Wednesday, April 28, 2010

"ಕಗ್ಗತ್ತಲೆಯ ಖಂಡದಲ್ಲಿ ........ (ಭಾಗ ೩ )" ವಜ್ರಗಳ ಜಾಲಾಟ

ಭೂ ಗರ್ಭದಾ ಆಳದಾ ಅಡಿಯಲ್ಲಿ
ವಿಶಿಷ್ಟ ಶಿಲಾಪಾಕ ಕುದಿಯುತ್ತ,
ಮೇಲ್ಬರಲು ತೆವಳುತ್ತಾ ,
ಮೇಲ್ಪದರದ ಗಟ್ಟಿಶಿಲೆಯ ಸೀಳುತ್ತಾ,
ಅದರಲ್ಲೇ ದಾರಿಮಾಡಿ ಸಾಗುತ್ತಾ,
ಹೋರಾಟದಲ್ಲಿ ತನ್ನ ಬಿಸಿ ಕಳೆದುಕೊಳ್ಳುತ್ತಾ,
ಭೂಮೇಲ್ಪದರದಾ ಶಿಲೆಯ ಗರ್ಭದಲ್ಲಿ ತಣ್ಣಗಾಗುತ್ತಾ ,
ಸೃಷ್ಟಿಸಿತ್ತು ಕಿ೦ಬರ್ಲೈಟ ಎ೦ಬ ಅಗ್ನಿಜನ್ಯ ಶಿಲೆಯ!!

ಶಿಲೆಯ ಗರ್ಭದಲ್ಲೇ ಅಡಗಿಹವು ವಜ್ರಗಳು!!
ಸಾಮಾನ್ಯ ಕಣ್ಣಿಗೆ ಕಾಣದಂತೆ !!!

ಸಾವಿರಾರು ವರ್ಷಗಳ ಕಾಲದಲಿ,
ಶಿಲೆಯ ಮೇಲೆ ಹರಿದ ನೀರು ಕಲ್ಲನ್ನು ಕರಗಿಸಿ,
ಅದರಲ್ಲಿರುವ ಕಾಣದ೦ತಿರುವ ವಜ್ರವಾ ಬೇರ್ಪಡಿಸಿ ,
ಸಾಣೆ ಹಿಡಿಸಿ ಹೊಳೆವ ವಜ್ರವನ್ನಾಗಿಸಿ,
ನದಿಯ ಪಾತ್ರದಿ ಹರಿದ ನಿ೦ತಾ ಹೂಳಲ್ಲಿ ಹುದುಗಿಸಿ,
ಹುಡುಕುವಾ ತೆವಲಿಗೆ ಮನುಜನಾ ಹತ್ತಿಸಿದೆ !!!!
ಅಪರೂಪದಾ ಶಿಲೆಯು ಸಾಣೆಯಾದ ಮೇಲೆ -
ಅತ್ಯ೦ತ ಹೊಳಪು ,
ಕಾಠಿನ್ಯದ ಪರಾಕಾಷ್ಟೆ,
ಉನ್ನತ ಪಾರದರ್ಶಕತೆ,
ಬೆಳಕಿನೊಡನೆ ಸೇರಿ ವರ್ಣಗಳ ವಿಭಜನೆ,
ಮತ್ತು ನೋಡುಗರಿಗೆ ಕಣ್ಣಿಗೆ ಹಬ್ಬ !
ಇದಕೆ೦ದೆ ಇದು ಎಲ್ಲರ ಅ೦ದಕ್ಕೆ ಮೋಹಕದ ಮಾಯೆ,
ಅದಕೆಂದೇ ಮುಗಿಬಿದ್ದಿಹರು ಮನುಜರು ತೆವಲಿಗೆ !!!
















ಇದು
ನದಿಯ ಪಾತ್ರ ,
ಇಕ್ಕೆಲದಲ್ಲಿ ಸಹಸ್ರಮಾನ ಶತಮಾನದ ಹೂಳು ಸ೦ಗ್ರಹ ,
ಯಾರಿಗೋ ಸಿಕ್ಕಿಹುದು ಆಕಸ್ಮಿಕಕ್ಕೆ ಇಲ್ಲಿ ವಜ್ರವೊ೦ದು!!





















ಇದ್ದಿರಬಹುದು ಇನ್ನು ಹತ್ತು ಹಲವಾರು !!! ಯಾರಿಗ್ಗೊತ್ತು?
ಅದಕೆ೦ದೆ ಹಿ೦ದೆ ಬಿದ್ದಿಹೆವು
ಸಲಿಕೆ- ಪುಟ್ಟಿಯ ಹೊತ್ತು !!
ಅಗೆದು ಬಗೆದು ಜಾಲಾಡಲು!!!

ವಜ್ರ ಹುಡುಕಿ ಹೊಟ್ಟೆ ಹೊರೆಯಲು!!!




















ನದಿಯ ಇಕ್ಕೆಲದ ಪಾತ್ರದಾ ಮರಗಳ ಮಾರಣ,
ತೆಗೆದು ಸಾಣಿಸಬೇಕಲ್ಲ ಅದರಡಿಯಲ್ಲಿರುವ
ಸಹಸ್ರಮಾನದಾ ಹೂಳಿನಾ ಮಣ್ಣ
.





















ನೀರ ಹರಿಸಿ, ಹಾಯಿಸಿ, ಗಟ್ಟಿಯಾದ ಹೂಳುಮಣ್ಣ ಸಡಿಲಿಸಿ,
ತೆಗೆದು ಗಾಲಿಸಬೇಕಲ್ಲ ವಜ್ರಕ್ಕಾಗಿ!!




















ಸಡಿಲಿಸಿದ ಮಣ್ಣ, ಆದೆ ನದಿಯ ನೀರಲ್ಲಿ, ಗಾಲಿಸಿ, ಸೋಸುತಿಹೆವು
ಹುಡುಕಬೇಕಲ್ಲ ವಜ್ರ !!!!
ಸಣ್ಣ ಚೆಪ್ಪರವೊ೦ದು, ಬಿಸಿಲ ರಕ್ಷಣೆಗೆ ಎ೦ದು ಕಟ್ಟಿಹೆವು ನಾವು-
ತೆ೦ಗಿನಾ ನಾರು ಮತ್ತು ಬಿದಿರಿನಲ್ಲಿ.





















ಗಾಲಿಸುವ ಜನರು
ಬೇರ್ಪಡುತಲಿಹುದು ಜಿನುಗಾದ ಮಣ್ಣು
ಜರಡಿಯಾ ಅಡಿಯಿ೦ದ ನೀರಲ್ಲಿ ಇಳಿದು !
ಶೇಖರಣೆಯಾಗುತಿಹುದು ಹರಳು ಜರಡಿ ಮೇಲೆ !!




















ಇವರಾರಪ್ಪ ನಮ್ಮ ಬದುಕನ್ನು ಚಿತ್ರಿಸುವ ಪರದೇಶಿಗಳು ????




















ಹರಳುಗಳನ್ನು ಒ೦ದೊ೦ದಾಗಿ ಎತ್ತಿ ಪರೀಕ್ಷಿಸಬೇಕಾಗಿದೆ
ವಜ್ರ ಅಹುದೋ ಅಲ್ಲವೋ ಎಂದು!!





















ಹೆಕ್ಕಿದಾ ಹರಳುಗಳಾ ಹತ್ತಿರದ ನೋಟ
ವಜ್ರಕ್ಕಾಗಿ ನಡೀಬೇಕು ಇನ್ನು ಹುಡುಕಾಟ !!





















(ನನ್ನ ಕೈಯಲ್ಲಿ ಕ್ಷಣಿಕ ಸಮಯದಿ ಪವಡಿಸಿದ ಯಾರದೋ
ಶ್ರಮದ ಮತ್ತು ಯಾರ ಮೈ ಅಲ೦ಕಾರವಾಗುವಾ ವಜ್ರ)

ಸಿಕ್ಕಿಹುದು ಒ೦ದು ಪುಟ್ಟ ವಜ್ರದಾ ಹರಳು
೨೦೦ ರಿಂದಾ ೨೫೦ ಜನರ ಒ೦ದು ದಿನದಾ ಶ್ರಮ
ಒಮ್ಮೊಮ್ಮೆ ಇದೂ ಇಲ್ಲ ಅವರ ಪಾಲಿಗೆ!
ಮತ್ತೊಮ್ಮೊಮ್ಮೆ ಹತ್ತು ಹಲವಾರು!!
ಬ೦ದು ಹೊತ್ತೊಯ್ಯುವನು ವಣಿಕ ಬೆಲೆ ಕಟ್ಟಿ ಕೊಟ್ಟು,
ಮಾರಿ ಹೊರೆಯುವರು ಹೊಟ್ಟೆ,
ಅವರು
ಶ್ರಮಕೆ
ತಮ್ಮ ಮೈ ಕೊಟ್ಟು !!

Wednesday, April 21, 2010

"ಕಗ್ಗತ್ತಲೆಯ ಖಂಡದಲ್ಲಿ ........ (ಭಾಗ ೨ )" ಬ೦ಗಾರದ ಹಿ೦ದೆ ಬದುಕು ಅರಸುತ್ತಾ



















ಹಸಿರ ಸೀರೆಯ ಹೊದ್ದ ತಿರೆಯಾ ಒಡಲಲ್ಲಿ ,
ಬಗೆಬಗೆಯ
ಖನಿಜ ನಿಕ್ಷೇಪ .
ಮನುಜನಾ ಆಶೆಗೆ ಬೇಕು ಇವುಗಳೆಲ್ಲಾ !
ಬಗೆದು
ತೆಗೆಯಲು ಇಲ್ಲ ಅವಳಾ ಆಕ್ಷೇಪ !!




















ಉರುಳಿದವು ಮರಗಳು ಧರೆಯೊಡಲಿಗೆ ಒರಗಿ
ಶಸ್ತ್ರಚಿಕಿತ್ಸೆಯ ಮುನ್ನ ಕ್ಷೌರ ಕರ್ಮದ೦ತೆ
ಗಣಿಗಾರಿಕೆಗೆ ತೆರವಾಗಿ !




















ಉರುಳಿ ಒಣಗಿದ ಮರಗಳ ಅ೦ತಿಮದಹನ
ಪ್ರಾರ೦ಭಗೊಳಬೇಕಿದೆ ಗಣಿಗಾರಿಕೆ
ಹೆಕ್ಕಿ ತೆಗೆಯಬೇಕಿದೆ ಖನಿಜ
ಚಲಿಸಬೇಕಿದೆ -ಬಡತನದಿ ನಿಂತ ಬದುಕು.




















೧೦೦ ಅಡಿ ಆಳದ ಸುರ೦ಗ- ತೆಗೆದಾಗಿದೆ,
ನಿಕ್ಷೇಪದ ಎಳೆಯ ಹುಡುಕಿ.
ತರುಣ -ಯುವಕರ ತಂಡ ತೆವಳಿ ತರಬೇಕಿದೆ,
ಬ೦ಗಾರದ ಅದಿರು ಹೆಕ್ಕಿ.



























ಆಳದಲ್ಲಿಹ ಯೆಜಮಾನ ತುಂಬಿ ಕೊಡುತಿಹನು
ಅದಿರು ತು೦ಬಿದ ಮಂಕರಿ
ಎಳೆದು ಗುಡ್ಡೆ ಹೊಯ್ಯುತಿಹೆವು,
ಸ೦ಸ್ಕರಿಸಿ
ಹುಡುಕಬೇಕಿದೆ
ಬದುಕ ಹೊರೆವ ಪರಿ




















ನಾನೇ ಬಾಲೆ!
ನನಗೊಂದು ಕೈಗೂಸು!!
ಬಿಟ್ಟಿರಲಾರೆನು ,
ಹೊತ್ತು ತಂದಿಹೆನು,
ಆಳದಾ ಗಣಿಗೆ, ಹೆಕ್ಕಿ ತೆಗೆಯಲು ಚಿನ್ನ!
ತು೦ಬಿಸಬೇಕಲ್ಲ ಹಸಿದೊಟ್ಟೆಗೆ ಅನ್ನ!!





















ಕೆಲಸದಾ ನಡುವೆ ಒ೦ದಿಷ್ಟು ವಿರಾಮ
ಚಹದೊಂದಿಗೆ ಮಂಥನ !
ತಾಯಂದಿರಿಂದ ಹಸಿದ ಕ೦ದಮ್ಮಗಳಿಗೆ
ಎದೆಹಾಲ ಸಿಂಚನ !




















ಬೇಗ ಬೇಗ ಅಗೆದು ತುಂಬಿಕೊಡಿ
ಹೊರುವವರಿಗಿಲ್ಲ ಕೆಲಸ!!





















ಪುಟ್ಟ ಕ೦ದರು ನಾವು ಪುಟ್ಟ ಮಂಕರಿಯಲ್ಲಿ
ಹೊತ್ತು ಸಾಗಿಸುವೆವು ಅದಿರು
ಸ೦ಸ್ಕರಿಸುವರು ಅದನ್ನು ವೃದ್ಧ ಅಜ್ಜ -ಅಜ್ಜಿಯರು!!





















ಕಲ್ಲಿನಲ್ಲಿದೆ ಕಣ್ಣಿಗೆ ಕಾಣುವ ಬಂಗಾರ
ಇ೦ತಹ ಹಲವು ಸಿಕ್ಕಲ್ಲಿ ಅದು ನಮಗುಪಕಾರ





















ಪುಟ್ಟ ಪೋರರು ಹೊತ್ತು ತ೦ದಿಹರು ಅದಿರು
ನೀರಲ್ಲಿ ಅದನ್ನು ಗಾಲಿಸಿ ಬೇರ್ಪಡಿಸುತಿಹೆವು ಚಿನ್ನ



















ಅದಿರನ್ನು ಗಾಲಿಸಿ ಬಂಗಾರ ಬೇರ್ಪಡಿಸುವ ತೊಟ್ಟಿ
ವಯೋವೃದ್ಧರಿಗೊಂದು ಹಗುರ ಚಾಣಾಕ್ಷ ವೃತ್ತಿ .
























ನಮ್ಮ ಬದುಕನ್ನು ಸೆರೆಹಿಡಿಯುವ ಇವರು ಯಾಕಿಲ್ಲಿ?
ನೋಟದಿ ಕೊಲ್ಲುತಿಹ ಪ್ರಶ್ನೆಗಳು ಇದಕೆ ಉತ್ತರವೆಲ್ಲಿ?



















ಇಡೀದಿನದ ಕುಟುಂಬದವರೆಲ್ಲ ಶ್ರಮ
ದಕ್ಕಿದ್ದು ನಮಗಿಷ್ಟು!
ಯೌವ್ವನದ ಜನ ಅಗೆದು ಬಗೆದು ಎಳೆತ೦ದರು ಅದಿರು ಹೊರಕ್ಕೆ,
ಮಕ್ಕಳು ಸಾಗಿಸಿದರ ಅದನ್ನು ಸ೦ಸ್ಕರಣ ಶಿಬಿರಕ್ಕೆ,
ವೃದ್ಧರು ಸ೦ಸ್ಕರಿಸಿದರು ಚಿನ್ನ ಹೆಕ್ಕುವದಕ್ಕೆ,
ನಮ್ಮೆಲ್ಲರ ಶ್ರಮ ಯಾವದೋ ದೇಶದ ಜನಕ್ಕೆ ಶೃಂಗಾರ
ನಮ್ಮ ಬದುಕಿಗದು ಅನ್ನ- ಆಹಾರ .

(ಪಾಶ್ಚಿಮಾತ್ಯ ಆಫ್ರಿಕಾ ಖಂಡದ ಗಿನಿ-ಕೊನಾಕ್ರಿ ಎ೦ಬ ದೇಶದಲ್ಲಿ ಜನರು ಹೊಟ್ಟೆಪಾಡಿಗೆ ದುಡ್ಡು ಮಾಡಲು ಗಣಿಗಾರಿಕೆ ಮಾಡುವ ಚಿತ್ರಣದ ಲೇಖನ. ಅವರ ಉದ್ದೇಶ ಕೇವಲ ಬದುಕು -ಹೊಟ್ಟೆ ಹೊರೆಯುವದು. ಲ್ಲಿ ನಡೆವುದು ಮಾನವ ಶಾರೀರಿಕ ಗಣಿಗಾರಿಕೆ. ಅಲ್ಲಿನ ಪರಿಸರದ ಸಾಮಾಜಿಕ, ಆರ್ಥಿಕ, ರಾಜಕೀಯ, ತಾಂತ್ರಿಕ ಪರಿಸ್ಥಿತಿಯ ಜೊತೆಗೆ ಅವರ ಬದುಕು ಚಿತ್ರಣವನ್ನು ಚಿತ್ರಲೇಖನದಲ್ಲಿ ಹೇಳದೆ ಮಾಡುವ ಪ್ರಯತ್ನವಿದೆ -ಅದು ಓದುಗರಿಗೆ ವೇದ್ಯವಾಗುವದು ಎ೦ದು ನನ್ನ ಅನಿಸಿಕೆ)


Saturday, April 10, 2010

ಕಗ್ಗತ್ತಲೆಯ ಖಂಡದಲ್ಲಿ ........ (ಭಾಗ ೧ ) ಚೆದುರಿದ ಬದುಕು



















ಚೆದುರಿದ ಬದುಕು ಸುತ್ತಮುತ್ತೆಲ್ಲ ಚೆಲ್ಲಿ
ಎಳೆಯರ
ಕಂಗಳಲ್ಲಿ ಕನಸುಗಳಿಗೆ ಮುಗಿವೆಲ್ಲಿ ?




















ಬಹು-ಪತ್ನಿ , ಬಹು ಸಂತಾನ -ಜೀವನದ ಕೊಸರಿಲ್ಲಿ
ಯಾರೆನ್ನುವರು ನಮಗಿಹುದು ಬಡತನವಿಲ್ಲಿ ?





















ಬತ್ತುತ್ತಾ
ಇವೆ ಜೀವದಾಸರೆ
ಹೊತ್ತು
ತರುತಿಹಳು ಎಳೆ ಬಾಲೆ ಜೀವಧಾರೆ


























ಸಾರ್ವಜನಿಕ ಸ೦ಪರ್ಕದಾ ಸುಖವಿಲ್ಲ !
ಬಡತನದಲ್ಲೂ ಗುಂಪಿನಲ್ಲಿ ಬಾಡಿಗೆಯಾ ಕಾರು
ಕುರಿಹಿಂಡಿನಾ
ತರದಿ ತುಂಬಿ
ಎಳೆಯುತಿಹಲಿದು
ಬಾಳ ತೇರು!






















ಪರದೇಶದಲ್ಲಿ ಪರದೇಶಿಗಳು ಇವರಿಲ್ಲಿ.
ಆದರು
ಸುಖಿಗಳು - ಇರಲು
ತಲೆಯ
ಮೇಲೆ ಸೂರಾಗಿ ಭಾನು,
ಅವರನೆತ್ತಿ ಹೊತ್ತ ವಸುಂಧರೆಯ ಮಡಿಲು.






















ಇಡೀ ದನವ ನೇತಾಡಿಸಿ, ಕಡಿಸಿ, ಒಡಲ ತುಂಬಿಸುವ ಸಂತೆ
ಮಿಕ್ಕಿದ
ತುಂಡುಗಳ, ಹಿಟ್ಟಚ್ಚಿ, ಎಣ್ಣೆಯಲಿ ಕರಿದು ಮಾರುವ ವರತೆ!






















ಮೂರುಕಲ್ಲಿನ ಮಧ್ಯ, ಪುಡಿ ಕಟ್ಟಿಗೆಯ ಬೆಂಕಿ,
ಹೊತ್ತಿ ಉರಿಸುತಲಿಹದು, ಪಾತ್ರೆಯಲ್ಲಿನ ನೀರು
ಪುಟ್ಟ
ಕಂದನ ಕಣ್ಣು ನೆಟ್ಟ ನೋಟದಲ್ಲಿ
ನೀರಿಕ್ಷಿಸುತಿಹುದು
"ಗಂಜಿಯಾಗುವದು ಎಂದು?"





















ಮಾ೦ಸಕ್ಕಿ೦ತಲೂ ತುಟ್ಟಿ ತರಕಾರಿ ಇಲ್ಲಿ
ಕೊಳ್ಳುಗರು
ಇಹರೆಲ್ಲಿ?



















ನಾಲ್ಕು ಹೆಂಡರ ಮುದ್ದಿನ ಮಾವ ನೀಲಿ ನಿಲುವಂಗಿ ತಾತ!!
ಪ್ರೀತಿ
ಎಲ್ಲರೆಡೆ ಸಮಾನುಪಾತ !!!
ಗ್ರಾಮಕ್ಕೆ
ಮುಖ್ಯಸ್ಥ !!!!





















ಬಡತನಕೆ ದಿಕ್ಕೆಟ್ಟು ಕಾಡಿನಲ್ಲಿ
ಕಟ್ಟಿಕೊಂಡಿಹನು ಗುಡಿಸಲೊಂದನ್ನು.
ಕರೆಯುವರು ನಾಡಿನ ಜನ ಇವಗೆ ರಾಬಿನ್ನುಹುಡ್ದು
.
ಅವನ ಅನುಪಸ್ಥಿತಿಯಲ್ಲಿ ನಾನು ಕೊಡುತಿಹೆನು ಪೋಸು !!!!









































ಗುಂಪು ಕಾರಿಗೂ ನಮಗಿಹದು ಕಷ್ಟ !
ಕತ್ತೆಬಂಡಿಯು ಪುರೈಸುತಲಿಹದು ನಮ್ಮ ಸಾಗಾಟ !!





















ಮಕ್ಕಳಾಟದ ಮೋಜು, ಆಟ , ತುಂಟಾಟ
ಬಾಲ್ಯ ನಗುತಲಿಹದು!!






















ಬೆಲ್ಲ -ಅವಲಕ್ಕಿ ಗಂಜಿ ಮೆಲ್ಲುತಿಹನು ಪೋರ
ತುಂಬಿಸುತಿಹನು ಹಸಿದ ಉದರ !!!




















ಸಿಹಿಗಂಜಿಯ ಸಹಬಾಳ್ವೆಯ ಊಟ
ಕಣ್ಣಿಗೆ
ಮುಂಜಾನೆಯ ರಮ್ಯನೋಟ

Monday, April 5, 2010

ಬೀಳ್ಕೊಡುಗೆಯ ಕವನ

(ಫೋಟೋ ಕೃಪೆ : ಗೂಗಲ್ ಅಂತರ್ಜಾಲ ಹುಡುಕಾಟ )

ಮಿತ್ರ ವಾಮನ ಮತ್ತು ನಾನು ವಿಧ್ಯಾರ್ಥಿನಿಲಯದಲ್ಲಿ ಓದನ್ನು ಮುಗಿಸಿ, ಅಗಲುತ್ತಿರುವ ಕ್ಷಣದ ಅವನು ಬರೆದ "ಬೀಳ್ಕೊಡುಗೆ" ಕವನ.ವಾಮನ ಕುಲ್ಕರ್ಣಿಯವರ "ತೆರೆಗಳು" ಕವನ ಸ೦ಕಲನದ ಕವನ.



Wednesday, March 31, 2010

ಮಿತ್ರ ವಾಮನನ "ತೆರೆಗಳು" ಕವನ ಸ೦ಕಲನದ ಪರಿಚಯ




ನನ್ನ ಆಪ್ತ ಮಿತ್ರ ವಾಮನನ "ತೆರೆಗಳು" ಕವನ ಸ೦ಕಲನ ಮೊನ್ನೆ ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ದಿನಾ೦ಕ ೨೮-೦೩-೨೦೧೦ ರ೦ದು ಶ್ರೀಯುತ ಏಣಗಿ ಬಾಳಪ್ಪನವರ ಮುಖಾಂತರ ಅದಿಕೃತವಾಗಿ ಬಿಡುಗಡೆಯಾಗಿ, ಆ ಕವನ ಸ೦ಕಲನ ರಾಜ್ಯಮಟ್ಟದ "ಎಸ.ಡಿ. ಇ೦ಚಲ" (ಬೇ೦ದ್ರೆ ಸಮಕಾಲಿನರಾದ ಇ೦ಚಲರ ಹೆಸರಿನಲ್ಲಿ ಸ್ತಾಪಿತವಾದ ಪ್ರತಿಷ್ಠಾನ ಕೊಡಮಾಡುವ) ಪ್ರಶಸ್ತಿ ಪಡೆದು ಎಲ್ಲರ ಮೆಚ್ಚಿಗೆ ಪಡೆದದ್ದು ಹರುಷದ ವಿಷಯ.
ವಾಮನರ ಆ ಕವನ ಸ೦ಕಲನಕ್ಕೆ ನನ್ನ ಬೆನ್ನುಡಿ ಇತ್ತು. ಅದರಲ್ಲಿ ಪ್ರಾಸ, ನವ್ಯ, ಸುನೀತ, ಷಟ್ಪದಿ, ಹಾಗು ಮರಂದ -ವಿಭಿನ್ನ ಪ್ರಾಕಾರಗಳ ಕಾವ್ಯಗಳಿವೆ. ಪರಿಸರದ ಬೆಡಗಿದೆ, ನಾಡಿನ ವರ್ಣನೆ ಇದೆ, ಸ್ಥಳ ವಿಶೇಷ ಮತ್ತು ಪರಿಚಯಗಳಿವೆ, ಸಂಬಂಧಗಳ ಮಾಧುರ್ಯವಿದೆ, ಪರಿಸರದ ಕ್ರೌರ್ಯವಿದೆ, ಸಾಮಾಜಿಕ ಪಿಡುಗುಗಳ ವಿರುಧ್ಧದ ದನಿಯಿದೆ, ನವರಸಗಳಿವೆ.
ಮಿತ್ರ ವಾಮನನಿಗೆ ಅ೦ತರ್ಜಾಲದ ಸ೦ಪರ್ಕ ಹಾಗೂ ಅಭ್ಯಾಸವಿಲ್ಲದ್ದಕ್ಕೆ ಅವನ ಕವನಗಳ ಜೆಪಿಜಿ ಮಾದರಿಯನ್ನು ನಾನು ಅವನ ಹೆಸರಿನಲ್ಲಿ ಬ್ಲಾಗ್ ಒಂದನ್ನು ರಚಿಸಿ ಅಲ್ಲಿ ನಿಮ್ಮೆಲ್ಲರ ರಸಾಸ್ವಾದನೆಗೆ ಏರಿಸಿರುವೆ. ಓದಿ ಪ್ರತಿಕ್ರಿಯಿಸಿ.

ಅದರ ಕೊಂಡಿ : http://vamkulkarni.blogspot.com/
(ಈ ಕವನ ಸ೦ಕಲನದಲ್ಲಿನ ಎಲ್ಲ ಕವನಗಳನ್ನ ವಿ೦ಗಡಿಸಿ ವಿವಿಧ ಪೊಸ್ಟ್-ಗಳನ್ನಾಗಿಸಿ ಅ೦ತರ್ಜಾಲದಲ್ಲಿ ಏರಿಸಿದ್ದೆನೆ. ಮರ೦ದದ ಹನಿಗಳು ನನಗಿಷ್ಟವಾದ ಚೆ೦ದದ ಚುಟುಕು ಪ್ರಾಕಾರ. )

ಅವನು ತನ್ನನ್ನು ಸಕ್ರಿಯ ಅ೦ತರ್ಜಾಲದಲ್ಲಿ ತೊಡಗಿಸಿಕೊಳ್ಳದೇ ಇರುವದರಿ೦ದ, ನಾನು ಹಾಕಿದ ಅವನ ಸು೦ದರ ಕವನಗಳು, ಅ೦ತರ್ಜಾಲದಲ್ಲಿನ ಅವನ ಬ್ಲೊಗ್ನಲ್ಲಿ , ನೇಪಥ್ಯ ಸೇರದಿರಲಿ ಮತ್ತು ತಮ್ಮ೦ಥಾ ಸಹೃದಯ ಓದುಗರ ಕಣ್ಣಿಗೆ ಬೀಳದ೦ತೆ ಇರದಿರಲಿ, ಎ೦ದು ಅವುಗಳ ಪ್ರಸ್ಥಾವನೆಯನ್ನು ಇಲ್ಲಿ, ತಮಗೆ ಅವುಗಳು ಇಷ್ಟವಾಗುತ್ತದೆ೦ಬ ನ೦ಬಿಕೆಯಿ೦ದ, ಮಾಡಿರುವೆ.

ಆ ಕವನ ಸಂಕಲನದ ನನ್ನ ಬೆನ್ನುಡಿಯನ್ನು ಕವನ ಸಂಕಲನದ ಪರಿಚಯಕ್ಕೆ ಕೆಳಗೆ ನೀಡಿರುವೆ.

ನಲ್ನುಡಿ
ಮಿತ್ರ ವಾಮನರ ಕವನ ಸ೦ಕಲನ ಎಲ್ಲ ಒಡನಾಡಿಗಳ ಒತ್ತಾಸೆಯಾಗಿ, ಈಗ ಹೊರಬರುತ್ತಿರುವದು ತು೦ಬಾ ಆತ್ಮೀಯ ಅಭಿಮಾನದ ಸ೦ಗತಿ. ಪರಸ್ಪರ ಭಿನ್ನದ್ರಷ್ಠಿಕೋನದ ನಮ್ಮಿಬ್ಬರ ಒಡನಾಟ ೧೯೮೪ರಲ್ಲಿ ಧಾರವಾಡದ ಪ್ರಲ್ಹಾದ ವಿದ್ಯಾರ್ಥಿ ನಿಲಯದಲ್ಲಿ ಪ್ರಾರ೦ಭಗೊ೦ಡು ಒ೦ದು ಹೆಮ್ಮರವಾಗಿದ್ದು ಒ೦ದು ಸೋಜಿಗವೇ. ಆ ಒಡನಾಟವೆ ನನ್ನಿ೦ದ, ಇ೦ದು ಈ ಬರಹ ಬರೆಯಿಸುವದಕ್ಕೆ ಅವರಿಗೆ ಪ್ರೇರಣೆ. ಆದ್ದರಿ೦ದಲೇ ಇದು ಮುನ್ನುಡಿಯಲ್ಲ -ನಲ್ಮೆಯ ನಲ್ನುಡಿ. ಆವರ ಈ ವಿಶ್ವಾಸಕ್ಕೆ ನಾನೆಷ್ಟು ಅಹ೯ನೋ ಅದು ನಿಮಗೂ ಅವರಿಗೂ ಬಿಟ್ಟ ವಿಚಾರ. ವಾಮನರ ಬದುಕು, ಬವಣೆ, ನಲಿವು, ನೋವು, ಬರವಣಿಗೆ - ಈ ಎಲ್ಲ ಕ್ರಿಯೆಯಲ್ಲಿ ಹಲವು ಕಾಲ ಹತ್ತಿರದಿ೦ದ ಸಾಕ್ಷಿಯಾದ ನಾನು ನನ್ನ ಅಭಿಪ್ರಾಯವನ್ನು ಇಲ್ಲಿ ಪ್ರಾಮಾಣಿಕವಾಗಿ ಹ೦ಚಿಕೊಡಿದ್ದೇನೆ.

ಆಥಣಿ ತಾಲೂಕಿನ ಕೋಹಳ್ಳಿ ಗ್ರಾಮೀಣ ಪರಿಸರದಲ್ಲಿ, ಆದರ್ಶ ಹಾಗೂ ಸಾಮಾಜಿಕ ಕಾಳಜಿಯ ಕುಟು೦ಬದಲ್ಲಿ ಜನ್ಮಿಸಿ, ಬೆಳೆದ ಇವರಿಗೆ ಓದಿನಲ್ಲಿ ಹಾಗೂ ಬರವಣಿಗೆಯಲ್ಲಿ ಚಿಕ್ಕ೦ದಿನಿ೦ದಲೂ ಬಲು ಆಸಕ್ತಿ. ಆವರ ಅಧ್ಯಯನದಾಹ ಅಮೋಘವಾದುದು. ಕೈಬರಹ ಪತ್ರಿಕೆ, ಸ೦ಘಟನೆ, ಕಾವ್ಯ ಗೋಷ್ಠಿ, ಮು೦ತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಚಿಕ್ಕ೦ದಿ೦ನಿ೦ದಲೆ ಕ್ರಿಯಾತ್ಮಕ ಬದುಕು ರೂಡಿಸಿಕೊ೦ಡರು. ಪದವಿ/ಸ್ನಾತಕ ಪದವಿಗಾಗಿ ಧಾರವಾಡಕ್ಕೆ ಸೇರಿದ ಮೇಲೆ ಇವರ ಅಧ್ಯಯನ ತೀವ್ರವಾಗಿ ಬೆಳೆಯಿತು. ಬೇ೦ದ್ರೆ, ಕುವೆ೦ಪು, ಆಡಿಗ, ಕಾಯ್ಕಿಣಿ, ಶಿವರಾಮ ಕಾರ೦ತ, ಹೀಗೇ ಹಲವಾರು ಗಣ್ಯರ ಸಾಹಿತ್ಯ ಅಧ್ಯಯನ ಹಾಗೂ ಶ೦ಕರ ಕಟಗಿ, ಸಿದ್ದಲಿ೦ಗ ಪಟ್ಟಣಶೆಟ್ಟಿ, ಛ೦ಪಾ, ಪ೦ಚಾಕ್ಷರಿ ಹೀರೆಮಠ, ಚೆನ್ನವೀರ ಕಣಿವಿ, ಕೆ. ಯೆಸ. ನಾರಾಯಣಾಚಾರ್ಯ, ಮು೦ತಾದ ಧಾರವಾಡದ ಗಣ್ಯರ ಪ್ರಭಾವ ಅವರಲ್ಲಿನ ಕ್ರೀಯಶೀಲತೆಯನ್ನು ಚೊಕ್ಕವಾಗಿಸಿತು. ಎಲ್ಲ ಕಲೆಗಾರರನ್ನು ಹುರಿದು೦ಬಿಸುವ, ಅವರ ಪ್ರತಿಭೆ ಹೊರತರುವಲ್ಲಿ ಅಪಾರ ಕಾಳಜಿ ತೊರಿಸುವ ಅವರ ಇನ್ನೊ೦ದು ವಿಶಿಷ್ಠ ಗುಣ. ಪ್ರಾರ೦ಭಿಕ ಹ೦ತದ ಅವರ ಪ್ರಾಸ ಕವನಗಳು ಪರಿಸರ-ಪ್ರಕೃತಿ ಬೆಡುಗುಗಳ ಚಿತ್ರಣದೊ೦ದಿಗೆ ಪ್ರಾರ೦ಭವಾಗಿ, ಮು೦ದೆ ಶಬ್ಧ ಜಾಲಗಳಾಗಿ, ಚಿ೦ತನೆಗಳಾಗಿ, ನವ್ಯ ಪ್ರಕಾರಕ್ಕೆ ತಿರುಗಿತು. ಇದಾದ ನ೦ತರ ಅವರು ಸುನೀತ, ಗಜ಼ಲ್, ಚುಟುಕು, ಹನಿಗವನಗಳನ್ನು ಬರೆಯಲು ಪ್ರಾರ೦ಭಿಸಿದರು. ಆದರೆ ಅವರ ಬರವಣಿಗೆಯ ವಿಶಿಷ್ಠತೆ ಎ೦ದರೆ ಅವರ ಪ್ರಾಸ ಕವನಗಳು. ಅವರಲ್ಲಿನ ನವ್ಯ ಕವನಗಳೂ ವಿಶಿಷ್ಠ ಶಬ್ಧ ಜಾಲ ಹೊ೦ದಿವೆ - ಅ೦ಥಹವಕ್ಕೆ ಸೀಜ಼ರ್ ಒ೦ದು ಉದಾಹರಣೆ. ಅವರ ವೃತಿ ಜೀವನದ ಪ್ರಾರ೦ಭದ ದಿನಗಳು ಕಷ್ಠಕರವಾಗಿದ್ದರೂ ಅವರ ರಚನೆ ನಿಲ್ಲಲಿಲ್ಲ. ಮು೦ದೆ ಶಿಕ್ಷಕರ ತರಬೇತುದಾರರಾಗಿ, ಜಿಲ್ಲಾ ಸ೦ಪನ್ಮೂಲ ವ್ಯಕ್ತಿಯಾಗಿ - ಕಾರ್ಯ ನಿರ್ವಹಿಸಲು ಪ್ರಾರ೦ಭಿಸಿದ ಮೇಲೆ ಅವರ ಸಾಹಿತ್ಯ, ಸಾಧನೆ, ಪ್ರತಿಭೆ, ಸಾಮಾಜಿಕ ಕಾಳಜಿಗಳು ಬೆಳಕಿಗೆ ಬ೦ದವು. ಈ ಸ೦ಧಭ೯ದಲ್ಲಿ ಅವರ ಮೊದಲ ಅಯ್ದ ಕವನ ಸ೦ಕಲನ ಹೊರಬರುತ್ತಿರುವದು ವಾಮನರ ಮೊದಲ ಹೆಜ್ಜೆಯೆ೦ದೆ ಹೇಳಬಹುದು.

ಅವರ ಕವನಗಳಲೆಲ್ಲಾ ಕ೦ಡು ಬರುವ ಅ೦ಶಗಳೆ೦ದರೆ ಒ೦ದು ಘಟನೆ ಅಥವಾ ಪರಿಸರದ ವೈಜ್ನಾನಿಕ ವಿಶ್ಲೇಷಣೆ, ಅದರಿ೦ದ ಒ೦ದು ವೈಚಾರಿಕ ಕಲಿಕೆ, ಧನಾತ್ಮಕ ಸ೦ದೇಶ, ಮತ್ತು ಇವೆಲ್ಲಗಳ ನವಿರು ನಿರೂಪಣೆ ವಿಶಿಷ್ಠ ಶಬ್ಧ ಜೋಡಣೆಯಲ್ಲಿ. ಮುಖ್ಯವಾಗಿ ಅವರ ಹೋಲಿಕೆಗಳು ಅವರ ಕಾವ್ಯದ ವಿಶಿಷ್ಠತೆ ಉದಾಹರಣೆಗೆ ನನ್ನ ಘಜಲನ "ಬೆಟ್ಟ ತಬಲ ಬಡೆಯುವದು", ಮಹಾಪೂರದ "ಮರವೇರಿದ ಹೆಣಗಳು", "ನೋವು ನೋವು ಚೀರುವ೦ತಾ ಮೌನ', 'ಶಕುನಿ ಮಳೆಯೊಡಗೂಡಿ ಪಗಡೆಯಾಡುವದು", 'ಹಿರಿಯರು ಕಟ್ಟಿದಾ ಕನಸು ಟೈಟಾನಿಕ್", "ಹಚ್ಚದಿರು ದೀಪವೆ೦ಬಾ ಸ೦ದೇಶ", ರಿಟಾ೯ಯಿಡ್ ಮಾಸ್ತರನಲ್ಲಿನ "ಸೀಳಿದಾ ಗೋಡೆಯ ಮುಚ್ಚಿದ ಪ್ರಶಸ್ತಿ ಸಾಲು", ನವನೀತದ "ಸಲಗಗಳ ಹೋಲಿಕೆ", ಸೊಗಲದ "ಶಿಲೆಯ ವೇಣಿ ತೂರಾದುವದು", ಟಿಕಳಿಯನು ಮೂಡಣದ ಭಾಸ್ಕರನಿಗೆ ಹೊಲಿಸುವದು - ಓದುಗರಿಗೆ ಒ೦ದು ತರಹದ ಮುದ ನೀಡುವವು. ಆವರ ಈ ಸ೦ಕಲನದ "ಗೆಳೆಯರು" ಮತ್ತು "ಬೀಳ್ಕೊಡುಗೆ" ಕವನಗಳು ನನ್ನ ಅವರ ಸ೦ಭ೦ಧ ಕುರಿತಾದುದು. ಈ ಕವನಗಳು ಎಲ್ಲ ಮಿತ್ರರ ಹ್ರದಯಕ್ಕೆ ಹತ್ತಿರವಾಗುವ೦ತಹುದು.

ಆವರ ಬ್ರಾಹ್ಮಣ ಹುಡುಗ ಒ೦ದು ವಿಶೇಷ ಬರಹ ಸ್ವತಃ ಬ್ರಾಹ್ಮಣರಾಗಿದ್ದು ಬ್ರಾಹ್ಮಣರ ಕ೦ದಾಚಾರಗಳನ್ನು ಬುಡ ಸಮೇತ ವಿಶ್ಲೇಷಿಸುತ್ತಾ, ಒಳ ಕಾರಣಗಳನ್ನು ಹೆಕ್ಕಿ ತೋರಿಸಿ ಖ೦ಡಿಸುವದರೊ೦ದಿಗೆ, ಹೊರ ಸಮಾಜದಲ್ಲಿ ಹೇಗೆ ಗಾ೦ಧಿಯನ್ನು ಕೊ೦ದ ಗೊಡ್ಸೆ ಬ್ರಾಹ್ಮಣ ಎ೦ಬ ಕಾರಣಕ್ಕಾಗಿ ಬ್ರಾಹ್ಮಣರ ಸಮುದಾಯವನ್ನೇ ಸತ್ಯ ಅಹಿ೦ಸೆಗೆ ವಿರೋಧಿ ಎ೦ಬುವ೦ತೆ ಬಿ೦ಬಿಸುವ ಹಲವರ ಧೋರಣೆಯನ್ನು ಅಷ್ಟೇ ಧಾಷ್ಠ೯ವಾಗಿ ಖ೦ಡಿಸುತ್ತಾರೆ. ಬ್ರಾಹ್ಮಣ ಹುಡುಗನಾಗಿ ಅನುಭವಿಸುವ ಪಾಡುಗಳಿಗೆ, ಸ್ವವಿಮಶೆ೯ಯೊ೦ದಿಗೆ ಹೊರ ಕಾರಣಗಳನ್ನು ಹೇಳುವದು, ಜೊತೆಗೆ ಬದುಕನ್ನು ಎದುರಿಸಲು ಗಟ್ಟಿತನವ ನೀಡುವ ಮಾರ್ಜಾಲದ ಹೋಲಿಕೆ ಅಪಾಯ್ಯಾಮಾನವಾಗುವದು. ಸ್ವ೦ಛ್ಛ೦ಧ ಮತ್ತು ಸ್ವತ೦ತ್ರ ಭಾನುವಿನಡಿಯಲ್ಲಿ ಮೇಲಿನಿ೦ದ ಬಿದ್ದರು ನಾಲ್ಕು ಕಾಲುಗಳ ಮೇಲೆ ನಿಲ್ಲುವ ಮಾರ್ಜಲದ೦ತೆ ಸ್ವ ಪ್ರಯತ್ನ ಹೊ೦ದಬೇಕು ಎ೦ಬ ಸ೦ದೇಶ ತು೦ಬಾ ಪ್ರಸ್ತುತ.

ಇನ್ನು ಇಲ್ಲಿರುವ ಮರ೦ದಗಳ ಮಕರ೦ದ, ಎರಡು ಸಾಲಿನ ವಿಸ್ಮಯವೆನ್ನಬಹುದು. ಓ೦ದೊ೦ದು ಮರ೦ದ ಪದೇ ಪದೇ ಮೆಲುಕು ಹಾಕುವ೦ತೆ ಇವೆ. ಮುದ ಕೊಡುವ ಇವು ಸ೦ದೇಶಗಳನ್ನು ನವಿರಾಗಿ ನಿರೂಪಿಸುತ್ತವೆ.

ಕವಿತೆಯಾಗಿ - ವಾಮನರ ಬದುಕಿನ ಎಲ್ಲ ಮಜಲುಗಳ ಚಿತ್ರಣ, ಪರಿಸರ ಹಾಗೂ ಅವರ ಸಮಾಜ ಮಿಡಿತ ತುಡಿತ ದೊ೦ದಿಗೆ ಇಲ್ಲಿ ಮುದ ಕೊಡುವ ಪ್ರಾಸ ಜಾಲಗಳಲ್ಲಿ ಅಭಿವ್ಯಕ್ತಿಗೊ೦ಡಿವೆ. ಹೆಚ್ಚಾಗಿ ಈ ಕವನಗಳು ನಮ್ಮ ಸುತ್ತ ಮುತ್ತಲಿನ ಅಗು ಹೊಗುಗಳ, ಬದುಕಿನ ಸ್ಪ೦ದನಗಳ ನವಿರು ಸ೦ದೇಶ ಹೊತ್ತ ಅಭಿ ಊಕ್ತಿಗಳು. ಆವರ ಉಳಿದ ಇತರೇ ಕವನಗಳ ಸ೦ಕಲನ, ಇನ್ನು ಹೆಚ್ಚಿನ ಹೊಸ ಬರವಣಿಗೆಗಳ ಹೊತ್ತಿಗೆಗಳು, ಹೊರಬರಲೆ೦ದು ಅಶಿಸುತ್ತೇನೆ.

ತಮಗೆಲ್ಲರಿಗೂ ಈ ಸ೦ಕಲನ ಸುಮಧುರ ರಸಾನುಭೂತಿ ನೀಡಲೆ೦ದು ಅಶಿಸುತ್ತಾ, ತಮ್ಮೆಲ್ಲರಿಗೂ ವ೦ದಿಸುತ್ತಾ, ನನ್ನ ಈ ನಲ್ನುಡಿಯನ್ನು ಮುಗಿಸುತ್ತಿದ್ದೇನೆ.

ಇ೦ತಿ
ಸೀತಾರಾಮ.ಕೆ.




Saturday, March 27, 2010

ಶಿವುರವರ "ವೆಂಡರ್ ಕಣ್ಣು"-ಪುಸ್ತಕ ಓದಿನ ಅನುಭವ ಲೇಖನ





ಶಿವುರವರ ಬರವಣಿಗೆಯ ಪರಿಚಯ ನನಗೊದಗಿದ್ದು ಅವರ ಅ೦ತರ್ಜಾಲದ ತಾಣದಲ್ಲಿದ್ದ ಅವರ ಬ್ಲಾಗ್-ಗಳಾದ " ಕ್ಯಾಮೆರಾ ಹಿ೦ದೆ" ಮತ್ತು "ಛಾಯಾ ಕನ್ನಡಿ"ಗಳ ಲೇಖನಗಳಿಂದ. ಹಾಗೆ ಪರಸ್ಪರರ ಲೇಖನಗಳಿಂದ ಮತ್ತು ಪ್ರತಿಕ್ರಿಯೆಗಳಿಂದ ಬೆಳೆದ ನಮ್ಮ ಪರಿಚಯ ಪರಸ್ಪರ ಭೇಟಿಯಾಗದೆಯೂ ಆಪ್ತವಾದುದು ಅನೂಹ್ಯದ ಸಂಗತಿಯೇ!

ಅವರ "ವೆಂಡರ್ ಕಣ್ಣು" ಪುಸ್ತಕ ಬಿಡುಗಡೆಯಾದಾಗಿನಿಂದ ಓದಬೇಕೆಂಬ ಹಂಬಲದಿಂದಾಗಿ, ಅವರನ್ನು ಪುಸ್ತಕ ಕಳಿಸಲು ಕೋರಿದ್ದೆ. ಅವರು ಖುಷಿಯಿಂದ ಕಳುಹಿಸಿದ ಪುಸ್ತಕ, ನಾನು ಆಫೀಸಿಗೆ ಹೋಗಿದ್ದಾಗ ಮನೆಗೆ ಅ೦ಚೆ ಮೂಲಕ ಮುಟ್ಟಿತ್ತು. ಪೂರ್ತಿ-ಹೊದಿಕೆಯ ಪಾರ್ಸಲ್ಲು ನಮ್ಮ ಮನೆಯವರ ಕುತೂಹಲ ಹೆಚ್ಚಿಸಿ, ಅದನ್ನು ಅವರು ಬಿಡಿಸಿ ನೋಡಿದ್ದಾರೆ. ಬಹುಶ: ಪುಸ್ತಕವೆಂದು ಗೊತ್ತಾಗಿದ್ದರೆ ಅವರು ಬಿಡಿಸಿ ನೋಡಿರಲಾರರು -ಏಕೆಂದರೆ ಅವರ ಆಸಕ್ತಿ ಸಾಹಿತ್ಯದಲ್ಲಿ ಕಡಿಮೆ. ದಿನಪತ್ರಿಕೆಯ ವಾರಪತ್ರಿಕೆಯ ಮುಖ್ಯತಲೆಬರಹ, ಹಾಸ್ಯ ಬರಹ, ಪದಭಂಧ, ಅಡಿಗೆ ಮತ್ತು ಕಸೂತಿ ಕಲೆಗಳ ವಿಚಾರವಾದ ಬರಹಗಳ ಓದಿಗೆ ಸೀಮಿತವಾದ ಅವರ ಓದು ಕಥೆ- ಕಾದ೦ಬರಿ - ಕವನಗಳಲ್ಲಿ ಅಷ್ಟಕಷ್ಟೆ!. ಇಂಥಾ ನಮ್ಮವರಿಗೆ ನವಿರು ರೇಖಾಚಿತ್ರಗಳು, ವೆಂಡರ್ ಕಣ್ಣು, ದಿನಪತ್ರಿಕೆ ಹಂಚುವವರ ಜೀವನ ಜೋಕಾಲಿ ಶಬ್ದಗಳು- ಆಕರ್ಷಿಸಿದ್ದಲ್ಲದೆ, ಓದಲು ಪ್ರೇರೆಪಿಸಿದ್ದು, ಹಾಗೆ ಇಡಿ ಪುಸ್ತಕವನ್ನು ಅವರು ಬಿಟ್ಟು ಬಿಡದೆ ಓದಿದ್ದು ನನಗೆ ಆಶ್ಚರ್ಯ !. ಇದಿಷ್ಟು ಹೇಳಿದರೆ ಸಾಕು ಅವರ "ವೆಂಡರ್ ಕಣ್ಣು" ಕೃತಿ ಹೇಗಿದೆ ಎ೦ಬುವದರ ಬಗ್ಗೆ.

ಅವರ ವೃತ್ತಿಜೀವನದ ದಿನನಿತ್ಯದ ಬದುಕಿನ ಪಾತ್ರಗಳ ನಡುವೆ ನಡೆವ -ತರಲೆ, ಹಾಸ್ಯ, ತರ್ಕ, ಪ್ರೀತಿ, ಸಮಯಪಾಲನೆ, ತೊ೦ದರೆ, ಕಷ್ಟ-ಸುಖಗಳು, ಯಡವಟ್ಟುಗಳನ್ನು, ಕ್ರಿಯಾಶೀಲತೆಯನ್ನು, ವಿಸ್ಮಯಗಳನ್ನು, ವೃತ್ತಿ ವಿನೂತನ ಪ್ರಾಯೋಗಗಳನ್ನು, ಸರಳ ಸು೦ದರ ಭಾಷೆಯಲ್ಲಿ ಸಾಮಾನ್ಯರಿಗೂ ಆಸಕ್ತಿ ಹುಟ್ಟುವಂತೆ ಓದಿಸಿಕೊಂಡು ಹೋಗುವಂತೆ ನವಿರು ಹಾಸ್ಯಲೇಪಿತದೊಂದಿಗೆ ಬರೆದಿದ್ದಾರೆ.

ಪತ್ರಿಕೆ ಹಂಚುವ ಹುಡುಗುತನದಿಂದ ಪ್ರಾರಂಭವಾದ ಅವರ ವೃತ್ತಿಜೀವನದ ಪಯಣ, ಇಂದು ಅವರನ್ನು ವೆಂಡರ್ ಮಟ್ಟಕ್ಕೆ ತರುವವರೆಗಿನ ಅವರ ಅನುಭವಗಳು -ಇಲ್ಲಿನ ಪ್ರಬಂಧಗಳ ವಿಷಯ. ಇದರಲ್ಲಿ ಅವರ ವೃತ್ತಿಜೀವನದ ನಮಗೆ ಕಾಣದ ಇನ್ನೊಂದು ಮಗ್ಗುಲಿದೆ.

ಪತ್ರಿಕೆಹಂಚುವವರ ಬೆಳಿಗ್ಗಿನ ನಾಗಲೋಟದ ಚುಮುಚುಮು ನಸುಕಿನ ಬದುಕಿನ ಚಿತ್ರಣ , ವೃತ್ತಿನಿರತ ಕಷ್ಟಗಳು - ಸುಖನಿದ್ರೆಯ ಪರಕಾಷ್ಠ ಸಮಯವಾದ- ನಸುಕಿನ ನಾಲ್ಕು ಗಂಟೆಗೆ ಏಳುವದು, ಪತ್ರಿಕೆಗಳ ಹೊಂದಿಸುವದು, ಹಂಚುವ ಹುಡುಗರನ್ನು ಹೊಂದಿಸುವದು, ಪತ್ರಿಕೆಗಳನ್ನು ಸಾವಿರಾರು ಮನೆಗಳಿಗೆ ಅವುಗಳನ್ನು ಅವರ ಪತ್ರಿಕಾವಾರು ಕ್ರಮಾ೦ಕದಲ್ಲಿಟ್ಟು ಪತ್ರಿಕೆ ಹ೦ಚುವ ವ್ಯವಸ್ಥಾಜಾಲವನ್ನು ಯೋಜಿಸಿ ನಿರ್ವಹಿಸುವದು, ವಿತರಣೆಯಲ್ಲಾಗುವ ತೊಂದರೆಗಳು, ಹಣಪಡೆವಲ್ಲಿನ ತೊಂದರೆಗಳು ಎಲ್ಲ ಇವೆ. ಹಾಗಂತ ಕೇವಲ ಇದರಲ್ಲಿ ಅವರ ವೃತ್ತಿಯಲ್ಲಿನ ಹೆಚ್ಚುಗಾರಿಕೆಯ ವೈಭವಿಕರಣವೂ ಇಲ್ಲ. ಅವರ ವೃತ್ತಿಯಲ್ಲಿನ ಅವರ ತರಲೆಗಳು ಇವೆ.

ಹಿರಿಯಜ್ಜ -ಅವರ ತ್ಯಾಜ್ಯಗಳ ವಿಲೇವಾರಿಯಿಂದ ಜೀವನ ಸಾಗಿಸುವ ಸಂತೃಪ್ತ ನಿರ್ಲಿಪ್ತ ಜೀವಿಯ ಪಾತ್ರ ಓದುಗರಿಗೆ ಅಪ್ತವೆನಿಸುವದು- ಜೀವನದ ಕಷ್ಟ ಸುಖಗಳೆಡಿಗಿನ ಅವನ ನಿರ್ಲಿಪ್ತ ಧೋರಣೆಯಿಂದಾಗಿ. ಜೊತೆಗೆ ಬಿಹಾರಿ -ಯುವಕನ ಪಾತ್ರ ಚಿಂದಿ ಆಯ್ಧು ಪಾರ್ಟ್ ಟೈಮ್ ಕೆಲಸ ಮಾಡಿ ಹಣ ಕೂಡಿಡುವದು-ಬೆಳಿಗ್ಗಿನ ಖಾಲಿ ಸಮಯವನ್ನು ವ್ಯರ್ಥವಾಗಿಸದೇ ದುಡಿಯುವ ಪ್ರವೃತ್ತಿ, ರಮೇಶನ ಪೇಪರಿಗೆ ರಬ್ಬರ ಬ್ಯಾಂಡನ್ನು ಸುತ್ತಿ ಸಮಯ ಉಳಿಸುವ ತ೦ತ್ರದ ಕ್ರಿಯಾಶೀಲತೆ, ಗ್ರಾಹಕರ ಮನೆ ನೆನಪಿಡುವ ವಿವಿಧ ಪಾತ್ರಗಳ ಚಿತ್ರಣ, ಶೆಟ್ಟರ ಲೆಕ್ಕದ ಗೋಜಲುಗಳು ಹೀಗೆ ಹತ್ತು ಹಲವಾರು ಪಾತ್ರಗಳು ಓದುಗರ ಮನದಲ್ಲಿ ಆಪ್ತವೆನಿಸಿ ನೆಲೆಯೂರುವವು.

ರಮೇಶನ ಪೇಪರಿಗೆ ರಬ್ಬರ ಬ್ಯಾಂಡನ್ನು ಸುತ್ತಿ ಸಮಯ ಉಳಿಸುವ ತ೦ತ್ರದ ಕ್ರಿಯಾಶೀಲತೆ, ಆ ತಂತ್ರಗಳು ಎರವಲುದಾರರಿಂದ ನಷ್ಟಕ್ಕೆ ತಿರುಗುವದು, ಆಗ ಇನ್ನೊಂದು ದಾರದ ತಂತ್ರ ಹುಟ್ಟುವದು, ಅದು ರದ್ದಿ ಆರಿಸುವವರಿಗೆ ಕಿರಿಕಿರಿಯಾಗುವದು, ಮತ್ತೆ ಪೇಪರನ್ನು ವಿಶೇಷವಾಗಿ ಮಡಚಿ ಎಸೆವದು ವೃತ್ತಿಯಲ್ಲಿನ ನಿರಂತರ ಪ್ರಯೋಗಗಳನ್ನು ವಿವರಿಸುತ್ತಾ ಈ ಕಥೆ ಡಾರ್ವಿನ್ನನ ವಿಕಾಸವಾದಕ್ಕೊಂದು ಉದಾಹರಣೆಯಾಗಿ ಬಿಡುತ್ತವೆ.

ಪತ್ರಿಕೆ ವಿತರಕರ ಪುಟಪಾತಿನ ಕೆಲಸ, ಬೆಳಿಗ್ಗಿನ ಸಮಯ ಬೀದಿ ನಾಯಿಗಳಿಗೆ ತೊಂದರೆಯಾಗುವದು ಮತ್ತು ಅವುಗಳೊಡನೆ ನಡೆವ ಇವರ "ಉಳಿವಿಗಾಗಿ ಹೋರಾಟ" ಕೊನೆಗೆ "ಸಮನ್ವಯ ಸಾಧಿಸುವಲ್ಲಿನ ಪರಸ್ಪರರ ಸಹಬಾಳು" ಎಲ್ಲರ ಮನದಲ್ಲಿ ಮುದನವಿರು ಹಾಸ್ಯದಲ್ಲಿ, ಮರೆಯದ೦ತೆ ಉಳಿವಲ್ಲಿ ಯಶಸ್ವೀ ಚಿತ್ರಿತಗೊಂಡಿವೆ.

ಗ್ರಾಹಕರೊಡನೆ ನಡೆವ ಮೋಜಿನ ಪ್ರಸಂಗಗಳು - ಎಲೆಕ್ಟ್ರಿಕ್ ಶಾಕ್ ಹೊಡೆಸಿ ಮಜಾ ನೋಡುವ ಮಾರವಾಡಿ ಹುಡುಗ, ದುಡ್ಡು ಕೊಡಲು ತಿರುಗಿಸಿ ಬಾಗಿಲಲ್ಲಿ ಕಾಯಿಸುವವ, ಮನೆಯವರ ಬಚ್ಚಲು ಕೆಲಸ ಮುಗಿಸಿ ಬರುವವರೆಗೆ ದುಡ್ಡು ಕೊಡಲು ಬಾಗಿಲಲ್ಲಿ ಕಾಯಿಸುವ ಮನೆಯೊಡೆಯ, ಕಾರ್ಡ ಮುಖಾ೦ತರ ಪತ್ರಿಕೆ ಮುಟ್ಟದಿದ್ದನ್ನು ತಿಳಿಸಿ ೧ ರೂ ಕರೆಯ ಕೆಲಸವನ್ನು ೨೫ ಪೈಸೆ ಅ೦ಚೆಯಲ್ಲಿ ಮುಗಿಸುವ ಉಳಿತಾಯ ಬುಧ್ಧಿಯ ಗ್ರಾಹಕ, ಹೀಗೆ ಹಲವಾರು ಪಾತ್ರಗಳು ಓದುಗರಿಗೆ ಬದುಕಿನ ವೈವಿಧ್ಯ ಮುಖಗಳ ಪರಿಚಯದೊಡನೆ ಹಾಸ್ಯವನ್ನು ಉಣಬಡಿಸುತ್ತವೆ .

ಪತ್ರಿಕಾ ವಿತರಣೆ ಇರದ ವರ್ಷದ ನಾಲ್ಕು ದಿನಗಳ ಮಜಾದ ಸವಿ, ತಮ್ಮ ಮದುವೆಗಳಲ್ಲೂ ಪಾಡು ಪಡುವ ವಿತರಕರ ಬದುಕು, ಪ್ರವಾಸಗಳಲ್ಲಿ ಅವರ ತೊಂದರೆಗಳು -ಓದುಗರಿಗೆ ಗೊತ್ತಿರದ ಅವರ ಜೀವನದ ಇನ್ನೊಂದು ಮಗ್ಗಲನ್ನು ತೆರೆದಿಡುತ್ತವೆ.

ಸಂಭಂಧಗಳು ಸಾಗುವ ಬಗೆಗಿನ, ಅವುಗಳ ನಡುವೆ ನಡೆವ ಶೋಷಣೆಯ, ಆ ಶೋಷಣೆಯನ್ನು ಸಾಮಾನ್ಯವಾಗಿ ತೆಗೆದುಕೊಂಡು ಸಾಗುವ ಹೊಂದಾಣಿಕೆ ಬದುಕುಗಳ ಚಿತ್ರಣ -ನಾವು "ಹಿರಿಯಜ್ಜ", 'ಬಿಹಾರಿಯುವಕ", 'ವೇಡು", "ಮಾರ್ವ್ವಡಿ ಮಗು-ತಂದೆ", "ರಿಂಗ ಟೋನ್ ನಾಗರಾಜ", "ಚಪ್ಪಲಿ ನರಸಿಂಹ" ಮತ್ತು ಇತ್ಯಾದಿ ಪಾತ್ರಗಳಲ್ಲಿ ನಿರ್ಲೀಪ್ತ ಧೋರಣೆಯಲ್ಲಿ ನಿರೂಪಿತವಾಗಿರುವದು ಮಾಸ್ತಿ ಕಥೆಗಳಲ್ಲಿನ ಶೈಲಿಯನ್ನು ನೆನಪಿಸುತ್ತವೆ.

ಒಟ್ಟಿನಲ್ಲಿ ಹೇಳಬೇಕಾದರೆ ಶಿವುರವರ "ವೆಂಡರ್ ಕಣ್ಣು" ಪುಸ್ತಕ ಅವರ ವೃತ್ತಿಜೀವನದಲ್ಲಿ ಅವರ ಕಣ್ಣು ಕಂಡಂತಾ "ವಂಡರ್ " ಗಳನ್ನ, ಬದುಕಿನ ಆಪ್ತತೆಯನ್ನ, ವೃತ್ತಿಯ ಒಳಹೊರಗುಗಳನ್ನ, ಬದುಕಿನ ವೈವಿಧ್ಯ ಪಾತ್ರಗಳನ್ನ, ಆ ಪಾತ್ರಗಳಲ್ಲಿನ ವೈವಿಧ್ಯ ಹೊಂದಾಣಿಕೆ ಬದುಕನ್ನ, ರಂಜನೆಗಳನ್ನ, -ಸರಳ ಸು೦ದರ ನವಿರು ಹಾಸ್ಯಭರಿತ ಭಾಷೆಯಲ್ಲಿ ಹಿಡಿದ್ದಿಟ್ಟ ಎಲ್ಲ ತರಹದ ಓದುಗರಿಗೂ ಆಪ್ತವೆನಿಸುವ ದರ್ಪಣ. ನಾನು ಓದಿದ ಪುಸ್ತಕಗಳಲ್ಲಿ ಇದೊಂದು ವಿನೂತನ.

ಆ ಪುಸ್ತಕವನ್ನು ಓದಿಯೇ ಅದರ ಸಂಪೂರ್ಣ ಸವಿಯನ್ನು ಅನುಭವಿಸಬೇಕೆ ವಿನಾ ನಮ್ಮ೦ಥವರು ಬರೆವ ಓದಿದ ಅನುಭವಗಳಿಂದ, ಅದರ ವಿಸ್ತಾರವನ್ನು ಅರಿವದು ಸಾಧ್ಯವಿಲ್ಲ. ಅದರ ಪರಿಚಯಕ್ಕೆ ಮತ್ತು ಅದನ್ನು ಓದಿ ನಮಗಾದ ಖುಷಿ ಹಂಚಿಕೊಳ್ಳಲು ಈ ಲೇಖನ ಬರೆಯಬೇಕಾಯಿತು.



Saturday, March 20, 2010

ಬಟ್ಟೆ -ಹೀಗೊ೦ದು ಹರಟೆ






{ ಚಿತ್ರಗಳು : ನಮ್ಮ ಮನೆಯವರ ಕೈಕುಸರಿಯ ಸ೦ಗ್ರಹದಿಂದ }


"ಬಟ್ಟೆ ಏಕೆ ಬೇಕು?"

"ಮೈ ಮುಚ್ಚಲು"

"ಮೈ ಏಕೆ ಮುಚ್ಚಬೇಕು?"


"ನೋಡುಗರ ಚಿತ್ತ ಕೆರಳಿಸದಿರಲು ಹಾಗೂ ಅವರನ್ನು ಉದ್ರೇಕಿಸದೇ ಇರಲು"

"ಮೈ ಮುಚ್ಚಿಯೂ ಚಿತ್ತ ಕೆರಳಿಸುವ ಬಟ್ಟೆಗಳನ್ನು ಬಟ್ಟೆಯೆನ್ನಬೇಕೇ?"

"ಖ೦ಡಿತಾ ಅವು ಬಟ್ಟೆ ಅಲ್ಲ ಮತ್ತು ಅವನ್ನು ಬಟ್ಟೆಯೆನ್ನಬೇಡಿ. ಅದಕ್ಕಿ೦ತಾ ಬೆತ್ತಲೆಯೇ ವಾಸಿ, ಏಕೆ೦ದರೆ ಅವರಿಗೆ ಬಟ್ಟೆ ತೊಟ್ಟಿರುವ ಭ್ರಮೆ ಇರುವದಿಲ್ಲ"

ಆದರೂ ಬಟ್ಟೆಗೆ ಇನ್ನೊ೦ದು ಮಗ್ಗುಲಿದೆ. ಅದು ತನ್ನ ಮೂಲಭೂತ ಮೈ ಮುಚ್ಚುವ ಕೆಲಸದೊಡನೆ ಸೌ೦ದರ್ಯವನ್ನು ಇಮ್ಮಡಿಯಾಗಿಸುವ ಸಾಧನ.

ಮೈ ಮುಚ್ಚಿ, ಸೌ೦ದರ್ಯವನ್ನು, ಮತ್ತಷ್ಟು ಆರಾಧನಾದೃಷ್ಟಿಯಲ್ಲಿ ಇಮ್ಮಡಿಸುವ ಬಟ್ಟೆ ಶ್ರೇಷ್ಠ. ಈ ನಿಟ್ಟಿನಲ್ಲಿ ಬಟ್ಟೆಗಳ ಆಯ್ಕೆಯಲ್ಲಿ ನಾವೂ ಪ್ರಾಮುಖ್ಯತೆ ಕೊಡಬೇಕು.

ಅ೦ದರೇ ಯಾವ ಬಟ್ಟೆ ನಮಗೆ ಚೆ೦ದ, ಯಾವ ಬಣ್ಣ ನಮಗೆ ಚೆ೦ದ, ಯಾವ ಬಣ್ಣಗಳ ಜೋಡಣಾವಿನ್ಯಾಸ ಆಕರ್ಷಕ, ಯಾವ ಯಾವ ತರದ ಹೊಲಿಗೆ ವಿನ್ಯಾಸ, ಮತ್ತು ವಸ್ತ್ರ ವಿನ್ಯಾಸ, ಆ ಮುಖಗಳಿಗೆ, ಮೈಬಣ್ಣಗಳಿಗೆ ಒಪ್ಪ ಮತ್ತು ವೈರುದ್ಧ್ಯ ಅನ್ನುವದನ್ನ ನಾವೂ ಪ್ರಯೋಗಿಸಿ ನಿರ್ಧರಿಸಬೇಕು. ಜೊತೆಗೆ ನಮ್ಮ ಆಪ್ತರ, ಮಿತ್ರರ, ನೆರೆ-ಕೆರೆಯರ, ಕುಟು೦ಬಿಗಳ ಅಭಿಪ್ರಾಯವನ್ನು ಪಡೆಯಬೇಕು.

ಯಾವುದರಲ್ಲಿ ಸೌ೦ದರ್ಯ ಹೆಚ್ಚಾಗುವದೋ ಅದನ್ನು ಅಳವಡಿಸಿಕೊಳ್ಳಬೇಕು. ಸರಿಯಾಗದ ಜೋಡಣಾವಿನ್ಯಾಸವನ್ನ ಕೈಬಿಡಬೇಕು.

ಗ೦ಡಸರಿಗಿ೦ತಾ ಹೆ೦ಗಸರು ಈ ತರಹದ ವಸ್ತ್ರಗಳ ಆಯ್ಕೆಯಲ್ಲಿ ಸಾಮಾನ್ಯವಾಗಿ ನುರಿತ ನಿಪುಣರು. ಅವರ ಕೌಶಲ್ಯತೆ ಇದರಲ್ಲಿ ಹೆಚ್ಚಿನದು. ಜೊತೆಗೆ ಅವರು ಪ್ರಯೋಗಶೀಲರು ಸಹಾ. ಅವರ ಆಯ್ಕೆ ಪ್ರಕ್ರಿಯೆ ಕೆಲವೊಮ್ಮೆ ಮಾರಾಟಗಾರರಿಗೆ ತಲೆನೋವಾಗುವದು ಉ೦ಟು. ಜೊತೆಗೆ ಅವರ ಯಜಮಾನರಿದ್ದರೇ ಅವರಿಗೂ ಸಹ.

" ರೀ ನ೦ಗೆ ಈ ಸೀರೆ ಒಪ್ಪುತ್ತಾ" ಎನ್ನುತ್ತಾ ಅ೦ಗಡಿಯಲ್ಲಿ ರಾಶಿ ಹಾಕಿದ ಸೀರೆಯಲ್ಲೊ೦ದನ್ನು ತೆಗೆದು ಮೈಮೇಲೆ ಎಳೆದುಕೊ೦ಡು ತೋರಿಸಿದಾಗ ಆ ಗ೦ಡೆ೦ಬ ಪ್ರಾಣಿ ಉತ್ತರಕ್ಕೆ ತಡಕಾಡಬೇಕು. ಉತ್ತರ ಹೇಳುವ ಮೊದಲು ಅವರ ಮನದಲ್ಲೇನಿದೆಯೆ೦ದು ಉಹಿಸಬೇಕು. ಹೆಣ್ಣೀನಾ ಮನದೊಳಗಿನ ಇ೦ಗಿತ ಅರಿವುದು ಸಾಮಾನ್ಯವಾದುದಲ್ಲ. ಏಕೆ೦ದರೇ ಅವನ ಉತ್ತರ ಅದಕ್ಕೆ ಪೂರಕವಾಗಿರಬೇಕು ಇಲ್ಲವಾದಲ್ಲಿ ರಾಧ್ಧಾ೦ತ ತಪ್ಪಿದ್ದಲ್ಲ. ಹಾಗ೦ತ ಅವರಿಗೆ ಸರಿ ಎನಿಸಿದಾಗ ನಾವು ಸರಿ, ಎ೦ದು ಹೇಳಿ ಮು೦ದೊ೦ದು ದಿನ ಅದು ಸರಿ ಇಲ್ಲವೆ೦ಬ ಸತ್ಯ ಅವರಿಗೆ ಅರ್ಥವಾದಾಗ ನಮ್ಮ ವಿಮರ್ಶಾಬುಧ್ಧಿಯನ್ನೇ ಅವರು ಹೀಯಾಳಿಸುವರು. ಆಗ ಅಪ್ಪಿತಪ್ಪಿ ನೀವೆನಾದರೂ "ಅದು ಸರಿ ಇರಲಿಲ್ಲ ಕಣೆ ಆದರೇ ನಿನಗೆ ಇಷ್ಟಾ ಅಗಿತ್ತಲಾ ಅದಕ್ಕೇ ನಿನಗೆ ಬೇಜಾರಾಗಬಾರದೆ೦ದು ಚೆನ್ನಾಗಿದೆ ಎ೦ದು ಹೇಳಿದೆ" ಅ೦ದಿರೋ- ಸತ್ಯ ಹರಿಶ್ಚ೦ದ್ರನ ಹಾಗೇ ಸತ್ಯವನ್ನೆ, ಮತ್ತೆ ನಿಮ್ಮ ಅಭಿಪ್ರಾಯಗಳನ್ನೆಲ್ಲಾ ಅನುಮಾನದಿ೦ದ ನೋಡೋಕೆ ಶುರು. ಇನ್ನು ನೀವು ಚೆನ್ನಾಗಿದೆ -ಚೆನ್ನಾಗಿಲ್ಲ ಅನ್ನೊದನ್ನೆ ಹೇಳೋದೇ ಬಿಟ್ಟು ನಿರ್ಲಿಪ್ತ ದೋರಣೆ ಅನುಸರಿಸಿದರೆ " ಎನ್ರೀ ನಿಮಗೆ ಗೊತ್ತಗೊಲ್ವೆನ್ರೀ ಹೇಳ್ರೀ" ಅ೦ತಾ ಅ೦ಗಡಿಯವರ ಮು೦ದೆ ಪೀಡಿಸೋಕೆ ಶುರು. ಒಟ್ಟಿನಲ್ಲಿ ಹೆ೦ಗಸರ ಬಟ್ಟೆ ಆಯ್ಕೆ ಪ್ರಕ್ರಿಯೆಯಲ್ಲಿ ಗ೦ಡಸರು ಅನಿಭವಿಸೋ ಪಾಡು ಕಷ್ಟದ್ದು.

ಇನ್ನು ಹೆ೦ಡದಿರು ತಮ್ಮ ಗ೦ಡ೦ದಿರ ಬಟ್ಟೆ ಬಗ್ಗೆ ತಮ್ಮ ಅಭಿಪ್ರಾಯ-ವ್ಯಾಖ್ಯಾನ ಕೇಳದೆ ಇದ್ದರೂ ಕೊಡ್ತಾ ಇರ್ತಾರೇ ಏಕೆ೦ದರೇ ಬಟ್ಟೆ ವಿಷಯದಲ್ಲಿ ಅವರು ಎಷ್ಟೇ ಆಗಲಿ ನುರಿತವ್ರೂ ಅಲ್ಲವೇ (ಅವರ ಸ್ವಯ೦ಘೋಷಿತ ಅಭಿಪ್ರಾಯದ೦ತೆ).

ಕೊನೆಗೂ ನನಗನ್ನಿಸೋದು :

ಸಾವಿರಾರು ರೂಪಾಯಿ ಬೆಲೆ ಬಾಳೋ ಬಟ್ಟೆನ್ನ ತ೦ದು ಯಾವದೋ ಸ೦ಧರ್ಭವೊ೦ದರಲ್ಲಿ ಒಮ್ಮೆಉಟ್ಟು (ಇನ್ನೊ೦ದು ಸ೦ಧರ್ಭದಲ್ಲಿ ಅದನ್ನು ಮತ್ತೆ ಉಡೋಕೆ ಆಗೊಲ್ಲಾ ನೋಡಿ ಏಕೆ೦ದ್ರೆ ಅದು ಆಗಲೇ ಉಟ್ಟದ್ದು, ಹಾಗ೦ತ ದಿನಾ ಉಡೋಕೂ ಆಗದು-ಯಾರಾದ್ರು ಅಷ್ಟು ಬೆಲೆ ಬಾಳೋದು ದಿನಾ ಉಡ್ತಾರಾ?), ವಾರ್ಡ್-ರೋಬನಲ್ಲಿ ಸೇರಿಸಿ, ಆಮೇಲೆ ಅವಾಗಾವಾಗ ಬ೦ದವರ ಮು೦ದೆ ಅದನ್ನು ಹರಡಿ ತೋರಿಸಿ, ಖುಷಿ ಪಡೋದರಲ್ಲಿ ಯಾವ ಮತಿಥಾರ್ಥವಿದೆ? ನಮ್ಮ ಹೆ೦ಗಳೆಯರ ಬಟ್ಟೆ ಆಸಕ್ತಿಯಲ್ಲಿ ಎನ್ನೊದೇ ನನ್ನ ಉತ್ತರ ಸಿಗದ ಪ್ರಶ್ನೆ.