಬ್ಬಿ ಸಾಂತ್ವನ ಗೊಳಿಸುತ್ತಿರುವ ಚಿತ್ರ. ಕಥೆಯಲ್ಲಿಯೂ ಹೇಳ ಹೊರಟಿದ್ದು  ಕ್ಯಾನ್ಸರ್ ಗೆ ತುತ್ತಾಗಿ   ಶರೀರವೇ ಯಾತನಾಮಯವಾಗಿರುವಾಗ ಸ್ ಆತ್ಮ ಸ್ಥೈರ್ಯದಲ್ಲಿ ಒಳದನಿಯೆ ಶಕ್ತಿಯಾಗಿ ಸಂತೈಸಿ ಎದ್ದು ನಿಲ್ಲಿಸುವ ಛಲವಾಗಿ, ಹೋರಾಟದ ಶಕ್ತಿಯಾಗಬೇಕಾದ  ಸೂಕ್ತ ರೂಪಕ ಚಿತ್ರ. ಕ್ಯಾನ್ಸರ್  ರೋಗಕ್ಕೆ  ತುತ್ತಾಗಿ ಸಾವು-ಬದುಕಿನ    ಹೋರಾಟದ ನಡುವೆ, ಆತ್ಮ ಸ್ಥೈರ್ಯದಿಂದ ಎದುರಿಸಿ ಎದ್ದು ನಿಲ್ಲುವ ಲೇಖಕಿಯ ಸ್ವಾನುಭವವೇ  ಕಥೆಯ ಹಂದರ. ಹಾಗಾಗಿ ಇದೊಂದು ವಾಸ್ತವಿಕ ಕಥನ.. 

ಈ ಕಥಾನಕದಲ್ಲಿ ಬದುಕನ್ನು ಬದುಕುವ ಬಗೆಯಲ್ಲಿನ, ಸಂಕಷ್ಟಗಳನ್ನು  ದಿಟ್ಟತನದಲ್ಲಿ  ಎದುರಿಸುವಲ್ಲಿನ ಮತ್ತು  "ಸಾವೇ ಇನ್ನು" ಎನ್ನುವ ರೋಗದೊಡನೆ ಸೆಣಸಾಡುವಲ್ಲಿನ, ಹೋರಾಟದಲ್ಲಿ ಆತ್ಮ ಸ್ಥೈರ್ಯ, ಮನದ ಗಟ್ಟಿಗಾರಿಕೆ, ಬದುಕನ್ನು ಪ್ರೀತಿಸುವಲ್ಲಿನ ಛಲ,  ಹೇಗೆ ಸಹಕಾರಿಯಾಗಬಲ್ಲದು ಎಂಬುದನ್ನು ಲೇಖಕಿ ಸರಳ ಮತ್ತು ಸುಂದರ  ನವಿರು ಹಾಸ್ಯಭರಿತ ಲಾಲಿತ್ಯದಲ್ಲಿ ತಮ್ಮ ಸ್ವಂತ ಅನುಭವಗಳನ್ನು ಹಿಡಿದಿಟ್ಟಿದ್ದು  ಓದುಗರಿಗೆ ಆಸಕ್ತಿದಾಯಕವೂ ಆಗಿ ಮುಂದೊಂದು ದಿನ ಇಂತಹ ಸಂದರ್ಭದಲ್ಲಿ  ಮುಂದುವರೆಯುವ ಆತ್ಮಸ್ಥೈರ್ಯವನ್ನು ನೀಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.  ಕ್ಯಾನ್ಸರ್ ಗೆ ತುತ್ತಾದ ಲೇಖಕಿಯ ಈ ಸ್ಫೂರ್ತಿದಾಯಕ  ಹೋರಾಟದ ಚಿತ್ರಣ ಕೇವಲ ಕ್ಯಾನ್ಸರ್ ರೋಗಿಗಳಿಗೆ ಅಷ್ಟೇ ಅಲ್ಲ  ಯಾವದೇ ಮಾರಣಾಂತಿಕ ರೋಗಗಳಿಗೆ ತುತ್ತಾದವರಿಗೆ ರೋಗಗಳನ್ನು  ಎದುರಿಸಿ,  ನಿಲುವ  ತಾಕತ್ತು ಮತ್ತು ಮೋನೋಸ್ಥೈರ್ಯ  ನೀಡುವಲ್ಲಿ ಮಹತ್ತ ಪಾತ್ರ ವಹಿಸುವಲ್ಲಿ ಯಾವದೇ ಶಂಕೆಯಿಲ್ಲ. 
ಆಪ್ತ ಭಾಷೆ,  ಸುತ್ತ ಮುತ್ತ ನಡೆಯುವ  ದೈನಂದಿಕ  ,ನೈಜ್ಯ ಜನರ ವರ್ತನೆ, ಅದರಿಂದಾದ  ತುಮುಲ,ಹೊರಬರುವ ಲೇಖಕಿಯ ಅಪರೂಪದ ಮನಸ್ಥಿತಿ, ಮತ್ತು ಎಲ್ಲವನ್ನು ಸಾಮಾನ್ಯ ಎಂದುಕೊಳ್ಳುವ ಪರಿ, ನಮಮ್ ಸುತ್ತಮುತ್ತಲಿನ ಜನರ ಮನಸ್ಥಿತಿ, ಸ್ಪಂದನೆ  ಮತ್ತು ಅವುಗಳಿಗೆ ಪ್ರತಿಯಾಗಿ ನಮ್ಮ ಭಾವನೆ ಎಲ್ಲವನ್ನು ಸೂಕ್ಷ್ಮವಾಗಿ ಹಿಡಿದಿಟ್ಟು ಬದುಕಲ್ಲಿ ಎದ್ದು ನಿಲ್ಲುವ ಛಲವನ್ನು ತುಂಬುವಲ್ಲಿ ಕಥಾನಕವು  ಒಂದು ಮನೋವಿಶ್ಲೇಷಣೆಯೂ ಸಹಾ ಆಗಿದೆ.   

ಇದನ್ನು ಓದಿ ಮುನ್ನುಡಿ ಬರೆಯಿರಿ ಎಂದರೆ,  ಕಥಾನಕ ಓದಿ, ಓದಿನಲ್ಲಿ ಎಷ್ಟೊಂದು ಪ್ರಭಾವವಿತರಾಗುತ್ತೇವೆಂದರೇ ಕಥೆಯ ಬಗ್ಗೆ ಹೇಳುವದಕ್ಕಿಂತಾ,  ಕಥೆಯನ್ನೇ  ಸಂಕ್ಷಿಪ್ತವಾಗಿ  ಹೇಳ  ಹೊರಡುತ್ತೇವೆ  ನೇಮಿಚಂದ್ರರ ತರಹ ಅಷ್ಟೊಂದು ಮಾಂತ್ರಿಕತೆಯ  ಭಾರತಿಯವರದ್ದು. 

ಬದುಕಿನಲ್ಲಿ ಧನಾತ್ಮಕ  ದೃಷ್ಟಿಕೋನಕ್ಕೆ,  ಕಷ್ಟಗಳಲ್ಲಿ ಎದ್ದು ನಿಲ್ಲುವ ಛಲ ದಲ್ಲಿ, ಕ್ಯಾನ್ಸರ್ ನಂತಾ ಮಾರಾಣಾಂತಿಕ ರೋಗಗಳನ್ನು ಎದುರುಸುವಲ್ಲಿ ತೊಡಗಬೇಕಾದ ಮನಸ್ಥಿತಿಗೆ, ಬದುಕನ್ನು ಎದುರಿಸುವ, ಮತ್ತು ಬದುಕಿನ ಸವಾಲುಗಳನ್ನು ಎದುರಿಸುವಲ್ಲಿ ನಮ್ಮ ಆತ್ಮಸ್ಥೈರ್ಯ, ಮನೋಭಾಳ ಬೆಳೆಸುವಲ್ಲಿ ಈ ಕೃತಿ ಮದ್ದಿನ   ಹಾಗೆ ಕೆಲಸ ಮಾಡುತ್ತದೆ. ಇಂದಿನ  ಸಾಂಕ್ರಾಮಿಕ ಕರೋನ ರೋಗ ಚಿಕಿತ್ಸೆಗಳನ್ನು ಎದುರಿಸುವಲ್ಲಿ  ಹಾಗೂ   ತಡೆಯುವಲ್ಲಿಯೂ,  ಮನಸ್ಥಿತಿಯನ್ನು ತಯಾರು ಮಾಡಲು ಈ  ಕಥೆಯ ಓದು ತಯಾರು ಮಾಡುತ್ತದೆ. 

ರೋಗಕ್ಕಿಂತಾ  ಅದರ  ಚಿಕಿತ್ಸೆ ವಿಧಾನಗಳೇ ಭಯಾನಕ  ಎಂದು ಕ್ಯಾನ್ಸರ್ ನ ಮೇಲಿನ ಟಿಪ್ಪಣೆ... ಇದು    ಕರೋನ ರೋಗದ ಚಿಕಿತ್ಸೆಗೂ ಹೀಗೆಯೇ ಇದೆ.   ಇಂತಹ   ಟಿಪ್ಪಣೆಗಳೇ  ರೋಗಿಗಳ  ಆತ್ಮಸ್ಥೈರ್ಯ ಉಡುಗಿಸಿ  ರೋಗದೊಡಗಿನ ಹೋರಾಟದಲ್ಲಿ  ಶಸ್ತ್ರ   ಕೆಳಹಾಕಿಸಿಬಿಡುವ  ಸಂಧರ್ಭಗಳೇ  ಹೆಚ್ಚು  ಸಂದರ್ಭದಲ್ಲಿ ಭಾರತಿಯವರ ಈ ಅನುಭವ ಕಥಾನಕ  ಕೆಲಸ ಮಾಡುತ್ತದೆ. 

ಇಂಥ ಒಂದು ಕೃತಿಗೆ  ಭಾರತಿಯವರಿಗೆ ಅಭಿನಂದನೆಗಳು. 

Thursday, July 26, 2018

ಓದಿನ ಅನುಭವಯಾನ - ಹಂಸಯಾನ (ಕಾದಂಬರಿ)- ತೇಜಸ್ವಿನಿ ಹೆಗಡೆ -ಜಯಶ್ರೀ ಪ್ರಕಾಶನ


ಬಹಳ ದಿನಗಳ (ವರ್ಷಗಳೇ ಇರಬಹುದು) ನಂತರದ ನನ್ನ ಓದಿನ ಯಾನ ಮತ್ತೆ ಪ್ರಾರಂಭವಾಗಿದ್ದು ಬ್ಲಾಗ್ ಸಹೃದಯಿ  ತೇಜಸ್ವಿನಿಯವರ "ಹಂಸಯಾನ" ಕಾದಂಬರಿಯೊಂದಿಗೆ,,,

ಕಾದಂಬರಿಯ ಸುಂದರ ಚಿತ್ರ, ಅದಕ್ಕೆ ಪೂರಕವಾದ ಹೆಸರು  ಜೊತೆಗೆ ತೇಜಸ್ವಿನಿಯವರ ಬರಹದ ಬಗ್ಗೆ ಗೊತ್ತಿದ್ದ ನಾನು, ಇದನ್ನು ಯಾವದೋ ಪ್ರೇಮ ಅಥವಾ ಸಾಮಾಜಿಕ ಕಾದಂಬರಿ (ನನ್ನ ಅಲ್ಪಾಸಕ್ತಿ ವಿಷಯ) ಎಂಬ ಪೂರ್ವಕಲ್ಪಿತದೊಡನೆ ಸಹೃದಯಿಯ ಬರಹ ಎನ್ನುವ ಓಘದೊಡನೆ ಓದನ್ನು ಪ್ರಾರಂಭಿಸಿದೆ.. ಅರ್ಪಣೆ ಓದುತ್ತಿದ್ದ ಹಾಗೆ ನನ್ನ ಕಲ್ಪಿತ ಇನ್ನೂ ಸ್ಪಷ್ಟವೆನಿಸಿತು... ಶ್ರೀಮತಿ ಜ್ಯೋತಿಯವರ ಮುನ್ನುಡಿ ಮಾತ್ರ ಓದಿನ ಕುತೂಹಲವನ್ನು ಹೆಚ್ಚಿಸಿ, ಏನೋ ಒಂದು ರಹಸ್ಯ ಭೇಧನೆ ಇದೆ ಎನ್ನುವ ಸುಳುಹಿನೊಂದಿಗೆ, ಪತ್ತೇದಾರಿ ಕಾದಂಬರಿ ಪ್ರಿಯನಾದ ನನಗೆ ಓದಿನ ಆಸಕ್ತಿ ಇನ್ನೂ ಹುಟ್ಟಿಸಿತು, ಜೊತೆಗೆ ಸಿಂದೂರಾವ್ ರ ಬೆನ್ನುಡಿ- ಕಾದಂಬರಿಯಯು ಗಟ್ಟಿ ಹಿಡಿತದ ಸರಕು ಹೊಂದಿದೆ ಎಂಬ ವಿವರಣೆಯೊಂದಿಗೆ, ಕಾದಂಬರಿಯನ್ನುಓದಲು ಬಲವಾದ ದೃಢತೆ ಮೂಡಿಸಿತು... 

ಲೇಖಕಿಯ ಮುನ್ನುಡಿಯು ಕಾದಂಬರಿ ಗುಟ್ಟು ಬಿಟ್ಟು ಕೊಡಲಿಲ್ಲ... 
ಕಾದಂಬರಿ ಪ್ರಾರಂಭದ ಸಾಲುಗಳನ್ನು ಓದುತ್ತ ಇದ್ದ ಹಾಗೆ ಆಸಕ್ತಿ ಹೆಚ್ಚುತ್ತಾ... ಹೋಯಿತು.... ಕಥೆ ಓದುತ್ತಿದ್ದಂತೆ ಓದಲ್ಲಿ ಕಳೆದಿದ್ದ ನಾನು ಕಣ್ಣೆತ್ತಿ ನೋಡುವ ಘಳಿಗೆಯಲ್ಲಿ (ಅದು ಯಾರೋ ಕರೆದುದ್ದಕ್ಕೆ) ಪುಸ್ತಕದ ೭೦ ಪುಟಗಳನ್ನೂ ಓದಿಯಾಗಿತ್ತು ಒಂದೇ ಯಾನದಲ್ಲಿ...   
ಮತ್ತೆ ರಾತ್ರಿ ಹಿಡಿದು ಕುಳಿತರೆ ಮುಗಿಸಿಯೇ ಮಲಗಲು ಎದ್ದಿದ್ದು... 
ಮಧ್ಯೆ ಮಧ್ಯೆ ಕೊನೆಯ ಅಧ್ಯಾಯ ಮೊದಲು ಓದೋಣ ಎನಿಸಿದ್ದು ಉಂಟು ಆ ಪರ್ಯಾ ಕುತೂಹಲ ... 
ಹಂಸಯಾನದ ಬಗ್ಗೆ ಹೇಳಬೇಕೆಂದರೇ 
ಅದೊಂದು ಭಾವಯಾನ.. ವಿಸ್ಮಯಯಾನ..   ರಹಸ್ಯಯಾನ... ಅಧ್ಯಾತ್ಮಯಾನ.. ಜೀವನಯಾನ... ಲೌಕಿಕ ಯಾನ...  

ಕಾದಂಬರಿ ನಾವು ಪತ್ತೇದಾರಿ, ಸಾಮಾಜಿಕ, ಆಧ್ಯಾತ್ಮಿಕ, ಎಂದೆಲ್ಲ ಒಂದೇ ಶಬ್ದದಲ್ಲಿ ಹಿಡಿದಿಡಲಾಗದ ಮತ್ತು ಎಲ್ಲವನ್ನು ಬಿಡಲಾಗದ ಒಂದು ವಿನೂತನ ಪ್ರಯೋಗದ ಕಾದಂಬರಿ.. 

ಯಾನದ ಹಂಸೆ ಮಹತಿ ಹೊಂದಾಣಿಕೆಯ, ಎಲ್ಲರಲ್ಲೂ ಒಂದಾಗುವ, ಎಲ್ಲರನ್ನು ನಂಬುವ ಮತ್ತು ಅಷ್ಟೇ ಹುಷಾರಿನಲ್ಲಿ ವ್ಯವಹರಿಸುವ ಚತುರೆ.  ಬಾಲ್ಯದ ಆಘಾತಗಳ ದುಸ್ವಪ್ನಗಳೊಂದಿಗೆ ಬದುಕನ್ನು ಚೆಲ್ಲದೇ ಅದನ್ನು ಚೊಕ್ಕವಾಗಿ ಬೆಳೆಸಿ... ಬಾಲ್ಯದ ಆಘಾತಗಳ ಹಿಂದಿನ ರಹಸ್ಯ ಶೋಧನೆಗೆ ತನ್ನನ್ನು ತಾನು ಪ್ರೇರೇಪಿಸಿ, ಸಾಹಸಯಾನ ಪ್ರಾರಂಭಿಸಿ ಆದ್ಯಾತ್ಮಯಾನ ಮತ್ತು ಲೌಕಿಕಯಾನದಲ್ಲಿ ವಿಸ್ಮಯಗಳನ್ನು ಛೇದಿಸಿ... ದುಸ್ವಪ್ನಗಳನ್ನು ಶಾಶ್ವತವಾಗಿ ನಿವಾರಿಸುವ ಯಾನವೇ.. ಕಾದಂಬರಿ ಹೂರಣ. 

ಬದುಕಿನ ಪಾತ್ರಗಳು ಹಾಗೂ ಅವುಗಳ ಒಪ್ಪ ಚಿತ್ರಣ ಕಾದಂಬರಿಯ ಮುಖ್ಯ ಅಂಶಗಳಾಗಿದ್ದು  ಎಲ್ಲೂ ಲೇಖಕಿಯ ಮೊದಲ ಹೆಜ್ಜೆ (ಕಾದಂಬರಿ) ಎನಿಸುವದೇ ಇಲ್ಲ. ಪ್ರತಿಯೊಂದು ಪಾತ್ರ ಚಿತ್ರಣ, ಘಟನಾವಳಿಗಳು, ಒಂದೊಂದು ಒಂದಕ್ಕೆ ಪೂರಕವೆನಿಸಿ ಓದುಗರನ್ನು ಓದಿನಲ್ಲಿ ಬಿಗಿಹಿಡಿಯುವಲ್ಲಿ ಗೆದ್ದಿವೆ. ೧೭೦ ಪುಟಗಳಲ್ಲಿನ ಸಂಯಮದ ಕಥಾಯಾನ ಕುತೂಹಲವನ್ನು ಹೆಚ್ಚಿಸುತ್ತ ಇದ್ದರೇ, ಮುಂದಿನ ೭೦ ಪುಟಗಳಲ್ಲಿ ನಾಗಾಲೋಟದ ಯಾನವಾಗಿ ಎಲ್ಲ ಕುತೂಹಲವನ್ನು ತೊಳೆದಿಡುತ್ತದೆ. ಹೀಗಾಗಿ ಮೊದಲಿನ ೧೭೦ ಪುಟದ ಭಾಗ ಎಳೆಯಲ್ಪಟ್ಟಿತೆ... ಅಥವಾ ಕೊನೆಯ ೭೦ ಪುಟಗಳ ಭಾಗ ಅವಸರಿಸಲ್ಪಟ್ಟಿತೆ.. ಎನ್ನುವ ಭಾವ ಓದುಗನಲ್ಲಿ ಬಂದರೂ ಯಾವದು ಸರಿ ಎನ್ನುವ ತೀರ್ಮಾನಕ್ಕೆ ಬರಲು ಆಗುವದಿಲ್ಲ. ಏಕೆಂದರೆ ಮೊದಲಿನ ಭಾಗ ಓದುವಾಗ ಅವನಿಗೆ ಎಳೆದಂತೆ ಅನಿಸದೇ ಕುತೂಹಲ ಹೆಚ್ಚಿ ಯಾವಾಗ ವಿಸ್ಮಯ ಹರೀದೀತು ಎನ್ನುವ ತವಕದಲ್ಲಿರುವಾಗ... ಮುಂದಿನ ಭಾಗದಲ್ಲಿ ಅದು ವೇದ್ಯವಾಗುವಾಗ ಅಲ್ಲಿ ಶಬ್ದಗಳು ಕಡಿಮೆ ಆದವೇನೋ .. ಇನ್ನು ಹೇಳಬೇಕಿತ್ತೇನೋ ಎನ್ನುತ್ತಿರುವ ಭಾವದಲ್ಲಿ ಎಲ್ಲ ವಿಸ್ಮಯಗಳು ಬೇಗ ಪರಿಹಾರವಾದವೆಲ್ಲ ಎಂಬ ಅನುಭೂತಿ...  ಅದೂ ಸರಿ ಎಂದು ಒಪ್ಪುವ ದ್ವಂದ್ವತೆಗೆ  ಓದುಗನನ್ನು ದೂಡುತ್ತದೆ.  ಆದರೂ ಗುಡ್ಡದಜ್ಜನ ವಿಸ್ಮಯ,  ಕಣ್ಣಿಲ್ಲದಿದ್ದರೂ ಎಲ್ಲವನ್ನು ಸ್ಪಷ್ಟವಾಗಿ ನೋಡಬಲ್ಲ ಕುರುಡು ಕಾಳವ್ವಜ್ಜಿ ಇನ್ನೂ ಬೇಕಾಗಿತ್ತು ಎನ್ನುವ ತುಡಿತ ಓದುಗರನ್ನು ಕಾಡುವದಂತೂ ನಿಜ. ನಚಿಕೇತನ ಚಿತ್ರಣ ಇನ್ನು ಬೇಕಿತ್ತು ಎನಿಸುತ್ತದೆ. ಅವರಿಬ್ಬರ ಪ್ರೇಮಕಥೆಯಾಗಿ ಕಾದಂಬರಿ ಮುಂದುವರಿಯಬೇಕಿತ್ತು ಎಂದೂ ಎನಿಸುತ್ತದೆ.   ಕೊನೆಯಲ್ಲಿನ ಇಂದುಲೇಖ ಕಥೆಗಾರ್ತಿ ಹೆಸರು ಓದುಗರನ್ನು ವಿಸ್ಮಯಕ್ಕೆ ಒಡ್ಡುವ ತಂತ್ರವು ವಿಶಿಷ್ಟವೆನಿಸುತ್ತದೆ. 

ಪರಮಹಂಸರ ಅಧ್ಯಾತ್ಮದ ತಿರುಳನ್ನು, ಅನುಭವಗಳನ್ನೂ, ಅನುಭೂತಿಗಳನ್ನು, ದಾಖಲೆಗಾಗಿ ದಾಖಲಿಸಿ ಓದುಗರ ಕಲ್ಪನೆಗೆ ಬಿಟ್ಟು... ಅನುಭೂತಿಗಳನ್ನು ಅಕ್ಷರದಲ್ಲಿ ಬಂಧಿಸುವ ಕ್ರಿಯೆಯಲ್ಲಿ ಅದು ತೆಳು ಅನುಭವವಾಗುವ ಅಪಾಯವನ್ನು  ಹೇಳುತ್ತಾ ಓದುಗರ ಕಲ್ಪನಾ ಓಘಾಲೋಟಕ್ಕೆ ಬಿಡುವ ಲೇಖಕಿಯ ಪರಿ ನಿಜಕ್ಕೂ ಅಭಿನಂದನೀಯ. 

ಪತ್ತೇದಾರಿ ಕಾದಂಬರಿ ಎಂದು ಸಾಮಾನ್ಯ ಓದುಗನಿಗೆ ಅನಿಸಿದರೆ, ಭಾವುಕರಿಗೆ ಭಾವಯಾನ, ಆಧ್ಯಾತ್ಮಿಕ ಒಲವಿನ ಓದುಗರಿಗೆ ಅಧ್ಯಾತ್ಮಯಾನ ಎನಿಸುತ್ತದೆ. 

ಇನ್ನೂ  ಬೇಕೇನುತ್ತಿರುವಾಗಲೇ ಕಾದಂಬರಿ ಅಂತಿಮ ರಹಸ್ಯಗಳನ್ನು ತೆರೆದಿಟ್ಟು ಮುಕ್ತಾಯಕ್ಕೆ ದೂಡುತ್ತದೆ.  ಓದುಗನಿ ರಹಸ್ಯ ಛೇದವಾದ ಸಂತಸದಲ್ಲಿ ಕಾದಂಬರಿ ಹರಹು ಇನ್ನು ಬೇಕಿತ್ತು ಎನ್ನುವ ಭಾವ ನಗಣ್ಯವಾಗುತ್ತದೆ. 

ಒಟ್ಟಿನಲ್ಲಿ ಕಾದಂಬರಿ ಕುತೂಹಲದಲ್ಲಿ ಓದಿಸಿ,  ಬಹುಕಾಲ ಮನದಲ್ಲಿ ಉಳಿಯುವಂತಹದು.
Saturday, November 7, 2015

ಕಿಟಕಿ ಸೀಟಾಯಣ

ಬಸ್ಸಿರಲಿ...
ರೈಲಿರಲಿ
ಏರೋಪ್ಲೇನೇ ಇರಲಿ....
 ಪಯಣಕಾಲದಲ್ಲಿ
ಕೊನೆಮೊದಲಿಗರೆಲ್ಲರಿಗೂ ಬೇಕಾಗಿರುವದು ಕಿಟಕಿ ಸೀಟು !

ಚಿಕ್ಕವನಿದ್ದಾಗಿನಿಂದಲೂ ನಾನು ಪ್ರಯಾಣಿಸುವಾಗ  ಗಮನಿಸಿದಂತೆ ಎಲ್ಲ ಪಯಣಿಗರ ನಿರಂತರ ತುಡಿತ ಕಿಟಕಿ ಸೀಟು ಹಿಡಿಯಬೇಕೆಂಬುದು.....
 
ಗಾಳಿ ... 
ಬೆಳಕು... 
ಹೊರ ನೋಟ...
ಹೊಸ ಪ್ರಪಂಚದ... ಹೊಸ ವಾತಾವರಣದ.......ಹೊಸ ಸಿರಿಯ.... ನೋಡಲು ಕಿಟಕಿ
 ಸೂಕ್ತವೂ ಸಹಾ ....... 

ಒಳಗಿನ ತುಂಬಿದ ಜನರ ಬಿಸಿ, ಉಸಿರ-ಬೆವರ ವಾಸನೆ,
ಗದ್ದಲ-ಕಲರವ ಗಳ ಕಾಟ ತಪ್ಪಿಸಲು ಕಿಟಕಿ ಸೀಟು ಸೂಕ್ತವೂ ಹೌದು ....

ಜೊತೆಗೆ ತಿಂಡಿ ತಿನಿನಿಸು ಮತ್ತು ಪಾನೀಯ ಖರೀದಿಸಲು ಕಿಟಕಿ ಸೀಟು ಸೂಕ್ತವು ಹೌದು ...

ಹಾಗೆಂದು ಎಲ್ಲರಿಗೂ ಕಿಟಕಿ ಸೀಟಿನ ಭಾಗ್ಯವುಂಟೆ?????????.......

ಕೆಂಪು ಬಸ್ಸಿನಲ್ಲಿ ಮತ್ತು ರೈಲಿನಲ್ಲಿನ ಸಾಮಾನ್ಯ ಮತ್ತು ಮಲಗು ಬೋಗಿಗಳಲ್ಲಿ ಐವರಲ್ಲಿ ಇರ್ವರಿಗೆ...
ಸುಖಾಸೀನ-ಅರೆಸುಖಾಸೀನ  ಬಸ್ಸಿನಲ್ಲಿ ನಾಲ್ವರಲ್ಲಿ ಇರ್ವರಿಗೆ....
ಮಲಗು ಬಸ್ಸಿನಲ್ಲಿ ಮೂವರಲ್ಲಿ ಇರ್ವರಿಗೆ ....ಇದರ ಸುಖ ಲಭ್ಯ ಉಳಿದವರು  ಕಿಟಕಿ ಭಾಗ್ಯದಿಂದ ವಂಚಿತರು ...
ವಾತಾನುಕುಲಿ ರೈಲಿನ ಮಲಗು ಬೋಗಿಯಲ್ಲಿ  ನಾಲ್ವರಲ್ಲಿ ಇರ್ವರಿಗೆ ಅಥವಾ  ಮೂವರಲ್ಲಿ ಇರ್ವರಿಗೆ ಕಿಟಕಿ ಭಾಗ್ಯ.... 
ವಿಮಾನದಲ್ಲಿ ಆರು ಜನರಲ್ಲಿ ಇರ್ವರಿಗೆ ಕಿಟಕಿ ಭಾಗ್ಯ.....
ಇನ್ನು ಹತ್ತು ಹಲವು ವಿವಿಧ ರೀತಿ ಬಸ್ಸುಗಳಲ್ಲಿ ಬೇರೆ ತರವಿರಬಹುದು.....

ಮದುವೆಯಾದ ಗಂಡುಗಳಿಗೆ ಜೊತೆ ಪಯಣದಲ್ಲಿ ಕಿಟಕಿ ಭಾಗ್ಯ ಸದಾ ಅಲಭ್ಯ.. :- (
ಮದುವೆಯಾದ ಹೆಣ್ಣುಗಳಿಗೆ  ಜೊತೆ ಪಯಣದಲ್ಲಿ ಸದಾ ಕಿಟಕಿಭಾಗ್ಯ ಎರಡು ಸೀಟಲ್ಲಿ ಒಂದು ಕಿಟಕಿ ಸಿಕ್ಕರೆ... :-)
ಮಕ್ಕಳಾದ ಮೇಲೆ ದಂಪತಿಯರಿಗೆ ಕಿಟಕಿ ಭಾಗ್ಯ ಸದಾ ಅಲಭ್ಯ ... :-(  (ಮಕ್ಕಳು ರಂಪ ಮಾಡಿ ಕುಳಿತುಕೊಳ್ಳುತ್ತವೆ)
 ಹಾಗೆಂತ ಕಿಟಕಿ ಭಾಗ್ಯ ಸದಾ ಖುಷಿ ಪಡುವಂತಹುವದೇನಲ್ಲ ....
ಹವಾನಿಯಂತ್ರಿತ ಬಸ್ಸಿರಲಿ....  ರೈಲಿರಲಿ .... ಹೊರನೋಟ ನೋಡಬಹುದೇ..
ವಿನಃ ಕಿಟಕಿ ತೆಗೆದು ಹೊರಗಿನ ಗಾಳಿಗೆ ಸುಖವನುಭವಿಸುವ ಭಾಗ್ಯವಿಲ್ಲ...! ಶಾಪಿಂಗ್ ಮಾಡಲು ಆಗದು..... 
ಇಲ್ಲಿಯೂ ಜನಕ್ಕೆ ಕಿಟಕಿ ಬೇಕೇ ಬೇಕು ಮತ್ತು ಕಿಟಕಿ ಸೀಟಿಗೆ ಪೈಪೋಟಿಯೂ ಸಹಾ.... 
ಎಲ್ಲಕ್ಕಿಂತಾ ನಂಗೆ ವಿಚಿತ್ರ ಎನಿಸುವದು ಜನ ಎರೋಪ್ಲೇನಲ್ಲೂ ಕಿಟಕಿ ಬಯಸುವದು.... 
ಎರೋಪ್ಲೇನಲ್ಲಿ ನನ್ನ ಪ್ರಕಾರ ಕಿಟಕಿ ಸೀಟು ಹೆಚ್ಚಿನ ಅನಾನೂಕುಲದ್ದು ...
ಏಕೆಂದರೆ ಕಿಟಕಿ ತುಂಬಾ ಚಿಕ್ಕದ್ದು. ಹೊರ ನೋಟ ಅಂತ ವಿಶೇಷದ್ದು ಏನಿಲ್ಲ ...
ಜೊತೆಗೆ ಇಕ್ಕಟ್ಟಿನ ಕಾಲಿಡುವ ಸ್ಥಳದಲ್ಲಿ ಅಕ್ಕ ಪಕ್ಕ ಕಾಲು ಚಾಚಲು ಅವಕಾಶವಿಲ್ಲ..
ಕೊನೆ ಶೀಟಲ್ಲಿ ಕನಿಷ್ಠ ತಿರುಗಾಡುವ ಸ್ಥಳದಲ್ಲಿ ನೀಡಿದಾಗಿ ಕಾಲು ಚಾಚಬಹುದು ..
ಇಲ್ಲಿ ಅದಕ್ಕೂ ಅವಕಾಶವಿಲ್ಲ 
ಆದರೆ ಅಲ್ಲಿಯೂ ಜನ ಕಿಟಕಿ ಶೀಟು ಬೇಕೆಂದು ಹೆಣಗಾಡುತ್ತಾರೆ.

ವಿಮಾನ ಏರುವಾಗು ಮತ್ತು ಇಳಿಯುವಾಗ ಸ್ವಲ್ಪ ನೋಡಬಹುದಾದ ಪರಿಸರ ನೋಟ ಇರುತ್ತದೆ ಅದನ್ನು ಎಲ್ಲ ಶೀಟಿ೦ದಲೂ ನೋಡಬಹುದು ಆ ಏರುವಾಗ ಮತ್ತು ಇಳಿಯುವಾಗಿನ ೧೦-೧೫ ನಿಮಿಷಕ್ಕಾಗಿ ಇಡೀ  ಪಯಣ ಕಿಟಕಿಯಲ್ಲಿ ಭದ್ರ ಅಲುಗಾಡದೆ ಕುಳಿತುಕೊಳ್ಳುವದು  ನನ್ನ ಮಟ್ಟಿಗೆ ಒಂದು ಶಿಕ್ಷೆಯೇ ಸಹಿ... ಕಿಟಕಿಯಲ್ಲಿ ಕುಳಿತವರು ಎದ್ದು ಹೋಗಬೇಕೆಂದರೆ ಎಲ್ಲರನ್ನು ಎಬ್ಬಿಸಿ ಹೊರನಿಲ್ಲಿಸಿಯೇ ಹೊಗಬೇಕು .... ಅದಕ್ಕೆಂದೇ ಜನಕ್ಕೆ ಕಷ್ಟ ಎಂಬ ಮುಲಾಜಲ್ಲಿ ಪ್ರಾಕೃತಿಕ ಕರೆಗಳನ್ನು ಕಟ್ಟಿಕೊಂಡು ಕೂಡಬೇಕು ... ಪಕ್ಕದಲ್ಲಿದ್ದವರು ನಿದ್ದೆ ಮಾಡುತ್ತಿದ್ದಾರೆ ದೇವರೇ ರಕ್ಷಿಸಬೆಕು.... 
ಒಟ್ಟಿನಲ್ಲಿ ಕಿಟಕಿ ಕಷ್ಟವೇ ಇರಲಿ ಕಿಟಕಿ ಬೇಕು ಎನ್ನುವ ಜನರು ಹೆಚ್ಚಿನವರು..... 

ಮತ್ತೆ ನಾನು ಕಂಡ ಹೆಚ್ಚಿನ ಜನರ ದುರಾಶೆ ಎಂದರೆ ಕಿಟಕಿ ಶೀಟು ಸಿಕ್ಕ ತಕ್ಷಣ ಪಕ್ಕದ ಶೀಟು ಖಾಲಿ ಇದ್ದಾರೆ ತಮ್ಮ  ಕರವಸ್ತ್ರವನ್ನೋ ಬ್ಯಾಗನ್ನೋ ಪಕ್ಕದಲ್ಲಿ ಹಾಕಿ ಅದನ್ನು ಕಾಯ್ದಿರಿಸುವದು... ಅವರ ದೂ(ದು)ರಾಲೋಚನೆಏನೆಂದರೆ .. 
ಯಾರು ಬರದಿದ್ದರೆ ಎರಡರಲ್ಲೂ ಮೈಚಾಚಿ ಕುಳಿತುಕೊಳ್ಳುವದು 

ಬಸ್ಸು ತುಂಬಿ ಜಾಗೆ ಯಾರಿಗಾದರು ಕೊಡಲೇ ಬೇಕೆಂದರೆ ಸಹ ಪ್ರಯಾಣಿಕರನ್ನು ಆಯ್ಕೆ ಮಾಡಿ ಅವರಿಗೆ ಕೊದುವದು.. 
ಚೆಂದ ಯುವತಿಯರಿಗೆ ಮೊದಲ ಪ್ರಾಶಸ್ತ್ಯ , .. 
ಆಮೇಲೆ ನೀಟ್ ಕಾಣುವವರಿಗೆ.. (gentleman and gentlewoman)

ಎಲ್ಲರೂ ಹೀಗೆ ಅಲ್ಲ  ಆದರೆ ಹೆಚ್ಚಿನ ಜನರು ಹೀಗೆ ... 

ಹೀಗೆ ... ಕೆಲವು ಆದರ್ಶ ಜನ ಇರ್ತಾರೆ ಅವರು ವೃದ್ಧರಿಗೆ, ಮಕ್ಕಳಿಗೆ, ಗರ್ಬಿಣಿ ಸ್ತ್ರೀಯರಿಗೆ,  ಸ್ತ್ರೀಯರಿಗೆ, ಅಂಗವಿಕಲರಿಗೆ  ಕಾಯ್ದಿರಿಸಿದ ಶೀಟು ಬಿಟ್ಟು ಕೊಡುತ್ತಾರೆ ...
 ಕೆಲವೊಮ್ಮೆ ತಮ್ಮ ಶೀಟು ಬಿಟ್ಟು ಕೊಡುತ್ತಾರೆ ....

ಆದರೆ ಕಿಟಕಿ ಶೀಟು ಬಿಟ್ಟು ಕೊಡುವ ತ್ಯಾಗವಿದೆಯೆಲ್ಲ ಅದು ತುಂಬಾ ಕಷ್ಟದ್ದು ... 
ಹಾಗೆ ಬಿಟ್ಟು ಕೊಡುವವರು ನಿಜಕ್ಕೂ  ಆದರ್ಶವಂತರೇ !!!!!
ಕೆಲವೊಮ್ಮೆ  ಅಂಥಹ ಜನ ಕೇಳಿ ಶೀಟನ್ನು ತೆಗೆದು ಬಲವಂತದ ತ್ಯಾಗಕ್ಕೂ ಕಾರಣ ರಾಗುತ್ತರೆ....  :-))

ಕೆಲವೊಂದು ಭಂಡರು ಕೇಳಿದರು ಕೊಡದೆ ಹಾಗೆ  ಕುಳಿತುಕೊಳ್ಳುತ್ತಾರೆ (ದೂರ ಪ್ರಯಾಣ ಹಾಗೆ ಹೀಗೆ _ನೆಪವೊಡ್ಡಿ)
ನಿಂತವರು ಕೇಳಿದವರ ಬೆಮ್ಬಲ್ಲಕ್ಕೆ ನಿಂತು ಶಿಫಾರಸ್ಸು ಮಾಡುತ್ತಾರೆ ....

 ಕುಳಿತವರು ಯಾವದೇ ಪಕ್ಷ ವಹಿಸದೆ ಜಾಣ ಕಿವುಡು ಮೆರೆಯುತ್ತರೆ... (ಎಲ್ಲಿ ತಾವು ಏಳಬೇಕಾಗುತ್ತೇನೋ ಎಂಬ ಭಯದಲ್ಲಿ...) ಕೆಲವೊಬ್ಬರು ಹುಸಿ ನಿದ್ದೆಯ ಸೋಗು ಹಾಕುತ್ತಾರೆ...
ಕೆಲವು ಯುವಕ-ಯುವತಿಯರು ಶೀಟು ಸಿಕ್ಕ ಕೂಡಲೇ ನಿದ್ರೆ ಸೋಗಿಗೆ (ಜಾಣ ನಿದ್ದೆಗೆ) ಜಾರುತ್ತಾರೆ .. (ಅಕ್ಕ ಪಕ್ಕ ನಿಂತ ವೃದ್ಧರಿಗೆ, ಸ್ತ್ರೀಯರಿಗೆ, ವೈಕಲ್ಯರಿಗೆ ಜಾಗೆ ಬಿಡಬಹುದಾದ ಪ್ರಸಂಗ ತಪ್ಪಿಸಲು)

 ಒಟ್ಟಿನಲ್ಲಿ ಕಿಟಕಿ  ಶೀಟು ಅಥವಾ ಶೀಟು ಪಯಣದಲ್ಲಿ ಪ್ರಾಮುಖ್ಯ ಪತ್ರ ವಹಿಸುವದಂತೂ ನಿಜ!!!!


ನನ್ನ ಆಶಯ ...
ಬಸ್ಸಿರಲಿ ...... 
ರೈಲಿರಲಿ ....... 
ವಿಮಾನವೇ ಇರಲಿ ....... 
ಎಲ್ಲ ಶೀಟಿನ .... 
ಪಕ್ಕ ಕಿಟಕಿಯೊಂದಿರಲಿ ..... 
ಬೇಗನೆ ಇಂತಹದೊಂದು .... ವಿನ್ಯಾಸ ಬರಲಿ... 
ಆಗ ಜನಗಳಿಗೆ 
ಬಹುಶ ಪಕ್ಕಕ್ಕೆ ಸಹ ಪಯಣಿಗರಿಲ್ಲದೆ... 
ಅವರೊಡನೆ ಹರಟೆ ಇಲ್ಲದೆ... 
ಆ ಗಲಾಟೆ ಗದ್ದಲ ಗಳಿಲ್ಲದೆ 
ಪ್ರವಾಸ 
ಪ್ರಯಾಸ ಎನಿಸದ ದಿನ ದೂರವಿರದು 

 ನಿಂತ ಪಯಣ ಬೇಡ ಎಂದಿಗೂ 
ಕೂತಾಗ ಅಕ್ಕ ಪಕ್ಕ ನಿಂತ ಪಯಣಿಗರಿಲ್ಲದಿರಲಿ 
ಇದ್ದರೂ ಅವಲ್ಲಿ ವೃದ್ಧ -ವೈಕಲ್ಯ-ಸ್ತ್ರೀ ಯರು ಇಲ್ಲದಿರಲಿ 
ಅವರಿದ್ದರೂ ನನ್ನ ನಿದ್ದೆ ಜೋರಿರಲಿ 
ಈ ತರದ  ಮನ 
ನಮ್ಮಲ್ಲಿ ಇರದಿರಲಿ....


Tuesday, August 27, 2013

ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

ಎಲ್ಲ ಬ್ಲಾಗಿಗರಿಗೂ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು
 


 

Monday, October 22, 2012

ಚುಟುಕುಗಳು.....(ಅಂತರ್ಜಾಲ ಕೃಪೆಯ ಚಿತ್ರ - Thanks to : aylwin0201.blogspot.com)ನಿನ್ನೆ
ಸರಿ ಮಾಡಲರಿಯೇ ಸರಿದಿದೆ...
ಬರೀ ಮೂಟೆ... ಭಾರ ಬೆನ್ನಲ್ಲಿ..
ಸಾರ ಹೀರಿ... ಕಸುವಾಗಿಸಿ.. ಕಸವೆಸೆದು...
ನಡೆಯಬೇಕಾಗಿದೆ.!!ಸರ ಸರ....


ನಾಳೆ
ಆಗಸದ ಬಯಕೆಗಳು...
ನಿನ್ನೆಯ ಭಯಗಳು....
ಬಯಕೆ ಭಯೆಗಳ ನಡುವೆ ಬೇಡ ಭವಣೆ!!

ಇಂದು
ಕಾಡದಿರಲಿ ನಿನ್ನೆಯ ಎಡವರಿಕೆ..
ಕದಲಿಸದಿರಲಿ ನಾಳೆಯ ಕನವರಿಕೆ...
ಇಂದಿನ ನಡೆಗೆ!!!

ಜಯದ ಕಡೆಗೆ..
ಅಂತರದ ಅಂತ್ಯಕ್ಕೆ!!!

ಜಯ
ನಿನ್ನ..
ನಿನ್ನೆ ಕನಸ...
ಕನಸ ನಾಳೆ...
ಅರಳಿಸಿದೇ
ಇಂದಿನ ದೃಡ ಹೆಜ್ಜೆ!!!!

ಸೋಲು
ಭಾರ ಮೂಟೆ ಬೆನ್ನ ಮೇಲೆ...
ಭ್ರಾಂತು ಬಯಕೆ ಕಣ್ಣ ಮುಂದೆ...
ತಡಬಡಿಸಿದೆ ಹೆಜ್ಜೆ !!!

Monday, September 3, 2012

ಆಡಿಸಿ ನೋಡು...ಬೀಳಿಸಿ ನೋಡು.....ಉರುಳಿ ಹೋಗದು .......


(ಸಿಂಗಾಪುರನ ಯುನಿವೆರ್ಸಲ್ ಸ್ಟುಡಿಯೋದ ಮೋಜಿನ ಸುತ್ತು ತಿರುಗೋ ಚಕ್ರ-BATTLESTAR GALLACTICA)
ಬದುಕ ಬಂಡಿ ಸುತ್ತಿಸಿತ್ತೋ...
ಮೇಲೆ ಕೆಳಗೆ ಆಡಿಸಿತ್ತೋ....
ತಿರುಗು ಮುರುಗೋ ಹೊರಳಿಸಿತ್ತೋ...

ಮೇಲೆ ಹೋಗಿ ನಕ್ಕಿದಿತ್ತೋ...
ಕಳಗೆ ಬಂದು ಅತ್ತಿದಿತ್ತೋ...

ನೇರ ಏರಿ ಕೇಕೆ ಹಾಕಿದಿತ್ತೋ...
ತಲೆಕೆಳಗಾಗಿ ಬೆಚ್ಚಿ ಕಿರುಚಿದಿತ್ತೋ....
 ಮತ್ತೆ ನೇರನಾಗಿ ಮುಕ್ತನೆನಿಸಿದಿತ್ತೋ...
ನೆನಸುವಾಗಲೇ ಮತ್ತೆ ಹೊರಳಿಸಿತ್ತೋ....

ತಂದೆತಾಯ ನೆನಸಿತ್ತೋ...
ಅಮ್ಮ ಎಂದು ಕೂಗಿದಿತ್ತೋ...

ಬದುಕ ಪಯಣ ಸೂತ್ರದಲ್ಲಿ ಎಲ್ಲವನ್ನು
ಕಾಣದಂತೆ ಬಂಧಿಸಿತ್ತೋ...

ಬೀಳದಂತೆ ಎಲ್ಲೋ ನಮ್ಮೆನೆಲ್ಲಾ
ಗಟ್ಟಿಯಾಗಿ ಹಿಡಿದಿತ್ತೋ...

ಅದರ ಜಾಡಿನಲ್ಲಿ
ಸುತ್ತಿ ಸುತ್ತಿ ತಿರುಗಿಸಿತ್ತೋ....

ಸೂತ್ರದಲ್ಲಿ  ತಿರೋಗೋ ಪಟದಂತೆ
ತಿರುಗುತ್ತಲ್ಲಿತ್ತೋ...

ಮುಗಿದ ಪಯಣ ಬೆರಗು ಭಯ
ವಿಸ್ಮಯದಲ್ಲಿತ್ತೋ....

ಕಾಣದಂತೆ ಧನ್ಯತೆಯ ಭಾವ ಹೊಮ್ಮಿತ್ತೋ....

Friday, February 10, 2012

ಅರಿಯಲಿಲ್ಲ ಅಂತರಾಳ !!!!!


ಅಲ್ಲಿ..... ಇಲ್ಲಿ..... ಅದು.... ಇದು...
ಮನದ ಕೊಸರು...ಹಾರಿ.... ಹೀರಿ...
ಮುದದ ಕೀರೀಟ... ಮೆರೆದ ಮನ....
ಮುರಿದ ಕಿರೀಟ .... ಮುದುರಿ ಮನ....
ಕೆದರಿ ಕೋಪ..... ಅರಿಯಲ್ಲಿ ತಾಪ...
ಅರಿಯ ಅರುಹು....ಸಮರ್ಥನೆಗೆ ಕೂಗು....

ಕೂಗಿನಲ್ಲಿ ಮರೆತ ಜ್ಞಾನ ....
ಅಂತರ್ಯದಲ್ಲಿ ಕದನ ಸದನ.....
ಹಿಂದೆ ಹೊಗಳು ಭಟ್ಟರು.....
ಮುಂದೆ ತೆಗಳೋ ಭಟರು......
ಹುಮ್ಮಸ್ಸಿನ ಹಾರಾಟ....
ಮಾತಿನಲ್ಲೇ ಸೆಣಸಾಟ...
ಕಳೆದ ಶಬ್ದ..... ಬಿಟ್ಟ ಬಾಣ...
ಅರಿಯ ಶವ... ನನ್ನ ಭಾವ....
ಕೊಲೆಗಾರನ ಹಣೆಪಟ್ಟ....

ಮರೆತ ಜ್ಞಾನ.....
ಮೆರೆದ ಅಜ್ಞಾನ...
ಕದನದಲ್ಲಿ ಸತ್ತ ನನ್ನ ಆಂತರ್ಯದ ಜನ...
ಹಿಂದೆ ತಿರುಗೆ ಎಲ್ಲ ಶೂನ್ಯ....

ಹೊಗಳಿಕೆಯ ಹೆಗಲಲ್ಲಿ ಶವದ ಮೆರವಣಿಗೆ...
ತೆಗಳಿಕೆಗೆ ಕೋಪದಲ್ಲಿನ ಧಾವಂತ....
ಭಾಷೆ-ಮಾನವತೆಯಲ್ಲಿ ಮನವೇ ಅಸ್ತ೦ಗತ ....
ಪರ-ವಿರೋಧದ ಹೋರಾಟದಲ್ಲಿ...
ಕಳೆದು ಹೋದ ನಮ್ಮ ಭಾಷೆ -ಭವಣೆ....
ಕೊನೆಯಲ್ಲಿ ಅವನಿಗೂ... ನನಗೂ...
ಇಲ್ಲದ ಭೇದ...
ಹಾಗಾದ ಮೇಲೆ ಅರ್ಥ ಕಳೆದುಕೊಂಡ ಕದನ...
ಮುರಿದು ಹೋದ ಮನಗಳ ಮಸಣ...

ಅಂತರ್ಯದಲ್ಲಿ ಸಾದಿಸೆ ಭುದ್ಧ....
ಜನನ-ಮರಣಕ್ಕೆ ದಿವ್ಯ ಮೌನ....

ಶುನಕದ ಬೊಗಳಿಕೆ...
ದಿವ್ಯ ನಿರ್ಲಕ್ಷದಲ್ಲಿ ಕುಂಜರದ ನಡೆ...
ನಡೆ.. ದ್ಯಾನದೆಡೆಗೆ..
ನಿರ್ಲೀಪ್ತತೆಯಲ್ಲಿ...
ಚಿರನೂತನ ನಿರಂತರ ಚೇತನದ ಕಡೆಗೆ...
Tuesday, October 18, 2011

ಸನ್ಯಾಸಿ ಮತ್ತು ನಾಗರಹಾವಿನ ಕಥೆ

(ಚಿತ್ರ ಕೃಪೆ : ಅಂತರಜಾಲ ಸರಕು ಮಿಶ್ರಣ )

ಜನಪದ
ಮೂಲದ ನಿರ್ವಹಣೆ ಪಾಠದ ಕಥೆ

(FOLK STORY OF MANAGEMENT LESSONS)


ಒಂದಾನೊಂದು ಊರು...
ಊರಬದಿಯಲ್ಲೊಂದು ಕೆರೆ....
ಕೆರೆಬದಿಗೊಂದು ಪೊದೆ......
ಪೊದೆಯಲ್ಲೊಂದು ಕಾರ್ಕೋಟಕ ನಾಗರನ ವಾಸ....
ಹತ್ತು ಹಲವರನ್ನು ಕಚ್ಚಿ...ಕೊಂದಿತ್ತು....
ಅಲ್ಲಿ ಜನರು ತಿರುಗಲು ಹೆದರುತ್ತಿದ್ದರು.....ಆ ಪೊದೆಯ ಬದಿಯ ರಸ್ತೆ ನಿರ್ಜನವಾಗಿತ್ತು....
ಕೊಳಕ್ಕೆ ಸುತ್ತು ಬಳಸಿನ ರಸ್ತೆಯ ಕಂಡುಕೊಂಡಿದ್ದರು ಊರಜನ.
ಆದರೂ ಕೆರೆಬದಿಯಲ್ಲೂ ಕಾಣಿಸಿಕೊಂಡು ಅಪಾಯ ಒಡ್ಡುತ್ತಿದ್ದ ನಾಗರಾಜ.
ಜನ ನಾಗಣ್ಣನ ಉಪಟಳದಿಂದ ಬೇಸತ್ತಿದ್ದರು.....

ಊರಿಗೊಮ್ಮೆ ಸನ್ಯಾಸಿಯೊಬ್ಬರ ಆಗಮನವಾಯಿತು....
ಕೆರೆಬದಿಗೆ ದೈನಂದಿನ ಕಾರ್ಯಕ್ಕೆ ಹೊರಟ ಅವರಿಗೆ ಊರಜನ ನಾಗಣ್ಣನ ಉಪಟಳದ ಬಗ್ಗೆ ಹೇಳಿ ಎಚ್ಚರಿಸಿದರು....
ಆದರೂ ಸನ್ಯಾಸಿಗಳು ಅದೇ ದಾರಿಯಲ್ಲಿ ಹೊರಟರು...
ನಾಗಣ್ಣನಿಗೆ...ತನ್ನ ವಾಸಸ್ಥಳದ ಹತ್ತಿರ ಧೈರ್ಯದಲ್ಲಿ ಬರುತ್ತಿದ್ದ ಸನ್ಯಾಸಿಯ ಕಂಡು ಕೋಪ ಬಂದು... ಭುಸುಗುಡುತ್ತಾ ಕಚ್ಚಲು ಬಂದ .....
ತಪಶಕ್ತಿಯ ಸನ್ಯಾಸಿಗಳು, ಕಚ್ಚಲು ಬಂದ ಹಾವನ್ನು ಕ್ಷಣ ಮಂತ್ರದಿ ದಿಗ್ಬ್ರಮೆ ಗೊಳಿಸಿ, ನಿಲ್ಲಿಸಿ.. ಅದನ್ನು ಕೇಳಿದರು...
"ಅಯ್ಯಾ ನಾಗರಾಜ ನಿನಗೆ ಜನರನ್ನು ಕಚ್ಚಿ ಸಾಯಿಸುವದರಿಂದ ಸಿಗುವುದೇನು? -ಕಾಡು ಮೃಗಗಳು ಹಸಿವೆಯಾಗದ ಹೊರತು ಬೇಟೆಯಾಡಿ ಕೊಂದು ತಿನ್ನುವದಿಲ್ಲ...ಜನರನ್ನು ಕೊಂದು ನೀನೇನು ಅವರನ್ನು ತಿನ್ನುವೆಯಾ...ಇದರಿಂದ ನಿನಗೇನೂ ಸಿಗುತ್ತೆ? " ಎಂದು ಪ್ರಶ್ನಿಸಲಾಗಿ....ನಾಗಣ್ಣನಿಗೆ ಜ್ಞಾನೋದಯವಾಯಿತು... ಅನ್ಯಾಯವಾಗಿ ತಾನು ಜನರನ್ನು ಸುಮ್ಮನೆ ಕೊಲ್ಲುತ್ತಿದ್ದೆನಲ್ಲಾ ... ಹಸಿವೆಗಲ್ಲ... ಮತ್ತಾವ ಸುಖಕ್ಕೂ ಅಲ್ಲ.... ತಾನು ಅಮಾಯಕರನ್ನು ಕೊಂದೆನಲ್ಲಾ.. ಎಂದು ಪಶ್ಚಾತಾಪಗೊಂಡಿತು....

ಸನ್ಯಾಸಿ ಸತ್ಯದ ಅರಿವು ಮಾಡಿಸಿದ್ದಕ್ಕೆ ವಂದಿಸಿ... "ಅಯ್ಯಾ ಸ್ವಾಮಿಗಳೇ ಇನ್ನು ನಾನು ಯಾರನ್ನು ಕಚ್ಚಿಕೊಲ್ಲುವದಿಲ್ಲ "ಎಂದು ಪ್ರಮಾಣಿಸಿತು...

ಮುಂದೆ ಆ ದಾರಿಯಲ್ಲಿ ತಿರುಗುವವರಿಗೆ ಅದು ಉಪಟಳ ಕೊಡುವದನ್ನು ನಿಲ್ಲಿಸಿತು....
ಸಂತರ ಜ್ಞಾನದ ಮಾತುಗಳಿಂದ ಪ್ರೇರಿತವಾದ ಅದು ತೀವ್ರ ಸಾತ್ವಿಕ ಜೀವನ ನಡೆಸಲು ಪ್ರಾರಂಭಿಸಿತು...
ಜನಕ್ಕೆ ಹಾವು ಕಚ್ಚುವದಿಲ್ಲವೆಂದು ತಿಳಿದ ಬಳಿಕ, ಆ ರಸ್ತೆಯಲ್ಲಿ ಸರಾಗವಾಗಿ ತಿರುಗಾಡ ತೊಡಗಿದರು....
ಕೆಲವು ಕಿಡಿಗೇಡಿಗಳು ಹಾವು ಏನು ಮಾಡುವದಿಲ್ಲವೆಂದು ತಿಳಿದ ಬಳಿಕ ಅದನ್ನು ಕಲ್ಲಿನಿಂದ... ಕೋಲಿನಿಂದ ಹೊಡೆದು ತಮ್ಮ ವಿಕೃತಿ ತೀರಿಸಿಕೊಳ್ಳ ಹತ್ತಿದ್ದರು.. ಮಕ್ಕಳು ಹಾವನ್ನು ಹಿಡಿದು ತಿರುಗಿಸುತ್ತಾ..ಆಟ ಆಡಲು ಪ್ರಾರಂಬಿಸಿದರು.... ಹಾವಿನ ಮೈಯೆಲ್ಲಾ ಗಾಯ ..ವೃಣಗಳಾಗಿ ಅದರ ದೇಹ ಪರಿಸ್ಥಿತಿ ತೀವ್ರ ಹದೆಗೆಟ್ಟು.. ಸಾಯಲು ಇಗಲೋ.. ಆಗಲೋ... ಎನ್ನುವಂತಾಯಿತು....

ಸನ್ಯಾಸಿಗಳು ಮತ್ತೊಮ್ಮೆ ಆ ಹಾದಿಯಲ್ಲಿ ಬರುವಾಗ, ಹಾವನ್ನು ಕಂಡು, ಅದರ ಪರಿಸ್ಥಿತಿ ಕಂಡು, ಮರುಗಿ ಇದಕ್ಕೆ ಕಾರಣವೆಂದು ಕೇಳಿದರು ...
ಆಗ ನಾಗ ವಿನಮ್ರವಾಗಿ "ತಾವು ತಿಳಿ ಹೇಳಿದಂತೆ ಕಚ್ಚುವಾದ ಬಿಟ್ಟೆ... ಅದಕ್ಕೆ ಹೀಗಾದೆ...ಆದರೂ ಬೇಜಾರಿಲ್ಲ... ಇನ್ನೊಬ್ಬರ ಅಲಾಭ ಹತ್ಯೆಯ ದೋಷ ನನಗೆ ತಟ್ಟುವದಿಲ್ಲವಲ್ಲಾ .... ಅದೇ ಸಾಕು ನನಗೆ.." ಎಂದಿತು.

ಆಗ ಸನ್ಯಾಸಿ ಹೇಳಿದರು " ಅಯ್ಯಾ ನಾಗರಾಜ ನಾನು ನಿನಗೆ ಕಚ್ಚುವಾದ ಬಿಡು ಎಂದಿದ್ದೇನೆ ಹೊರತು... ಭುಸುಗುದುವದನ್ನು ಬಿಡು ಎಂದಿಲ್ಲಾ ... ಆತ್ಮರಕ್ಷಣೆಗೆ ಭುಸುಗುದಲೇ ಬೇಕು ಕಚ್ಚುವ... ಕಚ್ಚಿ ಸಾಯಿಸುವ... ಹೆದರಿಕೆ ಸದಾ ಉಪಟಲಿಸುವ ಜನರಿಗೆ ತೋರಿಸಲೇ ಬೇಕು ಇಲ್ಲಾ ಬದುಕುವದು ದುಸ್ತರ" ಎಂದರು...
ಈಗ ನಾಗಣ್ಣನಿಗೆ ತನ್ನ ತಪ್ಪು ಏನೆಂದು ಅರಿವಾಗಿ ಅವರ ಮಾರ್ಗದರ್ಶನದಂತೆ ಮುಂದಿನ ಜೀವನ ಕ್ರಮಿಸಿ ಯಾರಿಗೂ ತೊಂದರೆ ಕೊಡದೆ ತಾನು ತೊಂದರೆ ಪಡೆಯದೇ ಬದುಕಿದ...

ನೀತಿ : ಹೇಗೆ ಇತರರಿಗೆ ಅನಾವಶ್ಯಕ ತೊಂದರೆ ಕೊಡುವದು ತಪ್ಪೋ ಹಾಗೆ ಸ್ವತಹ ತೊಂದರೆಗೊಳಗಾಗುವದು ತಪ್ಪು... ತೊಂದರೆಗಳನ್ನೂ ಬರದಂತೆ ತಡೆಗಟ್ಟಲು ಇತರರಿಗೆ ಸ್ವಲ್ಪ ತೋರಿಕೆಯ ತೊಂದರೆಯನ್ನೂ ತೊಂದರೆಯಾಗದಂತೆ ಪ್ರಯೋಗಿಸಬೇಕು... ತನ್ನ ತೊಂದರೆ ತಡೆಯಲು ತೊಂದರೆ ಕೊಡುವವರಿಗೆ ಸ್ವಲ್ಪ ಬಿಸಿ ಮುಟ್ಟಿಸುವಷ್ಟು ತೊಂದರೆ ಕೊಡಬೇಕಾದುದು ಬದುಕ ಅನಿವಾರ್ಯತೆ..
DON'T BITE TO TROUBLE OTHERS UNNECESSARILY BUT KEEP HISSING FOR SELF DEFENSE

(ಬಹಳ ದಿನಗಳಿಂದಲೂ ಬರೆಯಲಾಗದೆ ಬ್ಲಾಗ್ ಖಾಲಿ ಇದ್ದುದ್ದಕ್ಕೆ ಕ್ಷಮೆ ಇರಲಿ )


Tuesday, October 11, 2011

ಶೂನ್ಯ ದಿಂದ........ ಪರಿಪೂರ್ಣದೆಡೆಗೆ...........

ಸಹ ಬ್ಲೋಗಿಗರಾದ -ಸುಗುಣಾರ " ಮೃದುಮನಸ್ಸು" ಬ್ಲಾಗ್' ನ "ಶೂನ್ಯ" ಕಥೆಯ ಮುಂದುವರೆದ ಭಾಗ..........
(ಮೊದಲ ಭಾಗದ ಕೊಂಡಿ : http://mrudhumanasu.blogspot.com/2011/10/blog-post_09.html)


ಉಸಿರು ಬಿಕ್ಕುತಿದೆ...

ದುಃಖ ಉಮ್ಮಳಿಸುತಿದೆ
ಅನಾಥ ಪ್ರಜ್ಞೆ ಯ
ಶೂನ್ಯ ಸಿಂಹಾಸನದಡಿ
ನನ್ನ ಬದುಕು ಜೋತಾಡುತಿದೆ.....

ಇಪ್ಪತ್ತು ವರ್ಷಗಳ ಗಂಡನ ಅಪರಿಮಿತ ಪ್ರೀತಿಯಲ್ಲಿ ನಾನು, ನನ್ನೆಲ್ಲಾ.. ಕೊರತೆಯನ್ನು ಮರೆತು ಆನಂದದಿಂದ ಮರೆತಿದ್ದೆ ...
ತವರ ನೆನಪು ಮಾಸಿತ್ತು ....
ಮಕ್ಕಿಳಿಲ್ಲದ ಕೊರಗೂ ಕಾಡಲಿಲ್ಲ.....
ಬದುಕು.. ಸಾಗಿದ ಬಗೆಯೇ ಅರಿವಾಗಲಿಲ್ಲ....
ಇಂದು ಆ ಅಪರಿಮಿತ ಪ್ರೀತಿ ನೀಡಿದ, ಸಹೃದಯ ಜೀವ.... ನನ್ನಿನಿಯ.... ನನ್ನನ್ನು ..ಬಾಳದಾರಿಯಲ್ಲಿ.. ನಡುವೇ.. ಬಿಟ್ಟಗಲಿದಾಗ .... ಮೇಲಿನ ಗೀತೆ ಮನದಲ್ಲಿ ಗವ್ವೆನ್ನುವಂತೆ ಬಾರಿ ಬಾರಿ ಸುಳಿಯುತ್ತಿದೆ ...

ಮಕ್ಕಳಿಲ್ಲದ ಕೊರಗು ಕಾಡುತ್ತಿದೆ...

ದತ್ತು ಮಗುವನ್ನೂ... ತಂದು ಸಾಕಲಿಲ್ಲವಲ್ಲಾ... ಆಸರೆಗೆ... ಎಂಬ ಭಾವ.. ಅಪರಾಧೀ ಪ್ರಜ್ಞೆಯಾಗಿ ಕಾಡುತಿದೆ ಎನಿಸುತ್ತಿದೆ ....

ವೃದ್ಧ ಅತ್ತೆಮಾವರು ನನಗೆ ಆರ್ಥಿಕ ಭಾರವಾಗಬಾರದೆಂದು ಈಗ ಮೈದುನನ ಮನೆಗೆ ನಡೆದಿಹರು......

ಮೈದುನ -ತಂಗಿ, ತಮ್ಮಲ್ಲಿಗೆ ನನ್ನನ್ನು ಕರೆದರೂ.. ಇವರೊಡನೆ ಇಪ್ಪತ್ತುವರ್ಷ ಬಾಳಿದ ನೆನಪುಗಳ ಹೊತ್ತ ಈ ಸ್ವಂತ ಮನೆಯ ತ್ಯಜಿಸಲು ಯಾಕೋ ಮನಸ್ಸಿಲ್ಲ.....
ಅಪ್ಪ-ಅಮ್ಮರೇ ಅಣ್ಣ ಅತ್ತಿಗೆಯರ ಆಡಳಿತದ ನಡುವೆ, ತವರಲ್ಲಿ ನೇಪಥ್ಯವಾಗಿರುವಾಗ ಅಲ್ಲದೇ ಇಷ್ಟು ದಿನ ಅದನ್ನು ಬಯಸದೆ ಇದ್ದುದು... ಇಂದು ಅದನ್ನು ಆಸರೆ ಎ೦ದು ಕಲ್ಪಿಸಲಾಗದು.....

ದೀಪ ನೋಡುತ್ತಾ ಕುಳಿತಿದ್ದ ಅನ್ನಪೂರ್ಣಾ ಒಮ್ಮೆ ಕಣ್ಣು ತಿರುಗಿಸಿ.... ಸುತ್ತೆಲ್ಲಾ ನೋಡಿದಾಗ,
ಕತ್ತಲು ಅಡರಿದ೦ತೆಸಿತು...ಸೂರ್ಯ ಸಂಪೂರ್ಣ ಮರೆಯಾಗಿ ಸಂಜೆ ದಾಟಿ ಕತ್ತಲು ಎಲ್ಲೆಡೆ ಹಾಸಿತ್ತು ..
ಒಮ್ಮೆ ಭಯವು ಎನಿಸಹತ್ತಿತು....

.............ಹೀಗೆ ಅನ್ನಪೂರ್ಣಾಳ ಮನ, ಭೂತ-ವರ್ತಮಾನ-ಭವಿಷ್ಯತ್ತುಗಳ ಯೋಚನೆಯಲ್ಲಿ, ಗತಿಸಿದ ಗಂಡ ಅನುರಾಗನ ನೆನಪಲ್ಲಿ- ಅಂಗಳದಲ್ಲಿ ಹಚ್ಚಿಟ್ಟ ಹಣತೆಯ ಜ್ಯೋತಿಯಲ್ಲಿ , ಎವೆಯಿಕ್ಕದೆ ನೆಟ್ಟ ನೋಟದಲ್ಲಿ.... ಗರ ಗರ ತಿರುಗುತ್ತಿತ್ತು....-೧-
ಕತ್ತಲಿನ ಭಯದಲ್ಲಿಯೇ ಅನ್ನಪೂರ್ಣ ಬೆಳುಕು ಚೆಲ್ಲುತ್ತಿದ್ದ ದೀಪವನ್ನು ಮತ್ತೆ ತದೇಕ ಚಿತ್ತವಾಗಿ ನೋಡಲಾರ೦ಭಿಸಿದಳು....ದೀಪದಲ್ಲಿನ ಬೆಳಕು ಈಗ ಮೆಲ್ಲ ಮೆಲ್ಲ ಸುತ್ತಾ ಹರಡುತ್ತಾ ಕತ್ತಲನ್ನು ನು೦ಗುತ್ತಿದ್ದ೦ತೆನಿಸಿತು...
ಆಶೆ ಬೆಳಕಾಗಿ ಚೆಲ್ಲುತ್ತಿದೆ ಎನಿಸುತ್ತಲೇ...
ಮನ ಮತ್ತೆ ವಿಚಾರಕ್ಕೆ ತಿರುಗಹತ್ತಿತು...


ನೆನಪಿನ ಸರಣಿ ಮತ್ತೆ ಮುಂದು ವರೆಯಿತು.....


"ಅನ್ನು ನೀನೇಕೆ ಕೆಲಸಕ್ಕೆ ಸೇರಬಾರದು "
"ಏಕೆ ಅನು ನೀನು ದುಡಿಯುತ್ತಿರುವದು ನಮ್ಮಿಬ್ಬರಿಗೆ ಸಾಲದೇ?"
"ಹಾಗಲ್ಲ ಅನ್ನು ನಿನಗೂ ಹೊರ ಪ್ರಪಂಚದ ಸಂಪರ್ಕವಿರಬೇಕು ... ಸಾಮಾಜಿಕ ಸಂಪರ್ಕ ಒಳ್ಳೆಯದು ... ಜೊತೆಗೆ ಆರ್ಥಿಕ ಸ್ವಾಯುತ್ತತೆ ಹೆಣ್ಣಿಗೆ ಅವಶ್ಯ ಸಹಾ.....ಗಂಡನಿಗೆ ಪೂರ್ತಿ ಅಲವತ್ತಿಕೊಂಡ ಜೀವನ... ಮುಂದೆ... ನಾನೇನಾದರೂ ನಿನ್ನ ಒಂಟಿ ಬಿಟ್ಟು ಹೋಗಬೇಕಾದ..."
"ಛೀ ಬಿಡ್ತು ಎನ್ನಿ... ನಿಮಗೂ ಏನಾಗೊಲ್ಲ..... ನನಗೂ ಏನಾಗೊಲ್ಲ.....ನನಗೆ ಯಾವ ಸಾಮಾಜಿಕ ಸಂಪರ್ಕವು ಬೇಡ.. ಆರ್ಥಿಕ ಸ್ವಾಯುತ್ತತೆಯು ಬೇಡ.... ನೀವಿದ್ದರೆ ಅಷ್ಟೆ ಸಾಕು..." ಎಂದು ಅವನ ಬಾಯಲ್ಲಿ ಕೈ ಇಟ್ಟು ನುಡಿದ್ದದ್ದು ನೆನಪಿಗೆ ಸಳ್ಳೇ೦ದು ಬಂತು....
ಅಂದು ಅವನ ಮಾತು ಕೇಳಿ ಕೆಲಸಕ್ಕೆ ಸೇರಿದ್ದರೆ... ಕೆಲಸದ ನಡುವೆ... ಮಿತ್ರರ ಸಂಪರ್ಕದ ನಡುವೆ ....
ಇಂದಿನ ಅವನ ಅಗಲಿಕೆಯಲ್ಲಿನ ಈ ಒಂಟಿತನ ಇಷ್ಟೊಂದು ಕಾಡುತ್ತಿರಲಿಲ್ಲವೇನೋ ಎನಿಸಿತು......
ಇಗಲೂ ಕಾಲ ಮಿಂಚಿಲ್ಲ.... ಇನ್ನು ಮುಂದೆಯೂ... ಕೆಲಸಕ್ಕೆ ಸೇರಿ ಅವರ ಮನಸ್ಸಿನಂತೆ ನಡೆದು ಈ ಒಂಟಿತನದ ಹಾದಿಯನ್ನು ಮರೆಯಬಹುದು......ಎನ್ನಿಸಹತ್ತಿತು..
ಮೊನ್ನೆ ಇವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬಂದಿದ್ದ ಇವರ ಮೇಲಧಿಕಾರಿ ಕಿರಣ ದಂಪತಿಗಳು- ಅನುರಾಗನನ್ನು ಕೊಂಡಾಡುತ್ತಾ..." ಮೇಡಂ.. ನೀವು ಕೆಲಸಕ್ಕೆ ಸೇರಿ.. ನಿಮ್ಮ ದುಖ ಮರೆಯಲು ಇದು ಒಂದು ದಾರಿ... ಜೊತೆಗೆ ಸ್ವಲ್ಪ ಸಂಪಾದನೆಯು ಆಗುತ್ತೆ... ಯೋಚಿಸಿ ... ನಿಮಗೆ ನನ್ನ ಸಲಹೆ ಸೂಕ್ತ ಎನಿಸಿದರೆ ದಯವಿಟ್ಟು ನನ್ನನ್ನು ಸಂಪರ್ಕಿಸಿ " ಎಂದದ್ದು ನೆನಪಿಗೆ ಸುಳಿಯಿತು..
ಕಿರಣ ದಂಪತಿಗಳನ್ನೂ ಅನು ಸದಾ ಹೊಗಳುತ್ತಿದ್ದುದು.. ಮತ್ತು ಅವರ ಸಹಾಯದ ಗುಣವನ್ನೂ
ಕೊಂಡಾಡುತ್ತಿದ್ದು... ಆ ಕ್ಷಣ ನೆನಪಾಗಿತ್ತು...
ತಾನು ಕೆಲಸಕ್ಕೆ ಸೇರಬೇಕು ಎನ್ನುವ ತುಡಿತ ಬಲವಾಗತೊಡಗಿತು....
ತಾನು ಕೆಲಸಕ್ಕೆ ಸೇರಿದರೆ ಅತ್ತೆ -ಮಾವ ಸಹಿತ ಖಂಡಿತ ಬಂದು ಜೊತೆಯಲ್ಲಿರುತ್ತಾರೆ....

-೨-
ಅನಾಥ ಮಗುವನ್ನು ದತ್ತು ತೆಗೆದುಕೊಂಡಿದ್ದರೆ??....
ಎಂಬ ವಿಷಯ ತಲೆಗೆ ಬಂದದ್ದನ್ನು ಮತ್ತೆ ನೆನಸುತ್ತಲೇ ಅನ್ನಪೂರ್ಣಾಳ ಮನ ಮತ್ತೆ ಯೋಚಿಸತೊಡಗಿತು....
ಅನಾಥ ಮಗುವನ್ನು ಇಗಲೂ ತಂದು ಸಾಕಬಹುದು...
ಇವರು ಮಾಡಿದ ಆಸ್ತಿಯಲ್ಲಿ ಮಗುವೊಂದನ್ನು ಸಾಕಿ ಸಲುಹಬಹುದೆನಿಸಹತ್ತಿತು..
ಆ ಮಗುವ ಲಾಲನೆ-ಪಾಲನೆಯಲ್ಲಿ ...ಒಂಟಿತನದ ಮುಂದಿನ ಬದುಕು ಸ್ವಲ್ಪ ಹಗುರವಾಗಬಹುದು....
ನಲವತ್ತರ ನಾನು ಅರವತ್ತಾಗುವಲ್ಲಿ ಮಗು ಇಪ್ಪತ್ತರದ್ದಾಗಿ ನನ್ನ ಮುದಿಕಾಲಕ್ಕೆ ಆಸರವಾಗಲೂಬಹುದು....
ಅತ್ತೆಮಾವರ ಜೊತೆ ಮಗುವ ಲಾಲನೆ ಪಾಲನೆಗೇ ಜೊತೆಯೂ ಆಗಬಹುದ೦ತೆನಿಸಿ ಮನ ಮುದವಾದ೦ತೆನಿಸಿತು...
ದೀಪದ ಬೆಳಕಲ್ಲಿ ಈಗ ಕತ್ತಲೆ ಕಡಿಮೆಯಾಗುತ್ತಿದೆ ಎನಿಸಹತ್ತಿತ್ತು....

-೩-
ಮತ್ತೆ ಯೋಚನೆ ಭೂತಕ್ಕೆ ತಿರುಗಿತು.....
ಅಂದು ಮನೆಯಿಂದ ದೂರದಲ್ಲಿ ..ಇಬ್ಬರು ಸಂಜೆ ವಿಹಾರಕ್ಕೆ ಮನೆಯ ದೂರದಲ್ಲಿರುವ ಉದ್ಯಾನವನದಲ್ಲಿ ತಿರುಗುತ್ತಿದ್ದಾಗ ವೃಧ್ದರ ತಂಡವೊಂದು ಮೋಜಿನಿಂದ ಆಟವಾಡುತ್ತಿದ್ದರು...... ಮಧ್ಯವಯಸ್ಕ ದಂಪತಿಗಳು ಅವರೊಡನೆ ಮೋಜಿನಲ್ಲಿ ನಿರತರಾಗಿದ್ದು ಅವರನ್ನೆಲ್ಲಾ ಆಟಕ್ಕೆ ಹುರಿದು೦ಬಿಸುತ್ತಿದ್ದು ಕಂಡಿತು....
"ಅನು ಇವರೆಲ್ಲಾ ಯಾರು"
" ಅನ್ನು ಆ ದಂಪತಿಗಳು ಪಕ್ಕದ ಕಾರ್ಖಾನೆ ಮಾಲೀಕರು...ನಮ್ಮ ಹಾಗೆ ಮಕ್ಕಳಿಲ್ಲ... ಅವರು ಒಂದು ವ್ರುಧ್ಧಾಶ್ರಮ ನಡೆಸುತ್ತಿದ್ದಾರೆ.. ವಾರಾ೦ತ್ಯದಲ್ಲಿ ಅವರು ಎಲ್ಲರೊಡನೆ ಸೇರಿ ಸಮಯ ಕಳೆಯುತ್ತಾರೆ... ಕೆಲವೊಮ್ಮೆ .... ಹೀಗೇ ಹೊರ ಪ್ರವಾಸಕ್ಕೂ ಬರುತ್ತಾರೆ..."
"ಹೌದಾ!!...ನಿಜಕ್ಕೂ ಒಳ್ಳೆ ಕೆಲಸ"
" ಹೌದು ಅನ್ನು ನಾವು ಒಂದಿಷ್ಟು ಹಣ ಮಾಡಿದ ಮೇಲೆ ಹೀಗೆ ಒಂದು ವ್ರುಧ್ಧಾಶ್ರಮಕ್ಕೆ ಸೇರಿ ಬಿಡುವಾ....ಮುಪ್ಪಲ್ಲಿ ಎಲ್ಲರೊಡನೆ ಹೀಗೆ ಇರುವದು ಮಜವಲ್ಲವೇ...."
"ಹೌದು.. ನಿಜ ಅನು... ಇಗಲೇ ಸೇರಿ ಬಿಡುವಾ ಈಗ ಅವರ ಸೇವೆ ಮಾಡುತ್ತಾ ಇರುವಾ...ಮುಪ್ಪಲ್ಲಿ ನಮಗೆ ಯಾರೋ ಆಸರೆ ಆಗುತ್ತಾರೆ..ಅಲ್ಲವಾ..."
ಅಂದು ಹೇಳಿದ್ದು ಪೂರ್ತಿಗ೦ಭೀರವಾಗಿಲ್ಲದಿದ್ದರೂ ಮನದ ಮೂಲೆಯಲ್ಲೇನೋ ತುಡಿತವಿದ್ದಿರಬಹುದಿತ್ತು ಎಂದು ಇಂದು ಅನ್ನಿಸುತಿದೆ .....
ಗಂಡ ಸಂಪಾದಿಸಿದ ಹಣದಲ್ಲಿ ಅದನ್ನು ಇಂದು ಸಾಕಾರಮಾಡಿಕೊಳ್ಳಬಹುದೆನಿಸಹತ್ತಿತು....
ಜೊತೆಗೆ ತಾನು ಕೆಲಸ ಮಾಡುತ್ತಿದ್ದರೆ .......
ಆ ಹಣದಿಂದ ಇನ್ನೂ ಹೆಚ್ಚಿನ ಸಾರ್ಥಕತೆ ಇಂತಹುವುಗಳಲ್ಲಿ ತೊಡಗುವದರಿಂದ ಹೊಂದಬಹುದಲ್ಲವೇ.....
ಬೆಳಸಿದ ಮಕ್ಕಳು ಮುಪ್ಪಿನಲ್ಲಿ ನೋಡದಿದ್ದರೂ.. ಇ೦ತಹ ಕಾರ್ಯಗಳು ಮುಂದೊ೦ದು ದಿನ ಬದುಕಿಗೆ ಆಸರೆಯಾಗಬಹುದಲ್ಲವೇ...

ಈಗ ದೀಪದ ಬೆಳಕು ಮನೆಯಲ್ಲಿನ ಕತ್ತಲೆ ಓಡಿಸಿದ೦ತೆನಿಸಹತ್ತಿತ್ತು.....

-೪-
ಕತ್ತಲ ಬಗ್ಗೆ ಯೋಚಿಸುವಾಗ ಅನುಗೆ ಆ ಘಟನೆ ನೆನಪಾಗದೆ ಇರದು.....
ಅಂದು ಸಂಜೆ ಭಾರೀ ಗುಡುಗು... ಸಿಡಿಲು.....
ಅನು ಅಂದು ಆಫಿಸಿನಿಂದ ಇನ್ನು ಬಂದಿರಲಿಲ್ಲ.....
ಗಾಳಿ ಮಳೆ ಗುಡುಗು ಸಿಡಿಲು ಜೋರಾಗಿ..... ವಿಧ್ಯುತ್ ಪೂರೈಕೆ ನಿ೦ತಿತ್ತು... ಮನೆಯಲ್ಲಿ ಕತ್ತಲು ಗವ್ವೆನಿಸಹತ್ತಿತು... ಸ೦ಜೆ ರಾತ್ರಿಗೆ ಸರಿದು ...ಅನು ಇನ್ನು ಬರದೆ...ಅವನ ಫೋನ್ ಇರದೇ.... ಮನವನ್ನ ಭಯವಾವರಿಸಿತ್ತು....ಮೇಣಬತ್ತಿ ಹಚ್ಚಲು ತಡಕಾಡಿ ಸಿಗದೇ ದೇವರ ಮನೆಯ ದೀಪದಲ್ಲಿಯೇ ಕುಳಿತಿದ್ದಳು... ಹೆದರಿ ಮುದ್ದೆಯಾಗಿದ್ದಳು ಅನ್ನಪೂರ್ಣಾ..
ಬಾಗಿಲು ತಡಬಡ ಬಡೆದ ಶಬ್ದಕ್ಕೆ ಭಯದಿಂದಲೇ ದೇವರ ಮನೆಯಿಂದ ಹೊರಟುಬಂದು .. ಭಯದಿಂದಲೇ ಅನುವೇ ಬಂದದ್ದು ಎಂದು ಕೇಳಿ ಖಚಿತಪಡಿಸಿಕೊಂಡು ಬಾಗಿಲು ತೆರೆದಿದ್ದ ಅವಳು ಅನುವನ್ನ ನೋಡುತ್ತಲೇ ...ಅವನನ್ನು ಜೋರಾಗಿ ಆಪ್ಪಿ ಅಳುತ್ತಾ..
" ಅನು ಏಕೆ ತಡ? ಫೋನ್ ಏಕೆ ಮಾಡಲಿಲ್ಲ? ಮನೆಯೆಲ್ಲಾ ಕತ್ತಲು ...ಮಳೆ... ಗುಡುಗು... ಸಿಡಿಲು.. ಮಿಂಚು... ನನಗೆ ಎಷ್ಟು ಭಯ ಆಗಿತ್ತು ಗೊತ್ತಾ???"
ಅವಳನ್ನು ಒಂದು ಕೈಯಲ್ಲಿ ಬಳಸಿ ಜೋರಾಗಿ ಅಪ್ಪಿ, ಇನ್ನೊಂದು ಕೈಯಲ್ಲಿ ತಲೆ ನೇವರಿಸುತ್ತಾ.. "ಅನ್ನು ಹೀಗೆ ಭಯ ಪಟ್ಟರೆ ಹೇಗೆ ಆಫೀಸಿನಿಂದ ಹೊರಟ ನನಗೆ.. ಬಸ್ಸ ಸಿಗದೇ... ಆಟೋ ಸಿಗದೇ... ಮೊಬೈಲ್ ಸಂಪರ್ಕ ಬಂದ ಆಗಿ... ಯಾರದೋ ಕಾರಲ್ಲಿ ಸಹಾಯ ಪಡೆದು ಇಲ್ಲಿಗೆ ಬಂದೆ.. ಕ್ಷಮಿಸು... ಆದರೆ ನೀನು ಹೀಗೆ ಹೆದರಿದರೆ ಹೇಗೆ .... ನಾನೆ ಇಲ್ಲವಾದರೆ ಇನ್ನು ಹೇಗೆ ?...."
ಅವನ ಬಾಯಿಗೆ ಕೈ ಇಟ್ಟು " ಛೀ ಹಾಗೆ ಹೇಳಬೇಡಿ" ಎಂದಳು.
" ಅನ್ನು ಹೀಗೆ ಹೆದರಿದರೆ ಹೇಗೆ... ಬದುಕನ್ನು ಎದುರಿಸಬೇಕು... ಎಂಥ ಕತ್ತಲು ಬಂದರು ಮೆಟ್ಟಿ ನಿಲ್ಲುವ ಛಲವಿರಬೇಕು... ನಾನಿಲ್ಲ ಎಂದರು ನೀನು ಬಾಳಿ ತೋರಿಸಬೇಕು... ಹೀಗೆ ಎದೆಗು೦ದಬಾರದು..." ಎಂದೆಲ್ಲಾ ಸಂತೈಸಿದ್ದು ನೆನಪಿಗೆ ಬರಹತ್ತಿತ್ತು....


ಆ ಮಾತೆಲ್ಲಾ ನೆನಪಾದಂತೆ ಅನ್ನಪೂರ್ಣಾಳ ಮನ ಗಟ್ಟಿಯಾದ೦ತೆನಿಸಿತು... ದೀಪದ ಬೆಳಕು ಪ್ರಖರವಾಗಿ... ಮನೆಯ ಕತ್ತಲು... ಮನದ ಭಯವು...ಇಲ್ಲವಾದ೦ತೆನಿಸಿ ಮುಂದಿನ ದಾರಿ ಸ್ಪಷ್ಟವೆನಿಸತೊಡಗಿತು...


......ಮುಕ್ತಾಯ ಅಲ್ಲ ಪ್ರಾರ೦ಭ........

ಅನ್ನಪೂರ್ಣಳ ಮನ ಈಗ ದೀಪದ ಜ್ಯೋತಿಯಲ್ಲಿ ಬೆಳಕಾಗಿತ್ತು... ಮನೆ-ಮನದಲ್ಲಿ ಆವರಿಸಿದ್ದ ಕತ್ತಲೆ ಓಡಿ ಹೋದ೦ತೆನಿಸಿತು....
ಅವಳ ನಿರ್ಧಾರ ಗಟ್ಟಿಯಾಗಿತ್ತು. ಬೆಳಿಗ್ಗೆ ಎದ್ದವಳೇ ಕಿರಣ ದಂಪತಿಗಳನ್ನು ಕಂಡು ಕೆಲಸವೊಂದಕ್ಕೆ ಸೇರುವದು...ಅತ್ತೆ-ಮಾವರನ್ನು ಜೊತೆಗೆ ಕರೆದುಕೊಂಡು ತ೦ದಿಟ್ಟುಕೊಳ್ಳುವದು... ಆಮೇಲೆ ಅವರೊಡನೆ ಅನಾಥಾಶ್ರಮಕ್ಕೆ ಹೋಗಿ ಮಗುವೊಂದನ್ನು ದತ್ತು ಪಡೆದು ಬೆಳೆಸುವದು...
ಸಮಯ ಸಿಕ್ಕಾಗ ವ್ರುಧ್ಧಾಶ್ರಮದಲ್ಲಿ ತನು -ಮನ-ಧನಗಳ ಸೇವೆ ಸಲ್ಲಿಸಿ ಬದುಕ ಸಾರ್ಥಕಪಡಿಸಿಕೊಳ್ಳುವ ಕಾಯಕಕ್ಕೆ ತೊಡುಗುವದು...
ಈಗ ಮನ ಶೂನ್ಯದಿ೦ದ ಪರಿಪೂರ್ಣದೆಡೆಗೆ ಸಾಗುತ್ತಿದೆ ಎನಿಸಹತ್ತಿತ್ತು..


ದೂರದಲ್ಲೆಲೋ ಸುಶ್ರಾ ವ್ಯವಾಗಿ ....


"ಸೂರ್ಯನಿಲ್ಲದಿದ್ದರೇನು ??
ಹಣತೆ ಬೆಳಕ ನೀಡದೇ.......?

ಜಗವ ಬೆಳಗದಿದ್ದರೇನು?
ಮನೆಯ ಬೆಳಗಲಾಗದೇ...?

ಮನಕೆ ಮನವು ಇಲ್ಲದಿದ್ದರೇನು?
ಮನವೇ ಮನಕೆ ಆಗದೆ?"

ತೇಲಿ ಬರುತ್ತಿದ್ದ ಹಾಡು ಮನಕ್ಕೆ ತಂಗಾಳಿಯ ಹಿತವನ್ನು ನೀಡುತ್ತಿತ್ತು......